ಕಲ್ಯಾಡಿ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕಲ್ಯಾಡಿ: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಕಸಬೆಯ ನೈಋತ್ಯಕ್ಕೆ ೧೭ಕಿಮೀ ದೂರದಲ್ಲಿ ತಾಮ್ರದ ಗಣಿಗಳಿರುವ ಗ್ರಾಮ. ಇಲ್ಲಿ ಪ್ರಾಚೀನ ಮೂಸೆಗಳ ಹಾಗೂ ಕುಲುಮೆಗಳ ಅವಶೇಷಗಳು ಹೇರಳವಾಗಿ ದೊರಕಿವೆ. ಬಹಳ ಹಿಂದಿನಿಂದಲೂ ತಾಮ್ರದ ಗಣಿ ಉದ್ಯಮ ಈ ಗ್ರಾಮದಲ್ಲಿತ್ತು ಎಂಬುದಕ್ಕೆ ಇದು ಕುರುಹಾಗಿದೆ. ಹಳೆಯ ಮೈಸೂರು ಸರ್ಕಾರದ ಭೂವೈಜ್ಞಾನಿಕ ವಿಭಾಗದ ಪ್ರಥಮ ಭಾರತೀಯ ನಿರ್ದೇಶಕರಾದ ಜಯರಾಂ (೧೯೧೭) ಕಲ್ಯಾಡಿಯ ಭೂವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿದರು. ೧೯೩೭ರಲ್ಲಿ ಡಾ.ರಾಧಾಕೃಷ್ಣ ಅವರು ತಾಮ್ರನಿಕ್ಷೇಪದ ಮಾಹಿತಿ ನೀಡಿದರು. ಎನ್.ಜಿ.ಕೆ.ಮೂರ್ತಿ ೧೯೬೪ರಲ್ಲಿ ಈ ಪ್ರದೇಶದ ವಿವರವಾದ ಭೂ ವೈಜ್ಞಾನಿಕ ಸಮೀಕ್ಷೆ ನಡೆಸಿ ತಾಮ್ರ ನಿಕ್ಷೇಪದ ಆಕೃತಿ, ಉದ್ದ, ಅಗಲ, ಆಳಗಳ ಪರಿಮಿತಿಯ ವಿವರವಾದ ಮಾಹಿತಿಯನ್ನು ಪ್ರಕಟಪಡಿಸಿದರು. ಅನಂತರ ಮೈಸೂರು ಸರ್ಕಾರದ ಭೂವೈಜ್ಞಾನಿಕ ವಿಭಾಗ ಅನೇಕ ಕೊರೆಗಳನ್ನು ಹಾಕುವುದರ ಮೂಲಕ ಪರೀಕ್ಷÁರ್ಥ ಪರಿಶೋಧನೆಗಳನ್ನು ನಡೆಸಿತು.
ನೀಣಿಕಲ್ಲು, ಕಣಶಿಲೆ, ಪದರಶಿಲೆ ರೂಪಾಂತರ ಹೊಂದಿದ ಮರಳು ಶಿಲೆ, ಅಂಪಿs ಬೊಲೈಟ್ ಇವು ಕಲ್ಯಾಡಿಯ ಸುತ್ತುಮುತ್ತು ಇರುವ ಪ್ರಮುಖ ಶಿಲೆಗಳು. ಅನೇಕ ಮಡಿಕೆಗಳಾಗಿ ಮಾರ್ಪಟ್ಟಿರುವ ಮರಳುಶಿಲೆಗಳಿಗೆ ತಾಮ್ರಯುಕ್ತ ಖನಿಜಗಳು ಸೀಮಿತವಾಗಿವೆ. ತಾಮ್ರದ ನಿಕ್ಷೇಪಗಳನ್ನು ಹೊಂದಿದ ಮರಳುಶಿಲೆ ೧೦೦೦ಮೀಟರ್ ಉದ್ದ, ೮ ರಿಂದ ೫೦ಮೀಟರ್ ಅಗಲವಿದ್ದು, ೧೦೦ ರಿಂದ ೨೮೦ಮೀಟರ್ ಆಳದವರೆಗೆ ದೊರೆಯುತ್ತದೆ. ಇದರಲ್ಲಿ ತಾಮ್ರದ ಅಂಶ ಶೇ.೭; ತಾಮ್ರನಿಕ್ಷೇಪದ ಮೊತ್ತ ೧ಕೋಟಿ ಟನ್ ಗಳೆಂದು ಅಂದಾಜು ಮಾಡಲಾಗಿದೆ. ಈಗ ಕಲ್ಯಾಡಿ ತಾಮ್ರದ ಗಣಿಗಳು ಕರ್ನಾಟಕ ತಾಮ್ರ ಕಾರ್ಪೋರೇಷನ್ನಿನ ನಿರ್ವಹಣೆಯಲ್ಲಿವೆ.