ಕಾರಂಜಿಯು ಕುಂಟೆಯೊಳಗೆ ನೀರನ್ನು ಸುರಿಯುವ ಅಥವಾ ಕುಡಿಯುವ ನೀರನ್ನು ಪೂರೈಕೆ ಮಾಡಲು ಮತ್ತು/ಅಥವಾ ಅಲಂಕಾರಿಕ ಅಥವಾ ಎದ್ದುಕಾಣುವ ಪ್ರಭಾವಕ್ಕಾಗಿ ನೀರನ್ನು ಗಾಳಿಯಲ್ಲಿ ಧಾರೆಯಾಗಿ ಚಿಮ್ಮಿಸುವ ಒಂದು ವಾಸ್ತುಶಾಸ್ತ್ರೀಯ ರಚನೆ. ಮೂಲತಃ ಕಾರಂಜಿಗಳು ಸಂಪೂರ್ಣವಾಗಿ ಕಾರ್ಯಾತ್ಮಕವಾಗಿದ್ದವು, ಮತ್ತು ಬುಗ್ಗೆಗಳು ಅಥವಾ ಕಾಲುವೆಗಳಿಗೆ ಸಂಪರ್ಕ ಹೊಂದಿರುತ್ತಿದ್ದವು ಮತ್ತು ನಗರಗಳು, ಪಟ್ಟಣಗಳು ಹಾಗೂ ಹಳ್ಳಿಗಳ ನಿವಾಸಿಗಳಿಗೆ ಕುಡಿಯುವ ನೀರು ಹಾಗೂ ಸ್ನಾನ ಹಾಗೂ ಬಟ್ಟೆ ಒಗೆಯುವ ಸಲುವಾಗಿ ನೀರನ್ನು ಒದಗಿಸಲು ಅವನ್ನು ಬಳಸಲಾಗುತ್ತಿತ್ತು. ೧೯ನೇ ಶತಮಾನದ ಕೊನೆಯವರೆಗೆ ಬಹುತೇಕ ಕಾರಂಜಿಗಳು ಗುರುತ್ವದಿಂದ ಕಾರ್ಯನಿರ್ವಹಿಸುತ್ತಿದ್ದವು, ಮತ್ತು ನೀರು ಹರಿಯುವಂತೆ ಮಾಡಲು ಅಥವಾ ಗಾಳಿಯೊಳಗೆ ಚಿಮ್ಮುವಂತೆ ಮಾಡಲು ಅವುಗಳಿಗೆ ಜಲಾಶಯ ಅಥವಾ ಕಾಲುವೆಯಂತಹ ಕಾರಂಜಿಗಿಂತ ಎತ್ತರದಲ್ಲಿರುವ ಜಲದ ಮೂಲದ ಅಗತ್ಯವಿತ್ತು.

ಕುಡಿಯುವ ನೀರನ್ನು ಒದಗಿಸುವ ಜೊತೆಗೆ, ಕಾರಂಜಿಗಳನ್ನು ಅಲಂಕಾರ ಮತ್ತು ಅವುಗಳ ನಿರ್ಮಾಣಕರ್ತರನ್ನು ಪ್ರಶಂಸಿಸಲು ಬಳಸಲಾಗುತ್ತಿತ್ತು. ರೋಮನ್ ಕಾರಂಜಿಗಳನ್ನು ಕಂಚು ಅಥವಾ ಪ್ರಾಣಿಗಳು ಅಥವಾ ಮಹಾಪುರುಷರ ಕಲ್ಲಿನ ಮುಖವಾಡಗಳಿಂದ ಅಲಂಕರಿಸಲಾಗುತ್ತಿತ್ತು. ಮಧ್ಯಯುಗದಲ್ಲಿ, ಮೂರಿಶ್ ಮತ್ತು ಮುಸ್ಲಿಮ್ ಉದ್ಯಾನ ವಿನ್ಯಾಸಕರು ಸ್ವರ್ಗದ ತೋಟಗಳ ಚಿಕ್ಕ ಪ್ರತಿರೂಪಗಳನ್ನು ಸೃಷ್ಟಿಸಲು ಕಾರಂಜಿಗಳನ್ನು ಬಳಸಿದರು. ಫ಼್ರಾನ್ಸ್‌ನ ರಾಜ ಹದಿನಾಲ್ಕನೇ ಲೂಯಿ ಪ್ರಕೃತಿಯ ಮೇಲೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ವರ್ಸಾಯ್ಲ್ಸ್‌ನ ಉದ್ಯಾನಗಳಲ್ಲಿ ಕಾರಂಜಿಗಳನ್ನು ಬಳಸಿದನು. ೧೭ನೇ ಮತ್ತು ೧೮ನೇ ಶತಮಾನಗಳಲ್ಲಿ ರೋಮ್‍ನ ಬರೋಕ್ ಅಲಂಕಾರಿಕ ಕಾರಂಜಿಗಳು ಪುನಃಸ್ಥಾಪಿಸಲಾದ ರೋಮನ್ ನಾಲೆಗಳ ಆಗಮನ ಬಿಂದುವನ್ನು ಗುರುತಿಸಿದವು ಮತ್ತು ಅವನ್ನು ನಿರ್ಮಿಸಿದ ಪೋಪ್‍ಗಳನ್ನು ವೈಭವೀಕರಿಸಿದವು.[೧]

ಇಂದು ಕಾರಂಜಿಗಳನ್ನು ನಗರದ ಉದ್ಯಾನಗಳು ಮತ್ತು ಚೌಕಗಳನ್ನು ಅಲಂಕರಿಸಲು; ವ್ಯಕ್ತಿಗಳು ಅಥವಾ ಘಟನೆಗಳನ್ನು ಗೌರವಿಸಲು; ವಿನೋದ ಮತ್ತು ಮನೋರಂಜನೆಗಾಗಿ ಬಳಸಲಾಗುತ್ತದೆ. ಎರಚು ಪ್ರದೇಶ ಅಥವಾ ಸಿಂಪಡಿಕೆ ಕೊಳವು ನಗರದ ನಿವಾಸಿಗಳಿಗೆ ಬೇಸಿಗೆಯಲ್ಲಿ ಪ್ರವೇಶಿಸಲು, ಒದ್ದೆಯಾಗಲು ಮತ್ತು ತಂಪಾಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಸಂಗೀತ ಕಾರಂಜಿಯು ಎದ್ದುಕಾಣುವ ಪ್ರಭಾವಕ್ಕಾಗಿ ನೀರಿನ ಚಲಿಸುವ ಚಿಮ್ಮುಗೆಗಳನ್ನು, ಕಂಪ್ಯೂಟರ್‌ನಿಂದ ನಿಯಂತ್ರಿತವಾದ ಬಣ್ಣಬಣ್ಣದ ದೀಪಗಳು ಮತ್ತು ಮುದ್ರಿತ ಸಂಗೀತದೊಂದಿಗೆ ಸಂಯೋಜಿಸುತ್ತದೆ. ಕಾರಂಜಿಗಳು ಸ್ವತಃ ಸಂಗೀತ ವಾದ್ಯಗಳು ಕೂಡ ಆಗಿರಬಹುದು ಮತ್ತು ಒಂದು ಅಥವಾ ಹೆಚ್ಚು ನೀರಿನ ಚಿಮ್ಮುಗೆಗಳ ಅಡಚಣೆ ಮೂಲಕ ಸಂಗೀತ ಹೊರಡಿಸುತ್ತವೆ. ಕುಡಿಯುವ ನೀರಿನ ಕಾರಂಜಿಗಳು ಸಾರ್ವಜನಿಕ ಕಟ್ಟಡಗಳು, ಉದ್ಯಾನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. Philippe Prévot, Histoire des jardins, Editions Sud Ouest, Bordeaux, 2006.
"https://kn.wikipedia.org/w/index.php?title=ಕಾರಂಜಿ&oldid=886891" ಇಂದ ಪಡೆಯಲ್ಪಟ್ಟಿದೆ