ಕಾಚು
ಕಾಚು ಎಂದರೆ ಕೆಲವು ಜಾತಿಯ ಸಸ್ಯಗಳಿಂದ ದೊರೆಯುವ ಒಂದು ಬಗೆಯ ರಾಳದಂಥ ವಸ್ತು. ಇಂಗ್ಲಿಷಿನಲ್ಲಿ ಕಾಶೂ ಅಥವಾ ಕ್ಯಾಟಿಚೂ ಎಂಬ ಹೆಸರಿಂದಲೂ ಕರೆವುದುಂಟು. ಇಂಗ್ಲಿಷ್ ಹೆಸರು ಕನ್ನಡದ ಕಾಚು ಪದದಿಂದಲೇ ಬಂದುದು. ಇದರ ವಿಷಯವಾಗಿ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖವಿದೆ. ಸಂಸ್ಕೃತದಲ್ಲಿ ಇದನ್ನು ಖರಸಾರ ಎಂದು ಕರೆಯುವರು. ಕಾಚಿನಲ್ಲಿ ಹಲವಾರು ಬಗೆಗಳಿವೆ. ಇವುಗಳಲ್ಲಿ ಎರಡು ಬಗೆಗಳನ್ನು ಕಗ್ಗಲಿ ಮರದಿಂದ (ಅಕೇಸಿಯ ಕ್ಯಾಟಿಚೂ) ತೆಗೆಯುತ್ತಾರೆ. ಇದಕ್ಕೆ ಬಂಗಾಳೀ ಕಾಚು ಎಂಬ ಹೆಸರೂ ಇದೆ. ಇನ್ನೊಂದು ವಿಧವಾದ ಕಾಚನ್ನು ಗ್ಯಾಂಬಿಯರ್ ಗಿಡದಿಂದ (ಆಂಕೇರಿಯ ಗ್ಯಾಂಬಿಯರ್) ತೆಗೆಯುತ್ತಾರೆ. ಇದಕ್ಕೆ ಗ್ಯಾಂಬಿಂಯರ್ ಕಾಚು ಎಂದು ಹೆಸರು. ಅಡಕೆಯಿಂದಲೂ ಒಂದು ಬಗೆಯ ಕಾಚನ್ನು ತಯಾರಿಸುವುದುಂಟು. ಇದನ್ನು ಬಾಂಬೆ ಕಾಚು ಎಂದು ಕರೆಯಲಾಗುತ್ತದೆ.
ಕಾಚನ್ನು ಕಗ್ಗಲಿ ಮರದ ಎಲೆ, ಕಾಯಿ ಮತ್ತು ಕಾಂಡಗಳಿಂದ ಪಡೆಯಬಹುದಾದರೂ ಮುಖ್ಯವಾಗಿ ಕಾಂಡದ ಚೇಗುಭಾಗದಿಂದ (ಹಾರ್ಟ್‍ವುಡ್) ಮಾತ್ರ ಇದನ್ನು ತಯಾರಿಸುತ್ತಾರೆ. ಚೇಗುಭಾಗವನ್ನು ಬೇರ್ಪಡಿಸಿ ಸಣ್ಣ ಚೂರುಗಳಾಗಿ ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸುತ್ತಾರೆ. ಚೇಗಿನಲ್ಲಿದ್ದ ಕಾಚೆಲ್ಲ ನೀರಿಗೆ ವರ್ಗಾವಣೆಯಾಗುತ್ತದೆ. ಈ ದ್ರಾವಣವನ್ನು ಹಾಗೆಯೇ ಕುದಿಸಿದರೆ ನೀರೆಲ್ಲ ಆವಿಯಾಗಿ ದ್ರಾವಣ ಕ್ರಮೇಣ ಗಟ್ಟಿಯಾಗತೊಡಗುತ್ತದೆ. ಆಗ ಇದನ್ನು ಬಾಣಲೆಗಳಿಗೆ ಸುರಿದು ಕೆಲವು ದಿನ ಹಾಗೇ ಇಡುತ್ತಾರೆ. ನಿಧಾನವಾಗಿ ಕಾಚೆಲ್ಲ ಗಟ್ಟಿಯಾಗಿ ತಳದಲ್ಲಿ ಸಂಗ್ರಹವಾಗುತ್ತದೆ. ಮೇಲೆ ನಿಂತಿರುವ ತಿಳಿನೀರನ್ನು ಬಸಿದು ತಳದಲ್ಲಿನ ಕಾಚನ್ನು ಶೇಖರಿಸುತ್ತಾರೆ. ಹೀಗೆ ಶೇಖರಿಸಿದ ಕಾಚು ಹಪ್ಪಳದ ರೀತಿ ಇರುತ್ತದೆ. ಸಣ್ಣ ಸಣ ಚೂರುಗಳಾಗಿ ಅಥವಾ ಗುಂಡನೆಯ ಬಿಲ್ಲೆಗಳಾಗಿ ಕತ್ತರಿಸಿ ಇದನ್ನು ಮಾರುಕಟ್ಟೆಗೆ ಕಳಿಸುತ್ತಾರೆ. ಕಾಚಿಗೆ ಕೆಂಪು, ನಸುಗೆಂಪು, ಕಂದು, ಬೂದು ಇತ್ಯಾದಿ ಹಲವಾರು ಬಣ್ಣಗಳುಂಟು. ಕಾಚನ್ನು ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಬಣ್ಣ ಕೊಡುವುದಕ್ಕೂ ಚರ್ಮ ಹದ ಮಾಡುವುದಕ್ಕೂ ಕ್ಯಾಲಿಕೊ ಮುದ್ರಣದಲ್ಲೂ ಉಪಯೋಗಿಸುತ್ತಾರೆ. ಇದರಿಂದ ಕಾಕಿ ಣ್ಣವನ್ನೂ ಪಡೆಯುತ್ತಾರೆ. ತಾಂಬೂಲದೊಂದಿಗೆ ಕಾಚನ್ನು ಸೇವಿಸುವ ರೂಢಿ ಭಾರತದ ಎಲ್ಲ ಪ್ರದೇಶಗಳಲ್ಲೂ ಇದೆ. ಇದಕ್ಕೆ ಔಷಧೀಯ ಮಹತ್ತ್ವವೂ ಇದೆ. ಇದು ಒಳ್ಳೆಯ ಪ್ರತಿಬಂಧಕ (ಆಸ್ಟ್ರಿಂಜೆಂಟ್) ಎಂದು ಹೆಸರುಪಡೆದಿದೆ. ಇದನ್ನು ಕೆಮ್ಮು, ಅತಿಸಾರ ಮುಂತಾದ ರೋಗಗಳ ನಿವಾರಣೆಗೂ ವಸಡುಗಳ ಪುಷ್ಟಿಗೂ ಬಳಸುತ್ತಾರೆ. ಹುಣ್ಣು, ಬೊಬ್ಬೆ ಮುಂvದವುಗಳಿಗೂ ಹಚ್ಚಲೂ ಇದನ್ನು ಉಪಯೋಗಿಸುವುದುಂಟು.
ವಯಸ್ಸಾದ ಕಗ್ಗಲಿ ಮರಗಳಿಂದ ಬರುವ ಕಾಚು ಹರಳುರೂಪದಲ್ಲಿರುತ್ತದೆ. ಇದನ್ನು ಕಿರಸಾಲ್ ಎನ್ನುತ್ತಾರೆ. ಇದು ಬಹಳ ಬೆಲೆಬಾಳುವ ವಸ್ತು. ಇದನ್ನು ಕೆಮ್ಮು, ಗಂಟಲಿನ ಹುಣ್ಣು ಮುಂತಾದವುಗಳಿಗೆ ಔಷಧಿಗಾಗಿ ಉಪಯೋಗಿಸುತ್ತಾರೆ.