ಉದರ

(ಕಿಬ್ಬೊಟ್ಟೆ ಇಂದ ಪುನರ್ನಿರ್ದೇಶಿತ)

ಉದರ ದೇಹದ ಮೇಲ್ಭಾಗದ ಎದೆಗೂಡಿಗೂ ಕೆಳಗಿರುವ ಕಿಳ್ಗುಳಿಗೂ (ಪೆಲ್ವಿಸ್) ನಡುವೆ ಇರುವ ಪೊಳ್ಳು (ಹೊಟ್ಟೆ, ಒಡಲು, ಅಬ್ಡೊಮೆನ್). ವಪೆಯೇ ಇದರ ಮೇಲುಗಡೆಯ ಮೇರೆ. ಉದರಕ್ಕೂ ಕಿಳ್ಗುಳಿಗೂ ನಡುವೆ ಆ ತೆರನ ಎದ್ದು ಕಾಣುವ, ಮೇರೆಯಾಗುವ ಯಾವ ಗೋಡೆ ತೆರೆಯೂ ಇಲ್ಲ. ಹಿಂದುಗಡೆ ಬೆನ್ನುಗಂಬವೂ ಅದಕ್ಕಂಟಿರುವ ಬಲವಾದ ಸ್ನಾಯುಗಳೂ ಇವೆ. ಒಡಲಿಗೆ ಸುತ್ತಲೂ ಆಧಾರವಾಗಿ ಬಲುಮಟ್ಟಿಗೆ ಸ್ನಾಯುಗಳೇ ಇರುವುದರಿಂದ ಅದರ ಆಕಾರ ಗಾತ್ರಗಳು ಹೊಟ್ಟೆಯಲ್ಲಿನ ಒಳಾಂಗಗಳ ಆಕಾರ ಗಾತ್ರಗಳಂತೆ ಉಸಿರಾಟದಂತೆ ವ್ಯತ್ಯಾಸವಾಗುತ್ತಿರುತ್ತವೆ. ಈ ಸ್ನಾಯುಗಳ ಬಿಗುವೂ ಇಲ್ಲಿ ಮುಖ್ಯ. ತೀರ ಕೆಳಗಿನ ಪಕ್ಕೆಲುಬುಗಳೂ ತುಸುಮಟ್ಟಿಗೆ ಗೋಡೆಯಾಗುವುವು. ತಿಂದದ್ದನ್ನು ಅರಗಿಸುವ ಅಂಗಗಳೂ ತೊರಳೆಯೂ ಇದರೊಳಗಿವೆ. ಇವನ್ನೆಲ್ಲ ಆವರಿಸುವಂತೆ ಹೊರಸುತ್ತು ಪೊರೆ (ಪೆರಿಟೋನಿಯಂ) ಇದೆ. ಹೊಟ್ಟೆಯಲ್ಲಿ ಒಳಾಂಗಗಳು ಇರುವೆಡೆಯನ್ನು ಗುರುತಿಸಿ ಹೇಳಲು ಅದರ ಮೇಲೆ ನಾಲ್ಕು ಗೆರೆಗಳನ್ನು ಎಳೆದು ಅದನ್ನು ಒಂಬತ್ತು ಊಹೆಯ ವಲಯಗಳನ್ನಾಗಿ ವಿಂಗಡಿಸುವುದು ವಾಡಿಕೆ. ಮೊದಲನೆಯ ಅಡ್ಡಗೆರೆಯನ್ನು ಹೊಕ್ಕುಳಿನ ಮೇಲುಗಡೆ ಅಂಗೈಯಗಲದ ಎತ್ತರದಲ್ಲಿ ಮೈ ಸುತ್ತಲೂ ಎಳೆಯಬೇಕು. ಇದು ಅನ್ನಾಗಸೆಯಡ್ಡನೆಯ ಸಮತಲ (ಟ್ರಾನ್ಸ್‌ಪೈಲೋರಿಕ್ ಪ್ಲೇನ್). ಕೆಳಗಿನ ಅಡ್ಡಗೆರೆಯನ್ನು ಪಕ್ಕಗಳಲ್ಲಿನ ಟೊಂಕೆಲುಬುಗಳ ಮೇಲಿನ ಗುಬಟಗಳ (ಟ್ಯುಬರ್ಕಲ್ಸ್‌) ಮೇಲೆ ಎಳೆಯಬೇಕು. ಇದು ಗುಬಟಡ್ಡನೆಯ ಸಮತಲ (ಟ್ರಾನ್ಸ್‌ಟ್ಯುಬಕುರ್ಯ್‌ಲಾರ್ ಪ್ಲೇನ್). ಆಗ ಉದರ ಮೂರು ವಲಯಗಳಾಗುತ್ತದೆ. ಇನ್ನೆರಡು ನೆಟ್ಟ ನೇರ ಗೆರೆಗಳನ್ನು ಕೀಲಿಕ (ಕ್ಲಾವಿಕಲ್) ಮೂಳೆಗಳ ನಡುಬಿಂದುಗಳಿಂದ ಎಳೆದಾಗ 9 ವಲಯಗಳಾಗುತ್ತವೆ.

ಉದರ
ಚರ್ಮದ ಒಳಭಾಗದಲ್ಲಿ ಕಾಣುವಂತೆ ಉದರದ ಒಳ ಅಂಗಗಳು
ಲ್ಯಾಟಿನ್ Abdomen

ಉದರದ ಶಸ್ತ್ರವೈದ್ಯ

ಬದಲಾಯಿಸಿ

ಉದರದಲ್ಲಿರುವ ಅಂಗಗಳ ಇಲ್ಲವೇ ಅದಕ್ಕೆ ಸಂಬಂಧಿಸಿದ ಅಂಗಗಳ ರೋಗಗಳಿಗಾಗಿ ಶಸ್ತ್ರಕ್ರಿಯೆಯಿಂದ (ಆಪರೇಷನ್) ಮಾಡುವ ಚಿಕಿತ್ಸೆ (ಸರ್ಜರಿ ಆಫ್ ಆ್ಯಬ್ಡೊಮೆನ್). ಈ ಭಾಗದ ಅಂಗಗಳ ರೋಗಗಳ ವಿಚಾರಗಳನ್ನು ಆಯಾ ಅಂಗಗಳ ಮೇಲಿನ (ಪಿತ್ತಕೋಶ, ಪಿತ್ತದ ನಾಳಿ, ಈಲಿಯ ರೋಗಗಳು ಇತ್ಯಾದಿ) ಲೇಖನಗಳಿಂದ ತಿಳಿಯಬೇಕು. ಜಠರಗರುಳಿನ ರೋಗಗಳು ಎಂಬ ಲೇಖನದಲ್ಲಿ ಹೆಚ್ಚಿನ ಪಾಲು ಬಂದಿದೆ. ಹಿಂದಿನ ಕಾಲದಲ್ಲಿ ಹೊಟ್ಟೆ ಕೊಯ್ಯಿಸಿಕೊಂಡವರಲ್ಲಿ ಬಹಳ ಮಂದಿ ನೋವಿಗೆ ಬಲಿಯಾಗುತ್ತಿದ್ದರು. ಉಳಿದವರು ಆಮೇಲಿನ ಸೋಂಕುಗಳಿಂದ ಪ್ರಾಣಬಿಡುತ್ತಿದ್ದರು. ನೋವನ್ನು ಕಳೆಯಲು ಅರಿವಳಿಕೆಗಳಾದ (ಅನೀಸ್ತೆಟಿಕ್ಸ್‌) ಈಥರೂ (1846) ಆಮೇಲೆ ಕ್ಲೋರೋಫಾರ್ಮೂ (1847) ಬಂದ ಮೇಲೆ ಒಂದು ಮುಖ್ಯ ತೊಡಕು ಕಳೆಯಿತು. ಅದರೂ ಲಿಸ್ಟರನ ಕಾರ್ಬಾಲಿಕಾಮ್ಲದ ತೆರನ ನಂಜುರೋಧಕ (ಆಂಟಿಸೆಪ್ಪಿಕ್) ಮದ್ದುಗಳು ಜಾರಿಗೆ ಬರುವ ತನಕ (1867) ಶಸ್ತ್ರಕ್ರಿಯಾನಂತರದ ಸೋಂಕುಗಳನ್ನು ತಡೆಯಲೂ ಕಳೆಯಲೂ ಸಾಧ್ಯವೇ ಇರಲಿಲ್ಲ. ಮುಂದಿನ ದಶಕಗಳಲ್ಲಿ ನಂಜಿಗೆ ದಾರಿಕೊಡದ, ನಂಜಿರದ (ಎಸೆಪ್ಟಿಕ್) ಶಸ್ತ್ರವೈದ್ಯವೇ ಜಾರಿಗೆ ಬಂದುದರಿಂದ ಪರಿಸ್ಥಿತಿ ಸುಧಾರಿಸಿತು. ನೋವು ಕಳೆವ ಹಾಗೂ ಅರಿವಳಿಸುವ ಮದ್ದುಗಳು, ರೋಗಿಗೆ ಅವನ್ನು ಕೊಡುವ ವಿಧಾನಗಳು ಚೆನ್ನಾದಂತೆಲ್ಲ ಶಸ್ತ್ರಕ್ರಿಯೆಯನ್ನು ರೋಗಿಗೆ ಅಪಾಯವಾಗದಂತೆ ಅವಸರವಿಲ್ಲದೆ ನಿಧಾನವಾಗಿ ಚೆನ್ನಾಗಿ ಮಾಡಲು ಅನುವಾಯಿತು. ಶಸ್ತ್ರಕ್ರಿಯೆಯನ್ನು ತಡೆದುಕೊಳ್ಳುವಂತೆ ರೋಗಿಯನ್ನು ಅದಕ್ಕೊಡ್ಡುವ ಮುಂಚೆಯೂ ಆಮೇಲೂ ಸರಿಯಾಗಿ ಪಾಲಿಸುವಂತಾದ್ದರಿಂದ, ಹೆಚ್ಚಿನ ಶಸ್ತ್ರವೈದ್ಯಕ್ಕೆ ದಾರಿಯಾಯಿತು. ರೋಗ ಚಿಕಿತ್ಸೆಗಳಲ್ಲಿ ಸಲ್ಫಮದ್ದುಗಳ, ಜೀವಿರೋಧಕಗಳ (ಆಂಟಿಬಯೋಟಿಕ್ಸ್‌) ಅಗಾಧ ಗುಣಗಳು ಗೊತ್ತಾದಾಗಿನಿಂದ ಶಸ್ತ್ರಕ್ರಿಯಾನಂತರದ ಸೋಂಕುಗಳು ಇಲ್ಲವಾದುವು. ಹಾಗೇ ಉದರದ ಶಸ್ತ್ರವೈದ್ಯದ ಅಪಾಯವೂ ತೀರ ತಗ್ಗಿತು. ಉದರದಲ್ಲಿ ಕೈಗೊಳ್ಳುವ ಶಸ್ತ್ರಕ್ರಿಯೆಗಳು ಆರಿಸಿದವೋ ತುರ್ತಿನವೋ ಆಗಿರಬಹುದು. ಮೊದಲೇ ನಿಧಾನವಾಗಿ ಯೋಚಿಸಿ ಬೇಕೆಂದೇ ಗೊತ್ತುಪಡಿಸಿದ ವೇಳೆಯಲ್ಲಿ ಮಾಡುವುದು ಆರಿಸಿದ್ದು. ಆದರೆ ಯಾವ ಮುನ್ಸೂಚನೆ, ಮುನ್ನೆಚ್ಚರಿಕೆಗಳೂ ಸಿಗದೆ ತತ್ಕ್ಷಣ ಅಥವಾ ಮುಂದಿನ ಗಳಿಗೆಯಲ್ಲೇ ಕೈಗೊಳ್ಳಬೇಕಾದ್ದು ತುರ್ತಿನದು. ಎಷ್ಟೋವೇಳೆ ರೋಗದ ಗುರುತು ಸರಿಯಾಗಿ ಪತ್ತೆಯಾಗಿದ್ದರೆ ಯಾವ ಶಸ್ತ್ರಕ್ರಿಯೆ ಆಗಬೇಕೆಂದು ಹೊಟ್ಟೆ ಕೊಯ್ಯುವ ಮೊದಲೇ ನಿರ್ಧರವಾಗಿರುತ್ತದೆ. ಕೆಲವೇಳೆ ಉದರಕೊಯ್ಸೀಳಿಗೆಯಲ್ಲಿ (ಲ್ಯಾಪರಾಟೊಮಿ) ಉದರವನ್ನು ಕೊಯ್ದು ಒಳಗೆ ಇಣಿಕಿಹಾಕುವ ತನಕ ಯಾವ ಅಂಗಕ್ಕೆ ಏನು ಮಾಡಬೇಕೆಂದು ಗೊತ್ತಿರದು; ಕೇವಲ ಊಹೆ ಚಿಂತೆಗಳು ಇರುತ್ತವೆ. ಉದರವಂತೂ ಎಷ್ಟೋವೇಳೆ ಶಸ್ತ್ರವೈದ್ಯನಿಗೂ ಸೋಜಿಗದ ಕಣವೇ.

ಜಠರ, ಕರುಳುಗಳು

ಬದಲಾಯಿಸಿ

ಚಿಕ್ಕ ಕರುಳು, ಹೆಗ್ಗರುಳು (ಕೋಲನ್), ಜಠರಗಳ (ಸ್ಟಮಕ್) ಮೇಲೆ ಶಸ್ತ್ರವೈದ್ಯ ನಮ್ಮಲ್ಲಿ ಸಾಮಾನ್ಯ.ಸಾಮಾನ್ಯವಾಗಿ ಜಠರದ ಹುಣ್ಣು (ಗ್ಯಾಸ್ಟ್ರಿಕ್ ಅಲ್ಸರ್) ಅಥವಾ ಏಡಿಗಂತಿಗಾಗಿ (ಕ್ಯಾನ್ಸರ್) ಜಠರಶಸ್ತ್ರವೈದ್ಯ ನಡೆವುದು. ತಿಂದ ಉಣಿಸು ಜಠರದಿಂದ ಮುಂದಕ್ಕೆ ಸಾಗದಿರುವುದೇ ಇದರ ಶಸ್ತ್ರಕ್ರಿಯೆಗೆ ಮುಖ್ಯ ಸೂಚನೆ. ಇಡೀ (ಟೋಟಲ್) ಜಠರವನ್ನೋ ಅರೆಬರೆಯಾಗಿ (ಪಾರ್ಷಿಯಲ್) ಒಂದು ಭಾಗವನ್ನೋ ಕೊಯ್ದು ತೆಗೆದುಹಾಕುವುದೇ ಜಠರಕೊಯ್ತೆಗೆತ (ಗ್ಯಾಸ್ಟ್ರೆಕ್ಟೊಮಿ). ಸಣ್ಣ ಕರುಳಿನ ಮೊದಲ ಭಾಗವಾದ ದುರಾರ್ಗರುಳಲ್ಲಿ (ಡುಯೊಡಿನಂ) ಎದ್ದಿರುವ ಹುಣ್ಣಿಗೆ ತಿಂದ ಆಹಾರ ತಾಕದಂತಿರಿಸಲೋ ಜಠರದ ಕೆಳಮೂತಿಯ ಆಗಸೆಯಂತಿ ರುವ ಅನ್ನಾಗಸೆಯ (ಪೈಲೋರಸ್) ತೂತಡಕಿಗಾಗೋ (ಸ್ಟ್ರಿಕ್ಚರ್) ಕೊಯ್ದು ತೂತಿಟ್ಟು ನೇರ ದಾರಿ ಆಗುವಂತೆ ಕಂಡಿ ಇರಿವುದಕ್ಕೆ ಜಠರಬರಿಗರುಳಕಂಡಿ ಇರಿತ (ಗ್ಯಾಸ್ಟ್ರೊಫೆóಜುನಾ ಸ್ಟೊಮಿ) ಎಂದು ಹೆಸರಿದೆ. ಅನ್ನನಾಳದ ತೂತಡಕು (ಈಸೊಪೇಜಿಯಲ್ ಸ್ಟ್ರಿಕ್ಚರ್) ಆಗಿ, ಜಠರಕ್ಕೆ ಆಹಾರ ಇನಿತೂ ಇಳಿಯದಂತೆ ಆಗಿರುವಾಗ ಜಠರಕಂಡಿಇರಿತ (ಗ್ಯಾಸ್ಟ್ರಾಸ್ಟೊಮಿ) ಮಾಡಬೇಕಾಗುವುದು. ಆಗ ಹೊಟ್ಟೆಮುಗುಳಿನಲ್ಲಿ ಹೊರಕ್ಕೆ ಕಂಡಿ ಇರುವ ಹಾಗೆ ಜಠರದಲ್ಲಿ ಮಾಡಿದ ತೂತಿನ ಮೂಲಕ ಆಹಾರವನ್ನು ಹೊತ್ತೊತ್ತಿಗೆ ಹೊರಗಿಂದ ನೇರವಾಗಿ ಜಠರದೊಳಕ್ಕೆ ಹಾಕಲು ಅನುಕೂಲಿಸುತ್ತದೆ. ಸಣ್ಣ ಕರುಳಿನ ಭಾಗಗಳಾದ ದುರಾರ್ಗರುಳು, ಬರಿಗರುಳು (ಜೆಜುನಂ), ಮುರಿಗರುಳು ಗಳಲ್ಲಿ (ಐಲಿಯಂ) ಆತಂಕ (ಅಬ್ಸ್ಟ್ರಕ್ಷನ್), ಕರುಳ್ನಡುಪೊರೆಯ ಕೂಡುಕರಣಿಕೆ (ಮಸೆಂಟರಿಕ್ ತ್ರಾಂಬೋಸಿಸ್), ಇಲ್ಲವೇ ವಿಷಮ (ಮ್ಯಾಲಿಗ್ನೆಂಟ್) ಗಂತಿಗಳು ಅವುಗಳೊಳಕ್ಕೂ ನುಗ್ಗಿಬಿಟ್ಟು, ಎಲ್ಲಾದರೂ ಕರುಳು ಕೊಳೆತು ಅಳಿಕೊಳಪು (ಗ್ಯಾಂಗ್ರೀನ್) ಆಗಿದ್ದಲ್ಲಿ ಕೂಡಲೇ ಶಸ್ತ್ರಕ್ರಿಯೆ ಮಾಡಬೇಕಾಗುವುದು. ಕೆಟ್ಟಿರುವ ಕರುಳಿನ ತುಂಡನ್ನು ಕೊಯ್ದು ತೆಗೆದುಹಾಕುವುದೇ ಕಡಿತೆಗೆತ (ರಿಸೆಕ್ಷನ್). ಹೆಗ್ಗರುಳಿನ ರೋಗಗಳಲ್ಲಿ ಸಾಮಾನ್ಯವಾಗಿ ಕರುಳವಾಳುರಿತ (ಅಪೆಂಡಿಸೈಟಿಸ್), ಏಡಿಗಂತಿಗಳಿಗಾಗಿ ಶಸ್ತ್ರಕ್ರಿಯೆ ಆಗುತ್ತದೆ. ಹೆಗ್ಗರುಳಿನ ಯಾವ ಭಾಗದಲ್ಲಾದರೂ ಏಡಿಗಂತಿ ಏಳಬಹುದು. ಆಗ ಅದರೊಂದಿಗೇ ಹೆಗ್ಗರುಳಿನ ಬಹುಪಾಲನ್ನು ಕೊಯ್ತೆಗೆದ ಸಾಧ್ಯವೆನಿಸಿದರೆ ಉಳಿದ ಕೊನೆಗಳನ್ನು ಹತ್ತಿರಕ್ಕೆ ತಂದು ಜೋಡಿಸಬಹುದು. ಇದು ಸಾಧ್ಯವಾಗದಿದ್ದರೆ ಹೊಟ್ಟೆಯ ಮುಂಗೋಡೆಯ ಮೂಲಕ ಮಲ ಹೊರಬೀಳಲು ಕೃತಕ ಕಂಡಿಯನ್ನು ಮಾಡಬೇಕು. ನೆಟ್ಟಗರುಳಲ್ಲೂ (ರೆಕ್ಟಂ), ಇಬ್ಬಂಕದಲ್ಲೂ (ಸಿಗ್ಮಾಯ್ಡ) ಏಡಿಗಂತಿ ಏಳುವುದು ಬಲು ಸಾಮಾನ್ಯ. ಹೆಗ್ಗರುಳೇ ಅಲ್ಲದೆ ಸುತ್ತಮುತ್ತಣ ಅಂಗಗಳಿಗೂ ಏಡಿಗಂತಿ ಹರಡಿಕೊಳ್ಳುವ ಮೊದಲೇ ಅದು ಇರುವುದು ಎಳೆಯದರಲ್ಲೇ ಗೊತ್ತಾದರೆ ವಾಸಿಮಾಡಲು ಕೊನೆಯಪಕ್ಷ ಐದು ವರ್ಷಗಳಾದರೂ ಬದುಕಿಸಿರಲು ಕೆಟ್ಟಿರುವ ಹೆಗ್ಗರುಳಿನ ಭಾಗವನ್ನು ತೆಗೆದು ಬಿಡಬಹುದು. ಹೊಟ್ಟೆಯ ಮೆತ್ತಗಿರುವ ಸ್ನಾಯು ಗೋಡೆಯಲ್ಲಿ ಎಲ್ಲಾದರೂ ತೆಳುವಾಗಿ ಬಲಗುಂದಿ ಕಂಡಿ ಇಟ್ಟಂತಾದರೆ, ಅದರ ಮೂಲಕ ಒಳಗಿರುವ ಕರುಳಿನ ಸುರುಳಿಗಳು ಹೊರಕ್ಕೆ ಉಬ್ಬಿಕೊಂಡು ಹೊರಗಣ ಬೂರು (ಎಕ್ಸ್‌ಟರ್ನಲ್ ಹರ್ನಿಯ) ಆಗಬಹುದು. ಹೊಟ್ಟೆಯ ಪೊಳ್ಳಿನೊಳಗೇ ಹೊರಬಿಗಿಪೊರೆಯ (ಪೆರಿಟೋನಿಯಲ್) ಪಟ್ಟೆಗಳ ತಡೆಯಿಂದ ಒಳಗಣ ಬೂರು (ಇಂಟರ್ನಲ್ ಹರ್ನಿಯ) ಆಗಲೂಬಹುದು. ಇದಕ್ಕಾಗಿ ಆಗುತ್ತಿರುವ ತೊಡಕಿಗೆ ತಕ್ಕಂತೆ ಬೇಗನೆ ಶಸ್ತ್ರಕ್ರಿಯೆಯಲ್ಲಿ ಕೇವಲ ಪಟ್ಟೆಗಳನ್ನೊ ಹೊಟ್ಟೆಗೋಡೆ ಕಂಡಿಯನ್ನೊ ಕತ್ತರಿಸಿ ಬಿಡಿಸಬೇಕು, ಇಲ್ಲವೇ ಕರಳು ಕೊಳೆತಿದರೆ ಅಷ್ಟನ್ನೂ ಕತ್ತರಿಸಿ ಹಾಕಬೇಕಾಗುತ್ತದೆ. (ನೋಡಿ-ಬೂರು)

ಈಲಿ, ಪಿತ್ತಕೋಶ, ಮಾಂಸಲಿಗಳು

ಬದಲಾಯಿಸಿ

ಗಾಯ, ಪೆಟ್ಟುಗಳಿಂದ ಬಿರಿದು ಸೀಳಿದ್ದಕ್ಕೂ ಎಕ್ಕಲಕಾಯ್ಜೀವಿ ಜಿಟ್ಟಿ (ಏಕಿನೊಕಾಕಸ್ ಸಿಸ್ಟ್‌) ಇಲ್ಲವೇ ಏಡಿಗಂತಿ ಬೆಳೆದಿರುವುದನ್ನು ತೆಗೆದುಹಾಕಲೂ 19ನೆಯ ಶತಮಾನದ ಕೊನೆಯ ದಶಕಗಳಲ್ಲಿ, ಕೆಟ್ಟಿರುವ ಈಲಿಯ ಭಾಗಗಳನ್ನು ಆಗಾಗ್ಗೆ ಕತ್ತರಿಸಿ ತೆಗೆದುಹಾಕುತ್ತಿದ್ದರು. ಮಾಂಸದ ಹಾಗೆ ತುಂಬಿ ಮೆತುವಾಗಿ ರಕ್ತನಾಳಗಳಿಂದ ತುಂಬಿರುವ ಅಂಗವಾದ್ದರಿಂದ ಎಲ್ಲಾದರೂ ಈಲಿ ಹರಿದರೆ ರಕ್ತಸುರಿತ ನಿಲ್ಲಿಸುವುದು ಬಲು ತಾಪತ್ರಯ ಆಗುತ್ತಿತ್ತು. ವಿದ್ಯುತ್ತು ಸುಡಿಗೆಯಿಂದಲೂ (ಎಲೆಕ್ಟ್ರೊಕಾಟರಿ) ಪರಿಣಾಮಕರವಾಗಿ ಹೊಲಿಗೆಗಳನ್ನು ಹಾಕುವುದರಿಂದಲೂ ರಕ್ತಸುರಿತವನ್ನು ತಡೆಗಟ್ಟು ವಂತಾದ್ದರಿಂದ ಈಲಿಯ ಮೇಲಿನ ಶಸ್ತ್ರಕ್ರಿಯೆಗಳು ಈಗ ಸಾಮಾನ್ಯ ಆಗುತ್ತಿವೆ. ಪಿತ್ತವನ್ನು ಈಲಿಯಿಂದ ಹೊರ ಸಾಗಿಸುವ ಸಾಗುನಾಳಗಳಿಗೆ (ಡಕ್ಟ್‌ಸ್) ಎಲ್ಲಾದರೂ ಅಡ್ಡಿಯಾಗಿದ್ದರೆ ಅಡ್ಡಿಯ ಹಿಂದಿನ ಭಾಗದಿಂದ ಕರುಳಿನ ಸುರುಳಿಗೆ ಕೃತಕ ದಾರಿ ಆಗುವಂತೆ ಹೊಲೆಯಲು ಈಲಿಯಲ್ಲಿ ಒಂದಿಷ್ಟು ಭಾಗವನ್ನು ಬಿಡಿಸಿತೆಗೆವುದು ಈ ವಿಧಾನಗಳಿಂದ ಈಗ ಕೈಗೂಡುತ್ತಿದೆ. ಪಿತ್ತಕೋಶ, ಅದರ ಸಾಗುನಾಳಗಳ ಮೇಲೂ ಶಸ್ತ್ರವೈದ್ಯ ನಡೆಯುತ್ತಿದೆ. ಸೊಂಕಿನಿಂದ ತೀರ ಕೆಟ್ಟಿರುವ ಪಿತ್ತಕೋಶವನ್ನು ತೆಗೆದುಹಾಕಿದರೂ ಜೀವಕ್ಕೆ ತೊಂದರೆಯಿಲ್ಲ. ಪಿತ್ತ ಹೊರಸಾಗುವ ಸಾಗುನಾಳಗಳಿಗೆ, ಹೇಗಾದರೂ ಸರಿಯೆ ಆತಂಕವಾದರೆ ಜಠರ, ಕರುಳುಗ ಳೊಂದಿಗೆ ಪಿತ್ತಕೋಶದ ಕಂಡಿ ಇರುವಂತೆ ಮಾಡಬೇಕಾಗುತ್ತದೆ. ಪಿತ್ತಗಲ್ಲುಗಳನ್ನು (ಗಾಲ್ಸ್ಟೋನ್ಸ್‌) ತೆಗೆದುಹಾಕಿದ ಮೇಲೆ ಕೆಲವೇಳೆ ಕೆಲವು ದಿನಗಳವರೆಗೂ ಪಿತ್ತರಸ ಮೈ ಹೊರಕ್ಕೆ ಸುರಿವಂತೆ ಮಾಡಲು ಪಿತ್ತಕೋಶಕ್ಕೂ ಹೊಟ್ಟೆಯ ಹೊರಭಾಗಕ್ಕೂ ಕೃತಕವಾಗಿ ಕಂಡಿ ಇರಿಸಬೇಕಾಗುವುದು. ಈ ಕ್ರಿಯೆಯ ಹೆಸರು ಪಿತ್ತಕೋಶಕಂಡಿಇರಿತ (ಕೋಲಿಸಿಸ್ಟಾ ಸ್ಟೊಮಿ). ಇದರಲ್ಲಿ ರಬ್ಬರ್ ಚೂರನ್ನು ತೂರಿಸಿದ್ದರೆ ಕಂಡಿ ಮುಚ್ಚಿಕೊಳ್ಳದು. ಪಿತ್ತಕೋಶವನ್ನು ಕೊಯ್ದು ತೆಗೆದುಹಾಕುವುದೇ ಪಿತ್ತಕೋಶಕೊಯ್ತೆಗೆತ (ಕೋಲಿಸಿಸ್ಟಕ್ಟೊಮಿ). ಪಿತ್ತಗಲ್ಲುಗಳನ್ನು ತೆಗೆದು ಹಾಕಿದ ಮೇಲೆ ಸೊಂಕು ಬೇರೂರಿದ್ದರೆ ಮತ್ತೆ ಕಲ್ಲು ಸೇರದಿರಲೆಂದು ಹೀಗೆ ಕೊಯ್ತೆಗೆಯಬೇಕಾಗುತ್ತದೆ. ಪಿತ್ತಕೋಶ, ಜಠರಗಳ ನಡುವೆ ಕೃತಕವಾಗಿ ದಾರಿ ಮಾಡುವುದು ಪಿತ್ತಕೋಶ ಜಠರಕಂಡಿಇರಿತ (ಕೋಲಿಸಿಸ್ಟೊ ಎಂಟರಾಸ್ಟೊಮಿ); ಇದೇ ತೆರನಾಗಿ ಪಿತ್ತಕೋಶ, ಕರುಳುಗಳ ನಡುವೆ ಮಾಡುವುದೇ ಪಿತ್ತಕೋಶ ಕರುಳುಕಂಡಿಇರಿತ (ಕೋಲಿಸಿಸ್ಟೊ ಎಂಟರಾಸ್ಟೊಮಿ). ವಿಷಮಗಂತಿ ವಿಪರೀತ ಬೆಳೆದುಬಿಟ್ಟು ಹೊರಗಿಂದ ಒತ್ತುತ್ತಿರುವಾಗ ಸಾಮಾನ್ಯ ಪಿತ್ತ ಸಾಗುನಾಳಕ್ಕೆ (ಕಾಮನ್ ಬೈಲ್ ಡಕ್ಟ್‌) ತೆಗೆಯಲಾಗದ ಅಡಚಣೆ ಆಗಿರುವ ವೇಳೆಗಳಲ್ಲಿ ಈ ಶಸ್ತ್ರಕ್ರಿಯೆಗಳು ಆಗುತ್ತವೆ. ಮಾಂಸಲಿ ದುರಾರ್ಗರುಳ ಕೊಯ್ತೆಗೆತದಲ್ಲಿ (ಪ್ಯಾಂಕ್ರಿಯಾಟೊಡುಯೇಡಿನೆಕ್ಟೊಮಿ) ಮಾಂಸಲಿಯನ್ನು (ಪ್ಯಾಂಕ್ರಿಯಾಸ್) ದುರಾರ್ಗರುಳಿನ ಒಂದು ಭಾಗದೊಂದಿಗೆ ತೆಗೆದುಹಾಕುವಾಗ ಪಿತ್ತಸಾಗುನಾಳವನ್ನೇ ಬರಿಗರುಳಿನ ಒಂದು ಸುರುಳಿಯೊಂದಿಗೆ ಹೊಲಿದು ಕಂಡಿ ಇರಿಸುವುದುಂಟು. ಹಿಂದಿನ ಕಾಲದಲ್ಲಿ ಮಾಂಸಲಿಯ ಮೇಲೆ ಕೆಲವು ತೀರ ಸರಳ ಶಸ್ತ್ರಕ್ರಿಯೆಗಳನ್ನು ನಡೆಸಿದ್ದರು. ಆದರೆ ಅದರಲ್ಲಿನ ಕಲ್ಲುಗಳನ್ನು ತೆಗೆಯಲು ಒಂದು ಪಾಲನ್ನೋ ಇಡೀ ಗ್ರಂಥಿಯನ್ನೋ ತೆಗೆಯಲು ಕೈಹಾಕಿರುವುದು ಕೇವಲ ಇತ್ತೀಚೆಗೆ. ಈಲಿಯ ಅರಿಶಿನಾರಿಗೆಯಲ್ಲಿ (ಹೆಪ್ಯಾಟಿಕ್ ಸಿರೊಸಿಸ್), ಈಲಿ ನಾರಿನಂತೆ ಗಡುಸೂ ಬಿರುಸೂ ಆದಾಗ, ಅದರ ಮೂಲಕ ರಕ್ತಹರಿವಿಗೆ ಆತಂಕವಾಗಿ ಹೊಟ್ಟೆ ತುಂಬ ನೀರು ಸೇರಿಕೊಂಡು ಉಬ್ಬರಿಸಿಕೊಂಡಿದ್ದಾಗ, ಅನ್ನನಾಳದ ಕೆಳಭಾಗದ ಸಿರಗಳು (ವೆನ್ಸ್‌ಸ್) ಸಿರಕ್ಕೂ ಕೆಳಸಿರ ಕೊಳ್ಳಕ್ಕೂ (ಇನ್ಫೀರಿಯರ್ ವೀನಕೇವ) ನಡುವೆ ಮಾಡುವ ಕೃತಕ ದಾರಿಕಂಡಿಗೆ ಎಕ್ನಬೊರಿಗೆ (ಎಕ್ಸ್‌ ಫಿಸ್ಬ್ಯುಲ) ಎಂದು ಹೆಸರು. ಉಳಿದ ಕಾರಣಗಳು: ಅಕಸ್ಮಾತ್ತಾಗಿ ದನ ಹಾಯುವುದರಿಂದ ಕೊಂಬಿನಿಂದ ಹೊಟ್ಟೆ ಬಗಿದು ಸೀಳಿದಂತಾಗಿ ಒಳಾಂಗಗಳಿಗೂ ಪೆಟ್ಟಾದಾಗ, ಉದರದ ಶಸ್ತ್ರ ವೈದ್ಯ ನಡೆಯಬೇಕಾಗು ತ್ತದೆ. ಹೊಟ್ಟೆಯ ಕಿಳ್ಗುಳಿಯಲ್ಲಿ (ಪೆಲ್ವಿಸ್) ಇರುವ ಹೆಣ್ಣಿನ ಜನನಾಂಗಗಳ ಮೇಲಿನ ಶಸ್ತ್ರಕ್ರಿಯೆಗಾಗಿಯೂ ಎಂದಿನಂತೆ ಹೆರಿಗೆಯಾಗಲು ಅಸಾಧ್ಯವಾಗಿರುವಾಗ ಕೂಸನ್ನು ಗರ್ಭದಿಂದ ನೇರವಾಗಿಹೊರತೆಗೆಯಲೂ ಹೊಟ್ಟೆಯ ಶಸ್ತ್ರಕ್ರಿಯೆ ಆಗುವುದು. ಮಕ್ಕಳಾಗದಂತೆ ಮಾಡಲು, ಗರ್ಭನಾಳಗಳನ್ನು ಕತ್ತರಿಸಿ ತುದಿಗಳಿಗೆ ಗಂಟು ಬಿಗಿಸುವ ಗರ್ಭನಾಶಕೊಯ್ತೆಗೆತ (ಟ್ಯೂಬೆಕ್ಟೊಮಿ) ಇನ್ನೊಂದು ಸಣ್ಣ ಉದಾಹರಣೆ. ರೋಗಿಗೆ ಇದ್ದಕ್ಕಿದ್ದಹಾಗೆ ಹೊಟ್ಟೆಶೂಲೆ, ವಾಂತಿಗಳೊಂದಿಗೆ ವಿಪರೀತ ಸುಸ್ತಾಗಿರುವಾಗ, ರೋಗಕಾರಣವನ್ನು ಖಚಿತಪಡಿಸಿಕೊಳ್ಳಲು ಸಮಯ ಇಲ್ಲದಾಗಲೂ ಒಳಗೆ ಏನಾಗಿದೆಯೆಂದು ನೋಡಿ ತಿಳಿದೇ ಚಿಕಿತ್ಸೆ ಮಾಡಲೂ ತುರ್ತಾಗಿ ಹೊಟ್ಟೆ ಕೊಯ್ದು ನೋಡುವುದುಂಟು. ಸಾಕಷ್ಟು ರಕ್ತಹರಿದರೆ ಕಾಲು ಕೊಳೆತು ಒಣಗಿದಂತಾದಾಗ ಧಮನಿಗಳ ಸುತ್ತ ಹೆಣೆದುಕೊಂಡು ಅವು ಸೆಡೆತುಕೊಳ್ಳುವಂತೆ ಚೋದಿಸುತ್ತಿರುವ ಅನುವೇದನಾ ನರಗಂಟುಗಳನ್ನು (ಸಿಂಪತೆಟಿಕ್ ಗ್ಯಾಂಗ್ಲಿಯ) ಕಿತ್ತೊಗೆಯಲು ಅನುವೇದನಾಕೊಯ್ತೆಗೆತ (ಸಿಂಪೆಕ್ಟೊಮಿ) ಆಗುವುದು. ಜಠರದಲ್ಲಿ ಹುಣ್ಣು ಎದ್ದಿರುವಾಗ, ಆಮ್ಲ ಸುರಿತಕ್ಕೆ ಕಾರಣವಾಗಿರುವ ಅಲೆಕ ನರದ (ವೇಗಸ್ ನರ್ವ್) ಟಿಸಿಲುಗಳನ್ನು ತೆಗೆದರೆ (ಅಲೆಕನರ ಕೊಯ್ಸೀಳಿಗೆ_ ವೇಗಾಟೊಮಿ), ಆಮ್ಲರಸದ ಸುರಿತ ತಗ್ಗಿ ರೋಗಿಯ ನರಳಿಕೆ ಶಮನವಾಗುವುದು. ಅದರಲ್ಲೆ ಜಿಟ್ಟಿಗಾಗೂ (ಸಿಸ್ಟ್‌) ಹಲವಾರು ರಕ್ತಕಣಗಳ ರೋಗಗಳಲ್ಲೂ ತೊರಳೆಯನ್ನು (ಸ್ಪ್ಲೀನ್, ಪ್ಲೀಹ,) ತೆಗೆವುದೇ ತೊರಳೆ ಕೊಯ್ತೆಗೆತ (ಸ್ಪ್ಲೆನೆಕ್ಟೊಮಿ). ಮಹಾಧಮನಿಯಲ್ಲಿ (ಅಯೋರ್ಟ), ಅಗಲುಬ್ಬೊ (ಅನ್ಯೂರಿಸಂ), ಧಮನಿಪೆಡಸಣೆಯ (ಆರ್ಟಿರಿಯೊಸ್ಕ್ಲೀರೋಟಿಕ್) ಅಡಚಣೆಯೋ ಆಗಿದ್ದರೆ ಆ ಭಾಗವನ್ನೇ ತೆಗೆದು ಹಾಕಿ ಒಂಗುವ ನಾಟಿಗಳನ್ನು (ಪ್ಲಾಸ್ಟಿಕ್ ಗ್ರಾಫ್ಟ್‌ಸ್) ಹಾಕುವುದಕ್ಕೂ ಉದರದ ಶಸ್ತ್ರಕ್ರಿಯೆ ಕೈಗೊಳ್ಳುವುದುಂಟು. ಮೂತ್ರಪಿಂಡಗಳು, ಅಡ್ರಿನಲ್ ಗ್ರಂಥಿಗಳು, ಹೊಟ್ಟೆಯ ಪೊಳ್ಳಿನೊಳಗೆ ಇರದೆ ಅದರ ಹಿಂದಣ ಗೋಡೆಯಲ್ಲಿ ಇರುವುದರಿಂದ ಅವುಗಳ ಶಸ್ತ್ರಕ್ರಿಯೆಗಾಗಿ ಕೆಲವೇಳೆ ಹೊಟ್ಟೆಯನ್ನು ಕೊಯ್ದು ಒಳಹೊಗಬೇಕಾಗುತ್ತದೆ. ಕಂಕೋಶದಲ್ಲಿ (ಬ್ಲಾಡರ್, ಮೂತ್ರಕೋಶ) ಕಲ್ಲು ಸೇರಿದ್ದರು ಅದರ ತಳದಲ್ಲಿರುವ ಮುನ್ಲಿಲುಗಳ (ಪ್ರಾಸ್ಟೇಟ್) ದೊಡ್ಡದಾಗಿ ಬೆಳೆದಾಗ ತೆಗೆಯಲೂ ಹೊಟ್ಟೆಯ ಕೆಳಭಾಗವನ್ನು ಕೊಯ್ದು ಶಸ್ತ್ರಕ್ರಿಯೆ ಮಾಡುವುದಾದರೂ ಹೊಟ್ಟೆಯ ಪೊಳ್ಳಿನೊಳಕ್ಕೆ ಹೋಗದ್ದರಿಂದ ಇದು ನಿಜವಾಗಿ ಉದರದ ಶಸ್ತ್ರ ಕ್ರಿಯೆ ಅಲ್ಲ.

ಉದರಶೂಲೆ

ಬದಲಾಯಿಸಿ

ಮೇಲಿಂದ ಮೇಲೆ ಉದರದಲ್ಲಿ ಎಲ್ಲಾದರೂ ಒಂದೆಡೆ ಒಂದು ಒಳಾಂಗದ ಸಂಬಂಧವಾಗಿ ಕಾಣಿಸಿಕೊಳ್ಳುವ ಜೋರಾಗಿರುವ ನೋವು (ಕಾಲಿಕ್). ಯಾವುದಾದರೂ ಪೊಳ್ಳಾದ ಒಳಾಂಗದ ನಾಳದ ಕಂಡಿಯ ಅಗಲ ತುಸು ಹೆಚ್ಚು ಕಡಿಮೆಯಾಗಿ ಆತಂಕವಾದಾಗ ಅದರ ಸ್ನಾಯು ಗೋಡೆಗಳು ತಾತ್ಕಾಲಿಕವಾಗಿಯೇ ಬಹಳ ಹೊತ್ತೊ ಬಲವಂತದಿಂದ ಕುಗ್ಗುವುದರಿಂದ ಉಂಟಾಗುವ ನೋವಿಗೆ ಬಲು ಮಟ್ಟಿಗೆ ಈ ಹೆಸರನ್ನು ಕೊಡುವುದುಂಟು. ಜಠರ, ಕರುಳು, ಕಂಕೋಶ (ಬ್ಲ್ಯಾಡರ್), ಪಿತ್ತಕೋಶಗಳಲ್ಲಿ ಹೀಗಾಗುವುದು ಸಾಮಾನ್ಯ. ಆಮಶಂಕೆ, ಮತ್ತಿತರ ಕಾರಣಗಳಿಂದಾಗುವ ಕರುಳುರಿತದಲ್ಲಿ (ಎಂಟರೈಟಿಸ್) ಹೊಟ್ಟೆ ನುಲಿತವಾಗಿ ತೋರುವುದು. ಸೀಸದ ವಿಷವೇರಿಕೆಯಲ್ಲೂ ಸಾಮಾನ್ಯ. ಬುಡ್ಡಿಹಾಲು ಕುಡಿವ ಕೂಸುಗಳಲ್ಲಿ ಅಜೀರ್ಣವಾದಾಗ ಈ ಶೂಲೆ ಕಾಣಿಸಿಕೊಂಡು ತುಂಬ ರಂಪವಾಗು ತ್ತದೆ. ಕಾಲುಗಳನ್ನು ಮುದುರಿಕೊಂಡು ಕೂಸು ತಳಮಳಗುಟ್ಟುತ್ತ ರಚ್ಚೆಹಿಡಿದು ಒಂದೇ ಸಮನೆ ಕಿಟಾರನೆ ಕಿರಚುವುದು. ಉದರಶೂಲೆಗೆ ಕಾರಣವಾದ ರೋಗಗಳಿಗೆ ತಕ್ಕ ಚಿಕಿತ್ಸೆಯಾದರೆ ಶೂಲೆ ಹೋಗುತ್ತದೆ (ನೋಡಿ-ಪಿತ್ತಕೋಶ).

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉದರ&oldid=715531" ಇಂದ ಪಡೆಯಲ್ಪಟ್ಟಿದೆ