ಕರ್ಣಾಟಕ (ಪತ್ರಿಕೆ)
ಕರ್ಣಾಟಕ ಪತ್ರಿಕೆಯು ಡಿ.ವಿ. ಗುಂಡಪ್ಪನವರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ಇಂಗ್ಲಿಷ್ ದ್ವಿಸಾಪ್ತಾಹಿಕ. 1913ರಲ್ಲಿ ಪ್ರಾರಂಭವಾಯಿತು. ಆಗಿನ ಮೈಸೂರು ಸರ್ಕಾರದ ರೀತಿ ನೀತಿಗಳನ್ನು ಈ ಪತ್ರಿಕೆ ಧೈರ್ಯವಾಗಿ ಟೀಕಿಸುತ್ತಿತ್ತು. ಸರ್ಕಾರಕ್ಕೆ ಮತ್ತು ಆಗಾಗ ಘರ್ಷಣೆಯಾಗುತ್ತಿದ್ದುದೂ ಉಂಟು.
ಕಾಬ್ ಎಂಬ ಬ್ರಿಟಿಷ್ ರೆಸಿಡೆಂಟ್ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಬಾಂಬೇಕ್ರಾನಿಕಲ್, ಇಂಡಿಯನ್ ಪೇಟ್ರಿಯಟ್ ಮೊದಲಾದ ಪತ್ರಿಕೆಗಳ ಜೊತೆಗೆ ಕರ್ಣಾಟಕ ಪತ್ರಿಕೆಯೂ ಇದ್ದುದನ್ನು ನೋಡಿ ಕಿಡಿಕಿಡಿಯಾದನೆಂದು ಹೇಳಲಾಗಿದೆ. ಇದೊಂದು ವಿಷಪುರಿತ ಪತ್ರಿಕೆಯೆಂದೂ ಇದನ್ನು ತರಿಸಕೂಡದೆಂದೂ ಆತನು ಸೂಚನೆ ನೀಡಿದ. ಪತ್ರಿಕೆ ಆ ಅವಮಾನವನ್ನು ಧೈರ್ಯವಾಗಿ ಎದುರಿಸಿತು. ಪರಕೀಯ ರೆಸಿಡೆಂಟನಿಗೆ ಸಂಸ್ಥಾನದ ವಿಷಯಗಳಲ್ಲಿ ಬಾಯಿಹಾಕಲು ಅಧಿಕಾರವಿಲ್ಲವೆಂದು ಅದು ಟೀಕಿಸಿತು. ರಾಜವಿರೋಧಿಯಾಗಿ ಬರೆಯುತ್ತಿದ್ದರಿಂದ ಅದು ದಿವಾನರ ಪತ್ರಿಕೆಯೆಂದು ಅರಮನೆಯವರು ಶಂಕಿಸಿದ್ದೂ ಉಂಟು. ಕರ್ಣಾಟಕ ಪತ್ರಿಕೆ ತನಗೆ ತೋರಿದ್ದನ್ನು ನಿರ್ಭಯವಾಗಿ ಬರೆಯಿತು. ಇದರಿಂದ ಆಗಿನ ದಿವಾನರು ಪತ್ರಿಕೆಯ ಸಂಪಾದಕರನ್ನು ಆಗಾಗ್ಗೆ ಕರೆಸಿಕೊಂಡು ಸಲಹೆ ಕೇಳುತ್ತಿದ್ದರು. ಬಿಗಿಯಾದ ವೃತ್ತಪತ್ರಿಕಾ ಕಾನೂನು ಜಾರಿಯಲ್ಲಿದ್ದ ಕಾಲವದು. ಈ ಪತ್ರಿಕೆಯನ್ನು ಮುಟ್ಟುಗೋಲು ಹಾಕಬೇಕೆಂದು ಹಲವು ಕಡೆಯಿಂದ ಒತ್ತಾಯ ಬಂದಿತ್ತಾದರೂ ಆಗಿನ ದಿವಾನರು ಪತ್ರಿಕೆಯನ್ನು ಸಹಾನುಭೂತಿಯಿಂದ ನೋಡುತ್ತಿದ್ದರು. ಕರ್ಣಾಟಕ ಪತ್ರಿಕೆಯ ಪ್ರಕಟಣೆ ನಿಂತದ್ದು 1922-23ರ ಸುಮಾರಿನಲ್ಲಿ, ಆಗ ಅದಕ್ಕೆ ಚಂದಾದಾರರಿಂದ ಬರಬೇಕಾದ್ದ ಬಾಕಿಯ ಮೊತ್ತ ಸು. 8000 ರೂಪಾಯಿ.