ಕರ್ಣಾಟಕ ಸಂಗೀತ
ಕರ್ಣಾಟಕ ಸಂಗೀತ:- ದಕ್ಷಿಣಾದಿ ಸಂಗೀತ ಎಂದೂ ಹೆಸರಿರುವ ಈ ಪದ್ಧತಿ ಭಾರತೀಯ ಸಂಗೀತದ ಎರಡು ಮುಖ್ಯ ಪ್ರಕಾರಗಳಲ್ಲಿ ಒಂದು. ಇನ್ನೊಂದು ಉತ್ತರಾದಿ (ಹಿಂದುಸ್ತಾನಿ). ಕರ್ಣಾಟಕ ಸಂಗೀತ ಈಗ ದಕ್ಷಿಣ ಕರ್ನಾಟಕ ಮತ್ತು ಪಕ್ಕದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳಗಳಲ್ಲಿ ವಿಶೇಷವಾಗಿ ಪ್ರಚಾರದಲ್ಲಿದೆ. ಕನ್ನಡ, ಸಂಸ್ಕೃತ, ತೆಲುಗು, ತಮಿಳು ಮುಂತಾದ ಎಲ್ಲ ಭಾಷೆಗಳ ಸೇವೆಯನ್ನೂ ಪಡೆದು ಗಾಯನ, ವಾದನ, ನಾಟ್ಯ, ನರ್ತನ, ರಸಭಾವ, ಅಲಂಕಾರ, ಛಂದಸ್ಸು, ಧೃವಗಾನ ಮೊದಲಾದ ಎಲ್ಲಾ ಅಂಗಗಳೊಡನೆ ಬೆಳೆದಿರುವ ಈ ಸಂಗೀತ ಪದ್ಧತಿಗೆ ಕನ್ನಡಿಗರ ಕೊಡುಗೆ ಪ್ರಮುಖವಾದುದು. ಕರ್ಣಾಟಕ ಸಂಗೀತ ಶಾಸ್ತ್ರಜ್ಞರ ಕಾಣಿಕೆ, ಪ್ರಾಚೀನ ಕಾಲದಿಂದ ಈ ನಾಡಿನಲ್ಲಿ ದೊರೆತ ವಿಶೇಷ ಪ್ರೋತ್ಸಾಹ ಇವು ಕರ್ಣಾಟಕ ಸಂಗೀತ ರೂಪುಗೊಳ್ಳಲು ಮುಖ್ಯ ಕಾರಣ. ಇದರಿಂದಲೇ ಈ ಪ್ರಕಾರಕ್ಕೆ ಕರ್ಣಾಟಕದ ಹೆಸರು ಜೊತೆಗೂಡಿಕೊಂಡಿದೆ.
ಉಗಮ-ವಿಕಾಸ
ಬದಲಾಯಿಸಿಸಾಮವೇದದಿಂದ ಆರಂಭವಾಗಿ ದತ್ತಿಲ, ಕೋಹಿಲ, ಭರತ ಮೊದಲಾದವರ ಗ್ರಂಥಗಳಲ್ಲಿ ಶಾಸ್ತ್ರೀಯವಾಗಿ ನಿರೂಪಿತವಾಗಿರುವ ಸಂಗೀತ ಪದ್ಧತಿ; ಭಾರತೀಯ ಸಂಗೀತ ಪದ್ಧತಿಗಳಿಗೆ ಆಧಾರವಾಗಿದೆ. ಬಹುಶಃ ದಕ್ಷಿಣ ಭಾರತದಲ್ಲಿಯೂ ಸ್ಥಳೀಯ ಸಂಗೀತ ರೀತಿಯೊಂದು ಬಳಕೆಯಲ್ಲಿದ್ದು ಇದನ್ನೂ ಒಳಗೊಂಡು ಮುಂದಿನ ಭಾರತೀಯ ಸಂಗೀತ ಮಾರ್ಗ ಬೆಳೆದಂತೆ ತೋರುತ್ತದೆ. ಉದಾಹರಣೆಗೆ ಭರತನ ನಾಟ್ಯಶಾಸ್ತ್ರದಲ್ಲಿ [೧] ಸು.4ನೆಯ ಶತಮಾನ ಗಾಯನ ವಾದನ ರಸ ಅಲಂಕಾರ ಮುಂತಾದ ಎಲ್ಲ ಸಂಗೀತಗಳಿಗೂ ಸಾಮಾನ್ಯವಾದ ವಿಷಯಗಳಿದ್ದರೆ ಸು.4-5ನೆಯ ಶತಮಾನದಲ್ಲಿದ್ದ ಮತಂಗನ ಬೃಹದ್ದೇಶೀ ಎಂಬ ಪ್ರಮಾಣ ಗ್ರಂಥ ದಕ್ಷಿಣ ಭಾರತದ ಸಂಗೀತವನ್ನು ವಸ್ತುವಾಗಿ ಗ್ರಹಿಸಿ, ಭರತ ಹೇಳುವ ಸಂಗೀತ ಜಾತಿಗಳ ಬದಲು ರಾಗ ಸಂಗೀತದ ವಿಷಯವನ್ನು ಮೊಟ್ಟಮೊದಲಿಗೆ ಪ್ರತಿಪಾದಿಸುತ್ತದೆ. ರಾಗಗಳನ್ನು ಶುದ್ಧ, ಸಂಕೀರ್ಣವೆಂದು ವಿಭಾಗ ಮಾಡಿ ಶ್ರುತಿ, ಸ್ವರ, ವರ್ಣ, ಅಲಂಕಾರ ಮುಂತಾದ ಹಲವು ವಿವರಗಳನ್ನು ಮತಂಗ ನಿರೂಪಿಸಿದ್ದಾನೆ. ಅನೇಕ ವಾದ್ಯಗಳ ವಿಚಾರವಾಗಿ ತುಂಬ ಸ್ವಾರಸ್ಯವಾದ ವಿವರಗಳನ್ನು ನೀಡುತ್ತಾನೆ. ಬಹುಶಃ ಇವನು ಕನ್ನಡ ನಾಡಿನವನು. ಇವನ ಗ್ರಂಥದಲ್ಲಿ ಕನ್ನಡ ಪ್ರಬಂಧಗಳನ್ನೂ ಹೇಳಿದೆ. ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಸಂಗೀತಕ್ಕೆ ವಿಶೇಷವಾದ ಮನ್ನಣೆ ಯಿತ್ತೆಂಬುದು ಹಲವು ಶಾಸನ ಸಾಹಿತ್ಯ ಉಲ್ಲೇಖಗಳಿಂದ ತಿಳಿಯುತ್ತದೆ. ತಾಳಗುಂದ ಶಾಸನದಲ್ಲಿ ಕದಂಬ ಶಾಂತಿವರ್ಮನ ವೈಭವವನ್ನು ವರ್ಣಿಸುತ್ತಾ ಅವನ ಮನೆ ಸಂಗೀತದ ಧ್ವನಿಯಿಂದ ತುಂಬಿಹೋಗಿದ್ದಿತೆಂದು ಹೇಳಿದೆ (ನಾನಾ ವಿಧ ದ್ರವಿಣಸಾರಸಮುಚ್ಚಯೇಷು ದ್ವಿಪೇಂದ್ರಮದವಾಸಿಕಗೋಪುರೇಷು ಸಂಗೀತವಲ್ಗು ನಿನದೇಷು ಗೃಹೇಷು). ಪಟ್ಟದಕಲ್ಲಿನ ದೇವಸ್ಥಾನದ ಕಂಬದ ಮೇಲಿನ ಸು.850ರ ಶಾಸನವೊಂದರಲ್ಲಿ ಒಬ್ಬ ಶ್ರೇಷವಿ ನಟನ ಪ್ರಶಂಸೆ ಇದೆ. ಸ್ತ್ರೀಯರ ವಿದ್ಯಾಭ್ಯಾಸದಲ್ಲಿ ಸಂಗೀತ, ನರ್ತನ ಮುಂತಾದ ಕಲೆಗೆ ಹೆಚ್ಚು ಪ್ರಾಧ್ಯಾನವಿದ್ದುದು ತಿಳಿಯಬರುತ್ತದೆ. ಉದಯಸಿಂಹ ಎಂಬವನು ಕದಂಬ ಗೀತ ವಾದ್ಯ ನೃತ್ಯ ವೇಣು ವೀಣಾರವ ಸಂಗತ ಪಾಟಕ ವಿಜೃಂಭಿತ ಆಸ್ಥಾನ ಕಾವ್ಯನಾಟಕ ವಿಚಾರ ಪ್ರಸಂಗನಾಗಿದ್ದನೆಂದು 1017ರ ಒಂದು ಶಾಸನ ಹೊಗಳಿದೆ. ಹೊಯ್ಸಳ ವಿಷ್ಣುವರ್ಧನನ ಪತ್ನಿ ಶಾಂತಲೆಯನ್ನು ಅನೇಕ ಶಾಸನಗಳು ಸಂಗೀತವಿದ್ಯಾಸರಸ್ವತಿ, ವಿಚಿತ್ರನರ್ತನ ಪಾತ್ರ ಶಿಖಾಮಣಿ, ಸಕಳಕಳಾಗಮಾನೂನೆ, ಗೀತವಾದ್ಯನೃತ್ಯಸೂತ್ರಧಾರೆ ಎಂದು ವರ್ಣಿಸಿವೆ. ಹಲವು ಅಗ್ರಹಾರಗಳ ಮಹಾಜನರು ಸಂಗೀತಕಲಾ ನಿಪುಣರಾಗಿದ್ದುದನ್ನೂ ದೇವಾಲಯಗಳಲ್ಲಿ ಗೀತವಾದ್ಯ ನೃತ್ಯದವರಿಗಾಗಿ ದತ್ತಿಗಳನ್ನು ಕೊಟ್ಟದ್ದನ್ನೂ ಶಾಸನಗಳಲ್ಲಿ ಹೇಳಿದೆ. ಪಂಪ, ಪೊನ್ನ, ರನ್ನ,ಜನ್ನ ಮೊದಲಾದವರು ರಚಿಸಿರುವ ಕನ್ನಡ ಸಾಹಿತ್ಯ ಗ್ರಂಥಗಳಲ್ಲಿ ಸಂಗೀತ ಮತ್ತು ನೃತ್ಯಗಳ ವರ್ಣನೆಗಳು ಹೇರಳವಾಗಿ ದೊರಕುತ್ತವೆ. ಪಂಪನ ಆದಿಪುರಾಣದಲ್ಲಿ ವಾದ್ಯಗಳ ವರ್ಣನೆ, ನೃತ್ಯದ ವರ್ಣನೆಗಳು ಸುಂದರವಾಗಿವೆ. ಪೊನ್ನನ ಶಾಂತಿಪುರಾಣದಲ್ಲಿ ಅಮರಿಯರ ನರ್ತನ ಅಪೂರ್ವ ಸಂಗೀತದಿಂದ ಕೂಡಿತ್ತೆಂಬ ಹೇಳಿಕೆಯಿದೆ. ರನ್ನನ ಅಜಿತಪುರಾಣದಲ್ಲಿ ಇಂದ್ರಜಿನಶಿಶುವಿನ ಪರಮೋತ್ಸವವನ್ನು ಮಾಡಿದ ಸಂದರ್ಭದಲ್ಲಿ ನಡೆದ ನೃತ್ಯ ನಾನಾವಿಧ ಗೀತವಾದ್ಯಗಳೊಡನೆ ಶೃಂಗಾರಾದಿ ನವರಸಗಳಿಂದ ಕೂಡಿದ್ದು ಸಪ್ತ ಸ್ವರಗಳನ್ನು ನಾನಾ ಭೇದಗಳಿಂದ ಧ್ವನಿತವಾಗುವಂತೆ ಮಾಡಿ ದಿಶಾವನಿತೆಯರು ಶೋಭಿಸುತ್ತಿದ್ದರೆಂದು ವರ್ಣಿಸಿದೆ. ಅಭಿನವಪಂಪನ ಮಲ್ಲಿನಾಥಪುರಾಣದಲ್ಲಿ ಶರತ್ಸಮಯ ವರ್ಣನೆಯಲ್ಲಿ ವೇಣುಗಾನಲೋಲನು ತ್ರಿಸ್ಥಾನಶುದ್ಧಿಯಿಂದ ಹಾಡಿದಾಗ ಸಭಿಕರು ಮೈ ಮರೆತು ರಾಗರಸದಲ್ಲಿ ತಲ್ಲೀನರಾದಂತೆ ವರ್ಣಿಸಿದೆ. ಕಣ್ಣಪ್ಪ ಹಾಡುತ್ತ, ಕುಣಿಯುತ್ತ ಈಶ್ವರನನ್ನು ಕೂಗಿದಂತೆ ಹರಿಹರ ವರ್ಣಿಸಿದ್ದಾನೆ. ನೇಮಿಚಂದ್ರನ ಲೀಲಾವತೀಪ್ರಬಂಧದಲ್ಲಿ ಓರ್ವ ಪ್ರೌಢೆ ತಾಳಲಯ ಗಳಿಗನುಗುಣವಾಗಿ ಮನೋಹರವಾಗಿ ವೀಣೆಯನ್ನು ನುಡಿಸಿದಳೆಂದು ವರ್ಣಿಸಿದೆ. ಅಗ್ಗಳನ ಚಂದ್ರಪ್ರಭಪುರಾಣದಲ್ಲಿ ಗಾನವಿದ್ಯಾವಿಶಾರದನೊಬ್ಬ ತಾಳಸ್ವರಲಯಗಳಿಗನುಗುಣವಾಗಿ ವೀಣೆಯ ನಾದಕ್ಕನುಸಾರವಾಗಿ ಕರ್ಣಾನಂದಕರವಾಗಿ ಹಾಡಿದನೆಂದೂ ಸಂಗೀತದ ಗಂಧವನ್ನೇ ಅರಿಯದವರೂ ಸಂಗೀತ ಕಚೇರಿಯನ್ನು ಪ್ರವೇಶಿಸಿದ ಕೂಡಲೇ ತಮಗೂ ಹಾಡುವ ಮನೋಭಾವವನ್ನುಂಟುಮಾಡುವಂತೆ ಅಲ್ಲಿಯ ಸಂಗೀತವಿತ್ತೆಂದೂ ವಿವರಿಸಿದೆ. ಜನ್ನನ ಅನಂತನಾಥ ಪುರಾಣದಲ್ಲೂ ಸಂಗೀತದ ಬಗ್ಗೆ ಹೇಳಿಕೆಯಿದೆ. ಸೋಮರಾಜ ತನ್ನ ಉದ್ಭಟಕಾವ್ಯದಲ್ಲಿ ಗಾನವಿಶಾರದೆಯರು ಗಾನ ಮಾಡಿದುದನ್ನು ವರ್ಣಿಸಿದ್ದಾನೆ. ಗಾಯಕಿಯರು ಮನೋಹರವಾಗಿ ಹಾಡಲುದ್ಯುಕ್ತರಾಗಿ ನಾಟಿ, ಗೌಳ, ಸಾಳಗ, ಶ್ರೀ ಮೊದಲಾದ ನಾನಾವಿಧ ರಾಗ ಸಮೂಹದಿಂದ ಹಾಡಿ ಅಲ್ಲಿ ನೆರೆದಿದ್ದವರ ಮನ ಮೆಚ್ಚಿಸಿದರೆಂದು ಹೇಳಿದೆ. ಪ್ರಾಚೀನ ಕರ್ನಾಟಕದಲ್ಲಿ ಸಂಗೀತ ಜನಪ್ರಿಯವಾಗಿದ್ದು ವಿಶೇಷ ಪ್ರೋತ್ಸಾಹವನ್ನು ಗಳಿಸಿತ್ತೆಂಬುದನ್ನು ಶಾಸನಗಳು ಮತ್ತು ಸಾಹಿತ್ಯದ ಉಲ್ಲೇಖಗಳು ಸೂಚಿಸುತ್ತವೆ. ಇಂಥ ವಾತಾವರಣದಲ್ಲಿ ಅಂದಿನ ಸಂಗೀತದ ಶಾಸ್ತ್ರೀಯ ನಿರೂಪಣೆ ಮತ್ತು ವ್ಯವಸ್ಥೆ ಅನೇಕ ವಿದ್ವಾಂಸರಿಂದ ನೆರವೇರಿತು. ಸೋಮೇಶ್ವರ ಮಾನಸೋಲ್ಲಾಸದಲ್ಲಿ ಆ ಕಾಲದಲ್ಲಿ ಈ ದೇಶದಲ್ಲಿ ಪ್ರಚಲಿತವಾಗಿದ್ದ ಸಂಗೀತದ ಪ್ರಸ್ತಾಪವಿದೆ. ಇದರಲ್ಲಿ ವಿನೋದವಿಂಶತಿಯಮೂರು ಅಧ್ಯಾಯಗಳಲ್ಲಿ ಸಂಗೀತಶಾಸ್ತ್ರದ ವಿವರಣೆಗಳಿವೆ. ಪ್ರಾದೇಶಿಕ ರಾಗಗಳು, ಅವುಗಳ ಲಕ್ಷಣಗಳು ಮತ್ತು ಅನೇಕ ಪ್ರಬಂಧಗಳನ್ನು ದೃಷ್ಟಾಂತಗಳೊಡನೆ ವಿವರಿಸಿಲಾಗಿದೆ. ಸೋಮೇಶ್ವರನ ಮಗ ಎರಡನೆಯ ಜಗದೇಕಮಲ್ಲ ತನ್ನ ಸಂಗೀತಚೂಡಾಮಣಿ ಎಂಬ ಗ್ರಂಥದಲ್ಲಿ ನೂರಕ್ಕೂ ಮಿಗಿಲಾಗಿ ರಚನಾರೂಪಗಳನ್ನು ವಿವರಿಸಿದ್ದಾನೆ. ಮತ್ತೊಂದು ಮೇರುಕೃತಿ ಶಾರ್ಙಗದೇವನ ಸಂಗೀತ ರತ್ನಾಕರ. ಈತ ದೇವಗಿರಿಯ ಸೇವುಣ ದೊರೆ ಸಿಂಘಣನ (1199-1247) ಆಶ್ರಯದಲ್ಲಿ ಶ್ರೀಕರಣಿಕಾಗ್ರಣಿಯಾಗಿದ್ದ. ಈ ಗ್ರಂಥದಲ್ಲಿ ಸಂಗೀತದ ನಿಯಮಗಳನ್ನು ರೂಪಿಸಿದ್ದಾನೆ. ಈ ಗ್ರಂಥ ಹಿಂದಿನ ಕಾಲದ ಸಂಗೀತದ ಸ್ವರೂಪವನ್ನು ತಿಳಿಸುತ್ತದೆ. 74 ಪ್ರಬಂಧಗಳನ್ನು ವಿವರಿಸುವ ಈ ಸಂಗೀತ ರತ್ನಾಕರ ಭಾರತೀಯ ಪ್ರಾಚೀನ ಪ್ರಮಾಣಗ್ರಂಥಗಳಲ್ಲಿ ಅತಿ ಮುಖ್ಯವಾದುದು. ಈ ಕೃತಿ ಸಂಗೀತ ಶಾಸ್ತ್ರಕ್ಕೆ ಭದ್ರವಾದ ಬುನಾದಿ ಹಾಕಿತೆಂದರೆ ತಪ್ಪಾಗದು. ಶಾರ್ಙಗದೇವನ ಸಂಗೀತ ರತ್ನಾಕರಕ್ಕೆ ಸುಧಾಕರವೆಂಬ ಟೀಕೆಯನ್ನು 1330ರ ಸುಮಾರಿಗಿದ್ದ ಸಿಂಹಭೂಪಾಲ ಬರೆದಿದ್ದಾನೆ. ಈ ದೇಶದಲ್ಲಿ ಸಂಗೀತಕ್ಕೆ ಇದ್ದ ವಿಶೇಷ ಪ್ರೋತ್ಸಾಹ ಹಾಗೂ ಜಗದೇಕಮಲ್ಲನಂಥ ಚಕ್ರವರ್ತಿಯೂ ಒಳಗೊಂಡಂತೆ ಹಲವು ಶಾಸ್ತ್ರಕಾರರ ಪರಿಶ್ರಮದಿಂದ ಕರ್ನಾಟಕ ದೇಶದಲ್ಲಿ ಒಂದು ವಿಶಿಷ್ಟ ಸಂಗೀತ ಪದ್ಧತಿ ಬೆಳೆಯಲು ಆರಂಭಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಈ ಸಂಗೀತ ಪದ್ಧತಿಯನ್ನೇ ಕರ್ಣಾಟಕ ಸಂಗೀತ ಎಂದು ಕರೆದಿರುವುದು ಸಹಜ. ಹದಿನಾಲ್ಕನೆಯ ಶತಮಾನದಲ್ಲಿ ಕರ್ನಾಟಕದಲ್ಲಿದ್ದ ಒಬ್ಬ ಲಕ್ಷಣಕಾರ ಹರಿಪಾಲದೇವ (1309-80) ‘ತದಪಿ ದ್ವಿವಿಧಂ ಪ್ರೋಕ್ತಂ ದಕ್ಷಿಣೋತ್ತರಭೇದತಃ | ಕರ್ಣಾಟಕಂ ದಕ್ಷಿಣೇ ಸ್ಯಾದ್ಹಿಂದುಸ್ತಾನೀ ತಥೋತ್ತರೇ’ ಎಂದು ಸ್ಪಷ್ಟವಾಗಿ ಅಂದಿಗೆ ಕರ್ಣಾಟಕ ಸಂಗೀತ ಎಂಬ ಪದ್ಧತಿ ರೂಢಿತವಾಗಿತ್ತೆಂದು ಹೇಳಿದ್ದಾನೆ.
ವಿಜಯನಗರದ ಅರಸರ ಕಾಲದಲ್ಲಿ ಕರ್ಣಾಟಕ ಸಂಗೀತ ಸ್ಪಷ್ಟ ರೂಪುರೇಖೆಗಳೊಡನೆ ವಿಶಿಷ್ಟ ಆವಿಷ್ಕಾರಗಳೊಡನೆ ರೂಪು ತಳೆಯಿತು. ಹಿಂದಿನ ಕಾಲದಲ್ಲಿದ್ದ ಜನಮನ್ನಣೆ ಅದೇ ಧಾಟಿಯಲ್ಲಿ ಮುಂದುವರಿದಿದ್ದು ಮತ್ತು ಅಂದಿನ ದೊರೆಗಳ ವಿಶೇಷ ಪ್ರೋತ್ಸಾಹ ಈ ಮುನ್ನಡೆಗೆ ಕಾರಣ. ತತ್ಕಾಲೀನ ಸಾಹಿತ್ಯ ಗ್ರಂಥಗಳಲ್ಲಿ ಬರುವ ಹಲವು ಉಲ್ಲೇಖಗಳು ಸಂಗೀತ ಅಂದು ಜನಪ್ರಿಯವಾಗಿತ್ತೆಂಬುದನ್ನೂ ಶಾಸ್ತ್ರಬದ್ಧವಾಗಿತ್ತೆಂಬುದನ್ನೂ ಸೂಚಿಸುತ್ತವೆ. ಚಂದ್ರಶೇಖರ ಕವಿಯಿಂದ ರಚಿತವಾದ ಪಂಪಾಸ್ಥಾನವರ್ಣನಂ ಕಾವ್ಯದಲ್ಲಿ ಗಾಯಕರು ದಂಡಿಗೆಯನ್ನು ತೆಗೆದುಕೊಂಡು ಶಾರೀರಕ್ಕೆ ತಕ್ಕಂತೆ ಮೇಳೈಸಿ ಗ್ರಾಮ ಮೂರ್ಛನೆ ಪಂಚವಿಧಗಮಕಗಳನ್ನು ತ್ರಿಸ್ಥಾಯಿದಲ್ಲೂ ನೆಲೆಗೊಳಿಸಿ ರಂಜಿಸುವಂತೆ ರಾಗಾಲಾಪವನ್ನೂ ಅನೇಕ ತಾಳಗಳಿಗನು ಗುಣವಾಗಿ, ದೋಷ ರಹಿತವಾದ ರಾಗಗಳನ್ನೂ ಹಾಡಿದರೆಂಬುದರ ವರ್ಣನೆ, ಪಕ್ಕವಾದ್ಯಗಳ ವರ್ಣನೆ, ಮದ್ದಳೆಯನ್ನು ನುಡಿಸುವ ಚಿತ್ರ ಮನೋಜ್ಞವಾಗಿ ನಿರೂಪಿತವಾಗಿದೆ. ಅನೇಕ ವಾದ್ಯಗಳ ವಾದನಕ್ರಮವನ್ನು ಈ ಗ್ರಂಥದಲ್ಲಿ ಮನನಾಟುವಂತೆ ವರ್ಣಿಸಿದೆ. ಸು.1500ರಲ್ಲಿ ನಿಜಗುಣಶಿವಯೋಗಿಯಿಂದ ರಚಿತವಾದ ವಿವೇಕ ಚಿಂತಾಮಣಿಯಲ್ಲಿ ಸ್ವರೋತ್ಪತ್ತಿಕ್ರಮ, ರಾಗೋತ್ಪತ್ತಿಲಕ್ಷಣ, ವಿಪಂಚಿ ಮೊದಲಾದ ವಿವಿಧ ವೀಣೆಗಳು, ಪ್ರಸಿದ್ಧ ರಾಗಗಳು ಮೊದಲಾದವುಗಳನ್ನು ಕುರಿತ ವಿವರಣೆಯಿದೆ. ನಾರದ ವೀಣೆಯಲ್ಲಿ ಹಲವಾರು ರಾಗಗಳನ್ನು ನುಡಿಸಿ ವಿಶ್ವೇಶ್ವರನನ್ನು ಕುರಿತು ಹಾಡಿದಂತೆ ವೀರಭದ್ರ ಕವಿಯ ವೀರಭದ್ರವಿಜಯದಲ್ಲಿ ವರ್ಣಿಸಿದೆ. ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣದಲ್ಲಿ ಶಂಭು ಅಂಧಕಾಸುರನ ಸ್ತೋತ್ರಕ್ಕೆ ಮೆಚ್ಚಿ ಅವನ ಬೇಡಿಕೆಯನ್ನು ಮನ್ನಿಸಿ ತಾಂಡವನೃತ್ಯವನ್ನಾಡಿದಾಗ ನಂದಿ ಬಹ್ಮಾದಿಗಳು ಮೃದಂಗ ತಾಳಗಳನ್ನೂ ನಾರದ ತುಂಬುರರು ವೀಣೆ ದಂಡಿಗಳನ್ನೂ ನುಡಿಸಿದರೆಂಬ ಸುಂದರ ವರ್ಣನೆಯಿದೆ. ರತ್ನಾಕರವರ್ಣಿಯ ಭರತೇಶವೈಭವದಲ್ಲಿ ಪೂರ್ವನಾಟಕ ಸಂಧಿಯಲ್ಲಿ ಬರುವ ನಾಟ್ಯದವರ್ಣನೆ, ಉತ್ತರನಾಟಕ ಸಂಧಿಯಲ್ಲಿ ಬರುವ ಹಂಸಮಂಡಳೆ ಎಂಬ ನರ್ತನ, ತಾಂಡವವಿನಯ ಸಂಧಿಯಲ್ಲಿ ಬರುವ ವಿವಿಧ ವೇಷಗಳಿಂದ ಕೂಡಿದ ನೃತ್ಯಗಳ ವರ್ಣನೆಗಳು ಬಹು ಮನೋಜ್ಞವಾಗಿದ್ದು ಕರ್ಣಾಟಕ ಸಂಗೀತ ಮತ್ತು ನಾಟ್ಯಗಳ ಪ್ರೌಢಾವಸ್ಥೆಯನ್ನು ತಿಳಿಸುತ್ತವೆ. (ವಿ.ಎಸ್.ಎಸ್.)
ಕರ್ನಾಟಕ ಸಿಂಹಾಸನಾಧೀಶ್ವರರಾದ ವಿಜಯನಗರದ ಅರಸರ ಕಾಲದಲ್ಲಿ ಅವರ ಪ್ರೋತ್ಸಾಹದ ನೆರಳಿನಲ್ಲಿ ಈ ನಾಡಿನ ಸಂಗೀತದ ಶಾಸ್ತ್ರೀಯ ನಿರೂಪಣೆ ಹೆಚ್ಚಿನ ಮಟ್ಟಿಗೆ ಸಾಗಿತಾಗಿ ಇದೇ ಈ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎಂಬ ಹೆಸರು ಬರಲು ಕಾರಣವಾಯಿತು ಎಂಬ ಊಹೆ ಇದೆ. ಅದರಲ್ಲೂ ಕರ್ಣಾಟಕ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ದಕ್ಷಿಣಾದಿ ಸಂಗೀತವನ್ನು ಪುನರುತ್ಥಾನ ಮಾಡಿದ ಮಹಾಮಹಿಮರು ಸಂಗೀತಸಾರವೆಂಬ ಗ್ರಂಥ ಬರೆದು ಈಗ ಅನುಪಲಬ್ಧ ಕರ್ಣಾಟಕ ಸಂಗೀತವೆಂದು ದಕ್ಷಿಣಾದಿ ಸಂಗೀತ ನೆಲೆಗೊಳ್ಳಲು ಅಂಕುರಾರ್ಪಣ ಮಾಡಿದವರು. ಇವರು ಆರಂಭಿಸಿದ ಅಥವಾ ಸ್ಫುಟಪಡಿಸಿದ ಸಂಗೀತ ಪದ್ಧತಿಯನ್ನು ಕರ್ಣಾಟಕ ಸಂಗೀತವೆಂದು ಜನ ಕರೆದಿದ್ದಿರಬಹುದು ಎಂಬ ಹೇಳಿಕೆಯೂ ಇದೆ.
ವಿದ್ಯಾರಣ್ಯರು ತಮ್ಮ ಸಂಗೀತಸಾರದಲ್ಲಿ ಹದಿನೈದು ಮೇಳ ರಾಗಗಳನ್ನು ಹೇಳಿ ಐವತ್ತು ಪ್ರಚುರ ಪ್ರಯೋಗಗಳುಳ್ಳ ರಾಗಗಳನ್ನ ಳವಡಿಸಿದ್ದಾರೆಂದು ಗೋವಿಂದ ದೀಕ್ಷಿತ ತನ್ನ ಸಂಗೀತಸುಧೆಯಲ್ಲಿ (1614) ಹೇಳುತ್ತಾನೆ. ಕರ್ನಾಟಕ ಭಾಗ್ಯ ವಿದ್ಯಾರಣ್ಯ ಶ್ರೀಚರಣಾಗ್ರಣೇಭ್ಯಃ ಆರಭ್ಯರಾಗಾನ್ ಪ್ರಚುರ ಪ್ರಯೋಗಾನ್ ಪಂಚಾಶತಂ ಚ ಕಲಯೇ ಷಡಂಗಾನ್ - ಎಂಬುದು ಅವನ ಮಾತು. ರಾಗವಿಬೋಧದಲ್ಲಿ (1609) 960 ಮೇಳರಾಗಗಳ ಪದ್ಧತಿಯನ್ನು ನಿರೂಪಿಸಿರುವ ಸೋಮನಾಥನಿಂದ ಈ ಮೇಳ ಪದ್ಧತಿ ಆರಂಭವಾಯಿತೆಂದು ಇತ್ತೀಚಿನ ವರೆಗೂ ಎಣಿಕೆಯಿದ್ದಿತು. ಆದರೆ ಮೇಳರಾಗಗಳ ನಿರ್ದೇಶ ಮಾತ್ರವಲ್ಲದೆ ವಿದ್ಯಾರಣ್ಯರು ತಮ್ಮ ಗ್ರಂಥದಲ್ಲಿ ರಾಗಾಲಾಪನೆಯ ವಿಧಿಗಳನ್ನೂ ನಿರೂಪಿಸಿದ್ದಾರೆಂದು ದೀಕ್ಷಿತನಿಂದ ತಿಳಿದುಬರುತ್ತದೆ.
ದೇವರಾಯನ ಆಳಿಕೆಯ (ಸು.1446-65) ಕಾಲದಲ್ಲಿದ್ದು, ಅಭಿನವಭರತಾಚಾರ್ಯ, ರಾಯವಾಗ್ಗೇಯಕಾರ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದ ಕಲ್ಲಿನಾಥನೆಂಬ ವಿದ್ವಾಂಸ ಶಾರ್ಙಗದೇವನ ಕೃತಿಗೆ ಕಲಾನಿಧಿಯೆಂಬ ಟೀಕೆಯನ್ನು ಬರೆದ. ಈತ ತುಂಬ ಪ್ರತಿಭಾಶಾಲಿ, ಪ್ರಭಾವಶಾಲಿ. ಒಂದು ಕಾಲಕ್ಕೆ ಸಂಗೀತ ಪ್ರಪಂಚದಲ್ಲಿ ಹನೂಮನ್ಮತ, ನಾರದಮತ, ಸೋಮೇಶ್ವರಮತಗಳಿದ್ದಂತೆ ಕಲ್ಲಿನಾಥಮತವೆಂಬ ವಿಶಿಷ್ಟವಾದ ಸಂಪ್ರದಾಯವೇ ಇತ್ತು. ತಾಳದೀಪಿಕೆಯನ್ನು ಬರೆದ ಗೋಪೇಂದ್ರ ತಿಪ್ಪಭೂಪಾಲ (ಸು.1423-46) ಸಂಗೀತ ಶಾಸ್ತ್ರವನ್ನು ಸ್ಫುಟಗೊಳಿಸಲು ಯತ್ನಿಸಿದ. ಇವನ ವ್ಯಾಖ್ಯೆಯಿಂದ ಆ ಕಾಲಕ್ಕೆ ವಿಜಯನಗರದಲ್ಲಿ ಶಾಸ್ತ್ರೀಯ ಸಂಗೀತ ವಿಶೇಷವಾಗಿ ಜನಪ್ರಿಯವಾಗಿದ್ದಿತೆಂದು ತಿಳಿದುಬರುತ್ತದೆ. ಕೃಷ್ಣದೇವರಾಯನ ಕಾಲದಲ್ಲಿ ಸಂಗೀತ ಸೂರ್ಯೋದಯ ಎಂಬ ಸಂಸ್ಕೃತ ಸಂಗೀತ ಶಾಸ್ತ್ರಗ್ರಂಥ ಬೆಳಕು ಕಂಡಿತು. ರಾಣಿವಾಸದವರಿಗೆ ನಾಟ್ಯಾಚಾರ್ಯನಾಗಿದ್ದ ಬಂಧಂ ಲಕ್ಷ್ಮೀನಾರಾಯಣ ಈ ಗ್ರಂಥದ ಕರ್ತೃ. ದಕ್ಷಿಣಾದಿ ಸಂಗೀತದ ಸ್ವರೂಪವನ್ನು ಚಿತ್ರಿಸುವ ಮತ್ತೊಂದು ಗ್ರಂಥ ಸ್ವರ ಮೇಳಕಳಾನಿಧಿ. ವಿಜಯನಗರದ ರಾಮರಾಯನಿಗೆ ಅಮಾತ್ಯನಾಗಿದ್ದ ರಾಮಾಮಾತ್ಯ ಈ ಗ್ರಂಥದ ಕರ್ತೃ. ತನ್ನ ಗ್ರಂಥದಲ್ಲಿ (ಸು.1550) ಇಪ್ಪತ್ತು ಮೇಳಗಳನ್ನು ನಮೂದಿಸಿ, ರಾಗಗಳನ್ನು ಉತ್ತಮ, ಮಧ್ಯಮ ಮತ್ತು ಅಧಮಗಳೆಂದು ವರ್ಗೀಕರಿಸಿದ್ದಾನೆ. ವೀಣಾವಾದ್ಯದ ವಿವರಣೆಗೆ ಒಂದು ಅಧ್ಯಾಯವನ್ನೇ ಬರೆದಿದ್ದಾನೆ. ಸ್ವರಮೇಳಕಳಾನಿಧಿ ಕರ್ಣಾಟಕ ಸಂಗೀತದಲ್ಲಿ ಕ್ರಾಂತಿಯನ್ನು ತಂದ ಗ್ರಂಥ. ಆ ಕಾಲಕ್ಕೆ ಸಂಗೀತಶಾಸ್ತ್ರದಲ್ಲಿ ಲಕ್ಷ್ಯ, ಲಕ್ಷಣಗಳ ವಿಷಯದಲ್ಲಿ ವಿಶೇಷವಾದ ಗೊಂದಲವಿದ್ದುದರಿಂದ ಇವುಗಳನ್ನು ಸಮೀಕರಿಸಿ ಗ್ರಂಥರಚನೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಇವನು ಪ್ರಯೋಗದ ದೃಷ್ಟಿಯನ್ನೇ ಹಿಡಿದು ಪ್ರಚುರವಾಗಿದ್ದ ಎಲ್ಲ ದೇಶೀ ರಾಗಗಳನ್ನೂ ಇಪ್ಪತ್ತು ಮೇಳಗಳಲ್ಲಿ ಅಡಕಮಾಡಲು ಯತ್ನಿಸಿದ. ಹಿಂದಿನ ಕಾಲದಿಂದ ಬಂದಿದ್ದ ಗ್ರಾಮಮೂರ್ ಪದ್ಧತಿಯಿಂದ ರಾಗಗಳನ್ನು ಹಿಡಿಯುವ, ಹೆಸರಿಸುವ ಹುಟ್ಟಿಸುವ ಪದ್ಧತಿಯನ್ನು ಧೈರ್ಯದಿಂದ ಬದಿಗಿಟ್ಟಾತ ರಾಮಾಮಾತ್ಯ ಈ ಪದ್ಧತಿ ಲಕ್ಷಣಪ್ರಧಾನವಾದದ್ದು. ಮೇಳವೆಂಬ ಮಾತಿಗೆ ಹಿರಿಮೆ ಕೊಟ್ಟವರಲ್ಲಿ ರಾಮಾಮಾತ್ಯ ಮೊದಲಿಗ. ಇವನ ಗ್ರಂಥದಲ್ಲಿ ಮೇಳ ಪ್ರಕರಣವೆಂಬ ಪ್ರತ್ಯೇಕವಾದ ಪರಿಚ್ಫೇದವೇ ಇದೆ. ಆದರೆ ಇವನ ಗಮನವೆಲ್ಲ ಲಕ್ಷ್ಯದ ಕಡೆಗೇ ಇತ್ತು. ಇದೇ ಕಾಲದಲ್ಲಿದ್ದ ನಿಜಗುಣಶಿವಯೋಗಿ ತನ್ನ ವಿವೇಕಚಿಂತಾಮಣಿಯಲ್ಲಿ ನಾಲ್ಕನೆಯ ಅಧ್ಯಾಯವನ್ನು ಸಂಗೀತಶಾಸ್ತ್ರದ ನಿರೂಪಣೆಗೆ ವಿನಿಯೋಗಿಸಿರುವುದಲ್ಲದೆ ಪಲ್ಲವಿ ಮತ್ತು ಚರಣಗಳನ್ನುಳ್ಳ ಸಹಸ್ರಾರು ಶೈವಪರ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾನೆ. ಈ ಕೀರ್ತನೆಗಳೊಂದರಿಂದ ಆ ಕಾಲದ ವೀಣೆಗೆ ಹದಿನಾರು ಮೆಟ್ಟಲುಗಳು ಇದ್ದವೆಂದು ತಿಳಿಯುತ್ತದೆ. "ವಿವೇಕಚಿಂತಾಮಣಿ" ದಕ್ಷಿಣಾದಿ ಸಂಗೀತಶಾಸ್ತ್ರವನ್ನು ಕನ್ನಡದಲ್ಲಿ ತಿಳಿಸುವ ಮೊತ್ತಮೊದಲ ಗ್ರಂಥ.
ವಿಜಯನಗರದ ಪತನಾನಂತರ ತಮಿಳುನಾಡಿನ ಕೊಡುಗೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ದಕ್ಷಿಣ ಕರ್ನಾಟಕದ ಹಲವು ಸಂಸ್ಥಾನಗಳು ಸಂಗೀತ ಪ್ರೋತ್ಸಾಹವನ್ನು ಮುಂದುವರಿಸಿದವು. ಮಾಗಡಿ ಕೆಂಪೇಗೌಡ ಸಂಗೀತಪ್ರಿಯನಾಗಿದ್ದಂತೆ ತೋರುತ್ತದೆ. ವಿಜಯನಗರದ ಸಂಪ್ರದಾಯಗಳನ್ನು ಮೈಸೂರಿನ ಒಡೆಯರು ಪೋಷಿಸಿ ಮುಂದುವರಿಸಿದರು. ಐದನೆಯ ಚಾಮರಾಜ ಒಡೆಯರು ಚತುಷ್ಷಷಿವಿ ಕಲಾಪರಿಣತರಾಗಿದ್ದರು. ಕಂಠೀರವ ನರಸಿಂಹರಾಜ ಒಡೆಯರ ನಿತ್ಯದೋಲಗದಲ್ಲಿ ನಾಟ್ಯ,ತಂಬೂರ, ವೀಣಾದಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಿತು. ಅವರ ಆಸ್ಥಾನದಲ್ಲಿ ಸಂಗೀತಕೋವಿದೆಯರಿದ್ದರು. ಅವರು ಸ್ವತಃ ಸಂಗೀತಸಾಹಿತ್ಯಶಾಸ್ತ್ರ ವಿಶಾರದರು. ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ ಸಂಗೀತ ಗಾನ ವಾದ್ಯ ನಾಟ್ಯಗಳು ಪ್ರೋತ್ಸಾಹಿತವಾಗಿದ್ದುವು. ಇಲ್ಲಿ ವೀಣಾವಾದನ ತತ್ವಲಯಜ್ಞಾನಕುಶಲ ಕಲಾವಿದರಿದ್ದರು. ಇವರು ಸಂಗೀತಸಾರಜ್ಞರೇ ಆಗಿದ್ದರು. ಚಿಕ್ಕದೇವರಾಜ ಒಡೆಯರು ವೈಣಿಕರೊಳು ಪ್ರವೀಣರಾಗಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರು ಸಂಗೀತಶಾಸ್ತ್ರ ಸಂಪ್ರದಾಯಗಳಲ್ಲಿ ನಿಶ್ಚಿತ ಯೋಗ್ಯತೆಯನ್ನು ಪಡೆದಿದ್ದ ವಿದ್ವಾಂಸರಾಗಿದ್ದು ಸ್ವತಃ ಕೆಲವು ಗೇಯ ಕೃತಿಗಳನ್ನು ರಚಿಸಿದ್ದಲ್ಲದೆ ಬಹುಮಂದಿ ಸಂಗೀತ ವಿದ್ವಾಂಸರಿಗೆ ಉದಾರ ಆಶ್ರಯ ಕೊಟ್ಟಿದ್ದರು. ಹಾಗೆಯೇ 9ನೆಯ ಚಾಮರಾಜ ಒಡೆಯರವರೂ ಕಲಾಪ್ರೇಮಿಯಾಗಿದ್ದು ಕಲೆಯನ್ನು ಪೋಷಿಸುತ್ತಾ ಬಂದರು. ಅನಂತರ ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರು (1895-1940) ರಸಾಭಿಜ್ಞರಾಗಿದ್ದು ಸಂಗೀತಾದಿ ಕಲೆಗಳಿಗೆ ಉದಾರ ಪೋಷಣೆ ನೀಡಿ ಮೈಸೂರನ್ನು ತಂಜಾವೂರಿಗೆ ಸಮನಾಗಿ ಮಾಡಿದರು. ಇವರ ಆಸ್ಥಾನ ಅನೇಕ ವೈಣಿಕರು, ಗಾಯಕರು, ನಾಟ್ಯಕಲಾಪ್ರವೀಣರಿಂದ ಶೋಭಿಸುತ್ತಿತ್ತು. ಜಯಚಾಮರಾಜರೂ ಸಂಗೀತ ಪೋಷಕರಾಗಿದ್ದರು.
ಈ ಕಾಲದ ಶಾಸ್ತ್ರಗ್ರಂಥಕರ್ತರಲ್ಲಿ ಬೆಂಗಳೂರು ಜಿಲ್ಲೆಯ ಶಿವಗಂಗೆಯ ಸಮೀಪದ ಸಾತನೂರಿನ "ಪುಂಡರೀಕ ವಿಠಲ" (ಸು.1562-91) ಮುಖ್ಯನಾದವನು. ಬುರ್ಹಾನ್ ಖಾನನ ಆಹ್ವಾನದ ಮೇಲೆ ಖಾನ್ದೇಶಕ್ಕೆ ಹೋಗಿ ಷಡ್ರಾಗ ಚಂದ್ರೋದಯ, ರಾಗಮಾಲಾ, ರಾಗಮಂಜರಿ, ನರ್ತನನಿರ್ಣಯ ಎಂಬ ನಾಲ್ಕೂ ಸಂಗೀತ ಗ್ರಂಥಗಳನ್ನು ರಚಿಸಿದ್ದಾನೆ. ಪುಂಡರೀಕವಿಠಲ ಉತ್ತರಾದಿ ದಕ್ಷಿಣಾದಿ ಸಂಗೀತಗಳೆರಡರಲ್ಲೂ ನಿಷ್ಣಾತನಾಗಿದ್ದ. ತಂಜಾವೂರಿನ ಅರಸು ರಘುನಾಥನಾಯಕನ ಆಳ್ವಿಕೆಯಲ್ಲಿ (ಸು.1614-28) ಮಂತ್ರಿಯಾಗಿದ್ದು ಸಂಗೀತಸುಧೆ ಎಂಬ ಪ್ರಖ್ಯಾತ ಗ್ರಂಥವನ್ನು ಬರೆದ ಗೋವಿಂದ ದೀಕ್ಷಿತನೂ ಕನ್ನಡದವನೇ, ಕರ್ನಾಟಕ ಸ್ಮಾರ್ತ ಬ್ರಾಹ್ಮಣ. ಈಗ ಪ್ರಚುರವಾಗಿರುವ ವೀಣೆಯ ಸ್ವರೂಪವನ್ನು ಸಿದ್ಧಮಾಡಿಕೊಟ್ಟವ ಇವನೇ (ಈ ಕೆಲಸ ತಂಜಾವೂರಿನಲ್ಲಿ ನಡೆದಿದ್ದು ಆದ್ದರಿಂದ ವೀಣೆಗೆ ತಂಜಾವೂರು ವೀಣೆಯೆಂದು ಹೆಸರಾಯಿತು). ಇವನ ಮಗ ವೆಂಕಟಮಖಿ (ವೆಂಕಟೇಶ್ವರ ದೀಕ್ಷಿತ) ಮೇಳ ಪದ್ಧತಿಯನ್ನು ಮುಂದುವರಿಸಿ ತನ್ನ ಚತುರ್ದಂಡಿ ಪ್ರಕಾಶಿಕೆಯಲ್ಲಿ (ಸು.1620) ಎಪ್ಪತ್ತೆರಡು ಮೇಳಕರ್ತ ರಾಗಗಳ (ಮೂಲಪದ ಮೇಳಕರ್ತೃ ಎಂದು) ವಿಭಜನೆಯನ್ನು ಮಾಡಿಕೊಟ್ಟಿದ್ದಾನೆ. ತಂಜಾವೂರಿನ ವಿಜಯರಾಘವ ನಾಯಕನ ಆದೇಶದ ಮೇಲೆ ಬರೆದ ಈ ಪ್ರಸಿದ್ಧ ಗ್ರಂಥ ಕರ್ಣಾಟಕ ಸಂಗೀತಕ್ಕೆ ಸ್ಪಷ್ಟವಾದ ಕಟ್ಟಡವನ್ನು ಕಟ್ಟಿಕೊಟ್ಟಿತು. ಎಲ್ಲ ರಾಗಗಳನ್ನು ನುಡಿಸಲು ಅನುಕೂಲವಾಗುವಂತೆ ಮೇಳದ ಮೆಟ್ಟಲುಗಳನ್ನು ಮೇಣದಲ್ಲಿ ಸ್ಥಿರವಾಗಿರಿಸಿದ ಇಂದಿನ ವೀಣೆ ಈತನ ಕಲ್ಪನೆಯಂತೆ. ಇವನ ಗ್ರಂಥದ ಹೆಸರಿನಲ್ಲಿ ಬರುವ ಚತುರ್ದಂಡಿಯೆಂದರೆ ಗೀತ, ಆಲಾಪ, ಲಯ ಮತ್ತು ಪ್ರಬಂಧ - ಇವು ರಾಗ ಹರಿಯುವ ನಾಲ್ಕು ದಾರಿಗಳು. ಈ ಗ್ರಂಥದಲ್ಲಿ ವೀಣೆ, ಶ್ರುತಿ, ಸ್ವರ, ಮೇಳ, ರಾಗ, ಆಲಾಪ, ಠಾಯ,ಗೀತ ಪ್ರಬಂಧಗಳನ್ನು ವಿವರಿಸುವ ಪರಿಚ್ಫೇದಗಳಿವೆ. ತಾಳ ಪ್ರಕರಣ ಉಪಲಬ್ಧವಿಲ್ಲ. ಈತ ರಾಗಾಂಗ ಉಪಾಂಗ ಭಾಷಾಂಗ ರಾಗಗಳಿಗೆ ಶ್ಲೋಕರೂಪದಲ್ಲಿ ಲಕ್ಷಣವನ್ನು ಗೀತ ರೂಪದಲ್ಲಿ ಲಕ್ಷ್ಯವನ್ನು ನಿರೂಪಿಸಿದ್ದಾನೆ. ಅನಂತರದಲ್ಲಿ ಉಲ್ಲೇಖನೀಯ ಶಾಸ್ತ್ರ ಗ್ರಂಥಗಳಾವುವೂ ಹುಟ್ಟಲಿಲ್ಲವೆಂದು ತೋರುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ತಚ್ಚೂರು ಶಿಂಗರಾಚಾರ್ಯರೆಂಬುವರು ತಮ್ಮ ಸಹೋದರ ಹಿರಿಯ ಶಿಂಗರಾಚಾರ್ಯರೊಡನೆ ಸೇರಿಕೊಂಡು ಸ್ವರಮಂಜರಿ, ಗಾಯಕ ಪಾರಿಜಾತಂ, ಸಂಗೀತಕಲಾನಿಧಿ, ಗಾಯಕ ಲೋಚನಂ, ಗಾಯಕ ಸಿದ್ಧಾಂಜನಂ, ಗಾನೇಂದು ಶೇಖರಂ, ಭಾಗವತ ಸಾರಾಮೃತಂ ಎಂಬ ಶಾಸ್ತ್ರಗ್ರಂಥಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಗೇಯ ಕೃತಿಗಳು
ಬದಲಾಯಿಸಿಸಂಗೀತ ಲಕ್ಷಣದ ಬಗ್ಗೆ ಹುಟ್ಟಿರುವ ಹಲವಾರು ಗ್ರಂಥಗಳು ಶಾಸ್ತ್ರದ ಪ್ರಾಗಲ್ಭ್ಯತೆಯನ್ನು ಸೂಚಿಸುತ್ತಿರುವಂತೆ ಗೇಯಕೃತಿಗಳ ರಚನೆಯೂ ವ್ಯಾಪಕವಾಗಿ ಆಗಿರಬೇಕು. ಇದರ ಬಗ್ಗೆಯೂ ಹಿಂದೆ ತಿಳಿಸಿರುವ ಹಲವಾರು ಶಾಸನ ಮತ್ತು ಸಾಹಿತ್ಯ ಉಲ್ಲೇಖಗಳು ಉತ್ತಮ ಸಾಕ್ಷಿಗಳಾಗಿವೆ. ಗ್ರಂಥಗಳಲ್ಲಿ ಲಕ್ಷಣದ ಜೊತೆಗೆ ಲಕ್ಷ್ಯಗಳನ್ನೂ ಬರೆಯುತ್ತಿದ್ದುದು ರೂಢಿ. ಹೀಗೆ ಸಂಗೀತರೂಪಗಳ ರಚನೆಯಲ್ಲೂ ಕರ್ನಾಟಕದ ಕೊಡುಗೆ ಹೇರಳವಾಗಿ ವೈವಿಧ್ಯದಿಂದ ಕೂಡಿದೆ. ಕರ್ನಾಟಕದಲ್ಲಿ ರೂಪಗೊಂಡ ರಚನೆಗಳ ಬಗ್ಗೆ ಸುಮಾರು ಐವತ್ತು ಪ್ರಬಂಧಗಳ ವಿವರಣೆ ಮತಂಗನ ಬೃಹದ್ದೇಶೀಯಲ್ಲೇ ಉಕ್ತವಾಗಿದೆ. ಇವುಗಳಲ್ಲದೆ ಬೆದಂಡೆ, ಮೆಲ್ವಾಡು, ಪಾಡುಗಬ್ಬ, ಪಾಡು, ಬಾಜನೆಗಬ್ಬ, ಚತ್ತಾಣ, ಸುವ್ವಿ, ಚೌಪದಿ, ಅಡ್ಡತನ, ಒನಕೆವಾಡು, ಓವಿ, ಧವಳ, ಮಂಗಳಾಚಾರ, ಏಲಾ ಎಂಬ ರಚನೆಗಳೂ ರೂಢಿಯಲ್ಲಿದ್ದುವೆಂದು ತಿಳಿದುಬರುತ್ತದೆ. ವಚನ ಸಾಹಿತ್ಯದಲ್ಲಿ ಸಂಗೀತ ಉಲ್ಲೇಖನ ಅನೇಕ ಕಡೆ ಬಂದಿದೆ. ಶರಣರು ವಚನಗಳಲ್ಲದೆ, ಹಾಡುಗಳನ್ನೂ ಬರೆದಿದ್ದರು. ಎನ್ನ ಕಾಯವ ದಂಡಿಗೆಯ ಮಾಡಯ್ಯ, ಬತ್ತೀಸರಾಗವ ಹಾಡಯ್ಯ, ಉರದಲೊತ್ತಿ ಬಾರಿಸುಕೂಡಲಸಂಗಮದೇವಯ್ಯ ಎಂಬ ಬಸವಣ್ಣನವರ ವಚನದಿಂದ 32 ರಾಗಗಳು ಕರ್ನಾಟಕದಲ್ಲಿ ಮುಖ್ಯವಾಗಿದ್ದುವೆಂದು ಕಾಣುತ್ತದೆ. ಹರಿಹರ ತನ್ನ ಕಾವ್ಯದಲ್ಲಿ ಒಂದು ಕಡೆ ಗೀತಗಳಂ ಪಾಡುತಂ ಎಂದು ಹೇಳಿದ್ದಾನೆ. ಶರಣರು ವಚನಗಳನ್ನು ಹಾಡುತ್ತಿದ್ದ ರೆನ್ನಬಹುದು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಬತ್ತಲೇಶ್ವರ ಮುಂತಾದ ಶರಣಶರಣೆಯರೂ ಪ್ರೌಢದೇವರಾಯನ ಕಾಲದಲ್ಲಿದ್ದ 101 ವಿರಕ್ತರಲ್ಲಿ ಅನೇಕರು ಗುರುಬಸವ, ಕರಸ್ಥಲದ ನಾಗಿದೇವ, ನಿರ್ವಾಣಬೋಳೇಶ ಮುಂತಾದವರೂ ವಿಚಾರಪ್ರಧಾನ ವಾದ ಸಂಗೀತ ಕೃತಿಗಳನ್ನು ರಚಿಸಿದರು. ಅನಂತರದ ಯುಗದಲ್ಲಿ ರಚಿತವಾದ ಮುಖ್ಯ ಕೃತಿ ನಿಜಗುಣಶಿವಯೋಗಿಯದು. ಇವನು ತ್ರಿಪದಿ, ಸಾಂಗತ್ಯ ಮುಂತಾದ ಹಾಡುಗಳಲ್ಲಿ ತನ್ನ ಷಟ್ ಶಾಸ್ತ್ರಗಳನ್ನೆಲ್ಲಾ ರಚಿಸಿದ. ಕೈವಲ್ಯಪದ್ಧತಿಯ ಹಾಡುಗಳು ರಾಗ ತಾಳ ಸಮನ್ವಿತವಾದ ಸಂಗೀತ ಕೃತಿಗಳು, ನಾದನಾಮಕ್ರಿಯೆ, ಧನ್ಯಾಸಿ, ಶಂಕರಾಭರಣ, ಲಲಿತೆ, ದೇಶಿ ಸಾರಗ, ಸುವ್ವಾಲೆ, ಭೈರವ, ತೋಡಿ, ಕಾಂಬೋಧಿ, ಭವುಳಿ, ಕುರಂಜಿ, ಮಧು ಮಾಧವಿ, ಸೌರಾಷ್ಟ್ರ, ಸಾವಂತ,ಕಲ್ಯಾಣಿ ಮೊದಲಾದ ರಾಗಗಳಲ್ಲಿರುವ ಭಾವಪ್ರಧಾನವಾದ ನಾದಮಾಧುರ್ಯ ಮತ್ತು ಪದವಿನ್ಯಾಸದಿಂದ ಕೂಡಿದ ಸಂಗೀತ ಸಾಹಿತ್ಯಗಳ ಸಮನ್ವಯವುಳ್ಳ ಶ್ರೇಷವಿ ಕೃತಿಗಳು ಇದರಲ್ಲಿವೆ. ಅಲ್ಲಿಂದ ಮುಂದೆ ದಾಸಸಾಹಿತ್ಯ ಒಂದು ಹೊಸ ಶಕೆಯನ್ನು ಆರಂಭಿಸಿತು. ಹರಿದಾಸ ಸಾಹಿತ್ಯದ ಆದ್ಯಾಚಾರ್ಯರಾದ ನರಹರಿತೀರ್ಥರು ರಘುಪತಿ ಎಂಬ ಅಂಕಿತದಲ್ಲಿ ಕನ್ನಡದ ಹಾಡುಗಳನ್ನು ರಚಿಸಿದರು. ಶ್ರೀಪಾದರಾಯರು ಕನ್ನಡದಲ್ಲಿ ಅನೇಕ ಸುಳಾದಿಗಳನ್ನೂ ದೇವರ ನಾಮಗಳನ್ನೂ ರಂಗವಿಠಲ ಮುದ್ರಿಕೆಯಿಂದ ರಚಿಸಿದ್ದಾರೆ. ಇವರು ಸುಳಾದಿಗಳ ಆದ್ಯಪ್ರವರ್ತಕರು. ಇವರ ಶಿಷ್ಯರಾದ ವ್ಯಾಸರಾಯರು ಹೇರಳವಾಗಿ ದೇವರ ನಾಮಗಳನ್ನೂ ಸುಳಾದಿಗಳನ್ನೂ ಶ್ರೀ ಕೃಷ್ಣ ಮುದ್ರಿಕೆಯಿಂದ ರಚಿಸಿ, ತಮ್ಮ ಶಿಷ್ಯರುಗಳಾದ ಪುರಂದರದಾಸ, ಕನಕದಾಸ, ವಾದಿರಾಜ ಇವರಿಗೆ ಸಂಗೀತ ಕೃತಿಗಳ ರಚನೆಯಲ್ಲಿ ಮಾರ್ಗ ದರ್ಶಕರಾದರು. ಅನಂತರಕಾಲದಲ್ಲಿ ವಿಜಯದಾಸರು, ಗೋಪಾಲದಾಸರು, ರಾಘವೇಂದ್ರ ಸ್ವಾಮಿಗಳು, ಮೋಹನದಾಸರು ಮತ್ತು ಜಗನ್ನಾಥದಾಸರೇ ಮುಂತಾದವರು ದಾಸಸಾಹಿತ್ಯವನ್ನು ಬೆಳೆಸಿದರು. ಈ ಕಾಲಕ್ಕೆ ಅನೇಕ ರಾಗಗಳನ್ನು ಬಳಸಿಕೊಂಡು ವೈವಿಧ್ಯಮಯವೂ ಶಾಸ್ತ್ರೀಯವೂ ಆದ ಮಾರ್ಗದಲ್ಲಿ ಬೆಳೆದು ಬಂದ ಸಂಗೀತವನ್ನು ಅತ್ಯಂತ ಜನಪ್ರಿಯವಾಗಿ ಈ ಹರಿದಾಸರು ಪರಿವರ್ತಿಸಿದರು. ಹರಿದಾಸರಲ್ಲಿ ಬಹು ಮುಖ್ಯರಾದವರು ಅಪಾರ ಸಂಖ್ಯೆಯ ಕೀರ್ತನೆಗಳನ್ನು ರಚಿಸಿರುವ ಪುರಂದರದಾಸರು. ಇವರು ಸಂಗೀತದ ಅಭ್ಯಾಸಕ್ಕೆ ಒಂದು ಹೊಸ ಹಾದಿಯನ್ನು ಹಾಕಿಕೊಟ್ಟು, ಕರ್ಣಾಟಕ ಸಂಗೀತವನ್ನು ಕಲಿಯಲು ವೈಜ್ಞಾನಿಕವೂ ವ್ಯವಸ್ಥಿತವೂ ಆದ ಪದ್ಧತಿಯನ್ನು ರೂಪಿಸಿದರು. ಸರಳೆ, ಜಂಟಿವರಸೆ, ಅಲಂಕಾರಗಳನ್ನು ಮಾಯಾಮಾಳವಗೌಳ ರಾಗದಲ್ಲೂ ಸುಳಾದಿ ಸಪ್ತ ತಾಳಗಳನ್ನು ಅಳವಡಿಸಿ ಮಲಹರಿ ರಾಗದಲ್ಲಿ ಪಿಳ್ಳಾರಿ ಗೀತಗಳನ್ನೂ ರಚಿಸಿದರು. ಅನೇಕ ಜನಪದ ಸಂಗೀತದ ಮಟ್ಟುಗಳಿಗೆ ಶಾಸ್ತ್ರೀಯವಾದ ರಾಗಗಳ ಸ್ವರೂಪ ಕೊಟ್ಟರು. ತುತ್ತುರುತುರೆಂದು, ನಳಿನಜಾಂಡ - ಎಂಬ ಕೀರ್ತನೆಗಳಿಂದ 12ನೆಯ ಶತಮಾನದಿಂದಲೂ ಬೆಳೆದುಬಂದಿದ್ದ ಬತ್ತೀಸ ರಾಗಗಳಲ್ಲಿ ಹಾಡಿದ್ದಾರೆಂದು ತಿಳಿದುಬರುತ್ತದೆ. ಅಲ್ಲದೆ ಅನೇಕ ಸುಳಾದಿ ಉಗಾಭೋಗಗಳನ್ನೂ ರಚಿಸಿದರು. ಮಾಯಾಮಾಳವಗೌಳವನ್ನು ಶುದ್ಧಮೇಳವೆಂದು ಗ್ರಹಿಸಿದುದೇ ಕರ್ಣಾಟಕ ಸಂಗೀತದ ಇತಿಹಾಸದಲ್ಲಿ ದೊಡ್ಡದೊಂದು ಕ್ರಾಂತಿಯಾಗಿ ಪರಿಣಮಿಸಿತು ಎನ್ನಬಹುದು. ಸಮಾನಾಂತರ ಶ್ರುತಿಯ ಈ ರಾಗದ ಹಿರಿಮೆಯನ್ನು ಅರ್ಥಮಾಡಿಕೊಂಡವರಲ್ಲಿ ಪುರಂದರದಾಸರು ಮೊದಲಿಗರು. ಅಭ್ಯಾಸಿಗಳ ಅನುಕೂಲಕ್ಕೆಂದು ಇವರು ಮಾಯಾಮಾಳವಗೌಳ ಮೇಳದಿಂದ ಜನ್ಯವಾದ ಮಲಹರಿಯಲ್ಲಿ ಗೀತಗಳನ್ನು ರಚಿಸಿದ್ದಾರೆ. ಈ ರಾಗದಲ್ಲಿ ಪುರಂದರದಾಸರು ರಚಿಸಿದ ಲಕ್ಷ್ಯಗೀತಗಳಲ್ಲಿ ಶ್ರೀಗಣನಾಥ ಸಿಂಧುರ ವರ್ಣ, ಕುಂದಗೌರ ಗೌರೀವರ, ಕೆರೆಯ ನೀರನು ಕೆರೆಗೆ ಚೆಲ್ಲಿ ಇವು ಇಂದಿಗೂ ಉಳಿದುಬಂದಿವೆಯಲ್ಲದೆ ಎಳೆಯರಿಗೆ ಸಂಗೀತಾಭ್ಯಾಸವನ್ನು ಮಾಡಿಸುವಲ್ಲಿ ಇವುಗಳಿಂದ ಪ್ರಾರಂಭ ಮಾಡುವ ರೂಢಿ ಇದೆ. ಪುರಂದರ ಕೊಡುಗೆ ದಕ್ಷಿಣಾದಿ ಸಂಗೀತದ ಭದ್ರ ಬುನಾದಿಯಾಯಿತು. ಇವರು ಕರ್ಣಾಟಕ ಸಂಗೀತ ಪಿತಾಮಹರಾದರು.
ಹರಿದಾಸರೆಲ್ಲರೂ ಜನರ ಭಾಷೆಗೆ ಹೊಂದುವಂತೆ ವಾಕ್ಯರಚನೆ ಮತ್ತು ಪದಗಳನ್ನು ಮಾರ್ಪಡಿಸಿ ಒಂದು ಹೊಸ ಶೈಲಿಯನ್ನೇ ಸೃಷ್ಟಿಸಿದರು. ಪ್ರಾಸ, ಅನುಪ್ರಾಸ, ಯಮಕ, ಅಲಂಕಾರಗಳು, ದ್ವಿತೀಯಾಕ್ಷರ ಮತ್ತು ಅಂತ್ಯಪ್ರಾಸ, ಉಪಮಾನ, ರೂಪಕ, ಸ್ವಭಾವೋಕ್ತಿ, ನಿಂದಾಸ್ತುತಿ, ಜನಜೀವನಕ್ಕೆ ಸಂಬಂಧಿಸಿದ ಅನುಭವಸಿದ್ಧವಾದ ಉಪಮಾನಗಳನ್ನು ಬಳಸಿ ಕೃತಿಗಳನ್ನು ರಚಿಸಿದ್ದಾರೆ. ಇವರೆಲ್ಲರೂ ಗೀತ, ವಾದ್ಯ, ನೃತ್ಯ ಈ ಮೂರರಲ್ಲೂ ಪರಿಣತ ರಾಗಿದ್ದರು. ಹರಿದಾಸರ ಕೀರ್ತನೆಗಳೆಲ್ಲವೂ ಸುಂದರವಾಗಿ ಲಯಬದ್ಧವಾಗಿವೆ; ವೈರಾಗ್ಯ, ಶಾಂತಿ, ಭಕ್ತಿರಸಗಳಿಂದ ತುಂಬಿದ ರಚನೆಗಳಾಗಿವೆ. ಈ ರೀತಿ ದಾಸರ ಕಾಲದಿಂದ ಈಚೆಗೆ ಕರ್ಣಾಟಕ ಸಂಗೀತ ಒಂದು ಖಚಿತ ರೂಪವನ್ನು ಪಡೆಯಿತು. ಪುರಂದರದಾಸರು ಮುಂದಿನ ವಾಗ್ಗೇಯಕಾರರಿಗೆ ಗುರುಗಳಾಗಿ ಪರಿಣಮಿಸಿದರು. ಕರ್ಣಾಟಕ ಸಂಗೀತದ ರತ್ನಪ್ರಾಯರಾದ ತ್ಯಾಗರಾಜ ಸ್ವಾಮಿಗಳು ಇವರನ್ನು ಗುರುಗಳೆಂದು ಅಂಗೀಕರಿಸಿ ಸ್ತುತಿಸಿರುವುದಲ್ಲದೆ ಇವರ ಕೃತಿಗಳಿಂದ ಪ್ರಭಾವಿತರಾಗಿ ಕೃತಿಗಳನ್ನು ರಚಿಸಿದರು. ನಿಜಗುಣಶಿವಯೋಗಿ, ಮಾಗಡಿ ಕೆಂಪೇಗೌಡ ಇಂತಹ ಕೆಲವರು ದಾಸಪಂರಪೆಯ ಹೊರಗಿದ್ದು ಕೃತಿಗಳನ್ನು ರಚಿಸಿರುವುದು ಕಂಡುಬರುತ್ತದೆ.
ಸಂಗೀತ-ಸಾಹಿತ್ಯ ರಚನೆ 18ನೆಯ ಶತಮಾನದಿಂದ ಮುಂದಿನ ಶತಮಾನಗಳಲ್ಲೂ ಅನೇಕ ಹರಿದಾಸರಿಂದ ವಿಪುಲವಾಗಿ ನಡೆಯಿತು. ಅಂಥ ವಾಗ್ಗೇಯಕಾರರಲ್ಲಿ ಪ್ರತಿಯೊಬ್ಬರ ರಚನೆಯಲ್ಲೂ ಸಂಗೀತ ದೃಷ್ಟಿಯಿಂದ ಅವರದೇ ಆದ ವೈಶಿಷ್ಟ್ಯವಿದೆ. ವಿಜಯದಾಸರ (18ನೆಯ ಶತಮಾನ) ಸಮಕಾಲೀನರಾದ ಪ್ರಸನ್ನವೆಂಕಟದಾಸರು ಭಾಗವತ ಮತ್ತು ಜೋಗುಳ ಪದಗಳನ್ನು ರಚಿಸಿದರು. ಅವರ ಸೋದರರು ಹಯವದನವಿಠಲ ಎಂಬ ಅಂಕಿತದಲ್ಲಿ ಕೃತಿಗಳನ್ನು ರಚಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಸಮಕಾಲೀನರೆಂದು ಹೇಳಲಾದ ಸುರಪುರದ ಆನಂದದಾಸರು ಸಂಗೀತಮಾಧುರ್ಯ, ಸಾಹಿತ್ಯ ಸೌಂದರ್ಯಗಳ ಮಧುರ ಮಿಲನವಿರುವ ಕೃತಿಗಳನ್ನು ರಚಿಸಿ ಸುರಪುರದ ಶೈಲಿಯನ್ನು ಸ್ಥಾಪಿಸಿದರು. ಮಹಿಪತಿದಾಸರು ಮತ್ತು ಅಣ್ಣಾವಧೂತರು ಹಲವು ಸುಂದರವಾದ ಕೃತಿಗಳನ್ನು ರಚಿಸಿದರು. ಮಹಿಪತಿದಾಸರ ಮಗ ಕೃಷ್ಣರಾಯರೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. 20ನೆಯ ಶತಮಾನದ ವರೆಗಿನ ಹರಿದಾಸ ಕೃತಿಗಳ ಸಂಪತ್ತನ್ನು ಹೆಚ್ಚಿಸಿದವರಲ್ಲಿ ವೆಂಕಟವಿಠಲ, ವೈಕುಂಠಕೇಶವ, ಅಚ್ಯುತವಿಠಲ, ವಾಸುದೇವ ವಿಠಲ, ಕಮಲೇಶವಿಠಲ, ಭೀಮೇಶವಿಠಲ, ಜನಾರ್ದನವಿಠಲ, ಶ್ರೀಪತಿವಿಠಲ, ರಘುನಾಥವಿಠಲ, ಪ್ರಾಣೇಶವಿಠಲ, ಶ್ರೀವಿಠಲ ಪ್ರಸನ್ನವೆಂಕಟಪತಿ, ಅನಂತಾದ್ರೀಶ, ಅಭಿನವಜನಾರ್ದನವಿಠಲ, ಅಚಲಾನಂದವಿಠಲ ಮತ್ತು ವೆಂಕಟೇಶ್ವರ ಎಂಬ ಹರಿದಾಸರು ಮುಖ್ಯರು. ಹಾಗೆಯೇ ವ್ಯಾಸರಾಯರ ಶಿಷ್ಯಪರಂಪರೆಗೆ ಸೇರಿದ ವಿದ್ಯಾಕಾಂತರು ಭಾವರಾಗಯುಕ್ತವಾದ ದೇವರನಾಮಗಳನ್ನು ರಚಿಸಿದ್ದಾರೆ. ಮಂಗಳೂರಿನ ತುಪಾಕಿ ವೆಂಕಟರಮಣಾಚಾರ್ಯ, ಸುಬ್ಬಣ್ಣಾಚಾರ್ಯ ಮತ್ತು ರಾಮಾಚಾರ್ಯರ ದೇವರನಾಮಗಳು, ಬಾಗೇಪಲ್ಲಿಯ ಗುರುರಾಮವಿಠಲರ ಕೃತಿಗಳು, ಸೋಸಲೆ ವಿದ್ಯಾರತ್ನಾಕರ (ನರಹರಿವಿಠಲ) ಮತ್ತುವ್ಯಾಸರಾಯರ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥರ ದೇವರನಾಮಗಳೂ ಸುಂದರವಾದುವು. ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳು ರಾಗಭಾವದಿಂದ ಕೃತಿಗಳನ್ನು ರಚಿಸಿದ್ದಾರೆ. 19 ಮತ್ತು 20ನೆಯ ಶತಮಾನಗಳಲ್ಲಿ ಮೈಸೂರು ರಾಜಮನೆತನದ ವಿಶೇಷ ಪ್ರೋತ್ಸಾಹ, ಪೋಷಣೆಗಳಿಂದ ಅನೇಕ ವಾಗ್ಗೇಯಕಾರರು ಸಂಗೀತಸಂಪತ್ತನ್ನು ಹೆಚ್ಚಿಸಿದ್ದಾರೆ. ಮೈಸೂರು ಸದಾಶಿವರಾಯರು, ವೀಣೆ ಶೇಷಣ್ಣನವರು, ಮೂಗೂರು ಸುಬ್ಬಣ್ಣನವರು, ವೀಣೆ ಸುಬ್ಬಣ್ಣನವರು, ಕರಿಗಿರಿರಾಯರು, ಬಿಡಾರಂ ಕೃಷ್ಣಪ್ಪನವರು ಅನೇಕ ಬಗೆಯ ಸಂಗೀತ ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ವಾಸುದೇವಾ ಚಾರ್ಯರು 300ಕ್ಕಿಂತಲೂ ಹೆಚ್ಚು ಕೃತಿಗಳನ್ನು ವಾಸುದೇವ ಎಂಬ ಅಂಕಿತದಲ್ಲಿ ರಚಿಸಿದ್ದಾರೆ. ಮುತ್ತಯ್ಯ ಭಾಗವತರು 108 ರಾಗಗಳಲ್ಲಿ ಚಾಮುಂಡೇಶ್ವರಿಯ ಮೇಲೆ ಸಾಮಾನ್ಯವಾಗಿ ಬಳಕೆಯಲ್ಲಿಲ್ಲದ ಅನೇಕ ಜನ್ಯರಾಗಗಳಲ್ಲಿ 108 ಕನ್ನಡದ ಕೀರ್ತನೆಗಳನ್ನು ಹರಿಕೇಶ ಎಂಬ ಅಂಕಿತದಲ್ಲಿ ರಚಿಸಿದ್ದಾರೆ. ದೇವೋತ್ತಮ ಜೋಯಿಸರು ಕನ್ನಡ ಹಾಡುಗಳನ್ನು ರಚಿಸಿದವರಲ್ಲಿ ಮುಖ್ಯರು. ಟಿ.ಚೌಡಯ್ಯನವರು ಅನೇಕ ತಿಲ್ಲಾನಗಳನ್ನೂ ಕೃತಿಗಳನ್ನೂ ತ್ರಿಮಕುಟ ಎಂಬ ಅಂಕಿತದಲ್ಲಿ ರಚಿಸಿದ್ದಾರೆ. ಜಯಚಾಮರಾಜ ಒಡೆಯರು ಸ್ವಯಂ ಸಂಗೀತರಸಿಕರು ಮತ್ತು ವಾಗ್ಗೇಯ ಕಾರರು. ಶ್ರೀವಿದ್ಯಾ ಎಂಬ ಅಂಕಿತದಲ್ಲಿ ಹಲವು ಶ್ರೇಷವಿವಾದ ಕೃತಿಗಳನ್ನು ರಚಿಸಿದ್ದಾರೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಹಲವಾರು ಕೃತಿಗಳ ರಚನೆಯಿಂದ ಕರ್ಣಾಟಕ ಸಂಗೀತ ಸಾಹಿತ್ಯ ವಿಪುಲವಾಗಿ ವೈಶಿಷ್ಟ್ಯಪೂರ್ಣವಾಗಿ ಬೆಳೆದುಬಂದಿದೆ.
ಕಲಾವಿದರು
ಬದಲಾಯಿಸಿಹಿಂದೆಯೇ ವಿವರಿಸಿರುವ ಅನೇಕ ಸಾಹಿತ್ಯ ಮತ್ತು ಶಾಸನಗಳ ಉಲ್ಲೇಖದಿಂದ ಕಾಲಕಾಲದಲ್ಲಿ ಅನೇಕ ಗಾಯನ ನಿಪುಣರಿದ್ದಿರಬೇಕೆಂಬುದು ಸ್ಪಷ್ಟವೇ ಇದೆ. ಕರ್ನಾಟಕದ ಸಂಗೀತಗಾರರಲ್ಲಿ ವಿಶೇಷ ಉಲ್ಲೇಖಕ್ಕೆ ಅರ್ಹನಾದವನು ಗೋಪಾಲನಾಯಕ. ಸ್ವತಃ ಶಾಸ್ತ್ರಜ್ಞನಷ್ಟೇ ಅಲ್ಲದೆ ಗಾಯನ ಚತುರನೂ ಆಗಿದ್ದ ಈತ ಉತ್ತರ ಭಾರತದಲ್ಲೂ ತನ್ನ ಕಲಾಚಾತುರ್ಯವನ್ನು ಮೆರೆಸಿ ಅಲ್ಲಿ ರಾಜಪೋಷಣೆಯನ್ನೂ ಪ್ರಸಿದ್ಧ ಗಾಯಕನಾಗಿದ್ದ ಅಮೀರ್ ಖುಸ್ರುವಿನಿಂದ ಹೊಗಳಿಕೆಯನ್ನೂ ಗಳಿಸಿದ್ದ. ಪುರಂದರದಾಸರೇ ಮೊದಲಾದ ದಾಸಕೂಟದವರು ಉತ್ತಮ ಗಾಯಕರೂ ಆಗಿದ್ದರು. ಅರಸರಿಂದ ದೊರೆತ ಪ್ರೋತ್ಸಾಹದಿಂದಾಗಿ ಅನೇಕ ಸಂಗೀತ ವಿದ್ವಾಂಸರು ಮೈಸೂರು ಆಸ್ಥಾನದಲ್ಲಿದ್ದರು. ಸುಪ್ರಸಿದ್ಧ ವೀಣೆ ಕುಪ್ಪಯ್ಯನವರ ಮೊಮ್ಮಕ್ಕಳಾದ ವೀಣೆ ವೆಂಕಟಸುಬ್ಬಯ್ಯ ನವರನ್ನು ದಿವಾನ್ ಪೂರ್ಣಯ್ಯನವರು ಮೈಸೂರಿಗೆ ಆಹ್ವಾನಿಸಿದರೆಂದೂ ಮುಮ್ಮಡಿ ಕೃಷ್ಣರಾಜ ಒಡೆಯರು ಅವರ ಸಂಗೀತ ಸಾಮರ್ಥ್ಯಕ್ಕೆ ಮೆಚ್ಚಿ ಬಹುಮಾನಿಸಿದರೆಂದೂ ತಿಳಿದುಬರುತ್ತದೆ.
19ನೆಯ ಶತಮಾನದ ಅಂತ್ಯ ಮತ್ತು 20ನೆಯ ಶತಮಾನದ ಮೊದಲ ಭಾಗದಲ್ಲಿದ್ದ ಕರ್ಣಾಟಕ ಸಂಗೀತ ವಿದ್ವಾಂಸರಲ್ಲಿ ಬಿಡಾರಂ ಕೃಷ್ಣಪ್ಪ ಸಂಗೀತರಂಗದಲ್ಲಿ ಪ್ರಖ್ಯಾತಿಪಡೆದವರು. ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿದ್ದ ಇವರು ಕನ್ನಡ ದೇವರನಾಮಗಳಲ್ಲೆ ಸಂಗೀತ ಕಛೇರಿಯನ್ನು ಮಾಡುವ ಪದ್ಧತಿಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದರು. ಇವರಿಗೆ ತ್ರಿಸ್ಥಾಯಿಯಲ್ಲಿ ನುಡಿಯುವ ಅದ್ಭುತ ಶಾರೀರ ಸಂಪತ್ತಿದ್ದಿತು. ಇವರ ಸಂಗೀತ ಪ್ರಮುಖವಾಗಿ ಮನೋಭಾವದ, ಸ್ವಾನುಭವದ ಸಂಗೀತವಾಗಿತ್ತು. ಕಾಲಕ್ರಮದಲ್ಲಿ ಇವರ ಗಾನಕೀರ್ತಿ ದಕ್ಷಿಣ ದೇಶದಲ್ಲೆಲ್ಲಾ ಹರಡಿತು. ಮೈಸೂರು ವಾಸುದೇವಾಚಾರ್ಯರು ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿದ್ದ ಮತ್ತೊಬ್ಬ ವಿದ್ವನ್ಮಣಿಗಳು. ಸಂಸ್ಕೃತ ಶ್ಲೋಕಗಳನ್ನು ಹಾಡುವುದರಲ್ಲಿ ತಾನ, ಪಲ್ಲವಿಗಳನ್ನು ಹಾಡುವುದರಲ್ಲಿ ಅದ್ವಿತೀಯರು. ಇವರ ಶಿಷ್ಯರಾದ ವಿದ್ವಾನ್ ಚನ್ನಕೇಶವಯ್ಯನವರು ಆಸ್ಥಾನ ವಿದ್ವಾಂಸರಾಗಿದ್ದರು. ಇದೇ ಆಸ್ಥಾನ ವಿದ್ವಾಂಸರಾಗಿದ್ದು ಮೈಸೂರಿನ ಕೀರ್ತಿಯನ್ನು ದೇಶಾದ್ಯಂತ ಹರಡಿದ ಮತ್ತೊಬ್ಬ ವಿದ್ವಾಂಸರು ಟಿ.ಚೌಡಯ್ಯನವರು. (ವಿ.ಎಸ್.ಎಸ್.;ಎಸ್.ಕೆ.ಆರ್.;ಎಲ್.ಆರ್.)
ಸ್ವರೂಪವಿಧಾನ
ಬದಲಾಯಿಸಿಕರ್ಣಾಟಕ ಸಂಗೀತ ದೈವಿಕ ಹಿನ್ನೆಲೆಯಲ್ಲಿ ಸುಪುಷ್ಟವಾಗಿ ಬೆಳೆದು ಬಂದಿದೆ. ನಾದಬ್ರಹ್ಮೋಪಾಸನೆಯೇ ಇದರ ಅಂತಿಮ ಗುರಿ. ಕರ್ಣಾಟಕ ಸಂಗೀತಶಾಸ್ತ್ರಜ್ಞರ ಪ್ರಕಾರ ಸಂಗೀತದ ಸರ್ವಸ್ವವೂ ನಾದವೇ. ಸಂಗೀತರತ್ನಾಕರದ ಪ್ರಕಾರ ನಾದದ ವಿಶ್ಲೇಷಣೆ ಹೀಗಿದೆ: ನ ಎಂದರೆ ಪ್ರಾಣ, ದ ಎಂದರೆ ಅನಲ ಅಥವಾ ಅಗ್ನಿ; ಈ ಎರಡರ ಸಂಯೋಗದಿಂದ ಆದದ್ದು ನಾದ. ಮನುಷ್ಯನಲ್ಲಿ ನಾಭಿಯಿಂದ ಅತಿ ಸೂಕ್ಷ್ಮ, ಹೃದಯದಿಂದ ಸೂಕ್ಷ್ಮ, ಕಂಠದಿಂದಪುಷ್ಟ, ಮೂರ್ಧನ್ಯದಿಂದ ಅಪುಷ್ಟ, ಮುಖದಿಂದ ಕೃತ್ರಿಮ ಎಂಬ ನಾದಗಳು ಉತ್ಪತ್ತಿಯಾಗುತ್ತವೆ. ವ್ಯವಹಾರದಲ್ಲಿ ಹೃದಯದಿಂದೆದ್ದ ಮಂದ್ರ,ಮಧ್ಯ, ತಾರ ಇವನ್ನು ಮಾತ್ರ ಪರಿಗಣಿಸುತ್ತಾರೆ. ಇವೇ ಸ್ಥಾಯಿಗಳು, ಸ್ಥಾಯಿಗಳಲ್ಲಿ ಶ್ರುತಿಗಳಿವೆ. ಇಂಥ ಶ್ರುತಿಗಳ ಸಂಖ್ಯೆ ಇಪ್ಪತ್ತೆರಡು. ಇವನ್ನು ಐದು ಭಾಗಗಳಲ್ಲಿ ಅಳವಡಿಸಲಾಗಿದೆ. (ಶಾರ್ಙಗದೇವ), ತೀವ್ರಾ, ರೌದ್ರೀ, ವಜ್ರಿಕಾ, ಉಗ್ರಾ- ಈ ನಾಲ್ಕು ದೀಪ್ತಾ ಎಂಬ ಜಾತಿಗೆ ಸೇರಿದವು. ಕುಮುದ್ವತೀ, ಕ್ರೋಧೀ, ಪ್ರಸಾರಿಣೀ, ಸಂದೀಪಿನೀ, ರೋಹಿಣೀ- ಈ ಐದು ಆಯತಾ ಜಾತಿ, ದಯಾವತೀ, ಆಲಾಪಿನೀ, ಮದಂತೀ- ಈ ಮೂರು ಕರುಣಾ ಎಂಬ ಜಾತಿ; ಮಂದಾ, ರತಿಕಾ, ಪ್ರೀತಿ, ಕ್ಷಿತಿ- ಈ ನಾಲ್ಕು ಮೃದು ಎಂಬ ಜಾತಿ; ಛಂದೋವತಿ, ರಂಜಿನೀ, ಮಾರ್ಜಿನಿ, ರಕ್ತಾ,ರಮ್ಯಾ, ಕ್ಷೋಭಿಣೀ ಈ ಆರು ಮಧ್ಯಾ ಎಂಬ ಜಾತಿ.
ಈ ಶ್ರುತಿಗಳ ನಡುವೆ ಅನುರಣನದಿಂದ ಯುಕ್ತವಾದ, ಸ್ಫುಟವಾದ, ನಿರ್ದಿಷ್ಟವಾದ ಏಳು ಸ್ವರಗಳನ್ನು ನಿಲ್ಲಿಸುತ್ತಾರೆ. ಇವುಗಳ ನಡುವೆ ಇರುವ ವ್ಯತ್ಯಾಸ (ರೇಷ್ಯೋ) ಸ್ಪಂದನ ಪರಿಮಾಣದಲ್ಲಿ. ಇವನ್ನು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ ಎನ್ನುತ್ತಾರೆ. ಇಪ್ಪತ್ತೆರಡು ಶ್ರುತಿಗಳ ನಡುವೆ ಈ ಏಳು ಸ್ವರಗಳ ಸ್ಥಾನ ಈ ರೀತಿ - 1, 2, 3, 4 ಷಡ್ಜ; 5, 6, 7 ಋಷಭ; 8, 9 ಗಾಂಧಾರ; 10, 11, 12, 13 ಮಧ್ಯಮ; 14, 15, 16, 17 ಪಂಚಮ; 18, 19, 20 ಧೈವತ; 21, 22 ನಿಷಾದ. ಆಯಾ ಸ್ವರದ ಸಂಗಡಲೇ ಬಂದ ಶ್ರುತಿಗೆ ನಿಯತಶ್ರುತಿ ಎಂದು ಹೆಸರು.
ಈ ಏಳು ಸ್ವರಗಳು ಶುದ್ಧ ಮತ್ತು ಪ್ರಕೃತಿ ಸ್ವರಗಳು. ಸ, ರಿ, ಗ, ಮ, ಪ, ಧ, ನಿ ಎಂದು ಇವುಗಳ ನಿರ್ದೇಶ. ನಿಯತಶ್ರುತಿಯೇ ಶುದ್ಧಸ್ವರದ ಉಗಮಸ್ಥಾನ. ಈ ಶುದ್ಧಸ್ವರಗಳಲ್ಲದೆ ವಿಕೃತಸ್ವರಗಳೂ ಇವೆ. ಶಾರ್ಙಗದೇವನ ಪ್ರಕಾರ ವಿಕೃತ ಸ್ವರಗಳ ಸಂಖ್ಯೆ 12, ಸಂಗೀತಪಾರಿಜಾತದ ಪ್ರಕಾರ 22, ಸೋಮನಾಥನ ರಾಗವಿಬೋಧದ ಪ್ರಕಾರ 10, ರಾಮಾಮಾತ್ಯನ ಸ್ವರ ಮೇಳಕಳಾನಿಧಿಯ ಪ್ರಕಾರ 11, ವೆಂಕಟಮಖಿಯ ಚತುರ್ದಂಡಿ ಪ್ರಕಾಶಿಕೆಯ ಪ್ರಕಾರ 9, ಕಡೆಯ ಸಂಖ್ಯೆಯೇ ಇಂದು ವಾಡಿಕೆಯಲ್ಲಿದೆ. ಈ ವಿಕೃತ ಸ್ವರಗಳು ಶ್ರುತಿಯ ಹೆಚ್ಚಳ ಅಥವಾ ತಗ್ಗುಗಳಿಂದಾದವು. ಅವುಗಳು ಯಾವುವೆಂದರೆ - ಕೋಮಲ ಅಥವಾ ಚತುಃಶ್ರುತಿ ಋಷಭ, ಷಟ್ಶ್ರುತಿ ಋಷಭ, ಸಾಧಾರಣ ಗಾಂಧಾರ, ಅಂತರ ಗಾಂಧಾರ, ಪ್ರತಿ ಮಧ್ಯಮ, ಚತುಃಶ್ರುತಿ ಧೈವತ, ಷಟ್ಶ್ರುತಿಧೈವತ, ಕೈಶಿಕೀ ನಿಷಾದ, ಕಾಕಲೀ ನಿಷಾದ. ಏಳು ಸ್ವರಗಳನ್ನು ಸೇರಿಸಿ ನಿರ್ದೇಶಿಸಬೇಕಾದರೆ ಸ,ರ,ರಿ, ರು, ಗ, ಗಿ, ಗು,ಮ, ಮಿ, ಪ, ಧ, ಧಿ, ಧು, ನ, ನಿ, ನು ಎನ್ನುತ್ತಾರೆ. ಸ ಮತ್ತು ಪ ಗಳಲ್ಲಿ ವಿಕಾರವೇ ಇಲ್ಲ; ಇವು ಇನಿತ್ಯ ಶುದ್ಧ. ರಿ ಯಲ್ಲಿ ಮೂರು, ಗ ದಲ್ಲಿ ಮೂರು, ಮ ದಲ್ಲಿ ಎರಡು,ಧದಲ್ಲಿ ಮೂರು, ನಿ ಯಲ್ಲಿ ಮೂರು - ಹೀಗೆ ವಿಕಾರಗಳಿವೆ. ಈ ಸ್ವರಗಳ ಸಮೂಹ ಗ್ರಾಮ. ಇವು ಮೂರು ವಿಧ ಷಡ್ಜಗ್ರಾಮ, ಮಧ್ಯಮ ಗ್ರಾಮ, ಗಾಂಧಾರ ಗ್ರಾಮ. ಪ್ರತಿ ಗ್ರಾಮದಲ್ಲೂ 7 ಮೂbsರ್Àನೆಗಳಿರುತ್ತವೆ. ಮೂbsರ್Àನೆಯೆಂದರೆ ಅನುಕ್ರಮವಾಗಿ ಏಳು ಸ್ವರಗಳ ಆರೋಹಣ ಮತ್ತು ಅವರೋಹಣ. ಗಾಂಧಾರ ಗ್ರಾಮದ ಏಳುಮೂbsರ್Àನೆಗಳಿಗೆ ನಂದ, ವಿಲಾಸ, ಸುಮುಖೀ, ಚಿತ್ರ, ಚಿತ್ರವತೀ, ಸುಖ, ಆಲಾಪ ಎಂದು ಹೆಸರುಗಳು. ಷಡ್ಜಗ್ರಾಮದ ಮೊದಲ ಮೂbsರ್Àನೆಯಲ್ಲಿ ತಾರಸ್ಥಾಯಿಯ ಒಂದು ಸ್ವರ ಮುಟ್ಟುತ್ತೇವೆ, ಎರಡನೆಯ ಮೂbsರ್Àನೆಯಲ್ಲಿ ಎರಡು ಇತ್ಯಾದಿ. ಮಧ್ಯಮ ಗ್ರಾಮದ ಮೊದಲ ಮೂbsರ್Àನೆಯಲ್ಲಿ ಅತಿತಾರದ ಒಂದು ಸ್ವರ, ಎರಡನೆಯ ಮೂbsರ್Àನೆಯಲ್ಲಿ ಎರಡು ಹೀಗೆ ಮುಟ್ಟುತ್ತೇವೆ. ಹಾಗೆಯೇ ಗಾಂಧಾರ ಗ್ರಾಮದಲ್ಲಿ ಅತಿ ತಾರಕ್ಕಿಂತ ತಾರತರವಾದ ಸ್ವರ ಮುಟ್ಟಬೇಕು. ಆದರೆ ಇದು ಮಾನವ ಕಂಠಕ್ಕೆ ಅಸಾಧ್ಯವಾದುದರಿಂದ ದೇವಗಾನವೆಂದು ಇದನ್ನು ಬಿಟ್ಟಿದ್ದಾರೆ. ಅಂತೂ ಮೂರು ಗ್ರಾಮಗಳಿಂದ ಒಟ್ಟು 21 ಮೂbsರ್Àನೆಗಳು. ಈ ಸಪ್ತಸ್ವರಗಳು, ಏಕವಿಂಶತಿ ಮೂbsರ್Àನೆಗಳು, ಅಷ್ಟಾದಶ ಶ್ರುತಿಗಳು -ಇವಕ್ಕೆ ಒಟ್ಟಾರೆಯಾಗಿ ಸ್ವರಮಂಡಲ ಎಂಬ ಹೆಸರಿದೆ.
ಸ್ವರಗಳನ್ನು ಹಾಡುವುದಕ್ಕೆ ವರ್ಣ ಎಂದು ಹೆಸರು. ಸ್ವರಗಳನ್ನು ನಾಲ್ಕು ಬಗೆಯಾಗಿ ಹಾಡಬಹುದು. ಒಂದೇ ಸ್ವರವನ್ನು ವಿಳಂಬಕಾಲದಲ್ಲಿ ಮೂರಾವರ್ತಿ ಉಚ್ಚರಿಸುವುದು ಸ್ಥಾಯೀ (ಸಾ-ಸಾ-ಸಾ). ಕ್ರಮ ಹಿಡಿದು ಒಂದು ಸ್ವರದಿಂದ ಮೇಲಿನ ಸ್ವರಗಳನ್ನು ಹತ್ತಿದರೆ ಆರೋಹಿ (ರಿ ಗ ಮ ಪ). ಹಾಗೆಯೇ ಕ್ರಮ ಹಿಡಿದು ಇಳಿದರೆ ಅವರೋಹಿ (ನಿ ಧ ಮ ಪ). ಈ ಆರೋಹಿ ಅವರೋಹಿಗಳು ಕಲಿಸಿದಂತೆ ಸ್ವರಗಳನ್ನು ಹಾಡಿದರೆ ಅದು ಸಂಚಾರಿ (ರಿ ಮ ಗ ಮ ಗ ರಿ ಸಾ).
ಇಂಥ ವರ್ಣಗಳನ್ನು ಕ್ರಮವರಿತು ಸೇರಿಸಿದರೆ ಅಲಂಕಾರವಾಗುತ್ತದೆ. ಅಲಂಕಾರವೂ ವರ್ಣದಂತೆ ಸ್ಥಾಯೀ, ಆರೋಹಿ, ಅವರೋಹಿ, ಸಂಚಾರಿ ಎಂದು ನಾಲ್ಕು ವಿಧ. ಸ್ಥಾಯ್ಯಲಂಕಾರದಲ್ಲಿ ಪ್ರಸನ್ನಾದಿ (ಸ ಸ ಸ), ಪ್ರಸನ್ನಾಂತ (ಸ ಸ ಸ), ಪ್ರಸನ್ನಾದ್ಯಂತ (ಸ ಸ ಸ), ಪ್ರಸನ್ನಮಧ್ಯ (ಸ ಸ ಸ), ಕ್ರಮರೇಚಿತ (ಸ ರಿ ಸ ಸ ಗ ಮ ಸ) ಎಂದು ಐದು ವಿಧಗಳು. ಆರೋಹ್ಯಲಂಕಾರದಲ್ಲಿ ವಿಸ್ತೀರ್ಣ (ಸಾ-ರೀ-ಗಾ-ಮಾ), ನಿಷ್ಕರ್ಷ (ಸಸ-ರಿರಿ-ಗಗ), ಪ್ರೇಂಖಿತ (ಸರೀ-ರಿಗಾ-ಗಮಾ), ಬಿಂದು (ಸಸಸರಿ-ಗಗಗಮ-ಮಮಮಪ), ಹಸಿತ (ಸಾ-ರಿರೀ-ಗಗಗಗಾ-ಮಮಮಮಾ), ಸಂಧಿಪ್ರಚ್ಫಾದನ (ಸರಿಗಾ-ಗಮಪಾ-ಪಧನೀ), ಅಕ್ಷಿಪ್ತ (ಸಗಾ-ಗಪಾ-ಪನೀ) ಎಂದೂ ಏಳು ಉಪವಿಧಗಳು. ಅವರೋಹ್ಯಾಲಂಕಾರದಲ್ಲೂ ಇದೇ ಏಳು ವಿಧಗಳು. ಆದರೆ ಸ್ವರಗಳ ಕ್ರಮ ಹಿಂದು ಮುಂದಾಗಿರುತ್ತದೆ. ಸಂಚಾರಿ ಅಲಂಕಾರದಲ್ಲಿ ಪ್ರಸಾದ (ಸರಿಸ-ರಿಗರಿ-ಗಮಗ), ಪ್ರೇಂಖ (ಸರಿರಿಸ- ರಿಗಗರಿ-ಗಮಮಗ), ರಂಜಿತ (ಸಗರಿ, ಸಗರಿಸ-ರಿಮಗ, ರಿಮಗರಿ-ಗಪಮ, ಗಪಮಗ), ಆಕ್ಷೇಪ (ಸರಿಗಾ-ರಿಗಮಾ-ಗಮಪಾ), ಪರಿವರ್ತ (ಸಗಮಾ-ರಿಮಪಾ-ಗಪಧಾ), ಕೂತಜಿ (ಸರಿ, ಸಗಸ-ರಿಗ, ರಿಮರಿ-ಗಮ, ಗಪಗ), ಉದ್ವಾಹಿತ (ಸರಿಗರಿ-ರಿಗಮಗ-ಗಮಪಮ), ಉದ್ಘಟ್ಟಿತ (ಸರಿ,ಪಮಗರಿ-ರಿಗ, ಧಪಮಗ-ಗಮ), ನಿಧಪಮ, ಹುಂಕಾರ (ಸರಿಸ-ಸರಿಗರಿಸ -ಸರಿಗಮರಿಗಸ-ಸರಿಮಪಮಗರಿಸ), ಸ್ಖಲಿತ (ಸಗರಿಮ, ಮರಿಗಸ-ರಿಮಗಪ, ಪಮಗರಿ), ಕ್ರಮ (ಸರಿ-ಸರಿಗ, ಸರಿಗಮ-ರಿಗ, ರಿಗಮ, ರಿಗಮಪ), ಶ್ಯೇನ (ಸಪಾ-ರಿಧಾ-ಗನೀ-ಮಸಾ), ಹ್ರಾದಮಾನ (ಸಗರಿಸ-ರಿಮಗರಿ-ಗಪಮಗ) ಎಂದು ಹದಿಮೂರು ಉಪವಿಧಗಳು, ಭರತ ಕಲ್ಪಲತಾ ಮಂಜರಿಯಲ್ಲಿ ತಾಲ ಮಂದ್ರ ಪ್ರಸನ್ನ (ಸರಿಗಮಗರಿ-ಸರಿಗರಿ-ಸರಿಗಮ), ಮಂದ್ರ ತಾಲಪ್ರಸನ್ನ (ಸರಿಗರಿ-ಸರಿ-ಸರಿಗಮ), ಆವರ್ತಕ (ಸರಿ-ಸರಿಗಮ-ರಿಗ-ರಿಗಮಪ), ಸಂವಿಧಾನ (ಸರಿಗಸರಿಸರಿ-ಗ-ಮಾ-ರಿಗಮರಿಗರಿಗ-ಮ-ಪಾ), ವಿಧೃತ (ಸರಿಗ-ಸರಿಗಮ-ರಿಗಮ-ರಿಗಮಪ), ವ್ಯವಲೋಪ (ಸರಿಗಾ-ಸಾರಿಗಾ-ಮಾ-ಮಾ- ರಿಗಾಮ-ರೀಗಮಾ-ಪಾ-ಪಾ), ಧಿಲ್ಲಾಸಿತ (ಸರಿಗ-ಸರಿಗಮ-ರಿಗಮ-ರಿಗಮಪ) ಎಂದು ಸಪ್ತಾಲಂಕಾರಗಳನ್ನು ಹೇಳಿದೆ. ಕೇಳುವವರಿಗೆ ಹಿತವೆನಿಸುವಂತೆ ಸ್ವರವನ್ನು ಕಂಪಿಸುವುದಕ್ಕೆ ಗಮಕ ಎಂದು ಹೆಸರು. ಒಂದು ಸ್ವರವನ್ನು ಅರ್ಧಾಕ್ಷರ ಕಾಲ ಹಿಡಿದು ಒತ್ತುವುದು ತಿರಿಪ ಎನಿಸಿಕೊಳ್ಳುತ್ತದೆ. ಒಂದು ಸ್ವರವನ್ನು ಒಂದಕ್ಷರ ಕಾಲ ಅಲುಗಿಸುವುದು ಕಂಪಿತ (ಟ್ರಿಲ್), ಎರಡಕ್ಷರ ಕಾಲ ಅಲುಗಿಸುವುದು ಲೀನ, ನಾಲ್ಕಕ್ಷರ ಕಾಲ ಆಂದೋಲಿತ, ಹನ್ನೆರಡಕ್ಷರ ಕಾಲ ಪ್ಲಾವಿತ. ಸಸ, ರಿರಿ ಇತ್ಯಾದಿ ಜಂಟಿಸ್ವರಗಳಲ್ಲಿ ಎರಡನೆಯ ಸ್ವರವನ್ನು ಒತ್ತಿ ಬಿಡುವುದು ಆರೋಹಣದಲ್ಲಿ ಸ್ಫುರಿತ (ಡಿಫ್ಲೆಕ್ಟ್), ಅವರೋಹಣದಲ್ಲಿ ಪ್ರತ್ಯಾಘಾತ. ಒಂದು ಸ್ವರದಿಂದ ಹಿಂದಿನ ಸ್ವರಕ್ಕೆ ಸ್ವರ ಛಾಯೆಯಲ್ಲಿ ಇಳಿಯುವುದು (ಪಮ=ಪಪಮ) ಆಹತ; ವೀಣೆಯಲ್ಲಿ ಮೀಟುಹಾಕಿ ಗ ಸ್ವರವನ್ನು ಎಬ್ಬಿಸಿ, ಮೀಟು ಹಾಕದೆಯೇ ಮ ಸ್ವರವನ್ನು ಉತ್ಪತ್ತಿ ಮಾಡುವುದು ಆಹತವೆನಿಸಿಕೊಳ್ಳುತ್ತದೆ. ಒಂದು ಸ್ವರದಿಂದ ಕೆಳಗಿನ ಇನ್ನೊಂದು ಸ್ವರಕ್ಕೆ ಇಳಿಯುವಾಗ ನಡುವೆ ಇರುವ ಸ್ವರವನ್ನು ಶಬ್ದಿಸಿ ದಾಟುವುದು ಖಂಡಿಂಪು [ಮರಿ=ಮ(ಗ)ರಿ]. ಉಲ್ಲಸಿತ ಎಂಬುದಿನ್ನೊಂದು ಬಗೆಯ ಗಮಕ. ಒಂದು ಸ್ವರದಿಂದ ಮತ್ತೊಂದು ಸ್ವರಕ್ಕೆ ಜಾರುವುದು ಆರೋಹಣದಲ್ಲಿ ಎಕ್ಕುಜಾರು, ಅವರೋಹಣದಲ್ಲಿ ದಿಗುಜಾರು. ಒಂದೇ ಸ್ವರಸ್ಥಾನದಲ್ಲಿ ಪಕ್ಕದ ಸ್ವರವನ್ನೂ ಲಘುವಾಗಿ ಪ್ರದರ್ಶಿಸುವುದು ಓರಿಕ (ಸನಿಧಪ=ಸರಿನಿಸಧನಿಪ). ಇಂಥ ಗಮಕಗಳ ಒಟ್ಟು ಸಂಖ್ಯೆ ಹತ್ತೊಂಬತ್ತು. ಆದರೆ ಸಾಮಾನ್ಯವಾಗಿ ಬಳಕೆಯಲ್ಲಿರುವುದು ಹತ್ತು ಮಾತ್ರ.
ಸ್ವರಗಳಲ್ಲಿ ನಾಲ್ಕು ವಿಧ ವಾದಿ,ಸಂವಾದಿ,ಅನುವಾದಿ, ವಿವಾದಿ. ವಾದಿ (ಸೊನ್ಯಾಂಟ್) ಎನ್ನುವುದು ಮುಖ್ಯಸ್ವರ. ರಾಗದಲ್ಲಿ ಬಹುವೇಳೆ ಬರುವ ಸ್ವರ (ಸರಿಗಮಪಧನಿಸ-ರಿಗಮಪಧನಿಸ-ಗಮಪಧನಿಸ-ಮಪಧನಿಸ-ಪಧನಿಸ-ಧನಿಸ-ನಿಸ-ಸ) ಸಂವಾದಿ (ಕಾನ್ಸೊನೆಂಟ್) ಸ್ವರ ವಾದಿಯೊಂದಿಗೆ ಸುಸಂಗತವಾಗಿ ಸೇರಿ ಹೊಂದಿಕೊಂಡು ಹೋಗುವ ಸ್ವರ. ಸಂವಾದಿ ಸ್ವರಗಳ ನಡುವೆ ಎಂಟು ಇಲ್ಲವೆ ಹನ್ನೆರಡು ಶ್ರುತಿಗಳ ಅಂತರ ಇರಬೇಕು. ಸ-ಪ, ಸ-ಮ, ರ-ಧ, ಗ-ನ, ಗಿ-ನಿ, ಗು-ನು, ರ-ಮಿ ಗಳು ಸಂವಾದಿ ಸ್ವರಗಳು. ವಿವಾದಿಗೆ (ಡಿಸ್ಸೊನೆಂಟ್) ವೈರಿ ಸ್ವರ ಎಂದೂ ಹೆಸರು; ಎರಡು ಸ್ವರಗಳ ನಡುವೆ ಒಂದೇ ಶ್ರುತಿಯ ಅಂತರ ಇದ್ದರೆ ಸಂವಾದಿ, ವಾದಿಗೆ ವಿರುದ್ಧ (ಸಮ್ಮಗರಿಸ-ರಿಗಮ-ರಿಪ್ಪಮರಿಗ-ಗಮಪ-ಗದ್ದಪಮಗ-ಮಪಧ). ಕಡೆಯದಾಗಿ ಅನುವಾದಿ (ಅಸ್ಸೊನೆಂಟ್). ವಾದಿಯೊಂದಿಗೆ ಯಾವೊಂದು ಸಂಬಂಧವನ್ನೂ ಇಟ್ಟುಕೊಂಡಿರದೆ, ಅದಕ್ಕೆ ವಿರೋಧವಾಗಿಯೂ ಇರದೆ ರಾಗದ ಸೌಂದರ್ಯ ಹೆಚ್ಚಿಸಲು ತನ್ನ ಮಟ್ಟಿಗೆ ತಾನು ಯತ್ನಿಸುತ್ತದೆ (ಸರಿಗ-ರಿಪಮ-ಗಮಪ). ಇದೂ ಒಂದು ಬಗೆಯಲ್ಲಿ ಸಂವಾದಿತ್ವವೇ ಆದರೂ ಸಂವಾದಿಗಿಂತ ಇದರ ಸಂವಾದಿತ್ವ ಕಡಿಮೆ.
ರಾಗ
ಬದಲಾಯಿಸಿದಕ್ಷಿಣಾದಿ ಸಂಗೀತದ ವೈಶಿಷ್ಟ್ಯವೆಂದರೆ ರಾಗ ಪದ್ಧತಿ. ರಾಗ ಎಂದರೆ ಸಂತೋಷಪಡಿಸುವುದು ಎಂದರ್ಥ (ರಂಜಕತ್ವಾತ್). ಇಂಗ್ಲಿಷಿನಲ್ಲಿ ಇದಕ್ಕೆ ಮೆಲೊಡಿ-ಟೈಪ್, ಮೆಲೊಡಿ-ಮೌಲ್ಡ್, ಟ್ಯೂನ್ ಎನ್ನಬಹುದು. ಶುದ್ಧವಿಕೃತ ಸ್ವರಗಳ ಸಂಖ್ಯೆ ಹನ್ನೆರಡು. ಅವುಗಳಲ್ಲಿ (ಸಪ್ತಸ್ವರಭೇದಗಳಲ್ಲಿ) ಐದಕ್ಕೆ ಕಡಿಮೆ ಇಲ್ಲದಂತೆ ಸ್ವರಗಳನ್ನಾಯ್ದು ಅವನ್ನು ಆಧಾರಷಡ್ಜಕ್ಕೆ ಸಂಬಂಧಿಸಿದಂತೆ ಒಂದು ಕ್ರಮದಲ್ಲಿ ಸೇರಿಸಿದರೆ ರಾಗವಾಗುತ್ತದೆ. ಐದೇ ಸ್ವರಗಳಿದ್ದರೆ ಅದಕ್ಕೆ ಔಡವ (ಪೆಂಟಾಟೋನಿಕ್) ರಾಗ ಎಂದು ಹೆಸರು. ದೃಷ್ಟಾಂತ ಬೇಕೆಂದರೆ ಮೋಹನ ರಾಗದಲ್ಲಿ ಸರಿಗುಪಧಿಸ ಎಂಬಷ್ಟೇ ಸ್ವರಗಳು. ಆರು ಸ್ವರಗಳಿದ್ದರೆ ಅದು ಷಾಡವ ರಾಗ (ಹೆಕ್ಸೋಟೋನಿಕ್) ಎನಿಸಿಕೊಳ್ಳುತ್ತದೆ. ಶ್ರೀರಂಜಿನೀ ರಾಗದಲ್ಲಿ ಸರಿಗಮಧನಿ ಎಂಬಷ್ಟೇ ಸ್ವರಗಳು. ಏಳೂ ಸ್ವರಗಳಿದ್ದರೆ ಸಂಪೂರ್ಣ ರಾಗ. ಆರೋಹಣದಲ್ಲಿ ಅವರೋಹಣದಲ್ಲಿ ಎರಡರಲ್ಲೂ ಸಂಪೂರ್ಣವಾಗಿದ್ದರೆ ಅಂಥ ರಾಗಕ್ಕೆ ಮೇಳಕರ್ತ ಅಥವಾ ಜನಕರಾಗ ಅಥವಾ ಸಂಪೂರ್ಣ ರಾಗ ಎಂದು ಹೆಸರು. ಇಂಥ ಮೇಳಕರ್ತಗಳನ್ನು ಎಪ್ಪತ್ತೆರಡಾಗಿ ವೆಂಕಟಮಖಿ ತನ್ನ ಚತುರ್ದಂಡಿ ಪ್ರಕಾಶಿಕೆಯಲ್ಲಿ ವಿಭಾಗ ಮಾಡಿದ್ದಾನೆ. ನಿತ್ಯ ಶುದ್ಧ ಸ್ವರಗಳಾದ ಸ ಮತ್ತು ಪ-ಈ 72 ರಾಗಗಳಲ್ಲೂ ಏಕರೀತಿಯಾಗಿರುತ್ತವೆ. ಮಧ್ಯಮದ ವಿಕಾರಗಳಾದ ಶುದ್ಧ ಮತ್ತು ಪ್ರತಿಮಧ್ಯಮಗಳು ಬರುವ ದೃಷ್ಟಿಯಿಂದ ಮೇಳಕರ್ತಗಳನ್ನು ಪೂರ್ವ, ಉತ್ತರ ಎಂದು ವಿಗಂಡಿಸಿದ್ದಾರೆ -ಪೂರ್ವ ಮೇಳದಲ್ಲಿ 1 ರಿಂದ 36 ರಾಗಗಳಿದ್ದು ಅವುಗಳಲ್ಲೆಲ್ಲ ಶುದ್ಧ ಮಧ್ಯಮ ಇರುತ್ತದೆ. ಉತ್ತರ ಮೇಳದಲ್ಲಿ 37 ರಿಂದ 72 ರಾಗಗಳಿದ್ದು ಅವುಗಳಲ್ಲಿ ಪ್ರತಿ ಮಧ್ಯಮ ಇರುತ್ತದೆ. ಉಳಿದ ಋಷಭ, ಗಾಂಧಾರ, ಧೈವತ, ನಿಷಾದಗಳು ರಾಗರಾಗಕ್ಕೆ ವ್ಯತ್ಯಾಸವಾಗುತ್ತ ಹೋಗುತ್ತವೆ.
ಇಲ್ಲೂ ಒಂದು ಕ್ರಮಹಿಡಿದು ಒಂದೇ ಜಾತಿಯ ಈ ಸ್ವರಗಳು ಬರುವ ಆರಾರು ರಾಗಗಳನ್ನು ಒಂದೊಂದು ಚಕ್ರ ಮಾಡಿ ಇಂಥ ಹನ್ನೆರಡು ಚಕ್ರಗಳಲ್ಲಿ 72 ರಾಗಗಳನ್ನೂ ಅಡಕ ಮಾಡಿದ್ದಾರೆ. ಪೂರ್ವಮೇಳದ ಮೊದಲ ಚಕ್ರವಾದ ಇಂದುವಿನಲ್ಲಿ ಸ, ಪ, ಮ ಗಳ ಜೊತೆಗೆ ರ, ಗ ಇದ್ದು ಇದರ ಆರು ರಾಗಗಳಲ್ಲಿ ಧ, ನ ಗಳ ವಿಕಾರಗಳು ಇರುತ್ತವೆ ಇತ್ಯಾದಿ.
ಸ್ವರಜಾತಿ ವೈವಿಧ್ಯದಿಂದ ರಾಗವೈವಿಧ್ಯ. ಏಳು ಸ್ವರಗಳೂ ಕ್ರಮ ಹಿಡಿದು ಬಂದು ಆರೋಹಣಾವರೋಹಣಗಳಲ್ಲೂ ಒಂದೇ ಜಾತಿಯ ಸ್ವರಗಳಾಗಿರುವುದು ಮೇಳಕರ್ತರಾಗದ ಲಕ್ಷಣ. ಉಳಿದ ರಾಗಗಳಲ್ಲಿ ಹೀಗೆ ಸಪ್ತಸ್ವರಗಳೂ ಇರುವುದಿಲ್ಲ. ಸ್ವರಗಳ ಆರೋಹಣಾವರೋಹಣ ಹೀಗೆ ಪೂರ್ಣ ಕ್ರಮಯುಕ್ತವೂ ಅಲ್ಲ. ಏಳು ಸ್ವರಗಳೂ ಇಲ್ಲದಿರುವುದರಿಂದ ಇವುಗಳಿಗೆ ವರ್ಜ್ಯರಾಗಗಳೆನ್ನುತ್ತಾರೆ.
ಇಂಥ ರಾಗಗಳ ಸಂಖ್ಯೆ ಅನಂತವಾದರೂ ಸುಮಾರು 800 ಬಳಕೆಯಲ್ಲಿವೆ. ಸ್ವರಗಳ ಸಂಖ್ಯೆಯ ದೃಷ್ಟಿಯಿಂದ ವರ್ಜ್ಯರಾಗಗಳಲ್ಲಿ ಎಂಟು ವಿಧಗಳಾಗುತ್ತವೆ. ಆರೋಹಣದಲ್ಲೂ ಐದು, ಅವರೋಹಣದಲ್ಲೂ ಐದು ಸ್ವರಗಳು ಬಂದರೆ ಅದು ಔಡವ-ಔಡವ; ಮೋಹನ ರಾಗದಲ್ಲಿ ಸರಿಪಧಗ ಇಷ್ಟು ಮಾತ್ರ ಸ್ವರಗಳು (ಹರಿಕಾಂಭೋದಿ ಮೇಳದ ಜನ್ಯ ಇದು). ಆರೋಹಣದಲ್ಲಿ ಆರು, ಅವರೋಹಣದಲ್ಲಿ ಐದು ಸ್ವಧಗಳಿದ್ದರೆ ಷಾಡವ-ಔಡವ; ನಾಟಕುರಂಜಿ ರಾಗದಲ್ಲಿ ಸರಿಗಮಧನಿಸ-ಸನಿಮಧಧಸ ಬರುತ್ತವೆ (ಇದೂ ಹರಿಕಾಂಭೋದಿ ಜನ್ಯ). ಆರೋಹಣದಲ್ಲಿ ಐದು ಅವರೋಹಣದಲ್ಲಿ ಆರು ಇದ್ದರೆ ಔಡವ-ಷಾಡವ; ಶ್ರೀಮಣಿ ರಾಗದಲ್ಲಿ ಸರಗಪಧಸ-ಸನಿಧಪಗರಸ (ಇದು ರತ್ನಾಂಗಿ ಮೇಳಜನ್ಯ). ಆರೋಹಣದಲ್ಲಿ ಐದು ಅವರೋಹಣದಲ್ಲಿ ಏಳು ಸ್ವರಗಳಿದ್ದರೆ ಔಡವ-ಸಂಪೂರ್ಣ; ಕೀರ್ತಿಪ್ರಿಯ ರಾಗದಲ್ಲಿ ಸರಮಪಧಸ-ಸನಧಪಮಗರಸ (ಇದು ಕನಕಾಂಗಿ ಮೇಳ ಜನ್ಯ). ಆರೋಹಣದಲ್ಲಿ ಆರು, ಅವರೋಹಣದಲ್ಲಿ ಆರು ಸ್ವರಗಳಿದ್ದರೆ ಷಾಡವ-ಷಾಡವ; ಶ್ರೀ ರಂಜಿನೀ ರಾಗದ ಸ್ವರಗಳು ಸರಿಗಮಧನಿಸ-ಸನಿಧಮಗರಿಸ (ಖರಹರಪ್ರಿಯಜನ್ಯ). ಆರೋಹಣದಲ್ಲಿ ಆರು ಅವರೋಹಣದಲ್ಲಿ ಏಳು ಸ್ವರಗಳಿದ್ದರೆ ಷಾಡವ-ಸಂಪೂರ್ಣ; ಕಾಂಭೋದಿ ರಾಗದಲ್ಲಿ ಸರಿಗಮಪಧಸ ಸನಿಧಪಮಗರಿಸ (ಹರಿಕಾಂಭೋದಿ ಜನ್ಯ). ಆರೋಹಣದಲ್ಲಿ ಏಳು ಅವರೋಹಣದಲ್ಲಿ ಆರು ಸ್ವರಗಳಿದ್ದರೆ ಸಂಪೂರ್ಣ-ಷಾಡವ; ಸೇನಾಜಯಂತೀ ರಾಗದಲ್ಲಿ ಸರುರಿಗಪಧಮಸ-ಸಧಪನಿಮಗಸ (ಸುಚರಿತ್ರ ಮೇಳಜನ್ಯ). ಕಡೆಯದಾಗಿ ಆರೋಹಣದಲ್ಲಿ ಏಳು; ಅವರೋಹಣದಲ್ಲಿ ಐದು ಸ್ವರಗಳಿದ್ದರೆ ಸಂಪೂರ್ಣ-ಔಡವ ಗೌರೀಸೀಮಂತಿನೀ ರಾಗದಲ್ಲಿ ಸಗಮಮಪಧನಿಸ-ಸನಿಪಗರಿಸ (ನಾಸಿಕಾಭೂಷಣೀಜನ್ಯ). ಇದು ಸ್ವರಸಂಖ್ಯಾ ದೃಷ್ಟಿಯಿಂದ ಮಾಡಿದ ವಿಭಾಗ. ಮತ್ತೊಂದು ದೃಷ್ಟಿಯೆಂದರೆ ಸ್ವರಗಳು ಕ್ರಮವಾಗಿ ಬಂದಿವೆಯೋ ಇಲ್ಲವೋ ಎಂಬುದು. ಅವರೋಹಣದಲ್ಲಿ ಆಧಾರ ಷಡ್ಜದಿಂದ ಶುರುಮಾಡಿ ಋಷಭ, ಅನಂತರ ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ, ತಾರಷಡ್ಜ, ಅವರೋಹಣದಲ್ಲಿ ತಾರಷಡ್ಜದಿಂದ ಶುರುಮಾಡಿ ನಿಷಾದ, ಧೈವತ, ಪಂಚಮ, ಮಧ್ಯಮ, ಗಾಂಧಾರ, ಋಷಭ ಮಧ್ಯಸ್ಥಾಯಿಷಡ್ಜ ಮುಟ್ಟುವ ರಾಗಗಳು ಕ್ರಮರಾಗಗಳು. ಈ ಕ್ರಮ ತಪ್ಪಿ ಸ್ವರಗಳು ಬಂದರೆ ಅಂಥ ರಾಗಕ್ಕೆ ವಕ್ರರಾಗ ಎಂದು ಹೆಸರು. ಈ ವಕ್ರತ್ವ ಆರೋಹಣದಲ್ಲಿರಬಹುದು. ಚಕ್ರವಾಕಜನ್ಯವಾದ ವೇಗವಾಹಿನೀ ಸ ರ ಗು ಮ ಪ ಧಿ ನಿ ಸ - ಸ ನಿ ಧಿ ಪ ಮ ಗು ರ ಸ ಎಂಬ ಸ್ವರಗಳನ್ನೂ ನಟಭೈರವೀಜನ್ಯವಾದ ಆನಂದಭೈರವಿ ಸ ಗಿ ರಿ ಗಿ ಮ ಪ ಧ ಪ ನಿ ಸ - ಸ ನಿ ಧ ಪ ಮ ಗ ರಿ ಸ ಎಂಬ ಸ್ವರಗಳನ್ನೂ ಹೊಂದಿವೆ. ಇಲ್ಲವೇ ಅವರೋಹಣ ವಕ್ರವಾಗಿರಬಹುದು. ಹರಿಕಾಂಭೋದಿಜನ್ಯವಾದ ಸುರುಟಿ ರಾಗದಲ್ಲಿ ಸ ರಿ ಮ ಪ ನಿ ಸ - ಸ ನಿ ಧಿ ಪ ಮ ಗು ಪ ಮ ರೀ ಸ ಎಂಬ ಸ್ವರಗಳೂ ಗಾಂಗೇಯ ಭೂಷಣೀಜನ್ಯವಾದ ಗಂಗಾತರಂಗಿಣಿ ರಾಗದಲ್ಲಿ ಸ ರು ಗು ಮ ಪ ಸ - ಸ ನು ಧ ಪ ಸ ಗು ಮ ರು ಸ ಎಂಬ ಸ್ವರಗಳೂ ಬರುತ್ತವೆ. ಅಥವಾ ಎರಡೂ ವಕ್ರವಾಗಿರಬಹುದು. ನಟಭೈರವೀಜನ್ಯವಾದ ಹಿಂದೋಳ ವಸಂತ ರಾಗದಲ್ಲಿ ಸ ಗಿ ಮ ಪ ಧ ನಿ ಧ ಸ - ಸ ನಿ ಧ ಪ ಮ ಧ ಮ ಗಿ ಸ ಎಂಬ ಸ್ವರಗಳು ಬರುತ್ತವೆ. ತಂತಮ್ಮ ಮೇಳಕರ್ತಗಳಲ್ಲಿ ಬಂದಂಥದೇ ಜಾತಿಯ ಸ್ವರಗಳನ್ನು ಮಾತ್ರ ಜನ್ಯರಾಗಗಳು ಹೊಂದಿದ್ದರೆ ಅಂಥವಕ್ಕೆ ಉಪಾಂಗರಾಗಗಳೆನ್ನುತ್ತಾರೆ; ಶುದ್ಧ ಸಾವೇರಿ, ಮೋಹನ ಮುಂತಾದ ಹಲವು ರಾಗಗಳು ಈ ಜಾತಿಗೆ ಸೇರಿದವು. ತಂತಮ್ಮ ಮೇಳಗಳ ಸ್ವರಗಳ ಜೊತೆಗೆ ವಿಜಾತೀಯ ಸ್ವರಗಳೂ ಜನ್ಯರಾಗದಲ್ಲಿದ್ದರೆ ಅದು ಭಾಷಾಂಗರಾಗ; ಈ ಅನ್ಯಸ್ವರಗಳು ಕೆಲವು ಸಂಚಾರಗಳಲ್ಲಿ ಮಾತ್ರ ಬರುತ್ತವೆ. ನಟಭೈರವಿಯ ಧೈವತ ಶುದ್ಧವಾದರೂ ಭೈರವಿಯ ಕೆಲವೆಡೆ ಚತುಃಶ್ರುತಿ ಧೈವತ ಬರುತ್ತದೆ; ಇದರಿಂದ ರಾಗದ ಮಾಧುರ್ಯ ಹೆಚ್ಚುತ್ತದೆ. ನೀಲಾಂಬರಿ, ಮಾಂಜೆ, ಬಿಲಹರಿ ಮುಂತಾದ ಭಾಷಾಂಗ ರಾಗಗಳಲ್ಲಿ ಒಂದೇ ಒಂದು ಅನ್ಯಸ್ವರ ಇರುತ್ತದೆ. ಆನಂದಭೈರವಿ, ಹಿಂದುಸ್ತಾನೀ, ಬೇಹಾಗ್ ಮುಂತಾದ ಭಾಷಾಂಗರಾಗಗಳಲ್ಲಿ ಎರಡು ಅನ್ಯಸ್ವರಗಳು ಇರುತ್ತವೆ. ಹಿಂದುಸ್ತಾನೀ ಕಾಪಿಯಲ್ಲಿ ಮೂರು ಅನ್ಯಸ್ವರಗಳಿರುತ್ತವೆ. ಈ ಅನ್ಯಸ್ವರಗಳಿಂದ ರಾಗ ಲಕ್ಷಣಕ್ಕೆ ಧಕ್ಕೆ ಬರುವುದಿಲ್ಲ. ರಾಗದ ಸ್ವರೂಪ ಇನ್ನೂ ಹೆಚ್ಚು ಸ್ಫುಟವಾಗಲೆಂದೇ ಅನ್ಯಸ್ವರ ಪ್ರವೇಶದ ಆಶಯ.
ಸಾಮಾನ್ಯವಾಗಿ ಆರೋಹಣ ಆಧಾರಷಡ್ಜದಿಂದ ಮೊದಲಾಗಿ ತಾರಷಡ್ಜದಲ್ಲಿ ಮುಗಿಯುತ್ತದೆ. ಆದರೆ ಕೆಲವು ರಾಗಗಳಲ್ಲಿ ಆರೋಹಣ ತಾರಷಡ್ಜವನ್ನು ಮುಟ್ಟುವುದೇ ಇಲ್ಲ. ನಿಷಾದಕ್ಕೊ ಧೈವತಕ್ಕೊ ಪಂಚಮಕ್ಕೊ ಬಂದು ಹಿಂದಿರುಗುತ್ತದೆ. ಷಣ್ಮುಖಪ್ರಿಯ ಮೇಳದ ದೇಶಮಾಳವಿಯ ಕೈಶಿಕೀ ನಿಷಾದಕ್ಕಿಂತ ಮುಂದೆ ಹೋಗುವುದಿಲ್ಲ; ಇಂಥ ರಾಗಗಳಿಗೆ ನಿಷಾದಾಂತ ರಾಗಗಳೆನ್ನುತ್ತಾರೆ. ಸರಸಾಂಗೀ ಮೇಳದ ಮಣಿಮಯ ರಾಗ, ಧೀರ ಶಂಕರಾಭರಣ ಮೇಳದ ಕುರಂಜೀ ರಾಗ, ಶುದ್ಧ ಧೈವತದಲ್ಲೇ ಆರೋಹಣ ಮುಗಿಸುತ್ತವೆ. ಇಂಥವಕ್ಕೆ ಧೈವತಾಂತ ರಾಗಗಳೆಂದು ಹೆಸರು. ಧೀರಶಂಕರಾಭರಣ ಮೇಳದ ನವರೋಸ್ ಮತ್ತು ಜುಲಾವ್ ರಾಗಗಳು ಪಂಚಮದಲ್ಲೆ ಮುಗಿಯುವುದರಿಂದ ಅಂಥ ರಾಗಗಳಿಗೆ ಪಂಚಮಾಂತಗಳೆನ್ನುತ್ತಾರೆ. ಇವು ಜನ್ಯರಾಗದ ವಿವಿಧ ಜಾತಿಗಳು.
ಮೇಳಕರ್ತರಾಗ ಗೊತ್ತಾಗಿದ್ದರೆ ಅದರ ಮೇಳಸಂಖ್ಯೆ ಇದೇ ಎಂದು ಹೇಳುವ ಬಗೆ ಹೇಗೆ ಎಂಬುದನ್ನು ನಿರ್ಧರಿಸಲು ಈ ಕೆಳಗಿನ ಕಟಪಯಾದಿ ಸಂಖ್ಯಾಯಂತ್ರ ವನ್ನುಪಯೋಗಿಸುತ್ತಾರೆ. 1 2 3 4 5 6 7 8 9 0 ಕಾದಿನವ ಕ ಖ ಗ ಘ ಙ ಚ bsÀ ಜ ಝ ಞ ಟಾದಿನವ ಟ ಠ ಡ ಢ ಣ ತ ಥ ದ ಧ ನ ಪಾದಿಪಂಚ ಪ ಫ ಬ ಭ ಮ ಯಾದ್ಯಷ್ಟ ಯ ರ ಲ ವ ಶ ಷ ಸ ಹ
ಮೇಳ ಪತ್ತೆ ಮಾಡಬೇಕಾಗಿರುವ ರಾಗದ ಹೆಸರಿನ ಮೊದಲ ಎರಡು ಅಕ್ಷರಗಳನ್ನು ತೆಗೆದುಕೊಂಡು, ಆ ಅಕ್ಷರಗಳಿಗೆ ತಕ್ಕ ಸಂಖ್ಯೆಯನ್ನು ಈ ಪದಕದಿಂದ ನಿರ್ಧರಿಸಬೇಕು; ಅನಂತರ ಆ ಎರಡು ಸಂಖ್ಯೆಯನ್ನು ತಿರುಗುಮುರುಗು ಮಾಡಿದರೆ ಮೇಳರಾಗದ ಸಂಖ್ಯೆ ಬರುತ್ತದೆ. ದೃಷ್ಟಾಂತಕ್ಕೆ, ಚಾರುಕೇಶೀ ರಾಗದ ಮೇಳ ತಿಳಿಯಬೇಕೆಂದರೆ-ಚ ದ ಸಂಖ್ಯೆ ಪದಕದಲ್ಲಿ 6, ರು ದ ಸಂಖ್ಯೆ 2 ಅಂದರೆ 62 ಆಯಿತು. ಅದನ್ನು ಹಿಂದುಮುಂದು ಮಾಡಿದರೆ 26 - ಅದೇ ಚಾರುಕೇಶಿಯ ಮೇಳ ಸಂಖ್ಯೆ; ಹಾಗೆಯೇ ಖರಹರಪ್ರಿಯ ಖ 2 ರ 2; 22 ಹಿಂದು ಮುಂದು ಮಾಡಿದರೂ ಅಷ್ಟೇ ಅದರ ಮೇಳ. ಧಾತುವರ್ಧಿನಿ -ಧ 9, ತು 6; 96; 69ನೆಯ ಮೇಳ. ರಸಿಕಪ್ರಿಯ - ರ 2 ಸಿ 7; 27; 72ನೆಯ ಮೇಳ ಇತ್ಯಾದಿ. ಈ ಪದಕ ಜನ್ಯರಾಗಗಳಿಗೆ ಅನ್ವಯಿಸುವುದಿಲ್ಲ.
ರಾಗಗಳನ್ನು (ಜನಕ-ಜನ್ಯ ಎರಡೂ) ಮತ್ತೊಂದು ಬಗೆಯಲ್ಲಿ ವಿಂಗಡಿಸುತ್ತಾರೆ. ಮಾಯಾಮಾಳವಗೌಳ, ಕಲ್ಯಾಣಿಯಂಥ ರಾಗಗಳು ತಂತಮ್ಮ ವೈಶಿಷ್ಟ್ಯವನ್ನು ತಮ್ಮಲ್ಲಿಯೇ ಉಳಿಸಿಕೊಂಡು, ಅದರಿಂದ ಮಾತ್ರ ತೃಪ್ತವಾಗಿ, ಲಕ್ಷಣಕಾರರ ಆದೇಶಗಳಿಗೆ ತಲೆಬಾಗಿ ಪಾತಿವ್ರತ್ಯ ನಿಯಮ ಪಾಲಿಸುವ ರಾಗಗಳು, ಇವುಗಳಿಗೆ ಶುದ್ಧರಾಗಗಳೆಂದು ಹೆಸರು. ಸಾರಂಗ, ಸೌರಾಷ್ಟ್ರದಂಥ ಮತ್ತೆ ಕೆಲವು ರಾಗಗಳು ಬೇರೆ ರಾಗಗಳ ಲಕ್ಷಣವನ್ನೂ ಪ್ರದರ್ಶಿಸುತ್ತವೆ; ಇಂಥವಕ್ಕೆ ಛಾಯಾಲಗ ಅಥವಾ ಸಾಳಗ ಎನ್ನುತ್ತಾರೆ. ಉದಾ: ಕುರಂಜಿ, ಶಂಕರಾಭರಣ ಇತ್ಯಾದಿ.
ಹೀಗೆ ಬೇರೆ ರಾಗದ ಛಾಯೆ ತನ್ನ ವೈಶಿಷ್ಟ್ಯಕ್ಕೆ ಪೈಪೋಟಿ ಮಾಡುವಷ್ಟು ಹಿರಿದಾಗಿದ್ದರೆ ಅದು ಸಂಕೀರ್ಣ ಅಥವಾ ಮಿಶ್ರರಾಗ; ಘಂಟಾ, ಆಹಿರಿ ಮುಂತಾದವು ಇಂಥವು.
ಭಾವಸ್ಫುರಣದ ದೃಷ್ಟಿಯಿಂದ ರಾಗವನ್ನು ಘನ ಇಲ್ಲವೆ ನಯ ಎನ್ನಬಹುದು. ಚಲನಾಟ ರಾಗ ದಿಟ್ಟತನವನ್ನು ಸೂಚಿಸುತ್ತದೆ; ಶುದ್ಧನಾಟ ಶಕ್ತಿ, ವೈಭವಗಳ ಪ್ರದರ್ಶಕ. ಶ್ರೀರಾಗದಲ್ಲಿ ಶೋಕದ ವಾಸನೆ ಇದ್ದರೂ ಅದರಲ್ಲಿ ಒಂದು ಠೀವಿ, ಗತ್ತು ಇದೆ. ಹೀಗೆಯೇ ಗೌಳ ಆರಭಿ ವರಾಳಿ ಕೇದಾರ ರೀತಿಗೌಳ ಮುಂತಾದವು ಪ್ರತಿಷೆವಿಯನ್ನಾಗಲಿ ಪರಾಕ್ರಮವನ್ನಾಗಲೀ ವ್ಯಕ್ತಪಡಿಸುವುದರಿಂದ ಇವಕ್ಕೆ ಘನರಾಗಗಳೆನ್ನುತ್ತಾರೆ. ಈ ರಾಗಗಳಿಗೆ ತಾನ (ಮಧ್ಯಮ ಕಾಲ) ತುಂಬ ಸೊಗಸು. ದುಃಖಪ್ರದರ್ಶಕವಾದ ತೋಡಿ. ಅಂಗಲಾಚಿ ಬೇಡುವ ಕಾಂಬೋದಿ, ಗೋಳು ಕರೆಯುವ ಭೈರವಿ, ಶೃಂಗಾರರಸಭರಿತವಾದ ಕಲ್ಯಾಣಿ ಇಂಥ ಹೃದಯ ಮುಟ್ಟುವ ರಾಗಗಳನ್ನು ನಯ ಅಥವಾ ರಕ್ತಿರಾಗಗಳೆನ್ನುತ್ತಾರೆ. ಇವುಗಳ ಆಲಾಪನೆಯೇ ತುಂಬ ಹಿತ. ಈ ಎರಡೂ ಬಗೆಯ ಭಾವಗಳನ್ನು ಕೊಂಚಮಟ್ಟಿಗೆ ವ್ಯಕ್ತಪಡಿಸುತ್ತ ಆಲಾಪನೆಯಲ್ಲಿ ಮಾತ್ರವೇ ತನ್ನ ವೈಶಿಷ್ಟ್ಯ ಹೊರಸೂಸುವ ಕಾನಡ, ಬೇಹಾಗ್, ಜಂಝೂಟಿ ಮುಂತಾದ ದೇಶ್ಯ ರಾಗಗಳು ಉತ್ತರದಿಂದ ಕರ್ಣಾಟಕ ಸಂಗೀತದಲ್ಲಿ ಬಂದು ಸೇರಿಕೊಂಡು ಕರ್ನಾಟಕದವೇ ಆಗಿವೆ. ನವರೋಸ್, ಖಮಾಸ್, ಜಲಾವ್, ಕಾಪಿ ಇವೂ ಈ ರೀತಿಯವು. ಕರ್ಣಾಟಕ ಸಂಗೀತದವೇ ಪೂರ್ಣವಾಗಿ ಆದ ರಾಗಗಳು ಭೈರವಿ, ಕೇದಾರಗೌಳ, ಶಂಕರಾಭರಣ ಇತ್ಯಾದಿ. ರಾಗಗಳ ಹೆಸರುಗಳಲ್ಲೂ ಕರ್ಣಾಟಕದ ಶಂಕರಾಭರಣ ಹಿಂದುಸ್ತಾನಿಯ ಬಿಲವಾಲ್, ಕರ್ಣಾಟಕದ ಹನುಮತೋಡಿ, ಹಿಂದುಸ್ತಾನಿಯ ಭೈರವಿ, ಕರ್ಣಾಟಕದ ಮಾಯಾ ಮಾಳವಗೌಳ, ಹಿಂದುಸ್ತಾನಿಯ ಭೈರವ್, ಕರ್ಣಾಟಕದ ಶುಭಪಂತುವರಾಳಿ, ಹಿಂದುಸ್ತಾನಿಯ ತೋಡಿ ಇತ್ಯಾದಿ ವ್ಯತ್ಯಾಸಗಳಿವೆ.
ರಾಗಭಾವಗಳ ವಿಷಯ ಪ್ರಸ್ತಾಪ ಮಾಡುತ್ತ ಸಂಗೀತನಿಧಿ ತಿರುವನಂತಪುರಂ ಲಕ್ಷ್ಮಣ ಪಿಳ್ಳೆ ಅವರ ಅಭಿಪ್ರಾಯವನ್ನಿಲ್ಲಿ ಸೂಚಿಸುವುದು ಉಚಿತವೆನ್ನಿಸುತ್ತದೆ. ಅವರ ಪ್ರಕಾರ ತೋಡಿ, ಭೈರವಿಗಳು ವೈಭವ, ಠೀವಿಯ ರಾಗಗಳು; ಪುನ್ನಾಗ ವರಾಳಿ ಶೋಕಪೂರಿತ; ಮೋಹನ ಪೂರ್ವೀಕಲ್ಯಾಣಿ ರಾಗಗಳು ಶೃಂಗಾರರಸ ಪ್ರಧಾನ, ಬೇಗಡೆ ವಾದವಿವಾದಕ್ಕೆ ತಕ್ಕ ರಾಗ. ಅದರಲ್ಲಿ ಕೋಪ ಪ್ರದರ್ಶನ ಸುಲಭ. ನಾದನಾಮ ಕ್ರಿಯವಾದರೆ ಶಾಂತ, ಯೋಚನಾಭರಿತ; ನೀಲಾಂಬರಿ, ಯದುಕುಲ ಕಾಂಬೋದಿ ತಗ್ಗಿ ನಡೆಯುವ ರಾಗಗಳು. ಅವುಗಳದ್ದು ಬೇಡುವ ಸ್ವಭಾವ; ಕೀರ್ವಾಣಿ, ವಸಂತ ರಾಗಗಳು ಗಾಂಭೀರ್ಯವಿಶಿಷ್ಟ ಇತ್ಯಾದಿ. ಮಾಯಾಮಾಳವಗೌಳ ಗೌರವಸೂಚಕ, ಚಕ್ರವಾಕ ಪ್ರಣಯಸಂಬಂಧಿ, ಶಂಕರಾಭರಣ ಶಾಂತ, ಶುಭಪಂತುವರಾಳಿ ಮರ್ಯಾದೆಯ ರಾಗ, ಗಮನಪ್ರಿಯ ಉದ್ವಿಗ್ನ, ಮಧ್ಯಮಾವತಿ ಮತ್ತು ಆರಭಿ ಸ್ತೋತ್ರಕ್ಕೆ ಅನುರೂಪವಾದ ರಾಗಗಳು, ಧನ್ಯಾಸಿ ಗೋಗರೆಯುವ ರಾಗ, ಹಂಸಧ್ವನಿ ಭಕ್ತಿ ಹಾಗೂ ಶೃಂಗಾರರಸಯುಕ್ತ, ಬಿಲಹರಿ ಸಂತೋಷಪ್ರದರ್ಶಕ, ಶ್ರೀರಾಗ ದುಃಖಸೂಚಕ, ನಾದನಾಮಕ್ರಿಯ ಜನಪದ ಭಜನೆ ಮುಂತಾದವಕ್ಕೆ ಸರಿಹೋಗುವ ರಾಗ, ಆನಂದಭೈರವಿ ಭಕ್ತಿರಸಪ್ರಧಾನ ಎಂದು ಮುಂತಾಗಿ ಕೆಲವರು ಹೇಳುತ್ತಾರೆ. . ಕೆಲವು ರಾಗಗಳನ್ನು ನಿರ್ದಿಷ್ಟ ಕಾಲದಲ್ಲಿ ಹಾಡಿದರೇ ಇಂಪು, ಸೊಗಸು ಇರುವುದೆಂದು ನಮ್ಮಲ್ಲಿ ಒಂದು ಮತ. ಈ ದೃಷ್ಟಿಯಿಂದ ರಾಗಗಳನ್ನು ಬೆಳಗಿನ ರಾಗಗಳು, ಮಧ್ಯಾಹ್ನದ ರಾಗಗಳು ಎಂದು ಮುಂತಾಗಿ ವಿಂಗಡಿಸಬಹುದು. ಶಂಕರಾಭರಣ, ಬಿಲಹರಿ, ಹನುಮತೋಡಿ ಮುಂತಾದವು ಬೆಳಗಿನ ರಾಗಗಳು, ಮಾಯಾಮಾಳವಗೌಳವಂತೂ ಅರುಣೋದಯದ ರಾಗ. ಖರಹರಪ್ರಿಯ ಮಧ್ಯಾಹ್ನದ ರಾಗ. ಶುಭ ಪಂತುವರಾಳಿ, ಮೇಚಕಲ್ಯಾಣಿ ಮುಂತಾದವು ಸಾಯಂಕಾಲ ಹಾಡಲು ಯೋಗ್ಯ. ಹರಿಕಾಂಭೋದಿ, ನಟಭೈರವಿ, ಚಲನಾಟ ಮುಂತಾದವು ರಾತ್ರಿಯ ರಾಗಗಳು. ಚಕ್ರವಾಕ, ಆನಂದಭೈರವಿಯಂಥ ರಾಗಗಳು ಸಾರ್ವಕಾಲಿಕ. ಭರತಕಲ್ಪಲತಾ ಮಂಜರಿಯಲ್ಲಿ ಭೈರವಿ, ಭೂಪಾಲ ಮುಂತಾದವು ಪುರುಷ ರಾಗಗಳೆಂದೂ ಅವುಗಳಿಗೆ ಕೆಲವು ಸ್ತ್ರೀರಾಗಗಳಿವೆಯಂದೂ ಹೇಳಿದೆ. ಭೈರವ ರಾಗಕ್ಕೆ ಮೇಘರಂಜೀ, ಕುರಂಜೀ, ದೇವಕ್ರಿಯಾ; ಭೂಪಾಲಕ್ಕೆ ಮಲಹರಿ, ಬೌಳಿ, ವೇಳಾವತಿ; ಬಂಗಾಳಕ್ಕೆ ಧನ್ಯಾಸಿ, ಕರ್ಣಾಟ, ಗೌಳ; ಶ್ರೀರಾಗಕ್ಕೆ ಹಿಂದೋಳಿ, ಆಹಿರಿ; ವಸಂತ ರಾಗಕ್ಕೆ ರಾಮಕ್ರಿಯಾ, ವರಾಳಿ; ಸಾರಂಗಕ್ಕೆ ದೇಶಾಕ್ಷಿ, ರೀತಿಗೌಳ; ಪಂಚಮಕ್ಕೆ ದೇಶಿ, ಲಲಿತಾ,ತೋಡಿ ಇತ್ಯಾದಿ ಒಟ್ಟು ಎಂಟು ಪುರುಷ ರಾಗಗಳಿಗೆ ಇಪ್ಪತ್ತನಾಲ್ಕು ಸ್ತ್ರೀರಾಗಗಳನ್ನು ಭರತ ಹೇಳಿದ್ದಾನೆ.
ಲಕ್ಷಣಗ್ರಂಥಗಳಲ್ಲಿ ರಾಗಕ್ಕೆ 13 ಲಕ್ಷಣಗಳನ್ನು ಹೇಳಿದ್ದಾರೆ- ಗ್ರಹ, ಅಂಶ, ತಾರ, ಮಂದ್ರ, ನ್ಯಾಸ, ಅಪನ್ಯಾಸ, ಸನ್ಯಾಸ, ವಿನ್ಯಾಸ, ಬಹುತ್ವ, ಅಲ್ಪತ್ವ, ಅಂತರ, ಮಾರ್ಗ, ಷಾಡವ, ಔಡವ (ಸಂಗೀತರತ್ನಾಕರ). ಇವುಗಳಲ್ಲಿ ಗ್ರಹ, ಅಂಶ, ನ್ಯಾಸ ಮೂರು ಮಾತ್ರ ಮುಖ್ಯ. ಉಳಿದವು ಇಂದು ಅಷ್ಟಾಗಿ ವ್ಯವಹಾರದಲ್ಲಿಲ್ಲ. ಗ್ರಹವೆಂದರೆ ರಾಗ ಶುರುವಾಗುವ ಸ್ವರ (ತಮಿಳು ಎಡುಪ್ಪು). ನ್ಯಾಸ ರಾಗ ಮುಗಿಯುವ ಸ್ವರ ಅಂಶವೆಂದರೆ ರಾಗದಲ್ಲಿ ಅತಿ ಮುಖ್ಯವಾಗಿ ಪ್ರಯೋಗ ಬಾಹುಳ್ಯದಿಂದ ವಿಶಿಷ್ಟವಾದ ಸ್ವರ. ಇದಕ್ಕೆ ಜೀವಸ್ವರ, ರಾಗ ಛಾಯಾಸ್ವರ ಎಂತಲೂ ಕರೆಯುತ್ತಾರೆ. ಹನುಮತೋಡಿಯಲ್ಲಿ ಧೈವತ, ನಟಭೈರವಿಯಲ್ಲಿ ಋಷಭ, ಹರಿಕಾಂಭೋದಿಯಲ್ಲಿ ಗಾಂಧಾರ, ಖರಹರಪ್ರಿಯದಲ್ಲಿ ಪಂಚಮ, ಆರಭಿಯಲ್ಲಿ ಮಧ್ಯಮ, ಧನ್ಯಾಸಿಯಲ್ಲಿ ನಿಷಾದ ಇವು ಅಂಶಸ್ವರಗಳು.
ಒಂದು ರಾಗದ ಲಕ್ಷಣ ಹೇಳಬೇಕೆಂದರೆ ಮೊದಲು ಅದು ಮೇಳಕರ್ತವೊ ಜನ್ಯವೊ ಎಂಬುದನ್ನು ನಿರ್ಧರಿಸಬೇಕು. ಅದರ ಸ್ವರಜಾತಿಗಳನ್ನೂ ಗಮನಿಸಬೇಕು. ಜನ್ಯವಾದರೆ ಅದು ಯಾವ ಮೇಳ, ವಜರ್ಯ್‌ವೊ ಸಂಪೂರ್ಣವೊ ವಕ್ರವೊ ಕ್ರಮವೊ, ಅದರ ಮೂbsರ್Àನೆಗಳು ಯಾವುವು, ಷಾಡವವೊ, ಔಡವವೊ, ಸಂಪೂರ್ಣವೊ, ಉಪಾಂಗವೊ, ಭಾಷಾಂಗವೋ, ಯಾವ ಸ್ವರಾಂತ,ಅದರ ಸಂಚಾರಗಳು ಯಾವುವು, ಅದರ ಜೀವ ಹಾಗೂ ನ್ಯಾಸ ಸ್ವರಗಳು ಯಾವುವು. ಶುದ್ಧವೊ ಛಾಯಾಲಗವೊ, ಘನರಾಗವೊ, ರಕ್ತಿರಾಗವೊ, ಅದರ ವಿಶಿಷ್ಟ ಗಮಕಗಳು ಯಾವುವು, ವಿಶೇಷ ಸಂಚಾರಗಳು ಯಾವುವು, ಜಂಟಿಸ್ವರ ದಾಟುಸ್ವರ ಪ್ರಯೋಗಗಳುಂಟೆ - ಎಂಬೆಲ್ಲ ವಿಷಯಗಳನ್ನೂ ಗಮನದಲ್ಲಿ ಇಟ್ಟುಕೊಂಡು ರಾಗಲಕ್ಷಣ ನಿರ್ಧರಿಸಬೇಕು.
ತಾಳ
ಬದಲಾಯಿಸಿಕರ್ಣಾಟಕ ಸಂಗೀತದಲ್ಲಿ ರಾಗ ಎಷ್ಟು ಮುಖ್ಯವೋ ತಾಳ ಅಷ್ಟೇ ಮುಖ್ಯ; ತಾಳವೆಂದರೆ ಕಾಲನಿಯತಿ (ಟೈಮ್-ಮೆಷರ್). ಎಲ್ಲ ಸಂಗೀತದಲ್ಲೂ ತಾಳ ಅವಶ್ಯಾಂಗವಾದರೂ ಈ ಸಂಗೀತದಲ್ಲಿ ಅದಕ್ಕೆ ಪ್ರಮುಖಪಟ್ಟ; ತಾಳ ಎಂದರೆ ಕಾಲಪ್ರಮಾಣ. ಈ ಕಾಲದ ಗಣನೆ ಹೀಗಿದೆ. ಒಂದರಮೇಲೊಂದರಂತೆ ನೂರು ತಾವರೆ ಎಲೆಗಳನ್ನಿಟ್ಟು ಒಂದು ಸೂಜಿಯಿಂದ ಎಲ್ಲವನ್ನೂ ಒಮ್ಮೆಲೆ ಚುಚ್ಚಲು ಎಷ್ಟು ಕಾಲ ಬೇಕೋ ಅದು ಒಂದು ಕ್ಷಣ; ಎಂಟು ಕ್ಷಣಗಳಾದರೆ ಒಂದು ಲವ; ಎಂಟು ಲವಗಳಾದರೆ ಒಂದು ಕಾಷವಿ; ಎಂಟು ಕಾಷ್ಠಗಳಾದರೆ ಒಂದು ನಿಮಿಷ; ಎಂಟು ನಿಮಿಷಗಳು ಒಂದು ಕಲಾ; ಎರಡು ಕಲಾ ಒಂದು ಚತುರ್ಭಾಗ; ಎರಡು ಚತುರ್ಭಾಗ ಒಂದು ಅನುದ್ರುತ; ಎರಡು ಅನುದ್ರುತ ಒಂದು ದ್ರುತ; ಎರಡು ದ್ರುತ ಒಂದು (ಚತುರಶ್ರ) ಲಘು; ಎರಡು ಲಘು ಒಂದು ಗುರು; ಮೂರು ಲಘು ಒಂದು ಪ್ಲುತ; ನಾಲ್ಕು ಪ್ಲುತ ಒಂದು ಕಾಕಪಾದ. ವ್ಯವಹಾರದಲ್ಲಿ ಆರು ಮುಖ್ಯ ಕಾಲವಿಭಾಗಗಳನ್ನು ಪರಿಗಣಿಸುತ್ತಾರೆ. ಕಾಲವಿಭಾಗ ಸಂಜ್ಞೆ ಅಕ್ಷರಕಾಲ ಮಾತ್ರಾಕಾಲ ಕ್ರಿಯೆ ಅನುದ್ರುತ 0 1 1/4 ಪೆಟ್ಟು ದ್ರುತ 0 2 1/2 ಪೆಟ್ಟು,ಹುಸಿ ಲಘು 1 4 1 ಪೆಟ್ಟು,ಎಣಿಕೆ ಗುರು S 8 2 ——— ಪ್ಲುತ 3 12 3 ——— ಕಾಕಪಾದ x 16 4 ——— ಈ ಆರು ತಾಳದ ಷಡಂಗಗಳೆಂದು ಕರೆಸಿಕೊಳ್ಳುತ್ತವೆ. ಲಕ್ಷಣ ಗ್ರಂಥಗಳಲ್ಲಿ ಹೇಳಿರುವ ತಾಳಗಳಲ್ಲಿ ಈ ಆರೂ ಅಂಗಗಳು ಇರುತ್ತವೆ. ಆದರೆ ಸಾಮಾನ್ಯವಾಗಿ ವ್ಯವಹಾರದಲ್ಲಿರುವ ಸುಳಾದಿ ಸಪ್ತತಾಳಗಳಲ್ಲಿ ಅನುದ್ರುತ, ದ್ರುತ, ಲಘು0 ಇಷ್ಟೇ ಇರುತ್ತವೆ. ಒಂದು ಪೆಟ್ಟು (ಘಾತ) ಹಾಕುವಷ್ಟು ಕಾಲ ಅಥವಾ ಒಂದಕ್ಷರ ಉಚ್ಚರಿಸುವಷ್ಟು ಕಾಲ ಅನುದ್ರುತ ವೆನಿಸಿಕೊಳ್ಳುತ್ತದೆ; ಒಂದು ಪೆಟ್ಟು ಹಾಕಿ ಕೈ ಎತ್ತಿ ಪಕ್ಕಕ್ಕೆ ಬಿಡುವಷÀÄ್ಟ (ವಿಸರ್ಜ) ಕಾಲ ಅಥವಾ ಎರಡಕ್ಷರ ಉಚ್ಚರಿಸುವಷ್ಟು ಕಾಲ ದ್ರುತ. ಲಘುವಿನಲ್ಲಿ ಐದು ಜಾತಿಗಳುಂಟು. ತ್ರಿಶ್ರ ಲಘುವೆಂದರೆ ಒಂದು ಪೆಟ್ಟು ಹಾಕಿ ಬೆರಳಲ್ಲಿ ಎರಡು ಎಣಿಸುವಷ್ಟು ಕಾಲ, ಅಂದರೆ ಮೂರು ಅಕ್ಷರ ಕಾಲವಾಯಿತು. ಚತುರಶ್ರ ಲಘುವಿನಲ್ಲಿ ಒಂದು ಪೆಟ್ಟು ಹಾಕಿ ಮೂರು ಎಣಿಕೆ ಅಂದರೆ ನಾಲ್ಕಕ್ಷರ ಕಾಲ. ಖಂಡ ಲಘುವೆಂದರೆ ಒಂದು ಪೆಟ್ಟು, ನಾಲ್ಕು ಎಣಿಕೆ ಎಂದರೆ ಐದಕ್ಷರ ಕಾಲ. ಮಿಶ್ರ ಲಘುವಿನಲ್ಲಿ ಒಂದು ಪೆಟ್ಟು ಆರು ಎಣಿಕೆ ಏಳಕ್ಷರ ಕಾಲ. ಕಡೆಯದಾಗಿ ಸಂಕೀರ್ಣ ಲಘವಿನಲ್ಲಿ ಒಂದು ಪೆಟ್ಟು ಎಂಟು ಎಣಿಕೆ, 9 ಒಟ್ಟು ಒಂಬತ್ತು ಅಕ್ಷರ ಕಾಲ. ಈ ಐದು ಲಘುವಿನ ಜಾತಿ ಭೇದಗಳು ಸಪ್ತ ಸುಳಾದಿ ತಾಳಗಳಲ್ಲಿ ಸೇರಿದರೆ ಒಟ್ಟು 35 ತಾಳಗಳಾಗುತ್ತವೆ. ಒಂದೊಂದು ತಾಳದಲ್ಲೂ ಐದೈದು ಜಾತಿಗಳು.
ಈ ಏಳು ಸುಳಾದಿ ತಾಳಗಳಲ್ಲೂ ಪುರಂದರದಾಸರು ಅನೇಕ ಅಲಂಕಾರಗಳನ್ನು ಹೆಣೆದಿದ್ದಾರೆ. ಉದಾಹರಣೆಗೆ - ತ್ರಿಶ್ರ ಧ್ರುವ ಸರಿಗ, ಸಗ, ರಿಗಮ, ಗಮಪ; ರಿಗಮ, ರಿಮ, ಗಮಪ, ಮಪಧ ಇತ್ಯಾದಿ. ಚತುರಶ್ರ ಮಠ್ಯ - ಸರಿಗರಿ, ಸರಿ, ಸರಿಗಮ, ರಿಗಮಗ, ರಿಗ, ರಿಗಮಪ ಇತ್ಯಾದಿ. ಖಂಡರೂಪಕ ಸರಿ, ಸರಿಗಮಪ; ರಿಗ, ರಿಗಮಪಧ ಇತ್ಯಾದಿ. ಮಿಶ್ರ ಝಂಪ - ಸರಿಗಸರಸರಿ, ಗ, ಮಾರಿಗಮರಿಗರಿಗ, ಮ, ಪಾ ಇತ್ಯಾದಿ. ಸಂಕೀರ್ಣ ತ್ರಿಪುಟ - ಸಾರೀಗಾಮಪಧ, ಮಪ, ಧ, ನಿ, ರೀಗಾಮಾಪಧನಿ, ಪನಿಧಸ ಇತ್ಯಾದಿ. ತ್ರ್ಯಶ್ರ ಅಟ - ಸರಿಗ, ರಿಗಮ, ಪಾ, ಪಾ, ರಿಗಮ, ಗಮಪ, ಧಾ, ಧಾ ಇತ್ಯಾದಿ. ಚತುರಶ್ರ ಏಕ - ಸರಿಗಮ; ರಿಗಮಪ ಇತ್ಯಾದಿ. ಇವಕ್ಕೆ ತಾಳಾಲಂಕಾರಗಳು ಎಂದು ಹೆಸರು. ಮೇಲೆ ಹೇಳಿದ ಮೂವತ್ತೈದು ತಾಳಗಳಲ್ಲಿ ಒಂದೊಂದು ಗತಿಭೇದದಿಂದ ಐದೈದು ಉಪವಿಭಾಗಗಳಾಗಿ ಒಡೆಯುತ್ತವೆ; ಎಂದರೆ ಒಟ್ಟು 175 ತಾಳಗಳಾದಂತಾಯಿತು. ಐದು ಜಾತಿಗಳೂ ಐದು ಗತಿಭೇದಗಳೂ ಒಂದೊಂದು ತಾಳದಲ್ಲೂ ಬಂದು ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲೂ 25 ವಿಧಗಳಾಗುತ್ತವೆ. ಜಾತಿಭೇದ ಲಘುವಿಗೆ ಮಾತ್ರವಾದರೆ ಗತಿಭೇದ ಇತರ ತಾಳಾಂಗಗಳಿಗೂ ಉಂಟು. ಚಾಪು ತಾಳ ಎಂಬ ಒಂದು ತಾಳ ವಿಶೇಷ ನಮ್ಮಲ್ಲಿ ತೀರ ಹಿಂದಿನಿಂದಲೂ ವ್ಯವಹಾರದಲ್ಲಿದೆ; ಅದರ ಕ್ರಿಯೆ ಎರಡೂ ಘಾತಗಳು ಅಥವಾ ಒಂದು ಘಾತ ಒಂದು ವಿಸರ್ಜಿತ.
ತಾಳದ ಪ್ರಾಣಗಳಲ್ಲಿ ಗ್ರಹ ಒಂದು ಎಂದು ಲಕ್ಷಣ ಗ್ರಂಥಗಳಲ್ಲಿ ಹೇಳಿದೆ. ಇಲ್ಲಿ ಗ್ರಹವೆಂದರೆ ತಾಳಾವರ್ತದಲ್ಲಿ ಸಂಗೀತದ ಸಾಹಿತ್ಯವನ್ನು ಪ್ರಾರಂಭಿಸುವುದೆಂದರ್ಥ. ಗ್ರಹದಲ್ಲಿ ಎರಡು ವಿಧ-ಸಮ, ವಿಷಮ ಎಂದು. ಸಮಗ್ರಹವೆಂದರೆ ತಾಳ ಶುರುವಾಗುತ್ತಿದ್ದಂತೆಯೇ ಸಂಗತಿಯೂ ಶುರುವಾಗುವುದು; ಎರಡಕ್ಕೂ ವ್ಯತ್ಯಾಸ ಬಂದರೆ ಅದು ವಿಷಮ. ತಾಳಕ್ಕೆ ಮುಂಚೆಯೇ ಗಾನಶುರುವಾದರೆ ಅದು ಅತೀತ ವಿಷಮಗ್ರಹ; ತಾಳವೇ ಮುಂಚೆ ಶುರುವಾಗಿ ಆಮೇಲೆ ಗಾನ ಆರಂಭವಾದರೆ ಅದು ಅನಾಗತ ವಿಷಮ ಗ್ರಹ. ತಾಳದ ಮತ್ತೊಂದು ಪ್ರಾಣ ಲಯ, ಎಂದರೆ ಗಾನ ವೇಗ (ಟೆಂಪೋ), ಇದರಲ್ಲಿ ಮೂರು ವಿಧ; ಓಟ ಜೋರಾಗಿದ್ದರೆ ಅದು ದ್ರುತ, ನಿಧಾನವಾದರೆ ವಿಳಂಬಿತ; ಎರಡೂ ಅಲ್ಲದಿದ್ದರೆ ಮಧ್ಯ. ಇದಕ್ಕೇ ಸಾಮಾನ್ಯವಾಗಿ ಕಾಲ ಎಂದು ವ್ಯವಹರಿಸುವುದುಂಟು. ಇನ್ನೊಂದು ತಾಳ ಪ್ರಾಣವಾದ ಕಳಾ ಎನ್ನುವುದು ತಾಳಾಕ್ಷರದಲ್ಲಿ ಅಂಗೀಭೂತವಾದ ಕಾಲವಿಭಾಗ. ಏಕಕಳಾ ಎಂದರೆ ಒಂದು ತಾಳಾಕ್ಷರದಲ್ಲಿ ಒಂದೇ ಉಪವಿಭಾಗ ಇರುವುದು. ಅಂದರೆ ಒಂದು ತಾಳಕ್ರಿಯೆಗೆ ಒಂದು ಸ್ವರ ಪ್ರಮಾಣ; ದ್ವಿಕಳಾ ಎಂದರೆ ಒಂದು ತಾಳಕ್ರಿಯೆಗೆ ಎರಡಕ್ಷರಗಳು ಇತ್ಯಾದಿ.
ಯತಿ ಎನ್ನುವುದು ಇನ್ನೊಂದು ತಾಳಪ್ರಾಣ (ರಿದಮ್). ತಾಳಾಂಗಗಳಲ್ಲಿ ಸಮ, ಗೋಪುಚ್ಫ, ಸ್ರೋತೋವಹ, ಡಮರು, ಮೃದಂಗ, ವಿಷಮ ಎಂದು ಷಡ್ವಿಧ. ಏರದೇ ಕುಗ್ಗದೇ ಇರುವೆಯ ಸಾಲಿನಂತೆ ಒಂದೇ ಸಾಲಿನಲ್ಲಿ ಹೋಗುವುದು ಸಮಯತಿ. ಎಲ್ಲ ತಾಳಾಂಗಗಳೂ ಒಂದೇ ಅಕ್ಷರ ಪ್ರಮಾಣದ್ದೋ ಇಲ್ಲವೆ ಎರಡೇ ಅಕ್ಷರ ಪ್ರಮಾಣದ್ದೋ ಇರಬಹುದು. ಗೋಪುಚ್ಫ ಯತಿಯಲ್ಲಾದರೋ ಹಸುವಿನ ಬಾಲದಂತೆ ತಾಳಾಂಗಗಳು ಮೊದಲು ದೊಡ್ಡವಾಗಿದ್ದು ಬರುಬರುತ್ತ ಕ್ರಮವಾಗಿ ಸಣ್ಣಗಾಗುವುವು. ಮೊದಲೊಂದು ಕಾಕಪಾದ. ಅನಂತರ ಒಂದು ಪ್ಲುತ, ಅನಂತರ ಲಘು, ದ್ರುತ, ಅನುದ್ರುತ - ಹೀಗೆ ತಾಳಾಂಗಗಳು ಬರುತ್ತವೆ. ಈ ಕ್ರಮ ಹಿಂದುಮುಂದಾದರೆ ಅದು ಸ್ರೋತೋವಹ; ನದಿ ಸಣ್ಣದಾಗಿ ಶುರುವಾಗಿ ಕ್ರಮೇಣ ದೊಡ್ಡದಾಗುವುದೇ ಉಪಮಾನ. ಡಮರು ಯತಿಯಲ್ಲಿ ಗೋಪುಚ್ಫ ಹಾಗೂ ಸ್ರೋತೋವಹಗಳು ಸಮವಾಗಿ ಸೇರುತ್ತವೆ. ಅರ್ಧದ ವರೆಗೆ ಸಣ್ಣದಾಗುತ್ತ ಬಂದು ಅನಂತರ ದೊಡ್ಡದಾಗಲಾರಂಭಿಸಿ ಮೊದಲ ಪ್ರಮಾಣಕ್ಕೆ ಬರುವುದು ಡಮರು. ಇದಕ್ಕೆ ವಿರುದ್ಧ ಮೃದಂಗ ಯತಿ. ಮೊದಲು ಸ್ರೋತೋವಹ ಅರ್ಧದ ವರೆಗೆ ಬಂದು ಅನಂತರ ಗೋಪುಚ್ಫ ಆರಂಭವಾಗಿ ಆದ್ಯಂತ ಪ್ರಮಾಣ ಒಂದೇ ಆಗುತ್ತದೆ. ಇಂಥ ಯಾವ ಕ್ರಮವೂ ಇಲ್ಲದಿರುವುದು ವಿಷಮ ಯತಿ. ಮಾರ್ಗ ಎಂಬ ತಾಳಪ್ರಾಣ ಕೃತಿರಚನೆಯಲ್ಲಿ ಕಾಲ ಲಯ ನಿಯಂತ್ರಣದ ಸಾಧನ. ಇದರಲ್ಲಿ ಆರು ವಿಧ. ಒಂದು ತಾಳಾಕ್ಷರಕ್ಕೆ ಎಂಟು ಮಾತ್ರಾಕಾಲಗಳಿದ್ದರೆ ದಕ್ಷಿಣ ಸಂಜ್ಞೆ. ನಾಲ್ಕು ಮಾತ್ರಾ ಕಾಲಗಳಿದ್ದರೆ ವರ್ತಿಕ. ಎರಡಿದ್ದರೆ ಚಿತ್ರ, ಒಂದಿದ್ದರೆ ಚಿತ್ರತರ, ಅರ್ಧ ಇದ್ದರೆ ಚಿತ್ರತಮ (ದ್ರುತ), ನಾಲ್ಕನೆಯ ಒಂದು ಭಾಗ ಇದ್ದರೆ ಅತಿಚಿತ್ರತಮ (ಅನುದ್ರುತ). ಕಡೆಯದಾಗಿ ಪ್ರಸ್ತಾರ ಎಂದರೆ ತಾಳದ ವಿವಿಧ ಅಂಗಗಳನ್ನು ಉಪಾಂಗಗಳಾಗಿ ವಿಭಜಿಸಿ ಅವುಗಳ ವೈವಿಧ್ಯವನ್ನೆಲ್ಲ ಕ್ರಮ ಹಿಡಿದು ಪ್ರದರ್ಶಿಸುವುದು ಎಂದರ್ಥ.
ಈ ಹತ್ತು- ಅಂಗ (ದ್ರುತ, ಲಘು ಇತ್ಯಾದಿ), ಜಾತಿ (ತ್ರಿಶ್ರ ಇತ್ಯಾದಿ), ಕಾಲ (ಕ್ಷಣ, ಲವ ಇತ್ಯಾದಿ), ಗ್ರಹ, ಲಯ, ಯತಿ, ಮಾರ್ಗ, ಪ್ರಸ್ತಾರ, ಕ್ರಿಯೆ (ಘಾತ ಇತ್ಯಾದಿ), ಕಳಾ ತಾಳದ ದಶಪ್ರಾಣಗಳೆಂದು ಲಕ್ಷಣಕಾರರು ಹೇಳಿದ್ದಾರೆ. ಅವುಗಳಲ್ಲಿ ಮುಖ್ಯವಾದುವೆಂದರೆ ಅಂಗ, ಗ್ರಹ, ಜಾತಿ, ಕ್ರಿಯೆ, ಲಯಗಳು. ಶಾಸ್ತ್ರೋಕ್ತವಾಗಿ 108 ತಾಳಗಳಿದ್ದರೂ ವ್ಯವಹಾರದಲ್ಲಿರುವುದು ಮೇಲೆ ಹೇಳಿದ 35 ಮಾತ್ರ.
ಕಲಿಕೆಪ್ರಯೋಗ
ಬದಲಾಯಿಸಿಕರ್ಣಾಟಕ ಸಂಗೀತ ಕಲಿಯಲಾರಂಭಿಸುವವರು ಮೊದಲು ಸ್ವರಜ್ಞಾನಕೋಸ್ಕರ ಸ್ವರಾವಳಿ (ಸರಳೆ), ಜಂಟಿವರಸೆ, ಅಲಂಕಾರಗಳನ್ನು ಕಲಿತು ಗೀತಗಳಿಗೆ ಕೈ ಹಾಕುತ್ತಾರೆ. ಗೀತ ತುಂಬ ಸರಳವಾದ ಕೃತಿ; ಅದರಲ್ಲಿ ಪಲ್ಲವಿ, ಅನುಪಲ್ಲವಿ, ಚರಣ ಮುಂತಾದ ಗೊಂದಲಗಳಿಲ್ಲ; ತಾಳವೂ ತುಂಬ ಸುಲಭ. ಆಯಾ ರಾಗ ಲಕ್ಷಣ ಪ್ರದರ್ಶಿಸಲು ಎಷ್ಟು ಬೇಕೋ ಅಷ್ಟು ಮಾತ್ರ ಸಂಚಾರ ಇರುತ್ತದೆ. ಪ್ರತಿ ಸ್ವರಕ್ಕೂ ಸಾಹಿತ್ಯದಲ್ಲೊಂದು ಅಕ್ಷರ ಇರುತ್ತದೆ. ಪುರಂದರದಾಸ, ಪೈದಾಳ ಗುರುಮೂರ್ತಿಶಾಸ್ತ್ರಿ, ವೆಂಕಟಮಖಿ ಮುಂತಾದವರು ಗೀತರಚನೆಯಲ್ಲಿ ಪ್ರಸಿದ್ಧರು. ಗೀತದ ಅನಂತರ ಅಭ್ಯಾಸ ಮಾಡವುದು ಸ್ವರಜತಿ. ಇದರಲ್ಲಿ ಪಲ್ಲವಿ ಇದ್ದು (ಕೆಲವು ವೇಳೆ ಅನುಪಲ್ಲವಿಯೂ ಇದ್ದು) ನಾಲ್ಕೈದು ಚರಣಗಳಿರುತ್ತವೆ. ಪ್ರತಿ ಚರಣ ಮುಗಿದೊಡನೆ ಪಲ್ಲವಿ ಬರುತ್ತದೆ. ಇದರಲ್ಲಿ ಭಕ್ತಿರಸ ಅಥವಾ ಶೃಂಗಾರರಸ ಇರುತ್ತದೆ. ಶ್ಯಾಮಶಾಸ್ತ್ರಿಗಳ ಕಾಮಾಕ್ಷಿ ಎಂಬ ಭೈರವೀ ಸ್ವರಜತಿ, ನೀಟು ಗಲ ಮಿಠಾರಿ ಎಂಬ ಕಲ್ಯಾಣಿ ಸ್ವರಜತಿ, ಸಾಮೀ ದಯಮೀರಾ ಎಂಬ ಮೋಹನ ಸ್ವರಜತಿ, ರಾರ ವೇಣು ಗೋಪಬಾಲ ಎಂಬ ಬಿಲಹರಿಯ ಸ್ವರಜತಿ ಮುಂತಾದವು ಪ್ರಸಿದ್ಧ. ಸ್ವರಜತಿಯ ಹಂತ ದಾಟಿದರೆ ವರ್ಣ. ವರ್ಣಗಳು ವಿದ್ವತ್ಪೂರ್ಣ ರಾಗಭಾವದಿಂದ ಪಕ್ವವಾಗಿರುತ್ತವೆ. ಇದರಲ್ಲಿ ಒಂದು ಸಣ್ಣ ಪಲ್ಲವಿ, ಅನುಪಲ್ಲವಿ, ಮುಕ್ತಾಯ ಸ್ವರ (ಇವುಗಳು ಸೇರಿ ಪೂರ್ವಾಂಗ) ಒಂದು ಚರಣ ಮತ್ತು ಚರಣ ಸ್ವರಗಳು (ಇವು ಉತ್ತರಾಂಗ) ಇರುತ್ತವೆ. ಪಲ್ಲವಿ, ಅನುಪಲ್ಲವಿ, ಚರಣಗಳಿಗೆ ಮಾತ್ರ ಸಾಹಿತ್ಯ ಇದ್ದು ಉಳಿದ ಭಾಗಗಳು ಸ್ವರ ಮಾತ್ರವಾಗಿದ್ದರೆ ಅದು ತಾನ ವರ್ಣ; ವರ್ಣದ ಪೂರಾ ಸಾಹಿತ್ಯ ಇದ್ದರೆ ಅದು ಪದವರ್ಣ. ರಾಗಮಾಲಿಕಾ ವರ್ಣಗಳಲ್ಲಿ ಒಂದಕ್ಕಿಂತ ಹೆಚ್ಚು ರಾಗಗಳಿರುತ್ತವೆ. ಪಲ್ಲವಿ ಒಂದು ರಾಗ, ಅನುಪಲ್ಲವಿ ಇನ್ನೊಂದು. ಹೀಗೆ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ರಾಮನಾಥಪುರಂ ಶ್ರೀನಿವಾಸಯ್ಯಂಗಾರ್, ಶ್ಯಾಮಾಶಾಸ್ತ್ರಿ, ವೀಣಾ ಕುಪ್ಪಯ್ಯರ್, ಆದಿಯಪ್ಪಯ್ಯ, ವೀಣೆ ಶೇಷಣ್ಣ ಮುಂತಾದವರ ವರ್ಣಗಳು ಇಂದಿಗೂ ವ್ಯವಹಾರದಲ್ಲಿವೆ. ವರ್ಣಗಳಾದ ಮೇಲೆ ಕೃತಿ; ರಾಗಭಾವ ಸಂಪೂರ್ಣವಾಗಿ ಹೊರಸೂಸುವ ಸಾಧನ ಇದು. ಇಲ್ಲಿ ಮಾತಿನ ಜಂಜಾಟ ಅಷ್ಟಾಗಿ ಇಲ್ಲ. ಇದರಲ್ಲಿ ಪಲ್ಲವಿ, ಅನುಪಲ್ಲವಿ, ಚರಣಗಳು, ಕೆಲವೆಡೆ ಚಿಟ್ಟೆಸ್ವರ ಇರುತ್ತವೆ. ಕೃತಿಯೇ ಸಂಗೀತ ಸಾಹಿತ್ಯ ರಚನೆಯ ಪರಾಕಾಷವಿತೆ. ಕೃತಿಯ ನಡುವೆ ಮಧ್ಯಮ ಕಾಲ ಸಾಹಿತ್ಯ ಇರಬಹುದು; ಕೃತಿಯ ಸಾಹಿತ್ಯದ ಕೆಲವು ಕಡೆ ಸಂಗತಿಗಳಿರಬಹುದು. ಇವೆಲ್ಲ ಮಾಧುರ್ಯವರ್ಧಕ ಸಾಧನಗಳು. ಕೃತಿಕಾರರಲ್ಲಿ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ, ಶ್ಯಾಮಾಶಾಸ್ತ್ರಿ, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ವೀಣಾ ಕುಪ್ಪಯ್ಯರ್, ತಿರುವಟ್ಟಿಯೂರು ತ್ಯಾಗಯ್ಯರ್, ಮೈಸೂರು ಸದಾಶಿವರಾಯ, ಸ್ವಾತಿ ತಿರುನಾಳ್, ರಾಮಸ್ವಾಮಿ ದೀಕ್ಷಿತ, ಪಲ್ಲವಿ ಗೋಪಾಲಯ್ಯ, ಮೈಸೂರು ವಾಸುದೇವಾಚಾರ್ಯ ಮುಂತಾದವರು ಪ್ರಖ್ಯಾತರು. ರಾಗಮಾಲಿಕೆ ಎಂಬುದು ಕೃತಿಯಂತೆಯೆ ಪಲ್ಲವಿ, ಅನುಪಲ್ಲವಿ, ಚರಣಗಳಿಂದ ಕೂಡಿ ವಿವಿಧ ರಾಗಗಳಲ್ಲಿರುತ್ತದೆ. ಪನ್ನಗೇಂದ್ರಶಯನ ಎಂಬ ಸ್ವಾತಿ ತಿರುನಾಳ್ ರಾಗಮಾಲಿಕೆ, ನಿತ್ಯಕಲ್ಯಾಣೀ ಎಂಬ ತೋಡಿ, ಸೀತಾರಾಮಯ್ಯನ ರಾಗಮಾಲಿಕೆ, ಲೀಲಾಶುಕನ ಶ್ಯಾಮಲಾದಂಡಕ, ಕೃಷ್ಣಕರ್ಣಾಮೃತದ ಹಲವು ಶ್ಲೋಕಗಳು - ಇವೆಲ್ಲ ತುಂಬ ಸೊಗಸಾದ ದೃಷ್ಟಾಂತಗಳು.
ಇವುಗಳಲ್ಲಿ ಧಾತು (ಸ್ವರ) ಮತ್ತು ಮಾತು (ಸಾಹಿತ್ಯ) ಎರಡೂ ಇರುತ್ತವೆ; ಇವು ಮೊದಲೆ ಸಿದ್ಧವಾಗಿರುವುದರಿಂದ ಸಂಗೀತಗಾರನ ಪ್ರತಿಭೆಗೆ ಇಲ್ಲಿ ಅಷ್ಟಾಗಿ ಅವಕಾಶವಿಲ್ಲ. ಆದರೆ ಕೃತಿಯ ಮೊದಲು ಹಾಡುವ ಆಲಾಪನೆ ತಾನ ಇವುಗಳೂ ಕೃತಿಯಲ್ಲಿ ಪಲ್ಲವಿಗೆ ಸಂಗತಿಗಳನ್ನು ಹಾಕಿ ಹಾಡುವುದೂ ಸಂಗೀತಸಾಧನೆಯ ಕಳಶ; ಇದಕ್ಕೆ ಮನೋಧರ್ಮ ಸಂಗೀತ ಎನ್ನುತ್ತಾರೆ. ಇದನ್ನು ಸಂಗೀತಗಾರ ಅಲ್ಲಿಯೇ ಆಗಲೇ ಕಲ್ಪಿಸಿಕೊಂಡು ಹಾಡುತ್ತಾನೆ. ರಾಗಾಲಾಪನೆಯಲ್ಲಿ ಆಯಾರಾಗದ ಸ್ವರಗಳ ಕ್ರಮಯುಕ್ತ ಸಂಚಾರಗಳು ತಾಳನಿಯಮವಿಲ್ಲದೆ ತೇಲಿಸಿಕೊಂಡು ಬರುತ್ತವೆ. ಬಾಯಲ್ಲಿ ಸ್ವರಗಳನ್ನು ಹೇಳದೆ ಆಯಾ ಸ್ವರಸ್ಥಾನಕ್ಕೆ ಸಹಜವಾದ ತದರಿನ್ನತಂ ನಂ ಎಂಬ ಶಬ್ದಗಳನ್ನು ಮಾತ್ರ ಮಾಧುರ್ಯ ದೃಷ್ಟಿಯಲ್ಲಿಟ್ಟುಕೊಂಡು ಜೋಡಿಸುವುದು ಆ ರಾಗಲಕ್ಷಣವನ್ನು ಸ್ಫುಟವಾಗಿ ಪ್ರದರ್ಶಿಸುವುದು ಇವು ಆಲಾಪನೆಯ ಮುಖ್ಯ ವಿಷಯಗಳು. ಆಲಾಪನೆಯಲ್ಲಿ ಆಕ್ಷಿಪ್ತಿಕಾ (ಅಥವಾ ಅಯತ್ತ) ಅಂದರೆ ಸಣ್ಣದರಲ್ಲಿ ರಾಗಲಕ್ಷಣ ಪೂರ್ತಿ ಸಂಗ್ರಹಿಸುವುದು. ಒಂದು ಬಗೆಯಲ್ಲಿ ಮುನ್ನುಡಿಯಂತೆ; ರಾಗವದಿರ್sನೀ, ಆಲಾಪನೆಯ ಮುಖ್ಯಾಂಗ. ಇದರಲ್ಲಿ ನಾಲ್ಕು ಹಂತಗಳು - ಮೊದಲದರಲ್ಲಿ ಮಂದ್ರ, ಎರಡನೆಯದರಲ್ಲಿ ಮಧ್ಯ, ಮೂರನೆಯದರಲ್ಲಿ ತಾರಸ್ಥಾಯಿಗಳಲ್ಲಿ ವಿಳಂಬ ಕಾಲದಿಂದ ಸಂಚಾರ, ನಾಲ್ಕನೆಯದರಲ್ಲಿ ದ್ರುತ ಕಾಲದ ಸಂಚಾರ ಅಥವಾ ಮೂbsರ್Àನಾ ಪ್ರಸ್ತಾರ, ಅನಂತರ ಸ್ಥಾಯಿ, ಸಂಚಾರದಲ್ಲಿ ಒಂದೇ ಸ್ವರದಿಂದ ಆರಂಭಮಾಡಿ ಆ ಸ್ವರದಲ್ಲಿಯೇ ಮುಗಿಸಿದರೆ ಆ ಸ್ವರಕ್ಕೆ ಸ್ಥಾಯೀ ಎಂದು ಹೆಸರು. ಕಡೆಯದಾಗಿ ಮಕರಿಣೀ ಅಥವಾ ತಾನ. ಪಾಂಡ್ಯ ರಾಜನ ಪ್ರಶಸ್ತಿಯಾದ ದಕ್ಷಿಣ ರಾಷ್ಟ್ರಾಧಿಪಾ ಎಂಬರ್ಥವನ್ನು ಸೂಚಿಸುವ ತೆನ್ನಾ ಎಂಬ ದ್ರಾವಿಡ ಪದದ ಸಂಸ್ಕೃತದ ರೂಪವೇ ತಾನ. ತಾನದ ಕಾಲ ಮಧ್ಯಮ, ಇದರಲ್ಲಿ ಪ್ರಯೋಗ ತಾನಾಂತ, ತಾನಂ,ತಾನಂನ ಇತ್ಯಾದಿ. ಇಲ್ಲಿ ಯತಿ ಸ್ಫುಟವಾಗಿ ಎದ್ದು ಕಾಣುತ್ತದೆ. ತಾಳ ದ್ರುತವಾದರೆ ಅದು ಘನ ಎನಿಸಿಕೊಳ್ಳುತ್ತದೆ. ಆಲಾಪನೆ ಮುಗಿದಮೇಲೆ ಪಲ್ಲವಿ ಶುರುವಾಗುತ್ತದೆ; ಇದರ ಜೀವಾಳ ಸಂಗತಿ - ಅಂದರೆ ಬಾರಿಬಾರಿಗೂ ಪಲ್ಲವಿಯ ಸ್ವರ ಸಾಹಿತ್ಯ ಹಿಗ್ಗಿಸುವುದೆಂದರ್ಥ. ದೃಷ್ಟಾಂತಕ್ಕೆ ಖಮಾಸ್ ರಾಗದ ಈ ತ್ಯಾಗರಾಜ ಕೃತಿ ನೋಡಬಹುದು. 1. ಸುಜನ ಜೀವ | ನಾ - ರ ಅಮಾ 2. ಸು ಉ ಜ ಅ ನಾ - ಜೀವ | ನ ಅ ಅ ಅ ಅ -ರ ಅ ಮಾ 3. ಸುಜನ ಜೀವ | ನ ಅ ಅ - ಅ ಅ ಅ -ರ ಅ ಅ ಅ ಅ ಮ 4. ಸುಜನ ಜೀವ | ನಾ ಅ ಅ ಅ ರ ಮ ಅ -ಸುಗುಣಭೂಷ ಣಾ ಅ .. ಪಲ್ಲವಿ ಹಾಡಿ ಮುಗಿದಮೇಲೆ ಹಾಕುವ ಕಲ್ಪನಾ ಸ್ವರವೂ ಮನೋಧರ್ಮ ಸಂಗೀತ. ಗಾಯಕರನ್ನು ಐದು ವಿಧವಾಗಿ ವಿಂಗಡಿಸುತ್ತಾರೆ ಶಿP್ಷÁಕಾರ, ಅಂದರೆ ಪಾಠ ಹೇಳಿ ಕೊಡುವುದರಲ್ಲಿ ಮಾತ್ರ ನಿಪುಣ; ಅನುಕಾರ, ಅಂದರೆ ಬೇರೆಯವರು ಹಾಡಿದಂತೆ ಅನುಕರಿಸಿ ಹಾಡುವವನು; ರಸಿಕ ಅಂದರೆ ರಸವತ್ತಾಗಿ ಹೃದಯ ಮುಟ್ಟುವಂತೆ ಹಾಡುವವನು; ರಂಜಕ ಅಂದರೆ ಶ್ರೋತೃಗಳ ಮನೋಲ್ಲಾಸವನ್ನೇ ಆದರ್ಶವಾಗುಳ್ಳವನು; ಕಡೆಯದಾಗಿ ಭಾವುಕ ಅಂದರೆ ಭಾವಗಳನ್ನು ಹಿಡಿದು ಅವುಗಳಿಗೆ ಮೆರುಗು ಕೊಟ್ಟು ಮನಮುಟ್ಟುವಂತೆ ಹಾಡುವವನು. ಸಂಗೀತಗಾರನಿಗೆ ಶಾರೀರ ತುಂಬ ಮುಖ್ಯ. ಒಳ್ಳೆಯ ಶಾರೀರದ ಲಕ್ಷಣಗಳೆಂದರೆ ರಕ್ತಿ, ಗಾಂಭೀರ್ಯ, ಮಾರ್ದವ, ಘನತೆ, ಸ್ನಿಗ್ಧತೆ, ಧ್ವನಿಮಾಧುರ್ಯ ಮುಂತಾದವು. ಅಭ್ಯಾಸವಿಲ್ಲದಿದ್ದರೂ ರಾಗವನ್ನು ಸ್ಫುಟವಾಗಿ ಕಾಣಿಸುವ ಸಾಮರ್ಥ್ಯಶಾರೀರವೆನಿಸಿಕೊಳ್ಳುತ್ತದೆ. (ಎಸ್.ಕೆ.ಆರ್.) ಕರ್ಣಾಟಕ ಸಂಗೀತದ ಪ್ರಯೋಗದಲ್ಲಿ ಗಾಯಕ ಮುಖ್ಯ. ಈಗ ಪಿಟೀಲು, ಮೃದಂಗ, ಕಂಜರಿ ಮುಂತಾದ ಪಕ್ಕವಾದ್ಯಗಳೊಡನೆ ಕಚೇರಿಗಳಲ್ಲಿ ಹಾಡುವುದು ರೂಢಿಯಲ್ಲಿದೆ. ವೀಣೆ, ನಾಗಸ್ವರ, ಪಿಟೀಲು ಮುಂತಾದವುಗಳನ್ನೇ ಪ್ರಧಾನವಾಗಿಯೂ ಉಪಯೋಗಿಸ ಬಹುದು. ಹಿಂದಿನಿಂದಲೂ ಈ ಪದ್ಧತಿಗಳು ಇದ್ದಂತೆ ತೋರುತ್ತದೆ. 17-18ನೆಯ ಶತಮಾನದವರೆಗಿನ ಕನ್ನಡ ಸಾಹಿತ್ಯ ಕೃತಿಗಳಲ್ಲಿ ಸಂಗೀತ ಕಚೇರಿಗಳು ಸಂಗಾತವಾದ್ಯಗಳ ಉಲ್ಲೇಖಗಳೂ ದೊರೆಯುತ್ತವೆ. ನಗರಗಳಲ್ಲಿ ಸಂಗೀತ ಮತ್ತು ನೃತ್ಯಕ್ಕಾಗಿ ಪ್ರತ್ಯೇಕ ರಂಗಮಂಟಪಗಳಿದ್ದುವು. ವಾದ್ಯಸಂಗೀತದ ತನಿಕಚೇರಿಗಳು ವೀಣೆ ಮತ್ತು ಕೊಳಲು ವಾದ್ಯಗಳಲ್ಲಿ ಮದ್ದಳೆ ವಾದನದೊಡನೆ ನಡೆಯುತ್ತಿದ್ದುವು. ಹಾಡುಗಾರಿಕೆಯಲ್ಲಿ ಒಬ್ಬನೇ ಗಾಯಕ ಅಥವಾ ಯುಗ್ಮ ಜೊತೆ ಅಥವಾ ಗೋಷಿವಿಗಳು ಇರುತ್ತಿದುವು. ಇವು ಪಕ್ಕವಾದ್ಯ ಗಳೊಡನೆ ನಡೆಯುತ್ತಿದ್ದುವು. ಮುಖ್ಯ ಗಾಯಕನಿಗೆ ಮುಖರಿ ಎಂದು ಹೆಸರಿತ್ತು. ಇವನ ಜೊತೆಯಲ್ಲಿ ಇತರ ಗಾಯಕರು ಅನುಸರಿಸುತ್ತಿದ್ದರು. ರಾಜಾಸ್ಥಾನದಲ್ಲಿ ಗಾಯನವು ವೀಣೆ ಅಥವಾ ಕೊಳಲು ಮತ್ತು ಅವನದ್ಧ, ತತ ಮತ್ತು ಸುಷಿರ ವಾದ್ಯಗಳೊಡನೆ ನಡೆಯುತ್ತಿತ್ತು. ಅವನದ್ಧ ವಾದ್ಯಗಳಲ್ಲಿ ಹಲವು ರೀತಿಯ ಪಟಹ, ಭೇರಿ ಮುಂತಾದವು ಇದ್ದವು. ಕೊಂಬು, ಕಹಳೆ ಮುಂತಾದವು ಸುಷಿರ ವಾದ್ಯಗಳು. ಪಂಚಮುಖವಾದ್ಯವೆಂಬ ವಾದ್ಯ ರೂಢಿಯಲ್ಲಿತ್ತು. ಕಥಾಪ್ರಸಂಗದ ಪದ್ಯಗಳನ್ನು ಓದುವಾಗ ಸಂಗೀತವನ್ನು ಬಳಸಿಕೊಳ್ಳುತ್ತಿದ್ದರು. ವಾದ್ಯಗಳಲ್ಲಿ ಕಿನ್ನರಿ, ವಲ್ಲಕಿ, ವಿಪಂಚಿ, ರಾವಣಹಸ್ತ, ದಂಡಿಕಾ, ತ್ರಿಸರಿ, ಚಂತ್ರ, ಸ್ವರಮಂಡಲ ಮತ್ತು ಪರಿವಾದಿನಿ ಎಂಬ ತಂತೀವಾದ್ಯಗಳು ಶಂಖ, ಶೃಂಗ, ವಂಶ, ತಿತ್ತಿರಿ, ಬಂಬುಲಿ, ಕಹಳೆ ಮುಂತಾದ ಸುಷಿರ ವಾದ್ಯಗಳು ಒತ್ತು ಕರಡೆ, ಮೃದಂಗ, ಢಕ್ಕೆ, ಪಟಹ, ಆವುಜ, ದುಂದುಭಿ, ಪಣವ, ಭೇರಿ, ಡಿಂಡಿಮ, ತ್ರಿವಳಿ, ನಿಸ್ಸಾಳ, ಡಮರು, ಚೆಂಬಕ, ದಂಡೆ, ರುಂಜ, ಟೋಲುಗ, ಮುಕುಂದ, ರವಲಿ, ಕಂಠೀರವ, ಗಜಢಕ್ಕೆ, ಸಿಂಹಘಂಟೆ, ಪವಲ, ಚಿಂಕಿರು ಮುಂತಾದ ತಾಳ ವಾದ್ಯಗಳು ಘಂಟೆ, ಜಯಘಂಟೆ, ಕಿಂಕಣಿ, ಝಲ್ಲರಿ, ತಾಳ, ಕಂಸಾಲವೆಂಬ ಘನವಾದ್ಯಗಳ ಹೆಸರು ಉಕ್ತವಾಗಿವೆ. ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯಚರಿತ್ರೆ ಎಂಬ ತೆಲುಗು ಗ್ರಂಥದ ಪರ್ವತಪ್ರಕರಣದಲ್ಲಿ 32 ಬಗೆಯ ವೀಣೆಗಳು ಮತ್ತು 18 ಬಗೆಯ ಕೊಳಲುಗಳನ್ನು ಮತ್ತು ಸಂಗೀತ ವಾದ್ಯಗಳನ್ನು ಕುರಿತು ಹೇಳಿದೆ. ಇವುಗಳಲ್ಲಿ ಹಲವು ವಾದ್ಯಗಳ ಬಳಕೆ ಬಿಟ್ಟುಹೋಗಿದೆ. ಕೆಲವು ಕೇವಲ ಜನಪದ ವಾದ್ಯಗಳಾಗಿ ಬಳಕೆಯಲ್ಲಿವೆ. ಪಿಟೀಲು, ಹಾಮೊನೀಯಂ, ಮೋರ್ಚಿಂಗ್ ಮೊದಲಾದ ಪಾಶ್ಚಾತ್ಯ ಮೂಲದ ವಾದ್ಯಗಳು ಈಚೆಗೆ ಬಳಕೆಗೆ ಬಂದಿವೆ. (ವಿ.ಎಸ್.ಎಸ್.)