ಕಿರುನಾಲಿಗೆಯು ಮೃದು ಅಂಗುಳಿನ ಮಧ್ಯದ ಹಿಂಭಾಗದ ಅಂಚಿನಿಂದ ಕೆಳಗೆಚಾಚಿರುವ ಶಂಕುವಿನಾಕಾರದ ಭಾಗ. ಇದು ಅನೇಕ ಗುಚ್ಛವಾಗಿರುವ ಗ್ರಂಥಿಗಳು ಮತ್ತು ಕೆಲವು ಸ್ನಾಯುತಂತುಗಳನ್ನು ಹೊಂದಿರುವ ಸಂಯೋಜಕ ಅಂಗಾಂಶದಿಂದ ರಚಿತವಾಗಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಬಹಳ ಪ್ರಮಾಣದಲ್ಲಿ ತೆಳು ಲಾಲಾರಸವನ್ನು ಉತ್ಪತ್ತಿಮಾಡುವ ರಕ್ತಸಾರಸ್ರಾವಕ ಗ್ರಂಥಿಗಳನ್ನು ಕೂಡ ಹೊಂದಿರುತ್ತದೆ.[]

ನುಂಗುವಾಗ, ನೇಸೊಫ಼್ಯಾರಿಂಕ್ಸ್‌ನ್ನು ಮುಚ್ಚಲು ಮತ್ತು ಆಹಾರವು ಮೂಗಿನ ಕುಳಿಯನ್ನು ಪ್ರವೇಶಿಸದಂತೆ ತಡೆಯಲು ಮೃದು ಅಂಗುಳು ಮತ್ತು ಕಿರುನಾಲಿಗೆಗಳು ಒಟ್ಟಾಗಿ ಚಲಿಸುತ್ತವೆ. ಕಿರುನಾಲಿಗೆಯು ಉತ್ಪಾದಿಸುವ ದೊಡ್ಡ ಪ್ರಮಾಣದ ತೆಳು ಲಾಲಾರಸವು ಗಂಟಲನ್ನು ಚೆನ್ನಾಗಿ ಜಾರುವಂತಾಗಿಸುವ ಕಾರ್ಯನಿರ್ವಹಿಸುತ್ತದೆ ಎಂದೂ ಪ್ರಸ್ತಾಪಿಸಲಾಗಿದೆ. ಇದು ಮಾತಿನಲ್ಲಿಯೂ ಕಾರ್ಯವನ್ನು ಹೊಂದಿದೆ. ಅನೇಕ ಭಾಷೆಗಳಲ್ಲಿ, ವ್ಯಂಜನ ಧ್ವನಿಗಳ ಶ್ರೇಣಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಕಿರುನಾಲಿಗೆಯನ್ನು ಬಳಸಲಾಗುತ್ತದೆ. ಇತರ ಸಸ್ತನಿಗಳಲ್ಲಿ ಇರದ, ಕಿರುನಾಲಿಗೆಯಲ್ಲಿನ ಗ್ರಂಥಿಗಳು ಉತ್ಪತ್ತಿಮಾಡುವ ದೊಡ್ಡ ಪ್ರಮಾಣದ ಜೊಲ್ಲಿನ ಕಾರಣ, ಕಿರುನಾಲಿಗೆಯು ಒಂದು ಅನುಬಂಧಕ ಮಾತಿನ ಅಂಗ ಎಂದು ಸೂಚಿಸಲಾಗಿದೆ.

ಕಿರುನಾಲಿಗೆಯು ನಿದ್ದೆ ಮಾಡುವಾಗ ಗೊರಕೆ ಅಥವಾ ಏದುಸಿರಿಗೆ ಕೂಡ ಕೊಡುಗೆ ನೀಡಬಹುದು; ಹೆಚ್ಚು ಉದ್ದದ ಕಿರುನಾಲಿಗೆಯನ್ನು ಹೊಂದಿರುವುದು ಗೊರಕೆಯನ್ನು ಉಂಟುಮಾಡುವ ಕಂಪನಗಳಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು. ಅಗತ್ಯಬಿದ್ದರೆ ಕಿರುನಾಲಿಗೆಯನ್ನು ಅಥವಾ ಅದರ ಭಾಗವನ್ನು ಶಸ್ತ್ರಕ್ರಿಯೆಯಿಂದ ತೆಗೆಯುವ ಮೂಲಕ ಇದಕ್ಕೆ ಚಿಕಿತ್ಸೆ ನೀಡಬಹುದು. ಆದರೆ, ಗಾಯಕಲೆ ಅಂಗಾಂಶದ ರಚನೆಯಾದರೆ ಮತ್ತು ವೇಲೊಫ಼್ಯಾರಿಂಕ್ಸ್‌ನಲ್ಲಿನ ವಾಯುಪ್ರದೇಶವು ಕಡಿಮೆಯಾದರೆ ಈ ಶಸ್ತ್ರಕ್ರಿಯೆಯು ನಿದ್ದೆಯಲ್ಲಿ ಉಸಿರುಕಟ್ಟುವಿಕೆಯನ್ನು ಕೂಡ ಉಂಟುಮಾಡಬಹುದು. ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಚಿಕಿತ್ಸೆಯಾಗಿ ಈ ಶಸ್ತ್ರಕ್ರಿಯೆಯ ಯಶಸ್ಸು ತಿಳಿದಿಲ್ಲ, ಆದರೆ ಲಕ್ಷಣಗಳನ್ನು ಕಡಿಮೆಮಾಡುವಲ್ಲಿ ಇದು ಶೇಕಡ ೪೦-೬೦ರಷ್ಟು ಪರಿಣಾಮಕಾರಿತ್ವವನ್ನು ಕೆಲವು ಸಂಶೋಧನೆಗಳು ತೋರಿಸಿವೆ.

ಕೆಲವೊಮ್ಮೆ, ಕಿರುನಾಲಿಗೆಯ ಸುತ್ತಲಿನ ಲೋಳೆಪದರವು ಊದಿಕೊಂಡು, ಕಿರುನಾಲಿಗೆಯು ಅದರ ಸಾಮಾನ್ಯ ಗಾತ್ರದ ೩-೫ ಪಟ್ಟು ಹಿಗ್ಗುವುದಕ್ಕೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಯೂವುಲೈಟಿಸ್ ಎಂದು ಕರೆಯಲಾಗುತ್ತದೆ. ಕಿರುನಾಲಿಗೆಯು ಗಂಟಲು ಅಥವಾ ನಾಲಿಗೆಯನ್ನು ಸ್ಪರ್ಶಿಸಿದಾಗ, ಯಾವುದೇ ಬಾಹ್ಯ ವಸ್ತು ಇಲ್ಲದಿದ್ದರೂ, ಉಸಿರುಗಟ್ಟುವಿಕೆಯಂತಹ ಸಂವೇದನೆಗಳನ್ನು ಉಂಟುಮಾಡಬಹುದು. ಇದು ಉಸಿರಾಟ, ಮಾತಾಡುವುದು ಮತ್ತಿ ತಿನ್ನುವುದರಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಉಲ್ಲೇಖಗಳು

ಬದಲಾಯಿಸಿ
  1. Back, GW; Nadig, S; Uppal, S; Coatesworth, AP (December 2004). "Why do we have a uvula?: literature review and a new theory". Clinical otolaryngology and allied sciences. 29 (6): 689–93. doi:10.1111/j.1365-2273.2004.00886.x. PMID 15533161.