ಕಾರಖಾನೆ
ಕಾರಖಾನೆ ಅಥವಾ ಉತ್ಪಾದನಾ ಘಟಕವು ಸಾಮಾನ್ಯವಾಗಿ ಕಟ್ಟಡಗಳು ಮತ್ತು ಯಂತ್ರೋಪಕರಣಗಳನ್ನು ಹೊಂದಿರುವ ಒಂದು ಔದ್ಯೋಗಿಕ ಸ್ಥಳ, ಅಥವಾ ಹೆಚ್ಚು ಸಾಮಾನ್ಯವಾಗಿ ಹಲವಾರು ಕಟ್ಟಡಗಳನ್ನು ಹೊಂದಿರುವ ಒಂದು ಸಂಕೀರ್ಣ. ಇಲ್ಲಿ ಕಾರ್ಮಿಕರು ಸರಕುಗಳನ್ನು ಉತ್ಪಾದಿಸುತ್ತಾರೆ ಅಥವಾ ಒಂದು ಉತ್ಪನ್ನವನ್ನು ಮತ್ತೊಂದು ಉತ್ಪನ್ನವಾಗಿ ಸಂಸ್ಕರಿಸುವ ಯಂತ್ರಗಳನ್ನು ನಡೆಸುತ್ತಾರೆ. ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಗೃಹ ಕೈಗಾರಿಕೆ ಅಥವಾ ಕಾರ್ಯಾಗಾರಗಳಿಗೆ ಬಂಡವಾಳ ಹಾಗೂ ಸ್ಥಳದ ಅಗತ್ಯಗಳು ಬಹಳ ಹೆಚ್ಚಾದುದರಿಂದ, ಯಂತ್ರೋಪಕರಣಗಳ ಅಂತರ್ನಿವೇಶನದಿಂದ ಕಾರಖಾನೆಗಳು ಹುಟ್ಟಿಕೊಂಡವು. ಒಂದು ಅಥವಾ ಎರಡು ನೂಲುವ ಯಂತ್ರಗಳಂತಹ ಸಣ್ಣ ಪ್ರಮಾಣದಲ್ಲಿ ಯಂತ್ರೋಪಕರಣಗಳನ್ನು ಹೊಂದಿದ್ದ ಮತ್ತು ಡಜ಼ನ್‍ಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿದ್ದ ಮುಂಚಿನ ಕಾರಖಾನೆಗಳನ್ನು "ವೈಭವೀಕೃತ ಕಾರ್ಯಾಗಾರ"ಗಳೆಂದು ಕರೆಯಲಾಗಿದೆ.[೧]
ಬಹುತೇಕ ಆಧುನಿಕ ಕಾರಖಾನೆಗಳು ಜೋಡಣಾ ಸಾಲಿನ ಉತ್ಪಾದನೆಗಾಗಿ ಬಳಸಲ್ಪಡುವ ಭಾರೀ ಸಾಧನಗಳು ಇರುವ ದೊಡ್ಡ ಉಗ್ರಾಣಗಳು ಅಥವಾ ಉಗ್ರಾಣಗಳಂತಹ ಸೌಕರ್ಯಗಳನ್ನು ಹೊಂದಿರುತ್ತವೆ. ದೊಡ್ಡ ಕಾರಖಾನೆಗಳು ಸಾರಿಗೆಯ ಬಹುವಿಧಾನಗಳ ಅವಕಾಶವಿದ್ದಲ್ಲಿ ಸ್ಥಿತವಾಗಿರುವ ಪ್ರವೃತ್ತಿ ಹೊಂದಿರುತ್ತವೆ, ಮತ್ತು ಕೆಲವು ರೈಲು, ಹೆದ್ದಾರಿ, ನೀರು ಹಾಕುವ ಮತ್ತು ತೆಗೆಯುವ ಸೌಕರ್ಯಗಳನ್ನು ಹೊಂದಿರುತ್ತವೆ. ಕಾರಖಾನೆಗಳು ಪ್ರತ್ಯೇಕ ಉತ್ಪನ್ನಗಳನ್ನು ಉತ್ಪಾದಿಸಬಹುದು ಅಥವಾ ರಾಸಾಯನಿಕಗಳು, ತಿಳ್ಳು ಮತ್ತು ಕಾಗದ, ಅಥವಾ ಸಂಸ್ಕರಿಸಿದ ತೈಲ ಉತ್ಪನ್ನಗಳಂತಹ ಯಾವುದೋ ರೀತಿಯ ನಿರಂತರವಾಗಿ ಉತ್ಪಾದಿತವಾಗುವ ವಸ್ತುವನ್ನು ಉತ್ಪಾದಿಸಬಹುದು. ರಾಸಾಯನಿಕಗಳನ್ನು ಉತ್ಪಾದಿಸುವ ಕಾರಖಾನೆಗಳನ್ನು ಹಲವುವೇಳೆ ಪ್ಲಾಂಟ್‍ಗಳು ಎಂದು ಕರೆಯಲಾಗುತ್ತದೆ ಮತ್ತು ಇವು ತಮ್ಮ ಬಹುತೇಕ ಉಪಕರಣಗಳನ್ನು, ಉದಾಹರಣೆಗೆ, ತೊಟ್ಟಿಗಳು, ಒತ್ತಡ ಧಾರಕಗಳು, ರಾಸಾಯನಿಕ ಪ್ರತಿಕ್ರಿಯಾಕಾರಿಗಳು, ಪಂಪುಗಳು ಮತ್ತು ಪೈಪ್‍ಗಳನ್ನು ಹೊರಗೆ ಹೊಂದಿರುತ್ತವೆ ಮತ್ತು ನಿಯಂತ್ರಣ ಕೊಠಡಿಗಳಿಂದ ನಿರ್ವಹಿಸಲ್ಪಡುತ್ತವೆ. ತೈಲ ಸಂಸ್ಕರಣಾಗಾರಗಳು ತಮ್ಮ ಬಹುತೇಕ ಉಪಕರಣಗಳನ್ನು ಹೊರಗೆ ಹೊಂದಿರುತ್ತವೆ.
ಪ್ರತ್ಯೇಕ ಉತ್ಪನ್ನಗಳು ಅಂತಿಮ ಗ್ರಾಹಕ ಸರಕುಗಳಾಗಿರಬಹುದು, ಅಥವಾ ಬೇರೆಡೆ ಅಂತಿಮ ಉತ್ಪನ್ನಗಳಾಗಿ ಉತ್ಪಾದಿಸಲ್ಪಡುವ ಭಾಗಗಳು ಮತ್ತು ಉಪ ಘಟಕಗಳಾಗಿರಬಹುದು. ಕಾರಖಾನೆಗಳಿಗೆ ಭಾಗಗಳು ಬೇರೆಡೆಯಿಂದ ಪೂರೈಕೆ ಆಗಬಹುದು ಅಥವಾ ಅವನ್ನು ಕಚ್ಚಾವಸ್ತುಗಳಿಂದ ತಯಾರಿಸಬಹುದು. ನಿರಂತರ ಉತ್ಪಾದನಾ ಕೈಗಾರಿಕೆಗಳು ಕಚ್ಚಾವಸ್ತುಗಳ ಪ್ರವಾಹವನ್ನು ಸಿದ್ಧಪಡಿಸಿದ ಉತ್ಪನ್ನಗಳಾಗಿ ರೂಪಾಂತರಿಸಲು ಸಾಮಾನ್ಯವಾಗಿ ಉಷ್ಣತೆ ಅಥವಾ ವಿದುಚ್ಛಕ್ತಿಯನ್ನು ಬಳಸುತ್ತವೆ.
ಉಲ್ಲೇಖಗಳು
ಬದಲಾಯಿಸಿ- ↑ Landes, David. S. (1969). The Unbound Prometheus: Technological Change and Industrial Development in Western Europe from 1750 to the Present. Cambridge, New York: Press Syndicate of the University of Cambridge. ISBN 0-521-09418-6.