ಕರ್ನಾಟಕದ ನಾಣ್ಯಗಳು

ಕರ್ನಾಟಕದ ನಾಣ್ಯಗಳು : ಕರ್ನಾಟಕದಲ್ಲಿ ನಾಣ್ಯಗಳ ಪ್ರಾಚೀನತೆಯ ವಿಷಯದಲ್ಲಿ ಅತಿ ಖಚಿತವಾದ ಮಾಹಿತಿ ದೊರಕಿಲ್ಲವಾದುದುರಿಂದ, ಅವು ಇಲ್ಲಿ ಯಾವಗಿನಿಂದ ಬಳಕೆಯಲ್ಲಿವೆ ಎಂದು ಹೇಳುವುದು ಕಷ್ಟ.. ಉತ್ತರ ಭಾರತದಲ್ಲಿದ್ದಂತೆಯೇ ಇಲ್ಲಿಯೂ ಪ್ರಾಚೀನ ಕಾಲದಲ್ಲಿ ಮುದ್ರಾಂಕಿತ ನಾಣ್ಯಗಳು (ಪಂಚ್ಮಾಕ್ರ್ಡ್‌ ಕಾಯಿನ್ಸ್‌: ಚೈತ್ಯ, ಸ್ತೂಪ, ಬೆಟ್ಟಗಳೇ ಮುಂತಾದ ವಿವಿಧ ಚಿಹ್ನೆಗಳನ್ನು ಬೆಳ್ಳಿ ಅಥವಾ ತಾಮ್ರದ ತೆಳುಪಟ್ಟಿಗಳ ಮೇಲೆ ಮುದ್ರೆಯೊತ್ತಿ ಉಪಯೋಗಿಸುತ್ತಿದ್ದ ಭಾರತದ ಪ್ರಾಚೀನ ಪದ್ಧತಿಯ ನಾಣ್ಯಗಳು) ಬಳಕೆಯಲ್ಲಿದ್ದುವೆಂದು ಗೊತ್ತಾಗುತ್ತದೆ. ಆದರೆ ಇಲ್ಲಿ ಈ ನಾಣ್ಯಗಳ ವೈಶಿಷ್ಟ್ಯವೇನೆಂಬುದು ತಿಳಿದಿಲ್ಲ. ನಮಗೆ ಖಚಿತವಾದ ಮಾಹಿತಿ ದೊರಕುವುದು ಸಾತವಾಹನರ ಕಾಲದಿಂದ. ಕರ್ನಾಟಕದ ಬಹುಭಾಗ ಅವರ ಆಧಿಪತ್ಯಕ್ಕೆ ಒಳಪಟ್ಟಿತ್ತು. ಈ ಭಾಗಗಳಲ್ಲಿ ಅವರ ನಾಣ್ಯಗಳು ಹೇರಳವಾಗಿ ದೊರಕಿವೆ. ಸಾತವಾಹನರ ನಾಣ್ಯಗಳು ವೈವಿಧ್ಯ ಪೂರ್ಣವಾಗಿಯೂ ಅವರ ಇತಿಹಾಸ ರಚನೆಗೆ ಬಹು ಉಪಯುಕ್ತವೂ ಆಗಿವೆ. ಅವರ ನಾಣ್ಯಗಳು ವಿಶೇಷವಾಗಿ ಸೀಸ ಮತ್ತು ತಾಮ್ರಗಳಲ್ಲಿವೆ. ಬೆಳ್ಳಿಯ ನಾಣ್ಯಗಳು ಬಲು ವಿರಳ. ಆದರೆ ಚಿನ್ನದ ನಾಣ್ಯಗಳು ದೊರಕಿಲ್ಲ. ಆ ನಾಣ್ಯಗಳಲ್ಲಿ ವಿದೇಶೀಯ ಪ್ರಭಾವ ಕಾಣಬರುವುದಿಲ್ಲ. ಅಲ್ಲದೆ ಅವು ಕಲಾತ್ಮಕವಾಗಿಯಾಗಲಿ ನೋಡಲು ಸುಂದರವಾಗಿಯಾಗಿಲಿ ಇಲ್ಲ. ಬೆಳ್ಳಿಯ ನಾಣ್ಯಗಳಲ್ಲಿ ಒಂದು ಕಡೆ ರಾಜನ ಚಿತ್ರವೂ ಮತ್ತೊಂದು ಕಡೆ ಆನೆ, ಕುದುರೆ, ಸಿಂಹ, ಬಿಲ್ಲು-ಬಾಣ ಮುಂತಾದ ಚಿತ್ರಗಳೂ ಇವೆ. ಕೆಲವು ನಾಣ್ಯಗಳಲ್ಲಿ ಶಾಸನಗಳೂ ಉಂಟು. ಗೌತಮೀಪುತ್ರ ಸಾತಕರ್ಣಿ ದೊರೆ ನಹಪಾಣನನ್ನು ಸೋಲಿಸಿ ಅವನ ರಾಜ್ಯವನ್ನು ತನ್ನ ವಶಪಡಿಸಿಕೊಂಡು ಆ ಪ್ರದೇಶದಲ್ಲಿ ಬಳಕೆಯಲ್ಲಿದ್ದ ನಹಪಾಣನ ನಾಣ್ಯಗಳನ್ನು ಹಿಂದಕ್ಕೆ ತೆಗೆದುಕೊಂಡು ಅವುಗಳ ಮೇಲೆ ತನ್ನ ಹೆಸರಿನ ಶಾಸನ ಮುದ್ರಿಸಿದ. ಮತ್ತೊಬ್ಬ ಸಾತವಾಹನ ದೊರೆ ಯಜ್ಞಶ್ರೀ ಸಾತಕರ್ಣಿಯ ನಾಣ್ಯಗಳಲ್ಲಿ ಹಡಗಿನ ಚಿತ್ರವಿದೆ. ಆ ಕಾಲದಲ್ಲಿ ನೌಕಾಯಾನ ಎಷ್ಟೊಂದು ಮುಂದುವರಿದಿತ್ತೆಂಬುದನ್ನು ಇದು ಸೂಚಿಸುತ್ತದೆ. ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯಲ್ಲಿ ಉತ್ಖನನ ಮಾಡಿದಾಗ ಸಾತವಾಹನರ ಅನೇಕ ನಾಣ್ಯಗಳು ದೊರೆತುವು. ಇಲ್ಲಿ ದೊರೆತ ಚೀನೀ ನಾಣ್ಯವೊಂದು ಪ್ರ.ಶ.ಪೂ. ೨ನೆಯ ಶತಮಾನಕ್ಕೆ ಸೇರಿದುದೆಂದು ಭಾವಿಸಲಾಗಿತ್ತು. ಆದರೆ ಅದು ಅಷ್ಟೊಂದು ಪ್ರಾಚೀನವಾದುದಲ್ಲವೆಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಾತವಾಹನರ ಕಾಲದಲ್ಲಿ ಸಮಕಾಲೀನರೂ ಸಾಮಂತರೂ ಆದ ದೊರೆಗಳು ಆಳುತ್ತಿದ್ದರು. ಮಹಾರಥಿಗಳು ಅಥವಾ ಸದಕನ ವಂಶಿಕರು ಎಂದು ಪ್ರಸಿದ್ಧರಾಗಿರುವ ಇವರು ಸೀಸದ ನಾಣ್ಯಗಳನ್ನು ಅಚ್ಚುಹಾಕಿಸಿದರು. ಅಗಲವಾದ ಈ ನಾಣ್ಯಗಳಲ್ಲಿ ಒಂದು ಕಡೆ ಎತ್ತಿನ ಚಿತ್ರವೂ ಮತ್ತೊಂದು ಕಡೆ ಬೇಲಿಯೊಳಗಿರುವ ವೃಕ್ಷದ ಚಿತ್ರವೂ ಇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾತವಾಹನರ ಸಾಮಂತರೇ ಆದ ಆನಂದ ವಂಶದ ರಾಜರು ಆಳುತ್ತಿದ್ದರು. ಚುಟುಕುಲಾನಂದ, ಮುಡಾನಂದ ಎಂಬ ರಾಜರು ಆಳುತ್ತಿದ್ದುದು ಇವರ ಸೀಸದ ನಾಣ್ಯಗಳಿಂದ ತಿಳಿದುಬರುತ್ತದೆ. ಅಗಲವಾಗಿರುವ ಇವರ ನಾಣ್ಯಗಳಲ್ಲಿ ಬ್ರಾಹ್ಮೀ ಲಿಪಿಯ ಶಾಸನ, ಬೇಲಿಯೊಳಗಿನ ವೃಕ್ಷ, ಕಮಾನುಗಳ ಗುಡ್ಡ ಇವುಗಳ ಚಿತ್ರವನ್ನು ಕಾಣಬಹುದು. ಬನವಾಸಿ, ಕಾರವಾರ, ಚಂದ್ರವಳ್ಳಿ ಮುಂತಾದೆಡೆಗಳಲ್ಲಿ ಇವರ ನಾಣ್ಯಗಳು ದೊರೆಕಿವೆ.

ಪ್ರಸಕ್ತಶಕೆಯ ಮೊದಲ ಶತಮಾನಗಳಲ್ಲಿ ಕರ್ನಾಟಕಕ್ಕೂ ರೋಮಿಗೂ ವ್ಯಾಪಾರ ಸಂಪರ್ಕಗಳು ವಿಶೇಷವಾಗಿದ್ದುವು. ಇದರ ಕುರುಹಾಗಿ ಕರ್ನಾಟಕದಲ್ಲಿ ಅನೇಕ ಕಡೆ ರೋಮನ್ ನಾಣ್ಯಗಳು ದೊರಕಿವೆ. ಇವುಗಳಲ್ಲಿ ಮುಖ್ಯವಾದವು ಬೆಂಗಳೂರು ಮತ್ತು ಚಂದ್ರವಳ್ಳಿಗಳಲ್ಲಿ ದೊರಕಿವೆ. ಈ ಬೆಳ್ಳಿಯ ನಾಣ್ಯಗಳಲ್ಲಿ ರೋಮನ್ ಚಕ್ರವರ್ತಿಗಳ (ಆಗಸ್ಟಸ್, ಟೈಬೀರಿಯಸ್, ಕ್ಯಾಲಿಗುಲ) ಚಿತ್ರವೂ ಶಾಸನವೂ ಇವೆ.

ಸಾತವಾಹನರ ಅನಂತರ ಕರ್ನಾಟಕದಲ್ಲಿ ರಾಜ್ಯವಾಳಿದ ಬನವಾಸಿಯ ಕದಂಬರ ನಾಣ್ಯಗಳು ಪದ್ಮಟಂಕವೆಂಬ ಗುಂಪಿಗೆ ಸೇರುತ್ತವೆ. ಇವು ಚಿನ್ನದವು. ಪದ್ಮಟಂಕ ನೋಡಲು ಸಣ್ಣದಾದರೂ ಬಟ್ಟಲಿನ ಆಕಾರದಲ್ಲಿದೆ. ಇದರ ಮಧ್ಯದಲ್ಲಿ ಪದ್ಮಚಿಹ್ನೆಯೂ ಸುತ್ತಲೂ ವಿವಿಧ ಚಿಹ್ನೆಗಳೂ ಇವೆ. ಬನವಾಸಿಯ ಕದಂಬರ ನಾಣ್ಯಗಳಲ್ಲಿ ಹಿಮ್ಮುಖವಾಗಿರುವ ಸಿಂಹ ಗಮನಾರ್ಹವಾದುದು. ಮೇಲೆ ಬರೆಹವಿಲ್ಲದಿರುವುದರಿಂದ ಇವು ಖಚಿತವಾಗಿ ಕದಂಬರ ನಾಣ್ಯಗಳೆಂದು ಹೇಳಲಾಗುವುದಿಲ್ಲ.

ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಗಂಗಮನೆತನದ ಅರಸರು ಚಿನ್ನ ಮತ್ತು ತಾಮ್ರದ ನಾಣ್ಯಗಳನ್ನು ಅಚ್ಚುಹಾಕಿಸಿದರು. ಇವರ ಬೆಳ್ಳಿಯ ನಾಣ್ಯಗಳು ಬೆಳಕಿಗೆ ಬಂದಿಲ್ಲ. ಇವರ ನಾಣ್ಯಗಳು ಸುಮಾರು ಐವತ್ತರಿಂದ ಅರವತ್ತು ಗ್ರೇನ್ ಭಾರವಾಗಿದ್ದು ಅಲಂಕೃತ ಆನೆಯ ಚಿತ್ರವನ್ನೂ ಹಿಂಭಾಗದಲ್ಲಿ ಹೂವಿನ ಚಿತ್ರ ಮತ್ತು ಶಾಸನವನ್ನೂ ಹೊಂದಿವೆ. ಮತ್ತೊಂದು ನಮೂನೆಯ ಚಿನ್ನದ ನಾಣ್ಯಗಳು ಆರು ಮತ್ತು ಒಂದೂವರೆ ಗ್ರೇನ್ ತೂಕವುಳ್ಳವುಗಳಾಗಿ ಆನೆಯ ಚಿತ್ರ ಹೊಂದಿವೆ. ವರಾಹ ಚಿನ್ನೆಯುಳ್ಳ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದವರು ಬಾದಾಮಿಯ ಚಾಳುಕ್ಯರೆಂದು ಹೇಳಬಹುದು. ಐವತ್ತೈದು ಗ್ರೇನ್ ತೂಕವಿರುವ, ಒಂದು ಭಾಗದಲ್ಲಿ ವರಾಹ ಚಿಹ್ನೆಯೂ ಮತ್ತೊಂದು ಭಾಗದಲ್ಲಿ ಪದ್ಮವೂ ಇರುವ ನಾಣ್ಯಗಳು ಮೊದಲನೆಯ ಪುಲಕೇಶಿಯ ನಾಣ್ಯಗಳು. ಶಂಖ, ಚಕ್ರ, ಧನಸ್ಸುಗಳನ್ನೂ ಶ್ರೀ ಎಂಬ ಅಕ್ಷರವನ್ನೂ ಉಳ್ಳ ಹಿಂಭಾಗ ಮತ್ತು ವರಾಹ ಚಿಹ್ನೆಯಿರುವ ಮುಂಭಾಗ ಹೊಂದಿರುವ ನಾಣ್ಯಗಳು ಉತ್ತರ ಕರ್ಣಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ದೊರಕಿವೆ. ಇವು ಬಾದಾಮಿ ಚಳುಕ್ಯರ ನಾಣ್ಯಗಳೆಂದು ಅನೇಕ ವಿದ್ವಾಂಸರು ಒಪ್ಪಿದ್ದಾರೆ. ಆದರೆ ಶಾಸನವಿಲ್ಲದೆ ಇರುವುದರಿಂದ ಖಚಿತವಾಗಿ ಹೀಗೆಂದು ಹೇಳಲಾಗುವುದಿಲ್ಲ.

ಕರ್ನಾಟಕದ ಇತಿಹಾಸದಲ್ಲಿ ಮಾತ್ರವಲ್ಲದೆ ಭಾರತೀಯ ಇತಿಹಾಸದಲ್ಲೇ ವಿಶೇಷ ಸ್ಥಾನ ಗಳಿಸಿರುವ ಶ್ರೇಷ್ಠ ರಾಜಮನೆತನದವರಾದ ರಾಷ್ಟ್ರಕೂಟರ ನಾಣ್ಯಗಳು ಇದುವರೆಗೂ ದೊರಕಿಲ್ಲ. ರಾಷ್ಟ್ರಕೂಟರು ವಿಶೇಷವಾಗಿ ಚಿನ್ನದ ನಾಣ್ಯಗಳನ್ನೇ ಬಳಸುತ್ತಿದ್ದರೆಂದು ವಿದ್ವಾಂಸರು ಊಹಿಸುತ್ತಾರೆ. ಆ ಕಾಲದಲ್ಲಿ ದ್ರಮ್ಮ, ಸುವರ್ಣ, ಗದ್ಯಾಣ, ಕಳಂಜು ಮತ್ತು ಕಾಸು ಎಂಬ ನಾಣ್ಯಗಳು ಬಳಕೆಯಲ್ಲಿದ್ದುದು ಅವರ ಶಾಸನಗಳಿಂದ ತಿಳಿದು ಬರುತ್ತದೆ. ರಾಷ್ಟ್ರಕೂಟರ ಅನಂತರ ಕರ್ನಾಟಕದಲ್ಲಿ ಆಳಿದ ಕಲ್ಯಾಣದ ಚಾಳುಕ್ಯರ ಅನೇಕ ನಾಣ್ಯಗಳು ಲಭ್ಯವಾಗಿವೆ. ಎರಡನೆಯ ಜಯಸಿಂಹ, ಮೊದಲನೆಯ ಮತ್ತು ಎರಡನೆಯ ಸೋಮೇಶ್ವರ, ಆರನೆಯ ವಿಕ್ರಮಾದಿತ್ಯ- ಇವರ ಚಿನ್ನದ ನಾಣ್ಯಗಳು ದೊರಕಿವೆ. ಎರಡನೆಯ ಜಯಸಿಂಹನ ನಾಣ್ಯದಲ್ಲಿ ಎತ್ತರವಾದ ಗೋಪುರವೂ ಅದರ ಸುತ್ತಲೂ ಜಗದೇಕಮಲ್ಲ ಎಂಬ ಬರವಣಿಗೆಯೂ ಮುದ್ರಿತವಾಗಿವೆ. ಇವನ ಇನ್ನೊಂದು ರೀತಿಯ ನಾಣ್ಯದಲ್ಲಿ ಐದು ಸಿಂಹಗಳನ್ನು ಮತ್ತು ಇವನ ಬಿರುದನ್ನು (ಜಗದೇಕಮಲ್ಲ) ಮುದ್ರಿಸಿರುವುದನ್ನು ಕಾಣಬಹುದು. ಎರಡನೆಯ ಸೋಮೇಶ್ವರನ ನಾಣ್ಯಗಳಲ್ಲಿ ಒಂಬತ್ತು ಮುದ್ರೆಗಳಿವೆ. ಭುಜ ಎಂಬ ಶಾಸನವಿರುವ ನಾಣ್ಯಗಳು ಆರನೆಯ ವಿಕ್ರಮಾದಿತ್ಯನೆಂದು ಊಹೆ. ಕಲ್ಯಾಣದ ಚಾಳುಕ್ಯರ ಸಮಕಾಲೀನರಾದ ಕಳಚುರಿಗಳ ನಾಣ್ಯಗಳು ಅಷ್ಟಾಗಿ ದೊರಕಿಲ್ಲ. ಸಾತಾರಾ ಜಿಲ್ಲೆಯಲ್ಲಿ ದೊರಕಿರುವ ಚಿನ್ನದ ನಾಣ್ಯಗಳು ಆ ಮನೆತನದ ರಾಜರದೆಂದು ಊಹಿಸಲಾಗಿದೆ. ಇವುಗಳ ತೂಕ ೫೫ ಗ್ರೇನ್. ನಾಣ್ಯಗಳ ಮೇಲೆ ಮುರಾರಿ ಎಂಬ ಶಾಸನವುಂಟು. ಇವು ಕಳಚುರಿ ರಾಜ ದಾಯಮುರಾರಿ ಸೋವಿದೇವನ ನಾಣ್ಯಗಳೆಂದು ಹೇಳಬಹುದು.

ಕರ್ನಾಟಕದ ಪ್ರಮುಖ ರಾಜಮನೆತನದವರಾದ ಹೊಯ್ಸಳರ ನಾಣ್ಯಗಳ ವಿಷಯದಲ್ಲಿಯೂ ನಮಗೆ ದೊರಕಿರುವ ಮಾಹಿತಿ ಕಡಿಮೆ. ಈ ರಾಜರಲ್ಲಿ ವಿಷ್ಣುವರ್ಧನ ಮತ್ತು ಎರಡನೆಯ ನರಸಿಂಹರು ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದರು. ವಿಷ್ಣುವರ್ಧನ ಮೂರು ರೀತಿಯ ನಾಣ್ಯಗಳನ್ನು ಟಂಕಿಸಿದ. ಮುಂಭಾಗದಲ್ಲಿ ಸಿಂಹ, ಹಿಂಭಾಗದಲ್ಲಿ ಶ್ರೀತಲಕಾಡಗೊಂಡ ಎಂಬ ಕನ್ನಡ ಶಾಸನವಿರುವ ನಾಣ್ಯಗಳನ್ನೂ ಆತ ಮುದ್ರಿಸಿದ್ದು ತನ್ನ ತಲಕಾಡು ವಿಜಯದ ಜ್ಞಾಪಕಾರ್ಥವಾಗಿ ಸಿಂಹದ ಮೇಲೆ ಕುಳಿತಿರುವ ಚಾಮುಂಡಿಯ ಚಿತ್ರವೂ ಹಿಂಭಾಗದಲ್ಲಿ ಶ್ರೀನೊಳಂಬವಾಡಿಕೊಂಡ ಎಂಬ ಕನ್ನಡ ಶಾಸನವೂ ಇರುವ ನಾಣ್ಯಗಳು ನೊಳಂಬರ ಮೇಲಿನ ವಿಜಯದ ಸ್ಮರಣಾರ್ಥ ಮುದ್ರಿಸಿದವು. ಮೂರನೆಯ ನಮೂನೆಯ ನಾಣ್ಯಗಳಲ್ಲಿ ಶ್ರೀಮಲಪರೊಳು ಗಂಡ ಎಂಬ ಕನ್ನಡ ಶಾಸನವಿದೆ. ಇವು ವರಾಹ, ಪಣ ಮತ್ತು ಅರ್ಧಪಣ ಮೌಲ್ಯದ ನಾಣ್ಯಗಳೆಂದು ಊಹಿಸಲಾಗಿದೆ. ನರಸಿಂಹನ ನಾಣ್ಯಗಳಲ್ಲಿ ಶ್ರೀ ಪ್ರತಾಪ ನಾರಸಿಂಘ ಎಂಬ ಶಾಸನವೂ ಸಿಂಹ, ಚಾಮುಂಡಿ ಮುಂತಾದ ದೇವತೆಗಳ ಚಿತ್ರಗಳೂ ಇವೆ.

ಉತ್ತರ ಕರ್ನಾಟಕದಲ್ಲಿ ಆಳಿದ ದೇವಗಿರಿಯ ಸೇವುಣರ ನಾಣ್ಯಗಳೂ ಚಿನ್ನದ ಪದ್ಮ ಟಂಕಗಳು. ಸುಮಾರು ೫೭ ಗ್ರೇನ್ ತೂಕವಿರುವ ಈ ನಾಣ್ಯಗಳ ಮುಂಭಾಗದಲ್ಲಿ ಪದ್ಮವೂ ಅದರ ಸುತ್ತಲೂ ಶಂಖ, ಚಕ್ರ ಮುಂತಾದ ಚಿಹ್ನೆಗಳೂ ಹಿಂಭಾಗದಲ್ಲಿ ದೇವನಾಗರೀಲಿಪಿಯಲ್ಲಿ ರಾಜರ ಹೆಸರಿನ ಶಾಸನಗಳೂ ಇವೆ. ೫ನೆಯ ಭಿಲ್ಲಮ, ಸಿಂಘಣ, ಕೃಷ್ಣ, ಮಹಾದೇವ ಮತ್ತು ರಾಮಚಂದ್ರ ಇವರ ನಾಣ್ಯಗಳು ಮಾತ್ರ ಇದುವರೆಗೆ ದೊರಕಿವೆ. ಇವರ ಸಮಕಾಲೀನರೇ ಆದ ಗೋವೆಯ ಕದಂಬರು ಚಿನ್ನದ ನಾಣ್ಯಗಳನ್ನು ಮುದ್ರಿಸಿದರು. ಮುಂಬದಿಯಲ್ಲಿ ಗಜಶಾರ್ದೂಲ ಮತ್ತು ಕೇವಲ ಶಾರ್ದೂಲದ ಚಿತ್ರವೂ ಹಿಂಬದಿಯಲ್ಲಿ ನಾಗರೀಲಿಪಿಯ ಶಾಸನವೂ ತ್ರಿಶೂಲವೂ ಇರುವ ನಾಣ್ಯಗಳನ್ನು ಒಂದನೆಯ ಜಯಕೇಶಿ ಅಚ್ಚು ಹಾಕಿಸಿದ. ಇದೇ ರೀತಿಯ ನಾಣ್ಯಗಳನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಸೋಯಿದೇವ, ಶಿವಚಿತ್ರ, ಹೆಮ್ಮಡಿದೇವ ಮುಂತಾದರಾಜರೂ ಮುದ್ರಿಸಿದರು. ಕರ್ನಾಟಕದಲ್ಲಿ ಸಾಮಂತರಾಗಿ ಆಳಿದ ಅನೇಕ ಮನೆತನಗಳ ನಾಣ್ಯಗಳೂ ದೊರಕಿವೆ. ಆದರೆ ಅವುಗಳ ವಿಷಯದಲ್ಲಿ ಖಚಿತವಾದ ಮಾಹಿತಿ ಸಿಕ್ಕಿಲ್ಲ. ವಿಜಯನಗರ ಸಾಮ್ರಾಜ್ಯ ಕಾಲದಿಂದೀಚೆಗೆ ಕರ್ನಾಟಕದ ನಾಣ್ಯಗಳ ಬಗೆಗೆ ವಿಪುಲವಾದ ಮಾಹಿತಿ ದೊರಕುತ್ತದೆ. ನಾಣ್ಯಗಳ ದೃಷ್ಟಿಯಿಂದಲೂ ಅದು ಸುವರ್ಣಯುಗವೇ ಸರಿ. ವಿಜಯಗನರ ನಾಣ್ಯಗಳು ವಿಶೇಷವಾಗಿ ಚಿನ್ನದಲ್ಲಿವೆ. ಅನಂತರ ಬಂದ ಅನೇಕ ರಾಜರೂ ಐರೋಪ್ಯ ಕಂಪನಿಗಳವರೂ ಹೈದರನೂ ಟಿಪ್ಪುವೂ ಮೈಸೂರು ರಾಜರೂ ಈ ನಾಣ್ಯಗಳನ್ನು ಅನುಕರಿಸಿದರು. ವಿಜಯನಗರದ ಅರಸರ ಚಿನ್ನದ ನಾಣ್ಯಗಳು ವರಾಹ, ಅರ್ಧ ವರಾಹ ಮತ್ತು ಕಾಲು ವರಾಹಗಳ ಮೌಲ್ಯಗಳಲ್ಲಿವೆ. ಈ ನಾಣ್ಯಗಳಲ್ಲಿ ಸಾಮಾನ್ಯವಾಗಿ ಹಿಂದೂ ದೇವತೆಗಳ ಚಿತ್ರಗಳೂ ರಾಜನ ಹೆಸರಿನ ಕನ್ನಡ, ತೆಲುಗು ಅಥವಾ ನಾಗರೀಲಿಪಿಯ ಶಾಸನಗಳೂ ಇವೆ. ಅವರ ನಾಣ್ಯಗಳು ಕಲಾತ್ಮಕವಾಗಿದ್ದು ವಿಜಯನಗರದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ವಿಜಯನಗರದ ಪ್ರಾಚೀನತಮ ನಾಣ್ಯಗಳಲ್ಲಿ ಕನ್ನಡಲಿಪಿಯ ಶಾಸನಗಳಿರುವುದು ಗಮನಾರ್ಹವಾದ ಸಂಗತಿ. ಸಂಗಮ ವಂಶದ ಮೊದಲನೆಯ ಹರಿಹರ, ಹನುಮಂತ ಮತ್ತು ಗರುಡ ಇರುವ ನಾಣ್ಯಗಳನ್ನು ಅಚ್ಚುಹಾಕಿಸಿದ. ಗರುಡ ಚಿಹ್ನೆಯುಳ್ಳ ನಾಣ್ಯಗಳನ್ನು ಬುಕ್ಕರಾಯನೂ ಕೃಷ್ಣದೇವರಾಯನೂ ಮುದ್ರಿಸಿದರು. ಎರಡನೆಯ ಹರಿಹರ ತನ್ನ ನಾಣ್ಯಗಳಲ್ಲಿ ಹೊಸ ಚಿಹ್ನೆಗಳನ್ನು ಪ್ರಾರಂಭಿಸಿದ. ಇವನ ನಾಣ್ಯಗಳ ಮೇಲೆ ಶಿವ-ಪಾರ್ವತಿ, ಲಕ್ಷ್ಮೀ-ನಾರಾಯಣ, ಲಕ್ಷ್ಮೀ-ನರಸಿಂಹ ಮುಂತಾದ ದೇವತೆಗಳ ಚಿತ್ರಗಳಿವೆ. ಅನಂತರ ಆಳಿದ ದೇವರಾಯ ಚಿನ್ನದ ನಾಣ್ಯಗಳ ಮೇಲೆ ಶಿವಪಾರ್ವತಿಯರ ಚಿತ್ರವನ್ನೂ ತಾಮ್ರದ ನಾಣ್ಯಗಳ ಮೇಲೆ ಆನೆಯ ಚಿತ್ರವನ್ನೂ ಅಚ್ಚುಹಾಕಿಸಿದ ಇವನ ಕೆಲವು ನಾಣ್ಯಗಳಲ್ಲಿ ಗಜಬೇಂಟೆಕಾರ ಎಂಬ ಶಾಸನವೂ ಉಂಟು. ತುಳುವ ವಂ±ದ ಅರಸರು ಶಿವಪಾರ್ವತಿಯರ ಚಿತ್ರದ ನಾಣ್ಯಗಳನ್ನು ಮುಂದುವರಿಸಿದ್ದೇ ಅಲ್ಲದೆ ವೆಂಕಟೇಶ್ವರ ಮತ್ತು ಬಾಲಕೃಷ್ಣರ ಚಿತ್ರವಿರುವ ನಾಣ್ಯಗಳನ್ನು ಚಲಾವಣೆಗೆ ತಂದರು. ಕೃಷ್ಣದೇವರಾಯನ ನಾಣ್ಯಗಳಲ್ಲಿ ಈ ಚಿತ್ರಗಳ ಜೊತೆಗೆ ಶ್ರೀಪತಾಪಕೃಷ್ಣರಾಯ ಎಂಬ ಶಾಸನವನ್ನು ಕಾಣಬಹುದು. ಅಚ್ಯುತರಾಯನ ಶಾಸನಗಳಲ್ಲಿ ಗಂಡಭೇರುಂಡದ ಚಿತ್ರವಿರುವುದು ಗಮನಾರ್ಹ. ವೆಂಕಟಪತಿಯ ನಾಣ್ಯಗಳಲ್ಲಿ ಶ್ರೀ ವೆಂಕಟೇಶ್ವರಾಯ ನಮಃ ಎಂಬ ಶಾಸನವೂ ವಿಷ್ಣುವಿನ ಚಿತ್ರವೂ ಇವೆ.

ವಿಜಯನಗರದ ಪತನಾನಂತರ ಹುಟ್ಟಿಕೊಂಡು ಅನೇಕ ಸಣ್ಣಪುಟ್ಟ ರಾಜ್ಯಗಳು ವಿಜಯನಗರದ ನಾಣ್ಯಗಳನ್ನೇ ಸೂಕ್ತ ಬದಲಾವಣೆಗಳೊಂದಿಗೆ ಮುಂದುವರಿಸಿದುವು. ಈ ಗುಂಪಿಗೆ ಸೇರಿದವೆಂದರೆ ಇಕ್ಕೇರಿ ಮತ್ತು ಚಿತ್ರದುರ್ಗದ ಪಾಳೆಯಗಾರರ ನಾಣ್ಯಗಳು. ಇಕ್ಕೇರಿಯ ಪಾಳೆಯಗಾರ ಸದಾಶಿವನಾಯಕನ ನಾಣ್ಯಗಳಲ್ಲಿ ಶಿವಪಾರ್ವತಿಯರ ಚಿತ್ರವೂ ಹಿಂಭಾಗದಲ್ಲಿ ಶ್ರೀ ಸದಾಶಿವ ಎಂಬ ನಾಗರೀಲಿಪಿಯ ಬರೆಹವೂ ಇವೆ. ಚಿತ್ರದುರ್ಗದ ನಾಯಕರ ನಾಣ್ಯಗಳ ಒಂದು ಬದಿಗೆ ದುರ್ಗಿಯ ಚಿತ್ರವನ್ನೂ ಇನ್ನೊಂದು ಬದಿಗೆ ನಾಯಕರಾಯ ಎಂಬ ನಾಗರೀಲಿಪಿಯ ಬರೆಹವನ್ನೂ ಕಾಣಬಹುದು. ಇವನ್ನು ದುರ್ಗಿ ಪಗೋಡವೆಂದೂ ಕರೆಯುತ್ತಾರೆ. ಬಿಜಾಪುರದ ಸುಲ್ತಾನರು ಮತ್ತು ಮರಾಠರು ಕರ್ನಾಟಕದ ಕೆಲವು ಭಾಗಗಳನ್ನು ತಮ್ಮ ವಶಮಾಡಿಕೊಂಡಮೇಲೆ ತಮ್ಮವೇ ಆದ ನಾಣ್ಯಗಳನ್ನು ಅಚ್ಚುಹಾಕಿಸಿದರು. ಇವು ಹೆಚ್ಚಾಗಿ ದೊರಕಿಲ್ಲ. ಶಿವಮೊಗ್ಗ, ಬೆಂಗಳೂರು ಮತ್ತು ಕೋಲಾರಗಳ ಕೆಲವೆಡೆಗಳಲ್ಲಿ ಶಾಹೀ ನಾಣ್ಯಗಳು ದೊರಕಿವೆ.

ಕರ್ನಾಟಕದ ಕೆಲವು ಭಾಗಗಳು ಮೊಗಲರ ಆಳ್ವಿಕೆಗೆ ಸೇರಿದ್ದುದರಿಂದ ಇಲ್ಲಿ ಅವರ ನಾಣ್ಯಗಳೂ ದೊರಕಿವೆ. ಅವೆಲ್ಲವೂ ಅಖಿಲ ಭಾರತೀಯ ವ್ಯಾಪ್ತಿಯುಳ್ಳವಾದ್ದರಿಂದ ಕರ್ನಾಟಕದ ವೈಶಿಷ್ಟ್ಯವೇನೂ ಅವುಗಳಲ್ಲಿ ಕಾಣಬರುವುದಿಲ್ಲ (ನೋಡಿ- ಮೊಗಲರು).

ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರ ನಾಣ್ಯಗಳು ಕರ್ನಾಟಕ ನಾಣ್ಯ ಇತಿಹಾಸದಲ್ಲಿ ವಿಶೇಷ ಸ್ಥಾನ ಗಳಿಸಿವೆ. ಹೈದರ್ ಬಿದನೂರನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಅಲ್ಲಿ ಒಂದು ಟಂಕಸಾಲೆ ಸ್ಥಾಪಿಸಿ ಬಹಾದುರೀ ನಾಣ್ಯಗಳನ್ನು ಮುದ್ರಿಸಿದ. ಅವುಗಳ ಮೇಲೆ ಶಿವಪಾರ್ವತಿಯರ ಚಿತ್ರವೂ ಹಿಂಭಾಗದಲ್ಲಿ ಹೆ ಎಂಬ ಅಕ್ಷರವೂ ಇವೆ. ಹೈದರ್ ಬೆಂಗಳೂರಿನಲ್ಲಿ ಮುದ್ರಿಸಿದ ನಾಣ್ಯಗಳು ದೊಡ್ಡ ತಲೆ ಬೆಂಗಳೂರಿ ಎಂದು ಪ್ರಸಿದ್ಧವಾಗಿದ್ದುವು. ಇವುಗಳ ಜೊತೆಗೆ ಈತ ಅರ್ಧ ಪಗೋಡ ಮತ್ತು ಫಣಮ್ ಎಂಬ ನಾಣ್ಯಗಳನ್ನೂ ಮುದ್ರಿಸಿದ್ದ. ಇವನ ತಾಮ್ರದ ನಾಣ್ಯಗಳ ಮುಂಬದಿಯಲ್ಲಿ ಆನೆಯೂ ಹಿಂಬದಿಯಲ್ಲಿ ತೇದಿಯೂ ಟಂಕಸಾಲೆಯ ಹೆಸರೂ ಇವೆ. ಟಿಪ್ಪುಸುಲ್ತಾನನ ನಾಣ್ಯಗಳು ನಾಣ್ಯಶಾಸ್ತ್ರಜ್ಞರನ್ನು ಚಕಿತಗೊಳಿಸುತ್ತವೆ. ಅವುಗಳ ವೈವಿಧ್ಯವೂ ನಾಣ್ಯ ವಿಷಯದಲ್ಲಿ ಹೈದರ್ ತಳೆದಿದ್ದ ಆಸಕ್ತಿಯೂ ಭಾರತೀಯ ನಾಣ್ಯಶಾಸ್ತ್ರದಲ್ಲಿಯೇ ವಿಶಿಷ್ಟವೆನ್ನಬಹುದು. ಕೊನೆಯ ಪಕ್ಷ ಹದಿನಾರು ಟಂಕಸಾಲೆಗಳು ಹೈದರನ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದುವು. ಶ್ರೀರಂಗಪಟ್ಟಣ, ಬೆಂಗಳೂರು, ಚಿತ್ರದುರ್ಗ, ನಗರ, ಗುತ್ತಿ, ಮೈಸೂರು, ಧಾರವಾಡ, ಸತ್ಯಮಂಗಲ ಮುಂತಾದ ಸ್ಥಳಗಳಲ್ಲಿ ಮುಖ್ಯ ಟಂಕಸಾಲೆಗಳಿದ್ದುವು. ಟಿಪ್ಪುವಿನ ಆಡಳಿತದ ಮೊದಲ ನಾಲ್ಕು ವರ್ಷಗಳಲ್ಲಿ ನಾಣ್ಯಗಳಿಗೆ ಹಿಜಿರ ಕಾಲವನ್ನೇ ಬಳಸಲಾಗುತ್ತಿತ್ತು. ಅನಂತರ ಆತ ಮೌಲದಿ ಕಾಲಮಾನವನ್ನು ಬಳಕೆಗೆ ತಂದ. ತಾನು ಅಚ್ಚುಹಾಕಿಸಿದ ನಾಣ್ಯಗಳಿಗೆ ಅಹ್ಮದೀ, ಸದೀಕೀ, ಫಾರೂಕೀ ಮುಂತಾದ ಹೊಸ ಹೆಸರುಗಳನ್ನು ಕೊಟ್ಟ. ಎರಡು ರೂಪಾಯಿ, ಒಂದು ರೂಪಾಯಿ, ಅರ್ಧ ರೂಪಾಯಿ, ಕಾಲು ರೂಪಾಯಿ, ಎಂಟನೆಯ ಒಂದು ರೂಪಾಯಿ ಇತ್ಯಾದಿಯಾಗಿ ಎಂಟನೆಯ ಒಂದು ಪೈಸಾದವರೆಗಿನ ಮೌಲ್ಯದ ನಾಣ್ಯಗಳನ್ನು ಮುದ್ರಿಸಲಾಯಿತು. ಹೊಸ ರೀತಿಯ ಮಾಸದ ಹೆಸರೂ ಹಿಂದೂ ಪಂಚಾಂಗ ರೀತಿಯೂ ಬಳಕೆಗೆ ಬಂದುವು. ಅಹಮದನ ಧರ್ಮ ಹೈದರನ ವಿಜಯಗಳಿಂದ ಪ್ರಕಾಶಿತವಾಗಿದೆ ಎಂಬ ಬರೆಹ ಅಹ್ಮದೀ ನಾಣ್ಯಗಳ ಮೇಲಿದೆ. ಅವನೇ ನ್ಯಾಯವಾದಿ, ಅವನೇ ಸುಲ್ತಾನ ಎಂಬ ಬರೆಹ ಇನ್ನು ಕೆಲವು ನಾಣ್ಯಗಳ ಮೇಲಿದೆ. ಕೆಲವು ನಾಣ್ಯಗಳ ಮೇಲೆ ಆನೆಯ ಚಿತ್ರವುಂಟು.

ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಮೈಸೂರು ದೊರೆಗಳ ನಾಣ್ಯಗಳೂ ವೈವಿಧ್ಯಪೂರ್ಣವಾದವು. ಕಂಠೀರವ ನರಸರಾಜ ಒಡೆಯರು ಮೊಟ್ಟ ಮೊದಲನೆಯದಾಗಿ ಟಂಕಸಾಲೆಯನ್ನು ಸ್ಥಾಪಿಸಿದರು. ಇವರು ಅಚ್ಚುಹಾಕಿಸಿದ ಕಂಠೀರಾಯಹಣದ ಒಂದು ಬದಿಯಲ್ಲಿ ನರಸಿಂಹನ ಚಿತ್ರವೂ ಹಿಂಬದಿಯಲ್ಲಿ ಸೂರ್ಯ ಚಂದ್ರ ಮತ್ತು ಶ್ರೀಕಂಠೀರವ ಎಂಬ ಶಾಸನವೂ ಇವೆ. ಚಿಕ್ಕದೇವರಾಯ ಹಣದಲ್ಲಿ ಮುಂಬದಿಯಲ್ಲಿ ಚಾಮುಂಡಿಯ ಚಿತ್ರವನ್ನೂ ಹಿಂಬದಿಯಲ್ಲಿ ಕನ್ನಡದಲ್ಲಿ ಚಿಕ್ಕದೇವರಾಯ ಎಂಬ ಬರೆಹವನ್ನೂ ಕಾಣಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರ ನಾಣ್ಯಗಳ ಮೇಲೆ ಶಿವಪಾರ್ವತಿಯರ ಚಿತ್ರ ಮತ್ತು ಶ್ರೀ ಕೃಷ್ಣರಾಜ ಎಂದು ನಾಗರೀಲಿಪಿಯ ಬರೆವಣಿಗೆ ಇವೆ. ಪೂರ್ಣಯ್ಯನವರು ಅಚ್ಚು ಹಾಕಿಸಿದ ನಾಣ್ಯ ಗಿಡ್ಡು ಕಂಠೀರಾಯ ಹಣವೆಂದು ಪ್ರಸಿದ್ಧವಾಗಿದೆ. ೧೮೪೩ರಲ್ಲಿ ಮೈಸೂರು ಒಡೆಯರ ನಾಣ್ಯಗಳು ಅಚ್ಚಾಗುವುದು ನಿಂತುಹೋಯಿತು. ಒಟ್ಟಿನಲ್ಲಿ ಈ ನಾಣ್ಯಗಳು ಕಲಾತ್ಮಕವಾಗಿವೆ.

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಪೋರ್ಚುಗೀಸರು, ಫ್ರೆಂಚರು, ಡಚ್ಚರು ಮತ್ತು ಬ್ರಿಟಿಷರು ತಮ್ಮದೇ ಆದ ನಾಣ್ಯಗಳನ್ನು ಬಳಕೆಗೆ ತಂದರು. ಇವು ಮೊದಮೊದಲು ಮೊಗಲ್ ನಾಣ್ಯಗಳ ಅನುಕರಣೆಗಳೇ ಆಗಿದ್ದುವೆನ್ನಬಹುದು. ಭಾರತ ಸ್ವತಂತ್ರವಾದ ಅನಂತರ ಕಾಲದಲ್ಲಿ ಸರ್ಕಾರ ಅಚ್ಚುಹಾಕಿಸಿ ಚಲಾವಣೆಗೆ ತರುತ್ತಿರುವ ನಾಣ್ಯಗಳು ಅಖಿಲಭಾರತದ ವ್ಯಾಪ್ತಿಯುಳ್ಳವು. ಆದ್ದರಿಂದ ಈಗಿನ ನಾಣ್ಯಗಳಲ್ಲಿ ಕರ್ನಾಟಕದ ಪ್ರತ್ಯೇಕತೆ ಕಾಣಿಸುವುದಿಲ್ಲ.