ಕಾನೂನುಭಂಗ ಚಳವಳಿ
ಭಾರತದ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಕಾಂಗ್ರೆಸ್ಸು ಸರ್ಕಾರದ ವಿರುದ್ಧ ನಡೆಸಿದ ಹೋರಾಟದ ವಿಧಾನಗಳಲ್ಲೊಂದು. ದಕ್ಷಿಣ ಆಫ್ರಿಕದಲ್ಲಿ ಬಿಳಿಯರ ಸರ್ಕಾರದ ವರ್ಣಭೇದ ನೀತಿಯ ವಿರುದ್ಧ ನಡೆಸಿದ ಚಳವಳಿಯಲ್ಲಿ ಉಗಮವಾಗಿ, ಗಾಂಧಿಯವರು ಭಾರತಕ್ಕೆ ಪುನರಾಗಮಿಸಿದಾಗ ಬ್ರಿಟಿಷ್ ಸರ್ಕಾರದ ವಿರುದ್ಧ ಕ್ರಮಕ್ರಮವಾಗಿ ಬೃಹದಾಕಾರ ತಾಳಿತು.[೧]
ಅಮೆರಿಕ ಸಂಯುಕ್ತ ಸಂಸ್ಥಾನ
ಬದಲಾಯಿಸಿಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೂಡ ನೀಗ್ರೋ ಜನರು ಬಿಳಿಯರೊಂದಿಗೆ ಸಮಾನ ನಾಗರಿಕ ಸೌಕರ್ಯಕ್ಕಾಗಿ ಈ ವಿಧಾನವನ್ನನುಸರಿಸಿದ್ದುಂಟು. ಅನ್ಯಾಯಕರವಾದ ವ್ಯವಸ್ಥೆಯ ವಿರುದ್ಧ ಹೋರಾಡಲು ಉಳಿದೆಲ್ಲ ಅಹಿಂಸಾತ್ಮಕ ಉಪಾಯಗಳೂ ಬರಿದಾದಾಗ ಅಂತಿಮವಾಗಿ ಇದನ್ನು ಅನುಸರಿಸಬೇಕೆಂಬುದು ಗಾಂಧಿಯವರ ಭಾವನೆಯಾಗಿತ್ತು. ಸರ್ಕಾರದ ಅನ್ಯಾಯಕರ ಹಾಗೂ ಅನಾಗರಿಕ ಕಾನೂನುಗಳನ್ನು ಮುರಿಯುವುದು ಇದರ ಉದ್ದೇಶ. ಅದರ ವಿರುದ್ಧವಾಗಿ ಉದ್ರೇಕಗೊಳ್ಳುವುದರಲ್ಲಿ ಹಿಂಸೆ ಎಸಗುವುದಾಗಲಿ ಇದರ ಆಶಯವಲ್ಲ. ಅನ್ಯಾಯಕರವಾದ ಆಡಳಿತದೊಂದಿಗೆ ಎಲ್ಲ ಬಗೆಯ ಸಹಕಾರವನ್ನೂ ಹಿಂತೆಗೆದುಕೊಳ್ಳುವುದೂ ಆ ವ್ಯವಸ್ಥೆಯಿಂದ ಲಬ್ಧವಾಗಬಹುದಾದ ಯಾವುದೇ ಬಗೆಯ ಅನುಕೂಲಗಳನ್ನು ನಿರಾಕರಿಸುವುದೂ ಇದರ ಮೂಲಸೂತ್ರ. ಕಾನೂನುಭಂಗ ಚಳುವಳಿ ಅಸಹಕಾರ ಚಳುವಳಿಯ ಒಂದು ಅವಿಭಾಜ್ಯ ಹಾಗೂ ಅವಶ್ಯ ಅಂಗ. ಒಂದು ಕೆಟ್ಟ ಆಡಳಿತ ವ್ಯವಸ್ಥೆಯ ಆದೇಶಗಳಿಗೂ ಕಾನೂನಿನ ನಿರ್ದೇಶನಗಳಿಗೂ ತಲೆಬಾಗುವುದರಿಂದ-ವಿಧೇಯತೆ ತೋರುವುದರಿಂದ-ಆ ಆಡಳಿತದೊಂದಿಗೆ ಅತ್ಯಂತ ಪರಿಣಾಮಕಾರಿಯಾಗಿ ಸಹಕರಿಸಿದಂತೆಯೇ ಆಗುತ್ತದೆ. ಆ ಬಗೆಯ ವಿಧೇಯತೆಯನ್ನು ನಿರೀಕ್ಷಿಸುವುದಕ್ಕಾಗಲಿ ಪಡೆಯುವುದಕ್ಕಾಗಲಿ ದುರಾಡಳಿತಕ್ಕೆ ಎಂದಿಗೂ ಅರ್ಹತೆಯಿಲ್ಲ. ಅದಕ್ಕೆ ವಿಧೇಯತೆ ತೋರುವುದೆಂದರೆ ದುಷ್ಟಶಕ್ತಿಯೊಂದಿಗೆ ಪಾಲುದಾರಿಕೆ ವಹಿಸಿದಂತೆ. ಆದ್ದರಿಂದ ಸುತ್ಪುರುಷನಾದಾತ ಆತ್ಮಪುರಸ್ಸರವಾಗಿ ಅದನ್ನು ವಿರೋಧಿಸುತ್ತಾನೆ. ಅದ್ದರಿಂದ ದುಷ್ಟ ಸರ್ಕಾರದ ಕಾನೂನುಗಳಿಗೆ ಅವಿಧೇಯತೆ ತೋರಿಸುವುದು-ಅದನ್ನು ಮುರಿಯುವುದು-ಒಂದು ಕರ್ತವ್ಯ. ಹಿಂಸಾತ್ಮಕವಾಗಿ ಆಚರಿಸಿದ ಕಾನೂನುಭಂಗ ದುಷ್ಟ ವ್ಯವಸ್ಥೆಯ ವಿರುದ್ಧವಲ್ಲ. ಹಿಂಸೆಯಿಂದ ನಿವಾರಿಸಲಾದ ವ್ಯಕ್ತಿಗಳಿಗೆ ಬದಲಾಗಿ ಬೇರೆಯವರು ಬರಬಹುದು. ದುಷ್ಟಶಕ್ತಿಯಂತೂ ಹಾಗೆಯೇ ಉಳಿದುಕೊಳ್ಳುತ್ತದೆ. ಅದನ್ನು ಮುಟ್ಟಿದಂತೆಯೇ ಆಗುವುದಿಲ್ಲ. ಅಷ್ಟೇ ಅಲ್ಲ. ಅದು ಇನ್ನೂ ಹೆಚ್ಚು ದುಷ್ಟ ಲಕ್ಷಣ ತಳೆಯುತ್ತದೆ. ಅಹಿಂಸಾತ್ಮಕವಾದ ಕಾನೂನು ಭಂಗವೊಂದೇ ಅತ್ಯಂತ ಯಶಸ್ವೀ ಕ್ರಮ. ದುಷ್ಟ ವ್ಯವಸ್ಥೆಯೊಂದಿಗೆ ಸಹಕರಿಸುವುದಿಲ್ಲವೆನ್ನುವವನು ಈ ಮಾರ್ಗ ಅನುಸರಿಸುವುದು ಅವನ ಕರ್ತವ್ಯ. ಇದು ಮಹಾತ್ಮ ಗಾಂಧಿಯವರೇ ನೀಡಿರುವ ವಿವರಣೆ-ಸುಪ್ರಸಿದ್ಧ ದಂಡಿ ಯಾತ್ರೆಯ ಸಮಯದಲ್ಲಿ.
ಕಾನುನು ಭಂಗ ಚಳವಳಿ
ಬದಲಾಯಿಸಿಕಾನುನು ಭಂಗ ಚಳವಳಿಯಲ್ಲಿ ಅಪಾಯವಿಲ್ಲದೆಯೂ ಇಲ್ಲ. ಆದರೆ ಅಪಾಯಕ್ಕೆ ಕಾರಣವೊಂದೇ. ಇದು ಈವರೆಗೂ ಭಾಗಶಃ ಪ್ರಯೋಗಿಸಲಾದ ಕ್ರಮ ಮಾತ್ರ. ಹಿಂಸಾಪೂರಿತ ವಾತಾವರಣದಲ್ಲೇ ಇದನ್ನು ಯಾವಾಗಲೂ ಪ್ರಯೋಗಿಸಬೇಕಾಗಿ ಬಂದಿದೆ. ಕ್ರೌರ್ಯ ತಾನೇತಾನಾಗಿ ಮೆರೆಯುತ್ತಿರುವಾಗ ಅದಕ್ಕೆ ಬಲಿಯಾದವರಲ್ಲಿ ಅತಿಯಾದ ಉದ್ರೇಕ ಉದ್ಭವಿಸುತ್ತದೆ. ಅವರ ದೌರ್ಬಲ್ಯದಿಂದಾಗಿ ಅದು ಗುಪ್ತವಾಗಿರುತ್ತದೆ. ಅತ್ಯಲ್ಪ ನೆವ ಸಿಕ್ಕಿದರೂ ಸಾಕು. ಅದು ಅತ್ಯುಗ್ರವಾಗಿ ಸ್ಪೋಟಿಸುತ್ತದೆ. ಅಶಿಸ್ತಿನಿಂದ ಕೂಡಿದ ಜೀವಧ್ವಂಸಕವಾದ ಗುಪ್ತಶಕ್ತಿಯನ್ನು ಖಂಡಿತ ಯಶಸ್ಸಿನ ಸಾಧನವಾದ ಜೀವಸಂಜೀವಿನೀ ಶಕ್ತಿಯಾಗಿ ಪರಿವರ್ತಿಸುವ ಅತ್ಯುತ್ಕøಷ್ಟ ವಿಧಾನವೇ ಕಾನೂನುಭಂಗ.ಅದು ನೀಡಬಹುದಾದ ವರಪ್ರಸಾದದೊಂದಿಗೆ ಹೋಲಿಸಿದಾಗ ತರಂಗವಾಗಿ ಅನಭವಿಸಬೇಕಾದ ಕಷ್ಟನಷ್ಟಸಂಭವ ಏನೇನೂ ಇಲ್ಲ. ಇದರ ಬಳಕೆ ವಿಶ್ವಕ್ಕೆ ಪರಿಚಿತವಾದಾಗ, ಇದರ ಯಶಸ್ವೀ ಕಾರ್ಯದ ಬಗ್ಗೆ ಅನೇಕ ಪ್ರದರ್ಶನಗಳಾದಾಗ, ವಿಜ್ಞಾನದ ಅತ್ಯಧಿಕ ಬೆಳೆವಣಿಗೆಯ ಫಲವಾಗಿ ಸಾಧಿಸಲಾದ ವಿಮಾನಸಂಚಾರದಲ್ಲಿರುವುದಕ್ಕಿಂತಲೂ ಕಾನೂನುಭಂಗದಲ್ಲಿ ಕಡಿಮೆ ಅಪಾಯ ಇರುತ್ತದೆ. ಹೀಗೆಂದು ಗಾಂಧಿಯವರು ಈ ವಿಧಾನದ ಸಾಧಕ ಭಾಧಕಗಳನ್ನೂ ಇದರ ಸಾರ್ವತ್ರಿಕ ಸಾರ್ವಕಾಲಿಕ ಗುಣವನ್ನೂ ವಿವರಿಸಿದ್ದಾರೆ.
ಅಸಹಕಾರ ಆಂದೋಲನ
ಬದಲಾಯಿಸಿ1920ರಲ್ಲಿ ಭಾರತದಲ್ಲಿ ಗಾಂಧಿಯವರಿಂದ ಆರಂಭವಾದ ಅಸಹಕಾರ ಆಂದೋಲನ ವಿಶಿಷ್ಟವಾದ್ದು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಅದೇ ವರ್ಷ ಔಪಚಾರಿಕವಾಗಿ ಪ್ರಾರಂಭವಾಗಿ, ಮುಂದಿನ ವರ್ಷ (1921) ಅದರ ಪರಿಣಾಮವಾಗಿ ತಲೆದೋರಿದ ದಬ್ಬಾಳಿಕೆಯನ್ನು ಹತ್ತಿಕ್ಕಲು ಕಾನೂನುಭಂಗ ಚಳವಳಿಯನ್ನು ಕೂಡಲೆ ಆರಂಭಿಸಬೇಕೆಂದು ಬೇಡಿಕೆಗಳು ಬಂದುವು. ಆ ವರ್ಷ ನವೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಸೇರಿದ್ದ ಕಾಂಗ್ರೆಸ್ ಸಮಿತಿ ಕೆಲವು ನಿಬಂಧನೆಗಳಿಗೆ ಒಳಪಟ್ಟು ಪ್ರತಿಯೊಂದು ಪ್ರಾಂತ್ಯವೂ ತನ್ನ ಜವಾಬ್ದಾರಿಯ ಮೇಲೆ ಕಾನೂನುಭಂಗ ಮತ್ತು ಕರನಿರಾಕರಣೆ ಚಳವಳಿಯನ್ನು ಪ್ರಾರಂಭಿಸಬಹುದೆಂದು ಆದೇಶ ನೀಡಿದ್ದರೂ ಅದು ಯಾವ ಸ್ವರೂಪ ತಳೆಯಬಹುದೆಂಬುದನ್ನು ಯಾರೂ ವಿಚಾರ ಮಾಡಲಿಲ್ಲ. ಸ್ವತಃ ಗಾಂಧೀಜಿಯವರೇ ಆಗ ಅದರ ವ್ಯಾಖ್ಯೆ ಕೊಟ್ಟಿರಲಿಲ್ಲ. 1922ರ ಮೊದಲಲ್ಲಿ ಮುಂಬಯಿಯಲ್ಲಿ ಸಮಾವೇಶಗೊಂಡಿದ್ದ ಸಕಲ ಪಕ್ಷಗಳ ಸಮ್ಮೇಳನದಲ್ಲಿ ಸರ್ಕಾರದ ನೀತಿಯನ್ನು ಖಂಡಿಸಲಾಯಿತು. ಬಾರ್ಡೋಲಿಯಲ್ಲಿ ಕಾನೂನುಭಂಗ ಚಳವಳಿ ಆರಂಭಿಸುವುದಾಗಿ ಗಾಂಧೀಜಿಯವರು ವೈಸ್‍ರಾಯರಿಗೆ ತಿಳಿಸಿದುರು. ಇದಕ್ಕೆ ಮೊದಲೆ ಕರನಿರಾಕರಣೆ ಚಳವಳಿ ಗುಂಟೂರು ಜಿಲ್ಲೆಯಲ್ಲಿ ಜನವರಿ 12ರಂದು ಆರಂಭವಾಗಿತ್ತು. ಭೂ ಕಂದಾಯ ಮತ್ತು ಹುಲ್ಲುಗಾವಲಿನ ಶುಲ್ಕವನ್ನು ಕೊಡಲು ಜನ ನಿರಾಕರಿಸಿದರು. ಆದರೆ ಈ ಮಧ್ಯೆ ವೇಲ್ಸ್ ರಾಜಕುಮಾರನ ಭೇಟಿಯ ಕಾರಣ ಮುಂಬಯಿ ಮತ್ತು ಮದ್ರಾಸುಗಳಲ್ಲಿ ನಡೆದ ಗಲಭೆಗಳು, ಬಿಹಾರದ ಚೌರಿ-ಚೌರಾದಲ್ಲಿ ಸಂಭವಿಸಿದ (1922) ಹಿಂಸಾಪ್ರಕರಣ-ಇವು ಬಾರ್ಡೋಲಿ ಚಳವಳಿಗೆ ಪೆಟ್ಟು ಕೊಟ್ಟುವು. ಇದ್ದಕ್ಕಿದ್ದಂತೆ ಚಳವಳಿಯನ್ನು ಹಿಂತೆಗೆದುಕೊಂಡುದಕ್ಕೆ ಗಾಂಧಿಯವರಲ್ಲಿ ಅನೇಕರು ಅಸಮಾಧಾನಗೊಂಡರೂ ದೇಶ ಇನ್ನೂ ಇಂಥ ಚಳವಳಿಗೆ ಪಕ್ವವಾಗಿಲ್ಲವೆಂಬ ಅಂಶವನ್ನು ಕಾಂಗ್ರೆಸ್ ತನ್ನ ಗಯಾ ಅಧಿವೇಶನದಲ್ಲಿ ಒಪ್ಪಿಕೊಂಡಿತು. ಗಾಂಧೀಜಿಯವರು ಅಹಮದಾಬಾದ್ ಅಧಿವೇಶನದಲ್ಲಿ ಹೇಳಿದಂತೆ ಕಾನೂನುಭಂಗ ಚಳವಳಿಯನ್ನು ಸಾಧಿಸಲು ಅವಶ್ಯವಾಗಿದ್ದ ಶಾಂತ ವಾತಾವರಣ ನಿರ್ಮಾಣವಾಗಿರಲಿಲ್ಲ.[೨]
ಪೂರ್ಣಸ್ವರಾಜ್ಯ
ಬದಲಾಯಿಸಿಮುಂದೆ-1929ರ ಡಿಸೆಂಬರ್ 31ರಂದು-ಲಾಹೋರ್ ಅಧಿವೇಶನದಲ್ಲಿ ಅಂಗೀಕರಿಸಲಾದ ಪೂರ್ಣಸ್ವರಾಜ್ಯ ಗೊತ್ತುವಳಿ ಗಾಂಧೀಜಿಯವರಿಗೆ ಅದೇ ಅಸ್ತ್ರವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿತು. 1930ರ ಫೆಬ್ರವರಿ ತಿಂಗಳಲ್ಲಿ ಸಬರ್ಮತಿಯಲ್ಲಿ ಸೇರಿದ್ದ ಕಾರ್ಯಕಾರಿ ಸಮಿತಿಯ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರು ತಾವು ಕೈಕೊಳ್ಳಲಿದ್ದ ಚಳವಳಿಯ ಸ್ವರೂಪವನ್ನು ವಿವರಿಸಿದರು. ಮಾನವ ತನ್ನ ಬುದ್ಧಿಸಾಥ್ರ್ಯದಿಂದ ನಿರ್ಮಿಸಬಹುದಾದಂಥ ಅತ್ಯಂತ ಅಮಾನುಷ ತಲೆಗಂದಾಯವೆಂದು ಉಪ್ಪಿನ ಕರವನ್ನು ವರ್ಣಿಸಿ. ಆ ಕರದ ವಿರುದ್ಧ ಇಡೀ ದೇಶದ ಜನಭಿಪ್ರಾಯವನ್ನು ರೂಪಿಸಿದರು. ಉಪ್ಪಿನ ಕಾಯಿದೆಯನ್ನು ಮುರಿಯುವ ಉದ್ದೇಶದಿಂದ ತಮ್ಮ ಐತಿಹಾಸಿಕ ದಂಡಿಯಾತ್ರೆಯನ್ನು ಪ್ರಾರಂಭಿಸುವುಕ್ಕೆ ಒಂದು ದಿನ ಮುಂಚೆ-ಮಾರ್ಚಿ 11ರಂದು--ಗಾಂಧಿಯವರು ಒಂದು ಚಿರಸ್ಮರಣೀಯ ಭಾಷಣ ಮಾಡಿದರು. ತಾವು ದಸ್ತಗಿರಿಯಾದರೆ ದೇಶ ಅನುಸರಿಸಬೇಕಾದ ಮಾರ್ಗವನ್ನು ವಿವರಿಸಿದರು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಉಪ್ಪನ್ನು ತಯಾರಿಸಿ ಮಾರಾಟ ಮಾಡಬೇಕು. ಅದನ್ನು ಕೊಳ್ಳಬೇಕು. ಹೀಗೆ ಉಪ್ಪಿನ ಕಾಯಿದೆಯನ್ನು ಮುರಿಯಬೇಕು. ಅಲ್ಲದೆ, ಕರವನ್ನು ಕೊಡಲು ನಿರಾಕರಿಸಬೇಕು- ಎಂದು ಅವರು ಹೇಳಿದರು. ಮಾರ್ಚಿ 12 ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅತ್ಯಮೋಘವಾದ ದಿನವೆಂದು ಪರಿಗಣಿತವಾಗಿದೆ. ಅಂದು ಮುಂಜಾನೆ 6-30ಕ್ಕೆ ಸರಿಯಾಗಿ ಗಾಂಧೀಜಿಯವರು ತಮ್ಮ ಆಶ್ರಮದ 78 ನಿವಾಸಿಗಳೊಡನೆ ಸಬರ್ಮತಿ ಆಶ್ರಮದಿಂದ ಐತಿಹಾಸಿಕ ದಂಡಿಯಾತ್ರೆಯನ್ನು ಪ್ರಾರಂಭಿಸಿದರು. ದಿನವೂ 10 ಮೈಲಿಗಳಂತೆ ನಡೆದು ಯಾತ್ರೆಯನ್ನು ಪರಿಪೂರ್ಣಗೊಳಿಸಿದರು. 241 ಮೈಲಿ ಸಡೆದು ಏಪ್ರಿಲ್ 5ರಂದು ಮುಂಜಾನೆ 8-30ಕ್ಕೆ ಸರಿಯಾಗಿ ಗಾಂಧೀಜಿಯವರು ಸಮುದ್ರದಿಂದ ಉಪ್ಪನ್ನು ತಯಾರಿಸಬಾರದೆಂಬ ಕಾಯಿದೆಯನ್ನು ಭಂಗ ಮಾಡಿ ಇಡೀ ರಾಷ್ಟ್ರಕ್ಕೆ ಮಾರ್ಗವನ್ನು ಸೂಚಿಸಿದರು.
ಉಪ್ಪಿನ ಕಾಯಿದೆ
ಬದಲಾಯಿಸಿಇನ್ನು ಮೇಲೆ ಯಾರು ಬೇಕಾದರೂ ಉಪ್ಪಿನ ಕಾಯಿದೆಯನ್ನು ಮುರಿಯಬಹುದೆಂದು ಸೂಚನೆಯಿತ್ತರು. ಸ್ವತಃ ತಾವು ನೆರೆಹೊರೆಯ ಹಳ್ಳಿಗಳಿಗೆ ದಿನವೂ ಹೋಗಿ ಚಳವಳಿಯ ಮಹತ್ತ್ವವನ್ನು ಉಪದೇಶಿಸಿ ಕಾಯಿದೆ ಮುರಿಯಲು ಪ್ರೇರೇಪಿಸಿದರು. ದಂಡಿಯಲ್ಲಿಯೇ ಹೇರಳ ಉಪ್ಪನ್ನು ತಯಾರಿಸಿ ಮಾರಲಾಯಿತು. ಜಫ್ತಿ ಮಾಡಲಾಯಿತು. ಗುಜರಾತ್, ಮುಂಬಯಿ, ಮದ್ರಾಸ್ ಮತ್ತು ಕರಾಚಿ ಕೂಡ ಹಿಂದೆ ಬೀಳದೆ ಅಕ್ರಮ ಉಪ್ಪು ತಯಾರಿಕೆಯನ್ನು ಪ್ರಾರಂಭಿಸಿದುವು. ಅಲ್ಲಲ್ಲಿ ಅಲ್ಪ ಸ್ವಲ್ಪ ಗಲಭೆಗಳೂ ಪೋಲೀಸರ ದಬ್ಬಾಳಿಕೆಯೂ ಪ್ರಾರಂಭವಾದುವು. ಏಪ್ರಿಲ್ 23ರಂದು ಖಾನ್ ಅಬ್ದುಲ್ ಗಫಾರ್ ಖಾನರನ್ನು ದಸ್ತಗಿರಿ ಮಾಡಲಾಗಿ ಪೆಷಾವರದಲ್ಲಿ ಪ್ರದರ್ಶನ ನಡೆಯಿತು. ಪೋಲೀಸರು ಗುಂಡುಹಾರಿಸಿ ಅನೇಕರನ್ನು ಕೊಂದರು. ನವಜೀವನ ಪತ್ರಿಕೆ ಮತ್ತು ಮುದ್ರಣಾಲಯಗಳನ್ನು ಸರ್ಕಾರ ವಶಪಡಿಸಿಕೊಂಡು ಮುದ್ರಣ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತು. ಪ್ರತಿಯೊಂದು ಕಡೆಯೂ ಲಾಠಿ ಪ್ರಹಾರ, ಗುಂಡಿನ ಸುರಿಮಳೆ, ಆಸ್ತಿಗಳ ಜಫ್ತಿ, ಹಳ್ಳಿಗರನ್ನು ಸುತ್ತುಗಟ್ಟಿ ಗುಂಡಿಕ್ಕಿ ದಸ್ತಗಿರಿಗಳಾದುವು. ಅಂದಿನಿಂದ ಚಳವಳಿ ಉಗ್ರಸ್ವರೂಪ ತಾಳಿತು. ಮುಂಬಯಿಯ 50,000 ಕೆಲಸಗಾರರು ಮುಷ್ಕರ ಹೂಡಿದರು. ಕಲ್ಕತ್ತ ಮತ್ತು ದೆಹಲಿಗಳಲ್ಲಿ ಗುಂಡು ಹಾರಿಸಲಾಯಿತು. ಸೊಲ್ಲಾಪುರ ಒಂದು ವಾರದ ವರೆಗೆ ಜನರ ಕೈಯಲ್ಲಿತ್ತು. ಮೈನನ್ ಸಿಂಗ್, ಕರಾಚಿ, ಲಖನೌ, ಮುಲ್ತಾನ್, ರಾವಲ್ಪಿಡಿ, ಪೆಷಾವರ್‍ಗಳಲ್ಲಿ ಗಲಭೆಗಳಾದುವು. ಅವನ್ನು ಸದೆಬಡಿಯಲು ವಾಯವ್ಯ ಪ್ರಾಂತದಲ್ಲಿ ಸೇನೆ, ವಿಮಾನ ಮತ್ತು ಟ್ಯಂಕ್‍ಗಳನ್ನು ಉಪಯೋಗಿಸಲಾಯಿತು. ಸರೋಜಿನಿ ನಾಯ್ಡು ಅವರ ನಾಯಕತ್ವದಲ್ಲಿ ಸುಮಾರು 2000 ಸ್ವಯಂಸೇವಕರು ದರ್ಶಾನ್ ಉಪ್ಪಿನ ಕೇಂದ್ರದ ಮೇಲೆ ಮಾಡಿದ ದಾಳಯನ್ನು ಪ್ರತ್ಯಕ್ಷವಾಗಿ ನೋದಿದ ಅಮೆರಿಕನ್ ಪತ್ರಿಕಾಪ್ರತಿನಿಧಿ ಮಿಲ್ಲರನ ವರ್ಣನೆ ಗಮರ್ನಾಹವಾಗಿದೆ. ವಾಡ್ಲಾ ಉಪ್ಪಿನ ಕೋಠಿಯನ್ನು ಸುಮಾರು 1,500 ಸ್ವಯಂಸೇವಕರು ದಾಳಿ ಮಾಡಿ ಚೀಲ ಗಟ್ಟಲೆ ಒಯ್ದರು. ಕರ್ಣಾಟಕದಲ್ಲಿ 10,000 ಮಂದಿ ಸಾಣಿಕಟ್ಟೆಯನ್ನು ದಾಳಿ ಮಾಡಿ 1,000 ಮಣ ಉಪ್ಪನ್ನು ಒಯ್ದರು. ವರ್ಷ ಮುಗಿಯುವುದರೊಳಗೆ ಸರ್ಕಾರ 12 ಸುಗ್ರೀವಾಜ್ಞೆಗಳನ್ನು ಹೊರಡಿಸಿತು. ಪೆಷಾವರ್ ದಿನ ಗಾಂಧಿ ದಿನ ಮೊದಲಾದ ದಿನಗಳನ್ನು ಆಚರಿಸಿ, ಮುಂಬಯಿ ನಗರ ಇತರೆ ನಗರಗಳಿಗೆ ಮಾರ್ಗ ದರ್ಶನ ನೀಡಿತು. ಲಾಠಿ ಪ್ರಹಾರವನ್ನು ಎದುರಿಸುವುದೊಂದು ಗೌರವವೆಂದು ಎಣಿಸಲಾಯಿತು. ಅಶ್ವಾರೋಹಿ ಐರೋಪ್ಯ ಸೈನ್ಯ ಲಾಠಿಪ್ರಹಾರ ಮಾಡಿ ಜನರನ್ನು ಚದುರಿಸಿತು. ಖಾದಿ ಟೋಪಿ ಹಾಕುವದೇ ಒಂದು ಅಪರಾಧವಾಯಿತು.
==ನಿರಾಕರಣೆ== ಕರ ನಿರಾಕರಣೆ ಕೂಡ ಇದರ ಮುಖ್ಯವಾದ ಅಂಗ. ಇದು ಬಾರ್ಡೋಲಿಯಲ್ಲಿ ಪಟೇಲರ ನೇತೃತ್ವದಲ್ಲಿ ಮುಂದುವರೆಯಿತು. ಆಂಧ್ರ, ಕರ್ಣಾಟಕ, ಗುಜರಾತ್, ಬಿಹಾರ್, ಪಂಜಾಬ್, ಒರಿಸ್ಸ, ಬಂಗಾಳ, ಮಹಾರಾಷ್ಟ್ರ,- ಎಲ್ಲ ಕಡೆಯೂ ಈ ಚಳುವಳಿ ನಡೆದು ಭಾರತದ ಪ್ರತಿಯೊಂದು ಭಾಗವೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತು. ಕರ್ಣಾಟಕದಲ್ಲಿ, ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ ನಿರಾಕರಣೆ ಚಳುವಳಿ ಉತ್ತಮ ರೀತಿಯಲ್ಲಿ ಸಂಘಟಿತವಾಗಿತ್ತು. ಸಿರ್ಸಿ, ಸಿದ್ಧಾಪುರ ಮುಂತಾದೆಡೆಗಳಲ್ಲಿ ಅನೇಕ ಪಟೇಲರು ರಾಜೀನಾಮೆ ಸಲ್ಲಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 800 ಕುಟುಂಬಗಳು ಚಳುವಳಿಯಲ್ಲಿ ಭಾಗವಹಿಸಿದುವು. ಕರ್ಣಾಟಕದ ಅನೇಕ ತಾಲ್ಲೂಕುಗಳು ಕಷ್ಟನಷ್ಟಗಳಿಗೆ ಒಳಗಾದವು. ಅನೇಕ ಮಂದಿ ಸ್ತ್ರೀಪುರುಷರು ಶಿಕ್ಷೆ ಅನುಭವಿಸಿದರು. 15 ಲಕ್ಷ ರೂಪಾಯಿಗಳಷ್ಟು ಆಸ್ತಿಯ ಜಫ್ತಿ ಆಯಿತು. 1931ರಲ್ಲಿ ಗಾಂಧೀಜಿಯವರ ಬಿಡುಗಡೆಯಾಯಿತು. ಗಾಂಧಿ ಮತ್ತು ವೈಸ್‍ರಾಯ್ ಇರ್ವಿನ್ ನಡುವೆ ಒಪ್ಪಂದವಾಗಿ ಗಾಂಧಿಯವರು ಚಳುವಳಿಯನ್ನು ಹಿಂತೆಗೆದುಕೊಂಡರು. 1931ರಲ್ಲಿ ನಡೆದ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಕಾಂಗ್ರೆಸ್ ಸಮ್ಮತಿಸಿತು.
ಬ್ರಿಟಿಷರ ದಬ್ಬಾಳಿಕೆ
ಬದಲಾಯಿಸಿಆದರೆ ಭಾರತೀಯರ ಆಕಾಂಕ್ಷೆ ನೆರವೇರಬಹುದೆಂಬ ಭರವಸೆ ದೊರಕಲಿಲ್ಲ. ಗಾಂಧಿಯವರ ದಸ್ತಗಿರಿಯಾಯಿತು.ಕಾನೂನುಭಂಗ ಚಳುವಳಿ ಮತ್ತೆ ಆರಂಭವಾಗಲು (1932) ಕಾರಣವಾದ್ದು ಈ ಪ್ರಕರಣ. ಸರ್ಕಾರ ಉಗ್ರಕ್ರಮಗಳಿಂದ ಈ ಚಳುವಳಿಯನ್ನು ಹತ್ತಿಕ್ಕಲು ಯತ್ನಿಸಿತು.ಬ್ರಿಟಿಷರ ದಬ್ಬಾಳಿಕೆಯಿಂದ ತಾತ್ಕಾಲಿಕವಾಗಿ ಗುಪ್ತವಾಗಿದ್ದ ಈ ಶಕ್ತಿ ಮತ್ತೆ ಪ್ರಕಟವಾದ್ದು 1910ರಲ್ಲಿ, ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕು, ಇಲ್ಲದಿದ್ದರೆ ಕಾನೂನುಭಂಗ ಚಳುವಳಿ ಆರಂಭವಾಗುವುದು-ಎಂದು ಗಾಂಧೀಜಿ ಸಾರಿದರು. 1942ರಲ್ಲಿ ಸರ್ಕಾರ ಕಾಂಗ್ರೆಸಿನ ಎಲ್ಲ ಪ್ರಮುಖರನ್ನೂ ಸೆರೆಯೊಳಕ್ಕೆ ತಳ್ಳಿತು. ಸಾಮೂಹಿಕ ಉದ್ರೇಕ, ಉದ್ವೇಗ, ಸರ್ಕಾರದ ಉಗ್ರಕ್ರಮ_ಇವು ಸರ್ವಾತ್ರಿಕವಾದುವು, ಮಹಾತ್ಮ ಗಾಂಧಿ ಮತ್ತು ಇತರ ನಾಯಕರನ್ನು ಸರ್ಕಾರ ಕೊನೆಗೂ ಬಿಡುಗಡೆ ಮಾಡಿಸಂಧಾನ ಆರಂಭಿಸಿತು. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂದು ಗಾಂಧಿಯವರು ಹೇಳಿದ ಏಳು ವರ್ಷಗಳ ಅನಂತರ ಅವರ ಮಾತು ನಿಜವಾಯಿತು. ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂತು.
ಉಲ್ಲೇಖಗಳು
ಬದಲಾಯಿಸಿ