ಕಲಾವತಿ (ಪುರಾಣಗಳಲ್ಲಿ)

ಕಲಾವತಿ : ಕಾಶಿರಾಜನ ಮಗಳು. ಚಂದ್ರವಂಶದ ದಾಶಾರ್ಹರಾಜನನ್ನು ಮದುವೆಯಾದಳು. ತವರುಮನೆಯಲ್ಲಿ ದೂರ್ವಾಸಮುನಿಯ ಸೇವೆಮಾಡಿ ಮಂತ್ರೋಪದೇಶವನ್ನು ಪಡೆದಿದ್ದಳು. ಇವಳ ಶರೀರವನ್ನು ಮೊದಲ ಸಲ ಸಂಪರ್ಕ ಮಾಡಿದ ಕೂಡಲೇ ದಾಶಾರ್ಹನ ಮೈಯಲ್ಲಿ ಬೊಕ್ಕೆಗಳೆದ್ದುವು. ಆಗ ಇವಳು ಇದು ಅಭಕ್ಷ್ಯ ಭಕ್ಷಣದ ಫಲ-ಎಂದಳು. ಇವಳ ಸೂಚನೆಯಂತೆ ಗರ್ಗಮುನಿಯಿಂದ ಪಂಚಾಕ್ಷರಿ ಮಂತ್ರೋಪದೇಶವನ್ನು ಪಡೆದು ಆತ ಶುದ್ಧನಾದ ಮತ್ತು ಅವನ ದೇಹ ಚಂದನಶೀತಲವಾಯಿತು.

ಕಲಾವತಿ ಎಂಬ ಹೆಸರಿನ ಇನ್ನೊಬ್ಬಳು ಪಾರಮುನಿ ಮತ್ತು ಪುಜಿಕಸ್ಥಲೆಯರ (ಅಪ್ಸರಸೆ) ಮಗಳು. ಹುಟ್ಟಿದೊಡನೆಯೇ ತಾಯಿ ದೇವಲೋಕಕ್ಕೆ ಹೋದದ್ದರಿಂದ ಚಂದ್ರಕಲೆಯಿಂದ ಬೆಳೆದ ಇವಳು ಕಲಾವತಿಯೆನಿಸಿದಳು. ಒಂದು ದಿನ ಪಾರಮುನಿಯನ್ನು ರಾಕ್ಷಸನೊಬ್ಬ ನುಂಗಿದ. ಆಗ ಕಲಾವತಿ ದುಃಖದಿಂದ ಸಾಯಲು ಸಿದ್ಧಳಾದಳು. ಅಷ್ಟರಲ್ಲಿ ಪಾರ್ವತಿ ಪ್ರತ್ಯಕ್ಷಳಾಗಿ ಸಾಯಬಾರದೆಂದೂ ಸ್ವಾರೋಚಿಷಮನು ಮದುವೆಯಾಗುವನೆಂದೂ ಹೇಳಿ ಅಂತರ್ಧಾನಳಾದಳು. ಆಮೇಲೆ ಇಂದೀವರಾಕ್ಷನೆಂಬ ಗಂಧರ್ವನ ಮಗಳಾದ ಮನೋರಮೆ ಇವಳ ಗೆಳತಿಯಾಗಿ ತನ್ನ ಮೊದಲಿನ ಗೆಳತಿಯಾಗಿದ್ದ ವಿಭಾವರಿಯನ್ನೂ ಕೂಡಿಕೊಂಡು ವಿಹರಿಸುತ್ತಿದ್ದಾಗ ಹಿಮಾಲಯದ ವೃದ್ಧತಾಪಸನೊಬ್ಬನನ್ನು ಗೇಲಿಮಾಡಿದ್ದರಿಂದ ಆತ ಮನೋರಮೆಗೆ ರಾಕ್ಷಸಪೀಡೆಗಳಾಗಲೆಂದು ಶಾಪಕೊಟ್ಟ. ಹಾಗೆ ಸಿಟ್ಟುಮಾಡಿದ್ದು ತಪ್ಪೆಂದು ಮನೋರಮೆಯ ಗೆಳತಿಯರು ಹೇಳಿದಾಗ ಕುಷ್ಟ, ಕ್ಷಯಬಾಧೆಗೊಳಗಾಗಿರೆಂದು ಅವರಿಬ್ಬರಿಗೂ ತಾಪಸ ಶಾಪಕೊಟ್ಟ. ಅಷ್ಟರಲ್ಲಿ ಸ್ವಾರೋಚಿಷಮನು ರಾಕ್ಷಸಬಾಧೆಯಿಂದ ಮನೋರಮೆಯನ್ನು ಬಿಡಿಸಿ ಮದುವೆಯಾಗಿ ಅವಳ ಮೂಲಕ ಅವಳ ಗೆಳತಿಯರ ವೃತ್ತಾಂತವನ್ನು ತಿಳಿದು ಆಯುರ್ವೇದ ಚಿಕಿತ್ಸೆಯಿಂದ ಅವರಿಬ್ಬರ ರೋಗಗಳನ್ನೂ ಗುಣಪಡಿಸಿ ಕಲಾವತಿಯಿಂದ ಪದ್ಮಿನೀವಿದ್ಯೆಯನ್ನೂ ವಿಭಾವರಿಯಿಂದ ಪ್ರಾಣಿಭಾಷೆಯನ್ನೂ ಕಲಿತು ಅವರನ್ನೂ ಮದುವೆಯಾದ. (ಬಿ.ಎಚ್.ಎಸ್.)