ಕಾರ್ಕೋಟ ರಾಜಸಂತತಿ
ಕಾಶ್ಮೀರ ರಾಜ್ಯದಲ್ಲಿ ಗೋನಂದ ರಾಜ ಸಂತತಿ 627 ರಲ್ಲಿ ಕೊನೆಗೊಂಡ ಮೇಲೆ ಅಧಿಕಾರಕ್ಕೆ ಬಂದ ರಾಜಸಂತತಿ. ಇದರ ಸ್ಥಾಪಕ ದುರ್ಲಭವರ್ಧನ; ಗೋನಂದ ವಂಶದ ಕೊನೆಯ ದೊರೆ ಬಾಲಾದಿತ್ಯನ ಮಗಳನ್ನು ವಿವಾಹವಾಗಿ, ಗಂಡು ಸಂತತಿಯಿಲ್ಲದ ಬಾಲಾದಿತ್ಯನ ಉತ್ತರಾಧಿಕಾರಿಯಾಗಿ 627 ರಲ್ಲಿ ಸಿಂಹಾಸನವನ್ನೇರಿದ. ಈ ವಂಶ 855 ರ ವರೆಗೂ ಕಾಶ್ಮೀರದಲ್ಲಿ ಆಳಿತು.
ದುರ್ಲಭವರ್ಧನ
ಬದಲಾಯಿಸಿದುರ್ಲಭವರ್ಧನ 36 ವರ್ಷ ಕಾಲ ರಾಜ್ಯಭಾರ ಮಾಡಿದ. ಈತನ ಕಾಲದಲ್ಲಿ ಕಾಶ್ಮೀರಕ್ಕೆ ಹ್ಯೂಎನ್‍ತ್ಸಾಂಗ್ ಭೇಟಿ ಕೊಟ್ಟಿದ್ದ. ದುರ್ಲಭವರ್ಧನ ಆಗಲೇ ರಾಜ್ಯ ವಿಸ್ತಾರದಲ್ಲಿ ನಿರತನಾಗಿದ್ದನೆಂಬುದು ಹ್ಯೂಎನ್‍ತ್ಸಾಂಗನಿಂದ ತಿಳಿದು ಬರುತ್ತದೆ. ಆತ ರಾಜಕೀಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿವರವಾಗಿ ಹೇಳದೆ ಹೋದರೂ ಆಗಿನ ಕಾರದ ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಪರಿಸ್ಥಿತಿಗಳನ್ನು ವಿವರಿಸಿದ್ದಾನೆ. ಬೌದ್ಧಧರ್ಮದ ಅವನತಿ ಮತ್ತು ಶೈವಮತದ ಏಳಿಗೆಗಳನ್ನೂ ಜನರು ಶಿವ, ವಿಷ್ಟು ಮತ್ತು ಆದಿತ್ಯ ಇವರಿಗೆ ದೇವಸ್ಥಾನಗಳನ್ನು ಕಟ್ಟಿಸಲು ಧನಸಹಾಯ ಮಾಡುತ್ತಿದ್ದ ವಿಷಯವನ್ನೂ ಹೇಳಿದ್ದಾನೆ. ಇವನ ಬರೆವಣಿಗೆಯಿಂದ ಕಾಶ್ಮೀರವಲ್ಲದೆ ಪಶ್ಚಿಮ ಮತ್ತು ವಾಯುವ್ಯ ಪಂಜಾಬು ದುರ್ಲಭವರ್ಧನನ ಆಳ್ವಿಕೆಗೆ ಸೇರಿದ್ದ ವಿಷಯ ತಿಳಿಯುತ್ತದೆ. ಇವನ ಮರಣಾನಂತರ ಮಗ ದುರ್ಲಭಕ 50 ವರ್ಷ ಕಾಲ ರಾಜ್ಯವಾಳಿದರೂ ಆತನ ವಿಷಯವಾಗಿ ಚಾರಿತ್ರಿಕ ವಿವರಗಳು ದೊರಕಿಲ್ಲ. ಈತನಿಗೆ ಚಂದ್ರಾಪೀಡ (ವಜ್ರಾದಿತ್ಯ), ತಾರಾಪೀಡ (ಉದಯಾದಿತ್ಯ) ಮತ್ತು ಮುಕ್ತಾಪೀಡ (ಲಲಿತಾದಿತ್ಯ) ಎಂಬ ಮೂವರು ಮಕ್ಕಳಿದ್ದರು.[೧]
ಚಂದ್ರಾಪೀಡ
ಬದಲಾಯಿಸಿದುರ್ಲಭಕನ ಅನಂತರ 713 ರಲ್ಲಿ ಹಿರಿಯ ಮಗ ಚಂದ್ರಾಪೀಡ ಪಟ್ಟಕ್ಕೆ ಬಂದ. ಈತ ಚೀನದ ಚಕ್ರವರ್ತಿಯ ಆಸ್ಥಾನಕ್ಕೆ ದೂತನನ್ನು ಕಳಿಸಿ. ಅರಬರ ವಿರುದ್ಧ ನೆರವು ಕೋರಿದ. ಈ ಪ್ರಯತ್ನದಲ್ಲಿ ಸಫಲನಾಗದೆ ಹೋದರೂ ಅರಬರ ಆಕ್ರಮಣಗಳಿಂದ ತನ್ನ ದೇಹವನ್ನು ರಕ್ಷಿಸಿಕೊಂಡ. 720 ರಲ್ಲಿ ಚೀನದ ಚಕ್ರವರ್ತಿ ಚಂದ್ರಾಪೀಡನನ್ನು ರಾಜನೆಂದು ಗೌರವಿಸಿದನೆಂದು ಆ ದೇಶದ ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ. ಈತ ಧರ್ಮ, ಔದರ್ಯ, ಶ್ರದ್ಧೆ, ಭಕ್ರಿ ನ್ಯಾಯ ಮತ್ತು ನಿಷ್ಪಕ್ಷಪಾತ- ಈ ಗುಣಗಳಿಂದ ಪ್ರಸಿದ್ಧನಾಗಿದ್ದ. ಒಮ್ಮೆ ಚಂದ್ರಾಪೀಡನ ಅಧಿಕಾರಗಳು ಒಂದು ದೇವಸ್ಥಾನವನ್ನು ಕಟ್ಟಲು ಒಬ್ಬ ಮೋಚಿಯ ಮನೆ ಇದ್ದ ಸ್ಥಳವನ್ನು ಆರಿಸಿದರು. ಮೋಚಿ ರಾಜನ ಬಳಿ ತನ್ನ ವಿಪತ್ತಿನ ಬಗ್ಗೆ ದೂರು ಕೊಟ್ಟ. ಆಗ ರಾಜ ತನ್ನ ಅಧಿಕಾರಿಗಳ ತಪ್ಪನ್ನರಿತು ಅವರಿಗೆ ಶಿಕ್ಷೆ ವಿಧಿಸಿದ. ಮೋಚಿ ರಾಜನ ನ್ಯಾಯವನ್ನು ಮೆಚ್ಚಿ ಸ್ವತಃ ಆ ಸ್ಥಳವನ್ನು ಬಿಟ್ಟು ಕೊಟ್ಟ. ಈ ಘಟನೆ ರಾಜನ ನ್ಯಾಯಪರತೆಗೊಂದು ನಿದರ್ಶನ. ತನ್ನ ತಮ್ಮ ತಾರಾಪೀಡನ ಕುತಂತ್ರದಿಂದ ಚಂದ್ರಾಪೀಡ 722 ರಲ್ಲಿ ಕೊಲೆಯಾದ. ತಾರಾಪೀಡ ಅನಂತರ ಗದ್ದುಗೆಯನ್ನೇರಿದ. ಈತ ಕ್ರೂರಿ, ನಿರ್ದಯಿ, ಕೊಲೆಗಡುಕನಾಗಿ 4 ವರ್ಷ ಕಾಲ ರಾಜ್ಯಭಾರ ಮಾಡಿದ. ಅನೇಕರು ಈತನ ಶಿಕ್ಷೆಯನ್ನು ತಡೆಯಲಾರದೆ ಗುಡ್ಡ ಗಾಡಿಗೆ ಓಡಿಹೋದರು. ಇವನ ಅನಂತರ ಇವನ ತಮ್ಮ ಲಲಿತಾದಿತ್ಯ ಮುಕ್ತಾಪೀಡ ಸಿಂಹಾಸನಕ್ಕೆ 724 ರಲ್ಲಿ ಬಂದ. ಲಲಿತಾದಿತ್ಯ ಕಾರ್ಕೋಟಕ ರಾಜಸಂತತಿಯಲ್ಲೇ ಅಗ್ರಗಣ್ಯ. ಅಲೆಕ್ಸಾಂಡರನ ಹಾಗೆ ಇಡೀ ಪ್ರಪಂಚವನ್ನೇ ಜಯಿಸುವ ಗುರಿ ಹೊಂದಿದ್ದ. ಸದಾ ಯುದ್ಧನಿರತನಾಗಿದ್ದರೂ ಇವನ ಕಾಲವನ್ನು ಕಾಶ್ಮೀರ ಇತಿಹಾಸದ ಸುವರ್ಣಯುಗವೆಂದು ವರ್ಣಿಸಬಹುದು.ಲಲಿತಾದಿತ್ಯ ಕನೌಜಿನ ಯಶೋವರ್ಮನೊಡನೆ ಒಂದುಗೂಡಿ ಟಿಬೆಟನರನ್ನು ಸೋಲಿಸಿದುದಲ್ಲದೆ. ಪರ್ವತವಾಸಿಗಳಾದ ದರ್ದ, ಕಾಂಬೋಜ ಮತ್ತು ತುರುಷ್ಕರನ್ನೂ ಸದೆಬಡಿದ. ಅನಂತರ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡು ಕನೌಜಿನ ಯಶೋವರ್ಮನ ಮೇಲೆ ಜಯ ಗಳಿಸಿ, ಅವನು ಗೆದ್ದ ರಾಜ್ಯಗಳನ್ನು ವಶಪಡಿಸಿಕೊಂಡ ತರುವಾಯ ಬಿಹಾರ ಮತ್ತು ಬಂಗಾಳಗಳನ್ನು ಗೆದ್ದು ಒರಿಸ್ಸ ಪ್ರದೇಶದಲ್ಲಿ ಪೂರ್ವ ಸಮುದ್ರದವರೆಗೂ ಮುನ್ನುಗ್ಗಿದ. ದಕ್ಷಿಣ ಭಾರತದಲ್ಲಿ ರಾಷ್ಟ್ರಕೂಟ ರಾಜ್ಯದ ಮೇಲೆ ದಾಳಿ ಮಾಡಿದ. ಅನಂತರ ಕಾಶ್ಮೀರಕ್ಕೆ ಹಿಂತಿರುಗುವಾಗ ಗುಜರಾತ್, ಕಾಠಿಯಾವಾಡ, ಮಾಳ್ವ ಮತ್ತು ಮಾರ್ವಾಡಗಳ ಮೂಲಕ ಹಾದು ಹೋಗಿ ವಲ್ಲಭಿಯ ಮೈತ್ರಕ ಮತ್ತು ಚಿತೂರಿನ ರಾಜ್ಯಗಳನ್ನು ಗೆದ್ದು ಕಾಶ್ಮೀರಕ್ಕೆ ಹಿಂತಿರುಗಿದ.[೨]
ಲಡಕ್ ಪ್ರಾಂತ್ಯ
ಬದಲಾಯಿಸಿದಕ್ಷಿಣ ದಿಗ್ವಿಜಯದ ಅನಂತರ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಅನೇಕ ಯುದ್ಧಗಳನ್ನು ಕೈಕೊಂಡ. ಲಲಿತಾದಿತ್ಯ ತುಖಾರಿ ಸ್ಥಾನವನ್ನೂ ಟಿಬೆಟಿಗೆ ಸೇರಿದ ಲಡಕ್ ಪ್ರಾಂತ್ಯವನ್ನೂ ವಶಪಡಿಸಿಕೊಂಡ. ಟಿಬೆಟನ್ನು ಸಂಪೂರ್ಣವಾಗಿ ಸೋಲಿಸಲು ಚೀನದೇಶದ ಸಹಾಯ ಕೋರಿದ. ಆದರೆ ಚೀನದ ರಾಜ ಲಲಿತಾದಿತ್ಯನನ್ನು ಕಾಶ್ಮೀರದ ದೊರೆ ಮತ್ತು ತನ್ನ ಗೆಳೆಯನೆಂದು ಗೌರವಿಸುವುದರ ಹೊರತು, ಯಾವ ರೀತಿಯ ಸಹಾಯವನ್ನೂ ಮಾಡಲಿಲ್ಲ. ಈತನ ಕಾಲದಲ್ಲಿ ಕಾಶ್ಮೀರ ನಾನಾ ಮುಖವಾಗಿ ಪ್ರಗತಿಹೊಂದಿತು. ಲಲಿತಾದಿತ್ಯ ತನ್ನ ದಂಡಯಾತ್ರೆಗಳಿಂದ ಗಳಿಸಿದ ಅಪಾರ ಐಶ್ವರ್ಯದಿಂದ ಭವನಗಳನ್ನೂ ದೇವಾಲಯಗಳನ್ನೂ ದೇವತಾಮೂರ್ತಿಗಳನ್ನೂ ನಿರ್ಮಿಸಿದ. ಈತನ ಹೆಸರು ಅಮರವಾಗಿ ಉಳಿಯುವಂತೆ ಮಾಡಿದ ಮತ್ತು ಶಿಲ್ಪಕಲೆಗೆ ಹೆಸರುವಾಸಿಯಾದ ಕೆಲಸಗಳೆಂದರೆ ಮಾರ್ತಾಂಡದಲ್ಲಿ ಸೂರ್ಯದೇವನಿಗೆ ಕಟ್ಟಿಸಿದ ದೇವಸ್ಥಾನ ಮತ್ತು ಪರಿಹಾಸಪುರ.ಲಲಿತಾದಿತ್ಯ ಸರ್ವಧರ್ಮ ಸಮನ್ವಯ ದೃಷ್ಟಿಯುಳ್ಳವ. ಈತ ಹಿಂದೂ ಧರ್ಮವನ್ನು ಪ್ರತಿಪಾದಿಸಿದರೂ ಬೌದ್ಧಧರ್ಮಕ್ಕೂ ಆಶ್ರಯ ನೀಡಿ ಅನೇಕ ವಿಹಾರಗಳನ್ನು ಕಟ್ಟಿಸಿದ. ಎಲ್ಲ ದೇಶಗಳ ವಿದ್ವಾಂಸರನ್ನೂ ಗೌರವದಿಂದ ಕಾಣುತ್ತಿದ್ದ. ಯಶೋವರ್ಮನನ್ನು ಸೋಲಿಸಿದ ಅನಂತರ ಕನೌಜನಿಂದ ಭವಭೂತಿ ಮತ್ತು ವಾಕ್ಪತಿರಾಜ ಎಂಬ ಸುಪ್ರಸಿದ್ಧ ಕವಿಗಳನ್ನು ಕಾಶ್ಮೀರಕ್ಕೆ ಆಹ್ವಾನಿಸಿ ತನ್ನ ರಾಜ್ಯದಲ್ಲೇ ನೆಲೆಸುವಂತೆ ಮಾಡಿದ. ಆದರೂ ಕೆಲಬಾರಿ ಕ್ರೂರಿಯಾಗಿಯೂ ವಂಚಕನಾಗಿಯೂ ವರ್ತಿಸುತ್ತಿದ್ದನೆಂದು ಕಾಶ್ಮೀರದ ಚರಿತ್ರಕಾರ ಕಲ್ಹಣ ತಿಳಿಸಿದ್ದಾನೆ. 36 ವರ್ಷಗಳ ಆಳ್ವಿಕೆಯ ಅನಂತರ 760 ರಲಿ ಲಲಿತಾದಿತ್ಯ ಮರಣಿಸಿದ. ಅನಂತರ ರಾಜರು ಅಪ್ರಯೋಜಕರಾಗಿದ್ದು ಕಾಶ್ಮೀರದ ಕೀರ್ತಿ ಇಳಿಮುಖವಾದರೂ ಮತ್ತೊಂದು ಶತಮಾನದ ಕಾಲ ಈ ವಂಶ ಅಧಿಕಾರದಲ್ಲುಳಿದಿತ್ತು.
ಲಲಿತಾದಿತ್ಯ
ಬದಲಾಯಿಸಿಲಲಿತಾದಿತ್ಯನ ಅನಂತರ ಆತನ ಹಿರಿಯ ಮಗ ಕುವಲ್ಯಪೀಡ ಸ್ವಲ್ಪ ಕಾಲ ಅಧಿಕಾರದಲ್ಲಿದ್ದ. ತರುವಾಯ ಅವನ ತಮ್ಮ ವಜ್ರಾದಿತ್ಯ ಗದ್ದುಗೆಯನ್ನೇರಿದ. ಇವನ ಆಳಿಕೆಯಲ್ಲಿ ಸಿಂಧಿನ ಅರಬ್ಬಿ ಅಧಿಕಾರಿ ಹಿಷಾಮ್ ಇಬ್ನ್‍ಆಮ್ರ್ ಅತ್ ಟಫ್ಲಿಬೀ (768-772) ಕಾಶ್ಮೀರದ ಮೇಲೆ ದಾಳಿ ಮಾಡಿ ಅನೇಕರನ್ನು ಸೆರೆಹಿಡಿದು ಗುಲಾಮರನ್ನಾಗಿ ಕೊಂಡೊಯ್ದ. ಕ್ರೂರಿಯೂ ನಿರ್ದಯನೂ ಅಶಕ್ತನೂ ಆದ ವಜ್ರಾದಿತ್ಯನ ಕಾಲದಲ್ಲಿ ಅಶಾಂತಿ ತಾಂಡವವಾಡುತ್ತಿತ್ತು. ಇವನ ಮಕ್ಕಳಲ್ಲಿ ಹಿರಿಯನಾದ ಪ್ಲಥಿವ್ಯಾಪೀಡ ಅಧಿಕಾರಕ್ಕೆ ಬಂದಾಗ ಮಲತಮ್ಮ ಸಂಗ್ರಾಮಪೀಡ ದಂಗೆಯೆದ್ದು, ಸಿಂಹಾಸನವನ್ನು ವಶಮಾಡಿಕೊಂಡು 7 ದಿನಗಳ ಕಾಲ ರಾಜ್ಯವಾಳಿದ. ಅನಂತರ ಅವನ ತಮ್ಮ ಜಯಾಪೀಡ ವಿನಯಾದಿತ್ಯ ಸಿಂಹಾಸನವನ್ನೇರಿದ (770). ತನ್ನ ಅಜ್ಜ ಲಲಿತಾದಿತ್ಯನಂತೆ ಶಕ್ತನಾದ ಈತ ಪೂರ್ವದೇಶಗಳ ಮೇಲೆ ಯುದ್ಧ ಘೋಷಿಸಿ ಕಾಶ್ಮೀರವನ್ನು ಬಿಟ್ಟು ಹೊರಟ ಸಮಯದಲ್ಲಿ ಅವನ ಭಾವಮೈದುನ ಜಜ್ಜ ಅಧಿಕಾರವನ್ನು ಕಸಿದುಕೊಂಡ. ಪದಚ್ಯುತನಾದ ಜಯಾಪೀಡ ವೇಷಮರೆಸಿಕೊಂಡು ಅಲೆಯುತ್ತ ಪುಂಡ್ರವರ್ಧನ ದೊರೆ ಜಯಂತನ ಸೇವೆಯಲ್ಲಿದ್ದಾಗ ಅವನ ಮಗಳನ್ನು ಮದುವೆಯಾದ. ತನ್ನ ಮಾವನ ಪರವಾಗಿ ಗೌಡ ದೇಶದ ಐವರು ಪುಂಡ ನಾಯಕರನ್ನು ಸದೆಬಡಿದ. ಅನಂತರ ಪ್ರಯಾಗದಲ್ಲಿ ತನ್ನ ಅಳಿದುಳಿದ ಸೈನ್ಯವನ್ನು ಒಟ್ಟುಗೂಡಿಸಿ ಕಾನ್ಯಕುಬ್ಜವನ್ನು ಗೆದ್ದ. ಕಾಶ್ಮೀರವನ್ನು ತಲಪಿ, ಜಜ್ಜನೊಡನೆ ಹೋರಾಡಿ ಅವನನ್ನು ಕೊಂದು ಪುನಃ ತನ್ನ ರಾಜ್ಯವನ್ನು ವಶಪಡಿಸಿಕೊಂಡ. ಅನಂತರ ಪೂರ್ವಪ್ರಾಂತ್ಯದಲ್ಲಿ ಭೀಮಸೇನನೆಂಬ ರಾಜನನ್ನು ನೇಪಾಲದ ಅರಮುಡಿಯೆಂಬವನನ್ನೂ ಗೆದ್ದಂತೆ ತಿಳಿಯುತ್ತದೆ.ಇವನ ಆಸ್ಥಾನದಲ್ಲಿ ಕ್ಷೀರಸ್ವಾಮಿನ್, ಉದ್ಭಟ ಮತ್ತು ದಾಮೋದರ ಗುಪ್ರರಂಥ ವಿಖ್ಯಾತ ಪಂಡಿತರಿದ್ದರು. ಸು.30 ವರ್ಷಗಳ ಕಾಲ ಆಳಿದ ಅನಂತರ ಬ್ರಾಹ್ಮಣರ ಪಿತೂರಿಯಿಂದ ಸಿಂಹಾಸನ ಕಳೆದುಕೊಂಡನೆಂದು ಹೇಳಲಾಗಿದೆ. ಇವನ ಮಕ್ಕಳಾದ ಲಲಿತಾಪೀಡ ಮತ್ತು ಸಂಗ್ರಾಮಪೀಡ ಅನುಕ್ರಮವಾಗಿ ಆಳಿದ ಅನಂತರ ಲಲಿತಾಪೀಡನ ಮಗ ಚಿಪ್ಪಟ ಜಯಾಪೀಡ ಅಧಿಕಾರಕ್ಕೆ ಬಂದ. ಬಾಲಕನಾದ ಚಿಪ್ಪಟ ಜಯಾಪೀಡನ ಐವರು ಸೋದರಮಾವಂದಿರು ಆಡಳಿತ ವಹಿಸಿಕೊಂಡಿದ್ದು, ಅವನನ್ನು ಕೊಲೆ ಮಾಡಿಸಿದರು. 40 ವರ್ಷಗಳ ಕಾಲ ಹೆಸರಿಗೊಬ್ಬ ರಾಜನನ್ನು ನೇಮಿಸಿ ತಾವೇ ಸರ್ವಾಧಿಕಾರಿಗಳಾಗಿದ್ದ ಆ ಸಹೋದರರಲ್ಲಿ ಅಂತಃಕಲಹಗಳುಂಟಾದುವು. ಈ ಅನಾಯಕ ಪರಿಸ್ಥಿತಿಯಲ್ಲಿ ಸುಖವರ್ಮನ ಪುತ್ರ ಅವಂತಿವರ್ಮ 855-56ರಲ್ಲಿ ಅಧಿಕಾರ ರೂಢಿಸಿಕೊಂಡು ಉತ್ಫಲ ವಂಶವನ್ನು ಸ್ಥಾಪಿಸಿದ.