ಕೀಟಗಳ ವೈಜ್ಞಾನಿಕ ಅಧ್ಯಯನ (ಎಂಟೊಮಾಲಜಿ, Entomology). ಇದರಲ್ಲಿ ಎರಡು ವಿಭಾಗಗಳಿವೆ: ಕೀಟಗಳ ಪ್ರಾಣಿಶಾಸ್ತ್ರ ವೃತ್ತಾಂತ (ಝೂಲಾಜಿ ಆಫ್ ದಿ ಇನ್‍ಸೆಕ್ಟ್ಸ್) ಮತ್ತು ಅನ್ವಯ ಕೀಟಶಾಸ್ತ್ರ. ಮೊದಲಿನದರಲ್ಲಿ ಕೀಟಗಳ ವರ್ಗೀಕರಣ, ರೂಪರಚನೆ, ಶರೀರವಿಜ್ಞಾನ, ಕೀಟ ಹಾಗೂ ಪರಿಸರ ಸಂಬಂಧ, ವಂಶಾಭಿವೃದ್ಧಿ ಇತ್ಯಾದಿ ಅಂಶಗಳನ್ನೂ, ಎರಡನೆಯದರಲ್ಲಿ ಕೀಟಗಳಿಂದ ಮಾನವನಿಗೆ, ಅವನ ಸಾಕುಪ್ರಾಣಿಗಳಿಗೆ, ಕೃಷಿಗೆ ಆಗುವ ಹಾನಿ ಮತ್ತು ಉಪಕಾರ, ಕೀಟಗಳ ನಿಯಂತ್ರಣ, ಉಪಯುಕ್ತ ಕೀಟಗಳ ಸಾಕಣೆ ಮುಂತಾದುವನ್ನೂ ಅಭ್ಯಾಸ ಮಾಡಲಾಗುತ್ತದೆ. ಅಲ್ಲದೆ ಕೀಟಶಾಸ್ತ್ರದ ಇತಿಹಾಸ ಸಹ ಒಂದು ಪ್ರಮುಖ ಅಧ್ಯಯನ ವಿಷಯ. ಜಗತ್ತಿನಲ್ಲಿ ಸುಮಾರು ೧೩ ಲಕ್ಷ ಕೀಟಗಳಿವೆ ಎಂದು ಅಂದಾಜು ಮಾಡಲಾಗಿದೆ.[೧]

ಒಂದು ಕೀಟ

ಇತಿಹಾಸ

ಬದಲಾಯಿಸಿ

ಮಾನವನಿಗೆ ಕೀಟಗಳ ಒಡನಾಟ ಆತನ ಇತಿಹಾಸದಷ್ಟೇ ಪುರಾತನವಾದುದಾದರೂ ಅವುಗಳ ಬಗ್ಗೆ ಬರಹಗಳಿರುವುದು ಕೇವಲ ಕೆಲವೇ ಸಾವಿರ ವರ್ಷಗಳಿಂದ ಈಚೆಗೆ. ಹೆಚ್ಚು ಕಡಿಮೆ ಎಲ್ಲವೂ ಉಪಯುಕ್ತ ಕೀಟಗಳಾದ ಜೇನು, ರೇಷ್ಮೆಹುಳು, ಅರಗು ಕೀಟಗಳು, ಅವುಗಳ ಸಾಕಣೆ ಇತ್ಯಾದಿಗಳಿಗೆ ಸಂಬಂಧಿಸಿದವು. ಪ್ರಾಚೀನ ಈಜಿಪ್ಟಿನ ದೇವಾಲಯಗಳ ಗೋಡೆಗಳ ಬರಹದಲ್ಲಿ ಜೇನು ಸಾಕಣೆ (ಕ್ರಿ.ಪೂ.ಸು. 2600), ಕೀಟಗಳ ನಿಯಂತ್ರಣದಲ್ಲಿ ಬಳಸಲಾಗುವ ನಿರೋಧಕಗಳ ತಯಾರಿಕೆ (ಕ್ರಿ.ಪೂ.ಸು.1500) ಮುಂತಾದವುಗಳ ಬಗ್ಗೆ ಉಲ್ಲೇಖ ಉಂಟು. ಚೀನ, ಅರೇಬಿಯಗಳಲ್ಲೂ ಇವುಗಳ ಅಧ್ಯಯನ ನಡೆದಿತ್ತು. ಭಾರತದಲ್ಲಿ ಚರಕ (ಕ್ರಿ.ಪೂ.ಸು. 600) ಮತ್ತು ಉಮಸ್ವತಿ (ಕ್ರಿ.ಶ.ಎರಡನೆಯ ಶತಮಾನ) ಇವರಿಂದ ಕೀಟಗಳ ವರ್ಗೀಕರಣದ ಬಗ್ಗೆ ಅಭ್ಯಾಸ ನಡೆದಿತ್ತೆಂದು ತಿಳಿದಿದೆ. ಕೀಟಗಳ ಶಾಸ್ತ್ರೀಯ ಅಧ್ಯಯನ ಆರಂಭವಾದುದು ಅರಿಸ್ಟಾಟಲ್‍ನಿಂದ (ಕ್ರಿ.ಪೂ.384-322) ಎಂದು ಹೇಳಬಹುದು. ಆತ ಕೀಟಗಳಿಗೆ ಎಂಟೋಮ ಎಂಬ ಗ್ರೀಕ್ ಹೆಸರು ಕೊಟ್ಟ[೨]. ಕೀಟದ ದೇಹದಲ್ಲಿ ತಲೆ. ಎದೆ ಮತ್ತು ಹೊಟ್ಟೆ ಎಂಬ ಮೂರು ಭಾಗಗಳಿರುವುದನ್ನೂ ದೇಹದಲ್ಲಿ ಜಠರ, ಹೃದಯ, ಶ್ರವಣ, ಘ್ರಾಣ ಹಾಗೂ ನೇತ್ರೇಂದ್ರಿಯಗಳಿರುವುದನ್ನೂ ಅವನು ಗಮನಿಸಿದ. ರೆಕ್ಕೆ ಇರುವ, ಇಲ್ಲದಿರುವ ಕೀಟಗಳನ್ನೂ ಅವುಗಳ ವದನಾಂಗಗಳನ್ನೂ ರೂಪಪರಿವರ್ತನೆಯನ್ನೂ ಕಂಡುಹಿಡಿದ. ಅನಂತರ ರೋಮಿನ ತತ್ತ್ವಜ್ಞಾನಿ ಪ್ಲಿನಿ (ಕ್ರಿ.ಶ. 24-79) ಕೀಟಗಳನ್ನು ಅಭ್ಯಸಿಸಿ ಇವುಗಳ ಉಸಿರಾಟವನ್ನು ವಿವರಿಸಿದ. ಅಲ್ಲದೆ ಅರಿಸ್ಟಾಟಲ್ ಕಂಡುಹಿಡಿಯದಿದ್ದ ಹಲವಾರು ಹೊಸ ಬಗೆಯ ಕೀಟಗಳನ್ನು ಇವನು ವಿವರಿಸಿದ. ಪ್ಲಿನಿಯ ಅನಂತರ 17ನೆಯ ಶತಮಾನದ ವರೆಗೂ ಗಮನಾರ್ಹವಾದ ಅಭ್ಯಾಸವೇನೂ ನಡೆಯಲಿಲ್ಲ. 1602ರಲ್ಲಿ ಆಲ್ಡ್ರೊವಾಂಡಿ ಎಂಬಾತ ಕೀಟ ವರ್ಗೀಕರಣದ ಬಗ್ಗೆ ಪುಸ್ತಕವೊಂದನ್ನು ಪ್ರಕಟಿಸಿ ಕೀಟಗಳನ್ನು ಗುರುತಿಸಲು ಸಹಾಯಕವಾದ ಕೆಲವು ವಿವರಗಳನ್ನು ತಿಳಿಸಿದ. 30 ವರ್ಷಗಳ ಅನಂತರ ಥಾಮಸ್ ಸೊಫೆಟ್ ಎಂಬುವನ ಸಚಿತ್ರ ಪುಸ್ತಕ ಪ್ರಕಟವಾಯಿತು. 17ನೆಯ ಶತಮಾನದಲ್ಲಿ ಮುದ್ರಣ ಕಲೆಯ ಪರಿಷ್ಕರಣ, ರಾಜಕೀಯ ಸ್ಥಿರತೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಹೊಸ ಖಂಡಗಳ ಪರಿಚಯ ಮತ್ತು ಫ್ರಾನ್ಸಿಸ್ ಬೇಕನ್, ಡೆಕಾರ್ಟ್ ಇವರಿಂದ ಆರಂಭವಾದ ಹೊಸ ವಿಚಾರ ದೃಷ್ಟಿ ಇವೆಲ್ಲ ಸೇರಿ ಕೀಟಶಾಸ್ತ್ರದ ಮೇಲೆ ಆಳವಾದ ಪ್ರಭಾವವನ್ನು ಬೀರಿದುವು. ಲೀವೆನ್‍ಹುಕ್‍ನಿಂದ ಸೂಕ್ಷ್ಮದರ್ಶಕದ ಆವಿಷ್ಕಾರವಾದ ಮೇಲೆ ಮಾಲ್ಪಿಗಿ, ಸ್ವಾಮರ್‍ಡ್ಯಾಮ್ ಮೊದಲಾದ ಖ್ಯಾತ ತಜ್ಞರು ತಮ್ಮ ದೃಷ್ಟಿಯನ್ನು ಕೀಟಗಳೆಡೆಗೆ ಹರಿಸಿದರು. ಮಾಲ್ಫಿಜಿ ಕೀಟಗಳ ಉಸಿರಾಟದ ಕ್ರಮ, ರೇಷ್ಮೆ ಗ್ರಂಥಿಗಳು, ಮಾಲ್ಫಿಜಿಯನ್ ಕೊಳವೆಗಳು, ಜನನಾಂಗ ವ್ಯವಸ್ಥೆ, ನರಮಂಡಲ, ರೆಕ್ಕೆಗಳ ಹುಟ್ಟುವಿಕೆ ಮೊದಲಾದ ಅಂಶಗಳ ಮೇಲೆ ಬೆಳಕು ಬೀರಿದ. ಸ್ವಾಮರ್‍ಡ್ಯಾಮ್ ಚಿಟ್ಟೆ, ಜೇನು, ಕೊಡತಿಕೀಟ ಮುಂತಾದುವುಗಳ ಜೀವನಚರಿತ್ರೆಯನ್ನು ಚಿತ್ರಸಹಿತವಾಗಿ ವಿವರಿಸಿದ. ಅಲ್ಲದೆ ಅವುಗಳ ಜೀವನಕ್ರಮಗಳಲ್ಲಿರುವ ಪರಸ್ಪರ ವ್ಯತ್ಯಾಸಗಳನ್ನು ಕಂಡುಹಿಡಿದು ಕೀಟಗಳನ್ನು ನಾಲ್ಕು ಮುಖ್ಯ ಪಂಗಡಗಳಾಗಿ ವಿಂಗಡಿಸಿದ. ಹದಿನೆಂಟನೆಯ ಶತಮಾನದಲ್ಲಿ ಕೀಟಶಾಸ್ತ್ರದ ಅಧ್ಯಯನದಲ್ಲಿ ನಿರತರಾದವರಲ್ಲಿ ಮುಖ್ಯರಾದವರು ಡಿ ರೇಮರ್, ಸ್ವೀಡನ್ನಿನ ಡಿ ಗೀರ್, ಗೆಡಾರ್ಟ್, ಮೇರಿಯ ಮೇರಿಯನ್, ಜೊಹಾನ್ ಫಿಶ್, ವಿಲಿಯಂ ಗೌಲ್ಡ್ ಮುಂತಾದವರು. ಡಿ ಗೀರ್ ಏಳು ಸಂಪುಟಗಳಲ್ಲಿ ಮೆಮಾಯರ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿ ಕೀಟವರ್ಗೀಕರಣದ ಮೂಲತತ್ತ್ವಗಳನ್ನು ಪ್ರತಿಪಾದಿಸಿದ. ಅನಂತರ ಹೆಸರಿಸಬಹುದಾದವನು ಜಾನ್ ರೇ. ಇವನು ಸ್ವಾಮರ್‍ಡ್ಯಾಮಿನಂತೆ ಕೀಟಗಳ ರೂಪಪರಿವರ್ತನೆಗಳನ್ನೂ, ಇವನಿಗಿಂತ ಹಿಂದಿನವರಂತೆ ರೂಪರಚನೆಯನ್ನೂ ಕೀಟವರ್ಗೀಕರಣಕ್ಕೆ ಆಧಾರವಾಗಿ ತೆಗೆದುಕೊಂಡ. ಅನಂತರ ಲಿನಿಯಸ್‍ನ ಹೊಸ ದ್ವಿನಾಮ ಪದ್ಧತಿ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಕೀಟಗಳ ವರ್ಗೀಕರಣ ಹಾಗೂ ನಾಮಕರಣಕ್ಕೆ ಹೊಸ ರೂಪದೊರೆಯಿತು. 19ನೆಯ ಶತಮಾನದ ವೇಳೆಗೆ ಕೀಟಶಾಸ್ತ್ರಕ್ಕೆ ಒಂದು ಪ್ರಮುಖ ಸ್ಧಾನ ಲಭಿಸಿತ್ತು. ಕರ್ಬಿ, ಸ್ಪೆನ್ಸ್‍ರ್, ಬರ್ಮೆಯಿಸ್ಟರ್ ಮುಂತಾದವರ ಅಭ್ಯಾಸದ ಫಲವಾಗಿ ಕೀಟಗಳ ಬಗೆಗೆ ಹೆಚ್ಚಿನ ಅರಿವು ಮೂಡಲು ಅನುಕೂಲವಾಯಿತು. ಪ್ಯಾರಿಸ್, ಲಂಡನ್ ಮುಂತಾದೆಡೆ ಕೀಟಶಾಸ್ತ್ರ ಸಂಘಗಳು ಸ್ಧಾಪಿತವಾದುವು. ಈ ಕಾಲದ ಅತ್ಯಂತ ಪ್ರಮುಖ ಕೆಲಸ ಎಂದರೆ ಬ್ರಿಟಿಷ್ ಮ್ಯೂಸಿಯಂ ಕೀಟಗಳ ಬಗ್ಗೆ 20,000 ಪುಟಗಳ ಪುಸ್ತಕವನ್ನು ಪ್ರಕಟಿಸಿದ್ದು. ಅಲ್ಲಿಂದೀಚೆಗೆ ವ್ಯಾಲೇಸ್, ಬೇಟ್ಸ್, ಟ್ರೆಮನ್ ಮುಂತಾದವರು ಕೀಟಗಳ ಬಗ್ಗೆ ಹೆಚ್ಚಿನ ವ್ಯಾಸಂಗ ನಡೆಸಿ ಡಾರ್ವಿನ್ನನ ಜೀವಿ ವಿಕಾಸ ಸಿದ್ಧಾಂತಕ್ಕೆ ಹಲವಾರು ನಿದರ್ಶನಗಳನ್ನು ಒದಗಿಸಿದರು. ಅಲ್ಲದೆ ಕೀಟಶಾಸ್ತ್ರದಿಂದ ಜೀವಶಾಸ್ತ್ರದ ಹಲವು ವಿಭಾಗಗಳಿಗೆ ದೊರೆತ ಕೊಡುಗೆಗಳೂ ಅಪಾರ. ಅಬ್ರಾಕ್ಸಾಸ್ ಪತಂಗದ ಅದ್ಯಯನದಿಂದ ತಳಿಶಾಸ್ತ್ರದಲ್ಲಿ ಲಿಂಗ ಸಂಬಂದಿ ಜೀನ್‍ಗಳ ಬಗ್ಗೆ ಹೆಚ್ಚು ಅರಿಯಲು ಸಾದ್ಯವಾಯಿತು. ಹಾಗೆಯೆ ಡ್ರಾಸೋಫಿಲ ಎಂಬ ಹೆಣ್ನೊಣದಿಂದ ತಳಿಶಾಸ್ತ್ರಕ್ಕಾಗಿರುವ ಉಪಯೋಗ ಅಪಾರ. ಕೀಟಮನಶ್ಯಾಸ್ತ್ರದ ದಿಸೆಯಲ್ಲಿ ಜಾನ್ ಲಬಕ್, ಪೊರೆಲ್, ವ್ಯಾಸ್‍ಮ್ಯಾನ್, ಫೇಬರ್ ಮುಂತಾದವರು ಸಂಶೋಧನೆ ನಡೆಸಿ ಕೀಟಗಳ ವರ್ತನೆ ಮತ್ತು ಸಂಪರ್ಕ ವ್ಯವಸ್ಥೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸಿದರು. ಹೀಗೆ ಕೀಟಶಾಸ್ತ್ರ ಮಾನವ ಕಲ್ಯಾಣದಲ್ಲಿ ತನ್ನದೇ ಆದ ವಿಶಿಷ್ಟ ಸ್ಧಾನವನ್ನು ಗಳಿಸಿದೆ.

ಆಧುನಿಕ ಕೀಟಶಾಸ್ತ್ರ

ಬದಲಾಯಿಸಿ

ಮೊದಮೊದಲು ಕೀಟಗಳ ವರ್ಗೀಕರಣದ ಬಗ್ಗೆಯೇ ಕೀಟಶಾಸ್ತ್ರ ಸೀಮಿತವಾಗಿದ್ದರೂ ಇತ್ತೀಚೆಗೆ ಅನ್ವಯ ಕೀಟಶಾಸ್ತ್ರಕ್ಕೆ ಅಗತ್ಯವಾದ ತತ್ವಗಳನ್ನು ಪ್ರತಿಪಾದಿಸುವುದರ ಕಡೆಗೆ ಹೆಚ್ಚಿನ ಗಮನ ನೀಡಲಾಗಿದೆ. ಆಧುನಿಕ ಕೀಟಶಾಸ್ತ್ರದ ಹಲವಾರು ಪ್ರಕಾರಗಳಲ್ಲಿ ಮುಖ್ಯವಾದವು ನಾಲ್ಕು.

ವರ್ಗೀಕರಣ

ಬದಲಾಯಿಸಿ

ಕೀಟಗಳನ್ನು ವಿವಿಧ ಗುಂಪು, ಗಣ, ಕುಟುಂಬಗಳಾಗಿ ವಿಂಗಡಿಸುವುದೂ ಅವುಗಳಿಗೆ ಸೂಕ್ತವಾದ ಹೆಸರು ಕೊಡುವುದೂ ಇದರ ಮುಖ್ಯ ಅಂಶ. ಕೀಟಗಳ ಬಾಹ್ಯ ಹಾಗೂ ಒಳ ರೂಪರಚನೆ, ಭ್ರೂಣಶಾಸ್ತ್ರ, ಜೀವರಾಸಾಯನಿಕ ಶಾಸ್ತ್ರ ಮುಂತಾದ ಶಾಖೆಗಳಿಂದ ಇದಕ್ಕೆ ಬೇಕಾಗುವ ಘಟಕಗಳನ್ನು ಪಡೆಯುವುದಲ್ಲದೆ ಕೀಟಗಳ ವರ್ತನೆ, ಭೌಗೋಳಿಕ ವಿಸ್ತರಣೆಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೂ ಇನ್ನೂ 2-3 ದಶಲಕ್ಷ ಕೀಟಗಳ ವರ್ಗೀಕರಣ, ನಾಮಕರಣ ನಡೆಯಬೇಕಾಗಿದೆ ಎಂದು ಅಂದಾಜಿದೆ. ವರ್ಗೀಕರಣದಿಂದ ಕೀಟಶಾಸ್ತ್ರದ ಇತರ ಪ್ರಕಾರಗಳಿಗೂ ಉಪಯೋಗವಿದೆ. ಯಾವುದೇ ಹೊಸ ಕೀಟಪ್ರಭೇದವೂಂದರ ಶೋಧನೆ ನಡೆದರೂ ಆಗಲೇ ಗೊತ್ತಾಗಿರುವ ಕೀಟಗಳೊಂದಿಗೆ ಹೊಸದನ್ನು ಹೋಲಿಸಿ ಆ ಕೀಟದ ಸೂಕ್ತ ಸ್ಥಾನವನ್ನು ಗೊತ್ತು ಹಚ್ಚಲು ಇದು ಸಹಾಯಕ. ಮತ್ತು ಇದರಿಂದ ಅದರ ಸ್ವಭಾವ, ಪ್ರಾಮುಖ್ಯ ಮತ್ತು ನಿಯಂತ್ರಣದ ಬಗ್ಗೆ ಸಾರ್ವತ್ರೀಕರಣ ಮಾಡಲೂ ಸುಲಭ.

ರೂಪರಚನಾಶಾಸ್ತ್ರ

ಬದಲಾಯಿಸಿ

ಇದು ಕೀಟಗಳ ಹೊರ ಹಾಗೂ ಒಳರಚನೆಗಳ ಅಧ್ಯಯನ. ಇದರಿಂದ ವರ್ಗೀಕರಣಕ್ಕೆ ಬೇಕಾಗುವ ಘಟಕಗಳನ್ನೆಲ್ಲ ಪಡೆಯಬಹುದಾಗಿದೆ. ಅಲ್ಲದೆ ಕೀಟಗಳ ನೆಲೆ, ಅವು ಪರಿಸರಕ್ಕೆ ಹೊಂದಿಕೊಳ್ಳುವ ಬಗ್ಗೆ ಕೀಟಗಳ ಶಾರೀರಕ ಕ್ರಿಯೆಗಳ ಮೂಲ ತಿಳಿವಳಿಕೆಗೂ ಇದು ಸಹಕಾರಿ. ಇದರಲ್ಲಿ ಎರಡು ಮುಖ್ಯ ಮುಖಗಳನ್ನು ಗುರುತಿಸಬಹುದು: (1) ಪ್ರಾಚೀನ, (11) ಆಧುನಿಕ. ಪ್ರಾಚೀನ ರೂಪ ರಚನಾಶಾಸ್ತ್ರ ಸ್ಥೂಲವಾದ ಗುಣಗಳ ಮೇಲೆ ಮಾತ್ರ ಆಧಾರವಾದುದು. ಆಧುನಿಕ ರೂಪರಚನಾಶಾಸ್ತ್ರ ಇತ್ತೀಚೆಗೆ ಅಭಿವೃದ್ಧಿಗೆ ಬರುತ್ತಿರುವ ಶಾಖೆ. ಇದು ಹೆಚ್ಚಾಗಿ ಜೀವಕೋಶಗಳ ಅತಿಸೂಕ್ಷ್ಮ ಅಧ್ಯಯನಕ್ಕೆ ಸಂಬಂಧಪಟ್ಟುದು ಮತ್ತು ಇದು ಪ್ರಾಯೋಗಿಕವಾದದು. ಇದಕ್ಕೂ ರಸಾಯನಶಾಸ್ತ್ರಕ್ಕೂ ಸಂಬಂಧವುಂಟು, ಜೀವಕೋಶಗಳಲ್ಲಿನ ಮೈಟೋಕಾಂಡ್ರಿಯ, ಗಾಲ್ಗಿ ವಸ್ತುಗಳನ್ನು ಮುಂತಾದುವುಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ನೋಡಿ ಹೆಚ್ಚು ವಿವರಗಳನ್ನು ತಿಳಿಯಲಾಗಿದೆ. ಕೀಟಗಳನ್ನು ಹಲವಾರು ಪ್ರಯೋಗ ಪರೀಕ್ಷೆಗಳಿಗೆ ಒಳಪಡಿಸಿ ಅವುಗಳ ವರ್ತನೆ, ಅವುಗಳ ಮೇಲಾಗುವ ಪರಿಣಾಮಗಳನ್ನು ಅಭ್ಯಸಿಸಲಾಗಿದೆ.

ಶರೀರವಿಜ್ಞಾನ

ಬದಲಾಯಿಸಿ

ಕೀಟಗಳ ವಿವಿಧ ಅಂಗಗಳ, ಅಂಗಾಂಶಗಳ ಕ್ರಿಯಾವಿನ್ಯಾಸಕ್ಕೆ ಸಂಬಂಧಪಟ್ಟಿದೆ. ಕ್ರಿಯೆಗಳಿಗೂ ಅಂಗಗಳ ರಚನೆಗೂ ಇರವ ಸಂಬಂಧ, ಕೀಟಗಳು ವಿವಿಧ ವಾತಾವರಣ, ಪರಿಸ್ಥಿತಿಗಳಲ್ಲಿ ತೋರುವ ಪ್ರತಿಕ್ರಿಯೆಗಳು, ಹೊಂದಾಣಿಕೆಗಳು, ವರ್ತನೆ ಮುಂತಾದುವನ್ನು ಅಭ್ಯಸಿಸಲಾಗಿದೆ. 1900 ರಿಂದೀಚೆಗೆ ಈ ದಿಸೆಯಲ್ಲಿ ಹೆಚ್ಚಿನ ಕೆಲಸ ನಡೆದಿದೆ. ಕೇವಲ ಕಲವೇ ಕೀಟಗಳಲ್ಲಿ ಈ ಬಗೆಯ ಅಧ್ಯಯನ ವಿಸ್ತಾರವಾಗಿ ನಡೆದಿದ್ದರೂ ಇವುಗಳಿಂದ ಲಭಿಸಿರುವ ಜ್ಞಾನ ಅಪಾರವಾದುದು. ಜಿರಲೆ, ಜೇನು, ರೇಷ್ಮೆಪತಂಗ, ಸೊಳ್ಳೆಗಳು, ಡ್ರಾಸೋಫಿಲ, ನೊಣ ಮುಂತಾದ ಕೆಲವೇ ಕೀಟಗಳಲ್ಲಿ ಈ ಬಗೆಯ ಸಂಶೋಧನೆ ನಡೆದಿದೆ. ಇದರ ಅಂಗವಾಗಿ ನಡೆದಿರುವ ಹಲವಾರು ಸಂಶೋಧನೆಗಳು ಕೀಟ ನಿರೋಧಕಗಳಿಂದ ಕೀಟಗಳಲ್ಲಿ ಉಂಟಾಗುವ ಪರಿಣಾಮ, ಕೈಟಿನ್ ಹೊರಕವಚದ ಉತ್ಪಾದನೆ, ಪೊರೆ ಬಿಡುವಿಕೆ, ರೂಪ ಪರಿವರ್ತನೆ, ಹಾರ್ಮೋನುಗಳ ಉತ್ಪತ್ತಿ ಮತ್ತು ಕೀಟಗಳ ಪೋಷಣೆ ಮುಂತಾದ ಅಂಶಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಿವೆ.

ಕೀಟಪರಿಸರಶಾಸ್ತ್ರ

ಬದಲಾಯಿಸಿ

ಕೀಟಗಳಿಗೂ ಅವುಗಳ ಪರಿಸರಕ್ಕೂ ಇರುವ ಪರಸ್ಪರ ಸಂಬಂಧದ ಅಧ್ಯಯನವೇ ಪರಿಸರಶಾಸ್ತ್ರ. ಶರೀರವಿಜ್ಞಾನದಂತೆಯೆ ಇದೂ ಕೂಡ ಕೀಟಗಳ ನಡತೆ ಕ್ರಿಯಾಚಟುವಟಿಕೆ, ವಾತಾವರಣದ ವಿವಿಧ ಕಾರಕಗಳಿಗೆ ಕೀಟಗಳ ಹೊಂದಾಣಿಕೆಯನ್ನು ಕುರಿತದ್ದು. ಆದರೆ ಶರೀರವಿಜ್ಞಾನ ಮುಖ್ಯವಾಗಿ ಪ್ರಯೋಗಶಾಲೆಗೆ ಸೀಮಿತವಾಗಿದ್ದರೆ ಪರಿಸರಶಾಸ್ತ್ರ ಬಯಲಿನಲ್ಲಿ (ಫೀಲ್ಡ್ ಸೈನ್ಸ್) ನಡೆಯುವಂಥದು. ಶರೀರವಿಜ್ಞಾನದ ಅಧ್ಯಯನ ಜೀವಕೋಶ, ಅಂಗಾಂಶ, ಅಂಗ ಅಥವಾ ಒಂದು ಕೀಟಕ್ಕೆ ಸೀಮಿತವಾಗಿದ್ದರೆ ಪರಿಸರಶಾಸ್ತ್ರ ಕೀಟಗಳ ಗುಂಪು, ಸ್ಥಳೀಯ ಸಂದಣಿ, ಸಮುದಾಯಗಳಿಗೆ ಅನ್ವಯವಾಗುತ್ತದೆ. ಕೀಟಗಳನ್ನೂ ಒಂದೊಂದಾಗಿಯೆ ತೆಗೆದುಕೊಂಡು ಇಲ್ಲವೆ ಕೀಟಸಮುದಾಯಗಳನ್ನು ಆರಿಸಿಕೊಂಡು ಅವುಗಳ ಮೇಲೆ ಪರಿಸರದ ಪ್ರಭಾವವೇನೆಂದು ಅಭ್ಯಸಿಸಬಹುದು. ಇವನ್ನು ಅನುಕ್ರಮವಾಗಿ ಸ್ವಂತ ಪರಿಸರಶಾಸ್ತ್ರ ಹಾಗೂ ಸಮುದಾಯ ಪರಿಸರಶಾಸ್ತ್ರ ಎನ್ನಲಾಗುತ್ತದೆ. ಆದರೆ ಇವೆರಡೂ ಪರಸ್ಪರ ಪೂರಕಗಳು, ಪರಿಸರಶಾಸ್ತ್ರದ ವಿಧಾನಗಳೂ ವಿವಿಧ ಬಗೆಯವು. ಅಭ್ಯಸಿಸಲಾಗುವ ಸಂದಣಿಯ ಸಂಕೀರ್ಣತೆಯನ್ನು ಅವಲಂಬಿಸಿ ವಿಧಾನಗಳು ಭಿನ್ನವಾಗುತ್ತವೆ. ಪ್ರತಿಯೊಂದು ಕೀಟವೂ ತನ್ನ ಬದುಕಿಗೆ ಮತ್ತು ಸಂತಾನವೃದ್ಧಿಗೆ ಆಹಾರ, ನೆಲೆ ಮತ್ತು ಕೆಲವು ಭೌತಸ್ಥಿತಿಗಳನ್ನು ಅವಲಂಬಿಸಿದೆ. ಈ ಪೂರೈಕೆಗಳ ಗುಣ, ಮೊತ್ತಗಳಲ್ಲೂ ಕಾಲ ಮತ್ತು ಅವಕಾಶಗಳಲ್ಲೂ ವ್ಯತ್ಯಾಸವಿದೆ. ಬೇರೆ ಪ್ರಾಣಿಗಳೂ ಈ ಆವಶ್ಯಕತೆಗಳಿಗಾಗಿ ಕೀಟಗಳೊಂದಿಗೆ ಸ್ಪರ್ಧಿಸುತ್ತವೆ. ಅಲ್ಲದೆ ಸ್ವಾಭಾವಿಕ ಶತ್ರುಗಳೂ ಕೀಟಗಳ ಜೀವನಕ್ರಮದ ಮೇಲೆ ಪ್ರಬಾವ ಬೀರುತ್ತವೆ. ಇವೆಲ್ಲ ಸಂಬಂಧಗಳನ್ನು ಕುರಿತು ಪರಿಸರಶಾಸ್ತ್ರಜ್ಞ ಸಂಶೋಧನೆ ನಡೆಸುತ್ತಾನಲ್ಲದೆ ಇವುಗಳನ್ನು ಅಳೆದು, ಪರೀಶೀಲಿಸಿ ನೋಡುತ್ತಾನೆ. ಪ್ರಕೃತಿಯಲ್ಲಿ ಕೀಟಗಳ ಸಂತಾನವೃದ್ಧಿ. ಜೀವನಕ್ರಮ ಮುಂತಾದವು ಯಾವ ನಿಯಂತ್ರಣಗಳಿಗೆ ಒಳಗಾಗಿವೆ ಎಂಬುದರ ತಿಳುವಳಿಕೆಯಿಂದ ಮಾನವ ಕೃತಕವಾಗಿ ತನ್ನ ಅನುಕೂಲಕ್ಕೆ ತಕ್ಕಂತೆ ಕೀಟಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಿದೆ.

ಅನ್ವಯ ಕೀಟಶಾಸ್ತ್ರ

ಬದಲಾಯಿಸಿ

ಮಾನವನ ಆರೋಗ್ಯ, ಕೃಷಿ ವ್ಯವಸ್ಥೆ ಸಾಕುಪ್ರ್ರಾಣಿಗಳು, ಮಾನವ-ನಿರ್ಮಿತ ವಸ್ತುಗಳು ಮುಂತಾದವುಗಳ ಮೇಲೆ ಕೀಟಗಳಿಂದ ಆಗುವ ಪರಿಣಾಮವನ್ನು ಕುರಿತು ನಡೆಸುವ ಅಭ್ಯಾಸ. ಕೀಟಗಳು ಉಪಯುಕ್ತವಾಗಿದ್ದರೆ ಅವನ್ನು ವೃದ್ಧಿಸುವ ಬಗೆ ಹೇಗೆ ಎಂಬುದರ ಅಧ್ಯಯನವೇ ಇದು. ಇದರಲ್ಲಿ ವೈದ್ಯಕೀಯ ಹಾಗೂ ಪಶುವೈದ್ಯಕೀಯ ಕೀಟಶಾಸ್ತ್ರ ಮತ್ತು ಕೃಷಿ ಹಾಗೂ ಅರಣ್ಯಕೀಟಶಾಸ್ತ್ರ ಎಂದು ಎರಡು ಮುಖ್ಯ ಬಗೆಗಳಿವೆ. ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಕೀಟಗಳ ಅಧ್ಯಯನವೇ ವೈದ್ಯಕೀಯ ಕೀಟಶಾಸ್ತ್ರ. ಮಾನವನ ಮರಣಗಳಲ್ಲಿ 50% ರಷ್ಟು ಕೀಟಾಧಾರಿತ ವ್ಯಾಧಿಗಳಿಂದುಂಟಾದುವೆಂದು ಗೊತ್ತುಹಚ್ಚಲಾಗಿದೆ. ಇವುಗಳಲ್ಲಿ ಟೈಫಾಯಿಡ್, ಮಲೇರಿಯ, ಪ್ಲೇಗ್, ಹಳದಿಜ್ವರ, ಆನೆಕಾಲುರೋಗ, ನಿದ್ರಾವಾತ ರೋಗ ಮುಖ್ಯವಾದವು.ಇವನ್ನು ಪೋಷಿಸುವ ಕೀಟಗಳಿಲ್ಲದಿದ್ದರೆ ಬಹುಶಃ ಈ ರೋಗಗಳೇ ಇರುತ್ತಿರಲಿಲ್ಲವೇನೊ. ಕೀಟಾಧಾರಿತ ರೋಗವೊಂದನ್ನು ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಕೀರ್ತಿ ಪ್ಯಾಟ್ರಿಕ್ ಮ್ಯಾನ್ಸನ್ ಎಂಬುವನಿಗೆ ಸಲ್ಲಬೇಕು. ಆನೆಕಾಲುರೋಗ ಉಂಟುಮಾಡುವ ವುಚರೇರಿಯ ಬಾಂಕ್ರಾಫ್ಟಿಯೈ ಎಂಬ ಕ್ರಿಮಿ ಕ್ಯೂಲೆಕ್ಸ್ ಸೊಳ್ಳೆಯಿಂದ ಹರಡುತ್ತದೆಂದು ಈತ 1878ರಲ್ಲಿ ತೋರಿಸಿಕೊಟ್ಟ. ಇದರಂತೆಯೇ, 1898ರಲ್ಲಿ ರಾಸ್ ಎಂಬಾತ ಅನಾಫಿಲೀಸ್ ಸೊಳ್ಳೆಯಿಂದ ಮಲೇರಿಯ ಹರಡುತ್ತದೆ ತೋರಿಸಿದ. ಈ ರೀತಿ ಹಲವಾರು ರೋಗಗಳು ಕೀಟಗಳಿಂದ ಪ್ರಸಾರವಾಗುವುದನ್ನು ಕಂಡುಹಿಡಿಯಲಾಯಿತು. ಇವೆಲ್ಲ ಸಂಶೋಧನೆಗಳಿಂದಾಗಿ ವೈದ್ಯಕೀಯ ಕೀಟಶಾಸ್ತ್ರ ಅನ್ವಯಕೀಟಶಾಸ್ತ್ರದಲ್ಲಿನ ಒಂದು ಪ್ರಮುಖವಾದ ಅಂಗವೆಂಬ ಭಾವನೆ ಮೂಡಲಾರಂಭಿಸಿತು. ವೈದ್ಯಕೀಯ ಕೀಟಶಾಸ್ತ್ರದ ಸಮಸ್ಯೆಗಳು ಹಲವಾರು. ಸಮಶೀತೋಷ್ಣವಲಯಗಳಲ್ಲಿ ಈ ಸಮಸ್ಯೆಗಳು ಅಷ್ಟಾಗಿಲ್ಲದಿದ್ದರೂ ರೋಗವನ್ನು ಹರಡುವ ಕೀಟಗಳ ಸಂತಾನಾಭಿವೃದ್ದಿ ಕ್ರಿಯೆಗೆ ಅನುಕೂಲ ಪರಿಸ್ಥಿತಿಗಳಿರುವ ಉಷ್ಣಪ್ರದೇಶಗಳಲ್ಲಂತೂ ಈ ಸಮಸ್ಯೆಗಳು ಅಪಾರ. ಇಂಥಲ್ಲಿ ಸಾಮಾನ್ಯವಾಗಿರುವ ಅತಿಯಾದ ಜನಸಂದಣಿ, ವಸತಿ ಹಾಗೂ ಸುತ್ತಣಪ್ರದೇಶದ ನೈರ್ಮಲ್ಯದ ಕೊರತೆ ಕೂಡ ರೋಗ ಹರಡುವಿಕೆಗೆ ಸಹಾಯಕ ಅಂಶಗಳಾಗಿವೆ. ಮೇಲೆ ಹೇಳಿದ ರೋಗಗಳಲ್ಲದೆ ಕೀಟದಂಶನ-ಜೇನು, ಜೇಡ ಮುಂತಾದ ಕೀಟಗಳ ಕಡಿತ, ಹಲವಾರು ಬಗೆಯ ಕಂಬಳಿ ಹುಳುಗಳಿಂದ ಉಂಟಾಗುವ ಚರ್ಮತುರಿಗಳು, ಮನುಷ್ಯ ದೇಹದ ಮೇಲೆ ಪರಾವಲಂಬಿಗಳಾಗಿ ಜೀವಿಸುವ ಹೇನು, ಕಜ್ಜಿ ಉಣ್ಣಿ, ಮುಂತಾದುವೂ ಕೂಡ ಮಾನವನಿಗೆ ಉಪದ್ರವಕಾರಿಗಳೆನಿಸಿವೆ. ಇಂಥ ಕೀಟಗಳ ಅಧ್ಯಯನ, ಅವನ್ನು ನಿಯಂತ್ರಿಸುವ ಕ್ರಮಗಳ ಆವಿಷ್ಕಾರ ಮುಂತಾದವು ವೈದ್ಯಕೀಯ ಕೀಟಶಾಸ್ತ್ರದ ಮುಖ್ಯ ಸಮಸ್ಯೆಗಳು. ಜಗತ್ತಿನಾದ್ಯಂತ ಈ ದಿಸೆಯಲ್ಲಿ ವಿಪುಲವಾಗಿ ಸಂಶೋಧನೆ ನಡೆಯುತ್ತಿದ್ದು ಅದರಿಂದ ಲಭಿಸುವ ಜ್ಞಾನವನ್ನು ಮಾನವನ ಕಲ್ಯಾಣಕ್ಕೆ ಬಳಸಬಹುದಾಗಿದೆ. ಮಾನವ ಜನಾಂಗದ ಜೀವನಮಟ್ಟವನ್ನು ಏರಿಸಿ ವೈದ್ಯಕೀಯ ಕೀಟಶಾಸ್ತ್ರದ ಜ್ಞಾನ ಮತ್ತು ತಂತ್ರವಿನ್ಯಾಸಗಳ ಪೂರ್ಣ ಅನುಕೂಲತೆ ಜನರಿಗೆ ಲಭ್ಯವಾಗುವಂತೆ ಮಾಡುವುದೇ ಕೀಟಾದಾರಿತ ರೋಗನಿವಾರಣೆಗೆ ಇರುವ ಒಂದು ಮುಖ್ಯ ಕ್ರಮ.

ಕೀಟಗಳಿಂದ ರೋಗ ಹರಡುವ ವಿಧಾನ ಯಾಂತ್ರಿಕವಾಗಿರಬಹುದು ಇಲ್ಲವೆ ಜೈವಿಕವಾಗಿರಬಹುದು. ಟೈಫಾಯಿಡ್ ಬ್ಯಾಕ್ಟೀರಿಯ ನೊಣಗಳ ಕಾಲುಗಳ ಮೂಲಕ ಮಲದಿಂದ ಆಹಾರಕ್ಕೆ ವರ್ಗಾವಣೆಯಾಗುತ್ತದೆ. ಇದು ಯಾಂತ್ರಿಕ ರೀತಿ. ಆದರೆ, ಮಲೇರಿಯ, ಆನೆಕಾಲುರೋಗ ಮುಂತಾದವುಗಳ ಹರಡುವಿಕೆಯಲ್ಲಿ ರೋಗಾಣು ತನ್ನ ಮುಖ್ಯ ಆತಿಥೇಯ ಪ್ರಾಣಿಯ ದೇಹವನ್ನು ಪ್ರವೇಶಿಸುತ್ತದೆ. ಈ ಕ್ರಮಕ್ಕೆ ಜೈವಿಕ ಸಾಗಣೆ ಎಂದು ಹೆಸರು. ಕೀಟಾಧಾರಿತರೋಗ ನಿವಾರಣೆಗೆ ಹಲವಾರು ಉಪಾಯಗಳುಂಟು, ಮುಖ್ಯವಾದದ್ದು ರೋಗ ಹರಡುವ ಕೀಟಗಳ ನಿವಾರಣೆ. ಶಕ್ತಿಯುತವಾದ ಸಂಶ್ಲೇಷಿತ ಕೀಟನಾಶಕ ಔಷಧಿಗಳನ್ನು ಬಳಸಿ ಕೀಟಗಳನ್ನು ನಿರ್ಮೂಲ ಮಾಡಿ ರೋಗವನ್ನು ಹತೋಟಿಯಲ್ಲಿಡಬಹುದು, ಆದರೆ ಇಂಥ ಔಷಧಿಗಳ ಹಲವಾರು ವರ್ಷಗಳ ಬಳಕೆಯಿಂದಾಗಿ ಕೆಲವು ಕೀಟಗಳು ಒಂದು ಬಗೆಯ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿವೆ. ಮತ್ತು ಇಂಥ ನಿರೋಧಕ ಶಕ್ತಿಯಿರುವ ಕೀಟಗಳ ತಳಿ ಹುಟ್ಟಿಕೊಂಡು ಕೀಟನಿವಾರಕ ಮದ್ದುಗಳು ಮೊದಲಿನಷ್ಟು ಪರಿಣಾಮಕಾರಿಯಾಗಿ ಕೀಟಗಳನ್ನು ನಿವಾರಿಸಲಾರದಾಗಿವೆ. ರೋಗ ನಿವಾರಣೆಯ ಎರಡನೆಯ ಕ್ರಮ ರೋಗಗಳಿಗೆ ನಿರ್ದಿಷ್ಟ ಬಗೆಯ ಔಷಧಿಗಳನ್ನು ಉಪಯೋಗಿಸುವುದು. ಉದಾಹರಣೆಗೆ ಮಲೇರಿಯ ನಿವಾರಣೆಗೆ ಕ್ವಿನೀನ್, ಪಾಲುಡ್ರಿನ್ ಮುಂತಾದವುಗಳ ಬಳಕೆ. ಇವೆಲ್ಲ ವಿಧಾನಗಳಿಗಿಂತ ಹೆಚ್ಚು ಸೂಕ್ತವಾದುದು ಮತ್ತು ಖಚಿತ ಫಲಿತಾಂಶ ದೊರಕುವ ವಿಧಾನ ಎಂದರೆ ಜೈವಿಕ ನಿಯಂತ್ರಣ.

ಕೃಷಿ ಮತ್ತು ಅರಣ್ಯಕೀಟಶಾಸ್ತ್ರ

ಬದಲಾಯಿಸಿ

ಕೀಟಗಳಿಗೂ ಮಾನವನಿಗೆ ಅಗತ್ಯವಾದ ಆಹಾರ, ಬಟ್ಟೆ ಮುಂತಾದ ವಸ್ತುಗಳ ಮೂಲಗಳಾದ ಸಸ್ಯ ಹಾಗು ಪ್ರಾಣಿಗಳಿಗೂ ಇರುವ ಸಂಬಂಧಗಳ ಅಭ್ಯಾಸವೇ ಕೃಷಿ ಸಸ್ಯಶಾಸ್ತ್ರ. ಅರಣ್ಯಗಳಿಂದ ದೊರೆಯುವ ಮರಮುಟ್ಟು ಮತ್ತು ಇತರ ಉಪೋತ್ಪನ್ನಗಳ ಉತ್ಪಾದನೆ ಮತ್ತು ಸಂರಕ್ಷಣೆ ಮತ್ತು ಕೀಟಗಳ ಸಂಬಂಧದ ಅಧ್ಯಯನ ಅರಣ್ಯಕೀಟಶಾಸ್ತ್ರ. ಇವೆರಡು ಕ್ಷೇತ್ರಗಳಿಗೂ ಇವುಗಳ ತತ್ತ್ವಗಳಲ್ಲಿ ಏಕತೆ ಇದ್ದು ಇವು ವೈದ್ಯಕೀಯ ಹಾಗು ಪಶುವೈದ್ಯಕೀಯ ಕೀಟಶಾಸ್ತ್ರಗಳಂತೆಯೇ ಪರಸ್ಪರ ಸಂಬಂಧದ ಹೊಂದಿದ್ದರೂ ಇವೆರಡರ ನಡುವೆ ಕೆಲವು ಮೂಲ ವ್ಯತ್ಯಾಸಗಳುಂಟು. ವೈದ್ಯಕೀಯ ಕೀಟಶಾಸ್ತ್ರದ ಸಮಸ್ಯೆಗಳನ್ನು ಮಾನವನ ಜೀವನಮಟ್ಟವನ್ನು ಏರಿಸುವುದರ ಮೂಲಕ ಪರಿಹರಿಸಲು ಇಲ್ಲವೆ ಕನಿಷ್ಠಗೊಳಿಸಲು ಸಾಧ್ಯವಾಗಿದ್ದರೂ ಈ ವಿಧಾನಗಳು ಕೃಷಿ ಕೀಟಶಾಸ್ತ್ರದ ಸಮಸ್ಯೆಗಳಿಗೆ ಅನ್ವಯವಾಗುವುದಿಲ್ಲ. ಆಧುನಿಕ ವಿಧಾನಗಳಿಂದ ಕೃಷಿ ಸುಧಾರಣೆ ನಡೆಸುವ ಕಾರ್ಯ ಕೀಟನಿಯಂತ್ರಣದ ಸಮಸ್ಯೆಯನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡಿದೆ ಎಂದೇ ಹೇಳಬೇಕು. ಉದಾಹರಣೆಗೆ ಅಮೆರಿಕದ ಸಂಯುಕ್ತ ಸಂಸ್ಥಾನ. ಇಂಗ್ಲೆಂಡಿನಿಂದ ವಲಸೆಗಾರರು ಉತ್ತರ ಅಮೆರಿಕಕ್ಕೆ ಹೋಗಿ ನೆಲೆಸುವ ಮುಂಚೆ ಇದ್ದ ಇಂಡಿಯನ್ ಜನಾಂಗದವರು ಪ್ರಾಚೀನ ಕೃಷಿ ವಿಧಾನಗಳನ್ನು ಅನುಸರಿಸುತ್ತಿದ್ದರಲ್ಲದೆ ಅವರು ಬೆಳೆಯುತ್ತಿದ್ದ ಬೆಳೆಗಳೂ ಮುಸುಕಿನ ಜೋಳ, ಕುಂಬಳ, ಅವರೆ, ಆಲೂಗಡ್ಡೆ, ತಂಬಾಕು, ಹತ್ತಿ ಮುಂತಾದವುಗಳನ್ನೊಳಗೊಂಡ ಪಶ್ಚಿಮಾರ್ಧಗೋಳದ ಸ್ಥಳೀಯ ಸಸ್ಯಗಳಾಗಿದ್ದುವು. ಕೃಷಿಗಾಗಿ ಬಳಕೆಯಾಗುತ್ತಿದ್ದ ಪ್ರದೇಶಗಳೂ ಪರಸ್ಪರ ದೂರವಿದ್ದು ಒಂದು ಕಡೆ ಅಂಟಿದ ಕೀಟಗಳು ಸುಲಭವಾಗಿ ಬೇರೆಡೆಗೆ ಸಾಗಲು ಆಗುತ್ತಿರಲಿಲ್ಲ. ಅಲ್ಲದೆ ಕೈಯಿಂದಲೇ ಕೀಟಗಳನ್ನು ತೆಗೆದು ನಾಶ ಮಾಡುತ್ತಿದ್ದರು. ಇದರಿಂದ ಕೀಟಗಳಿಂದ ಆಗುತ್ತಿದ್ದ ನಷ್ಟ ಬಹಳ ಕಡಿಮೆ. ಯೂರೋಪಿನ ವಲಸೆಗಾರರು ಅಮೆರಿಕಕ್ಕೆ ಬಂದಮೇಲೆ, ಅಮೆರಿಕದಲ್ಲಿ ಪಶ್ಚಿಮ ಮತ್ತು ದಕ್ಷಿಣದ ಕಡೆಗೆ ಒಳಸಾಗಿದಂತೆ ಕೃಷಿಯ ಪ್ರದೇಶವೂ ವಿಸ್ತಾರವಾಗುತ್ತ ಬಂದಿತ್ತು. ಇದರಿಂದ ಕೀಟಗಳು ಹರಡುವುದಕ್ಕೂ ಸಹಾಯಕವಾ¬ತು. ಜೊತೆಗೆ ಇವರು ತಮ್ಮ ಆಹಾರಕ್ಕಾಗಿ, ಶೋಕಿಗಾಗಿ ಕೀಟಗಳನ್ನು ಸ್ವಾಭಾವಿಕವಾಗಿ ನಿಯಂತ್ರಿಸುತ್ತಿದ್ದ ಕೀಟಭಕ್ಷಕ ಹಕ್ಕಿಗಳನ್ನು ಕೊಂದುಹಾಕತೊಡಗಿದ್ದರಿಂದಲೂ ಕೀಟಗಳ ಹಾವಳಿ ಹೆಚ್ಚಾಗತೊಡಗಿತು. ಅಲ್ಲದೆ ಯೂರೋಪಿನಿಂದ ತಮ್ಮ ಜೊತೆಗೆ ಅಲ್ಲಿನ ದಾನ್ಯ ಸಸ್ಯಗಳನ್ನೂ ತಮ್ಮ ಅರಿವಿಲ್ಲದೆ ಅಲ್ಲಿನ ಕೀಟ ಪ್ರಭೇದಗಳನ್ನೂ ತಂದರು. ಉದಾಹರಣೆಗೆ ಜಿಪ್ಸಿ ಪತಂಗ, ಅಸ್ಪರ್ಯಾಗಸ್ ಜೀರುಂಡೆ, ಹಾರನ್ ನೊಣ ಮುಂತಾದವು ವಲಸೆಗಾರರೊಂದಿಗೆ ಬಂದ ಕೀಟಗಳಲ್ಲಿ ಮುಖ್ಯವಾದವು ಹೀಗೆ ಬಂದ ಕೀಟಗಳು ಬಲುಬೇಗ ಹೊಸ ವಾತಾವರಣಕ್ಕೆ ಹೊಂದಿಕೊಂಡು ಸಂತಾನಾಭಿವೃದ್ಧಿಯಲ್ಲಿ ತೊಡಗಿ ಅಮೆರಿಕವನ್ನೆಲ್ಲ ಆವರಿಸಿದುವು. ಈ ಬಗೆಯ ಕೀಟಗಳ ವೃದ್ಧಿ ಇತ್ತೀಚಿನ ವರ್ಷಗಳಲ್ಲೂ ಕಾಣಬಂದಿದೆ. ಉದಾಹರಣೆಗೆ ಆಲ್ಫಾಲ್ಪ ಗಿಡಕ್ಕೆ ಅಂಟುವ ಏಫಿಡ್ ಕೀಟವೂಂದು 1954ರಲ್ಲಿ ಮೊಟ್ಟಮೊದಲ ಬಾರಿಗೆ ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಕಾಣಿಸಿಕೊಂಡಿತು. ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಆ ರಾಜ್ಯವನ್ನೆಲ್ಲ ಆವರಿಸಿತು. ಇದರಿಂದ ಉಂಟಾದ ಬೆಳೆಯ ನಷ್ಟ ಹಾಗೂ ಇದರ ಹತೋಟಿಗೆಂದು ಖರ್ಚಾದ ಹಣ ಸುಮಾರು 3ಳಿ ಕೋಟಿ ಡಾಲರ್‍ಗಳಷ್ಟು ಎಂದು ಅಂದಾಜು ಮಾಡಲಾಗಿದೆ. ಹೊಸದಾಗಿ ಬಂದ ಕೀಟಗಳು ತಮ್ಮ ಮೂಲ ನೆಲೆಯಲ್ಲಿರಬಹುದಾದ ಪರಾವಲಂಬಿಗಳ, ಶತ್ರುಗಳ ಕಾಟ ಹೊಸ ನೆಲೆಯಲ್ಲಿ ಇಲ್ಲದಿರುವುದೊಂದು, ಹೊಸ ನೆಲೆಯಲ್ಲಿ ಬೆಳೆಯುತ್ತಿರುವ ಸಸ್ಯಗಳು ಈ ಕೀಟಗಳಿಗೆ ಆತಿಥೇಯ ಸಸ್ಯಗಳಾಗುವುದೊಂದು ಹೀಗೆ ದ್ವಿಗುಣ ಲಾಭ ಪಡೆಯುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಕೀಟಗಳ ಸಮಸ್ಯೆ ಅಧಿಕಗೊಳ್ಳುತ್ತದೆ. ಬೆಳೆಗಳನ್ನು ನಾಶ ಮಾಡುವುದರ ಮೂಲಕ ಮಾಡುವ ನಷ್ಟವೂಂದೇ ಅಲ್ಲದೆ ಕೀಟಗಳು ಕೆಲವು ಸಸ್ಯರೋಗಗಳನ್ನು ಹರಡುವುದರಲ್ಲೂ ಸಹಕಾರಿಗಳಾಗಿವೆ.

ಕೀಟನಿವಾರಣೆ

ಬದಲಾಯಿಸಿ

ಇದರಿಂದಾಗಿ ಕೃಷಿಗೂ ಕೀಟಗಳಿಗೂ ಇರುವ ನಿಕಟ ಸಂಬಂಧವನ್ನು ಅರಿತುಕೊಂಡು ಹಾನಿಕಾರಕ ಕೀಟಗಳನ್ನು ನಿವಾರಿಸುವ ದಿಸೆಯಲ್ಲಿ ಹಲವಾರು ವಿಧಾನಗಳನ್ನು ಮಾನವ ಅನುಸರಿಸತೊಡಗಿದ್ದಾನೆ. ಇವುಗಳಲ್ಲಿ ಸಾಗುವಳಿ ವಿಧಾನಗಳು (ಕಲ್ಚರಲ್ ಮೆಥಡ್ಸ್), ಭೌತ ಹಾಗೂ ರಾಸಾಯನಿಕ ವಿಧಾನಗಳು ಮತ್ತು ಜೈವಿಕ ವಿಧಾನಗಳು ಮುಖ್ಯವಾದುವು.

ಸಾಗುವಳಿ ವಿಧಾನಗಳು

ಬದಲಾಯಿಸಿ

ಮೊದಲಿನಿಂದಲೂ ಅನುಸರಿಸುವ ಕೃಷಿ ವಿಧಾನಗಳನ್ನು ಬದಲಾಯಿಸುವುದನ್ನು ಒಳಗೊಂಡಿವೆ. ಉದಾಹರಣೆಗೆ ಪರ್ಯಾಯ ಸಾಗುವಳಿ ಕ್ರಮ, ಬೆಳೆಗಳಿಂದ ಉಳಿಯುವ ವಸ್ತುಗಳನ್ನೂ ಪರ್ಯಾಯ ಆತಿಥೇಯ ಸಸ್ಯಗಳನ್ನೂ ನಾಶಪಡಿಸುವುದು, ನಾಟಿ ಹಾಕುವ ಇಲ್ಲವೆ ಕೊಯ್ಲಿನ ಕಾಲವನ್ನು ಬದಲಿಸುವುದು, ವಿಶೇಷ ರೀತಿಯ ಸಾಗುವಳಿ ಕ್ರಮಗಳನ್ನು ಅನುಸರಿಸುವುದು, ಇತ್ಯಾದಿ. ಇದರಿಂದ ಕೀಟಗಳಿಂದಾಗುವ ನಷ್ಟವನ್ನು ಗಣನೀಯವಾಗಿ ಕಡಿಮೆಮಾಡಬಹುದಾಗಿದೆ. ಈ ವಿಧಾನದಲ್ಲಿ ನಿವಾರಣೆಗಿಂತ ಪಿಡುಗು ಅಂಟುವ ಮೊದಲೇ ಅದನ್ನು ತಡೆಯುವ ಕಡೆಗೆ ಹೆಚ್ಚು ಗಮನವೀಯಲಾಗುತ್ತದೆ. ಈ ವಿಧಾನವನ್ನನುಸರಿಸಲು ಕೀಟಪಿಡುಗಿನ ಜೀವನಕ್ರಮ, ಸ್ವಭಾವ, ಅದು ಅಂಟುವ ಸಸ್ಯಜಾತಿಯ ತಿಳಿವಳಿಕೆ ಮುಂತಾದವುಗಳು ಅಗತ್ಯವಾಗಿ ಬೇಕು. ಅಲ್ಲದೆ ಗೊಬ್ಬರಗಳ ಬಳಕೆಯಿಂದ ಸಸ್ಯಗಳು ಹೆಚ್ಚು ಶಕ್ತಿಯುತವಾಗುವಂತೆ ಮಾಡುವುದರ ಮೂಲಕ ಅವು ಕೀಟಗಳನ್ನು ನಿರೋಧಿಸುವಂತೆ ಮಾಡಬಹುದು. ಕೀಟ ನಿರೋಧಕ ಗುಣಗಳುಳ್ಳ ತಳಿಗಳನ್ನು ಅಭಿವೃದ್ಧಿ ಪಡಿಸುವುದರಿಂದಲೂ ಕೀಟಗಳನ್ನು ತಡೆಗಟ್ಟಬಹುದು.

ಭೌತ ಹಾಗೂ ರಾಸಯನಿಕ ವಿಧಾನಗಳು

ಬದಲಾಯಿಸಿ

ಕೀಟಗಳನ್ನು ಕೈಯಿಂದ ನಾಶಪಡಿಸುವುದು, ತೆರೆ, ಬಲೆ ಮುಂತಾದವನ್ನು ಉಪಯೋಗಿಸಿ ಕೀಟಗಳನ್ನು ಹತೋಟಿಯಲ್ಲಿಡುವುದು ಭೌತ ವಿಧಾನಗಳಲ್ಲಿ ಕೆಲವು. ಕೆಲವು ಬಗೆಯ ರೇಡಿಯೋ ವಿಕಿರಣಗಳನ್ನು (ಎಕ್ಸ್‍ರೇ, ಗಾಮರೇ) ಬಳಸಿ ಕೀಟಗಳಲ್ಲಿನ ಗಂಡುಗಳನ್ನು ನಿರ್ವೀರ್ಯಗೊಳಿಸಿ ಸಂತಾನವೃದ್ಧಿಯಾಗುವಂತೆ ನೋಡಿಕೊಳ್ಳುವುದೂ ಒಂದು ಮುಖ್ಯ ಭೌತ ವಿಧಾನವೆನಿಸತೊಡಗಿದೆ.

ಕೀಟನಾಶಕ, ನಿರೋಧಕ ರಾಸಾಯನಿಕ ವಸ್ತುಗಳನ್ನು ಬಳಸುವುದೇ ರಾಸಾಯನಿಕ ವಿಧಾನ. ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯವಾದ ಹಾಗೂ ಬಳಕೆಯಲ್ಲಿರುವ ವಿಧಾನ ಇದು. ಎಲ್ಲ ದೇಶಗಳಲ್ಲೂ ವಿವಿಧ ಬಗೆಯ ಕೀಟನಾಶಕಗಳು ದೊರೆಯುತ್ತವಲ್ಲದೆ ಅವುಗಳ ಬಳಕೆಯ ಕ್ರಮಗಳು, ಉಪಕರಣಗಳು ಮುಂತಾದವು ಸುಲಭವಾಗಿ ದೊರೆಯುತ್ತವೆ. ಕೀಟನಾಶಕಗಳಲ್ಲಿ ಎರಡು ಮುಖ್ಯ ಬಗೆಗಳಿವೆ. ಒಂದು ಕೀಟ ವಿಕರ್ಷಕಗಳು-ಇವು ಕೀಟಗಳನ್ನು ಸಸ್ಯದ ಬಳಿಗೆ ಅಥವಾ ಸಸ್ಯೋತ್ಪನ್ನಗಳ ಬಳಿಗೆ ಬರದಿರುವಂತೆ ತಡೆಯುತ್ತವೆ. ಇನ್ನೊಂದು ಬಗೆಯವು ಕೀಟ ಆಕರ್ಷಕಗಳು. ಇವುಗಳು ಹಾನಿಕಾರಕ ಕೀಟಗಳನ್ನು ಆಕರ್ಷಿಸಿ ಅವು ಈ ವಸ್ತುವನ್ನು ತಿನ್ನುವಂತೆ ಮಾಡಿ ಕೊಂದುಹಾಕುತ್ತವೆ. ಒಂದೊಂದು ಬಗೆಯಲ್ಲೂ ಹಲವಾರು ರೀತಿಯ ಕೀಟನಾಶಕಗಳಿವೆ. ಮೊದಮೊದಲು ಬಳಸಲಾಗುತ್ತಿದ್ದ ಕೀಟನಾಶಕಗಳಲ್ಲಿ ಬಹುಪಾಲು ವಿಷಪೂರಿತವಾದುವು. ಕೀಟ ಈ ವಸ್ತುವನ್ನು ಸೇವಿಸುವುರಿಂದಾಗಲಿ ಇಲ್ಲವೆ ಅದರ ಸಂಪರ್ಕದೊಂದಿಗೆ ಬರುವುದರಿಂದಾಗಲಿ ಸಾವಿಗೀಡಾಗುತ್ತದೆ. ಉದಾಹರಣೆಗೆ ಸೋಡಿಯಂ ಆರ್ಸಿನೈಟ್, ಲೆಡ್ ಆರ್ಸಿನೈಟ್, ಕ್ಯಾಲ್ಸಿಯಂ ಆರ್ಸಿನೇಟ್ ಸೋಡಿಯಂ ಫ್ಲೋರೈಡ್, ಪಾದರಸ ಹಾಗೂ ಸತುವಿನ ಸಂಯುಕ್ತಗಳು ಮುಂತಾದುವು ಸೇವನೆಯಿಂದ ಸಾವುಂಟುಮಾಡುವಂಥವು ನಿಕೊಟಿನ್ ಸಲ್ಫೇಟ್, ಡೆರಿಸ್, ಪೈರೆತ್ರಮ್ ಮುಂತಾದವು ಕೀಟದೊಂದಿಗೆ ಸಂಪರ್ಕಕ್ಕೆ ಬರುವುದರಿಂದ ನಾಶಗೊಳಿಸುವಂಥವು. ಸೇವನೆಯಿಂದ ಸಾವುಂಟು ಮಾಡುವ ಕೀಟನಾಶಕಗಳು ಕೀಟಗಳಿಗೊಂದೇ ಅಲ್ಲದೆ ಮಾನವ ಮತ್ತು ಕೆಲವು ಸಾಕುಪ್ರಾಣಿಗಳಿಗೂ ಮಾರಕಗಳಾದುದರಿಂದ ಇವುಗಳ ಬಳಕೆ ಹೆಚ್ಚು ಜನಪ್ರಿಯವಾಗಿಲ್ಲ.

ಉಗ್ರಾಣಗಳನ್ನು, ಮಳಿಗೆಗಳನ್ನು, ಸಸ್ಯಸಂಗೋಪನ ಕೋಣೆಗಳನ್ನು ಕೀಟ ನಾಶಕಗಳ ಹೊಗೆಯಾಡಿಸುವ ಮೂಲಕ ಕೀಟಗಳನ್ನು ನಾಶಗೊಳಿಸಬಹುದು. ಹೀಗೆ ಬಳಸಲಾಗುವ ಕೀಟನಾಶಕಗಳಲ್ಲಿ ಮುಖ್ಯವಾದುವು ಹೈಡ್ರೊಜನ್ ಸಯನೈಡ್, ಕಾರ್ಬನ್ ಡೈಸಲ್ಪೇಟ್, ಎಥಿಲೀನ್ ಆಕ್ಸೈಡ್ ಅಥವಾ ಎಥಿಲೀನ್ ಡೈಕ್ಲೋರೈಡ್, ಕಾರ್ಬನ್ ಟೆಟ್ರಕ್ಲೋರೈಡ್ ಮಿಶ್ರಣ, ಮೀಥೈಲ್ ಬ್ರೋಮೈಡ್ ಇತ್ಯಾದಿ. ಕೃತಕವಾಗಿ ಸಂಶ್ಲೇಷಿತವಾದ ಕೀಟನಾಶಕಗಳಲ್ಲಿ ಅತ್ಯಂತ ಮುಖ್ಯವಾದುದು ಎರಡನೆಯ ಮಹಾಯುದ್ಧದ ತರುವಾಯ ಪ್ರಸಿದ್ಧಿಗೆ ಬಂದ ಡಿ ಡಿ ಟಿ ಹಲವಾರು ಬಗೆಯ ಕೀಟಗಳಿಗೆ ಮಾರಕವಾಗಿದೆ ಬಲುಬೇಗ ಜನಪ್ರಿಯವಾದ ಇದು ಈಗೀಗ ತನ್ನ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಕೀಟಗಳು ಇದಕ್ಕೆ ವಿರುದ್ಧವಾಗಿ ನಿರೋಧಕ ಗುಣವನ್ನು ಬೆಳೆಸಿಕೊಂಡಿರುವುದು ಮತ್ತು ಇದು ಮನುಷ್ಯನಿಗೂ ಹಾನಿಕಾರಕವಾಗಿರುವುದು. ಆಲ್ಡ್ರಿನ್, ಕ್ಲೋರ್‍ಡೇನ್, ಬಿ ಎಚ್ ಸಿ ಮುಂತಾದುವು ಇತರ ಬಗೆಯ ಸಂಶ್ಲೇಷಿತ ಕೀಟನಾಶಕಗಳು, ಇವಕ್ಕಿಂತ ಹೆಚ್ಚು ಪ್ರಬಲವಾದುವು ಮ್ಯಾಲತಿಯಾನ್, ಪ್ಯಾರತಿಯಾನ್, ಶ್ರಾಡಾನ್, ಸಿಸ್ಟೋಕ್ಸ್ ಮುಂತಾದ ಸಾವಯವ ರಂಜಕವುಳ್ಳ ಸಂಯುಕ್ತಗಳು, ಇವುಗಳಲ್ಲಿ ಕೊನೆಯ ಎರಡು ಸಸ್ಯದೇಹದೊಳಗೆ ಪ್ರವೇಶಿಸಿ ಹಲವಾರು ವಾರಗಳ ಕಾಲ ತಮ್ಮ ಮಾರಕ ಗುಣವನ್ನು ಉಳಿಸಿಕೊಂಡಿರುತ್ತವೆ. ಇವು ಏಫಿಡ್ ಮತ್ತು ಕಾಕ್ಸಿಡ್ ಕೀಟಗಳಿಗೆ ತೀವ್ರಹಾನಿಕಾರಕಗಳೆನಿಸಿವೆ.

ಕೀಟನಾಶಕಗಳನ್ನು ಪುಡಿಯ ರೂಪದಲ್ಲಿ ಇಲ್ಲದೆ ದ್ರವರೂಪದಲ್ಲಿ ಸಸ್ಯಗಳ ಮೇಲೆ ಸಿಂಪಡಿಸಲಾಗುತ್ತದೆ. ಸಿಂಪಡಿಸಲು ಅನೇಕ ಬಗೆಯ ಸರಳ ಹಾಗೂ ಕ್ಲಿಷ್ಟವಾದ ಸಲಕರಣೆಗಳನ್ನು ಉಪಯೋಗಿಸಲಾಗುತ್ತದೆ. ಈಗೀಗ ಏರೋಪ್ಲೇನ್ ಇಲ್ಲದೆ ಹೆಲಿಕಾಪ್ಟರ್‍ಗಳನ್ನು ಬಳಸಿ ಸಿಂಪಡಿಸುವ ಕ್ರಮ ಜನಪ್ರಿಯವಾಗುತ್ತಿದೆ.

ಜೈವಿಕ ವಿಧಾನಗಳು

ಬದಲಾಯಿಸಿ

ಹಾನಿಕಾರಕ ಕೀಟಗಳ ಮೇಲೆ ಪರಾವಲಂಬಿ ಜೀವನ ನಡೆಸುವ ಜೀವಿಗಳನ್ನೋ, ಕೀಟಭಕ್ಷಕ ಪ್ರಾಣಿಗಳನ್ನೋ ಇಲ್ಲವೆ ಕೀಟಗಳಿಗೆ ರೋಗವುಂಟುಮಾಡುವ ಜೀವಿಗಳನ್ನೋ ಉಪಯೋಗಿಸಿ ಕೀಟಗಳನ್ನು ನಿವಾರಿಸಬಹುದು. ಪ್ರಕೃತಿಯಲ್ಲಿ ನಮಗೆ ಕಾಣದಂತೆ ಈ ಬಗೆಯ ಕೀಟ ನಿಯಂತ್ರಣ ನಡೆಯುತ್ತದಾದರೂ ಮಾನವನಿಂದ ಈ ಕ್ರಮದ ಅನುಕರಣೆ ಇತ್ತೀಚಿನದು. ಉದಾಹರಣೆಗೆ ಅಮೆರಿಕದಲ್ಲಿ ಕಿತ್ತಳೆ ಜಾತಿಯ ಸಸ್ಯಗಳಿಗೆ ತೀವ್ರ ಹಾನಿಯುಂಟುಮಾಡುತ್ತಿದ್ದ ಐಸೀರಿಯ ಪರ್ಚೇಸಿ ಎಂಬ ಹುರುಪೆ ಕೀಟವನ್ನು ಆಸ್ಟ್ರೇಲಿಯದಿಂದ ತರಲಾದ ರೊಡೋಲಿಯ ಎಂಬ ಜೀರುಂಡೆಯನ್ನು ಬಳಸಿ ನಾಶಪಡಿಸಲಾಯಿತು. ಇದರಂತೆಯೇ, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‍ಗಳಲ್ಲಿ ಮೂಲಂಗಿ ಜಾತಿಯ ಸಸ್ಯಗಳಿಗೆ ಹಾನಿಯುಂಟುಮಾಡುತ್ತಿದ್ದ ಪಯರಿಸ್ ರೇಪೇ ಎಂಬ ಚಿಟ್ಟೆಯನ್ನು ಯೂರೋಪಿನಿಂದ ತಂದ ಜೇನುಜಾತಿಯ ಪರಾವಲಂಬಿ ಜೀವಿಯೊಂದರಿಂದ ನಿವಾರಿಸಲಾಯಿತು. ಇದೇ ರೀತಿ, ಹಾನಿಕಾರಕ ಕೀಟಗಳಿಗೆ ರೋಗವುಂಟುಮಾಡಿ ನಾಶಪಡಿಸುವ ಹಲವಾರು ಬ್ಯಾಕ್ಟೀರಿಯ, ಬೂಷ್ಟು, ಪ್ರೋಟೋಜೋವ ಗುಂಪಿನ ಪ್ರಾಣಿಗಳು, ವೈರಸ್‍ಗಳು ಮುಂತಾದುವನ್ನು ಉಪಯೋಗಿಸಿ ಕೀಟಗಳನ್ನು ನಿವಾರಿಸುವುದುಂಟು, ಉದಾಹರಣೆಗೆ ಆಲ್ಫಾಲ್ಫ ಸಸ್ಯಕ್ಕೆ ಅಂಟುವ ಕೋಲಿಯಾಸ್ ಫೈಲೊಡೈಸ್ ಯೂರಿತೀಮ್ ಎಂಬ ಚಿಟ್ಟೆಯ ಕಂಬಳಿ ಹುಳುವನ್ನು ಒಂದು ಬಗೆಯ ವೈರಸ್ ದಾಳಿಗೆ ಈಡುಮಾಡಿ ನಾಶಪಡಿಸಲಾಗಿದೆ.

ಹೀಗೆ ಕೀಟ ನಿಯಂತ್ರಣಕ್ಕೆ ಹಲವಾರು ವಿಭಿನ್ನ ವಿಧಾನಗಳಿದ್ದರೂ ಯಾವ ಒಂದು ಬಗೆಯೂ ಸಂಪೂರ್ಣವಾಗಿ ಕೀಟಗಳನ್ನು ನಾಶಪಡಿಸಲಾರದು. ಎಲ್ಲ ವಿಧಾನಗಳನ್ನೂ ಪರಸ್ಪರ ಪೂರಕವಾಗಿ ಬಳಸಬೇಕಾಗುತ್ತದೆ. ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಕೀಟಗಳ ಪ್ರಕೃತಿ, ಸ್ವಭಾವ, ಅವುಗಳಿರುವ ಮೂಲನೆಲೆ, ಅವಕ್ಕೂ ಪರಿಸರಕ್ಕೂ ಇರುವ ಸಂಬಂಧ, ಕೀಟಗಳ ಸ್ವಾಭಾವಿಕ ಶತ್ರುಗಳು ಮೊದಲಾದುವುಗಳ ಜ್ಞಾನ ಅಗತ್ಯ. ಅಲ್ಲದೆ ಕೀಟನಾಶಕಗಳಿಂದಾಗುವ ಇತರ ಪರಿಣಾಮಗಳ ಕಡೆಗೂ ಗಮನವೀಯುವುದು ಅಗತ್ಯ. ಕೀಟನಾಶಕಗಳ ಬಳಕೆಗೆ ಬೇಕಾಗುವ ಹಣದ ವೆಚ್ಚ ನಾಶವಾಗಬಹುದಾದ ಬೆಳೆಯ ವೆಚ್ಚಕ್ಕಿಂತ ಹೆಚ್ಚಾಗಬಾರದು.

ಉಲ್ಲೇಖ

ಬದಲಾಯಿಸಿ
  1. Chapman, A.D. (2006). Numbers of Living Species in Australia and the World (೨ ed.). Australian Biological Resources Study/Genetic Resources Management.
  2. Henry George Liddell and Robert Scott (philologist) (1980). A Greek-English Lexicon (Abridged Edition). Oxford University Press. ISBN 0-19-910207-4.