ಕಲ್ಕಿ ತಮಿಳಿನ ಒಂದು ಪತ್ರಿಕೆ. ಪ್ರಸಿದ್ಧ ತಮಿಳು ಲೇಖಕ ಆರ್. ಕೃಷ್ಣಮೂರ್ತಿ ಇದರ ಸ್ಥಾಪಕ ಮತ್ತು ಪ್ರಥಮ ಸಂಪಾದಕ.

ಕಲ್ಕಿ
ಪ್ರಥಮ ಸಂಚಿಕೆ೧೯೪೧
ಕಂಪನಿಭರತನ್ ಪಬ್ಲಿಕೇಶನ್ಸ್
ದೇಶ India
ಭಾಷೆತಮಿಳು
ಜಾಲತಾಣkalkionline.com

ಕೃಷ್ಣಮೂರ್ತಿಯವರ ಕಾವ್ಯನಾಮ ಕಲ್ಕಿ. ಸೇಲಂ ಜಿಲ್ಲೆಯ ತಿರುಚೆಂಗೋಡಿನ ಗಾಂಧಿ ಆಶ್ರಮದಲ್ಲಿದ್ದಾಗ ಅವರು ಬಿಡುವಿನ ವೇಳೆಯಲ್ಲಿ ಕಲ್ಕಿ ಎಂಬ ಕಾವ್ಯನಾಮದಿಂದ ಆನಂದ ವಿಕಟನ್ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ಗಾಂಧಿ ಆಶ್ರಮವನ್ನು ನಡೆಸುವಲ್ಲಿ ಅವರು ರಾಜಾಜಿಯವರಿಗೆ ನೆರವಾಗುತ್ತಿದ್ದರು. ಆನಂದ ವಿಕಟನ್ ಪತ್ರಿಕೆಯ ಸಂಪಾದಕರಾಗಿದ್ದ ವಾಸನ್ ಕಲ್ಕಿಯವರ ಲೇಖನಗಳಿಂದ ತುಂಬ ಪ್ರಭಾವಿತರಾದರು. ಅಷ್ಟೇ ಅಲ್ಲ, ತಮ್ಮ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಳ್ಳಬೇಕೆಂದೂ ಅವರನ್ನು ಕೇಳಿಕೊಂಡರು. ಅವರು ಆ ಹುದ್ದೆಯನ್ನು ಒಪ್ಪಿಕೊಂಡುದೇ ಅಲ್ಲದೆ, ಅತ್ಯಲ್ಪಕಾಲದಲ್ಲಿಯೇ ಪತ್ರಿಕೆಯ ಹಿರಿಮೆ ಹಲವು ಮಡಿ ಹೆಚ್ಚುವಂತೆ ಮಾಡಿದರು.

೧೯೪೧ರಲ್ಲಿ ಟಿ. ಸದಾಶಿವಂ ಅವರ ಸಕ್ರಿಯ ಸಹಕಾರ ಪಡೆದುಕೊಂಡು ಇವರು ಕಲ್ಕಿ ಪತ್ರಿಕೆಯನ್ನು ಪ್ರಾರಂಭಿಸಿದರು. ಸದಾಶಿವಂ ಇಂದು ಈ ಪತ್ರಿಕೆಯ ವ್ಯವಸ್ಥಾಪಕ- ಸಂಪಾದಕರಾಗಿದ್ದಾರೆ. ಕಲ್ಕಿಯ ರಾಜನೈತಿಕ ವಿಚಾರಧಾರೆಗೆ ರಾಜಗೋಪಾಲಾಚಾರಿಯವರು ಮಾರ್ಗದರ್ಶಕರು. ಕಲ್ಕಿ ತನ್ನ ಓದುಗರಿಗೆ ರಾಜಕೀಯ ವಿಚಾರಗಳ ಜೊತೆಗೆ ನಿಯತಲೇಖನಗಳನ್ನು (ಪ್ರವಾಸ ಕಥನಗಳು, ಜೀವನ ಚರಿತ್ರೆಗಳು, ಸಂದರ್ಶನಗಳು ಇತ್ಯಾದಿ). ಧಾರಾವಾಹಿ ಕಾದಂಬರಿಗಳನ್ನು, ಸಣ್ಣ ಕಥೆಗಳನ್ನು, ಲಘುಬರೆಹಗಳನ್ನು ಮತ್ತು ವಿಡಂಬನ ಚಿತ್ರಗಳನ್ನು ನೀಡುತ್ತದೆ. ಇದು ಹಿರಿಯರೂ ಕಿರಿಯರೂ ಆಸ್ಥೆಯಿಂದ ಓದುವ ಕೌಟುಂಬಿಕ ಪತ್ರಿಕೆ.

ಕಲ್ಕಿ ಜವಾಬ್ದಾರಿಯುತವಾದ ಪತ್ರಿಕೋದ್ಯಮದ ಫಲ. ವ್ಯಕ್ತಿಗಳನ್ನು ಮತ್ತು ಸಂಗತಿಗಳನ್ನು ವಿಮರ್ಶಿಸುವಲ್ಲಿ ಇದು ಪುರ್ವಾಗ್ರಹವನ್ನಾಗಲಿ, ಭಯವನ್ನಾಗಲಿ ತೋರದ ಬಿಚ್ಚುಮಾತಿನ ಪತ್ರಿಕೆಯಾಗಿದೆ. ಮುಕ್ತ ಉದ್ಯಮ ಸಿದ್ಧಾಂತದಲ್ಲಿ ದೃಢವಾದ ನಂಬಿಕೆ ಹೊಂದಿರುವ ಈ ಪತ್ರಿಕೆ ಆ ವಿಚಾರಗಳನ್ನು ಪ್ರತಿಪಾದಿಸಿದರೂ ಉಚ್ಚಮಟ್ಟದ ಪತ್ರಿಕೋದ್ಯಮದ ನೀತಿ_ಸಂಹಿತೆಯನ್ನು ಪಾಲಿಸಿಕೊಂಡು ಬರುತ್ತಿದೆ. ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳುವ ಅಥವಾ ಕೆಳಮಟ್ಟಕ್ಕಿಳಿಯುವ ಪ್ರವೃತ್ತಿಯನ್ನು ಎಂದೂ ತೋರಿಲ್ಲ. ಧೂಮಪಾನಕ್ಕೆ ವಿರುದ್ಧವಾಗಿ ಇದು ಸಕ್ರಿಯ ಪ್ರಚಾರವನ್ನೇ ನಡೆಸಿತು. ಬರಲಿರುವ ಆದಾಯದಲ್ಲಿ ಖೋತ ಬೀಳುವುದನ್ನೂ ಲೆಕ್ಕಿಸದೆ ರೀಡರ್ಸ್‌ ಡೈಜೆಸ್ಟ್‌ ಪತ್ರಿಕೆಯಂತೆ ಇದೂ ಸಿಗರೇಟುಗಳ ಜಾಹಿರಾತನ್ನು ಪ್ರಕಟಣೆಗೆ ಸ್ವೀಕರಿಸಲಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿಯೂ ಕಲ್ಕಿಯ ಸಾಧನೆ ಅಷ್ಟೇ ಹಿರಿದಾದ್ದು. ಕಲ್ಕಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಕೃತಿಗಳು ಸಾಹಿತ್ಯ ಅಕೆಡಮಿಯ ಪ್ರಶಸ್ತಿಗಳಿಸಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: