ಒಂದು ರಾಷ್ಟ್ರದ ಕಾರ್ಮಿಕ ವರ್ಗದ ಹಿತರಕ್ಷಣೆ ಮತ್ತು ಕಲ್ಯಾಣ ಸಾಧನೆಯ ಉದ್ದೇಶದಿಂದ ಸ್ಥಾಪಿತವಾದ ಸರ್ಕಾರಿ ಇಲಾಖೆ (ಡಿಪಾರ್ಟ್‍ಮೆಂಟ್ ಆಫ್ ಲೇಬರ್). ಕಾರ್ಮಿಕರ ಕಲ್ಯಾಣಭಿವೃದ್ದಿ. ಅವರ ಕೆಲಸದ ಸ್ಥಿತಿಗಳ ಸುಧಾರಣೆ, ದುಡಿಯಬಲ್ಲವರಿಗೆಲ್ಲ ಲಾಭದಾಯಕವಾದ ಉದ್ಯೋಗಾವಕಾಶಗಳ ಕಲ್ಪನೆ-ಮುಂತಾದ ಉದ್ದೇಶಗಳಿಗಾಗಿ 1913ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕಾರ್ಮಿಕ ಇಲಾಖೆಯನ್ನು ಸ್ಥಾಪಿಸಲಾಯಿತು. ಈ ಇಲಾಖೆ ಅನೇಕ ವಿಭಾಗಗಳ ಸಹಾಯದಿಂದ ತನ್ನ ಕೆಲಸವನ್ನು ನಿರ್ವಹಿಸುತ್ತದೆ. ಕಾರ್ಮಿಕ ಶಿಕ್ಷಣ, ಕಾರ್ಮಿಕ-ಮಾಲೀಕ ಸೌಹಾರ್ದ, ಕಾರ್ಮಿಕರಿಗೆ ಉತ್ತಮ ಉದ್ಯೋಗಾವಕಾಶಗಳ ಕಲ್ಪನೆ, ಅವರ ಸ್ಥಿತಿ ಸುಧಾರಣೆ, ಸ್ತ್ರೀಕಾರ್ಮಿಕರ ಯೋಗಕ್ಷೇಮ ಮುಂತಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತವಾಗಿದೆ. ಇದರಲ್ಲಿ ಕಾರ್ಮಿಕ ಅಂಕಿಅಂಶ ವಿಭಾಗ (ಬ್ಯೂರೊ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್) ಒಂದು. ಇದು ದೇಶದಲ್ಲಿಯ ಉದ್ಯೋಗಾವಕಾಶಗಳು ಮಾನವಶಕ್ತಿ, ಉತ್ಪಾದನಾ ಸಾಮರ್ಥ್ಯ, ಕೂಲಿ, ಗಳಿಕೆ, ಕೈಗಾರಿಕಾಸಂಬಂಧ, ಜನಜೀವನ ಮಟ್ಟ ಮುಂತಾದ ವಿಷಯಗಳನ್ನು ವಿಶೇಷ ಹೊತ್ತಿಗೆಗಳಲ್ಲೂ ಮಂತ್ಲಿ ಲೇಬಲ್ ರಿವ್ಯೂ ಎಂಬ ತನ್ನ ಮಾಸಪತ್ರಿಕೆಯಲ್ಲೂ ಪ್ರಕಟಿಸುತ್ತದೆ. ಬ್ರಿಟನಿನಲ್ಲೂ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿರುವಂತೆ ಕಾರ್ಮಿಕ ಇಲಾಖೆಯುಂಟು. ನಿರುದ್ಯೋಗ, ವ್ಯಾಧಿ, ವಸತಿ, ಮುಪ್ಪು, ದುಡಿಮೆಯ ಕಾಲದಲ್ಲಿ ಅಪಘಾತ ಸಂಭವ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿ ಆ ಮೂಲಕ ಕಾರ್ಮಿಕರ ಕಲ್ಯಾಣವನ್ನು ಸಾಧಿಸಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಎರಡನೆಯ ಮಹಾಯುದ್ದಾನಂತರ ಕಾಲದಲ್ಲಿ ವಿಲಿಯಂ ಬೆವರಿಜನ ಸಾಮಾಜಿಕ ವಿಮಾಯೋಜನೆಯನ್ನು ಸರ್ಕಾರ ಸ್ವೀಕರಿಸಿ ಜಾರಿಗೆ ತಂದದ್ದು ಈ ಇಲಾಖೆಯ ಮಹತ್ತ್ವದ ಸಾಧನೆಗಳಲ್ಲೊಂದು. ಪ್ರತಿಯೊಬ್ಬ ಪ್ರಜೆಯನ್ನೂ ತೊಟ್ಟಿಲಿನಿಂದ ಗೋರಿಯವರೆಗೆ ರಕ್ಷಿಸುವುದು ಸರ್ಕಾರದ ಹೊಣೆ. ಬ್ರಿಟನಿನಲ್ಲಿ ಕಾರ್ಮಿಕ ಇಲಾಖೆ ಅಲ್ಲಿಯ ಸಮಾಜಸೇವಾ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ.[]

ಪ್ರತ್ಯೇಕ ಕಾರ್ಮಿಕ ಇಲಾಖೆಗಳು

ಬದಲಾಯಿಸಿ

ಭಾರತದಲ್ಲೂ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಮಟ್ಟದಲ್ಲಿ ಪ್ರತ್ಯೇಕ ಕಾರ್ಮಿಕ ಇಲಾಖೆಗಳು ಕೆಲಸ ಮಾಡುತ್ತಿವೆ. ಈ ಬಗೆಯ ವ್ಯವಸ್ಥೆಗೆ ಭಾರತದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕ ಕಾನೂನುಗಳನ್ನು ರೂಪಿಸುವ ಮತ್ತು ಅವುಗಳ ಆಡಳಿತವನ್ನು ನಿರ್ವಹಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ನಡುವೆ ಹಂಚಿಕೆಯಾಗಿದೆ. ಕಾರ್ಮಿಕರಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಲವು ಕೇಂದ್ರದ ಹೊಣೆಯಾದರೆ ಇನ್ನು ಕೆಲವು ರಾಜ್ಯ ಸರ್ಕಾರಗಳ ಹೊಣೆ; ಉಳಿದವು ರಾಜ್ಯಕೇಂದ್ರ ಸರ್ಕಾರಗಳೆರಡಕ್ಕೂ ಅನ್ವಯಿಸುವ ಸಹಗಾಮಿ ಪಟ್ಟಿಯಲ್ಲಿವೆ.[]

ಕೇಂದ್ರ ಕಾರ್ಮಿಕ ಇಲಾಖೆ

ಬದಲಾಯಿಸಿ

ಕೇಂದ್ರ ಕಾರ್ಮಿಕ ಇಲಾಖೆಯ ವಿಭಾಗಗಳು ಇವು : 1 ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, 2 ಉದ್ಯೋಗ ಮತ್ತು ತರಬೇತಿ ಮಹಾನಿರ್ದೇಶನಾಲಯ, 3 ಕಾರ್ಮಿಕ ವಿಭಾಗದ (ಬ್ಯೂರೊ) ನಿರ್ದೇಶಕರ ಕಚೇರಿ, 4 ಮುಖ್ಯ ಕಾರ್ಮಿಕ ಕಮಿಷನರ್ ಕಚೇರಿ. 5 ಕಲ್ಲಿದ್ದಲು ಗಣಿ ಕಮಿಷನರ್ ಕಚೇರಿ, 6 ಕಲ್ಲಿದ್ದಲು ಗಣಿ ಕಾರ್ಮಿಕ ಭವಿಷ್ಯನಿಧಿ ಕಮಿಷನರ್ ಕಚೇರಿ, 7 ಅಭ್ರಕ ಗಣಿ ಕಾರ್ಮಿಕ ಕಲ್ಯಾಣಭಿವೃದ್ಧಿ ಕಮಿಷನರ್ ಕಚೇರಿ, 8 ಗಣಿಗಳ ಮುಖ್ಯ ನಿರೀಕ್ಷಕರ     (ಇನ್‍ಸ್ಪೆಕ್ಟರ್) ಕಚೇರಿ, 9 ಕಾರ್ಖಾನೆಗಳ ಮುಖ್ಯ ಸಲಹೆಗಾರರ ಕಚೇರಿ, 10 ವಲಸಿಗ ಕಾರ್ಮಿಕ ನಿಯಂತ್ರಣಾಧಿಕಾರಿ ಕಚೇರಿ, 11 ನೌಕರರ ರಾಜ್ಯವಿಮಾ ಸಂಸ್ಥೆಯ ಡೈರೆಕ್ಟರ್ ಜನರಲ್ ಕಚೇರಿ ಮತ್ತು 12 ಕೇಂದ್ರ ಭವಿಷ್ಯನಿಧಿ ಕಮಿಷನರ್ ಕಚೇರಿ.ಕೇಂದ್ರ ಕಾರ್ಮಿಕ ಇಲಾಖೆಯ ವಿವಿಧ ಭಾಗಗಳಲ್ಲಿ ಕಾರ್ಮಿಕ ಉದ್ಯೋಗ ಸಚಿವಾಲಯವೇ ಮುಖ್ಯವಾದ್ದು. ಇತರ ಕಚೇರಿಗಳೆಲ್ಲವೂ ಅದರ ಅಧೀನದಲ್ಲಿ ಅವವಕ್ಕೆ ನಿಗದಿಯಾದ ಕೆಲಸ ಮಾಡುವ ವಿಭಾಗಗಳಾಗಿವೆ.

ಕೇಂದ್ರ ಕಾರ್ಮಿಕ ಸಚಿವನ ನೇತೃತ್ವ

ಬದಲಾಯಿಸಿ

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಂಪುಟ ದರ್ಜೆಯು ಕೇಂದ್ರ ಕಾರ್ಮಿಕ ಸಚಿವನ ನೇತೃತ್ವದಲ್ಲಿ ಕೆಲಸ ಮಾಡುತ್ತದೆ. ಕಾರ್ಮಿಕ ಕಾರ್ಯದರ್ಶಿ ಈ ಸಚಿವನಿಗೆ ಸಲಹೆಗಾರನಾಗಿರುತ್ತಾನೆ. ದೇಶದ ಆರ್ಥಿಕ ನೀತಿಯನ್ನು ರೂಪಿಸುವುದರಲ್ಲಿ ನೆರವಾಗುವುದು, ಕಾರ್ಮಿಕ-ಮಾಲೀಕ ಸಹಕಾರವನ್ನೇರ್ಪಡಿಸುವುದು, ಉತ್ತಮ ಕೈಗಾರಿಕಾ ಸಂಬಂಧವನ್ನೇರ್ಪಡಿಸುವುದು, ಹೆಚ್ಚು ಉತ್ಪಾದನೆಗೆ ಪ್ರೋತ್ಸಾಹ ನೀಡುವುದು, ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರುವುದು, ಕಾರ್ಮಿಕರ ಕಲ್ಯಾಣಾಭಿವೃದ್ಧಿಗೆ ಪ್ರೋತ್ಸಾಹ ನೀಡುವುದು-ಮೊದಲಾದ ಕಾರ್ಯಗಳನ್ನು ಈ ಸಚಿವಾಲಯ ನಿರ್ವಹಿಸುತ್ತದೆ. ಜೊತೆಗೆ ಇದು ತ್ರಿಪಕ್ಷ ಕಾರ್ಮಿಕ ಸಮ್ಮೇಳನಗಳು ಮತ್ತು ಸಮಿತಿಗಳ ಕಾರ್ಯಾಗಾರವಾಗಿ ಕೆಲಸ ಮಾಡುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಚಟುವಟಿಕೆಗಳಲ್ಲಿ ಭಾರತ ಭಾಗವಹಿಸುವುದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕವೇ.

ವಿನಿಮಯ ಸಂಸ್ಥೆಗಳ ಮತ್ತು ತರಬೇತಿ ಸಂಸ್ಥೆಗಳ ಕಾರ್ಯಕ್ರಮ

ಬದಲಾಯಿಸಿ

ದೇಶಾದ್ಯಂತ ಹರಡಿರುವ ಉದ್ಯೋಗ ವಿನಿಮಯ ಸಂಸ್ಥೆಗಳ ಮತ್ತು ತರಬೇತಿ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹೊಂದಾವಣೆ ಏರ್ಪಡಿಸುವ ಜವಾಬ್ದಾರಿ, ಉದ್ಯೋಗ ಮತ್ತು ಶಿಕ್ಷಣ ತರಬೇತಿ ಮಹಾ ನಿರ್ದೇಶನಾಲಯದ್ದು. ಅಂಕಿಅಂಶಗಳ ಸಂಗ್ರಹಣೆ ಮತ್ತು ಕಾರ್ಮಿಕ ವಿಷಯಗಳಲ್ಲಿ ಸಂಶೋಧನೆ-ಇವು ಕಾರ್ಮಿಕ ವಿಭಾಗದ ಹೊಣೆ. ಹೀಗೆ ಸಂಗ್ರಹಿಸಿದ ಅಂಕಿಅಂಶಗಳ ಮತ್ತು ನಡೆಸಿದ ಸಂಶೋಧನೆಗಳ ಆಧಾರದ ಮೇಲೆ ಸರ್ಕಾರ ತನ್ನ ಕಾರ್ಮಿಕನೀತಿಯನ್ನು ರೂಪಿಸುತ್ತದೆ. ಇಂಡಿಯನ್ ಲೇಬರ್ ಜರ್ನಲ್ ಈ ವಿಚಾರವನ್ನು ಕುರಿತ ಅಧಿಕೃತ ಮಾಸಿದೆ. ಇಷ್ಟೇ ಅಲ್ಲದೆ ಕಾರ್ಖಾನೆಗಳ ಕಾನೂನು, ಕನಿಷ್ಠವೇತನಗಳ ಕಾನೂನು, ಭಾರತೀಯ ಕಾರ್ಮಿಕ ಸಂಘಗಳ ಕಾನೂನು- ಮುಂತಾದವುಗಳ ಜಾರಿಗೆ ಸಂಬಂಧಿಸಿದಂತೆ ಕಾರ್ಯಪ್ರಗತಿಯನ್ನು ಕುರಿತ ವರದಿಯೂ ಕಾರ್ಮಿಕ ವರ್ಗಕ್ಕೆ ಸಹಾಯಕವಾಗುವಂಥ ಕೆಲವು ಸಣ್ಣ ಹೊತ್ತಿಗೆಗಳೂ ಪ್ರಕಟವಾಗುತ್ತವೆ. ಪಂಚವಾರ್ಷಿಕ ಯೋಜನೆಗಳಿಗೆ ಬೇಕಾಗುವ ಅಂಕಿಅಂಶಗಳನ್ನು ಸಂಗ್ರಹಿಸುವುದೂ ಈ ವಿಭಾಗದ ಕಾರ್ಯಭಾರ. ಪ್ರಧಾನ ಕಾರ್ಮಿಕ ಕಮಿಷನರರ ಕಚೇರಿ ಕೇಂದ್ರ ಸರ್ಕಾರಕ್ಕೆ ಸೇರಿದ ಉದ್ಯಮಗಳಲ್ಲಿ ಕಾರ್ಮಿಕ ಮತ್ತು ಮಾಲೀಕವರ್ಗಗಳ ಮಧ್ಯೆ ಒಳ್ಳೆಯ ಬಾಂಧವ್ಯವನ್ನು ಕುದುರಿಸುವ ಹೊಣೆ ಹೊತ್ತಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿದ ಗಣಿಗಳಲ್ಲಿ, ತೈಲಾಗಾರಗಳಲ್ಲಿ, ವಿಮಾಸಂಸ್ಥೆಯಲ್ಲಿ, ಮುಖ್ಯ ಬಂದರುಗಳಲ್ಲಿ ಹಾಗೂ ದೊಡ್ಡದೊಡ್ಡ ಕಾರ್ಖಾನೆಗಳಲ್ಲಿ ಉದ್ಭವಿಸುವ ಕಾರ್ಮಿಕ ವಿವಾದಗಳನ್ನು ತಡೆಗಟ್ಟುವುದು ಮತ್ತು ಬಗೆಹರಿಸುವುದು, ಈ ವಿವಾದಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ಜಾರಿಗೆ ತರುವುದು, ಕಾರ್ಮಿಕ ಕಾಯಿದೆಗಳ ನಿರ್ವಹಣೆ, ದೇಶದಲ್ಲಿರುವ ನಾಲ್ಕು ಕೇಂದ್ರ ಕಾರ್ಮಿಕ ಸಂಘಗಳ ಸದಸ್ಯಬಲವನ್ನು ಪರೀಕ್ಷಿಸಿ ಅತಿ ಹೆಚ್ಚಿನ ಸದಸ್ಯಬಲವನ್ನು ಹೊಂದಿರುವ ಸಂಸ್ಥೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವುದು, ಕೇಂದ್ರ ಸರ್ಕಾರದ ಉದ್ಯಮಗಳಲ್ಲಿಯ ಕಾರ್ಮಿಕರ ಕಲ್ಯಾಣಸಾಧನೆಗಾಗಿ ಕ್ರಮಗಳನ್ನು ಕಾರ್ಯಗತಗೊಳಿಸುವುದು. ಕೇಂದ್ರ ಕಾರ್ಮಿಕ ಸಚಿವರಿಗೆ ಕಾರ್ಮಿಕ ಸಮಸ್ಯೆಗಳ ಬಗ್ಗೆ ಸಲಹೆ ಮಾಡುವುದು-ಇವೇ ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ನೌಕರರ ರಾಜ್ಯವಿಮಾ ಸಂಸ್ಥೆ 1948ರಲ್ಲಿ ಅಸ್ತಿತ್ವಕ್ಕೆ ಬಂತು. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಈ ವಿಮಗೆ ಕಂತುಗಳನ್ನು ಕಟ್ಟುವ ಕಾರ್ಮಿಕರಿಗೆ ಈ ಸಂಸ್ಥೆ ನಾಲ್ಕು ಬಗೆಯ ಸೌಲಭ್ಯಗಳನ್ನು ಒದಗಿಸುತ್ತವೆ. ವ್ಯಾಧಿ, ಪ್ರಸೂತಿ, ವಿಕಲಾಂಗ ಮತ್ತು ಅವಲಂಬನ ಸ್ಥಿತಿಯಲ್ಲಿ ಪರಿಹಾರಗಳನ್ನು ನೀಡುತ್ತದೆ. ಕೇಂದ್ರ ಸರ್ಕಾರ ಈಚೆಗೆ ಇದರ ಕಾರ್ಯಕ್ಷೇತ್ರವನ್ನು ವಿಶಾಲಗೊಳಿಸುತ್ತಿದೆ. ಉದ್ಯೋಗಿಗಳ ಭವಿಷ್ಯನಿಧಿ ಕಾಯಿದೆಯನ್ನು (1952) ನಿರ್ವಹಿಸುವುದು ಕೇಂದ್ರ ಭವಿಷ್ಯನಿಧಿ ಕಮಿಷನರ್ ರವರ ಕಾರ್ಯಭಾರ. ಈತ ದೇಶದಲ್ಲಿರುವ ಇಪ್ಪತ್ತು ಪ್ರಾದೇಶಿಕ ಭವಿಷ್ಯನಿಧಿ ಕಮಿಷನರುಗಳ ಸಹಾಯದಿಂದ ಕೆಲಸ ನಿರ್ವಹಿಸುತ್ತಾನೆ.

ರಾಜ್ಯ ಕಾರ್ಮಿಕ ಇಲಾಖೆ

ಬದಲಾಯಿಸಿ

ಭಾರತದ ಪ್ರತಿಯೊಂದು ರಾಜ್ಯಸರ್ಕಾರದಲ್ಲೂ ಒಂದು ಪ್ರತ್ಯೇಕ ಕಾರ್ಮಿಕ ಇಲಾಖೆಯಿದೆ. ಪ್ರತಿಯೊಂದು ರಾಜ್ಯ ಕಾರ್ಮಿಕ ಇಲಾಖೆಯೂ ತನ್ನ ರಾಜ್ಯದಲ್ಲಿಯ ಕಾರ್ಮಿಕ ಕಾನೂನುಗಳನ್ನು ಕಾರ್ಯಗತಮಾಡುವ ಮತ್ತು ಅವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದೆ. ಸಂಪುಟ ದರ್ಜೆಯ ಒಬ್ಬ ಸಚಿವ ಇದಕ್ಕೆ ಅಧಿಪತಿ. ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಈತನಿಗೆ ಸಲಹೆಗಾರ. ಕಾರ್ಮಿಕ ಕಾಯಿದೆಗಳ ಅನ್ವಯದ ಮತ್ತು ಕಾರ್ಮಿಕ ಕಲ್ಯಾಣ ಸಾಧನೆಯ ಕಾರ್ಯಗಳನ್ನು ನಿರ್ವಹಿಸಲು ನೇಮಕವಾಗಿರುವ ಅಧಿಕಾರಿಯೇ ಕಾರ್ಮಿಕ ಕಮಿಷನರ್. ಈತನಿಗೆ ಸಹಾಯಕರಾಗಿ ಡೆಪ್ಯುಟಿ ಕಾರ್ಮಿಕ ಕಮಿಷನರ್, ಅನೇಕ ಸಹಾಯಕ ಕಾರ್ಮಿಕ ಕಮಿಷನರುಗಳು ಮತ್ತು ಕಾರ್ಮಿಕ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಅನೇಕ ರಾಜ್ಯಗಳಲ್ಲಿ ಕಾರ್ಖಾನೆಗಳ ಪ್ರಧಾನ ನಿರೀಕ್ಷಕ ಮತ್ತು ಬಾಯಿಲರುಗಳ ಪ್ರಧಾನ ನಿರೀಕ್ಷಕ-ಇವರು ಕ್ರಮವಾಗಿ ಕಾರ್ಖಾನೆಗಳ ಕಾಯಿದೆ (1948) ಮತ್ತು ಬಾಯಿಲರುಗಳ ಕಾಯಿದೆ (1923) ಇವುಗಳ ಆಡಳಿತ ನಿರ್ವಹಿಸುತ್ತಾರೆ. ಕೆಲವು ರಾಜ್ಯಗಳಲ್ಲಿ ರಾಜ್ಯ ಕಾರ್ಮಿಕ ಕಮಿಷನರೇ ರಾಜ್ಯದ ಕಾರ್ಮಿಕ ಸಂಘಗಳ ರಿಜಿಸ್ಟ್ರಾರ್ ಆಗಿ ಕೆಲಸ ಮಾಡುತ್ತಾರೆ. ರಾಜ್ಯದ ಕಾರ್ಮಿಕ ವಿಷಯಗಳ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸುವ ಕೆಲಸವನ್ನು ಕಮಿಷನರ ಕಚೇರಿಯೇ ನೋಡಿಕೊಳ್ಳುತ್ತದೆ.ಮೈಸೂರು ರಾಜ್ಯದಲ್ಲಿ ಕಾರ್ಮಿಕ ಸಚಿವರ ಕೈಕೆಳಗೆ ಕಾರ್ಮಿಕ ಕಾರ್ಯದರ್ಶಿ, ಕಾರ್ಮಿಕ ಕಮಿಷನರ್, ಡೆಪ್ಯುಟಿ ಕಾರ್ಮಿಕ ಕಮಿಷನರ್, ಅನೇಕ ಮಂದಿ ಅಸಿಸ್ಟೆಂಟ್ ಕಮಿಷನರುಗಳು ಮತ್ತು ಕಾರ್ಮಿಕ ಅಧಿಕಾರಿಗಳಿರುತ್ತಾರೆ. ಉದ್ಯಮಗಳಲ್ಲಿ ಕಾರ್ಮಿಕರ ಮತ್ತು ಮಾಲೀಕರ ಮಧ್ಯೆ ಉದ್ಭವಿಸುವ ವಿವಾದಗಳಲ್ಲಿ ಇವರು ಕೈಗಾರಿಕಾ ವಿವಾದ ಕಾಯಿದೆ (1947) ಮತ್ತು ಅದರ ತಿದ್ದುಪಡಿ ಕಾಯಿದೆಗಳ ಪ್ರಕಾರ ಸಮನ್ವಯಾಧಿಕಾರಿಗಳಾಗಿಯೂ (ಕಾನ್ಸಿಲಿಯೇಷನ್ ಆಫೀಸರ್ಸ್) ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕಾರ್ಮಿಕ ಕಮಿಷನರೇ ರಾಜ್ಯದ ಪ್ರಧಾನ ಬಾಯಿಲರ್ ನಿರೀಕ್ಷಕನಾಗಿಯೂ ರಾಜ್ಯದ ಕಾರ್ಮಿಕ ಸಂಘಗಳ ರಿಜಿಸ್ಟ್ರಾರ್ ಆಗಿಯೂ ಕೆಲಸ ಮಾಡುತ್ತಾರೆ.

ಉಲ್ಲೇಖಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: