ಕಶೇರುಕ ಭ್ರೂಣವಿಜ್ಞಾನ

ಕಶೇರುಕ ಭ್ರೂಣವಿಜ್ಞಾನ : ಪ್ರಾಣಿಗಳೆಲ್ಲಕ್ಕೂ ಸಂಬಂಧಿಸಿದಂತೆ ಭ್ರೂಣಶಾಸ್ತ್ರದ ಅಭ್ಯಾಸ ಸೂತ್ರಗಳು ಒಂದೇ. ಅಂಡಾಣು ಮತ್ತು ಪುರುಷಾಣುಗಳು ಕೂಡಿ ನಿಶೇಚನ ನಡೆದು ರೂಪುಗೊಳ್ಳುವ ಸಂಯುಕ್ತವೇ ಬೀಜಾಣು. ಇದು ಎಲ್ಲ ಲಕ್ಷಣಗಳಲ್ಲಿಯೂ ಒಂದು ಜೀವಕೋಶ. ಇರಬಹುದಾದ ವ್ಯತ್ಯಾಸವೆಂದರೆ ಬೆಳೆವಣಿಗೆಯ ಕಾಲದಲ್ಲಿ ಅವಶ್ಯಕವಾದ ಆಹಾರವನ್ನೊದಗಿಸಲು ತಾಯಿ ಪ್ರಾಣಿ ಈ ಮೊಟ್ಟೆಗಳಲ್ಲಿ ಬಂಡಾರ, ಆಲ್ ಬ್ಯುಮೆನ್ ಮುಂತಾದ ಮೀಸಲು ಆಹಾರ ಪದಾರ್ಥಗಳನ್ನು ಕೂಡಿಟ್ಟಿರುವುದರಲ್ಲಿ. ಹೀಗೆ ಬೀಜಾಣು ಏಕಕೋಶರೂಪಿಯಾಗಿ ತನ್ನ ಬೆಳೆವಣಿಗೆಯನ್ನು ಆರಂಭಿಸಿ ಅನೇಕ ಬದಲಾವಣೆಗಳ ಅನಂತರ ಪ್ರೌಢಾವಸ್ಥೆ ತಲುಪುತ್ತದೆ. ಈ ಬದಲಾವಣೆಗಳ ಅಭ್ಯಾಸವೇ ಭ್ರೂಣಶಾಸ್ತ್ರದ ಮೂಲ ಉದ್ದೇಶ. ಬೆಳೆವಣಿಗೆಯ ಕಾಲದಲ್ಲಿ ಬೀಜಾಣು ಮೊದಲು ಬಹುಕೋಶರೂಪಿಯಾಗಿ ಅನಂತರ ಅಂಗಾಂಶಗಳನ್ನೂ ಅಂಗ ಸಮೂಹಗಳನ್ನೂ ಬೆಳೆಸಿಕೊಳ್ಳುತ್ತದೆ. ಈ ಕಾಲದಲ್ಲಿ ಮೈಟಾಸಿಸ್ ವಿಭಜನೆಗಳು ನಡೆದು ಒಂದಾಗಿದ್ದ ಸಂಯುಕ್ತಬೀಜಾಣು ಎರಡಾಗಿ, ಎರಡು ನಾಲ್ಕಾಗಿ, ಎಂಟಾಗಿ, ಹೀಗೆ ಕ್ರಮವಾದ ರೀತಿಯಲ್ಲಿ ವಿಭಜನೆಗಳು ನಡೆಯುತ್ತವೆ. ಈ ಅವಸ್ಥೆಗೆ ವಿದಳನ (ಕ್ಲೀವೇಜ್) ಎಂದು ಹೆಸರು. ಇದರ ಪರಿಣಾಮವಾಗಿ ಟೊಳ್ಳಾದ ಚೆಂಡಿನಂತಿರುವ ಒಂದು ರಚನೆ ರೂಪುಗೊಳ್ಳುತ್ತದೆ. ಇದಕ್ಕೆ ಬ್ಲಾಸ್ಟ್ಯುಲ ಎಂದು ಹೆಸರು. ಇದರ ಒಳಗಿರುವ ಅವಕಾಶಕ್ಕೆ ಬ್ಲಾಸ್ಟೊಸೀಲ್ ಎಂದು ಹೆಸರು. ಇದರ ಸುತ್ತಲೂ ಒಂದು ಜೀವಕೋಶ ಪದರವಿರುತ್ತದೆ. ಬೆಳೆವಣಿಗೆ ಮುಂದುವರಿದು ಒಂದು ಪದರದ ರಚನೆ ಬಹುಪದರ ರಚನೆಯಾಗಿ ಬದಲಾಗುತ್ತದೆ. ಈ ಕಾಲದಲ್ಲಿ ಮೂಲ ಪದರಗಳು ಕಾಣಿಸಿಕೊಳ್ಳುತ್ತವೆ. ಈ ರಚನೆಗೆ ಗ್ಯಾಸ್ಟ್ರುಲ ಎಂದು ಹೆಸರು. ಇದು ರೂಪಗೊಳ್ಳುವ ಕ್ರಿಯಾವಿಶೇಷಕ್ಕೆ ಗ್ಯಾಸ್ಟ್ರಲೀಕರಣ ಎಂದು ಹೆಸರು. ಈ ಕ್ರಿಯಾ ವಿಶೇಷದ ಕಾಲದಲ್ಲಿ ಬ್ಲಾಸ್ಟುಲದಲ್ಲಿರುವ ವಿವಿಧ ಜೀವಕೋಶಗಳು ಸ್ಥಾನಪಲ್ಲಟವಾಗಿ ಬ್ಲಾಸ್ಟೊಸೀಲ್ ಅವಕಾಶದ ಮೂಲಕ ತಮ್ಮ ಭವಿಷ್ಯದ ನಿರ್ದಿಷ್ಟ ಸ್ಥಾನಗಳಿಗೆ ಚಲಿಸಿ, ಭ್ರೂಣದ ಮುಂದಿನ ಬೆಳೆವಣಿಗೆಯಲ್ಲಿ ತಾವು ನಿರ್ವಹಿಸಬೇಕಾದ ಪಾತ್ರಕ್ಕೆ ಸಿದ್ಧವಾಗುತ್ತವೆ. ಈ ಅವಸ್ಥೆಯಲ್ಲಿ ಹೊರದರ್ಮ, ಒಳದರ್ಮ ಮತ್ತು ನಡುದರ್ಮಗಳೆಂಬ ಮೂರು ಮೂಲ ಪದರಗಳು ಕಾಣಿಸಿಕೊಳ್ಳುತ್ತವೆ. ಇದು ಎರಡು ಭಿತ್ತಿಯ ಬಟ್ಟಲಿನಾಕಾರದಲ್ಲಿರಬಹುದು ಅಥವಾ ಬಹು ಪದರದ ಕುಹರವನ್ನೊಳಗೊಂಡ ಸಂಕೀರ್ಣರಚನೆಯಾಗಿರಬಹುದು. ಒಳಗಿನ ಈ ಕುಹರಕ್ಕೆ ಆರ್ಕೆಂಟರಾನ್ ಎಂದು ಹೆಸರು. ಇದು ಬ್ಲಾಸ್ಟೊಫೋರ್ ಎಂಬ ತೆರಪಿನ ಮೂಲಕ ಹೊರಕ್ಕೆ ತೆರೆಯುತ್ತದೆ. ಇದರ ಸುತ್ತಲೂ ಮೇಲಿನ (ಡಾರ್ಸಲ್), ಕೆಳಗಿನ (ವೆಂಟ್ರಲ್) ಮತ್ತು ಪಾಶರ್ವ್‌ದ ತುಟಿಗಳು ಎಂಬ ರಚನೆಗಳನ್ನು ಗುರುತಿಸಬಹುದು. ಆರ್ಕೆಂಟರಾನ್ ಕುಹರವೇ ಮುಂದೆ ಪ್ರೌಢಜೀವಿಯ ಅನ್ನನಾಳವಾಗಿ ರೂಪಗೊಳ್ಳುತ್ತದೆ. ಅನಂತರ ಹೊರದರ್ಮದ ಒಂದು ಭಾಗ ಒಳಕ್ಕೆ ಚಾಚಿಕೊಂಡು ಇತರ ಜೀವಕೋಶಗಳಿಂದ ಬೇರ್ಪಟ್ಟು ಒಂದು ನಳಿಕೆಯ ರೂಪತಾಳುತ್ತದೆ. ಇದೇ ನರನಳಿಕೆ ಅಥವಾ ಮೆಡ್ಯುಲರಿ ನಳಿಕೆ. ಈ ಅವಸ್ಥೆಗೆ ನ್ಯೂರುಲ ಎಂದು ಹೆಸರು. ಈ ಕ್ರಿಯಾವಿಶೇಷಕ್ಕೆ ನ್ಯೂರುಲೇಷನ್ ಎಂದು ಕರೆಯುತ್ತಾರೆ. ಮುಂದೆ ಉಳಿದ ಅಂಗಸಮೂಹಗಳು ಭ್ರೂಣದ ಲಂಬ ಅಕ್ಷದಲ್ಲಿ ವ್ಯವಸ್ಥಿತವಾದ ನಾಳಗಳಂತೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ನಳೀಕರಣ ಎಂದು ಹೆಸರು. ಅನಂತರ ಈ ನಳಿಕೆಗಳ ವಿವಿಧ ಭಾಗಗಳು ಕ್ರಮವಾದ ಅಂಗಾಂಗಗಳಾಗಿ ರೂಪಗೊಳ್ಳುತ್ತವೆ. ಇದನ್ನು ಅಂಗೋತ್ಪತ್ತಿ (ಆರ್ಗನೋಜೆನಿಸಿಸ್) ಎಂದು ಕರೆಯುತ್ತಾರೆ. ಅಂಗಸಮೂಹಗಳ ಬೆಳೆವಣಿಗೆ ಪೂರ್ಣವಾದಮೇಲೆ ಪ್ರಬುದ್ಧಾವಸ್ಥೆಯ ರೂಪಪರಚನೆಯ ಕ್ರಿಯೆ ನಡೆಯುತ್ತದೆ. ಇದೇ ರೂಪೋದ್ಭವ ಅಥವಾ ಮಾರ್ಫೋಜೆನಿಸಿಸ್.

ಇದು ಸ್ಥೂಲವಾಗಿ ತಿಳಿಸಬಹುದಾದ ಕಶೇರುಕಗಳ ಮಾದರಿ ಬೆಳೆವಣಿಗೆಯ ವಿಧಾನ. ವಿವಿಧ ಗುಂಪುಗಳಲ್ಲಿ, ಅವುಗಳ ಸಂತಾನೋತ್ಪತ್ತಿಯ ಕ್ರಮವನ್ನನುಸರಿಸಿ ವ್ಯತ್ಯಾಸಗಳಿವೆ. ಉದಾಹರಣೆಗೆ, ಸ್ತನಿಗಳ ವಿನಾ ಮಿಕ್ಕೆಲ್ಲ ಪ್ರಾಣಿಗಳಲ್ಲಿ ಬೆಳೆವಣಿಗೆ ತಾಯಿ ದೇಹದ ಹೊರಗೆ ನಡೆಯುತ್ತದೆ. ಆದ್ದರಿಂದ ಇಲ್ಲಿ ವಿಶಿಷ್ಟ ವ್ಯತ್ಯಾಸಗಳಿವೆ. ಕಪ್ಪೆಗಳಿಗೂ ಪಕ್ಷಿಗಳಿಗೂ ಇನ್ನೊಂದು ರೀತಿಯ ವ್ಯತ್ಯಾಸ ಕಾಣಬರುತ್ತದೆ. ಕಪ್ಪೆಯ ಮೊಟ್ಟೆಗಳು ನೀರಿನಲ್ಲಿ ಬೆಳೆಯುತ್ತವೆ. ಆದ್ದರಿಂದ ಅವು ಬೆಳೆವಣಿಗೆಯ ಕಾಲದಲ್ಲಿ ತಮಗೆ ಆವಶ್ಯಕವಾಗುವ ನೀರು, ಲವಣಗಳು ಮತ್ತು ಆಹಾರದ ಸ್ವಲ್ಪ ಭಾಗವನ್ನು ನೀರಿನಿಂದಲೇ ಪಡೆಯಬಹುದು. ಇದರಿಂದಾಗಿ ತಾಯಿ ಮೊಟ್ಟೆಗಳನ್ನಿಡುವಾಗ ಇವೆಲ್ಲವನ್ನೂ ಒದಗಿಸುವ ಶ್ರಮವಹಿಸುವುದಿಲ್ಲ. ಸ್ವಲ್ಪ ಮಾತ್ರ ಮೀಸಲು ಆಹಾರವನ್ನು ಬಂಡಾರದ ರೂಪದಲ್ಲಿ ಸಂಗ್ರಹಿಸಿರುತ್ತದೆ. ಆದರೆ ಪಕ್ಷಿಗಳ ಮತ್ತು ಸರೀಸೃಪಗಳ ಮೊಟ್ಟೆಗಳು ನೆಲದ ಮೇಲೆ ಬೆಳೆಯುತ್ತವೆ. ಆಮ್ಲಜನಕವೊಂದರ ವಿನಾ ಇನ್ನೇನನ್ನೂ ಈ ಭ್ರೂಣಗಳು ಸುತ್ತಲ ಪರಿಸರದಿಂದ ಪಡೆಯಲಾರವು. ಆದ್ದರಿಂದ ತಾಯಿ ಈ ಮೊಟ್ಟೆಗಳ ಪೂರ್ಣ ಬೆಳೆವಣಿಗೆಗೆ ಆವಶ್ಯಕವಾದ ವಸ್ತುಗಳನ್ನು ಮೊಟ್ಟೆಯಲ್ಲಿ ಶೇಖರಿಸಿಡುತ್ತದೆ. ಇದರಿಂದಾಗಿ ಮೊಟ್ಟೆಗಳು ಗಾತ್ರದಲ್ಲಿ ದೊಡ್ಡವಾಗುತ್ತವೆ. ಕಪ್ಪೆಗಳಲ್ಲಿಯಾದರೋ ಬೆಳೆವಣಿಗೆ ಬೇಗ ಮುಗಿದು ಡಿಂಭಾವಸ್ಥೆಯಲ್ಲಿ ತನ್ನ ಆಹಾರವನ್ನು ತಾನೇ ಗಳಿಸಿಕೊಂಡು ರೂಪಪರಿವರ್ತನೆ ಹೊಂದಬಹುದು. ಇದು ಪಕ್ಷಿಗಳಲ್ಲಿ ಸಾಧ್ಯವಿಲ್ಲ. ಆದ್ದರಿಂದ ಸಂಪೂರ್ಣ ಬೆಳೆವಣಿಗೆ ಮೊಟ್ಟೆಯೊಳಗೇ ನಡೆಯುತ್ತದೆ. ಸ್ತನಿಗಳಲ್ಲಿ ಬೆಳೆವಣಿಗೆ ತಾಯಿಯ ದೇಹದ ಒಳಗೆ, ಅಂದರೆ ಗರ್ಭಕೋಶದಲ್ಲಿ ನಡೆಯುತ್ತದೆ. ಈ ಕಾಲದಲ್ಲಿ ಭ್ರೂಣ ಕೆಲವು ವಿಶೇಷ ರಚನೆಗಳ ಮೂಲಕ ಗರ್ಭಕೋಶದ ಭಿತ್ತಿಯೊಡನೆ ಸಂಬಂಧ ಬೆಳೆಸಿ ತಾಯಿಯಿಂದ ಪೋಷಕ ವಸ್ತುಗಳನ್ನು ಮತ್ತು ಆಮ್ಲಜನಕವನ್ನು ಪಡೆಯುತ್ತದೆ. ಅದೇ ರಚನೆಯ ಮೂಲಕ ಮಲಿನ ವಸ್ತುಗಳನ್ನು ಮತ್ತು ಇಂಗಾಲದ ಡೈಆಕ್ಸೈಡನ್ನು ವಿಸರ್ಜಿಸುತ್ತದೆ. ಈ ರಚನೆಗೆ ಗರ್ಭವೇಷ್ಟಿ ಅಥವಾ ಫ್ಲಾಸೆಂಟ ಎಂದು ಹೆಸರು. ತಾಯಿ ಬೆಳೆಯುತ್ತಿರುವ ಭ್ರೂಣದ ಆವಶ್ಯಕತೆಗಳನ್ನೆಲ್ಲ ಹೀಗೆ ಪುರೈಸುವುದರಿಂದ ತತ್ತಿಗಳಲ್ಲಿ ಯಾವ ರೀತಿಯ ಮೀಸಲು ಪೋಷಕವಸ್ತುಗಳನ್ನೂ ಸಂಗ್ರಹಿಸುವುದಿಲ್ಲ. ಆದ್ದರಿಂದ ಇವುಗಳ ಬೆಳೆವಣಿಗೆಯ ಜಾಡೇ ಭಿನ್ನವಾದುದು.

ನಿಶೇಚನೆಯ ಮೂಲಕ ಪುರುಷಾಣು ತತ್ತಿಯ ಬೆಳೆವಣಿಗೆಯನ್ನು ಆರಂಭಿಸಲು ಪ್ರಚೋದನೆಯನ್ನು ಒದಗಿಸುತ್ತದೆ. ವಿಭಜನೆಗಳ ಮೂಲಕ ತತ್ತಿ ಸಂಖ್ಯೆಯಲ್ಲಿ ವೃದ್ಧಿಯಾಗುತ್ತದೆ. ಈ ಕ್ರಿಯೆಗೆ ವಿದಳನ ಎಂದು ಹೆಸರು. ಹೀಗೆ ಉತ್ಪತ್ತಿಯಾಗುವ ಜೀವಕೋಶಗಳಿಗೆ ಬ್ಲಾಸ್ಟೋಮಿಯರ್ಗಳೆಂದು ಹೆಸರು. ವಿದಳನ ಪೂರ್ಣವಾಗಿರಬಹುದು ಅಥವಾ ಅಪೂರ್ಣವಾಗಿರಬಹುದು. ಪೂರ್ಣವಿದಳನದಲ್ಲಿ ಸಂಪೂರ್ಣ ತತ್ತಿ ವಿಭಾಗವಾಗುತ್ತದೆ. ಕಪ್ಪೆಗಳ ಮೊಟ್ಟೆಗಳು ಇದಕ್ಕೆ ಉದಾಹರಣೆ. ಕೆಲವು ಸಾರಿ ವಿದಳನ ಅಪೂರ್ಣವಾಗಿ ತತ್ತಿಯ ಸ್ವಲ್ಪಭಾಗ ಮಾತ್ರ ವಿಭಾಗವಾಗಬಹುದು ಮತ್ತು ಉಳಿದ ಭಾಗ ವಿಭಾಗವಾಗದೇ ಉಳಿಯಬಹುದು. ಪಕ್ಷಿಗಳ ಮೊಟ್ಟೆಗಳ ವಿದಳನೆಯಲ್ಲಿ ಈ ರೀತಿಯನ್ನು ಕಾಣಬಹುದು. ಹೇರಳವಾಗಿರುವ ಬಂಡಾರ ಸಂಪೂರ್ಣ ವಿದಳನಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಕೋಶದ್ರವ್ಯ ಇರುವ ಭಾಗ ಮಾತ್ರ ವಿದಳನದಲ್ಲಿ ಭಾಗವಹಿಸುತ್ತದೆ. ಬಂಡಾರ ಇನ್ನೂ ಅಧಿಕವಾಗಿರುವ ಟೆಲಿಯಾಸ್ಟಿಯೈ ಗುಂಪುಗಳ ಮೀನುಗಳಲ್ಲಿ ವಿದಳನ ತತ್ತಿಯಲ್ಲಿ ಮೇಲೆ ಸ್ವಲ್ಪಭಾಗಕ್ಕೆ ಮಾತ್ರ ಮೀಸಲಾಗಿರುತ್ತದೆ. ಇದಕ್ಕೆ ಮೇಲ್ಮೈವಿದಳನ ಎಂದು ಹೆಸರು. ಸಂಪೂರ್ಣ ವಿದಳನವನ್ನು ಹೋಲೊಬ್ಲಾಸ್ಟಿಕ್ ಎಂದೂ ಪಾಶರ್ವ್‌ಕ ವಿದಳನವನ್ನು ಮೀರೊಬ್ಲಾಸ್ಟಿಕ್ ಎಂದೂ ಕರೆಯುತ್ತಾರೆ. ವಿದಳನ ಕಾಲದಲ್ಲಿ ತತ್ತಿ ವಿಭಾಗವಾಗುವ ಮತ್ತು ವಿಭಜನೆಯ ರೇಖೆ ಕಾಣಿಸಿಕೊಳ್ಳುವ ರೀತಿಯಲ್ಲಿ ಅನೇಕ ವ್ಯತ್ಯಾಸಗಳಿವೆ:

೧ ರೇಖಾಂಶಿಕ (ಮೆರಿಡಿಯೋನಲ್) ವಿದಳನ : ಇದರಲ್ಲಿ ವಿಭಜರೇಖೆ ತತ್ತಿಯ ಎರಡೂ ದ್ರುವ ಭಾಗಗಳನ್ನು ಸಂಧಿಸುತ್ತದೆ ಮತ್ತು ಅದರ ಕೇಂದ್ರದ ಮೂಲಕ ಅಥವಾ ಮಧ್ಯ ಅಕ್ಷದ ಮೂಲಕ ಹಾದುಹೋಗುತ್ತದೆ. ಕಪ್ಪೆಗಳಲ್ಲಿ ನಡೆಯುವ ಮೊದಲೆರಡು ವಿದಳನಗಳು ಈ ರೀತಿಯವು.

೨ ನೇರವಾದ ವಿದಳನ : ಇದು ರೇಖಾಂಶಿಕದಂತೆಯೇ ನಡೆದರೂ ವಿಭಜನ ರೇಖೆ ಪ್ರಾಣಿಧೃವದಿಂದ ವೆಜಿಟಲ್ ಧೃವದ ಕಡೆಗೆ ವಿಸ್ತರಿಸುತ್ತದೆ. ಇದು ತತ್ತಿಯ ಮಧ್ಯ ಅಕ್ಷದ ಮೂಲಕ ಹಾದು ಹೋಗದೆ ಅದರ ಪಕ್ಕದಲ್ಲಿ ಹಾದು ಹೋಗುತ್ತದೆ. ಈ ರೀತಿಯ ವಿದಳನ ಕೆಲವು ಮೂಳೆ ಮೀನುಗಳಲ್ಲಿ ನಡೆಯುತ್ತದೆ (ಏಮಿಯಾ ಮತ್ತು ಲೆಫಿಸೋಸ್ಪಿಯಸ್).

೩ ಸಮಭಾಜಕ ವಿದಳನ: ಇದು ಮಧ್ಯ ಅಕ್ಷದ ಸಮಕೋನದಲ್ಲಿ ತತ್ತಿಯನ್ನು ಎರಡು ಭಾಗಗಳಾಗಿ ವಿಭಾಗಿಸುತ್ತದೆ. ಆಂಬ್ಲಿಸ್ಟೋಮ ತತ್ತಿಯಲ್ಲಿ ಐದನೆಯ ವಿದಳನ ಈ ರೀತಿಯನ್ನು ಅನುಸರಿಸುತ್ತದೆ.

೪ ಅಕ್ಷಾಂಶಿಕ ವಿದಳನ: ಇದು ಸಮಭಾಜಕ ವಿದಳನದಂತೆಯೇ ಇದ್ದರೂ ಸಮಭಾಜಕಕ್ಷೇತ್ರದ ಅಕ್ಕಪಕ್ಕಗಳಲ್ಲಿ ಹಾದು ಹೋಗುತ್ತದೆ. ಕಪ್ಪೆಯ ತತ್ತಿಯ ಮೂರನೆಯ ವಿದಳನ ಈ ರೀತಿಯನ್ನು ಅನುಸರಿಸುತ್ತದೆ. ಇದರ ಫಲವಾಗಿ ಅಸಮವಾದ ಬ್ಲಾಸ್ಟೊಮಿಯರ್ಗಳು ಉತ್ಪತ್ತಿಯಾಗುತ್ತವೆ. ಇದರಿಂದ ಕೆಲವು ಕೋಶಗಳು ಸಣ್ಣವೂ ಮತ್ತು ಕೆಲವು ದೊಡ್ಡವಾಗಿಯೂ ಇರುತ್ತವೆ. ಇವನ್ನು ಕ್ರಮವಾಗಿ ಮೈಕ್ರೊಮಿಯರ್ ಮತ್ತು ಮ್ಯಾಕ್ರೊಮಿಯರ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮೈಕ್ರೊಮಿಯರ್ಗಳು ಪ್ರಾಣಿಧ್ರುವದ ಕಡೆಗೂ ಮ್ಯಾಕ್ರೊಮಿಯರ್ಗಳು ವೆಜಿಟಲ್ಧೃವದ ಕಡೆಗೂ ಇರುತ್ತವೆ. ಕೆಲವು ಅಂಶಗಳು ವಿದಳನದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಇವು ಹೊರ ಅಂಶಗಳಾಗಿರಬಹುದು ಅಥವಾ ತತ್ತಿಯ ಒಳಗಿರುವ ಅಂಶಗಳೇ ಆಗಿರಬಹುದು.

ಸುತ್ತಲ ಪರಿಸರದ ಉಷ್ಣತೆ ತತ್ತಿಗಳ ವಿದಳನದ ವೇಗದ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಕಪ್ಪೆಯ ತತ್ತಿಯಲ್ಲಿ ೯೦ ಮಿನಿಟುಗಳ ಅಂತರದಲ್ಲಿ ವಿದಳನಗಳು ನಡೆಯುತ್ತವೆ. ಉಷ್ಣತೆಯನ್ನು ಹೆಚ್ಚಿಸಿದಾಗ ವಿದಳನ ವೇಗವಾಗಿಯೂ ಕಡಿಮೆಮಾಡಿದಾಗ ನಿಧಾನವಾಗಿಯೂ ನಡೆಯುತ್ತದೆ.

ವಿದಳನದ ಮೇಲೆ ಪ್ರಭಾವ ಬೀರುವ ಪ್ರಧಾನ ಆಂತರಿಕ ಅಂಶ ತತ್ತಿಯ ಒಳಗಿರುವ ಬಂಡಾರ. ಇದು ಸಜೀವ ವಸ್ತುವಲ್ಲ. ಇದು ಜಡ ಪದಾರ್ಥ. ವಿದಳನ ಕಾಲದಲ್ಲಿ ಇದು ಅಡ್ಡಬಂದು ಅದನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿಯೇ ಕಪ್ಪೆಯ ಮ್ಯಾಕ್ರೊಮಿಯರ್ ಜೀವಕೋಶಗಳು ನಿಧಾನವಾಗಿ ವಿದಳನವಾಗುತ್ತವೆ; ಮತ್ತು ಪಕ್ಷಿಗಳ ತತ್ತಿಯಲ್ಲಿ ಬಂಡಾರವಿರುವ ಭಾಗದಲ್ಲಿ ವಿದಳನವೇ ನಡೆಯುವುದಿಲ್ಲ. ಬಂಡಾರವು ವಿದಳನವನ್ನು ಕುಂಠಿತಗೊಳಿಸುವುದೇ ಅಲ್ಲದೆ ವಿದಳನವಿಧಾನವನ್ನು ಸಹ ಬದಲಾಯಿಸುತ್ತದೆ. ತತ್ತಿಯ ರಚನಾವಿನ್ಯಾಸವೂ ಒಂದು ಆಂತರಿಕ ಅಂಶವಾಗಿ ವಿದಳನವನ್ನು ಮಾರ್ಪಡಿಸುತ್ತದೆ. ವಿದಳನ ರೀತಿ ತಾಯಿಯಿಂದ ಬಂದ ಆನುವಂಶಿಕ ಲಕ್ಷಣ. ಇದು ಓವಂನಲ್ಲಿರುವ ಕೋಶಿದ್ರವ್ಯದ ಮೂಲಕ ಬರುವ ಕೊಡುಗೆ.

ವಿದಳನ ನಿಯಮಗಳು: ವಿದಳನ ರೀತಿಗಳನ್ನು ಅವುಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ವಿಭಜನೆಯ ಕಾಲದಲ್ಲಿ ಜೀವಕೋಶಗಳ ವರ್ತನೆಯ ಬಗೆಗೆ ಕೆಲವು ನಿಯಮಗಳನ್ನು ಪ್ರತಿಪಾದಿಸಿದ್ದಾರೆ. ಇವು ಕೇವಲ ಪ್ರವೃತ್ತಿಯನ್ನು ಪ್ರತಿನಿಧಿಸುವುದೇ ಹೊರತು ವಾಸ್ತವ ಅಂಶಗಳನ್ನು ಪ್ರತಿಪಾದಿಸುವುದಿಲ್ಲ. ೧ ಸಾಕೆಯ ನಿಬಂಧನೆಗಳು: (ಅ) ಜೀವಕೋಶಗಳು ಸಮವಾದ ಮರಿ ಜೀವಕೋಶಗಳಾಗಿ ವಿಭಾಗವಾಗುವ ಪ್ರವೃತ್ತಿಯನ್ನು ತೋರಿಸುತ್ತವೆ. (ಆ) ಪ್ರತಿ ಹೊಸ ವಿದಳನದ ಜಾಡು ಹಿಂದಿನದನ್ನು ಸಮಕೋನದಲ್ಲಿ ವಿಭಜನೆಗೊಳ್ಳುವ ಪ್ರವೃತ್ತಿಯನ್ನು ತೋರುತ್ತದೆ. ೨ ಹರ್ಟ್‌ವಿಗ್ನ ನಿಯಮಗಳು: (ಅ) ಸಾಮಾನ್ಯವಾಗಿ ಒಂದು ನ್ಯೂಕ್ಲಿಯಸ್ ತನ್ನ ಸ್ವಸ್ಥಾನದಲ್ಲಿ ತನ್ನ ಪ್ರಭಾವವನ್ನು ಬೀರುವ ಜೀವರಸ ರಾಶಿಯ ಕೇಂದ್ರದಲ್ಲಿರುವ ಪ್ರವೃತ್ತಿಯನ್ನು ತೋರುತ್ತದೆ. (ಆ) ವಿಭಜನೆಯ ಕಾಲದಲ್ಲಿ ಕಾಣಿಸಿಕೊಳ್ಳುವ ಮೈಟೊಟಿಕ್ ಕದಿರಿನ ಲಂಬಾಕ್ಷ ಜೀವರಸರಾಶಿಯ ಲಂಬಾಕ್ಷಕ್ಕೆ ಅನುವಾಗಿರುತ್ತದೆ. ಆದ್ದರಿಂದ ವಿಭಜನೆಯಲ್ಲಿ ಜೀವರಸರಾಶಿಯ ಲಂಬಾಕ್ಷವನ್ನು ಅಡ್ಡಸೀಳುವ ಪ್ರವೃತಿಯನ್ನು ತೋರುತ್ತದೆ. ವಿದಳನದ ಫಲವಾಗಿ ಬ್ಲಾಸ್ಟ್ಯುಲ ರಚನೆ ರೂಪಗೊಳ್ಳುತ್ತದೆ. ಇದು ವಿವಿಧ ಕಶೇರುಕಗಳಲ್ಲಿ ಬಂಡಾರದ ಪ್ರಮಾಣಕ್ಕನುಗುಣವಾಗಿ ರಚನಾ ವ್ಯತ್ಯಾಸ ತೋರುತ್ತದೆ. ಕಪ್ಪೆಗಳಲ್ಲಿ ಟೊಳ್ಳಾದ ಚೆಂಡಿನಂತಿರುವ ರಚನೆ ರೂಪುಗೊಳ್ಳುತ್ತದೆ. ಒಳಗಿರುವ ಅವಕಾಶ ಕೇಂದ್ರಭಾಗದಲ್ಲಿರದೆ ಸ್ವಲ್ಪ ಪ್ರಾಣಿದ್ರುವಭಾಗದ ಕಡೆಗಿರುತ್ತದೆ. ಇದರ ಮೇಲ್ಚಾವಣಿಯಲ್ಲಿ ಮೈಕ್ರೊಮಿಯರ್ಗಳೂ ತಳಭಾಗದಲ್ಲಿ ಮ್ಯಾಕ್ರೊಮಿಯರ್ಗಳೂ ಇವೆ. ಪಕ್ಷಿಗಳಲ್ಲಿ ಪುರ್ತಿ ವಿದಳನ ಕ್ರಿಯೆಯಲ್ಲಿ ತತ್ತಿ ಭಾಗವಹಿಸುವುದಿಲ್ಲ. ಮೇಲ್ಭಾಗದಲ್ಲಿ ಸ್ವಲ್ಪ ಭಾಗ ಮಾತ್ರ ವಿದಳನದಲ್ಲಿ ಭಾಗವಹಿಸಿ ಜೀವಕೋಶಗಳ ತಟ್ಟೆಯಾಕಾರದ ರಚನೆ ರೂಪುಗೊಳ್ಳುತ್ತದೆ. ಇದಕ್ಕೆ ಬ್ಲಾಸ್ಟೋಡಿಸ್ಕ್‌ ಎಂದು ಹೆಸರು. ಇದರಲ್ಲಿ ಬ್ಲಾಸ್ಟೊಸೀಲ್ ಅವಕಾಶ ಇರುವುದರ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಸ್ತನಿಗಳಲ್ಲಿ ಬ್ಲಾಸ್ಟ್ಯುಲ ಒಂದು ಸಂಚಿಯ ರೂಪದಲ್ಲಿ ಇರುವುದು. ಇದಕ್ಕೆ ಬ್ಲಾಸ್ಟೊಸಿಸ್ಟ್‌ ಎಂದು ಹೆಸರು. ಎಂಟು ಜೀವಕೋಶಗಳ ಅವಸ್ಥೆಯಲ್ಲಿಯೇ ನಾಲ್ಕು ಜೀವಕೋಶಗಳ ಒಡಗೂಡಿ ಗಂಟಿನ ರೀತಿಯ ರಚನೆ ರೂಪುಗೊಳ್ಳುತ್ತದೆ. ಇದರಿಂದ ಮುಂದೆ ಬೆಳೆಯುವ ಭ್ರೂಣದ ರಚನೆಯಾಗುತ್ತದೆ. ಉಳಿದ ನಾಲ್ಕು ಜೀವಕೋಶಗಳು ವಿಸ್ತರಿಸಿ ಮೇಲೆ ತಿಳಿಸಿದ ಜೀವ ಕೋಶಗಳಗಂಟನ್ನು ಆವರಿಸಿಕೊಂಡು ಸಂಚಿಯ ರೂಪತಾಳುತ್ತವೆ. ಇವೇ ಮುಂದೆ ಟ್ರೋಪೊಬ್ಲಾಸ್ಟ್‌ ಆಗಿ ಪರಿವರ್ತನೆಗೊಂಡು ಪ್ಲಾಸೆಂಟ ರೂಪುಗೊಳ್ಳುತ್ತದೆ.


ಗ್ಯಾಸ್ಟ್ರುಲೀಕರಣ: ಒಂಟಿ ಪದರದ ಬ್ಲಾಸ್ಟ್ಯುಲದಿಂದ ಬಹುಪದರದ ರಚನೆ ರೂಪುಗೊಳ್ಳುವುದಕ್ಕೆ ಗ್ಯಾಸ್ಟ್ರುಲೀಕರಣ ಎಂದು ಹೆಸರು. ಬ್ಲಾಸ್ಟ್ಯುಲಾದ ಊಹಾ ಅಂಗರಚನ ಪ್ರದೇಶಗಳ ಪುನರ್ ವ್ಯವಸ್ಥೆ ಮತ್ತು ಪುನರ್ರಚನಾವಿನ್ಯಾಸಗಳು ನಡೆದು ಆಯಾ ಪ್ರಭೇದದ ದೇಹಮಾದರಿಗೆ ತಕ್ಕಂತೆ ಪರಿವರ್ತನೆಯಾಗಲು ಸಿದ್ಧಗೊಳಿಸುತ್ತದೆ. ಈ ಚಾಲಕಕ್ರಿಯಾವಿಶೇಷದ ಕ್ರಿಯೆಯೇ ಗ್ಯಾಸ್ಟ್ರುಲೀಕರಣವೆಂದು ನೆಲ್ಸನ್ ವಿವರಿಸುತ್ತಾನೆ (೧೯೫೩). ಈ ಹಂತದಲ್ಲಿ ಮೂರು ಮೂಲಪದರಗಳು ಉತ್ಪತ್ತಿಯಾಗುತ್ತವೆ. ಹಾಗೂ ಮುಂದಿನ ಬೆಳೆವಣಿಗೆಯ ಅಕ್ಷರೇಖೆಯ ರೂಪರೇಶೆಗಳು ಕಾಣಿಸಿಕೊಳ್ಳುತ್ತವೆ. ವಿವಿಧ ಸ್ಥಾನಗಳಲ್ಲಿದ್ದ ಜೀವಕೋಶಗಳು ಈ ಕಾಲದಲ್ಲಿ ತಮ್ಮ ಮುಂದಿನ ಸ್ಥಾನಗಳಿಗೆ ಹೊರಳಿ ವಿಭೇದೀಕರಣಕ್ಕೆ ಸಿದ್ಧವಾಗುತ್ತವೆ. ಹೀಗೆ ನಡೆಯುವ ಪಯಣದಲ್ಲಿ ಕೋಶಗಳ ಸ್ಥಳಾಂತರ ಬ್ಲಾಸ್ಟ್ಯುಲದ ಬ್ಲಾಸ್ಟೊಸೀಲ್ ಅವಕಾಶ ಪ್ರಧಾನ ಪಾತ್ರವಹಿಸುತ್ತದೆ. ಅಂದರೆ ಗ್ಯಾಸ್ಟ್ರುಲೀಕರಣ ಕಾಲದಲ್ಲಿ ವಿಂಗಡಣೆ ಮತ್ತು ವಿಭೇದೀಕರಣಕ್ಕೆ ಬೇಕಾಗುವ ಜೀವಕೋಶ ಸಾಮಗ್ರಿಗಳನ್ನು ವಿದಳನದಿಂದ ಒಡೆದು ಬ್ಲಾಸ್ಟ್ಯುಲಾದ ಕೋಶಗಳು ಒದಗಿಸುತ್ತವೆ. ಗ್ಯಾಸ್ಟ್ರುಲೀಕರಣ ಕ್ರಿಯೆ ಮುಖ್ಯವಾಗಿ ಎರಡು ರೀತಿಯ ಜೀವಕೋಶ ಚಲನೆಗಳಿಂದ ನಡೆಯುತ್ತದೆ: ೧ ಎಂಬೊಲಿ, ೨ ಎಪಿಬೊಲಿ, ಇವೆರಡೂ ಚಲನೆಗಳು ಅನೇಕ ರೀತಿಯ ಚಲನ ವೈವಿಧ್ಯದಿಂದ ನಡೆಯುತ್ತವೆ. ಎಂಬೊಲಿಯಲ್ಲಿ ಕೆಲವು ರೀತಿಯ ಚಲನೆಗಳು ನಡೆಯುವುದನ್ನು ಕೆಳಗೆ ತಿಳಿಸಿದೆ.

(ಅ) ಅಂತರ್ವಲನ (ಇನ್ವೊಲ್ಯೂಷನ್): ಬಾಸ್ಟೋಪೋರ್ ತುಟಿಯ ಬಳಿಗೆ ಚಲಿಸಿಬಂದ ಜೀವಕೋಶಗಳು ಹೊರ ಅಂಚಿನಿಂದ ಒಳ ಅಂಚಿಗೆ ಜಾರುವುದನ್ನು ಅಂತರ್ವಲನ ಎನ್ನುತ್ತಾರೆ.

(ಆ) ಒಳಹೊರಳು (ಇನ್ ವ್ಯಾಜಿನೇಷನ್): ಜೀವಕೋಶಗಳ ಪದರವೊಂದು ಒಳಗೆ ಮಡಿಚಿಕೊಂಡು ಅಥವಾ ಒಳಕ್ಕೆ ಹೊರಳಿ ಅವಕಾಶವನ್ನು ಆವರಿಸಿಕೊಂಡ ಪದರ ರಚನೆಯಾಗುತ್ತದೆ. ಆಂಫಿಯಾಕ್ಸಸ್ ನಲ್ಲಿ ಬ್ಲಾಸ್ಟ್ಯುಲದ ಒಂದು ಭಾಗ ಒಳಕ್ಕೆ ಮಡಿಸಿಕೊಂಡು ಎರಡು ಭಿತ್ತಿಗಳಿರುವ ರಚನೆ ರೂಪುಗೊಳ್ಳುವುದನ್ನು ಉದಾಹರಣೆಯಾಗಿ ಹೇಳಬಹುದು.

(ಇ) ಜೀವಕೋಶಾಭಿವೃದ್ಧಿ: ಗ್ಯಾಸ್ಟ್ರುಲೀಕರಣಕಾಲದಲ್ಲಿ ವಿವಿಧ ಜೀವಕೋಶ ಚಲನೆಗಳ ಜೊತೆಯಲ್ಲಿ ಸಂಖ್ಯೆಯೂ ಹೆಚ್ಚುತ್ತದೆ.

(ಈ) ಪ್ರವೇಶನ (ಇನ್ಗ್ರೆಶನ್): ಒಂದು ಅಥವಾ ಒಂದು ಚಿಕ್ಕ ಜೀವಕೋಶ ಗುಂಪು ಒಳಗಿನ ಅವಕಾಶದೊಳಕ್ಕೆ ಅಥವಾ ಬೆಳೆವಣಿಗೆಯ ಕಾಲದಲ್ಲಿ ಮೂಡುವ ಕುಹರಗಳಿಗೆ ನುಗ್ಗುವುದನ್ನು ಪ್ರವೇಶನ ಎನ್ನುತ್ತಾರೆ. ಸ್ತನಿಗಳ, ಪಕ್ಷಿಗಳ ಮತ್ತು ಸರೀಸೃಪಗಳ ಬೆಳೆವಣಿಗೆಯಲ್ಲಿ ರೂಪುಗೊಳ್ಳುವ ಪ್ರಾಗ್ ರೇಖೆಯಿಂದ (ಪ್ರಿಮಿಟಿವ್ ಸ್ಟ್ರೀಕ್) ನಡುಪದರದ ಜೀವಕೋಶಗಳು ಬೇರ್ಪಟ್ಟು ಮೇಲು ಮತ್ತು ಕೆಳಗಿನ ಪದರಗಳ ನಡುವೆ ಇರುವ ಜಾಗದಲ್ಲಿ ತೂರುವುದನ್ನು ಉದಾಹರಣೆಯಾಗಿ ವಿವರಿಸಬಹುದು.

(ಉ) ಪದರ ವಿಚ್ಛೇದನ (ಡಿಲ್ಯಾಮಿನೇಷನ್): ಒಂದು ಜೀವಕೋಶ ಗುಂಪಿನಿಂದ ಇನ್ನೊಂದು ಜೀವಕೋಶ ಗುಂಪು ಪ್ರತ್ಯೇಕಗೊಳ್ಳುವುದಕ್ಕೆ ಪದರ ವಿಚ್ಛೇದನ ಎಂದು ಹೆಸರು. ಕಪ್ಪೆಯ ಬೆಳೆವಣಿಗೆಯಲ್ಲಿ ಆರ್ಕೆಂಟರಾನ್ ಅವಕಾಶದ ಮೇಲ್ಭಾವಣಿಯಲ್ಲಿರುವ ಜೀವಕೋಶಗಳ ಗುಂಪು ಪದರ ವಿಚ್ಛೇದನಗೊಂಡು ನೋಟೊಕಾರ್ಡ್‌ ಮತ್ತು ಸ್ನಾಯು ಫಲಕಗಳು ರೂಪುಗೊಳ್ಳುವುವು. (ಊ) ಪರಿಚ್ಛಿನ್ನತೆ: ಜೀವಕೋಶಗಳು ವಿವಿಧ ಭಾಗಗಳಿಂದ ಒಂದು ಭಾಗದ ಕಡೆಗೆ ಚಲಿಸುವುದೇ ಪರಿಚ್ಛಿನ್ನತೆ. ಕಪ್ಪೆಯ ಬೆಳೆವಣಿಗೆಯಲ್ಲಿ ಅದರ ಮೇಲ್ಮೈಯಿಂದ ಡಾರ್ಸಲ್ ತುಟಿಯ ಕಡೆಗೆ ಜೀವಕೋಶಗಳು ಪರಿಚ್ಛನ್ನವಾಗುತ್ತವೆ.

(ಋ) ಅಪಸರಣ (ಡೈವರ್ಜೆನ್ಸ್‌): ಪರಿಚ್ಛಿನ್ನತೆಯ ಕಾಲದಲ್ಲಿ ಡಾರ್ಸಲ್ ತುಟಿಯ ಬಳಿ ಕೇಂದ್ರೀಕೃತವಾದ ಜೀವಕೋಶಗಳು ಅಂತರ್ವಲನಗೊಂಡು ಗ್ಯಾಸ್ಟ್ರುಲಾದ ಒಳಭಾಗದಲ್ಲಿ ವಿವಿಧ ದಿಕ್ಕಿನಲ್ಲಿ ಹರಡುವುದೇ ಅಪಸರಣ. (ಋ) ವಿಸ್ತರಣ (ಎಕ್ಸ್‌ಟೆನ್ಷನ್): ಊಹಾ ನರಪ್ರದೇಶಗಳು ಹೊರಭಾಗದಲ್ಲಿ ವಿಸ್ತಾರವಾಗುವುದು ಹಾಗೂ ನೋಟೊಕಾರ್ಡ್‌ ನಡುಪದರ ಮತ್ತು ಒಳಪದರ ಅಂಶಗಳು ಒಳ ಪ್ರವೇಶಿಸಿದ ಮೇಲೆ ವಿಸ್ತಾರಗೊಳ್ಳುತ್ತವೆ.

ಎಪಿಬೊಲಿಯಲ್ಲಿ ಕೇವಲ ಎರಡು ರೀತಿಯ ಚಲನೆಗಳು ನಡೆಯುತ್ತವೆ_೧ ಆಂಟಿರೊಪೋಸ್ಟೀರಿಯರ್ ಅಕ್ಷದಲ್ಲಿ ವಿಸ್ತರಣೆ, ೨ ಅಂಚಿನ ವಿಸ್ತರಣೆ ಅಥವಾ ಅಪಸರಣ. ಒಂದೊಂದು ಕಶೇರುಕದಲ್ಲಿಯೂ ಒಂದೊಂದು ರೀತಿಯ ಜೀವಕೋಶ ಚಲನೆಗಳು ನಡೆದು ಗ್ಯಾಸ್ಟ್ರುಲೀಕರಣ ಮುಗಿಯುತ್ತದೆ. ಈ ಕಾಲದಲ್ಲಿ ಪ್ರಧಾನವಾಗಿ ಕಾಣಬರುವ ಮತ್ತೊಂದು ಅಂಶವೆಂದರೆ ಸಂಘಟಕಗಳು ರೂಪುಗೊಳ್ಳುವುದು. ಈ ಸಂಘಟಕಗಳು ಬೆಳೆವಣಿಗೆಯ ಮುಂದಿನ ಘಟ್ಟದ ಪ್ರಮುಖ ಘಟನೆಯಾದ ವಿಭೇದೀಕರಣವನ್ನು ನಡೆಸಿಕೊಡುತ್ತವೆ. ಮೊಟ್ಟಮೊದಲನೆಯದಾಗಿ ವಿಭೇದೀಕರಣ ನಡೆದು ರೂಪುಗೊಳ್ಳುವ ರಚನೆ ಎಂದರೆ ನರಫಲಕ. ಇದು ಸಾಮಾನ್ಯವಾಗಿ ನೋಟೊಕಾರ್ಡಿನ ಮೇಲಿರುತ್ತದೆ. ನೋಟೊಕಾರ್ಡ್‌ ಸಂಘಟಕವಾಗಿ ವರ್ತಿಸಿ ನರಫಲಕ ರೂಪಗೊಳ್ಳಲು ಪ್ರಚೋದನೆಯನ್ನು ಒದಗಿಸುತ್ತದೆ. ಅನಂತರ ಫಲಕ ಮಡಿಸಿಕೊಂಡು ನರನಳಿಕೆಯುಂಟಾಗುತ್ತದೆ. ಇದರಿಂದ ಮಿದುಳು ಮತ್ತು ನರಮಂಡಲದ ಇತರ ಭಾಗಗಳು ರೂಪುಗೊಳ್ಳುತ್ತವೆ. ಸರೀಸೃಪ, ಪಕ್ಷಿ ಮತ್ತು ಸ್ತನಿಗಳ ಬೆಳೆವಣಿಗೆಯಲ್ಲಿ ಕೆಲವು ರೀತಿಯ ಪಟಲಗಳು ಭ್ರೂಣದಿಂದ ಹೊರಕ್ಕೆ ಬೆಳೆದು ಕೆಲವು ನಿರ್ದಿಷ್ಟ ಕ್ರಿಯೆಗಳನ್ನು ನಡೆಸಿ ಕೊಟ್ಟು ಸಹಕರಿಸುತ್ತವೆ. ಇವಕ್ಕೆ ಭ್ರೂಣಪಟಲಗಳು ಅಥವಾ ಫೀಟಲ್ ಪಟಲಗಳು ಅಥವಾ ಭ್ರೂಣಬಹಿರ್ ಪಟಲಗಳು ಎಂದು ಹೆಸರು. ಇವು ನಾಲ್ಕು ವಿಧ.

೧ ಆಮ್ನಿಯನ್: ಭ್ರೂಣದ ಮುಂದಿನ ತುದಿ, ಹಿಂದಿನ ತುದಿ ಮತ್ತು ಪಾರ್ಶ್ವಭಾಗಗಳಲ್ಲಿ ನಾಲ್ಕು ಪದರ ಮಡಿಕೆಗಳು ಹುಟ್ಟುತ್ತವೆ. ಇವು ಮೊದಲಿಗೆ ಹೊರಪದರದ ಚಾಚಿಕೆಗಳಾಗಿ ಹೊರಹೊಮ್ಮುತ್ತವೆ. ಅನಂತರ ಈ ಚಾಚಿಕೆಗಳೊಳಕ್ಕೆ ನಡುಪದರವೂ ಬೆಳೆಯುತ್ತದೆ. ಈ ಮಡಿಕೆಗಳು ಕ್ರಮೇಣ ಬೆಳೆದು ಭ್ರೂಣವನ್ನು ಆವರಿಸಿಕೊಂಡು ಭ್ರೂಣದ ಮೇಲೆ ಸಂಧಿಸುತ್ತವೆ. ಹೀಗೆ ಮಡಿಕೆಗಳು ಸಂಧಿಸಿ ಕೂಡಿಕೊಂಡಾಗ ಎರಡು ರೀತಿಯ ಪಟಲಗಳು ಉಂಟಾಗುತ್ತವೆ. ಇವುಗಳಲ್ಲಿ ಒಳಗಿನ ಪಟಲವೇ ಆಮ್ನಿಯನ್. ಇದರಲ್ಲಿ ಹೊರಗಡೆಗೆ ಮಧ್ಯದರ್ಮ ಪದರವೂ ಒಳಗಡೆಗೆ ಹೊರದರ್ಮ ಪದರವೂ ಇವೆ. ಇವು ಭ್ರೂಣವನ್ನು ಸುತ್ತಲೂ ಆವರಿಸುತ್ತವೆ. ಇವುಗಳ ಒಳಗಿರುವ ಅವಕಾಶದಲ್ಲಿ ದ್ರವವೊಂದು ತುಂಬಿದೆ. ಇದಕ್ಕೆ ಆಮ್ನಿಯಾಟಿಕ್ ದ್ರವ ಎಂದು ಹೆಸರು. ಇದು ಭ್ರೂಣದ ಸುತ್ತಲೂ ದ್ರವಾವರಣವನ್ನು ಸೃಷ್ಟಿಸುತ್ತದೆ. ಈ ದ್ರವ ಹೊರಗಿನ ಆಘಾತಗಳಿಂದ ಭ್ರೂಣವನ್ನು ರಕ್ಷಿಸುತ್ತದೆ. ಭ್ರೂಣ ಇದರಲ್ಲೆ ಮುಳುಗಿರುವಂತೆ ಕಾಣ ಬರುತ್ತದೆ. ಆದ್ದರಿಂದ ಇದನ್ನು ಭ್ರೂಣದ ಸ್ವಂತ ಈಜುಕೊಳ ಎಂದು ಕರೆಯುವ ವಾಡಿಕೆಯುಂಟು. ಸರೀಸೃಪ, ಪಕ್ಷಿಗಳು ಮತ್ತು ಸ್ತನಿಗಳಲ್ಲಿ ಆಮ್ನಿಯನ್ ಬೆಳೆಯುವುದು ಸಾಮಾನ್ಯ ಲಕ್ಷಣವಾದುದರಿಂದ ಈ ಮೂರು ಪ್ರಾಣಿ ಗುಂಪುಗಳನ್ನು ಒಟ್ಟಾಗಿ ಆಮ್ನಿಯೋಟ ಎಂಬ ಗುಂಪಿಗೆ ಸೇರಿಸುತ್ತಾರೆ. ಉಳಿದ ಕಶೇರುಕಗಳನ್ನು ಅನಾಮ್ನಿಯೋಟ ಎಂದು ಕರೆಯುತ್ತಾರೆ.

೨ ಅಲಂಟೊಯಿಸ್: ಇದು ಭ್ರೂಣದ ಅನ್ನನಾಳದ ಹಿಂತುದಿಯಿಂದ ಪ್ರವರ್ಧದ ರೀತಿಯಲ್ಲಿ ಬೆಳೆಯುತ್ತದೆ. ಇದರಲ್ಲಿ ಒಳಗೆ ಒಳಪದರವೂ ಹೊರಗಡೆ ನಡುಪದರವೂ ಇವೆ. ಇದು ಕ್ರಮೇಣ ಬೆಳೆದು ದೊಡ್ಡದಾಗುತ್ತದೆ. ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ ಉಸಿರಾಟ ಮತ್ತುವಿಸರ್ಜನೆಗೆ ಸಹಾಯಕ. ಸ್ತನಿಗಳಲ್ಲಿ ಗರ್ಭವೇಷ್ಟಿಯ ರಚನೆಗೆ ಸಹಾಯಕಾರಿ.

೩ ಬಂಡಾರ ಸಂಚಿ (ಯೋಕ್ಸ್ಯಾಕ್): ಇದು ಭ್ರೂಣದ ಅನ್ನನಾಳದ ಮಧ್ಯಭಾಗದಿಂದ ಪ್ರವರ್ಧರೀತಿಯಲ್ಲಿ ಹುಟ್ಟುತ್ತದೆ. ಇದರಲ್ಲಿಯೂ ಒಳಪದರ ಮತ್ತು ನಡುಪದರಗಳು ಇವೆ. ಇದು ಕ್ರಮೇಣ ಬೆಳೆದು ಮೊಟ್ಟೆಯ ಒಳಗಿರುವ ಬಂಡಾರವನ್ನು ಆವರಿಸುತ್ತದೆ. ಆದ್ದರಿಂದಲೇ ಬಂಡಾರಸಂಚಿ ಎಂಬ ಹೆಸರು ಬಂದಿರುವುದು. ಇದು ಬಂಡಾರದಲ್ಲಿರುವ ಸಂಕೀರ್ಣ ಆಹಾರ ಪದಾರ್ಥಗಳನ್ನು ಅರ್ಧ ಜೀರ್ಣಿಸಿ ಸುಲಭವಾಗಿ ರಕ್ತಗತವಾಗುವ ಸರಳರೀತಿಯಲ್ಲಿ ಭ್ರೂಣಕ್ಕೆ ಒದಗಿಸುತ್ತದೆ. ಆದ್ದರಿಂದ ಇದನ್ನು ಭ್ರೂಣದ ಜಠರ ಎಂದು ಕರೆಯಬಹುದು. ಸ್ತನಿಗಳ ಬೆಳೆವಣಿಗೆಯಲ್ಲಿ ಇದು ಕಾಣಿಸಿಕೊಂಡರೂ ಯಾವ ಪ್ರಧಾನ ಪಾತ್ರವನ್ನೂ ವಹಿಸುವುದಿಲ್ಲ. ಕೆಲವು ಸಂಚಿ ಸ್ತನಿಗಳಲ್ಲಿ ಇದು ಗರ್ಭವೇಷ್ಟಿಯ ಬೆಳೆವಣಿಗೆಯಲ್ಲಿ ಭಾಗವಹಿಸುತ್ತದೆ. ಗರ್ಭವೇಷ್ಟಿಯನ್ನು ಬಂಡಾರಸಂಚಿ ಗರ್ಭವೇಷ್ಟಿ (ಯೋಕ್ ಸ್ಯಾಕ್ ಪ್ಲಾಸೆಂಟ) ಎಂದು ಕರೆಯುತ್ತಾರೆ. ಇದು ತೊಟ್ಟಿನ ರಚನೆಯ ಮೂಲಕ ಭ್ರೂಣಕ್ಕೆ ಅಂಟಿಕೊಂಡಿರುತ್ತದೆ. ತೊಟ್ಟಿನ ಮೂಲಕ ವೈಟೆಲಿನ್ ಆಪಧಮನಿ ಮತ್ತು ಅಭಿಧಮನಿಗಳು ಹಾದು ಭ್ರೂಣವನ್ನು ಸೇರುತ್ತವೆ. ಸಸ್ತನಿಗಳಲ್ಲಿ ಈ ತೊಟ್ಟು ಹೊಕ್ಕುಳಾಗಿ ಪರಿವರ್ತನೆಗೊಳ್ಳುತ್ತದೆ.

೪ ಕೋರಿಯಾನ್: ಆಮ್ನಿಯನ್ ರಚನೆಯಾಗುವ ಮಡಿಕೆಗಳಿಂದಲೇ ಕೋರಿಯಾನ್ ಕೂಡ ಉಂಟಾಗುತ್ತದೆ. ಮಡಿಕೆಗಳು ಕೂಡಿಕೊಂಡಾಗ ಹೊರಗೆ ಉಳಿಯುವ ಪದರ ಪಟಲವೇ ಕೋರಿಯಾನ್. ಇದರಲ್ಲಿಯೂ ಆಮ್ಲಿಯನಿನಲ್ಲಿರುವಂತೆಯೇ ಹೊರ ಮತ್ತು ನಡುಪದರಗಳಿವೆ. ಆದರೆ ಅವುಗಳ ಸ್ಥಾನ ಮಾತ್ರ ಬದಲಾಗಿದೆ. ಇದರಲ್ಲಿ ಹೊರದರ್ಮ ಹೊರಗೂ ಮಧ್ಯದರ್ಮ ಒಳಗೂ ಇವೆ. ಇದು ಮಿಕ್ಕೆಲ್ಲ ಪಟಲಗಳನ್ನೂ ಆವರಿಸಿಕೊಂಡು ಚಿಪ್ಪಿನ ಒಳಗೆ ಅನುಲೇಪಕವಾಗಿ ಬೆಳೆಯುತ್ತದೆ. ಇದು ಮುಖ್ಯವಾಗಿ ಭ್ರೂಣಕ್ಕೂ ಮತ್ತು ಇತರ ಪಟಲಗಳಿಗೂ ರಕ್ಷಣೆಯನ್ನು ಒದಗಿಸುತ್ತದೆ. ಪಕ್ಷಿಗಳಲ್ಲಿ ಅಲಂಟೊಯಿಸ್ ಮತ್ತು ಕೋರಿಯಾನ್ಗಳು ಒಡಗೂಡಿ ಉಸಿರಾಟದಲ್ಲಿ ಭಾಗವಹಿಸುತ್ತವೆ.

ಗರ್ಭವೇಷ್ಟಿ (ಪ್ಲಾಸೆಂಟ): ಸ್ತನಿಗಳು ಸ್ವಾಭಾವಿಕವಾಗಿ ಜರಾಯುಜಗಳು. ಇವು ಮೊಟ್ಟೆಗಳನ್ನಿಡುವುದಿಲ್ಲ. ಇವುಗಳ ತತ್ತಿಗಳು ತಾಯಿಯ ದೇಹದ ಒಳಗೆಯೇ ಉಳಿದು ಬೆಳೆಯುತ್ತವೆ. ಈ ಕೆಲಸವನ್ನು ನಿರ್ವಹಿಸುವ ರಚನೆಯೇ ಗರ್ಭವೇಷ್ಟಿ. ಭ್ರೂಣದ ಕೆಲವು ಅಂಗಾಂಶಗಳು ಮತ್ತು ತಾಯಿಯ ಗರ್ಭಿಕೋಶದ ಅಂಗಾಂಶಗಳು ಸೇರಿ ಈ ರಚನೆ ರೂಪುಗೊಳ್ಳುತ್ತದೆ. ಇದರ ಮೂಲಕ ಭ್ರೂಣತಾಯಿಯ ರಕ್ತದಿಂದ ಆಹಾರ ಮತ್ತು ಆಮ್ಲಜನಕಗಳನ್ನು ಪಡೆಯುತ್ತದೆ. ಅದರ ಮೂಲಕವೇ ವಿಸರ್ಜನಾ ವಸ್ತುಗಳನ್ನು ಮತ್ತು ಇಂಗಾಲದ ಡೈಆಕ್ಸೈಡನ್ನು ಹೊರಹಾಕುತ್ತದೆ. ಇದೊಂದು ಕೇವಲ ಜಡ ಪ್ರತಿಬಂಧಕ ಮಾತ್ರವೇ ಅಲ್ಲ. ಭ್ರೂಣಕ್ಕೆ ಆವಶ್ಯಕವಾದ ಕೆಲವು ವಸ್ತುಗಳ ಸಂಶ್ಲೇಷಣೆಯನ್ನೂ ಇದು ಚಟುವಟಿಕೆಯಿಂದ ನಡೆಸಿ ಒದಗಿಸುತ್ತದೆ. ಇದು ಭ್ರೂಣದ ಬೆಳವಣಿಗೆಗೆ ಮುಖ್ಯವಾಗಿ ಬೇಕಾದ ಕೆಲವು ಹಾರ್ಮೋನುಗಳನ್ನೂ ಉತ್ಪತ್ತಿ ಮಾಡುತ್ತದೆ.

ವಿವಿಧ ಸ್ತನಿಗಳಲ್ಲಿ ಪ್ಲಾಸೆಂಟ ರೂಪುಗೊಳ್ಳುವ ವಿಧಾನದಲ್ಲಿ ಮತ್ತು ಅದರ ರಚನೆಯಲ್ಲಿ ಭಿನ್ನತೆಯನ್ನು ತೋರುತ್ತದೆ. ಹಂದಿ, ಕಾಡುಪಾಪ ಮುಂತಾದವುಗಳಲ್ಲಿ ಬಹಳ ಸರಳವಾದ ರಚನೆಯನ್ನು ಕಾಣಬಹುದು. ಇಲ್ಲಿ ಭ್ರೂಣಭಾಗದಲ್ಲಿಯಾಗಲೀ ತಾಯಿಭಾಗದಲ್ಲಿಯಾಗಲೀ ಯಾವ ಅಂಗಾಂಶಗಳೂ ನಾಶವಾಗದೆ ಸಮಗ್ರವಾಗಿ ಉಳಿದಿರುತ್ತವೆ. ಗರ್ಭವೇಷ್ಟಿಯ ಬೆಳೆವಣಿಗೆಯಲ್ಲಿ ಭ್ರೂಣಭಾಗದಿಂದ ಪ್ರಧಾನ ಪಾತ್ರ ವಹಿಸುವ ಪದರವೆಂದರೆ ಕೋರಿಯಾನ್. ಇದು ಗರ್ಭಕೋಶದ ಭಿತ್ತಿಗೆ ಅಂಟಿಕೊಳ್ಳುವ ಭಾಗದಲ್ಲಿ ಬೆರಳುಗಳ ರೀತಿಯ ವಿಲೈಗಳೆಂಬ ರಚನೆಗಳನ್ನು ಉತ್ಪತ್ತಿ ಮಾಡುತ್ತದೆ. ಇವು ಗರ್ಭಕೋಶದ ಅವಕಾಶದಲ್ಲಿರುವ ಸಂದುಗಳಿಗೆ ಚಾಚಿಕೊಂಡು ಅಂಟಿಕೊಳ್ಳುತ್ತವೆ. ಕೈಗೌಸಿನ ಒಳಗಡೆಗೆ ಹಸ್ತ ಮತ್ತು ಬೆರಳುಗಳು ಜೋಡಿಸಿಕೊಳ್ಳುವಂತೆ ಈ ಕ್ರಿಯೆ ನಡೆಯುತ್ತದೆ. ಗರ್ಭಕೋಶದ ಭಿತ್ತಿಯಲ್ಲಿರುವ ಗ್ರಂಥಿಗಳು ಉತ್ಪತ್ತಿ ಮಾಡುವ ಗರ್ಭಕ್ಷೀರ (ಯುಟೆರೈನ್ ಮಿಲ್ಕ್‌) ಎಂಬ ಪದಾರ್ಥವನ್ನು ಹೀರಿಕೊಳ್ಳುತ್ತವೆ. ಜನನಕಾಲದಲ್ಲಿ ಈ ಬೆರಳಿನ ರಚನೆಗಳು ಹಾಗೆಯೇ ಬಿಡಿಸಿಕೊಂಡು ಹೊರ ಬರುವುದರಿಂದ ರಕ್ತಸ್ರಾವವಾಗಲೀ ತಾಯಿಯ ಅಂಗಾಂಶ ಸ್ರಾವವಾಗಲೀ ನಡೆಯುವುದಿಲ್ಲ. ಇದನ್ನು ಕಳಚಿಕೊಳ್ಳದ (ನಾನ್ ಡೆಸಿಡ್ಯೂಯೇಟ್) ಮಾದರಿ ಎನ್ನುತ್ತಾರೆ. ಮಾನವನಲ್ಲಿ ಈ ಬೆರಳಿನಾಕಾರದ ರಚನೆಗಳು ಒಂದು ಭಾಗದಲ್ಲಿ ಕೇಂದ್ರೀಕೃತವಾಗಿ ಗರ್ಭವೇಷ್ಟಿ ತಟ್ಟೆಯಂತಿರುತ್ತದೆ. ಇಲ್ಲಿ ಸಂಬಂಧ ನಿಕಟವಾಗಿದ್ದು ಜನನ ಕಾಲದಲ್ಲಿ ಗರ್ಭಕೋಶದ ಭಿತ್ತಿಯನ್ನು ಕಿತ್ತುಕೊಂಡು ಬರುವುದರಿಂದ ರಕ್ತಸ್ರಾವ ಆಗುತ್ತದೆ. ಇದನ್ನು ಕಳಚಿಕೊಳ್ಳುವ (ಡೆಸಿಡ್ಯುಯೇಟ್) ಮಾದರಿ ಎನ್ನುತ್ತಾರೆ. ವಿಲೈಗಳು ಹರಡುವ ರೀತಿಯನ್ನನುಸರಿಸಿ ನಾಲ್ಕು ರೀತಿಯ ಗರ್ಭವೇಷ್ಟಿಗಳನ್ನು ಗುರುತಿಸಬಹುದು. ಮೇಲೆ ತಿಳಿಸಿದ ಹಂದಿಯ ಮಾದರಿ ವ್ಯಾಪಕವಾದದ್ದು. ಮಾನವನದು ಫಲಕ ಮಾದರಿ. ದನಗಳಲ್ಲಿ ವಿಲೈಗಳು ಅಲ್ಲಲ್ಲಿ ಸಂಗ್ರಹಿಸಿ ಗುಂಡಿಯ ರೀತಿಯ ರಚನೆಯನ್ನು ಉಂಟು ಮಾಡುತ್ತವೆ. ಇದಕ್ಕೆ ಗುಬುಟು (ಕಾಟಲೀಡನರಿ) ಮಾದರಿ ಎಂದು ಹೆಸರು. ಮಾಂಸಾಹಾರಿ ಸಸ್ತನಿಗಳಲ್ಲಿ ಯಾವುದೋ ಒಂದು ವಲಯಕ್ಕೆ ಮೀಸಲಾಗಿರುವುದರಿಂದ ಇವನ್ನು ಮಂಡಲ (ಜೋನರಿ) ಮಾದರಿ ಎಂದು ಕರೆಯುತ್ತಾರೆ.

ಇದೇ ಅಲ್ಲದೆ ಅಂಗಾಂಶ ರಚನೆಯನ್ನನುಸರಿಸಿ ಗರ್ಭವೇಷ್ಟಿಯನ್ನು ವರ್ಗೀಕರಿಸುವ ಇನ್ನೊಂದು ಕ್ರಮವೂ ಉಂಟು. ಗರ್ಭಕೋಶದ ಭಿತ್ತಿಯಲ್ಲಿ ಮೂರು ಪದರಗಳು ಈ ದೃಷ್ಟಿಯಿಂದ ಮುಖ್ಯ. ಗರ್ಭಕೋಶದ ಅನುಲೇಪಕ, ಸಂಯೋಜಕ ಅಂಗಾಂಶ ಪದರ ಮತ್ತು ರಕ್ತನಾಳದ ಎಂಡೋತೀಲಿಯಲ್ ಪದರ. ಹೀಗೆಯೇ ಭ್ರೂಣದ ಭಾಗದಲ್ಲಿ ಕೋರಿಯಾನ್, ಸಂಯೋಜಕ ಅಂಗಾಂಶಪದರ ಮತ್ತು ಭ್ರೂಣೀಯ ರಕ್ತನಾಳದ ಎಂಡೋತೀಲಿಯಮ್ ಪದರ ಎಂಬ ಮೂರು ಪದರಗಳಿವೆ. ಭ್ರೂಣಕ್ಕೂ ತಾಯಿಗೂ ನಡುವೆ ವಸ್ತುಗಳ ವಿನಿಮಯ ನಡೆಯುವಾಗ ಆ ವಸ್ತುಗಳು ಈ ಆರು ಪ್ರತಿ ಬಂಧಕಗಳನ್ನು ಹಾದು ಸಾಗಬೇಕು. ಹಂದಿಯಲ್ಲಿ ಇವು ಆರೂ ಪದರಗಳು ಸಮಗ್ರವಾಗಿ ಉಳಿದಿರುತ್ತವೆ. ಅಲ್ಲಿ ಕೋರಿಯಾನ್ ಪದರ ಎಪಿತೀಲಿಯಮ್ ಪದರಕ್ಕೆ ತಾಗಿಕೊಂಡಿರುವುದರಿಂದ ಇದಕ್ಕೆ ಎಪಿತೀಲಿಯೊ ಕೋರಿಯಲ್ ಮಾದರಿ ಎಂದು ಹೆಸರು. ದನಗಳಲ್ಲಿ ಗುಂಡಿಗಳು ಗರ್ಭಕೋಶದ ಭಿತ್ತಿಗೆ ತಾಗಿದ ಭಾಗದಲ್ಲಿ ಎಪಿತೀಲಿಯಲ್ ಪದರ ನಾಶವಾಗಿರುತ್ತದೆ. ಮಿಕ್ಕೆಡೆಗಳಲ್ಲಿ ಸಮಗ್ರವಾಗಿರುತ್ತದೆ. ಇದಕ್ಕೆ ಸಿನ್ಡೆಸ್ಮೊಕೋರಿಯಲ್ ಎಂದು ಹೆಸರು. ನಾಯಿ, ಬೆಕ್ಕು ಮುಂತಾದ ಸ್ತನಿಗಳಲ್ಲಿ ಎಪಿತೀಲಿಯಲ್ ಪದರ ಮತ್ತು ಸಂಯೋಜಕ ಅಂಗಾಂಶಗಳು ನಾಶವಾಗಿ ಕೊರಿಯಾನ್ ವಿಲೈ ತಾಯಿಯ ರಕ್ತನಾಳಕ್ಕೆ ತಾಗಿಕೊಂಡಿರುತ್ತದೆ. ಇದಕ್ಕೆ ಎಂಡೋತೀಲಿಯೊಕೋರಿಯಲ್ ಎಂದು ಹೆಸರು. ಮಾನವನಲ್ಲಿ ಇದು ಇನ್ನೂ ಮುಂದುವರಿದು ತಾಯಿಯ ರಕ್ತನಾಳದ ಎಂಡೋತೀಲಿಯಲ್ ಪದರವೂ ಹಾಳಾಗಿರುತ್ತದೆ. ಭ್ರೂಣದ ಕೋರಿಯಾನ್ ವಿಲೈಗಳು ತಾಯಿಯ ರಕ್ತದಲ್ಲಿ ಮುಳುಗಿರುತ್ತವೆ. ಇದಕ್ಕೆ ಹೀಮೋಕೋರಿಯಲ್ ಮಾದರಿ ಎಂದು ಹೆಸರು. ಮೊಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅತ್ಯಂತ ಹೆಚ್ಚಿನ ನಿಕಟ ಸಂಪರ್ಕವನ್ನು ಬೆಳೆಸಿದೆ. ತಾಯಿಯ ಭಾಗದ ಮೂರು ಪದರಗಳೂ ನಾಶವಾಗಿರುವುದೇ ಅಲ್ಲದೆ ಭ್ರೂಣೀಯ ಭಾಗದಲ್ಲಿ ಕೋರಿಯಾನ್ ಮತ್ತು ಸಂಯೋಜಕ ಅಂಗಾಂಶಗಳು ನಾಶವಾಗಿವೆ. ಇದರಿಂದಾಗಿ ಭ್ರೂಣದ ರಕ್ತನಾಳಗಳು ತಾಯಿಯ ರಕ್ತದಲ್ಲಿ ಮುಳುಗಿವೆ. ಇದಕ್ಕೆ ಹೀಮೋತೀಲಿಯಲ್ ಮಾದರಿ ಎಂದು ಹೆಸರು. ಮೊಲದ ಗರ್ಭವೇಷ್ಟಿಯ ಬೆಳೆವಣಿಗೆಯ ಇನ್ನೊಂದು ವೈಶಿಷ್ಟ್ಯವೆಂದರೆ ಇದು ಉಳಿದ ನಾಲ್ಕೂ ಮಾದರಿಯ ಹಂತಗಳ ಮೂಲಕ ಹಾದು ರೂಪಗೊಳ್ಳುತ್ತದೆ. ಇದು ಸಮರ್ಥ ರೀತಿಯಲ್ಲಿ ಭ್ರೂಣಗಳನ್ನು ರಕ್ಷಿಸಿ ಪೋಷಿಸಲು ನಡೆಸಿರುವ ಪ್ರಯತ್ನಕ್ಕೆ ಪ್ರತ್ಯಕ್ಷ ಸಾಕ್ಷಿಯನ್ನು ಒದಗಿಸುತ್ತದೆ.

ಕಶೇರುಕಗಳಲ್ಲಿ ಮೀನು, ಕಪ್ಪೆಗಳು, ಸರೀಸೃಪಗಳು ಮತ್ತು ಪಕ್ಷಿಗಳು ಮೊಟ್ಟೆಯಿಡುತ್ತವೆ. ಇವನ್ನು ಅಂಡಜಗಳು (ಒವಿಪರಸ್) ಎಂದು ಕರೆಯುತ್ತಾರೆ. ಕೆಲವು ಅಪವಾದಗಳ ವಿನಾ ಸ್ತನಿಗಳು ಈಯುವ ಪ್ರಾಣಿಗಳು. ಇವಕ್ಕೆ ಜರಾಯುಜಗಳೆಂದು (ವೈವಿಪರಸ್) ಹೆಸರು. ಶಾರ್ಕ್ಮೀನು, ಮಂಡಲದ ಹಾವು ಮುಂತಾದ ಕೆಲವು ಅಂಡಜಗಳು ತಮ್ಮ ಮೊಟ್ಟೆಗಳನ್ನು ದೇಹದಲ್ಲಿಯೇ ಉಳಿಸಿಕೊಂಡು ರಕ್ಷಿಸಿ ಬೆಳೆಸುತ್ತವೆ. ತಾಯಿಯ ದೇಹದ ಹೊರಗೆ ಬೆಳೆದು ಹೊರಬೀಳಬೇಕಾದ ಮರಿಗಳು ಇಲ್ಲಿ ತಾಯಿಯ ದೇಹದ ಒಳಗೆಯೇ ಬೆಳೆದು ಹೊರಬರುತ್ತವೆ. ಇವಕ್ಕೆ ಅಂಡಜರಾಯುಜಗಳು (ಓವೊ ವೈವಿಪರಸ್) ಎಂದು ಹೆಸರು. ಕಡಲಕುದುರೆ, ಸೂಲಗಿತ್ತಿ ಕಪ್ಪೆ ಮುಂತಾದ ಅಂಡಜಗಳು ತಮ್ಮ ಮೊಟ್ಟೆಗಳನ್ನು ರಕ್ಷಿಸಿ ಮರಿಗಳನ್ನು ಪೋಷಿಸುತ್ತವೆ. ಇದರಲ್ಲಿ ಅನೇಕ ರೀತಿಯ ವೈವಿಧ್ಯ ಉಂಟು. ಇದಕ್ಕೆ ಸಂತಾನ ರಕ್ಷಣೆ (ಪೇರೆಂಟಲ್ ಕೇರ್) ಎಂದು ಹೆಸರು.

ಕಶೇರುಕಗಳ ಭ್ರೂಣಶಾಸ್ತ್ರದ ಪರಿಶೀಲನೆ ಅವುಗಳಲ್ಲಿ ನಡೆದಿರಬಹುದಾದ ವಿಕಾಸದ ಸೂಚನೆಯನ್ನೇ ಕೊಡುತ್ತದೆ. (ಎಚ್.ಎಚ್.ಎಸ್.)