ಕರ್ನಾಟಕ ಗ್ಯಾಝೆಟಿಯರ್

ಕರ್ನಾಟಕ ಗ್ಯಾಸೆಟಿಯರ್: ಒಂದು ಪ್ರದೇಶದ ಅಥವಾ ಜಿಲ್ಲೆಯ ನಿಖರವಾದ ಸಮಗ್ರವಾದ ಸ್ಥಳೀಯ ಮಾಹಿತಿ ಒದಗಿಸುವ ಆಕರ ಗ್ರಂಥವೇ ಗ್ಯಾಸೆಟಿಯರ್ (ದೇಶ ವಿಷಯಕೋಶ.)

"ಬ್ರಿಟಿಷ್ ರಾಜ್ ನಲ್ಲಿ ಧರ್ಮ ಬಾಹುಳ್ಯದ ಪ್ರದೇಶಗಳ ನಕ್ಷೆ," ಆಕ್ಸ್‍ಫರ್ಡ್ ಪ್ರೆಸ್‍ನವರು ೧೯೦೯ರಲ್ಲಿ ಪ್ರಕಟಿಸಿದ ಇಂಪೀರಿಯಲ್ ಗ್ಯಾಸೆಟಿಯರ್ ಆಫ್ ಇಂಡಿಯಾದಿಂದ

ಚರಿತ್ರೆ

ಬದಲಾಯಿಸಿ
 
ಐನ್-ಇ-ಅಕ್ಬರಿಯನ್ನು ಒಳಗೊಂಡ ಅಕ್ಬರ್‍ನಾಮ ಗ್ರಂಥದಲ್ಲಿ ಅಕ್ಬರನ ಆಸ್ಥಾನದ ಚಿತ್ರಣ

ಗ್ಯಾಸೆಟಿಯರ್ ಎಂಬುದು ಆಧುನಿಕ ನಮೂನೆಯ ಮಾಹಿತಿಕೋಶ. ಇದೇ ಬಗೆಯ ಕಲ್ಪನೆ ಮತ್ತು ಉದ್ದೇಶಗಳನ್ನೊಳಗೊಂಡ ಗ್ರಂಥಗಳು ಪ್ರಾಚೀನ ಭಾರತೀಯರಲ್ಲಿದ್ದವು. ವಾಯುಪುರಾಣದಲ್ಲಿರುವ ಭೌಗೋಳಿಕ ವಿವರಣೆ, ಕೌಟಿಲ್ಯಅರ್ಥಶಾಸ್ತ್ರದಲ್ಲಿ ಬರುವ ಭೂಮಿ, ಹವಾಮಾನ, ಸಂಪನ್ಮೂಲ ಆಡಳಿತ ವಿಭಾಗಗಳು, ತೆರಿಗೆಗಳ ವಿವರ, ಸಂಸ್ಕೃತದಲ್ಲಿರುವ ವರಾಹಮಿಹಿರನ ಬೃಹತ್ ಸಂಹಿತೆ, ಸೋಮೇಶ್ವರನ ಮಾನಸೋಲ್ಲಾಸ ಮೊದಲಾದ ಕೃತಿಗಳಲ್ಲಿರುವ ಸಂಕ್ಷಿಪ್ತ ಮಾಹಿತಿಗಳೂ ಗ್ಯಾಸೆಟಿಯರ್ ನಲ್ಲಿ ಕಂಡುಬರುವ ವಿವರಗಳನ್ನು ತಕ್ಕಮಟ್ಟಿಗೆ ಹೋಲುತ್ತವೆ. ಸ್ಥಳ ಪುರಾಣಗಳು ಮತ್ತು ಪಾಶ್ಚಾತ್ಯ ಪ್ರವಾಸಿಗಳು ಒದಗಿಸಿರುವ ಕಥನಗಳು ಇದೇ ಗುಂಪಿಗೆ ಸೇರುತ್ತವೆ. ಅಬುಲ್ ಫಜಲನ ಐನ್-ಇ-ಅಕ್ಬರಿ ಗ್ಯಾಸೆಟಿಯರ್ ಮಾದರಿಯ ಗ್ರಂಥ.

ಬ್ರಿಟಿಷ್ ಭಾರತದಲ್ಲಿ

ಬದಲಾಯಿಸಿ

ಕೈಗಾರಿಕಾ ಕ್ರಾಂತಿ, ಆಧುನಿಕ ಗ್ಯಾಝೆಟಿಯರ್ ಗಳ ಪ್ರಕಟಣೆಗೆ ದಾರಿ ಮಾಡಿಕೊಟ್ಟಿತು. ಭಾರತದ ಅತ್ಯಂತ ಹಳೆಯ ಗ್ಯಾಝೆಟಿಯರ್‍ಗಳೆಂದರೆ ಈಸ್ಟ್‌ ಇಂಡಿಯ ಕಂಪನಿಯವು. ಆಂಗ್ಲರ ಆಡಳಿತದ ಅಂಗವಾಗಿ ಬಂದ ಗ್ಯಾಸೆಟಿಯರ್ ಗಳು ಪ್ರಾರಂಭದಲ್ಲಿ ಅಂಗ್ಲ ಭಾಷೆಯಲ್ಲಿ ಪ್ರಕಟಗೊಂಡವು.

ಆಂಗ್ಲ ಅಧಿಕಾರಿಗಳ ಆಡಳಿತಾನುಕೂಲಕ್ಕಾಗಿ ವಾಲ್ಟರ್ ಹ್ಯಾಮಿಲ್ಟನ್ ಮತ್ತು ಎಡ್ವರ್ಡ್ ಥಾರ್ನಟನ್ ೧೮೧೫ರಲ್ಲಿ ಸಿದ್ಧಪಡಿಸಿದ ಈಸ್ಟ್‌ ಇಂಡಿಯಾ ಗ್ಯಾಸೆಟಿಯರ್, ಅನಂತರ ೧೮೫೪ರಲ್ಲಿ ಗ್ಯಾಸೆಟಿಯರ್ ಆಫ್ ದಿ ಟೆರಿಟರಿಸ್ ಅಂಡರ್ ದಿ ಈಸ್ಟ್‌ ಇಂಡಿಯ ಕಂಪನಿ ಎಂಬ ಕೃತಿಗಳು ಭಾರತದಲ್ಲಿ ಬೆಳಕು ಕಂಡ ತೀರಾ ಮೊದಲಿನ ಗ್ಯಾಸೆಟಿಯರ್ ಗಳು. ೧೮೭೪-೮೪ರ ಅವಧಿಯಲ್ಲಿ ಮುಂಬಯಿ ಪ್ರಾಂತ್ಯದ ಜಿಲ್ಲೆಗಳ ಬಗ್ಗೆ ಅತ್ಯಂತ ಮಹತ್ವದ ಮಾಹಿತಿಗಳನ್ನೊಳಗೊಂಡ ಜಿಲ್ಲಾ ಗ್ಯಾಸೆಟಿಯರ್ ಗಳನ್ನು ಜೇಮ್ಸ್‌ ಕಾಂಪಬೆಲ್ ಪ್ರಕಟಿಸಿದ. ಅನಂತರ ಬಿ.ಎಲ್.ರೈಸ್ ಅವರು ೧೮೭೭-೭೮ರಲ್ಲಿ ಹಳೆಯ ಮೈಸೂರು ರಾಜ್ಯದ ಕೊಡಗು ಸೇರಿದಂತೆ ಮೂರು ಸಂಪುಟಗಳಲ್ಲಿ ಗ್ಯಾಸೆಟಿಯರ್ ಪ್ರಕಟಿಸಿದರು. ಇವುಗಳನ್ನು ಪುನಃ ೧೯೦೭ರಲ್ಲಿ ಪರಿಷ್ಕರಿಸಲಾಯಿತು. ೧೮೮೧ರಲ್ಲಿ ಸರ್ ವಿಲಿಯಂ ಹಂಟರ್ ಅವರ ನೇತೃತ್ವದಲ್ಲಿ ಇಂಪೀರಿಯಲ್ ಗ್ಯಾಸೆಟಿಯರ್ ಆಫ್ ಇಂಡಿಯದ ಒಂಬತ್ತು ಸಂಪುಟಗಳು ಪ್ರಕಟಗೊಂಡವು. ಹೈದರಾಬಾದ್ ಸರ್ಕಾರ ೧೯೨೧ರಲ್ಲಿ ಈ ಪ್ರಕಟಣೆಗಳನ್ನು ಬಳಕೆಗೆ ತಂದಿತು.

ಸ್ವತಂತ್ರ ಭಾರತದಲ್ಲಿ

ಬದಲಾಯಿಸಿ

ಹಳೆಯ ಮೈಸೂರು ರಾಜ್ಯಕ್ಕೆ (ಈಗ ಕರ್ನಾಟಕ) ಸಂಬಂಧಿಸಿದಂತೆ ಸಿ.ಹಯವದನರಾವ್ ಅವರು ೨೦ನೆಯ ಶತಮಾನದ ಮೂರನೆಯ ದಶಕದಲ್ಲಿ ಮೈಸೂರು ಗ್ಯಾಸೆಟಿಯರ್ ಗಳನ್ನು ಎಂಟು ಭಾಗಗಳಲ್ಲಿ ಹೊರತಂದರು. ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರ ನೇಮಿಸಿದ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಪ್ರತಿರಾಜ್ಯವೂ ಗ್ಯಾಸೆಟಿಯರ್ ಪ್ರಕಟಣಾ ಕಾರ್ಯ ಕೈಗೊಂಡವು (೧೯೫೫). ಸಮಿತಿಯ ಮಾರ್ಗ ಸೂಚಿಯಂತೆ ಹಿಂದಿನ ಗ್ಯಾಸೆಟಿಯರ್ ಗಳ ಪರಿಷ್ಕರಣ ಹಾಗೂ ಪುನರ್ ಮುದ್ರಣ ಕಾರ್ಯ ಪ್ರಾರಂಭವಾಯಿತು. ರಾಜ್ಯಗಳ ಗ್ಯಾಸೆಟಿಯರ್ ಗಳನ್ನು ಪ್ರಕಟಿಸುವ ಕಾರ್ಯವು ಚಾಲನೆಗೊಂಡಿತು. ರಾಜ್ಯ ಗ್ಯಾಸೆಟಿಯರನ್ನು ಪ್ರಕಟಿಸಿದ ಮೊದಲನೆಯ ರಾಜ್ಯ ಕರ್ನಾಟಕ. ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸುವಲ್ಲಿಯೂ ಪ್ರಥಮ ದಾಖಲೆ ಸ್ಥಾಪಿಸಿದ್ದೂ ಕರ್ನಾಟಕವೇ.

ಕರ್ನಾಟಕ ರಾಜ್ಯ ಸರ್ಕಾರ ೧೯೫೮ರಲ್ಲಿ ಗ್ಯಾಸೆಟಿಯರ್ ಘಟಕ ಪ್ರಾರಂಭಿಸಿತು. ರಾಜ್ಯದ ಆಯಾ ಜಿಲ್ಲೆಗೆ ಸಂಬಂಧಿಸಿದ ಸಮಕಾಲೀನ ಮತ್ತು ಪ್ರಾಚೀನ ವಿಷಯಗಳನ್ನು ಒಳಗೊಂಡಿರುವ ಅತ್ಯಂತ ಮೌಲಿಕ ಹಾಗೂ ಬಹೂಪಯೋಗಿ ಆಕರ ಗ್ರಂಥ ಗ್ಯಾಸೆಟಿಯರ್. ಕರ್ನಾಟಕ ರಾಜ್ಯದ ರಜತ ಮಹೋತ್ಸವದ ಸವಿ ನೆನಪಿಗಾಗಿ ೧೯೮೪ರಲ್ಲಿ ಮೊದಲ ಬಾರಿ ಕನ್ನಡದಲ್ಲಿ ಗ್ಯಾಸೆಟಿಯರ್ ಪ್ರಕಟಿಸಲಾಯಿತು. ಬಹುಕಾಲ ನಿಲ್ಲಬಹುದಾದ ವಿಶ್ವಕೋಶ ಮಾದರಿಯ ಸರ್ಕಾರದ ಅಧಿಕೃತ ಪ್ರಕಟಣೆಯ ಆಕರ ಗ್ರಂಥಗಳಾದ ಇವು ಒಂದು ಪ್ರದೇಶದ ಸಮಗ್ರ ಕೈಪಿಡಿಯಾಗಿ ಅಧ್ಯಯನಶೀಲರಿಗೆ, ವೃತ್ತಿನಿರತರಿಗೆ, ಆಡಳಿತಗಾರರಿಗೆ ಉಪಯುಕ್ತ ಮಾಹಿತಿ ನೀಡಬಲ್ಲ ಗ್ರಂಥಗಳಾಗಿವೆ.

ಕರ್ನಾಟಕದಲ್ಲಿ

ಬದಲಾಯಿಸಿ

ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಜನಗಣತಿ ಇಲಾಖೆ ಸರ್ಕಾರದ ಇತರೆ ಇಲಾಖೆಗಳ ವಿವಿಧ ಆಕರ ಗ್ರಂಥಗಳ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸುವ ಮಾಹಿತಿಗಳನ್ನು ಆಧರಿಸಿ ಮುಖ್ಯ ಸಂಪಾದಕರ ಮಾರ್ಗದರ್ಶನದಲ್ಲಿ ಸಂಪಾದಕರು ಸಿದ್ಧಪಡಿಸುವ ಗ್ಯಾಸೆಟಿಯರ್ ಗಳನ್ನು ಪರಿಶೀಲಿಸಲು ಸರ್ಕಾರ ತಜ್ಞರ ಸಮಿತಿ ನೇಮಿಸಿದೆ. ಈ ಸಮಿತಿಯಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ವಿಷಯತಜ್ಞರೂ ಭಾಷಾಕೋವಿದರೂ ಸದಸ್ಯರಾಗಿರುತ್ತಾರೆ. ಪ್ರಸ್ತುತ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯವರು ಅಧ್ಯಕ್ಷರಾಗಿರುತ್ತಾರೆ. ಗ್ಯಾಸೆಟಿಯರ್ ಇಲಾಖೆಯ ಮುಖ್ಯ ಸಂಪಾದಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಸಂಪಾದಕ ವರ್ಗ, ಅನ್ವೇಷಕರು ಮತ್ತು ಅಗತ್ಯ ಕಛೇರಿ ಸಿಬ್ಬಂದಿಯನ್ನು ಹೊಂದಿರುವ ಈ ಇಲಾಖೆ ಬೆಂಗಳೂರಿನಲ್ಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಕ್ಕೊಳಪಟ್ಟ ಸರ್ಕಾರಿ ಕಛೇರಿ ಇದಾಗಿದೆ.

ಸ್ವರೂಪ

ಬದಲಾಯಿಸಿ

ಗ್ಯಾಸೆಟಿಯರ್ ಸ್ವರೂಪ ಕೇಂದ್ರ ಸರ್ಕಾರದ ಗ್ಯಾಸೆಟಿಯರ್ ಮಾದರಿಯಲ್ಲಿ ಸ್ಥಳೀಯ ಅಗತ್ಯಕ್ಕೆ ಸೂಕ್ತವೆನಿಸಿದ ಮಾರ್ಪಡಿನೊಂದಿಗೆ ರಚನೆಯಾಗುತ್ತದೆ. ಸಾಮಾನ್ಯವಾಗಿ ಪ್ರತಿ ಗ್ಯಾಸೆಟಿಯರ್ ಈ ಕೆಳಕಂಡ ೧೭ ಅಧ್ಯಾಯಗಳಲ್ಲಿ ವಿವಿಧ ಮಾಹಿತಿಗಳ್ನು ನೀಡುವಂತಿರುತ್ತದೆ.

೧.ಪ್ರಾಸ್ತಾವಿಕ, ೨.ಇತಿಹಾಸ, ೩.ಜನತೆ, ೪.ಕೃಷಿ ಮತ್ತು ನೀರಾವರಿ, ೫.ಕೈಗಾರಿಕೆ, ೬.ಬ್ಯಾಂಕಿಂಗ್ ಹಣಕಾಸು ವ್ಯವಹಾರ ಮತ್ತು ವಾಣಿಜ್ಯ, ೭.ಸಾರಿಗೆ ಮತ್ತು ಸಂಪರ್ಕ, ೮.ಆರ್ಥಿಕ ಪ್ರವೃತ್ತಿಗಳು, ೯.ಆಡಳಿತ ಮತ್ತು ರಾಜಸ್ವ, ೧೦.ನ್ಯಾಯಾಡಳಿತ ಮತ್ತು ಶಾಂತಿ ಪಾಲನೆ, ೧೧.ಇತರೆ ಇಲಾಖೆಗಳು, ೧೨.ಸ್ಥಳೀಯ ಸ್ವಯಂ ಸೇವಾ ಆಡಳಿತ ಸಂಸ್ಥೆಗಳು, ೧೩.ಶಿಕ್ಷಣ ಮತ್ತು ಕ್ರೀಡೆ, ೧೪.ಸಾಹಿತ್ಯ ಮತ್ತು ಸಂಸ್ಕೃತಿ, ೧೫.ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು, ೧೬.ಇತರ ಸೇವಾ ಸೌಲಭ್ಯಗಳು ೧೭.ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳು ಹಾಗೂ ವಿವಿಧ ಜಾತಿಗಳ ಆಚಾರ ವಿಚಾರ ಸಂಪ್ರದಾಯಗಳ ಸಂಕ್ಷಿಪ್ತ ಮಾಹಿತಿಗಳು. ಕಳೆದ ೫೦ ವರ್ಷಗಳ ಹಿಂದಿನ ಮಳೆಯ ಪ್ರಮಾಣ, ೧೦೦ ವರ್ಷಗಳಿಂದ ಜನಸಂಖ್ಯೆ ಬೆಳೆವಣಿಗೆ, ಜಿಲ್ಲೆಯ ನಕ್ಷೆ, ಗ್ರಾಮಗಳ ಪಟ್ಟಿ ಈ ಮುಂತಾದ ಉಪಯುಕ್ತ ಮಾಹಿತಿಯನ್ನು ಇತಿಹಾಸ ಪೂರ್ವಕಾಲದಿಂದ ಇತ್ತೀಚಿನವರೆಗೆ ಕಾಲಕ್ರಮದ ಅನ್ವಯ ವಿವರದ ವೈವಿಧ್ಯಗಳನ್ನು ಇಲ್ಲಿ ಕಾಣುತ್ತೇವೆ. ಪೂರಕವಾಗಿ ವಿವಿಧ ಅಂಕಿ ಅಂಶಗಳ ಪಟ್ಟಿ, ನಕಾಶೆ, ಚಿತ್ರಗಳು, ಶಬ್ದಸೂಚಿ ಮೊದಲಾದ ಉಪಯುಕ್ತ ಮಾಹಿತಿಗಳು ಗ್ಯಾಸೆಟಿಯರ್ ನಲ್ಲಿರುತ್ತವೆ.

ಜಿಲ್ಲಾ ಗ್ಯಾಸೆಟಿಯರ್ ಗಳಲ್ಲದೆ ರಾಜ್ಯಕ್ಕೆ ಅನ್ವಯವಾಗುವ ರಾಜ್ಯ ಗ್ಯಾಸೆಟಿಯರ್ ಸಂಪುಟಗಳನ್ನು (೧೯೮೨-೮೩) ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಕಟಿಸಲಾಗಿದೆ. ಇಲಾಖೆಯ ವಿಶೇಷ ಪ್ರಕಟಣೆಯಾಗಿ ಸಮಗ್ರ ಕರ್ನಾಟಕವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಇಂಗ್ಲಿಷ್ ಭಾಷೆಯಲ್ಲಿ ಎ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಮತ್ತು ಕನ್ನಡದಲ್ಲಿ ಕರ್ನಾಟಕ ಕೈಪಿಡಿಗಳನ್ನು ಪ್ರಕಟಿಸಲಾಗಿದೆ (೧೯೯೬-೯೭). ಕರ್ನಾಟಕದ ಗ್ಯಾಸೆಟಿಯರ್ ಇಲಾಖೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಬಿ.ಎನ್.ಶ್ರೀಸತ್ಯನ್, ಕೆ.ಅಭಿಶಂಕರ, ಸೂರ್ಯನಾಥ್ ಕಾಮತ್, ಟಿ.ಎ.ಪಾರ್ಥಸಾರಥಿ ಮೊದಲಾದವರು ಸ್ಮರಣೀಯರು.

ಸರ್ಕಾರದ ಆಡಳಿತ ನೀತಿಯಂತೆ ಇ-ಗವರ್ನೆನ್ಸ್‌ ಯೋಜನೆಯ ಅಡಿಯಲ್ಲಿ ಗ್ಯಾಸೆಟಿಯರ್ ಗಳ ಇಲಾಖೆಯ ಎಲ್ಲಾ ಪ್ರಕಟಣೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗಣಕೀಕೃತಗೊಳಿಸುವ, ಈವರೆಗೆ ಪ್ರಕಟವಾದ ಗ್ಯಾಸೆಟಿಯರ್ ಗಳನ್ನು ಸಿ.ಡಿ.ರೂಪದಲ್ಲಿ ಹೊರತರುವ ಹಾಗೂ ಅಂತರಜಾಲ ತಾಣದಲ್ಲಿ ಪ್ರಕಟಿಸುವ ಮಹತ್ತರ ಯೋಜನೆಯನ್ನು ಇಲಾಖೆ ಹಮ್ಮಿಕೊಂಡಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: