ಕಲ್ಲತ್ತಗಿರಿ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕಲ್ಲತ್ತಗಿರಿ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿರುವ ಒಂದು ಪರ್ವತ. ತರೀಕೆರೆಯಿಂದ ದಕ್ಷಿಣಕ್ಕೆ ೨೦ಕಿಮೀ ದೂರದಲ್ಲಿದೆ. ಕಲ್ಲತ್ತಗಿರಿ, ಕಲ್ಲತ್ತಿಗಿರಿ ಎಂದೂ ಕರೆಯಲಾಗುತ್ತದೆ. ಗಿರಿಪರ್ವತ ಶ್ರೇಣಿಗೆ ಸೇರಿದ ಈ ಪರ್ವತ ಸಮುದ್ರಮಟ್ಟದಿಂದ ೧೮೭೬ಮೀ ಎತ್ತರವಾಗಿದೆ. ಮನಮೋಹಕ ಪ್ರಕೃತಿ ಸೌಂದರ್ಯದಿಂದಲೂ ಆಹ್ಲಾದಮಯ ಹವಾಗುಣದಿಂದಲೂ ಕೂಡಿರುವ ಗಿರಿಯ ನೆತ್ತಿಯ ಮೇಲೆ ಕಟ್ಟಿನ ಚೌಡೇಶ್ವರಿ ದೇವಾಲಯವೊಂದಿದೆ.
ಕಲ್ಲತ್ತಗಿರಿಯ ಸಮೀಪದಲ್ಲಿಯೇ ಕಲ್ಲತ್ತಿಪುರ ಎಂಬ ಊರಿದೆ. ಇದು ಕೆಮ್ಮಣ್ಣುಗುಂಡಿಯಿಂದ ೧೦ಕಿಮೀ ದೂರದಲ್ಲಿದ್ದು ನಿಸರ್ಗ ರಮಣೀಯತೆಯಿಂದ ಕೂಡಿದೆ. ಈ ಪ್ರದೇಶದಲ್ಲಿರುವ ಕಲ್ಲತ್ತ ಜಲಪಾತ ಜಿಲ್ಲೆಯ ಸುಂದರ ಜಲಪಾತಗಳಲ್ಲಿ ಒಂದು. ಇದು ಸು.೧೩೦ಮೀಟರ್ (ಸು.೪೦೦ಅಡಿ) ಆಳಕ್ಕೆ ಧುಮುಕುತ್ತಿದ್ದು ತನ್ನ ಪ್ರಕೃತಿ ಸಹಜ ದೃಶ್ಯದಿಂದ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಪೂರ್ವದಲ್ಲಿ ಕಲ್ಲತ್ತಗಿರಿ ಪ್ರದೇಶ ಅಗಸ್ತ್ಯ ಋಷಿಯ ಆಶ್ರಮಗಳಲ್ಲಿ ಒಂದಾಗಿತ್ತೆಂದು ಪ್ರತೀತಿ. ಇಲ್ಲಿ ಎರಡು ಬಂಡೆಗಳ ನಡುವೆ ವೀರಭದ್ರನ ದೇವಾಲಯವಿದೆ. ಇದನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ. ಹೊರಗಿನಿಂದ ಇದೊಂದು ಗುಹಾದೇವಾಲಯದಂತಿದ್ದು ಇದರ ಮುಂಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ಮೂರು ಆನೆಗಳ ಚಿತ್ರಗಳಿವೆ. ಇವುಗಳ ನೆತ್ತಿಯ ಮೇಲಿನಿಂದ ಜಲಪಾತದ ನೀರು ಕೆಳಕ್ಕೆ ಧುಮ್ಮಿಕ್ಕುತ್ತದೆ. ಭಕ್ತಾದಿಗಳು ಈ ನೀರಿನಲ್ಲಿ ಮಿಂದು ದೇವರ ದರ್ಶನ ಮಾಡುತ್ತಾರೆ. ಇಲ್ಲಿ ಪ್ರತಿ ವರ್ಷ ಏಪ್ರಿಲ್ - ಮೇ ತಿಂಗಳಿನಲ್ಲಿ ಮೂರು ದಿನಗಳ ಕಾಲ ವೀರಭದ್ರನ ಜಾತ್ರೆ ನಡೆಯುತ್ತದೆ. ಇಲ್ಲಿಂದ ಸುಮಾರು ಒಂದು ಕಿಮೀ ದೂರದಲ್ಲಿ ಜಕ್ಕೆರುಪುದಿ ಎಂಬ ಸ್ಥಳವಿದೆ. ಅಲ್ಲಿ ಗಂಗಾತೀರ್ಥ ಎಂಬ ಹೆಸರಿನ ಒಂದು ಕೊಳವಿದೆ. ಅದರ ಸುತ್ತಲೂ ಜೇನುಗೂಡುಗಳಿರುವುದೊಂದು ವಿಶೇಷ. ಈ ಸ್ಥಳದಲ್ಲಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕುಕಾರ್ಖಾನೆಗೆ ಸೇರಿದ ಒಂದು ಪ್ರವಾಸಿ ಮಂದಿರವಿದೆ (ನೋಡಿ: ಚಿಕ್ಕಮಗಳೂರು).