ಕಲ್ಲಟ ಭಟ್ಟ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕಲ್ಲಟ ಭಟ್ಟ : ೯ನೆಯ ಶತಮಾನದ ಆದಿಭಾಗದಲ್ಲಿದ್ದ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ. ಈತ ಕಾಶ್ಮೀರರಾಜ ಅವಂತಿವರ್ಮನ (೮೫೫-೮೮೩) ಕಾಲದಲ್ಲಿದ್ದನೆಂದು ರಾಜತರಂಗಿಣಿ ಗ್ರಂಥದಿಂದ ತಿಳಿದುಬರುತ್ತದೆ. ಅಲ್ಲಿ ಈತನನ್ನು ಸಿದ್ಧನೆಂದು ಕರೆಯಲಾಗಿದೆ. ಶೈವಕ್ಕೆ ಮೂಲವಾದ ಶಿವಸೂತ್ರಗಳನ್ನು ಉದ್ಧರಿಸಿ ಶೈವಮತವನ್ನು ಕಾಶ್ಮೀರದಲ್ಲಿ ಪುನರುತ್ಥಾನಗೊಳಿಸಿದ ವಸುಗುಪ್ತನಿಗೆ ಮುಖ್ಯ ಶಿಷ್ಯನಾದ ಈತ ಶಿವಸೂತ್ರಗಳಲ್ಲಿರುವ ಗುಪ್ತ ತತ್ತ್ವಗಳನ್ನು ವಿವರಿಸಿ ೫೧ ಶ್ಲೋಕಗಳಲ್ಲಿ ಸ್ಪಂದಕಾರಿಕೆ ಎಂಬ ಗ್ರಂಥವನ್ನು ಬರೆದು ಸೂತ್ರಾರ್ಥಗಳನ್ನು ಪ್ರಚಾರಮಾಡಿದ್ದಲ್ಲದೆ ಸ್ಪಂದಕಾರಿಕೆಗೆ ಸ್ಪಂದಸರ್ವಸ್ವ ಎಂಬ ವ್ಯಾಖ್ಯಾನವನ್ನೂ ಬರೆದಿದ್ದಾನೆ. ಈತನ ಸ್ಪಂದವೃತ್ತಿಗಳನ್ನು ಸ್ಪಂದಾಮೃತದ ನಿಷ್ಯಂದ (ಪ್ರವಾಹ) ಗಳೆಂದು ಹೊಗಳಿದ್ದಾರೆ. ಇಷ್ಟೇ ಅಲ್ಲದೆ ಶಿವಸೂತ್ರಗಳನ್ನು ವಿವರಿಸಿ ತತ್ತ್ವಾರ್ಥಚಿಂತಾಮಣಿ ಮತ್ತು ಮಧುವಾಹಿನಿ ಎಂಬ ಗ್ರಂಥಗಳನ್ನು ಈತ ರಚಿಸಿದ್ದಾನೆ. (ಜೆ.ಆರ್.)