ಕಿಗ್ಗ ಋಷ್ಯಶೃಂಗೇಶ್ವರ ದೇವಳ
ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನವು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ 9 ಕಿ. ಮೀ ದೂರದಲ್ಲಿದೆ. ವಿಶಿಷ್ಟ ಇತಿಹಾಸವಿರುವ ಈ ದೇವಳದ ಜೊತೆ, ಮಳೆ ತರಿಸುವ ಶಕ್ತಿಯಿದ್ದ ಋಷ್ಯಶೃಂಗ ಮಹರ್ಷಿಗಳ ಹಿನ್ನೆಲೆಯೂ ಬೆರೆತುಕೊಂಡಿದೆ. ಕಿಗ್ಗದಲ್ಲಿ ನೆಲೆಯಾಗಿರುವ ಈ ಋಷ್ಯಶೃಂಗೇಶ್ವರನನ್ನು ಅರಸಿ ಹಿಮಾಲಯದಿಂದ ಬರುವ ಸನ್ಯಾಸಿಗಳು ಇಲ್ಲಿ ತಿಂಗಳುಗಟ್ಟಲೆ ಮೌನವೃತ, ಉಪವಾಸಗಳನ್ನು ಆಚರಿಸಿ ಕಠಿಣ ಧ್ಯಾನದಲ್ಲಿ ತಲ್ಲೀನರಾಗುವ ದೃಶ್ಯಗಳು ಇಲ್ಲಿ ಕಂಡುಬರುತ್ತವೆ. ಇದರ ಜೊತೆಗೆ ಸಕಾಲಕ್ಕೆ ಮಳೆ-ಬೆಳೆ ಆಗುವಂತೆ ಪ್ರಾರ್ಥಿಸುವ ಸಲುವಾಗಿ ಹಲವು ಭಕ್ತರು ಇಲ್ಲಿಗೆ ಬಂದು ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಾರೆ. ಈ ದೇವಳದಲ್ಲಿ ಪೂಜೆ ಮಾಡಿದ ನಂತರ ತುಂಗಾಭದ್ರಾ ನದಿ ತುಂಬಿ ಹರಿಯುತ್ತದೆ ಎಂಬ ಪ್ರತೀತಿಯೂ ಇದೆ.
ಇತಿಹಾಸ
ಬದಲಾಯಿಸಿಪುರಾಣದಲ್ಲಿ ಮೋಡಗಳನ್ನು ಆಕರ್ಷಿಸಿ ಮಳೆ ತರಿಸುವ ವಿಶಿಷ್ಟ ಶಕ್ತಿಯಿದ್ದ ಕಾರಣಕ್ಕೆ ಹೆಸರಾಗಿದ್ದ ಮಳೆ ಮಹರ್ಷಿ ಋಷ್ಯಶೃಂಗರ ಹಿನ್ನೆಲೆ ಕಿಗ್ಗದ ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನಕ್ಕಿದೆ. ಕಶ್ಯಪ ಬ್ರಹ್ಮನ ಮೊಮ್ಮಗನಾದ ಋಷ್ಯಶೃಂಗರು ಸರ್ವವಿದ್ಯಾ ಪಾರಂಗತರು. ದೇವವಾಣಿಯಂತೆ ಅವರು ಶೃಂಗೇರಿ ಸಮೀಪದ ಬೆಟ್ಟದ ಬುಡದಲ್ಲಿ ಚಂದ್ರಮೌಳೇಶ್ವರನನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಶಿವ ಪ್ರತ್ಯಕ್ಷನಾದಾಗ ಪರಮಾತ್ಮನಲ್ಲಿ ಲೀನನಾಗುವ ಉದ್ದೇಶದಿಂದ ‘ನಾನು ನಿನ್ನಲ್ಲಿ ಐಕ್ಯನಾಗಬೇಕು’ ಎಂದು ವರ ಕೇಳುವ ಭರದಲ್ಲಿ ತಪ್ಪಾಗಿ ‘ನೀನು ನನ್ನಲ್ಲಿ ಐಕ್ಯನಾಗಬೇಕು’ ಎಂದು ಕೇಳಿದ ಪರಿಣಾಮವಾಗಿ ಚಂದ್ರಮೌಳೇಶ್ವರ ಈ ಮಹಾಮಹಿಮನಲ್ಲಿ ಐಕ್ಯನಾಗುತ್ತಾನೆ. ವರ ಕೋರಿಕೆಯಲ್ಲಿ ಉಂಟಾದ ಮಾತಿನ ವ್ಯತ್ಯಾಸದಿಂದಾಗಿ ಈ ಪ್ರದೇಶ ‘ಕಗ್ಗ’ ಎಂಬ ಹೆಸರಿನಿಂದ ಗುರುತಿಸಿಕೊಂಡು ಕಾಲಾನುಕ್ರಮದಲ್ಲಿ ‘ಕಿಗ್ಗ’ವಾಗಿ ಬದಲಾಯಿತು ಅನ್ನುವುದು ಪ್ರತೀತಿ. ಈ ಹಿನ್ನೆಲೆಯಂತೆ ಮಳೆ-ಬೆಳೆ ಹಾಗೂ ಸಂತಾನ ಪ್ರಾಪ್ತಿಗಾಗಿ ಚಂದ್ರಮೌಳೇಶ್ವರ ಐಕ್ಯನಾಗಿರುವ ಋಷ್ಯಶೃಂಗೇಶ್ವರನನ್ನು ಆರಾಧಿಸುವ ಪರಿಪಾಠ ಬೆಳೆದುಬಂದಿದೆ.
ವಿಶ್ಲೇಷಿಸಿ ಹೇಳುವುದಾದರೆ
ಬದಲಾಯಿಸಿಕಶ್ಯಪ ಬ್ರಹ್ಮನ ಸುಕುಮಾರರಾದ ವಿಭಾಂಡಕ ಮಹರ್ಷಿಗಳು ತಂದೆಯ ಅಣತಿಯಂತೆ ಪರಮೇಶ್ವರನಿಂದ ವರದಾನ ಪಡೆಯುವ ಸಲುವಾಗಿ ಘನಘೋರ ತಪಸ್ಸನ್ನಾಚರಿಸಲು ಪ್ರಾರಂಭಿಸುತ್ತಾರೆ. ಸಹಸ್ರಾರು ವರ್ಷಗಳ ನಂತರ ಅವರ ಶಿರಸ್ಸಿನಿಂದ ತಪೋ ಜ್ವಾಲೆಯು ಪ್ರಖರವಾಗಿ ಬೆಳಗುತ್ತ ಲೋಕವನ್ನಾವರಿಸಲು ಶುರುವಾಗುತ್ತದೆ. ಇದರಿಂದ ಹೆದರಿದ ದೇವತೆಗಳು ಅವರ ತಪಸ್ಸನ್ನು ಭಂಗಗೊಳಿಸಲು ನಿರ್ಧರಿಸುತ್ತಾರೆ. ದೇವೇಂದ್ರನ ಆಜ್ಞೆಯಂತೆ ಅಪ್ಸರೆಯರು ವಿಭಂಡಕರು ತಪಸ್ಸು ಮಾಡುತ್ತಿರುವ ಪರ್ವತದ ಬಳಿ ಬರುತ್ತಾರಾದರೂ ಅದನ್ನು ಏರಲು ಅವರಿಗೆ ಸಾಧ್ಯವಾಗದೆ ಅಲ್ಲೆ ಹರಿಯುತ್ತಿದ ತುಂಗಾ ನದಿಯಲ್ಲಿ ಸಮಯ ಕಳೆಯ ತೊಡಗುತ್ತಾರೆ. ಒಂದೊಮ್ಮೆ ವಿಭಂಡಕರು ನಿತ್ಯದಂತೆ ಬೆಳಿಗ್ಗೆ ತುಂಗೆಯಲಿ ಸ್ನಾನ ಮಾಡಲು ಬಂದಾಗ ಸಮಯ ನೋಡಿ ಆ ಅಪ್ಸರೆಯರು ತಮ್ಮ ದೇಹ ಸೌಂದರ್ಯದ ಸಿರಿಯನ್ನು ಅನಾವರಣಗೊಳಿಸುತ್ತ ಜಲಕ್ರೀಡೆಯಾಡತೊಡಗುತ್ತಾರೆ. ಒಂದು ಕ್ಷಣ ಇದರಿಂದ ವಿಭಂಡಕರು ವಿಚಲಿತರಾಗಿಬಿಡುತ್ತಾರೆ ಹಾಗೂ ಅದರ ಪರಿಣಮಾವಾಗಿ ಅವರಿಂದ ಸ್ಖಲನಗೊಂಡ ರೇತಸ್ಸು (ವೀರ್ಯ) ನದಿಯಲ್ಲಿ ಸೇರಿ ಬಿಡುತ್ತದೆ. ಅದೆ ಸಮಯದಲ್ಲಿ ಕೊಂಬಿರುವ ಜಿಂಕೆಯೊಂದು ದಾಹ ಉಂಟಾಗಿ ನದಿಯ ನೀರು ಸೇವಿಸುತ್ತಿರುವಾಗ ಅದರ ಬಾಯಿಯ ಮೂಲಕ ಋಷಿಗಳ ರೇತಸ್ಸು ಅದರ ದೇಹದೊಳಗೆ ಹೊಕ್ಕಿ ಗರ್ಭ ಸೇರುತ್ತದೆ. ನವಮಾಸದ ನಂತರ ಪ್ರಾತಃ ಕಾಲದ ಶುಭ ಮುಹೂರ್ತವೊಂದರಲ್ಲಿ ಆ ಜಿಂಕೆಯು ಪೊದೆಯ ನಡುವೆ ಮಾನವ ಸಂತಾನವೊಂದಕ್ಕೆ ಜನ್ಮ ನೀಡಿ ಪ್ರಾಣಿ ಸಹಜ ವರ್ತನೆಯಂತೆ ಅಲ್ಲಿಂದ ತೆರಳಿ ಬಿಡುತ್ತದೆ. ಇತ್ತ ವಿಭಂಡಕರು ಎಂದಿನಂತೆ ಸ್ನಾನ ಮಾಡಲು ಬಂದಾಗ ಮಗುವೊಂದರ ಅಳು ಕೇಳಿ ಅದರ ಬಳಿ ತೆರಳುತ್ತಾರೆ. ದಿವ್ಯ ಶಕ್ತಿಯುಳ್ಳವರಾಗಿದ್ದ ಅವರಿಗೆ ತಾವೆ ಅದರ ಜನ್ಮದಾತನೆಂದು ತಿಳಿದು ಬಿಡುತ್ತದೆ. ಜಿಂಕೆಯ ಹೊಟ್ಟೆಯಿಂದ ಜನ್ಮವಾಗಿರುವುದರಿಂದ ಆ ಮಗುವಿಗೆ ಹಣೆಯ ಮೇಲೆ ಶೃಂಗವಿರುತ್ತದೆ. ಹಾಗಾಗಿ ಋಷಿ ಮೂಲ ಹಾಗೂ ಶೃಂಗವಿರುವ ಕಾರಣ ವಿಭಂಡಕರು ಆ ಮಗುವಿಗೆ ಋಷ್ಯಶೃಂಗ ಎಂಬ ಹೆಸರನ್ನಿಟ್ಟು ಬೆಳೆಸುತ್ತಾರೆ. ಹೀಗೆ ಬೆಳೆದ ಋಷ್ಯಶೃಂಗನು ಮುಂದೆ ತಾನಿದ್ದ ಸ್ಥಳ ತೊರೆದು ಅತ್ಯಂತ ಮಹತ್ವದ ಹಾಗೂ ಪವಿತ್ರ ಜೀವವಾಗಿ ಬಾಳಿ ಕೊನೆಗೆ ಸಕಲ ವೈಭೋಗಗಳನ್ನು ತೊರೆದು ತಂದೆಯ ಹಾಗೆ ಶಿವನಲ್ಲಿ ಐಕ್ಯನಾಗಬೇಕೆಂಬ ಉತ್ಕಟ ಇಚ್ಛೆಯಿಂದ ಮರಳಿ ತಂದೆಯು ವಾಸಿಸುತ್ತಿದ್ದ ಪರ್ವತಕ್ಕೆ ಬಂದು ಕಠಿಣವಾದ ತಪಸ್ಸನ್ನಾಚರಿಸುತ್ತಾನೆ. ಅವನ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ವರ ಕೇಳಲು ಹೇಳಿದಾಗ, ಋಷ್ಯಶೃಂಗನು ಆನಂದದಿಂದ ಗದ್ಗದಿತನಾಗಿ ನಿನ್ನಲ್ಲಿ ನಾನು ಐಕ್ಯನಾಗಬೇಕು ಎಂದು ಹೇಳುವುದರ ಬದಲು ನನ್ನಲ್ಲಿ ನೀನು ಐಕ್ಯನಾಗು ಎಂದು ಹೇಳಿ ಬಿಡುತ್ತಾನೆ. ಅದನ್ನು ಅನುಗ್ರಹಿಸಿದ ಶಿವನು ತಕ್ಷಣ ಋಷ್ಯಶೃಂಗನಲ್ಲಿ ಐಕ್ಯನಾಗಿ ಋಷ್ಯಶೃಂಗೇಶ್ವರನಾಗಿ ಅಲ್ಲಿಯೆ ನೆಲೆಸಿ ಬಿಡುತ್ತಾನೆ. [೧]
ವಿಶೇಷ ಪೂಜೆಗಳು
ಬದಲಾಯಿಸಿಕಾರ್ತಿಕ ಮಾಸದ ಸೋಮವಾರ ಶ್ರೀ ಋಷ್ಯಶೃಂಗೇಶ್ವರನಿಗೆ ರುದ್ರಹೋಮ ನಡೆಯುತ್ತದೆ. ಇಲ್ಲಿ ಹೆಚ್ಚಾಗಿ ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕಾಗಿ ರುದ್ರಹೋಮ, ಪರ್ಜನ್ಯ ಜಪ ಇತ್ಯಾದಿ ಸೇವೆಗಳು ನಡೆಯುತ್ತವೆ. ವರ್ಷದಲ್ಲೊಂದು ಬಾರಿ ಫಾಲ್ಗುಣ ಮಾಸದಲ್ಲಿ ಮಹಾರುದ್ರ ಹೋಮ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಉತ್ಸವಗಳು ನಡೆಯುತ್ತವೆ. ಚೈತ್ರ ಶುದ್ಧ ಆದ್ರಾ ನಕ್ಷತ್ರದಂದು ಮಹಾರಥೋತ್ಸವ ನಡೆಯುತ್ತದೆ.
ಸಮೀಪದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿಋಷ್ಯಶೃಂಗೇಶ್ವರ ದೇವಸ್ಥಾನದಿಂದ 5 ಕಿ.ಮಿ ಚಲಿಸಿದರೆ ಹಾಲ್ನೊರೆಯ ಸಿರಿಯಾದ ‘ಸಿರಿಮನೆ ಜಲಪಾತ’ ನೋಡಲು ಸಿಗುತ್ತದೆ. ಹತ್ತಿರದಲ್ಲೇ ನರಸಿಂಹ ಪರ್ವತ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಕಳಸ, ಹೊರನಾಡು, ಆಗುಂಬೆಯಂತಹ ಹಲವಾರು ಪ್ರೇಕ್ಷಣೀಯ ಸ್ಥಳಗಳು ನೋಡಲು ಸಿಗುತ್ತವೆ.
ನರಸಿಂಹ ಪರ್ವತ
ಬದಲಾಯಿಸಿಕಿಗ್ಗ ಪೇಟೆಯಲ್ಲಿನ ಋಷ್ಯಶೃಂಗೇಶ್ವರನ ಸನ್ನಿಧಿಯಿಂದ 7 ಕಿ.ಮೀ. ದೂರದಲ್ಲಿದೆ ನರಸಿಂಹ ಪರ್ವತ. ಇದನ್ನು ಚಾರಣಿಗರ ಸ್ವರ್ಗ ಎಂದೇ ಕರೆಯುತ್ತಾರೆ. ಇಲ್ಲಿಗೆ ಹೋಗಲು ಕಾಡಿನ ದಾರಿಯಲ್ಲಿ ಹತ್ತಾರು ಅಡೆತಡೆಯನ್ನು ಎದುರಿಸುತ್ತ ಚಾರಣ ನಡೆಸಬೇಕಾಗುತ್ತದೆ. ನರಸಿಂಹ ದೇವರ ಪಾದುಕೆ ಇಲ್ಲಿನ ಬಂಡೆಯ ಮೇಲೆ ನಿಸರ್ಗ ದತ್ತವಾಗಿ ಮೂಡಿರುವ ಕಾರಣ ಪರ್ವತಕ್ಕೆ ಈ ಹೆಸರು ಶಾಶ್ವತವಾಯಿತು ಎನ್ನುವ ಪ್ರತೀತಿಯೂ ಇದೆ. ಪರ್ವತದ ತುದಿಯಲ್ಲಿ ಋಷಿಮುನಿಗಳು ವಾಸಿಸುತ್ತಿದ್ದರು ಅನ್ನುವುದಕ್ಕೆ ಪುರಾವೆಯೂ ಸಿಗುತ್ತದೆ. ಅರೆಯುವ ಕಲ್ಲುಗಳು, ದೇವರ ಪುಟ್ಟ ವಿಗ್ರಹಗಳು ಇಲ್ಲಿವೆ.[೨]
ಉಲ್ಲೇಖಗಳು
ಬದಲಾಯಿಸಿ- ↑ https://kannada.nativeplanet.com/travel-guide/amazing-rishya-shringa-temple-kigga-001250.html
- ↑ "ಆರ್ಕೈವ್ ನಕಲು". Archived from the original on 2019-03-06. Retrieved 2019-03-05.