ಕೀಲೆಣ್ಣೆಯು ಸಾಮಾನ್ಯವಾಗಿ ಜೈವಿಕವಾದ, ಪರಸ್ಪರ ಸಂಪರ್ಕದಲ್ಲಿರುವ ಮೇಲ್ಮೈಗಳ ನಡುವಿನ ತಿಕ್ಕಾಟವನ್ನು ಕುಗ್ಗಿಸಲು ಪರಿಚಯಿಸಲಾಗುವ ವಸ್ತು. ಇದು ಅಂತಿಮವಾಗಿ ಮೇಲ್ಮೈಗಳು ಚಲಿಸಿದಾಗ ಉತ್ಪತ್ತಿಯಾದ ಉಷ್ಣವನ್ನು ಕಡಿಮೆ ಮಾಡುತ್ತದೆ. ಇದು ಬಲಗಳನ್ನು ಸಾಗಿಸುವ, ಬಾಹ್ಯ ಕಣಗಳನ್ನು ಸಾಗಿಸುವ, ಅಥವಾ ಮೇಲ್ಮೈಗಳನ್ನು ಬಿಸಿಮಾಡುವ ಅಥವಾ ತಂಪುಗೊಳಿಸುವ ಕಾರ್ಯವನ್ನು ಕೂಡ ಹೊಂದಿರಬಹುದು. ಘರ್ಷಣೆಯನ್ನು ಕಡಿಮೆ ಮಾಡುವ ಗುಣವನ್ನು ಜಾರಿಕೆ ಎಂದು ಕರೆಯಲಾಗುತ್ತದೆ. ಔದ್ಯೋಗಿಕ ಅನ್ವಯಗಳ ಜೊತೆಗೆ, ಕೀಲೆಣ್ಣೆಗಳನ್ನು ಅನೇಕ ಇತರ ಉದ್ದೇಶಗಳಿಗೆ ಬಳಸಲಾಗುತ್ತದೆ. ಇತರ ಬಳಕೆಗಳಲ್ಲಿ ಅಡುಗೆ (ಕರಿಯುವ ಬಾಣಲಿಗಳಲ್ಲಿ ಬಳಕೆಯಲ್ಲಿರುವ ಎಣ್ಣೆಗಳು ಮತ್ತು ಕೊಬ್ಬುಗಳು), ಮಾನವರ ಮೇಲೆ ಜೈವಿಕ ಅನ್ವಯಗಳು (ಉದಾ. ಕೃತಕ ಕೀಳುಗಳಿಗೆ ಕೀಲೆಣ್ಣೆಗಳು), ಶ್ರವಣಾತೀತ ಧ್ವನಿ ಬಳಕೆಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಸೇರಿವೆ.

ಉತ್ತಮ ಕೀಲೆಣ್ಣೆಯು ಸಾಮಾನ್ಯವಾಗಿ ಈ ಮುಂದಿನ ಗುಣಲಕ್ಷಣಗಳನ್ನು ಹೊಂದಿರುತ್ತದೆ: ಹೆಚ್ಚಿನ ಕುದಿಬಿಂದು ಮತ್ತು ಕಡಿಮೆಯಿರುವ ಘನೀಕರಣ ಬಿಂದು (ಉಷ್ಣಾಂಶದ ವಿಶಾಲ ವ್ಯಾಪ್ತಿಯಲ್ಲಿ ದ್ರವವಾಗಿ ಉಳಿಯಲು); ಹೆಚ್ಚಿನ ಸ್ನಿಗ್ಧತೆ ಸೂಚ್ಯಂಕ; ತಾಪ ಸ್ಥಿರತೆ; ಜಲಚಾಲನ ಸ್ಥಿರತೆ; ಡೀಮಲ್ಸೀಕರಣ ಸಾಮರ್ಥ್ಯ; ಸವೆತ ತಡೆಯುವಿಕೆ; ಉತ್ಕರ್ಷಣಕ್ಕೆ ಹೆಚ್ಚಿನ ಪ್ರತಿರೋಧ.

ಸಾಮಾನ್ಯವಾಗಿ ಕೀಲೆಣ್ಣೆಗಳು ಶೇಕಡ ೯೦ರಷ್ಟು ಆಧಾರ ಎಣ್ಣೆಯನ್ನು (ಬಹುತೇಕ ವೇಳೆ ಕಲ್ಲೆಣ್ಣೆಯ ಅಂಶಗಳು, ಖನಿಜತೈಲಗಳು ಎಂದು ಕರೆಯಲ್ಪಡುತ್ತವೆ) ಮತ್ತು ಶೇಕಡ ೧೦ಕ್ಕಿಂತ ಕಡಿಮೆ ಸಂಯೋಜನೀಯಗಳನ್ನು ಹೊಂದಿರುತ್ತವೆ. ವನಸ್ಪತಿ ತೈಲಗಳು ಅಥವಾ ಹೈಡ್ರೋಜನೀಕರಿಸಿದ ಪಾಲಿಆಲೆಫ಼ಿನ್ಸ್, ಎಸ್ಟರ್‌ಗಳು, ಸಿಲಿಕೋನ್‍ಗಳು, ಫ಼್ಲೂರೊಕಾರ್ಬನ್ಸ್ ಮತ್ತು ಅನೇಕ ಇತರ ವಸ್ತುಗಳಂತಹ ಸಂಶ್ಲೇಷಿತ ದ್ರವಗಳನ್ನು ಕೆಲವೊಮ್ಮೆ ಆಧಾರ ತೈಲಗಳಾಗಿ ಬಳಸಲಾಗುತ್ತದೆ.

೧೯೯೯ರಲ್ಲಿ, ಅಂದಾಜಿನ ಪ್ರಕಾರ ಸುಮಾರು ೩೭,೩೦೦,೦೦೦ ಟನ್‍ಗಳಷ್ಟು ಕೀಲೆಣ್ಣೆಗಳನ್ನು ವಿಶ್ವದಾದ್ಯಂತ ಉಪಯೋಗಿಸಲಾಗಿತ್ತು.[೧] ವಾಹನ ಸಂಬಂಧಿ ಅನ್ವಯಗಳ ಪ್ರಾಬಲ್ಯವಿದೆ, ಆದರೆ ಇತರ ಔದ್ಯೋಗಿಕ, ಕಡಲ ಸಂಬಂಧಿ, ಮತ್ತು ಲೋಹಗೆಲಸ ಅನ್ವಯಗಳು ಕೂಡ ಕೀಲೆಣ್ಣೆಗಳ ದೊಡ್ಡ ಗ್ರಾಹಕವಾಗಿದ್ದಾವೆ. ವಾಯು ಮತ್ತು ಇತರ ಅನಿಲ ಆಧಾರಿತ ಕೀಲೆಣ್ಣೆಗಳು ಪರಿಚಿತವಿವೆಯಾದರೂ (ಉದಾ. ದ್ರವ ಬೇರಿಂಗ್‍ಗಳಲ್ಲಿ), ದ್ರವ ಕೀಲೆಣ್ಣೆಗಳ ಪ್ರಾಬಲ್ಯ ಮಾರುಕಟ್ಟೆಯಲ್ಲಿದೆ. ಇದರ ನಂತರ ಘನ ಕೀಲೆಣ್ಣೆಗಳ ಪ್ರಾಬಲ್ಯ ಇದೆ. ಕೀಲೆಣ್ಣೆಗಳು ಸಾಮಾನ್ಯವಾಗಿ ಬಹುಪಾಲು ಆಧಾರ ತೈಲ ಜೊತೆಗೆ ಅಪೇಕ್ಷಣೀಯ ಗುಣಲಕ್ಷಣಗಳನ್ನು ನೀಡಲು ವಿವಿಧ ಸಂಯೋಜನೀಯಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಕೀಲೆಣ್ಣೆಗಳು ಒಂದು ಬಗೆಯ ಆಧಾರ ತೈಲದ ಮೇಲೆ ಆಧಾರಿತವಾಗಿರುತ್ತವೆಯಾದರೂ, ಕಾರ್ಯಕ್ಷಮತೆ ಅಗತ್ಯತೆಗಳನ್ನು ಪೂರೈಸಲು ಆಧಾರ ತೈಲಗಳ ಮಿಶ್ರಣಗಳನ್ನು ಕೂಡ ಬಳಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Thorsten Bartels et al. "Lubricants and Lubrication" in Ullmann's Encyclopedia of Industrial Chemistry, 2005, Weinheim. doi:10.1002/14356007.a15_423