ಚಾವಟಿಯಿಂದ ಹೊಡೆಯುವುದಕ್ಕೆ ಅಥವಾ ತನ್ನನ್ನೇ ತಾನು ಹೊಡೆದುಕೊಳ್ಳುವುದಕ್ಕೆ ಈ ಹೆಸರಿದೆ. ಈ ಸಂಪ್ರದಾಯ ಎಲ್ಲ ಬಗೆಯ ಮಾನವ ಗುಂಪುಗಳಲ್ಲೂ ಬಳಕೆಯಲ್ಲಿದ್ದುದಾಗಿ ಗೊತ್ತಾಗಿದೆ. ಒಬ್ಬನನ್ನು ಅವನು ಮಾಡಿದ ಅಪರಾಧಕ್ಕಾಗಿ ಚಾವಟಿಯಿಂದ ಬಾರಿಸಿ ಶಿಕ್ಷಿಸುವುದು ಈಗಲೂ ಎಲ್ಲ ಸಮಾಜಗಳಲ್ಲೂ ರೂಢಿಯಲ್ಲಿದೆ. ಪ್ರಾಯಶ್ಚಿತ್ತಮಾಡಿಕೊಳ್ಳಲು ಒಬ್ಬ ತನ್ನನ್ನು ತಾನೇ ಚಾವಟಿಯಿಂದ ಹೊಡೆದುಕೊಳ್ಳುವ ರೂಢಿ ಈಚೆಗೆ ಕಡಿಮೆಯಾಗುತ್ತಿದೆ. ಇಲ್ಲಿ ಈ ಎರಡನೆಯ ಬಗೆಯ ಕಶಾಪ್ರಹಾರವನ್ನು ಮಾತ್ರ ವಿವೇಚಿಸಲಾಗಿದೆ. ಮನೆಗಳ ಮುಂದೆ ಮಾರಮ್ಮನ ಪೆಟ್ಟಿಗೆಯನ್ನು ತಲೆಯ ಮೇಲೆ ಹೊತ್ತು ತರುವ ಭಕ್ತರು ಚಾವಟಿಯಿಂದ ತಮ್ಮನ್ನು ತಾವೇ ಹೊಡೆದುಕೊಳ್ಳುವುದನ್ನು ಎಲ್ಲರೂ ಕಂಡಿದ್ದಾರೆ. ಎಷ್ಟೆಷ್ಟು ಆವೇಶದಿಂದ ತೀವ್ರವಾಗಿ ಹೊಡೆದುಕೊಂಡರೆ ಅವರ ಭಕ್ತಿ ಅಷ್ಟಷ್ಟು ಮೇಲಾದದ್ದು ಎಂಬ ಭಾವನೆ ಇವರಲ್ಲಿರುವಂತಿದೆ. ಕೆಲವರು ಮೈಯಿಂದ ರಕ್ತ ಚಿಮ್ಮುವಷ್ಟು ಬಲವಾಗಿ ಹೊಡೆದುಕೊಳ್ಳುತ್ತಾರೆ.

ಯುರೋಪ್ ನಲ್ಲಿ ಹತ್ತು ಮತ್ತು ಹನ್ನೊಂದನೆಯ ಶತಮಾನಗಳಲ್ಲಿ ದೇಹದಂಡನೆಗಾಗಿ ಮತ್ತು ಪಾಪವಿಮೋಚನೆಗಾಗಿ ಕಶಾಪ್ರಹಾರ ಮಾಡಿಕೊಳ್ಳುವುದು ಕ್ರೈಸ್ತರ ಒಂದು ಮಹಾವ್ರತವಾಯಿತು. ಈ ವ್ರತದ ಆಚರಣೆಗೆ ಡಾಮಿನಿಕಸ್ ಲೋರಿಕಾಟಸ್ (ಪ್ರ.ಶ. ೧೧೬೦) ಪೀಟರ್ ಡಾಮಿಯನ್ (ಪ್ರ. ಶ. ೧೦೭೨) ಎಂಬ ಸಂನ್ಯಾಸಿಗಳ ನೇತೃತ್ವದಲ್ಲಿ ಪ್ರಾರಂಭವಾಯಿತು. ಸಂತ ಡಾಮಿನಿಕನ (ಪ್ರ.ಶ. ೧೧೭೦-೧೨೨೧) ಕಾಲದಲ್ಲಿ ಕಶಾಪ್ರಹಾರ ಮಾಡಿಕೊಳ್ಳುವ ಈ ಚಳವಳಿ ಕ್ರಾಂತಿರೂಪತಾಳಿತಲ್ಲದೆ ಹದಿನಾಲ್ಕನೆಯ ಶತಮಾನದಲ್ಲಿ ಸಾರ್ವಜನಿಕ ಸಂಪ್ರದಾಯವಾಯಿತು. ಕಾಲಕ್ರಮದಲ್ಲಿ ಇದು ಒಂದು ಸಾಂಕ್ರಾಮಿಕ ಜಾಡ್ಯದಂತೆ ಜರ್ಮನಿಯಿಂದ ಹಂಗರಿಗೆ ಬಂದು ಅಲ್ಲಿಂದ ಯುರೋಪಿನ ಆದ್ಯಂತ ಹಬ್ಬಿತು. ಮೂವತ್ತೊಂದೂವರೆ ದಿವಸಗಳ ಪರ್ಯಂತ ದಿವಸಕ್ಕೆ ಎರಡು ಸಾರಿ ಕಶಾಪ್ರಹಾರ ಮಾಡಿಕೊಂಡವ ಸಕಲಪಾಪ ವಿಮುಕ್ತನಾಗುವನೆಂದು ನಂಬಿ ಇದನ್ನೊಂದು ಮಹಾವ್ರತವಾಗಿ ಜನ ಆಚರಿಸುತ್ತಿದ್ದರು. ಇದು ದುಷ್ಟಪದ್ಧತಿಯೆಂದು ಜನರಿಗೆ ತಿಳಿಯಲು ಹೆಚ್ಚು ಕಾಲ ಹಿಡಿಯಲಿಲ್ಲ. ಪೋಪ್ ನಾಲ್ವಡಿ ಕ್ಲೆಮೆಂಟ್ ಮತ್ತು ಚಕ್ರವರ್ತಿ ನಾಲ್ವಡಿ ಚಾರಲ್ಸ್‌ ಈ ಪದ್ಧತಿಯನ್ನು ಬಲವಾಗಿ ನಿಷೇಧಿಸಿದರು. ಹದಿನೈದನೆಯ ಶತಮಾನದ ಕೊನೆಯಲ್ಲಿ ಈ ಚಳವಳಿ ನಿಂತುಹೋಯಿತು. (ಜಿ.ಎಚ್.)