ಕುದುರೆ ಪಂದ್ಯ
ಪಳಗಿಸಿದ ಓಟ ಕುದುರೆಗಳನ್ನು ಅವುಗಳ ಸವಾರರ (ಜಾಕಿಗಳು) ಸಮೇತ ಪೂರ್ವಸಿದ್ಧ ಪಥದ ಮೇಲೆ ಓಡಿಸುವ ಆಟ ಹಾಗೂ ಇದರ ಅಂಗವಾಗಿ ಬೆಳೆದುಬಂದಿರುವ ಜೂಜು. ಮನುಷ್ಯ ಕುದುರೆಯನ್ನು ಪಳಗಿಸಿ ಅದನ್ನೊಂದು ಶೀಘ್ರಗಾಮಿ ವಾಹನವನ್ನಾಗಿ ಉಪಯೋಗಿಸಲು ಆರಂಭಿಸಿದಾಗಲೇ, ಎಂದರೆ ಅಸ್ಪಷ್ಟ ಪ್ರಾಚೀನ ಕಾಲದಲ್ಲೇ, ಕುದುರೆ ಪಂದ್ಯದ ಆರಂಭವೂ ಆಗಿರಬೇಕು.[೧]
ಇತಿಹಾಸ
ಬದಲಾಯಿಸಿವೇದಕಾಲದ ಜನರಲ್ಲಿ ಕುದುರೆ ರಥಗಳ ಓಟಗಳೂ ಕುದುರೆ ಓಟಗಳೂ ಪ್ರಿಯವಾಗಿದ್ದುವೆಂಬುದಕ್ಕೆ ಆಧಾರಗಳಿವೆ. ಕ್ರಿ. ಪೂ. ಸು. 624ರಲ್ಲಿ ನಡೆದ ಮೂವತ್ತ ಮೂರನೆಯ ಒಲಂಪಿಯಡ್‍ನಲ್ಲಿ ಜಾಕಿಸಮೇತ ಕುದುರೆಗಳ ಓಟಗಳನ್ನು ಏರ್ಪಡಿಸಿದ್ದರೆನ್ನುವುದಕ್ಕೆ ದಾಖಲೆಗಳು ಉಂಟು. ಏಷ್ಯ ಹಾಗೂ ಇಟಲಿಗಳಲ್ಲಿ ಸಾರ್ವತ್ರಿಕವಾಗಿ ಆ ಮೊದಲೇ ಹಲವಾರು ಶತಮಾನಗಳ ವರೆಗೂ ಕುದುರೆ ಪಂದ್ಯಗಳು ಇದ್ದಿರಬೇಕೆಂದು ಈ ಆಧಾರಗಳಿಂದ ತರ್ಕಿಸಲಾಗಿದೆ. ಆದರೆ ಇಲ್ಲೆಲ್ಲ ಪಂದ್ಯಕ್ಕಾಗಿಯೇ ಕುದುರೆಗಳನ್ನು, ಎಂದರೆ ಕುದುರೆಗಳ ವಿಶಿಷ್ಟವಾದ ತಳಿಗಳನ್ನು ಸಿದ್ಧಪಡಿಸುತ್ತಿದ್ದರೇ ಅಥವಾ ಸುಲಭವಾಗಿ ಎದುರಿಗೆ ದೊರೆತಂಥ ಆರೋಗ್ಯವಂತ ಕುದುರೆಗಳನ್ನು ಓಟಕ್ಕಾಗಿ ಬಳಸುತ್ತಿದ್ದರೇ ಎಂಬುದು ಖಚಿತವಾಗಿ ತಿಳಿದಿಲ್ಲ. ಹಾಗಿದ್ದರೂ ಅಂದಿನ ಮಧ್ಯಪ್ರಾಚ್ಯದ ನಾಗರಿಕತೆಗಳ ಮಧ್ಯೆ ವಿಕಸಿಸಿದ ಕುದುರೆಗಳು ಓಟಕ್ಕೆ ಹೇಳಿ ಮಾಡಿಸಿದಂತಿದ್ದುವು. ಇಂದಿನ ಶುದ್ಧತಳಿ (ಥರೋ ಬ್ರೆಡ್) ಕುದುರೆಗಳ ಪೂರ್ವಜರನ್ನು ಈ ಕುದುರೆಗಳಲ್ಲಿ ಕಾಣಬಹುದು.[೨]
ಕುದುರೆ ಪಂದ್ಯ ಆರಂಭ
ಬದಲಾಯಿಸಿವ್ಯವಸ್ಥಿತವಾದ ಆಧುನಿಕ ರೀತಿಯ ಕುದುರೆ ಪಂದ್ಯ ಆರಂಭವಾದದ್ದು ಗ್ರೇಟ್ ಬ್ರಿಟನಿನಲ್ಲಿ. ರಾಜರ ಆಟ ಎಂದು ಅಲ್ಲಿ ಇದರ ಹೆಸರು. ಎರಡನೆಯ ಹೆನ್ರಿಯ ಆಳ್ವಿಕೆಯಲ್ಲಿ (ಕ್ರಿ. ಶ. 1174ರಲ್ಲಿ) ನಡೆದ ಕುದುರೆ ಪಂದ್ಯಕ್ಕಾಗಿ ವಿಶಾಲವಾದ ತೆರೆದ ಮೈದಾನವನ್ನು ಸಿದ್ಧಪಡಿಸಲಾಗಿತ್ತು. ಅಲ್ಲಿ ಕುದುರೆಗಳು ಓಡಬೇಕಾದ ಪಥವನ್ನು ನಿರ್ಧರಿಸಿದ್ದರು. ಓಟವನ್ನು ಬೇರೆ ಬೇರೆ ಅನುಕೂಲ ಸ್ಥಾನಗಳಿಂದ ನೋಡಲು ಪ್ರತಿಷ್ಠಿತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಕುದುರೆಗಳ ಮೇಲೆ ಮಂಡಿಸಿದ್ದ ಜಾಕಿಗಳು ಜನಜಂಗುಳಿಯಿಂದ ದೊರೆತ ಕುಮ್ಮಕ್ಕಿನಿಂದ ಉತ್ಸಾಹಿತರಾಗಿ ತಮ್ಮ ಕುದುರೆಗಳನ್ನು ದೌಡಾಯಿಸಿಕೊಂಡು ಪಥದ ಮೇಲೆ ಓಡಿಸಿದುದರ ವರದಿ ಉಲ್ಲೇಖಿತವಾಗಿದೆ.ಕುದುರೆ ಪಂದ್ಯದಲ್ಲಿ ಜೂಜು ತೊಡಗಿದ್ದು ಸ್ವಲ್ಪ ತಡವಾಗಿ, ಓಟವನ್ನು ನೋಡಲು ನೆರೆದಿರುವ ಪ್ರೇಕ್ಷಕರಲ್ಲಿ ಯಾವ ಕುದುರೆ ಒಂದನೆಯ ಸ್ಥಾನ ಗಳಿಸಬಹುದು ಎಂಬ ಪ್ರಶ್ನೆ ಮೂಡುತ್ತದೆ. ಒಂದು ನಿರ್ದಿಷ್ಟ ಕುದುರೆ ಗೆದ್ದೇ ತೀರುತ್ತದೆ ಎಂದು ಕೆಲವು ಪ್ರೇಕ್ಷಕರು ಪಣತೊಡಬಹುದು. ಇದರ ಸಂಕೇತವಾಗಿ ಅವರು ಒಂದಿಷ್ಟು ಹಣವನ್ನು ಮುಂಗಡವಾಗಿ ಸಲ್ಲಿಸುತ್ತಾರೆ. ಈ ಹಣವನ್ನು ಪಡೆದುಕೊಳ್ಳಲು-ಅಂದರೆ ಪಣಗಳನ್ನು ವ್ಯವಸ್ಥೆಗೊಳಿಸಲು-ಒಂದು ಸಂಸ್ಥೆ ಬೇಕಾಗುತ್ತದೆ. ಪಣತೊಟ್ಟ ಕುದುರೆ ಜಯಶೀಲವಾದರೆ ಮುಂಗಡ ಹಣ ಸಲ್ಲಿಸಿದವರಿಗೆ ಅದರ ನಿಗದಿಯಾದಷ್ಟು ಪಟ್ಟು ಹಣವನ್ನು ಸಂಸ್ಥೆ ತೆರಬೇಕಾಗುವುದು; ಆಗದಿದ್ದರೆ ಪ್ರೇಕ್ಷಕರು ಕೊಟ್ಟ ಹಣ ಸಂಸ್ಥೆಯ ಪಾಲಾಗುತ್ತದೆ. ಪಂದ್ಯದ ಮತ್ತು ಜೂಜಿನ ನಿಯಮಗಳು ಕಾಲ ಸ್ಥಳಾನುಸಾರ ಬದಲಾಗುತ್ತ ಬಂದಿವೆ, ವ್ಯವಸ್ಥಿತವಾಗಿವೆ, ಸರ್ಕಾರದ ಕಾನೂನು ಕಾಯಿದೆಗಳಿಂದ ಬಂಧಿತವಾಗಿವೆ. 16ನೆಯ ಶತಮಾನದ ಹೊತ್ತಿಗೆ ಕುದುರೆ ಪಂದ್ಯ ಹಾಗೂ ಜೂಜುಗಳ ವ್ಯವಸ್ಥಿತ ರೂಪ ಮೈದಳೆಯಲಾರಂಭಿಸಿತ್ತು. ಅದೇ ವೇಳೆಗೆ ಪಂದ್ಯದ ಕುದುರೆಗಳನ್ನು ಆಯುವ, ವಿಶಿಷ್ಟ ತಳಿಗಳನ್ನು ಅಭಿವೃದ್ಧಿಪಡಿಸುವ ಅಂಥ ಕುದುರೆಗಳಿಗೆ ಶಿಕ್ಷಣ ಕೊಡುವ ಕ್ರಮಗಳೂ ಕ್ರಮೇಣ ರೂಪುಗೊಳ್ಳತೊಡಗಿದುವು.
ಶ್ರೀಮಂತವರ್ಗದವರ ಹವ್ಯಾಸ
ಬದಲಾಯಿಸಿಪಂದ್ಯದ ಕುದುರೆಗಳನ್ನು ಸಾಕಿ ಪೋಷಿಸಿ ಪಂದ್ಯಗಳಲ್ಲಿ ಭಾಗವಹಿಸಲು ಕಳಿಸುವುದು ನಾಡಿನ ಶ್ರೀಮಂತವರ್ಗದವರ ಒಂದು ಹವ್ಯಾಸ. ಗೆಲ್ಲುವ ಕುದುರೆ ತರುವ ಬಹುಮಾನಗಳ ಜೊತೆಗೆ ಹೆಚ್ಚಿನ ಕೀರ್ತಿ, ಪ್ರತಿಷ್ಠೆಗಳೂ ದೊರೆಯುತ್ತವೆ. ಉತ್ತಮ ತಳಿಯ ಒಂದು ಪಂದ್ಯದ ಕುದುರೆಗೆ ಬೆಲೆ ರೂಪಾಯಿ ಮೂವತ್ತು ಸಾವಿರದಿಂದ ಮೂರುವರೆ ಲಕ್ಷದವರೆಗೂ ಇರುವುದುಂಟು.ಭಾರತದಲ್ಲಿ ಕುದುರೆ ಪಂದ್ಯ ಮತ್ತು ಜೂಜುಗಳಲ್ಲಿ ಮುಂಬಯಿ ಆದಮೇಲೆ ಬೆಂಗಳೂರಿನದೇ ಪ್ರಧಾನ ಆಕರ್ಷಣೆ. ಮೊದಲು ಮೈಸೂರಿನ ಮಹಾರಾಜರಿಂದ ಮೈಸೂರು ನಗರದಲ್ಲಿ ಸ್ಥಾಪಿತವಾದ ಪಂದ್ಯಗಳು ಈಗ ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ನಗರದಲ್ಲಿ (ಮೇ-ಜುಲೈ) ಸ್ವಲ್ಪ ಕಿರಿಯ ಪ್ರಮಾಣದಲ್ಲಿ ಮೈಸೂರು ನಗರದಲ್ಲಿ (ಆಗಸ್ಟ್-ಸೆಪ್ಟೆಂಬರ್) ನಡೆಯುತ್ತವೆ. ಬೆಂಗಳೂರಿನ ಪಂದ್ಯಗಳಲ್ಲಿ ಸಾಮಾನ್ಯ ದಿವಸಗಳಲ್ಲಿ ದಿನವೊಂದರ ಸುಮಾರು 13,000 ಪ್ರೇಕ್ಷಕರು ಭಾಗವಹಿಸಿದರೆ ಜೂಜು ಮತ್ತು ಬಹುಮಾನಗಳ ವಿಶೇಷ ಆಕರ್ಷಣೆಗಳು ಇರುವ ದಿವಸಗಳಲ್ಲಿ ಈ ಸಂಖ್ಯೆ 25,000ಕ್ಕೆ ಏರುತ್ತದೆ. ಒಂದು ಸಾಮಾನ್ಯ ಪಂದ್ಯದ ದಿವಸ ಜೂಜಿನ ಸಂಸ್ಥೆಯಲ್ಲಿ ವಹಿವಾಟು ನಡೆಯುವ ಹಣದ ಮೊತ್ತ ಸುಮಾರು ರೂಪಾಯಿ ಹದಿನೆಂಟು ಲಕ್ಷ. ಇದರಲ್ಲಿ ರೂಪಾಯಿ ಐದು ಲಕ್ಷದಷ್ಟು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಯಾಗುತ್ತದೆ. ಜೂಜಿನಶ್ರಾಯದಲ್ಲಿ ಸರ್ಕಾರ ರೂಪಾಯಿ ಹದಿನೈದು ಲಕ್ಷದಷ್ಟು ಮೊತ್ತವನ್ನು ಆದಾಯವಾಗಿ ಪಡೆಯಬಹುದು.