ಕುಂಟೆಬಿಲ್ಲೆ ಆಟ

ಕುಂಟೆ ಬಿಲ್ಲೆ ಆಟ
ಕುಂಟೆ ಬಿಲ್ಲೆ ಆಟದ ಚೌಕ

ಆಡಲು ಬೇಕಾಗುವ ವಸ್ತುಗಳು – ಬಿಲ್ಲೆ

ಆಟದ ವಿವರಣೆ

ಭಾರತದಲ್ಲಿ ಹಾಗೂ ಯೂರೋಪಿನ ರಾಷ್ಟ್ರಗಳಲ್ಲಿ ತುಂಬಾ ಹಳೆಯ ಇತಿಹಾಸವನ್ನು ಹೊಂದಿರುವ ಆಟವಾಗಿದೆ ಕುಂಟೆಬಿಲ್ಲೆ.ಭಾರತದ ವಿವಿಧ ರಾಜ್ಯಗಳಲ್ಲೂ ಆಡಲ್ಪಡುವಂತಹ ಈ ಆಟವು ಕುಂಟೆಬಿಲ್ಲೆ , ತೊಕ್ಕುಡು ಬಿಲ್ಲ,ಪಾಂಡಿ,ಚಿರ್ಪಿ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತದೆ.ಹೆಚ್ಚಾಗಿ ಹೆಣ್ಣು ಮಕ್ಕಳು ಆಡುವ ಆಟವಿದು, ಆದರೆ ಯಾವುದೇ ವಯಸ್ಸಿನ ಮಿತಿ ಇಲ್ಲದೆ,ಲಿಂಗ ಭೇಧವಿಲ್ಲದೆ ಆಡಬಹುದಾದ ಆಟವಾಗಿದೆ ಇದು.

ಆಡುವ ವಿಧಾನ

ಈ ಆಟವು ಒಂದು ಹಾಗೂ ಒಂದಕ್ಕಿಂತ ಹೆಚ್ಚು ಜನರು ಆಡಬಹುದಾದ ಆಟವಾಗಿದೆ.

ಆಟವನ್ನಾಡಲು ಮೊದಲಿಗೆ ಒಂದು ಅಂಕಣವನ್ನು ಬರೆಯಬೇಕು.ಅಂಕಣವು ಹಲವು ರೀತಿಯಲ್ಲಿ ಬರೆಯಬಹುದಾದರೂ ಸಾದಾರಣವಾಗಿ ಇದು ಆಯತಾಕಾರದಲ್ಲಿರುತ್ತದೆ.

ಒಂದು ದೊಡ್ಡ ಆಯತದೊಳಗೆ ಒಂದು ಲಂಬ ರೇಖೆ ಹಾಗೂ 3 ಅಡ್ಡ ರೇಖೆಗಳು ಇರುತ್ತವೆ.                                 ಚಿತ್ರದಲ್ಲಿರುವಂತೆ.ಹಾಗೂ ಕೊನೆಯೆರಡು ಆಯತಗಳಲ್ಲಿ ಗುಣಿಸು ಚಿಹ್ನೆ ಇರುತ್ತದೆ.

ಒಬ್ಬ ಆಟಗಾರನು ಆಟವನ್ನು ಪ್ರಾರಂಭಿಸುತ್ತಾನೆ, ಗುಣಿಸು ಚಿಹ್ನೆಯಿರುವ ಬದಿಯು ಕೊನೆಯಾಗಿದ್ದು ಆಟವನ್ನು ಇನ್ನೊಂದು ಬದಿಯಿಂದ ಪ್ರಾರಂಭಿಸುತ್ತಾರೆ.

ಬಿಲ್ಲೆಯನ್ನು ಬಲಗಡೆಯ ಆಯತದಲ್ಲಿ ಹಾಕಿ ಎಡಗಡೆಯ ಆಯತದಿಂದ ಒಂಟಿಕಾಲಿನಲ್ಲಿ ಕುಂಟುತ್ತಾ ಮುಂದಿನ ಆಯತಗಳಿಗೆ ಹಾರುತ್ತಾ ಹೋಗಬೇಕು.

ಕೊನೆಯೆರಡು ಆಯತಗಳಲ್ಲಿ ಎರಡು ಕಾಲುಗಳನ್ನೂ ಊರಬಹುದು.

ಆಟಗಾರನು ಮತ್ತೆ ಬಿಲ್ಲೆ ಹಾಕಿರುವ ಆಯತಕ್ಕೆ ಬಂದು ಬಿಲ್ಲೆಯನ್ನು ಕಾಲಿಂದ ಹೊರಕ್ಕೆ ಒದೆಯಬೇಕು ಹಾಗೂ ಅಲ್ಲಿಂದ ಹೊರಗಡೆ ಬಿದ್ದಿರುವ ಬಿಲ್ಲೆಯ ಮೇಲೆ ಹಾರಬೇಕು.

ಹೀಗೇ ಬಿಲ್ಲೆಯನ್ನು ಒಂದರ ನಂತರ ಒಂದರಂತೆ ಎಲ್ಲಾ ಆಯತಗಳಲ್ಲಿ ಹಾಕಿ ಆಟವನ್ನು ಮುಂದುವರಿಸಬೇಕು.

ಬಿಲ್ಲೆಯು ಬೀಳಬೇಕಾದ ಆಯತದಲ್ಲಿ ಬೀಳದಿದ್ದಲ್ಲಿ, ಅಂಕಣದ ಗೆರೆಗಳ ಮೇಲೆ ಬಿದ್ದಲ್ಲಿ, ಹೊರಗಡೆ ಬಿದ್ದ ಬಿಲ್ಲೆಯ ಮೇಲೆ ಆಟಗಾರ ಮೆಟ್ಟದಿದ್ದಲ್ಲಿ, ಆಟಗಾರನು ಕುಂಟಲು ಅಸಮರ್ಥನಾದಲ್ಲಿ ಆಟದ ಸರದಿ ಮುಂದಿನ ಆಟಗಾರನಿಗೆ ಹೋಗುತ್ತದೆ.

ಕುಂದಾಟ ಈ ಆಟವನ್ನು ಹೋಲುವ ಇನ್ನೊಂದು ಆಟವಾಗಿದೆ. ಇಲ್ಲಿ ಒಬ್ಬ ಆಟಗಾರನು ಉಳಿದ ಆಟಗಾರರನ್ನು ಕುಂಟುತ್ತಾ ಹೋಗಿ ಮುಟ್ಟುಬೇಕಾಗಿದೆ.

ಮುಟ್ಟಿಸಿಕೊಂಡಾತನು ಮತ್ತೆ ಕುಂಟುತ್ತಾ ಉಳಿದವರನ್ನು ಹಿಡಿಯುತ್ತಾನೆ.