ಕವಿಯ ದರ್ಶನ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕವಿಯ ದರ್ಶನ : ಬಲ್ಲವರನ್ನು ತಾತ್ವಿಕ, ವಿಜ್ಞಾನಿ, ಇತಿಹಾಸ ಲೇಖಕ, ಕವಿ_ಎಂದು ವಿಂಗಡಿಸುವ ಪದ್ಧತಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಭೌತ ಪ್ರಪಂಚದ ಮತ್ತು ಮಾನವ ಪ್ರಪಂಚದ ನಾನಾ ಚೋದನೆಗಳಿಗೆ ಅವರಲ್ಲಿ ಒಬ್ಬೊಬ್ಬರಿಗೂ ತಮ್ಮತಮ್ಮದೇ ಆದ ಪ್ರತಿಕ್ರಿಯೆಯೂ ದೃಷ್ಟಿಕೋನವೂ ಇರುವುದು ಸಹಜವೇ ಸರಿ. ಮೊದಲ ಮೂವರಲ್ಲಿ ಬುದ್ಧಿಯ ಚಟುವಟಿಕೆಗೇ ಪ್ರಾಧಾನ್ಯ. ಕವಿಯಲ್ಲಾದರೊ ಬುದ್ಧಿಯ ಜೊತೆಗೆ ರಾಗಾವೇಶವೂ ವಿಭಾವನೆಯೂ ಸ್ಫೂರ್ತಿಯೂ ಕೂಡಿಕೊಂಡಿರುತ್ತವೆ. ಹೀಗಾಗಿ ಕವಿಯ ನೋಟ ಒಂದು ರೀತಿಯ ಪರಿಪೂರ್ಣ ನೋಟ, ಮನುಷ್ಯನ ಎಲ್ಲ ಮುಖಗಳನ್ನೂ ಒಟ್ಟಿಗೆ ನೋಡುವ ನೋಟ. ಅವನು ಈಕ್ಷಿಸುತ್ತಾನೆ, ಪರಮ ಸೌಂದರ್ಯವನ್ನು ಶಾಶ್ವತ ಸತ್ಯವನ್ನು ವಚನಿಸುತ್ತಾನೆ. ಆದ್ದರಿಂದ ಕವಿಯ ನುಡಿಗಟ್ಟು ನೇರವಾಗಿ ಹೃದಯಕ್ಕೆ ನುಗ್ಗಿ ಬೇರೂರಿ ನಿಲ್ಲುತ್ತದೆ. ಈ ಬಗೆಯ ನಂಬಿಕೆ ಬಹುಕಾಲದಿಂದ ನಿರ್ವಿವಾದವಾಗಿತ್ತು. ಅದರ ಪರಿಣಾಮವಾಗಿ ಕವಿಗಳ ಆಂತರ್ಯದಲ್ಲೂ ತಾವೇ ಶ್ರೇಷ್ಠರು, ಶಿಖರಪ್ರಾಯರು ಎಂಬ ಅಹಂಕಾರ ಮನೆಮಾಡಿತ್ತು. ‘ಕವಿಯ ಜನನಕ್ಕೂ ಬಾಳುವೆಗೂ ಬಂಗಾರದ ಆವರಣವಿದೆ. ಅಮೃತವೇ ಅವನ ಆಹಾರ. ಅವನೆದುರು ಸ್ವರ್ಗ ಯಾವಾಗಲೂ ತೆರೆದು ನಿಂತಿರುತ್ತದೆ. ಅಪೂರ್ವ ಸೊಬಗಿನಿಂದಲೂ ಅಗಾಧ ಶಕ್ತಿಯಿಂದಲೂ ಕೂಡಿದ ಅವನ ವಾಣಿ ಅಮರ ವಾಣಿ’. _ ಈ ಧೋರಣೆಯ ವಾಕ್ಯಗಳನ್ನು ೧೯ನೆಯ ಶತಮಾನದ ಎರಡನೆಯ ಭಾಗದ ಮುಖ್ಯ ಕವಿಗಳು ಆಡುತ್ತಿದ್ದರು.
ನಾಗರಿಕತೆ ಅಷ್ಟೇನೂ ಬೆಳೆಯದ ಪ್ರಾಚೀನ ತಲೆಮಾರುಗಳಲ್ಲಿ ರಂಜಕವಾಗಿ ಮಾತನಾಡುವ ಚಾತುರ್ಯ ಒಂದೊಂದು ಬುಡಕಟ್ಟಿನಲ್ಲಿ ಒಬ್ಬನಿಗೊ ಇಬ್ಬರಿಗೊ ಇರುತ್ತಿತ್ತು. ಅವರ ಮಾತುಗಳಿಂದ ಮುಗ್ಧರಾದ ಮಂದಿ ಅವರನ್ನು ಕವಿ (ಸ್ಕಾಪ್, ಬಾರ್ಡ್) ಎಂದು ಹೊಗಳುತ್ತ, ಅವರ ಬಗ್ಗೆ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಆ ಕಾಲ ಹೋಗಿ ಎಷ್ಟೋ ದಿವಸಗಳಾದುವು. ಈಗ ‘ಇತರ ಮನುಜರಂತೆ ಕವಿಯೂ ಒಬ್ಬ ಮನುಷ್ಯ; ಅವನ ಧಮನಿಗಳಲ್ಲಿ ಹರಿಯುವುದೂ ರಕ್ತವೇ; ಶಬ್ದ ಸಾಮಗ್ರಿಯಲ್ಲಿ, ಅದನ್ನು ಉಪಯೋಗಿಸುವುದರಲ್ಲಿ, ಕವಿಯ ಅಳವು ಇತರರಿಗಿಂತ ಅಧಿಕ ಅಷ್ಟೆ’_ಎಂಬ ಅಭಿಮತ ವೃದ್ಧಿಗೊಂಡು ರೂಢಮೂಲವಾಗಿದೆ. ಅಲ್ಲದೆ, ಪ್ರತಿಯೊಬ್ಬನಲ್ಲೂ ಕವಿಯ ಅಂಶ ಕೊಂಚವಾದರೂ ಇದ್ದೇ ಇದೆ ಎಂಬ ಭಾವನೆಗೂ ಸ್ವಾಗತವುಂಟು. ಭಾವಾವೇಶ, ವಿಭಾವನೆಗಳನ್ನು ಕುರಿತು ಸಂಶೋಧನೆ ಹೇರಳವಾಗಿ ಆಗಿ ಬಂದಿರುವುದರಿಂದ ‘ಅವು ಕವಿಯ ಸ್ವತ್ತಲ್ಲ; ವಿಜ್ಞಾನಿ, ಚರಿತ್ರಕಾರ, ತತ್ತ್ವಜ್ಞರಲ್ಲೂ ಅವು ಕೆಲಸಮಾಡುತ್ತವೆ_ಆದರೆ ಪ್ರತ್ಯೇಕ ವಿಧದಲ್ಲಿ; ಸತ್ಯಕ್ಕೆ ಹಲವು ಮುಖಗಳಿರುವುದರಿಂದ ಯಾವೊಬ್ಬ ಅನ್ವೇಷಿಯೂ ಪೂರ್ಣಸತ್ಯವನ್ನು ಅವಲೋಕಿಸಲಾರ.’ ಇಂಥ ಭಾವನೆಗಳ ಪ್ರಸಾರದಿಂದ ಕವಿಯ ಅಂತಸ್ತು ಕೆಳಕ್ಕಿಳಿದಿದೆ.
ಕವಿಯ ದರ್ಶನ ಎನ್ನುವುದನ್ನು ಕವಿಯ ಕನಸು ಎನ್ನುತ್ತ ಪರಿಹಾಸಗೈಯುವವರೂ ಇದ್ದಾರೆ. ಜಗತ್ತಿನ ಕಷ್ಟನಿಷ್ಠುರಗಳ ಎದುರಾಗಿ ನಿಲ್ಲಲಾರದೆ ಕವಿ ಹೇಡಿಯಂತೆ ಸ್ವಪ್ನರಾಜ್ಯಕ್ಕೆ ಪಲಾಯನ ಮಾಡುತ್ತಾನೆ ಎಂಬುದೇ ಅವರ ಆಕ್ಷೇಪಣೆ.
ಇನ್ನೊಂದು ವಿಚಾರ ಕವಿಯ ದರ್ಶನ ಎಂಬ ಹೇಳಿಕೆಯಲ್ಲಿ, ಎಲ್ಲ ಕವಿಗಳಿಗೂ ಸಮನಾದ ಒಂದು ದರ್ಶನವಿದೆ ಎಂಬ ತಾತ್ಪರ್ಯವಿದೆ. ಪ್ರಾಯಶಃ ವಿಜ್ಞಾನಿಗಳಲ್ಲಿ ಕೆಲವು ಸಂಗತಿಗಳನ್ನು ಕುರಿತು ಒಮ್ಮತವಿದೆ; ಚರಿತ್ರಕಾರರೆಲ್ಲರೂ ಹಲಕೆಲವು ಘಟನೆಗಳು ಜರುಗಿವೆಯೆಂದು ಸಮ್ಮತಿಸಿಯಾರು. ತತ್ತ್ವಜ್ಞರು ಎಷ್ಟು ಜನರಿದ್ದಾರೊ ಅಷ್ಟು ತೀರ್ಮಾನಗಳಿವೆ. ಕವಿಗಳಲ್ಲೂ ಹಾಗೆಯೇ. ಕವಿಯ ದರ್ಶನ ಎಂಬುದನ್ನು ಬಿಟ್ಟುಕೊಟ್ಟು, ಆಯಾ ಕವಿಯ ದರ್ಶನ ಎಂದರೆ ನಿಜಾಂಶಕ್ಕೆ ಹತ್ತಿರವಾದೀತು. (ಎಸ್.ವಿ.ಆರ್.)