ಒಂದು ನಿಶ್ಚಿತ ಕಾಲಾವಧಿಯಲ್ಲಿ ಒಂದು ಕೈಗಾರಿಕಾ ಸಂಸ್ಥೆಯಲ್ಲಿ ಕಾರ್ಮಿಕರು ಹೊಸದಾಗಿ ಸೇರುವುದರಿಂದ ಮತ್ತು ಮೊದಲೇ ಸೇರಿದ್ದವರಲ್ಲಿ ಕೆಲವರು ಬಿಟ್ಟುಹೋಗುವುದರಿಂದ ಸಂಸ್ಥೆಯ ಒಟ್ಟು ಕಾರ್ಮಿಕ ಬಲದಲ್ಲಿ ಉಂಟಾಗುವ ಬದಲಾವಣೆ ಲೇಬರ್ ಟರ್ನೋವರ್. ಯಾವುದಾದರೂ ಕಾರಣದಿಂದ ಕಾರ್ಮಿಕರು ಒಂದು ಸಂಸ್ಥೆಯನ್ನು ಬಿಟ್ಟು ಬೇರೆ ಸಂಸ್ಥೆಗಳನ್ನು ಸೇರುವುದು ಸಾಮಾನ್ಯ. ಆ ಸಂಸ್ಥೆ ಯಥಾ ಕ್ರಮದಲ್ಲಿ ಹೊಸಬರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿರುತ್ತದೆ. ಬಿಟ್ಟು ಹೋದವರ ಸ್ಥಳದಲ್ಲಿ ಇತರರ ನೇಮಕವಾಗುತ್ತಿರುತ್ತದೆ. ಒಂದು ನಿಶ್ಚಿತ ಅವಧಿಯಲ್ಲಿ ಸಂಸ್ಥೆಯಲ್ಲಿದ್ದ ಕಾರ್ಮಿಕರ ಸರಾಸರಿ ಸಂಖ್ಯೆಗೂ ಆ ಅವಧಿಯಲ್ಲಿ ಮೇಲ್ಕಂಡ ರೀತಿಯಲ್ಲಿ ಆದ ಬದಲಾವಣೆಗಳಿಗೂ ಇರುವ ಸಂಬಂಧವನ್ನು ಅಳೆಯುವ ಪ್ರಯತ್ನ ನಡೆದಿದೆ.[]

ಈ ಸಂಬಂಧವಾಗಿ ಪರಿಗಣನೆಗೆ ಬರತಕ್ಕ ಅಂಶಗಳು ಮೂರು

ಬದಲಾಯಿಸಿ

ಕಾರ್ಮಿಕರ ಸೇರ್ಪಡೆ (ಅಕ್ಸೇಷನ್), ಬೇರ್ಪಡೆ (ಸೆಪರೇಷನ್) ಮತ್ತು ಬಿಟ್ಟವರ ಸ್ಥಾನದಲ್ಲಿ ಮಾಡಿಕೊಳ್ಳಲಾದ ನೇಮಕ ಅಥವಾ ಪ್ರತಿಸ್ಥಾಪನೆ (ರೀಪ್ಲೇಸ್‍ಮೆಂಟ್). ಕಾರ್ಮಿಕರ ಬೇರ್ಪಡೆ ಅನೇಕ ಬಗೆಗಳಲ್ಲಿ ಸಂಭವಿಸುತ್ತದೆ. ರಾಜೀನಾಮೆ, ವಜಾ, ತಾತ್ಕಾಲಿಕ ವಿಸರ್ಜನೆ (ಲೇ ಆಫ್), ನಿವೃತ್ತಿ, ಸಾವು-ಇವೇ ಮುಂತಾದ ಕಾರಣಗಳಿಂದ ಕಾರ್ಮಿಕರು ಸಂಸ್ಥೆಯಿಂದ ಹೊರಹೋಗಬಹುದು. ಹೀಗೆ ಸಂಸ್ಥೆಯನ್ನು ಬಿಟ್ಟ ಕಾರ್ಮಿಕರ ಸ್ಥಾನಗಳಲ್ಲಿ ಹೊಸ ಕಾರ್ಮಿಕರು ನೇಮಿಸಲ್ಪಡುತ್ತಾರೆ. ಅಥವಾ ಹಳೆಯ ಕಾರ್ಮಿಕರಲ್ಲೆ ಕೆಲವರು ಪುನರ್‍ನೇಮಿಸಲ್ಪಡಬಹುದು. ಇದು ಕಾರ್ಮಿಕರ ಪ್ರತಿಸ್ಥಾಪನೆ ಮೇಲೆ ನಮೂದಿಸಿರುವ ಮೂರು ಅಂಶಗಳಿಗೆ ಸಂಬಂಧಿಸಿದಂತೆ ಆವರ್ತ ದರವನ್ನು ಮೂರು ರೀತಿಯಾಗಿ ಅಳೆಯಬಹುದು. ಒಂದು ನಿಶ್ಚಿತ ಅವಧಿಯಲ್ಲಿ ಸಂಸ್ಥೆಯಲ್ಲಿದ್ದ ಕಾರ್ಮಿಕರ ಸರಾಸರಿ ಸಂಖ್ಯೆಗೂ ಸೇರ್ಪಡೆಯಾದ ಸಂಖ್ಯೆಗೂ ಇರುವ ಸೇಕಡ ಪ್ರಮಾಣವನ್ನು ಕಂಡುಹಿಡಿಯುವುದು ಒಂದು ಬಗೆ. ಅದು ಹೀಗೆ : ಕಾರ್ಮಿಕ ಆವರ್ತ ದರ (ಸೇರ್ಪಡೆ) (ಂ: ಸೇರ್ಪಡೆಗಳ ಸಂಖ್ಯೆ: ಇ: ಕಾರ್ಮಿಕರ ಸರಾಸರಿ ಸಂಖ್ಯೆ) ಕಾರ್ಮಿಕರ ಸರಾಸರಿ ಸಂಖ್ಯೆಗೂ ಬೇರ್ಪಡೆಗಳ ಸಂಖ್ಯೆಗೂ ಇರುವ ಸೇಕಡ ಪ್ರಮಾಣ ಹೀಗೆ: ಕಾರ್ಮಿಕ ಆವರ್ತ ದರ (ಬೇರ್ಪಡೆ) (S: ಬೇರ್ಪಡೆಗಳ ಸಂಖ್ಯೆ) ಬಿಟ್ಟವರ ಸ್ಥಾನದಲ್ಲಿ ಮಾಡಿಕೊಳ್ಳಲಾದ ನೇಮಕಗಳ ಸೂಚ್ಯಂಕವಿದು : ಕಾರ್ಮಿಕ ಆವರ್ತ ದರ (ಪ್ರತಿಸ್ಥಾಪನ) (ಖ: ಪ್ರತಿಸ್ಥಾಪನಗಳ ಸಂಖ್ಯೆ)

ಕಾರ್ಮಿಕ ಆವರ್ತ

ಬದಲಾಯಿಸಿ

ಕಾರ್ಮಿಕ ಆವರ್ತಕ್ಕೂ ಕಾರ್ಮಿಕ ಚಲನಕ್ಕೂ (ಮೊಬಿಲಿಟಿ) ಸಂಬಂಧವುಂಟು. ಕಾರ್ಮಿಕರ ಚಲನದಲ್ಲಿ ವ್ಯತ್ಯಾಸ ಉಂಟಾದಾಗ ಕಾರ್ಮಿಕ ಆವರ್ತದಲ್ಲಿ ಅದೇ ಬಗೆಯ ವ್ಯತ್ಯಾಸ ಉಂಟಾದರೂ ಇವೆರಡರ ವ್ಯತ್ಯಾಸ ದರಗಳೂ ಒಂದೇ ಆಗಿರಬೇಕಾಗಿಲ್ಲ. ಕಾರ್ಮಿಕರು ಒಂದು ಸಂಸ್ಥೆಯನ್ನು ಬಿಟ್ಟು ಮತ್ತೊಂದು ಸಂಸ್ಥೆಗೆ ಹೋಗುವುದನ್ನು, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೊಸ ಉದ್ಯೋಗಾನ್ವೇಷಣೆಗಾಗಿ ಹೋಗುವುದನ್ನು ಮತ್ತು ಆ ಚಲನೆಯ ಸುಲಭತೆಯನ್ನು ಸೂಚಿಸಿದರೆ ಕಾರ್ಮಿಕ ಆವರ್ತ ದರ ಒಂದು ಉದ್ಯಮದಲ್ಲಾಗುವ ಸೇರ್ಪಡೆ, ಬೇರ್ಪಡೆ ಮತ್ತು ಪುನಸ್ಥಾಪನೆಗಳನ್ನು ಸೂಚಿಸುತ್ತದೆ. ಕಾರ್ಮಿಕ ಚಲನ ಅನೇಕ ವೇಳೆ ಅಪೇಕ್ಷಣೀಯ, ಅದು ಚಲನಾತ್ಮಕ ಸಮಾಜದಲ್ಲಿ ಅಗತ್ಯ. ಅದು ದೇಶದ ಕಾರ್ಮಿಕ ಸಂಪತ್ತಿನ ಸೂಕ್ತ ವಿತರಣೆಗೆ ಸಹಾಯಕ.ಕಾರ್ಮಿಕ ಆವರ್ತ ದರ ಯಾವುದಾದರೊಂದು ಕೈಗಾರಿಕಾ ಸಂಸ್ಥೆಯಲ್ಲಿಯ ಶ್ರಮ ಬಲದ ಅಸ್ಥಿರತೆಯನ್ನು ಸೂಚಿಸಿದರೂ ಅದೇ ಮುಖ್ಯ ಕಾರಣವಲ್ಲ. ಶ್ರಮಬಲದ ಅಸ್ಥಿರತೆಗೆ ಕಾರ್ಮಿಕ ಆವರ್ತಪ್ರಮಾಣವೇ ಅಲ್ಲದೆ ಕಾರ್ಮಿಕರ ಗೈರುಹಾಜರಿ ಹಾಗೂ ಕಾರ್ಮಿಕರ ವಲಸೆ ಮುಂತಾದ ಕಾರಣಗಳೂ ಉಂಟು. ಆದ್ದರಿಂದ ಕಾರ್ಮಿಕ ಆವರ್ತದ ಅರ್ಥವ್ಯಾಪ್ತಿ ಶ್ರಮಬಲದ ಅಸ್ಥಿರತೆಯ ಅರ್ಥವ್ಯಾಪ್ತಿಗಿಂತ ಸಂಕುಚಿತವಾದ್ದು.


ಕಾರ್ಮಿಕ ಆವರ್ತ ಉದ್ಯಮಿ

ಬದಲಾಯಿಸಿ

ಕಾರ್ಮಿಕ ಆವರ್ತ ಉದ್ಯಮಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆ ದರ ಹೆಚ್ಚಿದಂತೆಲ್ಲ ಉತ್ಪಾದನ ವೆಚ್ಚ ಅಧಿಕವಾಗುತ್ತ ಹೋಗುವುದೇ ಈ ಸಮಸ್ಯೆಗೆ ಕಾರಣ. ಕುಶಲತೆಯನ್ನು ಪಡೆದ ಹಾಗೂ ತರಬೇತಿ ಹೊಂದಿದ ಕಾರ್ಮಿಕರು ಸಂಸ್ಥೆಯನ್ನು ಬಿಟ್ಟುಹೋದಾಗ ತೆರವಾದ ಸ್ಥಾನಗಳಲ್ಲಿ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಅವರಿಗೆ ಕೊಡಬೇಕಾದ ತರಬೇತಿ ವೆಚ್ಚ, ಹೊಸದಾಗಿ ಸೇರಿಸಿಕೊಳ್ಳಲಾದ ಕಾರ್ಮಿಕರ ಅನನುಭವಿ ಕೆಲಸದಿಂದ ವ್ಯರ್ಥವಾಗುವ ಸಾಮಗ್ರಿಗಳ ವೆಚ್ಚ, ಇವೇ ಮುಂತಾದವುಗಳಿಂದ ಉತ್ಪಾದನ ವೆಚ್ಚ ಏರುವುದರಿಂದ ಆ ಲಾಭದ ಪ್ರಮಾಣವೂ ಕಡಿಮೆಯಾಗುವುದಲ್ಲದೆ ಮಾರುಕಟ್ಟೆಯಲ್ಲಿ ಇತರ ಸಂಸ್ಥೆಗಳೊಡನೆ ಪೈಪೋಟಿ ಮಾಡುವ ಸಾಮಥ್ರ್ಯ ಕುಗ್ಗುತ್ತದೆ. ಇದೇ ರೀತಿ ಅಧಿಕ ಕಾರ್ಮಿಕ ಆವರ್ತ ದರದ ಏರಿಕೆಯಿಂದ ಕಾರ್ಮಿಕರು ತೊಂದರೆಗೀಡಾಗುತ್ತಾರೆ. ಅದರಿಂದ ಕಾರ್ಮಿಕರ ಕಾರ್ಯದಕ್ಷತೆ ಕುಗ್ಗುವುದೇ ಅಲ್ಲದೆ ಅವರಿಗೆ ದೀರ್ಘ ಕಾಲಾವಧಿಯ ಸೇವೆಗೆ ಸಿಗುವ ಸೌಲಭ್ಯಗಳು, ಅಂದರೆ ವಿರಾಮವೇತನ, ಉಪದಾನ ಇತ್ಯಾದಿಗಳು, ಸಾಕಷ್ಟು ಪ್ರಮಾಣದಲ್ಲಿ ಸಿಗದೆ ಅವರು ತೊಂದರೆ ಅನುಭವಿಸುತ್ತಾರೆ. ಅಷ್ಟೇ ಅಲ್ಲದೆ ಕಾರ್ಮಿಕರು ಆಗಾಗ್ಗೆ ಸಂಸ್ಥೆಯಿಂದ ಸಂಸ್ಥೆಗೆ ಅಲೆದಾಡುತ್ತಿದ್ದರೆ ಅವರ ಸಂಘಟನೆಗೆ ಧಕ್ಕೆಯುಂಟಾಗಬಹುದು. ಆದ್ದರಿಂದಲೇ ಕಾರ್ಮಿಕ ಆವರ್ತ ದರದ ಆಧಿಕ್ಯ ಅನಪೇಕ್ಷಣೀಯ. ಆದರೆ ಕೆಲವು ವೇಳೆ ಮಿತ ಪ್ರಮಾಣದಲ್ಲಿ ಕಾರ್ಮಿಕ ಆವರ್ತ ಅಪೇಕ್ಷಣೀಯವಾಗಿದೆ. ಯಾವ ಸಂಸ್ಥೆಯಲ್ಲಿ ಹಳೆಯ ಕಾರ್ಮಿಕರು ಹೋಗಿ ಹೊಸ ರಕ್ತ ಮತ್ತು ಹುರುಪುಳ್ಳ ತರುಣ ಉತ್ಸಾಹೀ ಕಾರ್ಮಿಕರು ಆವಶ್ಯಕವಾಗಿದ್ದಾರೋ ಅಂಥ ಸಂಸ್ಥೆಗಳಲ್ಲಿ ಕ್ರಮಬದ್ಧವಾದ ಹಿತಮಿತವಾದ ಕಾರ್ಮಿಕ ಆವರ್ತ ಅವಶ್ಯವೆನಿಸುತ್ತದೆ. ಆದರೂ ಅದರ ಅಧಿಕ್ಯವಂತೂ ಹಾನಿಕರ.

ಪ್ರಪಂಚದ ಕೈಗಾರಿಕಾ ರಾಷ್ಟ್ರ

ಬದಲಾಯಿಸಿ

ಕಾರ್ಮಿಕ ಆವರ್ತವನ್ನು ಆದಷ್ಟು ಕಡಿಮೆ ಮಾಡಲು ಪ್ರಪಂಚದ ಕೈಗಾರಿಕಾ ರಾಷ್ಟ್ರಗಳೆಲ್ಲವುಗಳಲ್ಲಿಯೂ ಉದ್ಯಮಿಗಳು ಪ್ರಯತ್ನಿಸಿದ್ದಾರೆ. ಈ ಉದ್ದೇಶದಿಂದಲೇ ಹಲವಾರು ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ತರುಣ ಕಾರ್ಮಿಕರಿಗೆ ಅವರವರ ಅಭಿರುಚಿ ಮತ್ತು ಯೋಗ್ಯತೆಗಳಿಗೆ ಹೊಂದಿಕೊಳ್ಳುವಂಥ ಕೆಲಸಗಳಲ್ಲಿ ತರಬೇತಿ ಕೊಡಲು ತರಬೇತಿ ಶಾಲೆಗಳು ಸ್ಥಾಪಿತವಾಗಿವೆ. ಕಾರ್ಮಿಕರ ಬಲವನ್ನು ಸ್ಥಿರಪಡಿಸಲು ಸಹಾಯಕವಾಗುವಂತೆ ಸಿಬ್ಬಂದಿ ನೀತಿಗಳನ್ನು ಮಾರ್ಪಡಿಸಲಾಗಿದೆ. ಆರ್ಥಿಕ ಹಿಂಜರಿತಗಳ ಕಾಲದಲ್ಲಿ ಎಲ್ಲರಿಗೂ ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕಾಗಿ ಹಾಗೂ ಅನುಭವ ಮತ್ತು ತರಬೇತಿ ಪಡೆದ ದುಡಿಮೆಗಾರರು ಸಂಸ್ಥೆಯನ್ನು ಬಿಟ್ಟು ಹೊರಗೆ ಹೋಗದಿರುವಂತೆ ಮಾಡುವುದಕ್ಕಾಗಿ ಕೆಲವೇ ಕಾರ್ಮಿಕರನ್ನು ಇಟ್ಟುಕೊಂಡು ಅವರಿಗೆ ಉದ್ಯೋಗಗಳನ್ನು ಒದಗಿಸುವ ಬದಲು ಪ್ರಸ್ತುತ ಇರುವ ಎಲ್ಲ ಉದ್ಯೋಗಗಳೂ ಎಲ್ಲರಿಗೂ ಹಂಚಿಕೆಯಾಗುವಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಷ್ಟೇ ಅಲ್ಲದೆ ಜ್ಯೇಷ್ಠತೆ (ಸೀನಿಯಾರಿಟಿ), ವಿಶ್ರಾಂತಿ ವೇತನ, ವಾರ್ಷಿಕವೇತನದ ಭರವಸೆ, ಬಡ್ತಿ ಇತ್ಯಾದಿ ಎಲ್ಲ ಆಕರ್ಷಕ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನೂ ಒದಗಿಸುವುದರ ಮೂಲಕ ಕಾರ್ಮಿಕ ಆವರ್ತವನ್ನು ಕಡಿಮೆ ಮಾಡಲು ಪ್ರಯತ್ನಗಳು ಸಾಗಿವೆ.[]

ಭಾರತದಲ್ಲಿ ಕಾರ್ಮಿಕ ಆವರ್ತ

ಬದಲಾಯಿಸಿ

ಭಾರತದಲ್ಲಿಯೂ ಕಾರ್ಮಿಕ ಆವರ್ತವನ್ನು ಕಡಿಮೆ ಮಾಡಲು ಮೇಲೆ ಹೇಳಿರುವ ಅನೇಕ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆಯಾದರೂ ಈ ಸಮಸ್ಯೆಯ ಗಾತ್ರವೆಷ್ಟೆಂಬುದನ್ನು ಸರಿಯಾಗಿ ಅಂದಾಜು ಮಾಡುವುದಕ್ಕಾಗುವುದಿಲ್ಲ. ಸಮಸ್ಯೆಗೆ ಸಂಬಂಧಿಸಿದ ಅಂಕಿಅಂಶಗಳ ಕೊರತೆಯೇ ಈ ಪರಿಸ್ಥಿತಿಗೆ ಕಾರಣ. ಆದರೂ ಕೆಲವು ನಂಬಲರ್ಹವಾದ ಮೂಲಗಳು ಒದಗಿಸುತ್ತಿರುವ ಅಂಕಿಅಂಶಗಳ ಪ್ರಕಾರ ಜವಳಿ ಮತ್ತು ಸೆಣಬು ಕೈಗಾರಿಕೆಗಳಲ್ಲಿಯ ಆವರ್ತ ದರ ಹೆಚ್ಚಿನದು. ಭಾರತದಲ್ಲಿ ಕಾರ್ಮಿಕ ಆವರ್ತಪ್ರಮಾಣ ಪಾಶ್ಚಾತ್ಯ ಕೈಗಾರಿಕಾ ದೇಶಗಳಲ್ಲಿರುವಷ್ಟು ಹೆಚ್ಚಿನ ಮಟ್ಟದಲ್ಲಿಲ್ಲವೆಂದು ಹೇಳಬಹುದು. ಭಾರತದಲ್ಲಿ ನಿರುದ್ಯೋಗ ಅಪೂರ್ಣೋದ್ಯೋಗಗಳು ಅಗಾಧವಾಗಿರುವುದರಿಂದ ಕಾರ್ಮಿಕರು ಸಾಮಾನ್ಯವಾಗಿ ತಮ್ಮ ಉದ್ಯೋಗಗಳಿಗೆ ಅಂಟಿಕೊಳ್ಳುವ ಪ್ರವೃತ್ತಿ ತೋರುತ್ತಾರೆ.

ಉಲ್ಲೇಖಗ್ಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: