ಬೆಂಗಳೂರಿನ ಎಚ್ಎಎಲ್ ಕಾರ್ಖಾನೆಯ ಏರೋಇಂಜಿನ್ ವಿಭಾಗದಲ್ಲಿ “ಕರ್ನಾಟಕ ಕಲಾಸಂಘ”ದ ಸ್ಥಾಪನೆಯು ೧೯೬೯ರಲ್ಲಾಯಿತು. ಅಂದು ಕಾರ್ಖಾನೆಯಲ್ಲಿದ್ದ ಅನ್ಯಭಾಷಾ ದೌರ್ಜನ್ಯವೆಂಬ ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ಕನ್ನಡನಾಡಿನ ಕಲೆಸಂಸ್ಕೃತಿಗಳನ್ನು ಪಸರಿಸುವ ನೆವದಲ್ಲಿ ಕನ್ನಡಿಗರ ಹಿತ ಕಾಯಲೆಂದೇ ಈ ಸಂಘವು ಉದಯವಾಯಿತು. ಅಂದು ಇಂಜಿನ್ ವಿಭಾಗದ ಮುಖ್ಯಸ್ಥರಾಗಿದ್ದ ಪದ್ಮಶ್ರೀ ಹರಿಶ್ಚಂದ್ರ ಕಾಶಿನಾಥ ಕರ್ವೆಯವರು ತಮ್ಮ ಪತ್ನಿಯ ನೇತೃತ್ವದಲ್ಲಿ ಕನ್ನಡಿಗರನ್ನು ಒಂದುಗೂಡಿಸಿ ಹಾಡುಗಾರಿಕೆ, ಚರ್ಚಾಗೋಷ್ಠಿ, ಉಪನ್ಯಾಸ, ಯುಗಾದಿ ದಸರಾ ಆಚರಣೆಗಳ ಮೂಲಕ ಕಾರ್ಮಿಕರಲ್ಲಿ ಕಲಾಭಿವ್ಯಕ್ತಿಯನ್ನೂ ರಸಾಸ್ವಾದನೆಯನ್ನೂ ಉದ್ದೀಪನಗೊಳಿಸಿ ಅವರ ಜಡ್ಡುಗಟ್ಟಿನ ಮನಸ್ಸುಗಳಲ್ಲಿ ಲವಲವಿಕೆಯನ್ನು ತುಂಬಿದ್ದರು. ಹೀಗೆ ಬೆಳೆದುಬಂದ ಕರ್ನಾಟಕ ಕಲಾಸಂಘವನ್ನು ಹಲವರು ತಮ್ಮ ತನುಮನಧನಗಳ ಕೊಡುಗೆಯೊಂದಿಗೆ ವಿಶೇಷವಾಗಿ ಪೋಷಿಸಿದ್ದಾರೆ. ಅವರಲ್ಲಿ ಕೆ ವಿ ಶ್ಯಾಮ್, ಕೆ ಕೆ ಕೀರ್ತಿಕರ್, ಹರಿದಾಸ್, ದೊ ತಿ ಹನುಮಯ್ಯ, ಶ್ರೀಕಂಠಯ್ಯ, ನಾರಾಯಣಮೂರ್ತಿ, ಕೆ ಬಿ ಕರಿಯಪ್ಪ, ಎಚ್ ಜಗದೀಶ, ಗೋ ಶ್ರೀನಿವಾಸ, ಎನ್ ರಾಜಶೇಖರ್, ವಿ ನಾರಾಯಣ, ದೇ ನಾ ವೆಂಕಟರಮಣಪ್ಪ, ಜ್ಞಾನೇಂದ್ರಗುಪ್ತಾ,ಬಸವರಾಜು, ಕಳಸೇಗೌಡ ಮುಂತಾದವರನ್ನು ಮರೆಯುವಂತೆಯೇ ಇಲ್ಲ. ಇವರೆಲ್ಲರ ಉತ್ಕಟ ಕನ್ನಡಾಭಿಮಾನ ಮತ್ತು ಹೋರಾಟದ ಫಲವಾಗಿ ಕಾರ್ಖಾನೆಯಲ್ಲಿ ಸರ್ವೇಸಾಮಾನ್ಯವೆನಿಸಿದ್ದ ಔದ್ಯಮಿಕ ಶಾಂತಿಯ ನೆವದ ಅನ್ಯಭಾಷಾ ಹೇರಿಕೆಯೆಂಬ ದಾಸ್ಯದ ಸಂಕೋಲೆಗಳು ಹರಿದುಹೋಗಿ ಕನ್ನಡದ ಸಂಭಾಷಣೆ, ಕನ್ನಡಪತ್ರಿಕೆಗಳ ಓದು, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಗಳಿಗೆ ರಾಜಮರ್ಯಾದೆ ಲಭಿಸುವಂತಾಯಿತು. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಮೂಲೆಮೂಲೆಗಳಿಂದ ನವಯುವಕರು ಎಚ್ಎಎಲ್ ನಲ್ಲಿ ನೌಕರಿ ಪಡೆದು ಕನ್ನಡದ ವಾತಾವರಣ ಕಾಣುವಂತಾಯಿತು. ಈ ಎಲ್ಲವುಗಳಿಂದ ಇಂದು ಎಚ್ಎಎಲ್ ಕಾರ್ಖಾನೆಯಲ್ಲಿ ಕನ್ನಡದಲ್ಲಿ ವ್ಯವಹರಿಸಲು ಯಾವ ಹಿಂಜರಿತವೂ ಇಲ್ಲ. ಇಂದು ಈ ಕರ್ನಾಟಕ ಕಲಾಸಂಘಕ್ಕೆ ೪೦ವರ್ಷಗಳ ವಯಸ್ಸು. ಈ ನಲವತ್ತು ವರ್ಷಗಳಲ್ಲಿ ಈ ಸಂಘವು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದೆ. ಹಲವಾರು ಕಲಾವಿದರನ್ನು ಕರೆದು ಸನ್ಮಾನಿಸಿದೆ. ಹಾಗೆ ಇಲ್ಲಿಗೆ ಬಂದು ಸನ್ಮಾನಿತರಾದವರಲ್ಲಿ ಎಸ್ ಕೆ ಕರೀಂಖಾನ್, ನಟ ಬಾಲಕೃಷ್ಣ, ಜಯಂತಿ, ಬ್ಯಾಂಕ್ ಜನಾರ್ಧನ್, ಮಾಸ್ಟರ್ ಹಿರಣ್ಣಯ್ಯ, ಹಂಸಲೇಖ, ಬಿ ಆರ್ ಲಕ್ಷ್ಮಣರಾವ್, ಅಪರ್ಣಾ, ಎ ಎಸ್ ಮೂರ್ತಿ, ವತ್ಸಲಾಮೋಹನ್, ಈಶ್ವರಚಂದ್ರ, ಪಿ ವಿ ಕೃಷ್ಣಮೂರ್ತಿ ಮುಂತಾದವರಿದ್ದಾರೆ. ಪ್ರತಿವರ್ಷ ಚಾಂದ್ರಮಾನ ಯುಗಾದಿಯ ಸಂದರ್ಭದಲ್ಲಿ ಕಾರ್ಖಾನೆಯ ಎಲ್ಲರಿಗೂ ಬೇವುಬೆಲ್ಲ ಹಂಚುವ ಪದ್ಧತಿಯನ್ನು ಕಳೆದ ನಲವತ್ತು ವರ್ಷಗಳಿಂದಲೂ ನಡೆಸಿಕೊಂಡುಬರುತ್ತಿರುವ ಈ ಸಂಘವು ಆ ದಿನದ ಸಾಂಸ್ಕೃತಿಕ ಉಪನ್ಯಾಸಗಳನ್ನು ಏರ್ಪಡಿಸುತ್ತದೆ. ನವೆಂಬರ್ ತಿಂಗಳಲ್ಲಿ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಒಳಗಿನ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಿದೆ. ಸ್ಪರ್ಧೆಗಳನ್ನು ನಡೆಸಿದೆ. ರಕ್ತದಾನ, ಶ್ರಮದಾನ ಹಾಗೂ ಸಂತ್ರಸ್ತರ ನೆರವಿಗೆ ಸದಾ ಮುಂದಾಗಿದೆ. ಸಂಘದ ಕಲಾವಿದರು ನಟಿಸಿದ ಜೋಕುಮಾರಸ್ವಾಮಿ ನಾಟಕವು ಒಂದು ಅವಿಸ್ಮರಣೀಯ ಪ್ರದರ್ಶನವಾಗಿದೆ. ಇಂದು ಕಾರ್ಖಾನೆಯ ಮುಖ್ಯಸ್ಥನಿಂದ ಮೊದಲುಗೊಂಡು ಅತ್ಯಂತ ಕಡೆಯ ನೌಕರನವರೆಗೂ ಎಲ್ಲರೂ ಯಾವ ಬಲವಂತವೂ ಇಲ್ಲದೆ ಸಂಘದ ಪ್ರೀತಿಪಾತ್ರ ಸದಸ್ಯರಾಗಿದ್ದಾರೆ. ಸಂಘದ ವತಿಯಿಂದ ಕನ್ನಡೇತರರಿಗೆ ಕನ್ನಡ ಕಲಿಕೆಯ ತರಗತಿಗಳು ನಡೆಯುತ್ತಿವೆ. ಕನ್ನಡಿಗ ಬಂಧುಗಳಿಗೆ ಸುಮಾರು ೪೦೦೦ ಪುಸ್ತಕಗಳುಳ್ಳ ಸುಸಜ್ಜಿತ ಗ್ರಂಥಾಲಯವು ಸೇವೆ ನೀಡುತ್ತಿದೆ. ಇತ್ತೀಚೆಗೆ ಈ ಕರ್ನಾಟಕ ಕಲಾಸಂಘವು ಎ ಆರ್ ಮಣಿಕಾಂತ್ ಅವರ “ಹಾಡು ಹುಟ್ಟಿದ ಸಮಯ” ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನೆರವಾಗುವ ಮೂಲಕ ಒಂದು ಭಾವಪೂರ್ಣ ಸಾರಸ್ವತ ಸೇವೆಗೆ ಕೈಜೋಡಿಸಿತು.