ಕರ್ನೂಲು ಸ್ತೋಮ: ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಕಡಪ ಶಿಲಾಸ್ತೋಮದ ಮೇಲೆ ಅನನುರೂಪವಾಗಿ ನಿಕ್ಷೇಪವಾಗಿರುವ ಶಿಲಾರಾಶಿ (ಕರ್ನೂಲ್ ಸಿಸ್ಟಂ). ಕುಂದೈರ್ ಕೊಳ್ಳದಲ್ಲೂ (ಇದು ಕೃಷ್ಣಾನದಿಯ ವರೆಗೂ ಹರಡಿದೆ) ಪಲ್ನಾಡ್ ಪ್ರದೇಶದಲ್ಲೂ ಈ ಶಿಲಾವರ್ಗ ಇದೆ. ಇದು ಪಶ್ಚಿಮದಲ್ಲಿ ಸುಮಾರು ೩೬೬ ಮೀ ಮಂದವಾಗಿದೆ; ಪಲ್ನಾಡ್ ಕಡೆಗೆ ಹೋದಂತೆ ಈ ದಪ್ಪ ಹೆಚ್ಚುತ್ತದೆ. ಪೂರ್ವದ ಕಡೆ ಈ ಸ್ತೋಮ ಭೂಚಲನೆಯಿಂದ ಸ್ವಲ್ಪ ಅಸ್ತವ್ಯಸ್ತಗೊಂಡಿದೆ. ಆದರೂ ಕಡಪ ಶಿಲಾಸ್ತೋಮಗಳಷ್ಟು ಮಡಿಕೆ ಬಿದ್ದಿಲ್ಲ. ಕರ್ನೂಲ್ ಸ್ತೋಮ ಕೆಳಗಿನ ವಿಂಧ್ಯನ್ ಶಿಲಾಸ್ತೋಮಕ್ಕೆ ಸಮಕಾಲೀನವಾದದ್ದು.

ಕರ್ನೂಲ್ ಸ್ತೋಮದಲ್ಲಿ ನಾಲ್ಕು ವಿಧದ ಶಿಲಾಶ್ರೇಣಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಸುಣ್ಣಶಿಲೆ ಮುಖ್ಯವಾಗಿದ್ದರೂ ಜೇಡು ಮತ್ತು ಮರಳು ಶಿಲೆಗಳಿಗೆ ಏನೂ ಕಡಿಮೆ ಇಲ್ಲ. ವಿವರ ಮುಂದೆ ಬರೆದಿದೆ.

  • ಕುಂದೈರ್ ನಂದ್ಯಾಲ್ ಜೇಡುಶಿಲೆಗಳು ಕೋಯಿಲ್ಕುಂಟ್ಲಾ ಸುಣ್ಣ ಶಿಲೆಗಳು
  • ಪನಿಯಮ್ ಪಿನ್ನಕ್ಲೆಡ್ ಬೆಣಚುಶಿಲೆ ಪ್ಲೇಟೋ ಬೆಣಚುಶಿಲೆ
  • ಜಮ್ಮಲಮಡಗು ಆಕ್ ಮರಳುಶಿಲೆ ನರ್ಜಿ ಸುಣ್ಣಶಿಲೆ
  • ಬಂಗನಪಲ್ಲಿ ಬಂಗನಪಲ್ಲಿ ಮರಳುಶಿಲೆ

ಬಂಗನಪಲ್ಲಿ ಶಿಲೆಗಳು ಸಾಮಾನ್ಯವಾಗಿ ದಪ್ಪ ಮರಳಿನಿಂದ ಕೂಡಿವೆ. ಇವುಗಳಲ್ಲಿ ಕೆಲವು ಕಡೆ ಜೇಡು ಮತ್ತು ಕಬ್ಬಿಣಾಂಶ ಸಹ ಇದೆ. ಈ ಶಿಲೆಗಳ ಬಣ್ಣ ಬೂದು ಮತ್ತು ಕಂದು. ಇಲ್ಲಿರುವ ಬೆಣಚು, ಜಾಸ್ಪರ್, ಚರ್ಟ್ ಮತ್ತು ಸ್ಲೇಟಿನ ಉರುಟು ಕಲ್ಲುಗಳು ಶೆಯ್ಯಾರ್ ಶ್ರೇಣಿಯಿಂದ ಬಂದಿವೆ. ಬಂಗನಪಲ್ಲಿ ಶ್ರೇಣಿ ಮುಖ್ಯವಾಗಿ ವಜ್ರಗಳ ತವರುಮನೆ. ೧೮೪೦ರ ವರೆಗೆ ಇಲ್ಲಿ ವಜ್ರಗಳನ್ನು ತೆಗೆಯುವ ಉದ್ಯಮ ನಡೆಯುತ್ತಿತ್ತು. ಈಚೆಗೆ ಪುನಃ ಶೋಧನೆ ನಡೆಯುತ್ತಿದೆ. ಜಮ್ಮಲಮಡಗು ಶಿಲಾಶ್ರೇಣಿ ಬಂಗನಪಲ್ಲಿ ಶ್ರೇಣಿಯ ಮೇಲೆ ನಿಕ್ಷೇಪಗೊಂಡಿದೆ. ಇದರ ಕೆಳಗಿನ ಸ್ತರಗಳಲ್ಲಿ ಸುಣ್ಣ ಶಿಲೆಗಳಿವೆ; ಬಣ್ಣ ನೀಲಿ, ಬೂದು ಮತ್ತು ಕಂದು. ನರ್ಜಿ ಸುಣ್ಣದ ಶಿಲೆ ಎಂದು ಈ ಶಿಲೆಗಳ ಹೆಸರು. ಇವನ್ನು ಕಟ್ಟಡದ ಕಲ್ಲಿಗಾಗಿ ತೆಗೆಯುತ್ತಾರೆ. ಈ ಶಿಲೆಯ ಮೇಲೆ ಕಂದು ಮತ್ತು ನೇರಿಳೆ ಬಣ್ಣದ ಆಕ್ ಜೇಡುಶಿಲೆ ಸಂಚಿತವಾಗಿದೆ. ಇದರ ಮೇಲಿರುವ ಪಾನ್ಯಂ ಶಿಲಾಶ್ರೇಣಿ ಪಾನ್ಯಂ ಮತ್ತು ಉಂಡುಟ್ಲಗಳ ಸುತ್ತಮುತ್ತ ಚೆನ್ನಾಗಿ ರೂಪುಗೊಂಡಿದೆ. ಇವುಗಳಲ್ಲಿ ಮರಳುಶಿಲೆ ಮತ್ತು ಬೆಣಚುಶಿಲೆಗಳೇ ಮುಖ್ಯ. ಇವುಗಳ ಮೇಲೆ ನಿಕ್ಷೇಪಗೊಂಡಿರುವ ಶಿಲೆಗಳು, ಕುಂದೈಕ ನದಿಯ ಪಾತ್ರದಲ್ಲಿ ಚೆನ್ನಾಗಿ ರೂಪುಗೊಂಡಿರುವುದರಿಂದ ಅವುಗಳಿಗೆ ಕುಂದೈರ್ ಶಿಲಾಶ್ರೇಣಿಗಳೆಂದು ಹೆಸರು ಬಂದಿದೆ. ಇದರಲ್ಲಿ ಕೆಳಗಿನ ಮೂರನೆಯ ಒಂದು ಭಾಗ ಸೂಕ್ಷ್ಮ ಕಣದ ಗಟ್ಟಿಶಿಲೆಯಿಂದಲೂ ಮೇಲ್ಭಾಗ ಸುಣ್ಣ ಮಿಶ್ರ ಜೇಡು ಮತ್ತು ಅಶುದ್ಧ ಸುಣ್ಣಶಿಲೆಯಿಂದಲೂ ಕೂಡಿದೆ. ಇವು ಕೋಯಿಲ್ಕುಂಟ್ಲ ಮತ್ತು ನಂದ್ಯಾಲ್ ಎಂಬ ಸ್ಥಳಗಳಲ್ಲಿ ಚೆನ್ನಾಗಿ ನಿಕ್ಷೇಪಗೊಂಡಿವೆ. ಆದ್ದರಿಂದ ಇವುಗಳಿಗೆ ಕೋಯಿಲ್ಕುಂಟ್ಲ ಸುಣ್ಣಶಿಲೆ ಮತ್ತು ನಂದ್ಯಾಲ್ ಜೇಡುಶಿಲೆಗಳೆಂಬ ಹೆಸರುಗಳಿವೆ. ಕಡಪ ಕೊಳ್ಳದ ಈಶಾನ್ಯಕ್ಕಿರುವ ಕೃಷ್ಣಾನದಿಯ ಎರಡು ದಡಗಳಲ್ಲಿ ಆವರಿಸಿ ಪಲ್ನಾಡಿನ ಸುತ್ತಮುತ್ತ ರೂಪುಗೊಂಡಿರುವ. ಕಡಪ ಶಿಲಾಸ್ತೋಮದ ಮೇಲೆ ಅನನುರೂಪವಾಗಿ ಶೇಖರವಾಗಿರುವ ಕರ್ನೂಲ್ ಸ್ತೋಮಕ್ಕೆ ಪಲ್ನಾಡ್ ಶಿಲಾಶ್ರೇಣಿ ಎಂದು ಹೆಸರು. ಈ ಸ್ತೋಮದಲ್ಲಿ ಸುಣ್ಣ ಮತ್ತು ಜೇಡುಶಿಲೆಗಳಿವೆ. (ಎಂ.ಎಸ್.ಎಸ್.)