ಭಾರತದಲ್ಲಿ `ಕಲಾವಿದರ ದಿನ’

ಕ್ಲಾರಿಯೋನೆಟ್ ವಾದನದಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದುವುದರ ಮೂಲಕ ಭಾರತದ ಸ್ಥಾನವನ್ನು ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು ಡಾ.ಪಂಡಿತ್ ನರಸಿಂಹಲು ವಡವಾಟಿಯವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಲಾವಿದರಿಗೆ ಗೌರವವನ್ನು ತಂದುಕೊಟ್ಟ ಇವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.



`ಔಟ್ ಸ್ಟಾಂಡಿಂಗ್ ಮ್ಯಾನ್ ಆಫ಼್ ದ ಟ್ವೆಂಟಿಯತ್ ಸೆಂಚುರಿ’

ಬದಲಾಯಿಸಿ

ಡಾ.ವಡವಾಟಿಯವರನ್ನು ಇಂಗ್ಲೆಂಡ್ನವರು `ಔಟ್ ಸ್ಟಾಂಡಿಂಗ್ ಮ್ಯಾನ್ ಆಫ಼್ ದ ಟ್ವೆಂಟಿಯತ್ ಸೆಂಚುರಿ’ ಎಂದು ಗೌರವಿಸಿದ್ದಾರೆ. ಜನವರಿ ೨೧, ಇಂತಹ ಸಂಗೀತ ಸಾಧಕ ಡಾ. ಪಂ.ನರಸಿಂಹಲು ವಡವಾಟಿಯವರ ಜನುಮದಿನ. ಈ ದಿನವನ್ನು ಕಲಾವಿದರ ದಿನವನ್ನಾಗಿ ಈಗ ಆಚರಿಸಲಾಗುತ್ತಿದೆ.

ಕ್ಲಾರಿಯೋನೆಟ್ ನತ್ತ ಗಮನ ಸೆಳೆದ ಆ ಬ್ಯಾಂಡ್ ಸೆಟ್ ಗಾಡಿ

ಬದಲಾಯಿಸಿ

ಡಾ.ಪಂಡಿತ್ ನರಸಿಂಹಲು ವಡವಾಟಿಯವರು ೧೯೪೨ರ ಜನವರಿ ೨೧ರಂದು ಹುಟ್ಟಿದ್ದು, ಕರ್ನಾಟಕದ ಬಿಸಿಲನಾಡಾದ ತೀರ ಹಿಂದುಳಿದ ಜಿಲ್ಲೆ ರಾಯಚೂರಿನ ಕುಗ್ರಾಮ ವಡವಾಟಿಯಲ್ಲಿ. ಅಜ್ಜ ಓಬಾಳಪ್ಪನ ಶಹನಾಯಿ ವಾದನ, ಅಪ್ಪನ ತಬಲ, ತಾಯಿಯ ಗಾನ ರಕ್ತಗತವಾಗಿತ್ತು. ಬಾಲಕನಾಗಿದ್ದಾಗ ಸಿನೆಮಾ ಪ್ರಚಾರಕ್ಕೆ ಬರುತ್ತಿದ್ದ ಗಾಡಿಯಲ್ಲಿ ಮೊಳಗುತ್ತಿದ್ದ ಕ್ಲಾರಿಯೋನೆಟ್ ವಾದನದ ನಾದಕ್ಕೆ ಪ್ರತಿದಿನ ಎಡೆಬಿಡದೆ ಗಾಡಿಯನ್ನು ಇವರು ಹಿಂಬಾಲಿಸುತ್ತಿದ್ದದ್ದು ಕ್ಲಾರಿಯೋನೆಟ್ ಕಲಿಯಬೇಕೆಂಬ ಹಂಬಲದಿಂದ. ರಾಯಚೂರಿನ ವೆಂಕಟಪ್ಪನವರ ಬಳಿಸೇರಿ ಕ್ಲಾರಿಯೋನೆಟ್ ಸ್ವರಾಭ್ಯಾಸವಾಯಿತು.

ಶಾಸ್ತ್ರೀಯ ಸಂಗೀತದ ಕಲಾವಿದ

ಬದಲಾಯಿಸಿ

ಸಂಗೀತ ಸಾಧನೆಯ ಹಂಬಲ ಹೆಚ್ಚಾದ್ದರಿಂದ ಪ್ರಸಿದ್ಧ ಹಿಂದುಸ್ಥಾನಿ ಹಾಗೂ ವಚನ ಸಂಗೀತಗಾಯಕ ಸಿದ್ಧರಾಮ ಜಂಬಲದಿನ್ನಿಯವರ ಬಳಿಯಲ್ಲಿ ಶಾಸ್ತ್ರೀಯ ಸಂಗೀತವನ್ನು ಕಲಿತು ಅದನ್ನು ತಮ್ಮ ಕ್ಲಾರಿಯೋನೆಟ್ ನಲ್ಲಿ ಅಭ್ಯಾಸ ಮಾಡಿ ಇಂದು ವಿಶ್ವವಿಖ್ಯಾತ ಕ್ಲಾರಿಯೋನೆಟ್ ವಾದಕರಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಕ್ಲಾರಿಯೋನೆಟ್ ಕಲಾವಿದ

ಬದಲಾಯಿಸಿ

ಡಾ.ಪಂ. ನರಸಿಂಹಲು ವಡವಾಟಿಯರನ್ನು ವಿಶ್ವದ ಪ್ರತಿಷ್ಟಿತ ಮೇರಿಕಾದ ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಅಸೋಸಿಯೇಷನ್(ಐಸಿಎ) ಸಂಗೀತದಲ್ಲಿ ಭಾರತದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿತು. ಇದಕ್ಕೆ ಆಯ್ಕೆಯಾದ ಮೊದಲ ಭಾರತೀಯರು ವಡವಾಟಿಯವರು. ಲಾಸ್ಏಂಜಲೀಸ್ ನಲ್ಲಿ ನಡೆದ `ಇಂಟರ್ ನ್ಯಾಷಿನಲ್ ಕ್ಲಾರಿಯೋನೆಟ್ ಫ಼ೆಸ್ಟ್-೨೦೧೧’ರ ಉದ್ಘಾಟನೆಗೊಂಡಿದ್ದೇ ಇವರ ವಾದನದಿಂದ.

ವಡವಾಟಿಯವರು ಕ್ಯಾಲಿಫ಼ೋರ್ನಿಯಾ ವಿಶ್ವವಿದ್ಯಾಲಯದ ವಿಸಿಟಿಂಗ್ ಪ್ರೊಫ಼ೆಸರ್ ಆಗಿಕಾರ್ಯನಿರ್ವಹಿಸಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರವು’ ಕ್ಲಾರಿಯೋನೆಟ್ ಮಾಂತ್ರಿಕ’, ಪುಸ್ತಕವನ್ನು ಹೊರತಂದಿದೆ. ಹರಿಕೃಷ್ಣ ಅವರು ರಚಿಸಿರುವ ಇದರ ಇಂಗ್ಲಿಷ್ಅವತರಣಿಕೆ `ದ ಚಾರ್ಮರ್ಅಂಡ್ ಹಿಸ್ ಕ್ಲಾರಿಯೋನೆಟ್’ ಅನಾವರಣಗೊಂಡಿದೆ.

ಹತ್ತು ಹದಿನೈದು ವರ್ಷಗಳ ಹಿಂದೆಯೇ ಮೈಸೂರು ವಿ.ವಿ.ಯ ದ್ವಿತೀಯ ಬಿ.ಎ. ವಿದ್ಯಾರ್ಥಿಗಳಿಗೆ ಕುಂ.ವಿ. ಅವರ `ಆಯ್ದ ಕಥೆಗಳು’ ಪುಸ್ತಕದಲ್ಲಿ ವಡವಾಟಿಯವರ ಬಗ್ಗೆ ಒಂದು ಪಾಠವನ್ನು ಸೇರಿಸಲಾಗಿತ್ತು. ೦೧೨ ರಿಂದ ೨೦೧೫ನೇ ಸಾಲಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ವಡವಾಟಿ ಹಾಗು ಅವರ ಗುರುಗಳನ್ನೂ ಒಳಗೊಂಡಂತೆ ಇತರೆ ಕಲಾವಿದರ ಬದುಕನ್ನು ಕನ್ನಡ ಪಠ್ಯವಾಗಿಸಿದ್ದಾರೆ. ೨೦೧೨ರ ಮೈಸೂರಿನ ದಸರಾದ ಟ್ಯಾಬ್ಲೋದಲ್ಲಿ ವಡವಾಟಿ ಹಾಗೂ ಅವರ ಗುರುಗಳ ಮೂರ್ತಿಗಳು ರಾಯಚೂರನ್ನು ಪ್ರತಿನಿಧಿಸಿವೆ.

ಕಲೆಯನ್ನೇ ಜೀವಿಸುತ್ತಿರುವ ಕಲಾವಿದ

ಬದಲಾಯಿಸಿ

ಬೇರೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ, ಕಲೆಗಾಗಿಯೇ ತಮ್ಮ ಜೀವನವನ್ನು ಮೀಸಲಿಟ್ಟವರು ಡಾ.ವಡವಾಟಿಯವರು. ತಾನು ಹುಟ್ಟಿದ ನೆಲಕ್ಕೆ ಸಂಗೀತಧಾರೆ ಎರೆಯಬೇಕೆಂದು ರಾಯಚೂರಿನಲ್ಲಿ ಸಿದ್ಧರಾಮ ಜಂಬಲದಿನ್ನಿ ಸ್ಮರಣಾರ್ಥ ಸ್ವರ ಸಂಗಮ ಸಂಗೀತ ವಿದ್ಯಾಲಯವನ್ನು ಗುರುಕುಲ ಪದ್ಧತಿಯಲ್ಲಿ ತೆರೆದು ಅನೇಕರಿಗೆ ಸಂಗೀತ ದೀಕ್ಷೆಯನ್ನು ನೀಡುತ್ತಿದ್ದಾರೆ.

ಭಾರತದ ಎಲ್ಲ ಕಲಾವಿದರ ಗೌರವಾರ್ಥ ಕಲಾವಿದರ ದಿನ ಆಚರಣೆ

ಬದಲಾಯಿಸಿ

ಕಲೆಯನ್ನೇ ಜೀವನವನ್ನಾಗಿಸಿಕೊಂಡಿರುವ ಡಾ.ಪಂ.ನರಸಿಂಹಲು ವಡವಾಟಿಯವರ ಜನುಮದಿನದಂದು ಕಲೆಯಲ್ಲಿಯೇ ಜೀವನಕಾಣಿತ್ತಿರುವ ಎಲ್ಲಾ ಕಲಾವಿದರನ್ನು ಸ್ಮರಿಸುತ್ತಾ, ವಡವಾಟಿಯವರ ಜೀವನವನ್ನು ಎಲ್ಲಾ ಕಲಾವಿದರಿಗೂ ಅರ್ಪಿಸುತ್ತ, ಭಾರತ್ ಸಾಂಸ್ಕೃತಿಕ ಕಲಾಕೇಂದ್ರ ೨೦೧೨ರಿಂದ ಪ್ರತಿ ವರ್ಷ ಜನವರಿ ೨೧ ರಂದು `ಕಲಾವಿದರ ದಿನ’ವನ್ನಾಗಿ ಆಚರಿಸುತ್ತಾ ಬರುತ್ತಿದೆ. ಇದು ಭಾರತದಲ್ಲೇ ಮೊಟ್ಟ ಮೊದಲಬಾರಿಗೆ ಕಲಾವಿದರಿಗಾಗಿ ಒಂದು ದಿನವನ್ನು ಮೀಸಲಿಟ್ಟು ಕಲಾವಿದರನ್ನು ಸ್ಮರಿಸುವ ದಿನವಾಗಿದೆ.