ಕಲೆ ಮತ್ತು ಸಮಾಜ
ಮಾನವ ಸಮಾಜಜೀವಿ. ಅವನ ಹುಟ್ಟಿಗೆ ತಂದೆತಾಯಿಯರು ಕಾರಣರು. ಅವನು ಬೆಳೆಯುವುದು ಒಂದು ಬಳಗದ ಮಧ್ಯೆ. ಆತ ಬಾಳುವ ಸಾಮಾಜಿಕ ಸನ್ನಿವೇಶ ಒಂದು ಕುಟುಂಬದಂತೆ ಸಣ್ಣ ಸಂಸ್ಥೆಯಾಗಿರಬಹುದು. ಒಂದು ರಾಷ್ಟ್ರದಂತೆ ದೊಡ್ಡ ಸಂಸ್ಥೆಯಾಗಿರಬಹುದು. ಸಣ್ಣದಾಗಲಿ ದೊಡ್ಡದಾಗಲಿ ಆ ಸಾಮಾಜಿಕ ಸನ್ನಿವೇಶವನ್ನು ಬಿಟ್ಟು ಅದರ ಹೊರಗೆ ಬಾಳಲು ಪ್ರಯತ್ನಿಸಿದರೆ ಅವನ ಜೀವನ ಕುಂಠಿತವಾಗುತ್ತದೆ. ಹುಟ್ಟಿದ ಒಂದು ಮಗುವನ್ನು ಅಡವಿಯಲ್ಲಿ ಬಿಟ್ಟರೆ ಅದು ಮೃಗಗಳ ಮಧ್ಯೆ ಬೆಳೆಯುವುದರಿಂದ ಅದರಲ್ಲಿ ಮಾನವ ವ್ಯಕ್ತಿತ್ವ ಬೆಳೆಯುವುದಿಲ್ಲ; ಮಾನವನ ವ್ಯಕ್ತಿತ್ವಕ್ಕೆ ವಿಶಿಷ್ಟವಾದ ಸಂಸ್ಕøತಿ ಬೆಳೆಯುವುದು ತಂದೆ ತಾಯಿ ಸೋದರರು ಸಂಗಡಿಗರು ಮತ್ತು ಉಪಾಧ್ಯಾಯರ ಸಹಕಾರದಿಂದ; ಮತ್ತು ಭಾವನೆಗಳು ಬೆಳೆಯುವುದು ಒಂದು ದೇವಾಲಯ, ಒಂದು ಚರ್ಚ್ ಅಥವಾ ಮಸೀದಿಯ ಮೂಲಕ; ಹಕ್ಕು ಬಾಧ್ಯತೆಗಳ ತಿಳಿವು ಬೆಳೆದಿರುವುದು ಒಂದು ರಾಷ್ಟ್ರ ವ್ಯವಸ್ಥೆಯ ಮೂಲಕ.[೧]
ಮತ, ವಿಜ್ಞಾನ, ಕಲೆ
ಬದಲಾಯಿಸಿಮಾನವನ ಸಂಸ್ಕøತಿಯಲ್ಲಿ ಮುಖ್ಯವಾದವು ಮೂರು : ಮತ, ವಿಜ್ಞಾನ ಮತ್ತು ಕಲೆ. ಇವು ಯಾವಾಗ ಮಾನವನಲ್ಲಿ ಹುಟ್ಟಿದುವೆಂದು ಹೇಳಲು ಸಾಧ್ಯವಿಲ್ಲ. ಕ್ರಿ.ಪೂ.(20000)ಕ್ಕೆ ಆಗಲೇ ಅವನು ಕೆತ್ತಿದ ಅಥವಾ ಕೊರೆದ ಚಿತ್ರಗಳು ಗುಹೆಗಳಲ್ಲಿ ದೊರೆಯುತ್ತವೆ. ಅದಕ್ಕಿಂತಲೂ ಹಿಂದಿನ ಕಾಲದಲ್ಲಿ ಅವನು ಉಪಯೋಗಿಸಿದ ಕಲ್ಲಿನ ಆಯುಧಗಳ ಮತ್ತು ಮಣ್ಣಿನ ಮಡಕೆಗಳ ಅವಶೇಷಗಳು ದೊರೆತಿವೆ. ಮೊಟ್ಟಮೊದಲಿಗೆ ಬೆಂಕಿಯನ್ನು ಮಾಡುವ ರಹಸ್ಯವನ್ನು ಕಲಿತ ಮಾನವ ಒಬ್ಬ ದೊಡ್ಡ ವಿಜ್ಞಾನಿ. ತನಗೆ ಮಂಗಳವನ್ನುಂಟುಮಾಡುವ ಅಥವಾ ಕೆಡುಕನ್ನುಂಟುಮಾಡುವ ಶಕ್ತಿಗಳನ್ನು ಭಾವಿಸಿ ಅವುಗಳನ್ನು ಒಲಿಸಿಕೊಳ್ಳಲು ಸಣ್ಣಪುಟ್ಟ ಸಂಸ್ಕಾರಗಳನ್ನು ರಚಿಸಿದವನಲ್ಲಿ ಮತಭಾವನೆ ಇದೆ. ಕಲೆ, ವಿಜ್ಞಾನ, ಮತ ಇವು ಈಚಿನ ಕಾಲದಲ್ಲಿರುವಂತೆ ಹಿಂದಿನ ಕಾಲದಲ್ಲಿ ಬೇರೆ ಬೇರೆಯಾಗಿರದೆ ಒಂದರೊಡನೆ ಒಂದು ಹೆಣೆದುಕೊಂಡಿದ್ದವು. ಬೆಂಕಿಯನ್ನು ಮಾಡುವುದು ಒಂದು ಅಪ್ಪಟ ವೈಜ್ಞಾನಿಕ ಪ್ರಯೋಗವಾಗಿರಲಿಲ್ಲ. ಅದು ಮತಭಾವನೆಯೊಡನೆ ಬೆರೆತಿತ್ತು. ಕೆಲವು ಕಾಡುಜನ ಬೆಂಕಿಯನ್ನು ಮಾಡುವ ಸಲಕರಣೆಗೆ ಒಂದು ಸುಂದರ ರೂಪವನ್ನು ಕೊಟ್ಟಿರುತ್ತಾರೆ. ಪ್ರಾಕ್ತನರ ಹಾಡುಗಳು, ಕುಣಿತ ಮುಂತಾದವು ಅವರ ಮತ ಸಂಸ್ಕಾರಗಳ ಅಂಗಗಳಾಗಿದ್ದುವು. ಆ ಜನರಲ್ಲಿ ಲಲಿತಕಲೆ ಮತ್ತು ಉಪಯುಕ್ತ ಕಲೆ ಎಂಬ ಭೇದ ಕಾಣಿಸುವುದಿಲ್ಲ. ಕಲೆಗಾಗಿ ಕಲೆ ಎಂಬ ಭಾವನೆ ಮೇಲ್ಮಟ್ಟದ ಸಂಸ್ಕøತಿಯನ್ನು ಮುಟ್ಟಿದ ಪ್ರಾಚೀನ ಗ್ರೀಕರಲ್ಲೂ ಭಾರತೀಯರಲ್ಲೂ ಇದ್ದಂತೆ ತೋರುವುದಿಲ್ಲ. ಗ್ರೀಕರಲ್ಲಿ ನಾಟಕ ಹುಟ್ಟಿ ಬೆಳೆದದ್ದು ಮತಸಂಸ್ಕಾರಗಳ ಸಂದರ್ಭಗಳಲ್ಲಿ. ಅವರ ವಾಸ್ತುಶಿಲ್ಪ ಮತ್ತು ವಿಗ್ರಹಗಳ ಶಿಲ್ಪ ಅವರ ಮತಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಪ್ರಾಚೀನ ಭಾರತದಲ್ಲೂ ಗಾನ, ಶಿಲ್ಪ, ನೃತ್ಯ ಮುಂತಾದವು ಅದರ ನಿವಾಸಿಗಳ ಮತಭಾವನೆಗಳಿಗೆ ಪೋಷಕವಾಗಿ ಹುಟ್ಟಿ ಬೆಳೆದುವು. ಈ ಜನಾಂಗಗಳ ಕಾವ್ಯ ನಾಟಕಗಳ ಉದ್ದೇಶ ಇತ್ತೀಚಿನ ವರೆಗೆ ಮತಭಾವನೆಯನ್ನೂ ನೀತಿ ಧರ್ಮಗಳನ್ನೂ ಪುಷ್ಟಿಗೊಳಿಸುವುದಾಗಿತ್ತು. ಯೂರೋಪಿನ ಇತಿಹಾಸದ ಮಧ್ಯಯುಗದಲ್ಲಿ ಕಲೆ ಮತದ ಅಧೀನಕ್ಕೆ ಒಳಪಟ್ಟಿತ್ತು. ಕಲೆಗಾಗಿ ಕಲೆ ಎಂಬುದು ಯೂರೋಪಿನಲ್ಲಿ ತುಂಬ ಈಚೆಗೆ ಹುಟ್ಟಿದ ಭಾವನೆ. ಕಲೆಗಾಗಿ ಕಲೆ ಎಂಬ ವಾದಕ್ಕೆ ಸೋವಿಯತ್ ಸಮಾಜವಾದಿ ಗಣರಾಜ್ಯದಲ್ಲಿ ಪುರಸ್ಕಾರವಿಲ್ಲ. ಸೋವಿಯತ್ ದೇಶದಲ್ಲಿ ಕಲೆ ಮತದ ದಾಸ್ಯದಿಂದ ಬಿಡುಗಡೆ ಹೊಂದಿತಾದರೂ ರಾಜಕೀಯದಿಂದ ಬಿಡುಗಡೆ ಹೊಂದಿಲ್ಲವೆಂದು ಒಂದು ವಾದವಿದೆ. ಸಮಾಜದ ಉತ್ಕರ್ಷಕ್ಕೆ ಸಾಹಿತ್ಯ ನೆರವಾಗಬೇಕೆಂಬುದು ಅಲ್ಲಿಯ ಭಾವನೆ.[೨]
ಭಿನ್ನಾಭಿಪ್ರಾಯ
ಬದಲಾಯಿಸಿಸಮಾಜಕ್ಕೂ ಕಲೆ, ವಿಜ್ಞಾನ ಮತ್ತು ಮತಗಳಿಗೂ ಇರುವ ಸಂಬಂಧದ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿವೆ. ಈ ಅಭಿಪ್ರಾಯಗಳಿಗೆ ಸಂವಾದಿಯಾಗಿ ಸಮಾಜಶಾಸ್ತ್ರದಲ್ಲೂ ಇವುಗಳ ವಿಚಾರವಾಗಿ ಅನೇಕ ಸಮಸ್ಯೆಗಳು ಹುಟ್ಟಿವೆ. ಇಂದಿನ ಕಲೆಗಾರರೂ ವಿಜ್ಞಾನಿಗಳೂ ಕಲೆ ಮತ್ತು ವಿಜ್ಞಾನಗಳ ವೈಶಿಷ್ಟ್ಯವನ್ನೂ ಸ್ವಾತಂತ್ರ್ಯವನ್ನೂ ಎತ್ತಿಹಿಡಿಯುವ ಉದ್ದೇಶದಿಂದ ಕಲೆಗಾಗಿ ಕಲೆ, ವಿಜ್ಞಾನಕ್ಕಾಗಿ ವಿಜ್ಞಾನ ಎಂಬ ತತ್ತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಕಲೆಗೆ ಮತ್ತು ವಿಜ್ಞಾನಕ್ಕೆ ವಿಶಿಷ್ಟವಾದ ಸ್ವಭಾವಗಳಿವೆ. ಒಂದೊಂದೂ ತಮ್ಮವೇ ಆದ ವಿಶೇಷ ದೃಷ್ಟಿಗಳನ್ನೂ ತದನುಗುಣವಾದ ವಿಧಾನಗಳನ್ನೂ ಪಡೆದಿರುತ್ತವಾದ್ದರಿಂದ ಆ ವೈಶಿಷ್ಟ್ಯವನ್ನು ಬೆಳೆಸಲು ಕಲೆಗಾರರಿಗೆ ಮತ್ತು ವಿಜ್ಞಾನಿಗಳಿಗೆ ಸ್ವಾತಂತ್ರ್ಯವಿರಬೇಕೆಂದು ಇವರ ವಾದ.
ಮಾನವನ ಹೃದಯದ ಭಾವನೆ
ಬದಲಾಯಿಸಿಮಾನವನ ಹೃದಯದ ಭಾವನೆಗಳನ್ನು ಕಾವ್ಯ, ಗೀತ, ನೃತ್ಯ, ಶಿಲ್ಪ ಮುಂತಾದ ಮಾಧ್ಯಮಗಳ ಮೂಲಕ ಸಾಕ್ಷಾತ್ಕಾರ ಮಾಡಿಕೊಡುವುದು ಕಲೆಯ ಉದ್ದೇಶ. ಪ್ರಕೃತಿಯ ವಿವಿಧ ವಸ್ತುಗಳನ್ನು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ವಿವರಿಸಿ ಅವುಗಳ ನಿಕಟ ಸಂಬಂಧಗಳನ್ನು ಸೂತ್ರಗಳ ರೂಪದಲ್ಲಿ ನಿರೂಪಿಸುವುದು ವಿಜ್ಞಾನದ ವಿಶಿಷ್ಟ ಉದ್ದೇಶ. ನಮ್ಮ ಪವಿತ್ರ ಭಾವನೆಗಳ ಸ್ವರೂಪವನ್ನೂ ಧರ್ಮಾಧರ್ಮಗಳ ಸ್ವರೂಪವನ್ನೂ ತಿಳಿಸುವುದು ಮತದ ಉದ್ದೇಶ. ಕಲೆ, ವಿಜ್ಞಾನ ಮತ್ತು ಮತಗಳಲ್ಲಿ ಪ್ರತಿಯೊಂದಕ್ಕೂ ತನ್ನ ವಿಶಿಷ್ಟ ಉದ್ದೇಶವನ್ನು ಈಡೇರಿಸಲು ಸ್ವಾತಂತ್ರ್ಯವಿರಬೇಕು ಎಂಬುದು ನ್ಯಾಯಸಮ್ಮತವಾದದ್ದು. ಒಂದು ಇನ್ನೊಂದು ಮಾಡುವ ಕೆಲಸವನ್ನು ನಿರ್ವಹಿಸಲಾರದು. ಪ್ರಕೃತಿಯ ಕಾರ್ಯಕಾರಣ ಸಂಬಂಧವನ್ನು ಕಲೆ ತಿಳಿಸಲಾರದು. ಮಾನವ ಹೃದಯದ ಭಾವಗಳನ್ನು ವಿಜ್ಞಾನ ಸಾಕ್ಷಾತ್ಕಾರ ಮಾಡಿಕೊಡಲಾರದು. ಕಲೆ ಮತ್ತು ವಿಜ್ಞಾನಗಳು ಪೂಜ್ಯಭಾವನೆಗಳ, ಧರ್ಮಾಧರ್ಮಗಳ, ಸ್ವರೂಪವನ್ನು ಮತದಂತೆ ತಿಳಿಸಲಾರವು. ಹಾಗೆಯೇ ಮತವೂ ವಿಜ್ಞಾನ ತಿಳಿಸುವಂತೆ ಕಾರ್ಯ ಕಾರಣಸಂಬಂಧವನ್ನು ಪ್ರಾಮಾಣಿಕವಾಗಿ ತಿಳಿಸಲಾರದೆ. ಹಾಗೆ ಒಂದು ಇನ್ನೊಂದರ ಉದ್ದೇಶವನ್ನು ಈಡೇರಿಸಲು ಪ್ರಯತ್ನಪಟ್ಟಾಗ ಅದು ತನ್ನ ಉದ್ದೇಶವನ್ನೂ ಈಡೇರಿಸದೆ ಇನ್ನೊಂದರ ಉದ್ದೇಶಕ್ಕೂ ಭಂಗ ತರಬಹುದು.
ಮಾನವ ಜೀವನ
ಬದಲಾಯಿಸಿಕಲೆ, ವಿಜ್ಞಾನ ಮತ್ತು ಮತ-ಈ ಮೂರೂ ಮಾನವನ ಜೀವನಕ್ಕೆ ಅಗತ್ಯವಾದವು. ಆದ್ದರಿಂದ ಮಾನವ ತುಂಬ ಹಿಂದಿನ ಕಾಲದಿಂದ ಇವುಗಳಲ್ಲಿ ಆಸಕ್ತಿ ಹೊಂದಿರುವುದು ಸ್ವಾಭಾವಿಕ. ಇವು ಮಾನವ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಸಂಗೀತ, ಸಾಹಿತ್ಯ, ಚಿತ್ರ ಮತ್ತು ಶಿಲ್ಪಗಳಲ್ಲಿ ಜನಕ್ಕೆ ಆಸಕ್ತಿ ಇರುವಂತೆಯೇ ಭೌತ ವಿಜ್ಞಾನ, ಜೀವವಿಜ್ಞಾನಗಳಲ್ಲೂ ಮತಧರ್ಮಗಳಲ್ಲೂ ಆಸಕ್ತಿ ಇದೆ. ತುಂಬ ಹಿಂದಿನ ಕಾಲದಿಂದ ಮಾನವ ಈ ಆಸಕ್ತಿಗಳನ್ನು ಜೊತೆಜೊತೆಯಲ್ಲಿ ಈಡೇರಿಸಲು ಪ್ರಯತ್ನಪಟ್ಟಿರುತ್ತಾನೆ. ಆದರೆ ಕಾಲಕ್ರಮದಲ್ಲಿ ಒಂದೊಂದರ ವೈಶಿಷ್ಟ್ಯವನ್ನೂ ಬೆಳೆಸಲು ಒಂದೊಂದನ್ನು ಪ್ರತ್ಯೇಕಿಸಿ ಅದನ್ನೇ ತನ್ನ ಮುಖ್ಯವೃತ್ತಿಯಾಗಿ ಮಾಡಿಕೊಂಡು ಒಂದೊಂದಕ್ಕೂ ಹೆಚ್ಚು ಕಾಲವನ್ನೂ ಶ್ರಮವನ್ನೂ ವಿನಿಯೋಗಿಸಲಾರಂಭಿಸಿದ. ಕಲೆಗಾಗಿಯೇ ವಿಜ್ಞಾನಕ್ಕಾಗಿಯೇ ಅಥವಾ ಮತಕ್ಕಾಗಿಯೇ ಅವರು ಹೆಚ್ಚು ಸಮಯವನ್ನೂ ವ್ಯವಸಾಯವನ್ನೂ ಮುಡುಪಾಗಿ ಇಟ್ಟುಕೊಂಡರೂ ಪ್ರತಿಯೊಬ್ಬನೂ ಅನ್ನ, ಬಟ್ಟೆ, ವಸತಿ ಮುಂತಾದ ಜೀವನದ ಅಗತ್ಯಗಳಿಗೆ ಗಮನಕೊಡಲೇಬೇಕು. ಇತರರೊಡನೆ ವ್ಯವಹರಿಸುವಾಗ ನೀತಿಧರ್ಮಗಳನ್ನು ಪರಿಪಾಲಿಸಬೇಕು. ಪ್ರಕೃತಿಯ ನಿಯಮದ ವಿಚಾರವಾಗಿ ಸ್ವಲ್ಪ ಮಟ್ಟಿಗಾದರೂ ಜ್ಞಾನಾರ್ಜನೆ ಮಾಡಬೇಕು. ಆದ್ದರಿಂದ ಕಲೆಗಾಗಿಯೇ, ವಿಜ್ಞಾನಕ್ಕಾಗಿಯೇ, ಮತಕ್ಕಾಗಿಯೇ ಸಂಪೂರ್ಣವಾಗಿ ಬಾಳುತ್ತೇನೆಂಬುದು ಅಸಾಧ್ಯ. ಕಲೆಗಾರನೂ ವಿಜ್ಞಾನಿಯೂ ಪಾದ್ರಿಯೂ ಪುರೋಹಿತನೂ ತಾವು ಅವಲಂಬಿಸಿದ ಮುಖ್ಯವೃತ್ತಿಯ ಮೂಲಕ ಜೀವನ ನಡೆಸಲು ಅಗತ್ಯವಾದಷ್ಟನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಕಾವ್ಯಾಭ್ಯಾಸ, ವಿಜ್ಞಾನ ಸಂಶೋಧನೆ, ಮತಬೋಧೆ ಇವುಗಳ ಮುಖ್ಯ ಉದ್ದೇಶ ಹಣಸಂಪಾದನೆ ಮತ್ತು ಕೀರ್ತಿಸಂಪಾದನೆಯಾಗದಿದ್ದರೂ ಇವು ಉಪುದ್ದೇಶಗಳಾಗಿ ಇದ್ದೇ ಇರುತ್ತವೆ. ಕಲೆಗಾಗಿ ಕಲೆ, ವಿಜ್ಞಾನಕ್ಕಾಗಿ ವಿಜ್ಞಾನ ಎಂದು ವಾದಿಸುವವರು ಯಾರೂ ತಮಗೆ ಲೇಶಮಾತ್ರವೂ ಈ ಉದ್ದೇಶಗಳಿಲ್ಲವೆಂದು ಹೇಳಲಾರರು. ಕಲೆಗಾಗಿ ಕಲೆ, ವಿಜ್ಞಾನಕ್ಕಾಗಿ ವಿಜ್ಞಾನ ಎಂದು ವಾದಿಸುವವರು ಕಲೆಯ ಅಂಶಕ್ಕೆ, ವಿಜ್ಞಾನದ ಅಂಶಕ್ಕೆ ಹೆಚ್ಚು ಬೆಲೆಕೊಡುತ್ತಾರೆ. ಕೀರ್ತಿ, ಹಣಸಂಪಾದನೆ ಮುಂತಾದವನ್ನು ಗೌಣವಾಗಿ ಎಣಿಸುತ್ತಾರೆ. ಹೀಗೆ ಇತರ ಮೌಲ್ಯಗಳನ್ನು ಗೌಣವಾಗಿ ಎಣಿಸಿ ಕಲೆಯ ಮೌಲ್ಯವೇ ಪ್ರಧಾನವೆಂದೆನಿಸುವುದು ಒಪ್ಪಬೇಕಾದ್ದೇ. ಆದರೆ ಗೌಣವಾಗಿಯಾದರೂ ಇಲ್ಲವೇ ಇಲ್ಲವೆಂದು ವಾದಿಸುವುದು ಹಠವಾಗುತ್ತದೆ.
ಕಲೆಯನ್ನು ಆರಾಧಿಸುವುದು
ಬದಲಾಯಿಸಿಕಲೆಯನ್ನು ಆರಾಧಿಸುವುದು ತಮ್ಮ ಸ್ವಂತ ಸಂತೋಷಕ್ಕಾಗಿ, ಇತರರು ಅದನ್ನು ಮೆಚ್ಚಲಿ ಬಿಡಲಿ ಅದನ್ನು ತಾವು ಲಕ್ಷಿಸುವುದಿಲ್ಲ ಎಂದು ಕೆಲವು ಕಲೆಗಾರರು ಹೇಳುವುದುಂಟು. ಇಂಥ ಕಲೆಗಾರರನ್ನು ಸ್ವಾರ್ಥಿಪರ (ಎಗೋಯಿಸ್ಟ್) ಕಲೆಗಾರರೆಂದು ಕಲೆಯುವುದು ವಾಡಿಕೆ. ಇವರು ಕೆಲವು ವೇಳೆ ಅರಸಿಕರನ್ನು ಕುರಿತು ಅಹಂಕಾರದಿಂದ ಕಟುವಾಗಿ ಮಾತನಾಡುವುದುಂಟು. ನಿಜವಾಗಿಯೂ ಇವರ ಬಿರಿನುಡಿಗೆ ಕಾರಣವಾದ್ದು ತಮ್ಮ ಕಲೆಯನ್ನು ಜನ ಮೆಚ್ಚಲಿಲ್ಲವೆಂಬ ಅಂತರಂಗದ ಸಂಕಟ. ಅವರು ಒಂದು ಪದ್ಯವನ್ನೋ ಚಿತ್ರವನ್ನೋ ಹಾಡನ್ನೋ ರಚಿಸುವುದು ಜನರ ಮೆಚ್ಚಿಗೆಗಾಗಿ. ಅವರ ಅಂತರಂಗದ ಇದ್ದೇಶ ತಮ್ಮ ಕೃತಿ ಜನರಿಗೆ ಮೆಚ್ಚಿಗೆಯಾಗಲೆಂದೇ, ತಮ್ಮ ಸ್ವಂತ ಸಂತೋಷಕ್ಕಾಗಿ ಮಾತ್ರ ಅದನ್ನು ರಚಿಸಿದುದಾದರೆ ಅದನ್ನು ಪ್ರಕಟಿಸದೆ ತಮ್ಮ ಅಂತರಂಗದಲ್ಲೆ ಬಚ್ಚಿಟ್ಟುಕೊಳ್ಳಬೇಕಾಗಿತ್ತು. ಹಾಗೆ ಬಚ್ಚಿಟ್ಟುಕೊಳ್ಳದೆ ಕಲೆಗಾರರು ಅವನ್ನು ಪ್ರಕಟಿಸುತ್ತಾರೆ. ಹಾಗೆ ಪ್ರಕಟಿಸುವುದರ ಒಳ ಉದ್ದೇಶ, ಕಲೆ ಸಾಮಾಜಿಕ ಮೆಚ್ಚಿಕೆ ಪಡೆಯಲೆಂಬುದೇ, ಈ ಒಳ ಉದ್ದೇಶಕ್ಕೂ ಅವರು ಆಡುವ ಮಾತಿಗೂ ಅಸಾಂಗತ್ಯವಿದೆಯೆಂಬುದನ್ನು ಅವರು ಮನಗಂಡಿರುವುದಿಲ್ಲ. ತನಗಾಗಿಯೇ ತನ್ನ ಕಲೆಯೆಂಬಾತ ಕೇವಲ ಹೃದಯ ಕವಿಯಾಗಿರಬೇಕಾಗಿತ್ತು. ತನ್ನ ಮನಸ್ಸಿನಲ್ಲೇ ತನ್ನ ಭಾವವನ್ನು ಕಂಡು ಸಂತುಷ್ಟನಾಗಬೇಕಾಗಿತ್ತು. ಯಾವ ಕಲೆಗಾರನೂ ಅಷ್ಟಕ್ಕೇ ತೃಪ್ತನಾಗುವುದಿಲ್ಲ. ತನ್ನ ಮನಸ್ಸಿಗೆ ಹೊಳೆದ ಒಂದು ಸುಂದರ ಭಾವವನ್ನು ಪದ್ಯರೂಪದಲ್ಲೋ ಚಿತ್ರರೂಪದಲ್ಲೋ ವಿಗ್ರಹರೂಪದಲ್ಲೋ ವಿಷಯೀಕರಿಸಿ ಪ್ರಕಟಿಸುತ್ತಾನೆ. ಹೀಗೆ ಮನಸ್ಸಿನಲ್ಲಿದ್ದದ್ದನ್ನು ಮಾತಿನ ಮೂಲಕ ಅಥವಾ ವರ್ಣರೇಖೆಗಳ ಮೂಲಕ ಹೊರಹಾಕುವುದರ ಉದ್ದೇಶವೆಂದರೆ ಅವನ ಮನಸ್ಸಿನ ಭಾವನೆ ಆ ಮಾಧ್ಯಮದ ಮೂಲಕ ಇತರರ ಮನಸ್ಸಿಗೆ ಹಾಯಬೇಕೆಂಬುದೇ. ಈ ಸಾಮಾಜಿಕ ಆಸಕ್ತಿ ಇಲ್ಲದಿದ್ದರೆ ಯಾವುದೊಂದು ಕಲಾಕೃತಿಯೂ ಹುಟ್ಟುವ ಅಗತ್ಯವೇ ಇರುವುದಿಲ್ಲ. ಕವಿ-ಸಹೃದಯ ಸಂಬಂಧ ಕಲೆಯ ಸೀಮೆಯಲ್ಲಿ ಅವಿಭಾಜ್ಯ ಮತ್ತು ಅಗತ್ಯ ಸಂಬಂಧ. ಕವಿತೆಯನ್ನು ಸವಿಯುವ ಸಹೃದಯರಿಲ್ಲದಿದ್ದರೆ ಕವಿತೆಯ ಚಿಲುಮೆ ಬತ್ತಿ ಹೋಗುತ್ತದೆ. ರಚಿಸಿದ ಕೃತಿಗೆ ಸಹೃದಯರ ಪ್ರೋತ್ಸಾಹ ದೊರಕಬೇಕೆಂದೂ ಅರಸಿಕರಿಗೆ ಕವಿತೆಯನ್ನು ಹೇಳುವ ದುರದೃಷ್ಟ ತಮಗೆ ಬಾರದಿರಲೆಂದೂ ರಸಿಕರಾದ ಜನ ದೊರಕುವುದು ತಮ್ಮ ಪೂರ್ವಜನ್ಮದ ಸುಯೋಗವೆಂದೂ ಅನೇಕ ಕವಿಗಳು ಭಾವಿಸುತ್ತಿದ್ದರೆಂಬುದಕ್ಕೆ ಪೂರ್ವ ಕವಿಕೃತಿಗಳಿಂದ ಮಾತುಗಳನ್ನು ಧಾರಾಳವಾಗಿ ಉದ್ಧರಿಸಬಹುದು.
ಕಲೆಗಾರರ ಕೊಡುಗೆ
ಬದಲಾಯಿಸಿಸಮಾಜಿಕರೂ ಕಲೆಗಾರರ ಕೊಡುಗೆಯನ್ನು ಮೆಚ್ಚಿ ಅವರಿಗೆ ಕೃತಜ್ಞತೆ ಸಲ್ಲಿಸಿರುತ್ತಾರೆ. ಕವಿ ಕೃತಿಯನ್ನು ಅಂಬಾರಿಯ ಮೇಲೆ ಇರಿಸಿ ಮೆರವಣಿಗೆ ಮಾಡಿದ ಸಂದರ್ಭಗಳುಂಟು. ಚಿತ್ರಗಳಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಅವನ್ನು ಕಲಾಸಂಗ್ರಹಾಲಯಗಳಲ್ಲಿಟ್ಟು ಕಲೆಯಲ್ಲಿ ತಮಗಿರುವ ಪ್ರೀತಿ ಗೌರವಗಳನ್ನು ತೋರಿಸಿರುವವರುಂಟು. ಸಂಗೀತಗಾರರನ್ನು, ಶಿಲ್ಪಿಗಳನ್ನು ಸಮಾಜ ಸನ್ಮಾನಿಸುತ್ತಿರುವುದು ಕಲೆಗೂ ಸಮಾಜಕ್ಕೂ ಇರುವ ನಿಕಟ ಸಂಬಂಧವನ್ನು ಎತ್ತಿ ತೋರಿಸುತ್ತದೆ.ಕಲೆ ಸಮಾಜವನ್ನು ಸಂಸ್ಕøತಗೊಳಿಸುವ ಒಂದು ಉತ್ತಮ ಶಕ್ತಿ. ಆದ್ದರಿಂದ ಕಲೆಯನ್ನು ಬೋಧಿಸುವುದಕ್ಕಾಗಿ ಸಮಾಜ ಶಿಕ್ಷಣ ಸಂಸ್ಥೆಗಳನ್ನು ಏರ್ಪಡಿಸಿದೆ. ಕಲಾ ಕ್ಷೇತ್ರಗಳಿಗೆ ನೆರವು ನೀಡಿದೆ. ಸಮಾಜದ ಮೇಲೆ ಕಲೆಯ ಪ್ರಭಾವ ಅತಿಶಯವಾಗಿರುವುದರಿಂದ ಒಳ್ಳೆಯ ಕಲೆಯನ್ನು ಪ್ರೋತ್ಸಾಹಿಸಿದಂತೆಯೇ ಸಮಾಜಕ್ಕೆ ಕೇಡುಂಟು ಮಾಡುವ ಅಶ್ಲೀಲ ಕಲೆಯನ್ನೂ ನೀತಿಗೆಟ್ಟ ಕಲೆಯನ್ನೂ ತಡೆಗಟ್ಟಲೂ ಹದ್ದಿನಲ್ಲಿಡಲೂ ಸಮಾಜ ಪ್ರಯತ್ನಪಟ್ಟಿರುತ್ತದೆ. ಕಲೆಗೂ ಸಮಾಜಕ್ಕೂ ಅಗತ್ಯ ಸಂಬಂಧವಿರುವುದರಿಂದ ಕಲೆಯನ್ನು ಯಾವ ರೀತಿಯಲ್ಲಿ ಪೋಷಿಸಬೇಕು, ಯಾವ ರೀತಿಯಲ್ಲಿ ಅದನ್ನು ಸಮಾಜದ ಹತೋಟಿಗೆ ಒಳಪಡಿಸಬೇಕು ಎಂಬುದು ಸಮಾಜಶಾಸ್ತ್ರದ ಒಂದು ಮುಖ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ.ಕಲೆಗೂ ಸಮಾಜಕ್ಕೂ ಇರುವ ನಿಕಟಸಂಬಂಧವನ್ನು ಇನ್ನೊಂದು ರೀತಿಯಲ್ಲಿ ಸ್ಪಷ್ಟಪಡಿಸಬಹುದು. ಒಂದೊಂದು ಕಾಲದ ಕಲೆಯೂ ಆಯಾ ಕಾಲದ ಸಮಾಜವನ್ನು ಪ್ರತಿಬಿಂಬಿಸುತ್ತದೆ. ಆದಿವಾಸಿಗಳ ಸಾಮಾಜಿಕ ಜೀವನ ಅವರ ಕಲೆಯಲ್ಲಿ ಪ್ರತಿಫಲಿಸಿರುತ್ತದೆ. ಹಳ್ಳಿಯ ಜನರ ಕಲೆಗಳೂ ಪ್ರಾಚೀನ ಸಮಾಜದ ಕಲೆಗಳೂ ಆಧುನಿಕ ಸಮಾಜದ ಕಲೆಗಳೂ ಬೇರೆಬೇರೆಯಾಗಿರುವುದಕ್ಕೆ ಆಯಾ ಸಮಾಜಗಳ ಜೀವನದ ವೈವಿಧ್ಯ ಕಾರಣ.
ಆದಿವಾಸಿ ಸಮಾಜದ ಕಲೆಗಳು
ಬದಲಾಯಿಸಿಆದಿವಾಸಿಗಳ ಕಲೆ ಮುಖ್ಯವಾಗಿ ಚಿತ್ರರೂಪವಾದ ಸಂಕೇತಗಳಾಗಿವೆ. ಆ ಸಂಕೇತಗಳು ಅಲಂಕಾರಗಳು ಮಾತ್ರವಲ್ಲ, ಕೇಡ ಮತ್ತು ಕಾಯಿಲೆಗಳನ್ನು ನಿವಾರಿಸುವ ರಕ್ಷೆಗಳಾಗಿಯೂ ಇವೆ. ಅವರ ಚಿತ್ರಗಳು ಅವರ ಜೀವನದಲ್ಲಿ ಪರಿಣಾಮಕಾರಿಗಳಾದ ಬೇಟೆ ಮತ್ತು ಯುದ್ದಗಳನ್ನು ಪ್ರತಿಬಿಂಬಿಸುತ್ತವೆ. ಅವರ ಶಿಲ್ಪ ವೀರಪ್ರಶಸ್ತಿಗಾಗಿ ಹುಟ್ಟಿದ್ದು. ಅವರು ಚಿತ್ರಗಳನ್ನು ಮಾಟಕ್ಕಾಗಿಯೂ ಉಪಯೋಗಿಸುತ್ತಾರೆ. ಮಾಟಕ್ಕಾಗಿ ಅವರು ಉಪಯೋಗಿಸುವ ಸಂಕೇತಗಳು ಹಲವು ಬಗೆಯವು. ದೋಣಿಗಳ ಮೇಲೆ ಕೆತ್ತಿದ ಮೀನಿನ ಸಂಕೇತದ ಉದ್ದೇಶ ಮಾಟ. ಪ್ರಾಚೀನ ಐಗುಪ್ತರ ಕಮಲ ಬಹು ಮುಖ್ಯ ಸಂಕೇತ. ಅವರ ಮುಖ್ಯ ದೇವತೆಯಾದ ಸೂರ್ಯನ ಸಂಕೇತವದು. ಅದರ ಬಳಕೆ ಐಗುಪ್ತರಿಂದ ಗ್ರೀಸಿಗೂ ರೋಮಿಗೂ ಬ್ರಿಟನ್ನಿಗೂ ಹಬ್ಬಿತು. ಪ್ರಾಕ್ತನರು ಕಲೆಯ ಸಂಕೇತಗಳನ್ನು ತಮ್ಮ ಕುಲದೇವತೆಯ ಲಾಂಛನಗಳಾಗಿ ಬಳಸಿರುವುದೂ ಉಂಟು. ಅವನ್ನು ಕೋಲುಗಳ ಮೇಲೆ ಪ್ರದರ್ಶಿಸುತ್ತಾರೆ. ಈ ಲಾಂಛನಗಳು ಪ್ರಾಣಿರೂಪವಾಗಿರಬಹುದು ಅಥವಾ ಸಸ್ಯರೂಪವಾಗಿರಬಹುದು. ಪ್ರಾಕ್ತನರು ವೀರರ ರೂಪಗಳನ್ನು, ದೇವತೆಗಳ ರೂಪಗಳನ್ನು ಉತ್ಸವಗಳ ಕಾಲದಲ್ಲಿ ಮುಖವಾಡಗಳಾಗಿ ಧರಿಸುತ್ತಿದ್ದರು.
ಹಳ್ಳಿಗರ ಕಲೆ
ಬದಲಾಯಿಸಿಹಳ್ಳಿಗರ ಕಲೆಯಲ್ಲಿ ಪ್ರಾಕ್ತನರ ಕಲೆಯ ಅಂಶಗಳು ಹೆಚ್ಚಾಗಿ ಉಳಿದುಕೊಂಡಿವೆ. ಇವನ್ನು ಭಾರತದ ಹಳ್ಳಿಗಳ ಕಲೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಳ್ಳಿಗಳಲ್ಲಿ ವಿಶೇಷವಾಗಿ ಪೂಜಿಸುವ ದೇವತೆಗಳೆಂದರೆ ಮಾತೃದೇವತೆ ಮತ್ತು ಭೂತಪ್ಪ. ಈ ಗುಡಿಗಳಲ್ಲಿ ಇವುಗಳ ಮುಖವಾಡಗಳನ್ನು ಇಟ್ಟಿರುತ್ತಾರೆ. ಉತ್ಸವಕಾಲದಲ್ಲಿ ಆ ಮುಖವಾಡಗಳನ್ನು ಧರಿಸಿ ನರ್ತನಮಾಡುತ್ತಾರೆ. ಹಳ್ಳಿಗಳಲ್ಲಿ ಕಲೆ ಮತಕ್ಕೆ ಮಾತ್ರ ಮೀಸಲಾಗಿಲ್ಲ. ಮದುವೆ ಮುಂತಾದ ಲೌಕಿಕ ಸಂದರ್ಭಗಳಲ್ಲೂ ಸುಗ್ಗಿಯ ಕಾಲದಲ್ಲೂ ಹಾಡು ಮತ್ತು ನರ್ತನಗಳ ಮೂಲಕ ಅದು ಹೊಮ್ಮುತ್ತದೆ. ಹಳ್ಳಿಗಳಲ್ಲಿ ಹೆಂಗಸರು ತಾವು ಕಟ್ಟಿದ ಹಾಡುಗಳನ್ನು ರಾಗಿ ಬೀಸುವ ಕಾಲದಲ್ಲಿ ಹಾಡುತ್ತಾರೆ. ಗಂಡಸರ ಕವನಗಳು ವಿಶೇಷವಾಗಿ ಲಾವಣಿಗಳ ರೂಪದಲ್ಲಿರುತ್ತವೆ. ಹಳ್ಳಿಯ ಜನ ತಮ್ಮ ಗುಡಿಗಳ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುತ್ತಾರೆ. ಗರುಡಿಮನೆಯ ಮುಂದಿನ ಗೋಡೆಗಳ ಮೇಲೆ ವೀರರ ಮತ್ತು ಹುಲಿಯ ಚಿತ್ರವನ್ನು ಬರೆಯುತ್ತಾರೆ. ಮನೆಯ ಮುಂದೆ ರಂಗೋಲಿಯಲ್ಲಿ ವಿವಿಧ ರೂಪಗಳನ್ನು ಎಳೆಯುವುದೂ ರೂಢಿಯಲ್ಲಿರುವ ಕಲೆ. ವೀರಗಲ್ಲುಗಳಲ್ಲೂ ಗಣೇಶ ಮುಂತಾದ ದೇವತೆಗಳ ಮಣ್ಣಿನ ವಿಗ್ರಹಗಳಲ್ಲೂ ಇವರ ಶಿಲ್ಪ ಪ್ರಕಟವಾಗಿದೆ. ಪೌರಾಣಿಕ ಕಥೆಗಳ ಆಧಾರದ ಮೇಲೆ ಕಟ್ಟಿದ ಇತರ ನಾಟಕಗಳು ಬಯಲು ನಾಟಕಗಳೆಂದು ಪ್ರಸಿದ್ದವಾಗಿವೆ. ಸುಗ್ಗಿಯ ಕಾಲವಾದ ಮೇಲೆ ವರ್ಷಕ್ಕೊಮ್ಮೆ ಹಳ್ಳಿಗಳಲ್ಲಿ ಈ ಬಯಲುನಾಟಕಗಳನ್ನು ಏರ್ಪಡಿಸುತ್ತಾರೆ. ಹಳ್ಳಿಯವರ ಕಲೆಗಳನ್ನು ಒಟ್ಟಾಗಿ ಸೇರಿಸಿ ಅವುಗಳನ್ನು ನಾಡ ಜನರ ಕಲೆಯೆಂದು ಕರೆಯುವುದು ವಾಡಿಕೆಯಾಗಿದೆ.
ಲಲಿತ ಕಲೆಗಳು
ಬದಲಾಯಿಸಿಲಲಿತಕಲೆಗಳು ಮತ್ತು ಉಪಯುಕ್ತ ಕಲೆಗಳು ಎಂಬ ವಿಂಗಡನೆ ಹುಟ್ಟಿದ್ದು ಆಧುನಿಕ ಸಮಾಜದಲ್ಲಿ. ತುಂಬ ಹಿಂದಿನ ಕಾಲದಲ್ಲಿ ಈ ವಿಂಗಡನೆ ಇರಲಿಲ್ಲ. ಕಾಮಸೂತ್ರ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ಈ ಭೇದ ಕಾಣುವುದಿಲ್ಲ. ಈ ಗ್ರಂಥಗಳು ಹೆಸರಿಸಿರುವ ಅರವತ್ತು ನಾಲ್ಕು ಕಲೆಗಳಲ್ಲಿ ಶಿಲ್ಪ, ಚಿತ್ರ, ವಾಸ್ತುಶಿಲ್ಪ ಮುಂತಾದ ಲಲಿತಕಲೆಗಳೊಡನೆ ಉಪಯುಕ್ತ ಕಲೆಗಳೂ ಸೇರಿವೆ. ತದ ನಂತರ ವಿಷ್ಣು ಧರ್ಮೋತ್ತರ, ಮಾನಸೋಲ್ಲಾಸ ಮುಂತಾದ ಗ್ರಂಥಗಳಲ್ಲಿ ಚಿತ್ರ, ಶಿಲ್ಪ ಮುಂತಾದ ಕಲೆಗಳಿಗೆ ವಿಶಿಷ್ಟ ಸ್ಥಾನ ಕೊಟ್ಟಿದೆ. ಅದರಿಂದಾಚೆ, ಒಂದೊಂದು ಲಲಿತಕಲೆಯನ್ನೂ ಅದಕ್ಕೆ ಮೀಸಲಾದ ಗ್ರಂಥಗಳಲ್ಲಿ ಪಾರಿಭಾಷಿಕವಾಗಿ ನಿರೂಪಿಸಲಾಗಿದೆ. ಗ್ರೀಕರಲ್ಲಿ ಅರಿಸ್ಟಾಟಲ್ 'ಪೊಯೆಟಿಕ್ಸ್' ಎಂಬ ತನ್ನ ಗ್ರಂಥದಲ್ಲಿ ಲಲಿತಕಲೆಗಳಿಗೆ ವಿಶಿಷ್ಟ ಸ್ಥಾನ ಕೊಟ್ಟಿದ್ದಾನೆ. ಪಾಶ್ಚಾತ್ಯದೇಶಗಳಲ್ಲಿ 16ನೆಯ ಶತಮಾನದಿಂದ ಆಚೆ ಚಿತ್ರ, ಶಿಲ್ಪ ಮತ್ತು ವಾಸ್ತುಶಿಲ್ಪಗಳಿಗೆ ಸಂಬಂಧಪಟ್ಟ ಗ್ರಂಥಗಳು ಹುಟ್ಟಿಕೊಂಡವು. ಮಧ್ಯಯುಗದಲ್ಲಿ ಇವು ಮತಭಾವನೆಗಳಿಗೆ ವಿಧೇಯವಾಗಿದ್ದುವು. ವಾಸ್ತುಶಿಲ್ಪ ವಿಶೇಷವಾಗಿ ಕ್ರೈಸ್ತ ದೇವಮಂದಿರಗಳ ನಿರ್ಮಾಣದಲ್ಲಿ ಪ್ರಕಾಶಗೊಂಡಿತ್ತು. ಅಲ್ಲಿಂದೀಚೆಗೆ ಇವು ಮತೀಯ ಭಾವನೆಗಳಿಂದ ಬಿಡುಗಡೆ ಹೊಂದಿ ಲೌಕಿಕವಾದುವು (ಸೆಕ್ಯುಲರ್). ಭಾರತದಲ್ಲೂ ಶಿಲ್ಪ, ಚಿತ್ರ ಮುಂತಾದವು ಮೊದಲಲ್ಲಿ ಬೌದ್ಧ ಮತಕ್ಕೂ ಅನಂತರದಲ್ಲಿ ಶೈವ ಮತ್ತು ವೈಷ್ಣವ ಮತಗಳಿಗೂ ಇಸ್ಲಾಂಮತಕ್ಕೂ ಅಧೀನವಾಗಿದ್ದುವು. ಈ ಕಲೆಗಳ ಮೇಲೆ ಬೌದ್ಧ, ಶೈವ ಮತ್ತು ವೈಷ್ಣವ ಮತಗಳ ಪ್ರಭಾವ ಅಜಂತ, ಎಲ್ಲೋರ, ಮುಂತಾದಗುಹಾಂತರ್ದೇವಾಲಯಗಳಲ್ಲಿ ಕ್ರಮವಾಗಿ ಕಂಡುಬರುತ್ತದೆ. ಈಚಿನ ಕಾಲದಲ್ಲಿ ಈ ಕಲೆಗಳು ಸ್ವಲ್ಪಮಟ್ಟಿಗೆ ಲೌಕಿಕವಾಗಿವೆ. ಕಾಂಗ್ರ ಚಿತ್ರಕಲೆ ಸಾಮಾನ್ಯ ಜನರ ಲೌಕಿಕಜೀವನವನ್ನು ಪ್ರತಿಬಿಂಬಿಸುತ್ತದೆ. ರಜಪೂತ ಮತ್ತು ಮುಸ್ಲಿಂ ಚಿತ್ರಕಲೆಗಳು ಪ್ರಣಯ, ವೀರ ಮುಂತಾದ ಭಾವನೆಗಳ ಪ್ರತಿಬಿಂಬಗಳಾಗಿವೆ. ಈಚೆಗೆ ಪಾಶ್ವಾತ್ಯ ದೇಶಗಳಲ್ಲಿ ಪ್ರಚಾರಕ್ಕೆ ಬಂದಿರುವುದು ಹೊಸ ಬಗೆ. ಹಿಂದಿನವುಗಳಲ್ಲಿ ವ್ಯಕ್ತಿಗಳ, ಗಿಡಗಳ, ಪ್ರಾಣಿಗಳ ರೂಪ ಚಿತ್ರಿತವಾಗಿತ್ತು. ಅಮೂರ್ತ ವಿಧಾನದ ಚಿತ್ರಗಳಲ್ಲಿ ಕೇವಲ ರೇಖಾವಿನ್ಯಾಸವಿದೆ ಅಥವಾ ಬಣ್ಣಗಳ ವಿನ್ಯಾಸವಿದೆ. ಈ ಬಗೆಯ ಚಿತ್ರಗಳು ಸಾಮಾನ್ಯ ಜನಕ್ಕೆ ಅರ್ಥವಾಗುವುದು ಕಷ್ಟ. ಇದು ಭಾರತೀಯ ಕಲಾಕ್ಷೇತ್ರದಲ್ಲೂ ಬಳಕೆಗೆ ಬರುತ್ತಿದೆ.
ಸಾಹಿತ್ಯ
ಬದಲಾಯಿಸಿಸಾಹಿತ್ಯಕ್ಕೆ ಸಮಾಜದಲ್ಲಿ ಸಾರ್ವತ್ರಿಕ ಪುರಸ್ಕಾರವುಂಟು. ಪಾಶ್ಚಾತ್ಯರಿಗೆ ಹೋಮರನ ಮಹಾಕಾವ್ಯಗಳಾದ ಒಡಿಸ್ಸಿ ಮತ್ತು ಇಲಿಯಡ್ ಮತ್ತು ವರ್ಜಿಲ್ಲನ ಮಹಾಕಾವ್ಯವಾದ ಈನಿಯಡ್ ಮತ್ತು ಡಾಂಟೆಯ ಇನ್‍ಫರ್ನೋ ಮೆಚ್ಚಿನ ಮಹಾಕಾವ್ಯಗಳಾಗಿರುವಂತೆ ಭಾರತೀಯರಿಗೆ ಪ್ರಾಚೀನ ಮಹಾಕೃತಿಗಳಾದ ವಾಲ್ಮೀಕಿ ರಾಮಾಯಣ ಮತ್ತು ವ್ಯಾಸ ಮಹಾಭಾರತ ಮೆಚ್ಚಿನ ಕಾವ್ಯಗಳು. ಭಾರತದ ಎಲ್ಲ ಭಾಷೆಗಳಲ್ಲೂ, ಇಂದಿಗೂ ಹೊಸ ಹೊಸ ರಾಮಾಯಣಗಳು, ಮಹಾಭಾರತಗಳು ಬರುತ್ತಿವೆ.ಸಮಾಜದ ಮೇಲೆ ತುಂಬ ಪ್ರಭಾವಬೀರಿದ ಕಲೆಯೆಂದರೆ ನಾಟಕ. ಕಾಳಿದಾಸ ಹೇಳಿರುವಂತೆ ಇದು ಭಿನ್ನರುಚಿಗಳುಳ್ಳ ಸಾಮಾಜಿಕರೆಲ್ಲರಿಗೂ ಒಂದೇ ಸಮನಾಗಿ ಮೆಚ್ಚಿಗೆಯಾದ ಏಕಮಾತ್ರ ಕಲೆ. ಇದನ್ನು ಭಾರತದಲ್ಲಿ ಸ್ಥಾಪಿಸಿದವನು ಭರತಮುನಿಯೆಂದು ಪ್ರತೀತಿ. ಭಾರತದ ನಾಟಕದಲ್ಲಿ ವೃತ್ತ, ನೃತ್ಯ, ಗಾನ ಮುಂತಾದ ಎಲ್ಲ ಕಲೆಗಳಿಗೂ ಅವಕಾಶವಿದೆ. ಆತ ಇದರ ಹತ್ತು ರೂಪಗಳನ್ನು ವಿವರಿಸಿದ್ದಾನೆ. ಆದರೂ ಪ್ರಾಚೀನ ಪಾಶ್ಚಾತ್ಯರಂತೆ ಭಾರತೀಯರು ಹರ್ಷಾಂತ ಮತ್ತು ವಿಷಾದಂತ ನಾಟಕಗಳೆಂಬ ಭೇದವನ್ನು ಕಲ್ಪಿಸಿರುವುದಿಲ್ಲ. ಚಲನಚಿತ್ರವೆಂಬ ಹೊಸ ಕಲೆ ಹುಟ್ಟಿಕೊಂಡು ನಾಟಕವನ್ನು ಈಗ ಹಿಂದೆ ಹಾಕಿದೆ.ಹಿಂದಿನಕಾಲದಿಂದಲೂ ಹುಡುಗರು, ವೃದ್ದರು, ಹೆಂಗಸರು, ಗಂಡಸರು ಕಿರುಗಥೆಗಳಲ್ಲಿ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಈಗಿನ ಜನಮೆಚ್ಚಿನ ಕಥಾರೂಪ ಕಾದಂಬರಿ. ಈ ಕಲೆಯ ಮೂಲಕ ಸಮಾಜದ ಸಮಸ್ಯೆಗಳನ್ನು ವಿಸ್ತಾರವಾಗಿ ನಿರೂಪಿಸಲು ಸಾಧ್ಯವಾಗಿದೆ. ಸಾವಿರಾರು ಪುಟಗಳಷ್ಟು ಉದ್ದವಾದ ಸಾಮಾಜಿಕ ಕಾದಂಬರಿಗಳು ಹೇರಳವಾಗಿವೆ. ಎಲ್ಲ ದೇಶಗಳಲ್ಲೂ ಕಾದಂಬರಿಗಳನ್ನು ಓದುವವರ ಸಂಖ್ಯೆ ದಿನದಿನಕ್ಕೂ ಈಗ ಏರುತ್ತಿದೆ. ಕೆಲವು ಕಾದಂಬರಿಗಳ ಲಕ್ಷಗಟ್ಟಳೆ ಪ್ರತಿಗಳು ಮುದ್ರಿತವಾಗುತ್ತಿವೆ.
ಪದ್ಯಕಾವ್ಯರೂಪ
ಬದಲಾಯಿಸಿಪದ್ಯಕಾವ್ಯರೂಪಗಳಲ್ಲಿ ಇಂದು ವಿಶೇಷವಾಗಿ ಪ್ರಚಾರದಲ್ಲಿರುವುದು ಭಾವಗೀತೆ. ಈ ಹೊಸ ಪದ್ಯರೂಪ ಭಾರತದಲ್ಲಿ ಬೆಳೆಯುವುದಕ್ಕೆ ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನದ ಪಾಶ್ಚಾತ್ಯ ಕವಿಗಳು ಕಾರಣರು. ಭಾರತದ ಇತರ ಪ್ರಾಂತ್ಯಗಳಂತೆ ಕನ್ನಡನಾಡಿನಲ್ಲೂ ತುಂಬ ಪ್ರಸಿದ್ದಿಗೆ ಬಂದಿರುವ ಕವಿಗಳು ಭಾವಗೀತೆಯ ಕರ್ತೃಗಳು. ಈ ಹೊಸ ಸಾಹಿತ್ಯರೂಪದ ಮೂಲಕ ಒಂದೇ ಭಾವದ ಸಹಸ್ರ ಮುಖಗಳನ್ನು ಪ್ರಕಾಶಪಡಿಸಲು ಸಾಧ್ಯವಾಗಿದೆ.
ಸಂಗೀತ
ಬದಲಾಯಿಸಿಸಂಗೀತ ಮಾನವನ ಹೃದಯದ ಭಾವಗಳನ್ನು ನೇರವಾಗಿ ಪ್ರತಿಬಿಂಬಿಸುವ ಕಲೆ. ಇದು ನೇರವಾಗಿ ಮಾನವನ ಹೃದಯವನ್ನು ಮಿಡಿಸುತ್ತದೆ. ಶಿಶುಗಳನ್ನೂ ಪಶುಗಳನ್ನೂ ಹಾವುಗಳನ್ನೂ ಗಾನ ಆಕರ್ಷಿಸುತ್ತದೆ ಎಂದು ಹೇಳುವುದುಂಟು. ಮತಂಗಮುನಿ ಹೇಳುವಂತೆ ಮಾನವನ ಹೃದಯದ ಭಾವಸಾಕ್ಷಾತ್ಕಾರಕ್ಕೆ ಇದು ಉತ್ತಮಸಾಧನ. ಸಾಹಿತ್ಯ, ಚಿತ್ರ, ಶಿಲ್ಪ ಮುಂತಾದ ಕಲೆಗಳು ಪ್ರಕಾಶಪಡಿಸಬಲ್ಲದು. ಸಂಗೀತ ಮಾನವಜೀವನದಲ್ಲಿ ತುಂಬ ವ್ಯಾಪಕವಾದದ್ದು ; ಜೀವನದ ಎಲ್ಲ ಘಟ್ಟಗಳಲ್ಲೂ ಅದು ಬಳಕೆಗೆ ಬಂದಿದೆ. ಭಾರತದಲ್ಲಿ ಒಂದು ಉತ್ಸವವಾಗಲಿ, ಮೆರಣಿಗೆಯಾಗಲಿ ನಡೆಯಬೇಕಾದರೆ ವಾಲಗವಿದ್ದೇ ಇರಬೇಕು. ಸಾರ್ವಜನಿಕ ಸಭೆಗಳು ಪ್ರಾರ್ಥನೆಯಗೀತೆಯಿಂದ ಪ್ರಾರಂಭವಾಗುತ್ತವೆ, ರಾಷ್ಟ್ರಗೀತೆಯಿಂದ ಮುಕ್ತಾಯಗೊಳ್ಳುತ್ತವೆ.
ಉಪಯುಕ್ತ ಕಲೆಗಳು
ಬದಲಾಯಿಸಿಲಲಿತಕಲೆಗಳ ಉದ್ದೇಶ ಮನೋರಂಜನೆಯ ಜೊತೆಗೆ ಜೀವನ ಸೌಕರ್ಯಗಳನ್ನೂ ಈಡೇರಿಸುವುದು. ಇವುಗಳ ಸಂಖ್ಯೆ ಅಪಾರ. ಏಕೆಂದರೆ ಉಪಯುಕ್ತವಾದ ಎಲ್ಲ ವಸ್ತುಗಳೂ ಒಂದು ಸುಂದರ ತಾಳಬಹುದು. ಪಾತ್ರೆಗಳು, ಪೀಠಗಳು, ಬಟ್ಟೆಗಳು ಮುಂತಾದ ಯಾವ ಬಳಕೆಯ ವಸ್ತುವಾಗಲಿ, ಯಾವ ಉಪಯುಕ್ತ ವ್ಯವಹಾರವಾಗಲಿ, ಆಟವಾಗಲಿ, ಭಾಷಣವಾಗಲಿ ಅದನ್ನು ಮಾಡುವ ರೀತಿ ಎರಡು. ಅದು ಅಸಂಸ್ಕøತವಾಗಿರಬಹುದು ಅಥವಾ ಸುಸಂಸ್ಕøತವಾಗಿರಬಹುದು. ಆತ್ಮಸಂತೋಷಕ್ಕಾಗಿ ಒಪ್ಪವಾಗಿ ಮಾಡಿದ ಎಲ್ಲವೂ ಕಲೆಯಾಗಿ ಪರಿಣಮಿಸುತ್ತದೆ. ಅದು ಸುಸಂಸ್ಕøತ ಜೀವನದ ಹೆಗ್ಗುರುತು.
ಮುದ್ರಣಕಲೆ
ಬದಲಾಯಿಸಿಈಚೆಗೆ ಹುಟ್ಟಿದ ಉಪಯುಕ್ತ ಕಲೆಯಲ್ಲಿ ಮುದ್ರಣಕಲೆ ಆಧುನಿಕ ಜೀವನದಲ್ಲಿ ತುಂಬ ವ್ಯಾಪಕವಾದದ್ದು. ವಿಜ್ಞಾನ ಮತ್ತು ಯಂತ್ರ ವಿದ್ಯೆ ಅಗಾಧವಾಗಿ ಬೆಳೆದಿರುವುದರಿಂದ ಮುದ್ರಣಕಲೆ ವಿವಿಧರೂಪಗಳನ್ನು ತಾಳಿದೆಯಲ್ಲದೆ ಮುದ್ರಣದ ವೇಗವೂ ಹೆಚ್ಚಿದೆ. ವೃತ್ತಪತ್ರಿಕೆಗಳ ಜನಪ್ರಿಯ ಪ್ರಸಾರಕ್ಕೆ ಮುದ್ರಣಕಲೆಯೇ ಕಾರಣ. ನಾನಾ ಆಕೃತಿಗಳನ್ನು ಅನೇಕ ಬಣ್ಣಗಳಲ್ಲಿ ಕಾಗದದ ಮೇಲೂಬಟ್ಟೆಗಳ ಮೇಲೂ ಮುದ್ರಿಸಲು ಸಾಧ್ಯವಾಗಿದೆ. ಕಟ್ಟಡಗಳ, ನಕಾಸೆಗಳ, ಭೂಪಟಗಳ, ಸಂಗೀತ ಭಾಷಣಗಳ ಧ್ವನಿಮುದ್ರಿಸಿಕೊಳ್ಳುವುದು ಇಂದು ಸಾಧ್ಯ. ಹೀಗೆ ವಿಜ್ಞಾನ ಮತ್ತು ಯಂತ್ರ ವಿದ್ಯೆಯ ಸಹಾಯದಿಂದ ವಿದ್ಯೆ ಮತ್ತು ಕಲೆಯ ಪ್ರಚಾರ ವಿಸ್ತರಿಸಿದೆ.ಒಟ್ಟಿನಲ್ಲಿ ಇಷ್ಟು ಹೇಳಬಹುದು. ಕಲೆ ಎಂಬ ಪದಕ್ಕೆ ಸ್ಪಷ್ಟವೂ ಪರಿಮಿತವೂ ಖಚಿತವೂ ಆದ ಅರ್ಥ ಇರುವಂತೆ ಸಮಾಜ ಎಂಬುದಕ್ಕೆ ಇರುವಂತೆ ಕಾಣುವುದಿಲ್ಲ. ಜನರು, ಅವರ ನಡೆವಳಿಕೆಯ ರೀತಿ, ಅವರನ್ನು ಸುತ್ತಿರುವ ಯುಗಧರ್ಮ, ಅವರ ಆಶೋತ್ತರಗಳು, ಏರ್ಪಟ್ಟಿರುವ ಸಂಘ ಸಂಸ್ಥೆಗಳು, ಒಟ್ಟಿನ ವ್ಯವಸ್ಥೆ ಎಲ್ಲವೂ ಸಮಾಜ ಎಂಬುದರ ಪ್ರತ್ಯೇಕಿಸಲಾಗದ ಅಂಶಗಳಾಗಿವೆ. ಯಾವುದೇ ಸಮಾಜವಾಗಲಿ ಅದಕ್ಕೆ ತಾತ್ಕಾಲಿಕವಾಗಿದ್ದು ಮರೆಯಾಗುವ ಬಾಹ್ಯ ಲಕ್ಷಣವೂ ಉಂಟು, ಅದರ ಆಳದಲ್ಲಿದ್ದು ಕೊಂಡು ಹಲವು ಕಾಲ ಇರುವ ಗುಣಲಕ್ಷಣವೂ ಉಂಟು. ಕಲೆಯೂ ಸಮಾಜಕ್ಕೂ ಇರುವ ಸಂಬಂಧವನ್ನು ಬಗೆಯುವಾಗ ಈ ಎರಡನ್ನೂ ಲಕ್ಷ್ಯಕ್ಕೆ ತಂದುಕೊಳ್ಳಬೇಕು.
ಸಾಮಾಜಿಕ ವ್ಯವಸ್ಥೆ
ಬದಲಾಯಿಸಿಮತಧರ್ಮಕ್ಕೆ ಸೇರಿದ ಸಾಮಾಜಿಕ ವ್ಯವಸ್ಥೆ ಸಾಧಾರಣವಾಗಿ ಹೆಚ್ಚು ಕಾಲ ಏಕಬಗೆಯಲ್ಲಿ ಇರುತ್ತದೆ; ದೊಡ್ಡ ಧಾರ್ಮಿಕ ವಿಪ್ಲವ ಉಂಟಾದಾಗ ಮಾತ್ರ ಆ ವ್ಯವಸ್ಥೆ ಅಷ್ಟಿಷ್ಟು ಮಾರ್ಪಾಟು ಹೊಂದುತ್ತದೆ. ಪುರಾತನ ಈಜಿಪ್ಟ್, ಪ್ರಾಚೀನ ಗ್ರೀಸ್, ಪ್ರಾಚೀನ ರೋಮನ್ ಚಕ್ರಾಧಿಪತ್ಯ, ಮತ್ತು ಮಧ್ಯಯುಗೀಣ ಯೂರೋಪಿನಲ್ಲಿ ನಿರ್ಮಿತವಾದ ದೇವಾಲಯಗಳೂ ವಿಗ್ರಹಗಳೂ ಚಿತ್ರಗಳೂ ರೂಪುಗೊಂಡ ಸಂಗೀತ ಪದ್ಧತಿಗಳೂ ನೂರಾರು ವರ್ಷ ತಮ್ಮತಮ್ಮ ಸಂಪ್ರದಾಯವನ್ನು ತಪ್ಪದೆ ಅನುಸರಿಸುತ್ತಿದ್ದುವು. ಆಧುನಿಕಯುಗ ಪ್ರಾರಂಭವಾದ ಮೇಲೆ ಅವುಗಳಲ್ಲಿ ಬದಲಾವಣೆ ಉಂಟಾಯಿತು. ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳು ಬೇಗಬೇಗ ವ್ಯತ್ಯಸ್ತವಾಗುತ್ತ ಹೋಗುವುದು ಸಾಧ್ಯ. ಅಷ್ಟೇ ಬೇಗಬೇಗ ಕಲೆಯ ರೀತಿ ವ್ಯತ್ಯಾಸಹೊಂದುವುದಲ್ಲ. ಕಲೆ ಸಾಧಾರಣವಾಗಿ ಸಂಪ್ರದಾಯಾನುವರ್ತಿ; ವಾಡಿಕೆಯಾದ ವಿಧಾನ ಮತ್ತು ತಂತ್ರವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಪ್ರತಿಯೊಂದು ಅವಧಿಯಲ್ಲೂ ಈಗಿನ ಸಮಾಜಕ್ಕೆ ತಕ್ಕ ಕಲೆ ರೂಪಿತವಾಗಬೇಕು ಎಂಬ ಕೂಗು ಕೆಲವು ಪ್ರಗತಿಶೀಲರಿಂದ ಕೇಳಿಬರುತ್ತದೆ. ಆದರೆ ಕಲೆ ಬೇರ್ಪಡುವುದಕ್ಕೆ ಪ್ರಾರಂಭಿಸುವ ಮುನ್ನವೇ ಮುಂದಣ ಅವಧಿ ಬಂದೇ ಬಿಡುತ್ತದೆ. ಮತ್ತೆ ಅದೇ ತೆರನ ಕೂಗು. ಅಲ್ಲೊಂದು ಇಲ್ಲೊಂದು ಸಣ್ಣ ಸಣ್ಣ ಗುಂಪುಗಳು ತಮ್ಮವೇ ಆದ ಕಲಾಕ್ರಮಗಳನ್ನು ಹೊರತರುತ್ತವೆ. ಆದರೆ ಅದು ಕೇವಲ ವೈಯಕ್ತಿಕ, ಕ್ಷಣಿಕ.ಕಾಲ ಪರಿಸ್ಥಿತಿ, ವಾತಾವರಣ-ಇವು ಕಲೆಗಾರನಿಗೆ ಹಿನ್ನಲೆಯೆಂಬುದು ನಿರ್ವಿವಾದ. ಆದರೆ ಅವುಗಳ ಪ್ರಭಾವದ ಪ್ರಮಾಣವೆಷ್ಟು, ಕಲೆಗಾರನ ಸ್ವಂತ ವ್ಯಕ್ತಿತ್ವದ ಪ್ರಮಾಣವೇನು ಎಂಬ ವಿಚಾರವಾಗಿ ಒಪ್ಪತಕ್ಕ ನಿರ್ಧಾರವನ್ನು ವಚನಿಸುವುದು ಬಹಳ ಕಷ್ಟ. ಹಿನ್ನೆಲೆಯ ಪ್ರಭಾವ ಕಲೆಗಾರನ ಮೇಲೆ ಸ್ಫುಟ ಮುದ್ರೆಯನ್ನು ಒತ್ತುವುದಿಲ್ಲ; ಅವು ಅವನೊಳಗೆ ಸೇರಿಕೊಂಡು ಅರಿವಿಲ್ಲದೆಯೇ ಪ್ರಭಾವ ಬೀರುತ್ತವೆ.ಇತರ ಕಲೆಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯ ಸಮಾಜದೊಂದಿಗೆ ಮಿಳಿತವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ http://www.interlinepublishing.com/store-18/user-content-detail-view.php?cid=4624[ಶಾಶ್ವತವಾಗಿ ಮಡಿದ ಕೊಂಡಿ]
- ↑ http://interlinepublishing.com/store-/user-content-detail-view.php?cid=4630[ಶಾಶ್ವತವಾಗಿ ಮಡಿದ ಕೊಂಡಿ]