ಕರ್ನಾಟಕದ ಪ್ರಸಿದ್ಧ ದೇವಾಲಯಗಳು
ಕರ್ನಾಟಕದ ಪ್ರಸಿದ್ಧ ದೇವಾಲಯಗಳು ಹಲವಾರು ಇವೆ. ಅವುಗಳನ್ನು ಪರಿಚಯಿಸುವ ಕಿರುಪ್ರಯತ್ನ ಈ ಲೇಖನದ್ದಾಗಿದೆ.
ದೇವರಾಯನ ದುರ್ಗದ ಕುಂಭಿ ನರಸಿಂಹ
ಬದಲಾಯಿಸಿದೇವರಾಯನದುರ್ಗ ತುಮಕೂರಿನಿಂದ ಕೇವಲ 14 ಕಿಲೋ ಮೀಟರ್ ದೂರದಲ್ಲಿರುವ ನಾರಸಿಂಹ ಕ್ಷೇತ್ರ. ಹೊಯ್ಸಳರ ಕಾಲದಲ್ಲಿ ಬೆಟ್ಟದ ಮೇಲೆ ಆನೆ ಬಿದ್ದಸರಿ (ಆನೆ ಬಿದ್ದ ಝರಿ) ಎಂಬ ಹೆಸರಿನ ಊರಿತ್ತು ಎನ್ನುತ್ತದೆ ಇತಿಹಾಸ. ವಿಜಯನಗರದ ಅರಸರ ಕಾಲದಲ್ಲಿ ಬೆಟ್ಟ ದುರ್ಗಕ್ಕೆ ಕರಿಗಿರಿ ಎಂಬ ಹೆಸರು ಪಡೆಯಿತು. 1696ರಲ್ಲಿ ಚಿಕ್ಕದೇವರಾಯ ಒಡೆಯರು ಕೋಟೆಯನ್ನು ವಶಪಡಿಸಿಕೊಂಡ ಮೇಲೆ ಇದಕ್ಕೆ ದೇವರಾಯನದುರ್ಗ ಎಂಬ ಹೆಸರು ಬಂತು.
ಇತಿವೃತ್ತ
ಬದಲಾಯಿಸಿಮಲ್ಲಪಟ್ಟಣ ಎಂದೂ ಕರೆಸಿಕೊಂಡಿದ್ದ ದೇವರಾಯನ ದುರ್ಗದಲ್ಲಿ ಮೊದಲನೇ ಕಂಠೀರವ ನರಸರಾಜ ಒಡೆಯರು ದುರ್ಗಾನರಸಿಂಹ ದೇವಾಲಯ ಕಟ್ಟಿಸಿದ್ದಾರೆ. ಕುಂಬಿ ಬೆಟ್ಟಕ್ಕೆ ಹೋಗುವಾಗ ಮೈಸೂರು ಅರಸರ ಕಾಲದ ಕೋಟೆಯ ಪಳೆಯುಳಿಕೆಗಳು ಗೋಚರಿಸುತ್ತವೆ. ಬೆಟ್ಟದ ಮೇಲೆ ಇರುವ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಊರಿನ ಈಶಾನ್ಯ ದಿಕ್ಕಿನಲ್ಲಿರುವ ಕುಂಭಿಬೆಟ್ಟವಿದೆ. ಬೆಟ್ಟದ ಬಲಕ್ಕೆ ತಿರುಗಿದರೆ ಬಿಲ್ಲಿನ ದೋಣೆ, ಸೀತಾದೇವಿ ಕೊಳ ಹಾಗೂ ರಾಮಲಕ್ಷ್ಮಣರು ತಪವನ್ನಾಚರಿಸಿದ ಗುಹೆ ಇದೆ. ಈ ಗುಹೆಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ ಪಕ್ಕದಲ್ಲಿಯೇ ಬ್ರಿಟಿಷರ ಕಾಲದ ಬಂಗ್ಲೆ ಇರುವ ಬಂಗ್ಲೆ ಬೆಟ್ಟ ನೋಡಬಹುದು.
ಪುರಾಣ ಹಿನ್ನೆಲೆ
ಬದಲಾಯಿಸಿಬ್ರಹ್ಮದೇವರು ಇಲ್ಲಿ ತಪವನ್ನಾಚರಿಸಿದಾಗ, ವಿಷ್ಣು ಲಕ್ಷ್ಮೀನರಸಿಂಹ ರೂಪದಲ್ಲಿ ಪ್ರತ್ಯಕ್ಷನಾದನಂತೆ, ವಿಷ್ಣುವಿಗೆ ಬ್ರಹ್ಮದೇವರು ಕುಂಭಾಭಿಷೇಕ ಮಾಡಿದರಂತೆ ಇಲ್ಲಿ ನೆಲೆನಿಂತ ವಿಷ್ಣು ಕುಂಬಿ ನರಸಿಂಹ ಎಂದೂ ಖ್ಯಾತನಾಗಿದ್ದಾನೆ. ಭಕ್ತರು ಯೋಗಾನರಸಿಂಹ, ಲಕ್ಷ್ಮೀನರಸಿಂಹ ಎಂದೂ ಪೂಜಿಸುತ್ತಾರೆ. ಇಲ್ಲಿರುವ ದೇವಾಲಯದಲ್ಲಿ ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪವಿದೆ. ಇಲ್ಲಿ ನರಸಿಂಹತೀರ್ಥ, ಪಾದ ತೀರ್ಥ, ಪರಾಶರತೀರ್ಥ ಇದೆ. ದಾಸಶ್ರೇಷ್ಠ ಪುರಂದರದಾಸರು ಕ್ಷೇತ್ರಕ್ಕೆ ಭೇಟಿ ನೀಡಿ, ಕರಿಗಿರಿ ನರಸಿಂಹ ಭಕ್ತರ ದಂತಿಸಿಂಹ ಪರಿಪಾಲಿಸು ಮೊರೆಹೊಕ್ಕೆನು ನಾನು ವರದಪುರಂದರ ವಿಠಲ ಎಂದು ಹಾಡಿದ್ದಾರೆ.
ಹಂಪೆ ವಿರೂಪಾಕ್ಷ
ಬದಲಾಯಿಸಿಕ್ರಿ.ಶ. 1336ರ ಏಪ್ರಿಲ್ 18 (ಹಿಂದೂ ಪಂಚಾಂಗದ ರೀತ್ಯ ಶಾಲಿವಾಹನ ಶಕೆ 1257ಕ್ಕೆ ಸಲ್ಲುವ ಧಾತೃ ಸಂವತ್ಸರದ ವೈಶಾಖ ಶುದ್ಧ ಸಪ್ತಮಿ) ಇತಿಹಾಸ ಮರೆಯಲಾರದ ಒಂದು ಸುದಿನ. ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಕನ್ನಡ ಸಾಮ್ರಾಜ್ಯ ವಿಜಯನಗರ ಸ್ಥಾಪನೆಯಾದ ದಿನ. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಹೆಸರಾದ ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ (ಹರಿಹರ) ಹಕ್ಕ -ಬುಕ್ಕರು ಕಟ್ಟಿದ ವಿಜಯನಗರ ಎಂಬ ಪುಟ್ಟದೊಂದು ಸಂಸ್ಥಾನ, ವಿಜಯೋತ್ಸವವನ್ನೇ ಆಚರಿಸುತ್ತಾ ಅನತಿ ಕಾಲದಲ್ಲಿಯೇ ಬೃಹತ್ ಕನ್ನಡ ಸಾಮ್ರಾಜ್ಯವಾಯಿತು. ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ಹಬ್ಬಿತ್ತು. ಈ ಕನ್ನಡ ಸಾಮ್ರಾಜ್ಯ ಕೊನೆಗೊಂಡಿದ್ದು ೧೫೬೫ರಲ್ಲಿ.
ಪರಿಚಯ
ಬದಲಾಯಿಸಿ೫೦೦ ವರ್ಷಗಳ ಹಿಂದೆ ವೈಭವದಿಂದ ಮೆರೆದ ಈ ಕನ್ನಡ ರಾಜಧಾನಿಯಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದ ಇತಿಹಾಸವಿದೆ. ಸಾಂಸ್ಕೃತಿಕ ನೆಲೆಯಿದೆ, ನಾಗರಿಕತೆಯ ನಂಟಿದೆ. ಹಂಪೆಗೆ ಸರಿಸಮವಾದ ಮತ್ತಾವುದೇ ಪ್ರದೇಶ ಭಾರತದಲ್ಲಿರಲಿಲ್ಲ ಎಂಬ ಖ್ಯಾತಿಯೂ ಇದಕ್ಕಿದೆ. ಈ ಮಾತುಗಳನ್ನು ಭಾರತೀಯರು ಯಾರೋ ಉತ್ಪೇಕ್ಷೆಗಾಗಿ ಅಥವಾ ಸ್ವಾಭಿಮಾನದಿಂದ ಹೇಳಿದ ನುಡಿಗಳಲ್ಲ. ಇದು ವಿದೇಶೀ ಯಾತ್ರಿಕರು ಮುಕ್ತಕಂಠದಿಂದ ಮಾಡಿದ ಪ್ರಶಂಸೆ. ಇಂಥ ಸುಂದರ ರಾಜಧಾನಿಯ ಮೇಲೆ ನಡೆದಂಥ ಆಕ್ರಮಣ ಮತ್ತಾವ ನಗರಿಯ ಮೇಲೂ ನಡೆದಿಲ್ಲ ಎಂದರೆ ಉತ್ಪ್ರೇಕ್ಷೆಯ ಮಾತಾಗಲಾರದು. ಇಷ್ಟೆಲ್ಲಾ ಆಘಾತಗಳ ಹೊರತಾಗಿಯೂ ಇಂದಿಗೂ ಹಂಪೆ ಚಿತ್ರಕಾರರಿಗೆ, ಛಾಯಾಗ್ರಾಹಕರಿಗೆ ಸ್ಫೂರ್ತಿಯ ತಾಣವಾಗಿ, ಇತಿಹಾಸ ಅಧ್ಯಯನಿಗಳಿಗೆ ಆಕರ ಗ್ರಂಥವಾಗಿದೆ. ವೈಭವ -ದುರವಸ್ಥೆಗಳಿಗೆ ಹಂಪೆಗಿಂತ ಮಿಗಿಲಾದ ಉದಾಹರಣೆ ಇತಿಹಾಸದ ಪುಟಗಳಲ್ಲಿ ಮತ್ತೊಂದು ಸಿಗಲು ಸಾಧ್ಯವಿಲ್ಲವೇನೋ?
ಪಳೆಯುಳಿಕೆ
ಬದಲಾಯಿಸಿ೫೦೦ ವರ್ಷಗಳ ಹಿಂದೆ ಮುಸಲ್ಮಾನ ದೊರೆಗಳ ಹಾಗೂ ಆಂತರಿಕ ಸಂಕುಚಿತವಾದಿಗಳ ದಾಳಿಗೆ ಒಳಗಾಗಿ ಹಾಳಾದ ಹಂಪೆಯಲ್ಲಿ ವ್ಯಗ್ರನಾಗದೆ ಶಾಂತನಾಗಿ ನಿಂತ ಉಗ್ರನರಸಿಂಹ, ನಿಸ್ತೇಜವಾಗಿ ನೀರಿನಲ್ಲಿ ನಿಂತ ಲಿಂಗ, ಛಿದ್ರ ಛಿದ್ರವಾದ ಶಿಲಾಶ್ರೀಮಂತಿಕೆ ಇನ್ನೂ ದಾಳಿಗೆ ಮೂಕಸಾಕ್ಷಿಯಾಗಿ ಪರಂಪರಾಗತವಾಗಿ ಉಳಿದುಕೊಂಡು ಬಂದಿದೆ. ತುಂಗಭದ್ರಾ ನದಿಯ ದಂಡೆಯ ಮೇಲೆ ಪಂಪಾ ಪರಿಸರದಲ್ಲಿ ಮೂರ್ತಿವೆತ್ತ ಈ ಸುಂದರ ತಾಣ ಹಂಪೆ. ಪುರಾಣಕ್ಕೆ ಸಾಕ್ಷಿಯಾಗಿ, ಇತಿಹಾಸದ ಮೆಲುಕಾಗಿ ನೆಲೆನಿಂತ ಈ ನಾಡಿಗೆ ಶ್ರೀರಾಮನೂ ಬಂದಿದ್ದನೆನ್ನುತ್ತದೆ ಪುರಾಣ. ರಾಮಾಯಣದಲ್ಲಿ ಬರುವ ಕಿಷ್ಕಿಂದೆಯೇ ಇಂದಿನ ಆನೆಗೊಂದಿ, ಇಲ್ಲಿಯೇ ಶ್ರೀರಾಮದೂತ ಹನುಮ ಹುಟ್ಟಿದ್ದು ಎನ್ನುತ್ತದೆ ಸ್ಥಳ ಪುರಾಣ. ಕನ್ನಡ ನಾಡದೇವಿ ಭುವನೇಶ್ವರಿ ಇರುವುದೂ ಈ ಊರಿನಲ್ಲೇ. ಹಂಪೆ ದ್ವಾದಶ ಭಾಸ್ಕರ ಕ್ಷೇತ್ರಗಳಲ್ಲಿ ಒಂದು ಎಂದು ಗೋಕರ್ಣ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಇತಿಹಾಸ
ಬದಲಾಯಿಸಿನಾಲ್ಕು ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ನಾಡು ಪ್ರವರ್ಧಮಾನಕ್ಕೆ ಬಂದಿದ್ದು ರಾಯರಾಯರ ಗಂಡ ಕೃಷ್ಣದೇವರಾಯರ ಕಾಲದಲ್ಲಿ. ಇಂದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪೆಯಲ್ಲಿ ನೋಡಲೇ ಬೇಕಾದ ಹತ್ತು ಹಲವು ಪ್ರಮುಖ ಸ್ಥಳಗಳಿವೆ. ನಿರ್ಮಲವಾಗಿ ಹರಿವ ತುಂಗಭದ್ರಾನದಿ, ಗಜಗಾತ್ರವಿರುವ ಸಾಸಿವೆ ಕಾಳು ಗಣಪ, ಕೃಷ್ಣ ದೇಗುಲ, ಶಿಲ್ಪಕಲಾ ವಿಮರ್ಶಕರಾದ ಫರ್ಗ್ಯುಸನ್, ಲಾಂಗ್‌ಹರ್ಸ್ಟ್‌ರಿಂದ ಮುಕ್ತಕಂಠದಿಂದ ಹೊಗಳಿಸಿಕೊಂಡ ವಿಜಯವಿಠ್ಠಲ ಮಂದಿರ, ಕನ್ನಡಿಗರ ಕಣ್ಣಲ್ಲಿ ನೀರೂರಿಸುವ ಭಗ್ನಗೊಂಡು ದುರಸ್ತಿಯಾದ ಉಗ್ರ ನರಸಿಂಹ, ಬಟವಿ ಲಿಂಗ , ಉದ್ಯಾನ ವೀರಭದ್ರಸ್ವಾಮಿ, ಅಕ್ಕ ತಂಗಿ ಗುಂಡು, ಅಂತಃಪುರವಾಸಿಗಳಿಗಾಗಿಯೇ ನಿರ್ಮಿಸಲಾಗಿದ್ದ ಕಮಲಮಹಲ್ ಎಂಬ ಈಜುಕೊಳ, ಹಂಪಿಯ ಆರಾಧ್ಯದೈವ ವಿರೂಪಾಕ್ಷ ದೇಗುಲದ ಎದುರು ಇಕ್ಕೆಲಗಳಲ್ಲೂ ಇರುವ ಬಜಾರು ರಸ್ತೆ, ನದಿಯ ದಂಡೆಯಲ್ಲಿರುವ ಪುರಂದರ ಮಂಟಪ, ಅರಸನ ತುಲಾಭಾರ, ಕೋದಂಡರಾಮ, ವರಾಹ ದೇವಸ್ಥಾನ, ಮಾತಂಗಪರ್ವತ, ಅಚ್ಚುತರಾಯ ದೇವಾಲಯ, ಸುಂದರ ಶಿಲ್ಪಕಲಾ ವೈಭವದ ಪಟ್ಟಾಭಿರಾಮ ದೇಗುಲ, ಗಾಣಿಗಿತ್ತಿ ದೇಗುಲ, ಕಾವಲು ಗೋಪುರ, ಹಜಾರಿರಾಮ ಮಂದಿರ, ಗಜಶಾಲೆ, ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ, ಎಲ್ಲಕ್ಕಿಂತ ಮಿಗಿಲಾಗಿ ವಿಶ್ವವಿಖ್ಯಾತವಾದ ಕಲ್ಲಿನ ತೇರು ಹಾಗೂ ಮಹಾನವಮಿ ದಿಬ್ಬ. ಇದರ ಜೊತೆಗೆ ಬೆಟ್ಟವನ್ನೇರಿದರೆ ಸಂಜೆಯ ವೇಳೆ ಕಾಣಸಿಗುವ ಸುಂದರ ಸೂರ್ಯಾಸ್ತಮಾನ.
ಸೋಮನಾಥಪುರ
ಬದಲಾಯಿಸಿಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು....ರಾಷ್ಟ್ರಕವಿ ಕುವೆಂಪು ತಮ್ಮ ಭಾವಪೂರ್ಣ ಕವನದ ಒಂದೇ ಒಂದು ಸಾಲಿನಲ್ಲಿ ಕರ್ನಾಟಕದ ಶಿಲ್ಪಕಲೆಗೆ ಸೂಕ್ತ ಗೌರವ ಮನ್ನಣೆ ನೀಡಿದ್ದಾರೆ. ಕರ್ನಾಟಕ ಕಲೆಗಳ ತವರು, ಶಿಲ್ಪಕಲೆಗಳ ಬೀಡು, ಬೇಲೂರು, ಹಳೆಬೀಡು, ಸೋಮನಾಥಪುರಗಳನ್ನು ನೋಡಿದಾಗ ಕುವೆಂಪು ಹೇಳಿದಂತೆ ಪ್ರತಿಯೊಬ್ಬ ಪ್ರವಾಸಿಗನೂ ಶಿಲ್ಪಿಯ ಕಲಾತ್ಮಕತೆಗೆ ತಲೆ ಬಾಗಿಯೇ ಬಾಗುತ್ತಾನೆ.
ಇತಿವೃತ್ತ
ಬದಲಾಯಿಸಿಇಂಥ ಒಂದು ಕಲಾಶ್ರೀಮಂತಿಕೆಯ ತಾಣ ಮೈಸೂರಿಗೆ 38 ಕಿ.ಮೀ. ದೂರದಲ್ಲಿರುವ ಸೋಮನಾಥಪುರ. ಪ್ರಶಾಂತ ಪರಿಸರದಲ್ಲಿರುವ ಈ ಶಿಲ್ಪಕಲಾವೈಭವದ ದೇಗುಲವನ್ನು ಪ್ರವೇಶಿಸಿದರೆ ಆಗುವ ಸಂತೋಷ ಅಪರಿಮಿತ. ಹಲ್ಲುಹಾಸಿನ ನಡುವೆ ಸಾಗಿ ನಾಲ್ಕು ಮೆಟ್ಟಿಲೇರುತ್ತಿದ್ದಂತೆಯೇ ಹೊಸದೊಂದು ಶಿಲ್ಪಕಲಾಲೋಕವೇ ತೆರೆದುಕೊಳ್ಳುತ್ತದೆ. ಜೀವಕಳೆಯಿಂದ ಕಂಗೊಳಿಸುತ್ತಿರುವ ಶಿಲ್ಪವೈಭವವನ್ನು ಕಂಡಾಗ ರೋಮಾಂಚನವಾಗುತ್ತದೆ. ಶಿಲ್ಪಿಯ ಜಾಣ್ಮೆ, ಚಾಕಚಕ್ಯತೆ ಕೌಶಲಕ್ಕೆ ಶಿರಬಾಗುತ್ತದೆ. 13ನೆಯ ಶತಮಾನದಲ್ಲಿ ಸೋಮನಾಥಪುರ ಒಂದು ಪುಟ್ಟ ಅಗ್ರಹಾರವಾಗಿತ್ತು. ಚತುರ್ವೇದಿಮಂಗಲ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಎಂಬುದು ಇದರ ಪೂರ್ವ ಹೆಸರು. ಇಲ್ಲಿರುವ 7 ಶಾಸನಗಳು ಈ ಅಪೂರ್ವ ದೇವಾಲಯದ ಬಗ್ಗೆ ಹಾಗೂ ಕಲೆಗೆ ಹಾಗೂ ವಿದ್ಯೆಗೆ ಆಗರವಾಗಿದ್ದ ಈ ಊರಿನ ಬಗ್ಗೆ ಮಹತ್ವದ ಮಾಹಿತಿ ಒದಗಿಸುತ್ತವೆ.
ಚರಿತ್ರೆ
ಬದಲಾಯಿಸಿಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ 1258ರ ಸುಮಾರಿನಲ್ಲಿ ನಿರ್ಮಿಸಿ, ತನ್ನ ಹೆಸರನ್ನೇ ಇಟ್ಟು ಸೋಮನಾಥಪುರವೆಂದು ಕರೆದ. ಪ್ರಶಾಂತವಾಗಿ ಕಾವೇರಿ ನದಿ ಹರಿಯುವ ಈ ಸ್ಥಳದಲ್ಲಿ ಹಲವು ದೇವಾಲಯ ಗಳನ್ನು ನಿರ್ಮಿಸಿದ ಎನ್ನುತ್ತದೆ ಇತಿಹಾಸ.
ಶಿಲ್ಪ ಕಲಾವೈಭವ
ಬದಲಾಯಿಸಿವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾಗಿರುವ ಈ ದೇಗುಲ ಪೂರ್ವಾಭಿಮುಖವಾಗಿದ್ದು ಜಗತಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ. ದೇವಾಲಯದ ಆವರಣ ಭಿತ್ತಿಗಳ ಏಳಂಗುಲದ ಪಟ್ಟಿಕೆಗಳಲ್ಲಿ ರಾಮಾಯಣ, ಭಾಗವತ, ಮಹಾಭಾರತದ ಕಥೆಯನ್ನು ವರ್ಣಿಸುವ ಶಿಲ್ಪಗಳಿಂದ ತುಂಬಿದೆ. ಆನೆ, ಅಶ್ವಾರೋಹಿಗಳು, ಲತೆ, ಮಕರ, ಹಂಸಗಳಿವೆ. ಗರ್ಭಗುಡಿಯ ಸುತ್ತಲೂ ಹೊರಭಾಗದಲ್ಲಿ ನಾರಸಿಂಹ, ಮನ್ಮಥ, ಇಂದ್ರ, ಸರಸ್ವತಿ, ಮಹಿಷಾಸುರ ಮರ್ದಿನಿ ಮೊದಲಾದ ಸುಂದರವಾದ 194 ದೊಡ್ಡ ಶಿಲ್ಪಗಳಿವೆ. ಈ ವಿಗ್ರಹಗಳ ಪೀಠದ ಮೇಲೆ ಮಲ್ಲಿತಮ್ಮ, ಚೌಡಯ್ಯ, ಬಾಲಯ್ಯ, ಮಸಣಿತಮ್ಮ, ಲೋಹಿತ ಮೊದಲಾದ ಹೆಸರುಗಳಿದ್ದು, ಇವರೆ ಇವನ್ನು ಕೆತ್ತಿದ್ದು ಎಂದು ಸೂಚಿಸಲಾಗಿದೆ. ಸೋಮನಾಥಪುರದ ದೇವಾಲಯದ ಸೌಂದರ್ಯಕ್ಕೆ ಶಿಖರಪ್ರಾಯವಾಗಿರುವುದು ಮೂರು ಶಿಖರಗಳೇ. ಹೀಗಾಗೇ ಇದನ್ನು ತ್ರಿಕುಟಾಚಲವೆನ್ನುತ್ತಾರೆ. ಹದಿನಾರು ಕೋಣಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ದೇವಾಲಯ ರಮ್ಯತೆಯನ್ನು ನೂರ್ಮಡಿಗೊಳಿಸಿವೆ. ಎಲ್ಲ ಹೊಯ್ಸಳ ದೇವಾಲಯದಲ್ಲಿರುವಂತೆ ಮುಖಮಂಟಪ, ನವರಂಗ, ಗರ್ಭಗೃಹ, ಸುಖನಾಸಿಗಳು ಇಲ್ಲೂ ಇವೆ. ಮಧ್ಯದ ಭುನವೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ 32 ತೊಲೆಗಳಿಂದ ಮಾಡಿದ ಕಮಾನು, ಅದರ ಮಧ್ಯದಲ್ಲಿ ತೂಗಾಡುವ ರೀತಿಯ ಕಮಲದ ಮೊಗ್ಗು ಮನಮೋಹಕ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು, ಉತ್ತರ ಗರ್ಭಗೃಹದಲ್ಲಿ ಜನಾರ್ದನ ದಕ್ಷಿಣ ಗರ್ಭಗೃಹದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲ ವಿಗ್ರಹ ಇದೆ. ಮಧ್ಯದ ಗರ್ಭಗೃಹದಲ್ಲಿ ಯಾವ ವಿಗ್ರಹವೂ ಇಲ್ಲ. ಹಿಂದೆ ಇಲ್ಲಿ ವಿಗ್ರಹ ಇತ್ತೆಂದು ಹೇಳಲಾಗುತ್ತದೆ. ಈ ಶಿಲ್ಪಕಲಾಮಯ ದೇಗುಲದ ಪ್ರಮುಖವಾದ ತಾಂಡವ ಗಣಪತಿಯ ಶಿಲ್ಪ ಗಮನಾರ್ಹವಾದುದು. ಕೇಶವ ದೇವಾಲಯಕ್ಕೆ ಈಶಾನ್ಯದಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ. ಹೊಯ್ಸಳ ದೇವಾಲಯಗಳಲ್ಲಿಯೇ ಇದೊಂದು ಅಪೂರ್ವ ಮಾದರಿ.
ಉಡುಪಿಯ ಶ್ರೀಕೃಷ್ಣ ದೇಗುಲ
ಬದಲಾಯಿಸಿಪಶ್ಚಿಮ ಘಟ್ಟದ ಸೆರಗಿನ ಕರ್ನಾಟಕ ಕರಾವಳಿಯ ರಮಣೀಯ ಪ್ರಕೃತಿಯ ಮಡಿಲಲ್ಲಿ ಇರುವ ಶ್ರೀಕೃಷ್ಣನ ಆಡುಂಬೋಲವೇ ಉಡುಪಿ. ಮಂಗಳೂರಿನಿಂದ ಕೇವಲ 58 ಕಿಲೋ ಮೀಟರ್ ದೂರದಲ್ಲಿರುವ ಉಡುಪಿ ಈಗ ಜಿಲ್ಲಾಕೇಂದ್ರ. ಪ್ರಗತಿಯ ಪಥದಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವ ಪ್ರಮುಖ ಪಟ್ಟಣ. ಉಡುಪಿ ಇಂದು ವಿಶ್ವವಿಖ್ಯಾತವಾದದ್ದೇ ಇಲ್ಲಿನ ಶ್ರೀಕೃಷ್ಣ ಮಂದಿರದಿಂದ. ಬಹು ಪ್ರಾಚೀನವೂ, ಪುರಾಣ ಪ್ರಸಿದ್ಧವೂ ಆದ ಈ ದೇಗಲುದಲ್ಲಿ ಶ್ರೀಕೃಷ್ಣ ಪರಮಾತ್ಮ ಹಿಂದು ಮುಂದಾಗಿ ನಿಂತಿದ್ದಾನೆ. ಸ್ವರ್ಣಾಭರಣಗಳಿಂದ ಅಲಂಕೃತನಾದ ಕಡಗೋಲು ಕೃಷ್ಣನ ಸೊಬಗನ್ನು ಸವಿಯುವುದೇ ಒಂದು ಆನಂದ.
ಇತಿವೃತ್ತ
ಬದಲಾಯಿಸಿಭಾರತದ ಏಳು ಪ್ರಮುಖ ಯಾತ್ರಾಸ್ಥಳಗಳ ಪೈಕಿ ಉಡುಪಿಯೂ ಒಂದು. ಪುರಾಣ ಪ್ರಸಿದ್ಧವಾದ ಉಡುಪಿ, ಕನಕದಾಸರಿಂದಾಗಿ ಇತಿಹಾಸ ಪ್ರಸಿದ್ಧಿ ಪಡೆದಿದೆ. ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಶ್ರೀಕೃಷ್ಣನ ದರ್ಶನಭಾಗ್ಯಕ್ಕಾಗಿ ವರ್ಷದ ಎಲ್ಲ ಕಾಲದಲ್ಲೂ ಭಕ್ತರು ಆಗಮಿಸುತ್ತಾರೆ. ಭಗವಂತನನ್ನು ಮುಖ್ಯದ್ವಾರದ ಬದಲಿದೆ, ಹಿಂಬದಿಯ ಪುಟ್ಟ ನವರಂದ್ರದ ಕಿಟಕಿಯ ಮೂಲಕ ನೋಡಿ, ಕೃಷ್ಣನ ಸೊಬಗನ್ನು ಕಣ್ಮು ತುಂಬಿಕೊಂಡು ಅಮಿತಾನಂದ ಪಡುತ್ತಾರೆ. ಈ ಕಿಟಕಿಗೆ ನವರಂಗ ಕಿಟಕಿ, ಕನಕನ ಕಿಂಡಿ ಎಂಬ ಹೆಸರುಗಳುಂಟು. ಬೆಂಗಳೂರಿನಿಂದ 425 ಕಿ. ಮಿ. ದೂರದಲ್ಲಿ ರುವ ಉಡುಪಿ ಮಧ್ವಾಚಾರ್ಯರ ಪಾದಧೂಳಿನಿಂದ ಪುನೀತವಾದ ಉಡುಪಿ, ವೇದ ಶಿಕ್ಷಣ ನೀಡುವ ಪ್ರಸಿದ್ಧ ಶಿಕ್ಷಣಕೇಂದ್ರವೂ ಹೌದು. ಕೃಷ್ಣ ಮಠದ ಸುತ್ತ ವಿಶಾಲವಾದ ರಾಜಾಂಗಣವಿದೆ. ಇಲ್ಲಿ ಒಂದು ದೀರ್ಘ ಸುತ್ತು ಹಾಕಿದೆವೆಂದರೆ ನಮಗೆ ಶ್ರೀಮಧ್ವಾಚಾರ್ಯ ಸ್ಥಾಪಿತ ಅಷ್ಟ ಮಠಗಳ ದರ್ಶನವೂ ಆಗುತ್ತದೆ. ರಾಜಾಂಗಣ ಪ್ರವೇಶಿಸುತ್ತಿದ್ದಂತೆಯೇ ಕನಕನ ಕಿಂಡಿ ಭಕ್ತರ - ಪ್ರವಾಸಿಗರ ಗಮನ ಸೆಳೆಯುತ್ತದೆ. ತುಸು ದೂರದಲ್ಲೇ ಪವಿತ್ರ ಮಧ್ವ ಸರೋವರ ಇದೆ.
ಪರಿಚಯ
ಬದಲಾಯಿಸಿಉಡುಪಿಯಲ್ಲಿ ಮೂರು ಪ್ರಮುಖ ದೇವಾಲಯಗಳಿವೆ. ಚಂದ್ರೇಶ್ವರ ದೇವಾಲಯ, ಅನಂತೇಸ್ವರ ದೇವಾಲಯ ಹಾಗೂ ಶ್ರೀ ಕೃಷ್ಣಮಂದಿರ. ಚಂದ್ರೇಶ್ವರ ಹಾಗೂ ಅನಂತೇಶ್ವರ ದೇವಾಲಯಗಳು ಉಡುಪಿಯಲ್ಲಿ ಅತ್ಯಂತ ಪುರಾತನವಾದ ದೇಗುಲಗಳಾಗಿವೆ. ಪರಶುರಾಮರ ಅನುಯಾಯಿಯಾದ ರಾಜ ರಾಮಭೋಜ ಇಲ್ಲಿ ಅನಂತೇಶ್ವರ ಸ್ವಾಮಿಯ ಪ್ರತಿಷ್ಠಾಪನೆ ಮಾಡಿಸಿದನೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಇಲ್ಲಿಗೆ ಬರುವ ಭಕ್ತಾದಿಗಳು ಮೊದಲು ಅನಂತೇಶ್ವರ, ಚಂದ್ರೇಶ್ವರ ದೇವಾಲಯಗಳಿಗೆ ಭೇಟಿ ಕೊಟ್ಟ ಬಳಿಕವೇ ಕೃಷ್ಣ ದೇವಾಲಯಕ್ಕೆ ಆಗಮಿಸುವುದು.
ಐತಿಹ್ಯ
ಬದಲಾಯಿಸಿಉಡುಪಿಯಲ್ಲಿರುವ ಶ್ರೀಕೃಷ್ಣನ ವಿಗ್ರಹ ಅಲ್ಲಿಗೆ ಬಂದ ಬಗ್ಗೆಯೂ ಒಂದು ಕಥೆ ಇದೆ. ಹಿಂದೆ ದ್ವಾರಕಾನಗರದಲ್ಲಿ ಇದ್ದ ಶ್ರೀಕೃಷ್ಣನ, ಉಡುಪಿ ಕೃಷ್ಣ ಮಂದಿರಮೂಲಮೂರ್ತಿ ಪವಿತ್ರ ಗೋಪಿ ಚಂದನದಿಂದ ಮುಚ್ಚಿಹೋಗಿತ್ತು. ನಾವಿಕರೊಬ್ಬರು ಚಂದನಲೇಪಿತ ಶ್ರೀಕೃಷ್ಣನೂ ಇದ್ದ ಇಡೀ ಚಂದನದ ಗುಡ್ಡೆಯನ್ನು ತನ್ನ ದೋಣಿಯಲ್ಲಿ ತುಂಬಿಕೊಂಡು ಪಶ್ಚಿಮ ಕರಾವಳಿಯ ಕಡೆ ಬರುತ್ತಿದ್ದಾಗ ಭೀಕರ ಬಿರುಗಾಳಿಗೆ ಆತನ ಹಡಗು ಸಿಲುಕಿತು. ಇದನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿದ ಮಧ್ವಾಚಾರ್ಯರು ಮಲ್ಪೆಯ ಬಳಿ ದೋಣಿ ದಡ ಮುಟ್ಟಲು ನೆರವಾಗುತ್ತಾರೆ. ಆಗ ನಾವಿಕ ಇದಕ್ಕೆ ಪ್ರತಿಫಲವಾಗಿ ಏನು ಬೇಕು ಕೇಳಿ ಎಂದಾಗ. ಮಧ್ವಾಚಾರ್ಯರು ಚಂದನಲೇಪಿತ ಶ್ರೀಕೃಷ್ಣನನ್ನು ಕೇಳಿ ಪಡೆಯುತ್ತಾರೆ. ಆನಂತರ ಮೂರ್ತಿಯನ್ನು ನಿರ್ಮಲ ಜಲದಲ್ಲಿ ಶುಚಿಗೊಳಿಸಿ ತಮ್ಮ ಮಠದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಮತ್ತೊಂದು ಕಥೆಯ ರೀತ್ಯ ಬಿರುಗಾಳಿಗೆ ಸಿಲುಕಿದ ದೋಣಿಯಲ್ಲಿದ್ದ ಶ್ರೀಕೃಷ್ಣಮೂರ್ತಿ ನೀರಿನಲ್ಲಿ ಮುಳುಗಿತು. ಇದನ್ನು ದಿವ್ಯ ದೃಷ್ಟಿಯಿಂದ ಅರಿತ ಆಚಾರ್ಯರು ಸಮುದ್ರದಿಂದ ಕೃಷ್ಣಮೂರ್ತಿಯನ್ನು ಹೊರತೆಗೆದು ಅದನ್ನು ತಂದು ೧೩ನೇ ಶತಮಾನದಲ್ಲಿ ಸಂಕ್ರಾಂತಿಯ ದಿನ ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೂ ಆಚಾರ್ಯರು ಭಕ್ತರು ದೇವರನ್ನು ಪೂಜಿಸುತ್ತಾ ಬಂದಿದ್ದಾರೆ.
ಕೊಡಗಿನ ತಲಕಾವೇರಿ
ಬದಲಾಯಿಸಿಕಾವೇರಿ ನೀ ಹರಿಯುವ ನದಿಯಲ್ಲ.. ಶೃಂಗಾರ ಲಹರಿ... ಎಂಬ ಕವಿಯ ಸಾಲುಗಳು ಅರ್ಥಪೂರ್ಣ. ಕರ್ನಾಟಕದ ಜೀವನದಿ ಕಾವೇರಿ ತಲಕಾವೇರಿಯಲ್ಲಿ ಹುಟ್ಟಿ, ಬಂಗಾಳಕೊಲ್ಲಿಯನ್ನು ಸೇರುವ ತನಕ ಕಾವೇರಿಯ ಚೆಲುವು ಶೃಂಗಾರ ಲಹರಿಯೇ. ಅಬ್ಬಿಯ ಅಂದಕ್ಕೆ, ಬೃಂದಾವನದ ಚೆಲುವಿಗೆ, ಶಿವನಸಮುದ್ರದ ಭರಚುಕ್ಕಿ, ಗಗನಚುಕ್ಕಿಯ ಸಂಭ್ರಮಕ್ಕೆ, ಹೊಗೆನಕಲ್ ಜಲಪಾತಕ್ಕೆ ಕಾರಣವಾಗುವ ಕಾವೇರಿಯ ಈ ಓಟದ ಬಗ್ಗೆ ಉದ್ಗ್ರಂಥವನ್ನೇ ಬರೆಯಬಹುದು.
ಇತಿವೃತ್ತ
ಬದಲಾಯಿಸಿಕಾವೇರಿ ಹುಟ್ಟುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ. ಕನ್ನಡನಾಡಿನ ಜೀವನದಿ ಕಾವೇರಿ ಹುಟ್ಟಿದ ಬಗ್ಗೆ ಪುರಾಣದಲ್ಲಿ ಒಂದು ಕಥೆ ಇದೆ. ಮಕ್ಕಳಿಲ್ಲದ ಕವೇರರಾಜ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಬ್ರಹ್ಮ ಕವೇರನ ತಪಸ್ಸಿಗೆ ಮೆಚ್ಚಿ ತನ್ನ ಸಾಕು ಮಗಳಾದ ಲೋಪಾಮುದ್ರೆಯನ್ನೇ ಮಗಳಾಗಿ ಅನುಗ್ರಹಿಸಿದ. ಕವೇರ ಪುತ್ರಿಯಾದ ಲೋಪಮುದ್ರೆ ಅಂದಿನಿಂದ ಕಾವೇರಿಯೆಂಬ ಹೆಸರು ಪಡೆದಳು.
ಪುರಾಣ ಹಿನ್ನೆಲೆ
ಬದಲಾಯಿಸಿಕಾವೇರಿ ತನ್ನ ಸಾಕು ತಂದೆ ಕವೇರನಿಗೆ ಮೋಕ್ಷ ದೊರಕಿಸಲು ಇಚ್ಛಿಸಿ, ತಾನು ನದಿಯಾಗಿ ಹರಿಯುವಂತೆ ಮತ್ತು ನದಿಯಲ್ಲಿ ಸ್ನಾನ ಮಾಡಿದವರು ತಮ್ಮ ಎಲ್ಲ ಪಾಪಗಳಿಂದ ಮುಕ್ತರಾಗುಂತೆ ವರವನ್ನು ಕೊಡಬೇಕೆಂದು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ಬ್ರಹ್ಮ ತಥಾಸ್ತು ಎಂದ. ದೈವೇಚ್ಛೆಯಂತೆ ಕಾವೇರಿ ಅಗಸ್ತ್ಯ ಮಹಾಮುನಿಗಳನ್ನು ವರಿಸಿದಳು. ನದಿಯಾಗಿ ಹರಿಯಬೇಕೆಂಬ ತನ್ನ ಇಚ್ಛೆಯನ್ನು ಅಗಸ್ತ್ಯರಲ್ಲಿ ಹೇಳಿಕೊಂಡಳು. ಅಗಸ್ತ್ಯರು ಕಾವೇರಿಯನ್ನು ನೀರಾಗಿ ಪರಿವರ್ತಿಸಿ ತಮ್ಮ ಕಮಂಡಲದಲ್ಲಿ ಶೇಖರಿಸಿದರು. ಒಂದು ದಿನ ಅಗಸ್ತ್ಯರು ಬ್ರಹ್ಮಗಿರಿಯಲ್ಲಿ ತಪಸ್ಸನ್ನಾಚರಿಸುತ್ತಿದ್ದಾಗ ಕಮಂಡಲ ಗಾಳಿಗೆ ಉರುಳಿ ಅದರಲ್ಲಿದ್ದ ಕಾವೇರಿ ತೀರ್ಥಕುಂಡಿಗೆಗೆ ಜಿಗಿದು ಅಲ್ಲಿಂದ ನದಿಯಾಗಿ ಪ್ರವಹಿಸಿದಳು. ಈ ಪವಿತ್ರ ಪುಣ್ಯಕ್ಷೇತ್ರಕ್ಕೆ ತಲಕಾವೇರಿ ಎಂಬ ನಾಮಧೇಯ. ಇಲ್ಲಿ ಅಗಸ್ತ್ಯೇಶ್ವರ ದೇವಾಲಯ, ಗಣಪತಿ ದೇವಾಲಯ ಇದೆ. ಅಗಸ್ತ್ಯ ಮಹಾಮುನಿಗಳು ಈ ಲಿಂಗವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ.
ವೈಶಿಷ್ಟ್ಯ
ಬದಲಾಯಿಸಿತಲಕಾವೇರಿಯ ಈ ದೇಗುಲಗಳ ತಗ್ಗಿನಲ್ಲಿ ಕಾವೇರಿ ಉಗಮವಾಗುವ ಚಚ್ಚೌಕದ ಚಿಕ್ಕ ಕೊಳವಿದೆ. ಅದರ ಮುಂದೆ ಸ್ನಾನಘಟ್ಟ. ಇಲ್ಲಿಯೇ ಕಾವೇರಿ ಹುಟ್ಟುವುದು. ಈ ಸ್ಥಳಕ್ಕೆ ಕುಂಡಿಗೆ ಎನ್ನುತ್ತಾರೆ. ತುಲಾಸಂಕ್ರಮಣದ ನಿಶ್ಚಿತವಾದ ದಿನ ಇಲ್ಲಿ ಕಾವೇರಿ ತೀರ್ಥೋದ್ಭವವಾಗುತ್ತದೆ. ಪ್ರತಿ ವರ್ಷ ತುಲಾ ಮಾಸದ ಸಂಕ್ರಮಣದಿಂದ ವೃಶ್ಚಿಕ ಮಾಸದ ಸಂಕ್ರಮದವರೆಗೆ ಇಲ್ಲಿ ಕಾವೇರಿ ಜಾತ್ರೆ ನಡೆಯುತ್ತದೆ. ತಮಿಳುನಾಡು, ಕೇರಳ, ಪಾಂಡಿಚೇರಿ, ಕರ್ನಾಟಕದ ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಕೊಳದಲ್ಲಿ ಮಿಂದು ಕುಂಡಿಗೆಯ ತೀರ್ಥ ಕುಡಿದು, ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಾರೆ. ಇದು ಪೌರಾಣಿಕ ಸ್ಥಳ, ಜೀವ ನದಿ ಹುಟ್ಟುವ ಜನ್ಮಸ್ಥಳ ಹೀಗಾಗಿ ಇದು ಭಕ್ತರಿಗೆ ಪುಣ್ಯ ಕ್ಷೇತ್ರ. ಪ್ರವಾಸಿಗರಿಗೆ ರಮ್ಯಕ್ಷೇತ್ರ. ಶೀತ ಮಾರುತಗಳಿಂದ, ಶೀತಹವೆಯಿಂದ ಕೂಡಿರುವ ಈ ಸ್ಥಳ ರಮಣೀಯ. ಬ್ರಹ್ಮಗಿರಿಯ ಶಿಖರವೇರಿದಾಗ ಕಾಣುವ ಆಕಾಶಶುಭ್ರವಾಗಿರುವ ಬೆಟ್ಟದಪುರದ ನೋಟ ಮನೋಹರ. ಇಲ್ಲಿ ನಿಂತು ನೋಡಿದರೆ, ಹಾವಿನಂತೆ ಹರಿಯುವ ನದಿಗಳನ್ನೂ, ದೂರದಲ್ಲಿ ಅರಬ್ಬಿ ಸಮುದ್ರದ ರುದ್ರರಮಣೀಯ ಪ್ರಕೃತಿ ಸಿರಿಯನ್ನೂ ಕಣ್ತುಂಬಿಕೊಳ್ಳಬಹುದು. ಹತ್ತಿರದಲ್ಲೇ ಇರುವ ಅಬ್ಬಿ ಜಲಪಾತಕ್ಕೆ ಹೋಗಿ ಆನಂದಿಸಬಹುದು.