ಕರ್ಮೇಂದ್ರಿಯ
ಕರ್ಮೇಂದ್ರಿಯ : ಇಂದ್ರಿಯಗಳನ್ನು ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಎಂದು ಎರಡು ಬಗೆಯಾಗಿ ವಿಂಗಡಿಸಿದ್ದಾರೆ. ಜ್ಞಾನವನ್ನುಂಟುಮಾಡುವ ಸಾಮರ್ಥ್ಯವುಳ್ಳ ಇಂದ್ರಿಯಗಳು ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ). ಉಚ್ಚಾರಣೆ ಮೊದಲಾದ ಕ್ರಿಯೆಗಳಲ್ಲಿ ಯಾವುದಾದರೊಂದನ್ನು ಮಾಡುವ ಸಾಮರ್ಥ್ಯವುಳ್ಳ ಇಂದ್ರಿಯಗಳು ಕರ್ಮೇಂದ್ರಿಯಗಳು. ಕರ್ಮೇಂದ್ರಿಯಗಳು ಐದು ಬಗೆಯಾಗಿವೆ: ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ.
- ವರ್ಣೋಚ್ಚಾರಣೆಗೆ ಸಾಧನವಾದ ಇಂದ್ರಿಯವೇ ವಾಕ್ಕು. ಇದು ಹೃದಯ, ಗಂಟಲು, ಜಿಹ್ವಾಮೂಲ, ನಾಲಗೆ, ಹಲ್ಲು, ತುಟಿ, ಮೂಗು ಮತ್ತು ಮೂರ್ಧ ಎಂಬ ಎಂಟು ಸ್ಥಾನಗಳಲ್ಲಿದೆ. ಪಶು ಪ್ರಾಣಿಗಳಲ್ಲಿ ಇದು ಸ್ಪಷ್ಟವಾಗಿಲ್ಲ.
- ಕೈಕೆಲಸ ಮೊದಲಾದುವನ್ನು ಮಾಡಲು ಸಾಧನವಾದ ಇಂದ್ರಿಯ ಪಾಣಿ.
- ಸಂಚಾರಕ್ಕೆ ಸಾಧನವಾದ ಇಂದ್ರಿಯವೇ ಪಾದ.
- ಮಲಮೂತ್ರಾದಿಗಳ ವಿಸರ್ಜನೆಗೆ ಸಾಧನವಾದ ಇಂದ್ರಿಯಗಳೇ ಪಾಯು ಎನಿಸುತ್ತವೆ.
- ಆನಂದವಿಶೇಷಕ್ಕೆ ಸಾಧನವಾದ ಇಂದ್ರಿಯ ಉಪಸ್ಥ; ಇದು ಜನನಾಂಗಗಳಲ್ಲಿದೆ.
ಈ ಇಂದ್ರಿಯಗಳು ಸೂಕ್ಷ್ಮವಾದವು. ಜೀವನೊಡನೆ ಇವೂ ದೇಹಾಂತರಗಳಿಗೆ ಬರುವುವು. ಸೂಕ್ಷ್ಮ ರೂಪದಲ್ಲಿ ಇವು ಸ್ವಭಾವತಃ ಸಮರ್ಥವಾಗಿಯೇ ಇದ್ದರೂ ಆಯಾ ಜೀವರುಗಳ ಅದೃಷ್ಟದ ಕಾರಣ ದೋಷಯುಕ್ತವಾಗಿರುವುವು. (ನೋಡಿ- ಇಂದ್ರಿಯಗಳು)