ಕರ್ಣಾಟಕ ಪ್ರಕಾಶಿಕಾ
ಕರ್ಣಾಟಕ ಪ್ರಕಾಶಿಕಾ: ವಿದ್ವಾನ್ ಭಾಷ್ಯಂ ತಿರುಮಲಾಚಾರ್ಯರಿಂದ ಪ್ರಾರಂಭವಾದ ೧೮೬೫ ಕನ್ನಡ ಇಂಗ್ಲಿಷ್ ವಾರಪತ್ರಿಕೆ.
ತಿರುಮಲಾಚಾರ್ಯರ ಮಗ ಭಾಷ್ಯಾಚಾರ್ಯರು ಪತ್ರಿಕೆ ನಡೆಸುವುದರಲ್ಲಿ ತಂದೆಗೆ ಕೆಲಕಾಲ ಸಹಾಯ ಮಾಡಿದರು. ಅನಂತರ ಅವರು ಸರ್ಕಾರಿ ಗೆಜೆóಟಿಗೆ ಕನ್ನಡ ಭಾಷಾಂತರಕಾರರಾಗಿ ಹೋದ ಮೇಲೆ (1866) ತಿರುಮಲಾಚಾರ್ಯರೊಬ್ಬರೇ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೋದರು. ೧೮೬೮ರ ವರೆಗೆ ಈ ಪತ್ರಿಕೆ ನಡೆಯಿತು. ೧೯೭೩ರಲ್ಲಿ ಪುನರ್ಜನ್ಮ ಹೊಂದಿದ ‘ಕರ್ಣಾಟಕ ಪ್ರಕಾಶಿಕಾ’ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಲೇಖನಗಳನ್ನು ಒಳಗೊಂಡಿತ್ತು. ಅದರಲ್ಲಿ ‘ತಂತೀ ವರ್ತಮಾನ ಸಂಗ್ರಹ’ ‘ಗೆಜೆಟ್ಟಿನ ಸಾರಾಂಶ’, ಒಳದೇಶ ಮತ್ತು ತಾಲ್ಲೂಕಿನ ವೃತ್ತಾಂತ, ‘ನೈಮಿತ್ತಿಕ ವಿಷಯನ್ಯಾಸವು’ ಮುಂತಾದ ವಿಷಯಗಳು ಇರುತ್ತಿದ್ದವು. ಅನೇಕ ಕನ್ನಡ ಮತ್ತು ಸಂಸ್ಕೃತ ವಿದ್ವಾಂಸರು ಇದಕ್ಕೆ ಲೇಖನಗಳನ್ನು ಬರೆಯುತ್ತಿದ್ದರು. ಪತ್ರಿಕೆಯ ಲೇಖನಗಳು ತುಂಬ ಪ್ರಭಾವಶಾಲಿಯಾಗಿದ್ದುವು. ಮೈಸೂರಿಗರ ಹಿತಕ್ಕಾಗಿ ಈ ಪತ್ರಿಕೆ ಹೋರಾಡಿತು. ಅಂದಿನ ರಾಜ್ಯಾಡಳಿತವನ್ನು ಟೀಕಿಸುವ ಧೈರ್ಯ ತೋರಿತು. ಅದರ ರಾಜಕೀಯ ಧೋರಣೆಯಿಂದಾಗಿ ವಿಚಾರ ಸ್ವಾತಂತ್ರ್ಯ ತೋರಿದ ಆದ್ಯಪತ್ರಿಕೆ ನಿಂತು ಹೋಯಿತು.
ಭಾಷ್ಯಂ ತಿರುಮಲಾಚಾರ್ಯರು 1877ರಲ್ಲಿ ನಿಧನರಾದರು. ಆಗ ಭಾಷ್ಯಾಚಾರ್ಯರ ಮಗ ವೆಂಕಟಾಚಾರ್ಯರು ಇದರ ಸಂಪಾದಕರಾದರು. ಟಿ.ಸಿ. ಶ್ರೀನಿವಾಸಾಚಾರ್ಯರು ಇದರ ಮಾಲೀಕರಾದರು. ಕೆಲಕಾಲಾನಂತರ ಮಾಲೀಕರೂ ಸಂಪಾದಕರೂ ಪ್ಲೇಗಿನಿಂದ ನಿಧನರಾದರುದರಿಂದ (1898) ಪತ್ರಿಕೆ ನಿಂತು ಹೋಯಿತೆಂದೂ ಹೇಳಲಾಗುತ್ತದೆ.
ಕರ್ಣಾಟಕ ಪ್ರಕಾಶಿಕಾ ಆರಂಭಕ್ಕೆ ಮುನ್ನ ಭಾಷ್ಯಂ ಬಂಧುಗಳು 1859ರ ಜೂನ್ನಲ್ಲಿ ‘ಮೈಸೂರು ವೃತ್ತಾಂತ ಬೋಧಿನಿ’ಯನ್ನು ಆರಂಭಿಸಿದರು. ಇದು ಮೈಸೂರಿನ ಆದ್ಯಪತ್ರಿಕೆ. ಕನ್ನಡದ ಪ್ರಥಮ ಪತ್ರಿಕೆ ‘ಮಂಗಳೂರ ಸಮಾಚಾರ’ ಪ್ರಕಟಿಸಿದ ಹರ್ಮನ್ ಮೊಗ್ಲಿಂಗ್ ಅನಂತರ ಭಾಷ್ಯಂ ಬಂಧುಗಳೇ ಕನ್ನಡ ಪತ್ರಿಕೋದ್ಯಮದ ಆದ್ಯರು.