ಕಲಾತ್ಪಾಕಿಸ್ತಾನದ ಒಂದು ಜಿಲ್ಲೆ ಮತ್ತು ಜಿಲ್ಲಾಡಳಿತ ಕೇಂದ್ರ. ಪಟ್ಟಣ ಹಾಗೂ ವಿಭಾಗಗಳ ಕೇಂದ್ರ. ಹಿಂದೆ ಇದು ಕಲಾತ್ ಸಂಸ್ಥಾನದ ರಾಜಧಾನಿಯಾಗಿತ್ತು. ಕಲಾತ್ ಪಟ್ಟಣ ಕ್ವೆಟ್ಟ ನಗರದಿಂದ ೧೪ ಕಿಮೀ ದೂರದಲ್ಲಿದೆ. ಹಳೆಯ ಪಟ್ಟಣ ೧೯೩೫ರ ಭೂಕಂಪದ ವಿನಾಶಕ್ಕೆ ತುತ್ತಾಗುವ ಮೊದಲು ಕೋಟೆಯೊಳಗಡೆ ಇತ್ತು. ಹೊಸ ಪಟ್ಟಣವನ್ನು ಪ್ರಸ್ತುತ ಜಾಗದಲ್ಲಿ ಸ್ಥಾಪಿಸಲಾಯಿತು. ಖಾನ್-ಇ-ಕಲಾತ್ ಅರಮನೆ ನಗರದ ಆಗ್ನೇಯದಲ್ಲಿದೆ. ಕ್ವೆಟ್ಟ, ಕರಾಚಿ ಮತ್ತು ಪಾಸ್ನಿಗಳಿಗೆ ಇಲ್ಲಿಂದ ರಸ್ತೆ ಸಂಪರ್ಕವುಂಟು.

ಕಲಾತ್ ಜಿಲ್ಲೆ
ದೇಶಪಾಕಿಸ್ತಾನ
ಪ್ರಾಂತ್ಯಬಲೂಚಿಸ್ತಾನ
EstablishedMarch 1954
Headquartersಕಲಾತ್
Government
 • Deputy CommissionerSalah Ud Din Noorzai
 • CommissionerDr.Muhammad Akbar Harifal
Area
 • Total೬,೬೨೧ km (೨,೫೫೬ sq mi)
Population
 (2002 Estimate)
 • Total೫,೦೦,೦೦೦
Time zoneUTC+5 (PST)
Number of Tehsils2
Websitehttp://www.bdd.sdnpk.org/Kalat.html

೧೫ನೆಯ ಶತಮಾನದಲ್ಲಿ ಈ ಪಟ್ಟಣ ಮಿರ್ವಾರಿಗಳ ವಶವಾಯಿತು. ಅನಂತರ ಇದು ಮಿರ್ವಾರ್ ಬಣದ ಅಹ್ಮದ್ಜಾಯಿಖಾನರ ರಾಜಧಾನಿಯಾಗಿ ಮುಂದುವರಿಯಿತು. ಈ ಜನ ಒಮಾನಿನಿಂದ ಮಕ್ರಾನಿನ ಕೋಲ್ವ ಕಣಿವೆಗೆ ಬಂದರು. ೧೮೩೯ರಲ್ಲಿ ಇದನ್ನು ಬ್ರಿಟಿಷರು ಆಕ್ರಮಿಸಿಕೊಂಡು, ೧೮೪೨ರಲ್ಲಿ ಹಿಂದಿರುಗಿಸಿದರು. ಇದು ಮೊದಲು ಬಲೂಚ್ ಪ್ರಸಂಧಾನಕ್ಕೂ (ಕಾನ್ಫೆಡರಸಿ) ಅನಂತರ ಬಲೂಚಿಸ್ತಾನ ಕಮಿಷನರಿಗೆ ಅಧೀನವಾದ ಬ್ರಿಟಿಷ್ ಏಜೆಂಟನಿಗೂ ಮುಂದೆ (೧೯೫೨-೫೫) ಬಲೂಚಿಸ್ತಾನ್ ಸಂಸ್ಥಾನಗಳ ಕೂಟಕ್ಕೂ ಮುಖ್ಯ ಕೇಂದ್ರವಾಗಿತ್ತು.

ಜಿಲ್ಲೆ ಬದಲಾಯಿಸಿ

ಇದರಲ್ಲಿ ಕಲಾತ್ ನಿಯಾಬತ್, ಸಾರವನ್, ಝಲಾವನ್ ಮತ್ತು ಕಚ್ಛಿ ಎಂಬ ನಾಲ್ಕು ಉಪ ವಿಭಾಗಗಳಿವೆ. ವಿಸ್ತೀರ್ಣ: ೮೦,೧೧೧ ಚ.ಕಿಮೀ. ಜಿಲ್ಲೆಯ ಬಹುಭಾಗ ಪರ್ವತಮಯ. ಪರ್ವತ ಶ್ರೇಣಿಗಳ ನಡುವೆ ಕಿರಿದಾದ ಕಣಿವೆಗಳಿವೆ. ಜಿಲ್ಲೆಯ ವಾಯುಗುಣ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದ್ದು. ಕಚ್ಛಿ ಇಡೀ ಪಾಕಿಸ್ತಾನದಲ್ಲೇ ಅತ್ಯಂತ ಉಷ್ಣತೆಯ ಪ್ರದೇಶ. ಅಲ್ಲಿ ಚಳಿಗಾಲದಲ್ಲಿ ಹಿಮ ಬೀಳುವಷ್ಟು ತಣ್ಣಗಿರುವುದೂ ಉಂಟು. ಮುಖ್ಯವಾಗಿ ಬೇಸಾಯ ನಡೆಯುವುದು ನದಿಪ್ರವಾಹದಿಂದಲೇ. ಆದರೆ ಉತ್ತರದಲ್ಲಿ ಸಾಕಷ್ಟು ಮಳೆಯಾಗುತ್ತದೆ. ನೆಲದಡಿಯ ನೀರೊರತೆಗಳಿಂದಲೂ ಬೇಸಾಯವಾಗುತ್ತದೆ. ನೋವಿ, ಜೋಳ ಮತ್ತು ಹಣ್ಣು ಮುಖ್ಯ ಉತ್ಪನ್ನಗಳು. ಒಳ್ಳೆಯ ಆಕಳ ತಳಿಗಳೂ ಬಲೂಚಿಸ್ತಾನದ ಅತ್ಯುತ್ತಮ ಕುದುರೆಗಳೂ ಈ ಪ್ರದೇಶದವು. ಇಲ್ಲಿ ಕಲ್ಲಿದ್ದಲು, ಕಬ್ಬಿಣದ ಅದಿರು, ಫೆರಸ್ ಸಲ್ಫೇಟ್ ಮುಂತಾದ ಖನಿಜಗಳಿವೆ.

ಕಲಾತ್ ಸಂಸ್ಥಾನದ ರಾಜಧಾನಿಯಾಗಿದ್ದ ಖುಜ್ದಾರ್ ಇರುವುದು ಕಲಾತ್ ಪಟ್ಟಣದಿಂದ ೮೦ ಕಿಮೀ ದೂರದಲ್ಲಿ. ದೇಶದ ಇತರ ಭಾಗಗಳಿಗೆ ಇದು ಕೇಂದ್ರದಂತಿದ್ದು ಅನೇಕ ಸಂಚಾರ ಮಾರ್ಗಗಳು ಇದರ ಮೂಲಕ ಸಾಗುತ್ತವೆ. ಇಲ್ಲಿಯ ಕಣಿವೆಪ್ರದೇಶಗಳು ಫಲವತ್ತಾದವು. ೧೯೬೦ರಿಂದೀಚೆಗೆ ಮಾಸ್ತುಂಗ್ ಕಣಿವೆ ಹೆಚ್ಚಾಗಿ ಅಭಿವೃದ್ಧಿ ಹೊಂದುತ್ತಿದೆ. ಹಳ್ಳಿಗಳಲ್ಲಿ ಗುಡಿಸಲುಗಳಲ್ಲÆ ಗುಡಾರಗಳಲ್ಲೂ ಜನ ವಾಸಿಸುತ್ತಾರೆ. ಕಸೂತಿ, ಜಮಖಾನೆ, ಚರ್ಮದ ಸರಕು, ತಾಳೆ ಚೀಲ, ಚಾಪೆ-ಇವನ್ನು ತಯಾರಿಸುವ ಮುಖ್ಯ ಕಸುಬುಗಳಿವೆ.

ಇತಿಹಾಸ ಬದಲಾಯಿಸಿ

ಕಲಾತ್ ಸಂಸ್ಥಾನದ ಪ್ರಾಚೀನ ಇತಿಹಾಸ ಬಲೂಚಿಸ್ತಾನದ ಇತಿಹಾಸದೊಂದಿಗೆ ಬೆರೆತುಕೊಂಡಿದೆ. ಮೊದಲು ಇದು ಸಿಂಧಿಗೆ ಅಧೀನವಾಗಿತ್ತು. ಅನಂತರವೂ ಅರಬರೂ ಘಜ್ನೀ, ಘೋರಿ ಮತ್ತು ಮಂಗೋಲರೂ ಇದನ್ನಾಳಿದರು. ಮತ್ತೆ ಇದು ಸಿಂಧಿನ ಅಧೀನಕ್ಕೇ ಬಂತು. ಅನಂತರ ಇದನ್ನು ಮೊಗಲರು ವಶಪಡಿಸಿಕೊಂಡರು. ೧೮ನೆಯ ಶತಮಾನದ ವೇಳೆಗೆ ಅಹಮದ್ಜಾಯಿಖಾನರು ಪ್ರಬಲರಾದಗಿದ್ದರೂ ಅವರು ದೆಹಲಿ ಅಥವಾ ಕಾಂದಹಾರಿನ ಸಾಮಂತರಾಗಿದ್ದರು. ಮೊದಲನೆಯ ಆಫ್ಘನ್ ಯುದ್ಧದ ಅನಂತರ ಕಲಾತ್ ಸಂಸ್ಥಾನ ಬ್ರಿಟಿಷರ ವಶವಾಯಿತು. ೧೯ ಮತ್ತು ೨೦ನೆಯ ಶತಕಗಳಲ್ಲಿ ಖಾನರ ಆಡಳಿತದಲ್ಲಿ ಕಲಾತ್ ಸಂಸ್ಥಾನದ ವಿಸ್ತೀರ್ಣ ಕ್ರಮೇಣ ಕಡಿಮೆಯಾಗುತ್ತ ಬಂತು.

೧೯೪೮ರ ಮಾರ್ಚಿ ೩೧ರಂದು ಕಲಾತ್ ದೇಶ ಪಾಕಿಸ್ತಾನದಲ್ಲಿ ವಿಲೀನವಾಯಿತು. ಕಲಾತ್, ಮಕ್ರಾನ್ ಮತ್ತು ಲಾಸ್ ಬೇಲ ಪ್ರಾಂತ್ಯಗಳ ರಾಜರು ಬಲೂಚಿಸ್ಥಾನ್ ಸಂಸ್ಥಾನಗಳ ಕೂಟವನ್ನು ಸ್ಥಾಪಿಸಿಕೊಂಡದ್ದು ೧೯೫೨ರಲ್ಲಿ. ಆಗ ಇದಕ್ಕೆ ಒಂದು ಪ್ರಾಂತ್ಯದ ಸ್ವರೂಪ ಬಂತು. ೧೯೫೫ರ ಅಕ್ಟೋಬರಿನಲ್ಲಿ ಇದು ಹೊಸದಾಗಿ ರೂಪಿಸಲಾದ ಪಶ್ಚಿಮ ಪಾಕಿಸ್ತಾನ್ ಪ್ರಾಂತ್ಯದಲ್ಲಿ ಸೇರಿಹೋಯಿತು. ಕಲಾತ್ ಸಂಸ್ಥಾನದ ಕೆಲವು ಭಾಗಗಳನ್ನು ಕತ್ತರಿಸಿ ಉಳಿದದ್ದನ್ನು ಕಲಾತ್ ಜಿಲ್ಲೆಯೆಂದು ಕರೆಯಲಾಯಿತು.

ಕೌಸಿ ಮತ್ತು ಖುಸ್ರಾವಿ ಪ್ರದೇಶಗಳಲ್ಲಿರುವ ಕಾರೆಜ್ಗಳು-ಸುರಂಗ ಕಾಲುವೆಗಳು-ಪ್ರಾಚೀನ ಕಲಾತ್ ಸಂಸ್ಕೃತಿಯ ಅವಶೇಷಗಳು. ಗಬರ್ಬಂಡ್ ಎಂಬ ಕಲ್ಲಿನ ಅಣೆಕಟ್ಟೆಗಳನ್ನೂ ಅಗ್ನಿಯನ್ನು ಆರಾಧಿಸುತ್ತಿದ್ದ ಜನ ನಿರ್ಮಿಸಿದ ಮಣ್ಣಿನ ಒಡ್ಡುಗಳನ್ನೂ ಅಲ್ಲಲ್ಲಿ ಕಾಣಬಹುದು. ಇಂಥ ಒಡ್ಡುಗಳಲ್ಲಿ ಪುರಾತನ ಮಡಕೆ ಚೂರುಗಳು ಹೇರಳವಾಗಿ ಸಿಕ್ಕಿವೆ. ಕಚ್ಛಿಯಲ್ಲಿ ಬೌದ್ಧ ಅವಶೇಷಗಳುಂಟು. ಕಲಾತ್ ಕೋಟೆಯ ಸಮೀಪದಲ್ಲಿರುವ ದೇವಸ್ಥಾನದ ಕಾಳಿಯ ಮೂರ್ತಿ ಅಮೃತಶಿಲೆಯದು. ಈ ದೇವಸ್ಥಾನವನ್ನು ಮುಸ್ಲಿಂ ಆಳ್ವಿಕೆಗೂ ಹಿಂದೆಯೇ ನಿರ್ಮಿಸಿದ್ದಿರಬಹುದೆಂದು ನಂಬಲಾಗಿದೆ. ಕಲಾತ್ ವಿಭಾಗದ ವಿಸ್ತೀರ್ಣ ೧,೮೮,೯೨೫ ಚ.ಕಿಮೀ ಕಲಾತ್ ಜಿಲ್ಲೆಯೂ ಮತ್ತು ಸಂಸ್ಥಾನಗಳಾದ ಖರಾನ್ ಮತ್ತು ಮಕ್ರಾನ್ಗಳೂ ಕಲಾತ್ ವಿಭಾಗದಲ್ಲಿ ಸೇರಿವೆ.

"https://kn.wikipedia.org/w/index.php?title=ಕಲಾತ್&oldid=915059" ಇಂದ ಪಡೆಯಲ್ಪಟ್ಟಿದೆ