ಕರ್ಣಾಟಕದ ಆರ್ಥಿಕ ಪ್ರಗತಿ

ಏಕೀಕರಣದ ಅನಂತರ ಕರ್ಣಾಟಕ ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಈ ಲೇಖನದಲ್ಲಿ ವಿವೇಚಿಸಲಾಗಿದೆ. ಕರ್ಣಾಟಕದ ಒಟ್ಟು ವರಮಾನ 1956-57ರಲ್ಲಿ ರೂ.495 ಕೋಟಿ ಇದ್ದದ್ದು 1968-69ರಲ್ಲಿ ರೂ.1,360 ಕೋಟಿಗೆ ಏರಿತ್ತು. ಸರಾಸರಿ ತಲಾ ವರಮಾನ ರೂ.200 ರಿಂದ ರೂ.500ಕ್ಕೆ ಅಧಿಕಗೊಂಡಿತ್ತು.

ಪರಿಚೆಯ ಬದಲಾಯಿಸಿ

ವ್ಯವಸಾಯ, ನೀರಾವರಿ ಮತ್ತು ವಿದ್ಯುಚ್ಫಕ್ತಿ: ಕರ್ಣಾಟಕದ ಆರ್ಥಿಕ ಜೀವನದಲ್ಲಿ ಬೇಸಾಯವೇ ಮುಖ್ಯವಾದದ್ದು. ಕೈಗಾರಿಕೆಯ ಬೆಳವಣಿಗೆಯಾಗುತ್ತಿದ್ದರೂ ಕರ್ಣಾಟಕ ಈಗಲೂ ಭಾರತದ ಇತರ ರಾಜ್ಯಗಳಂತೆಯೇ ವ್ಯವಸಾಯ ಪ್ರಧಾನ ರಾಷ್ಟ್ರವಾಗಿದೆ. 1971ರ ಜನಗಣತಿಯ ಪ್ರಕಾರ ಸೇ.24.3ರಷ್ಟು ಜನ ಮಾತ್ರ ಪಟ್ಟಣವಾಸಿಗಳು. ಉಳಿದವರು ಗ್ರಾಮವಾಸಿಗಳು. ಇವರ ಕಸಬು ಪ್ರಧಾನವಾಗಿ ವ್ಯವಸಾಯ. ಈ ರಾಜ್ಯದ ಒಟ್ಟು ವರಮಾನದಲ್ಲಿ ವ್ಯವಸಾಯ ಮೂಲದಿಂದ ಬರುವುದು ಅರ್ಧಕ್ಕಿಂತಲೂ ಹೆಚ್ಚು. 1968-69ರ ಅಂದಾಜಿನ ಪ್ರಕಾರ, ದೇಶದ ಒಟ್ಟು ವರಮಾನದಲ್ಲಿ ಸೇಕಡ 58ರಷ್ಟು ವ್ವವಸಾಯದಿಂದ ಬಂದದ್ದು. ವ್ವವಸಾಯ, ಮೀನುಗಾರಿಕೆ, ಪಶುಪಾಲನೆ ಮತ್ತು ಅರಣ್ಯಸಂಪತ್ತಿನ ವರಮಾನಗಳೆಲ್ಲವನ್ನೂ ಒಟ್ಟಿಗೆ ಸೇರಿಸಿದರೆ ರಾಜ್ಯದ ಒಟ್ಟು ವರಮಾನದಲ್ಲಿ ಇದು ಸೇ.64 ಆಗುತ್ತದೆ.

ಪಂಚವಾರ್ಷಿಕ ಯೋಜನೆಯಲ್ಲಿ ವ್ಯವಸಾಯ ಕ್ಷೇತ್ರಕ್ಕೆ ಪ್ರಾಮುಖ್ಯ ಕೊಟ್ಟಿದೆ. ಬೇಸಾಯಕ್ಕೊಳಪಟ್ಟ ಜಮೀನಿನ ವಿಸ್ತೀರ್ಣ 1957-67ರ ದಶಕದಲ್ಲಿ 0.04 ಕೋಟಿ ಹೆಕ್ಟೇರುಗಳಷ್ಟು ಅಧಿಕವಾಯಿತು. ಆಹಾರ ಧಾನ್ಯಗಳನ್ನು ಬೆಳೆಯುವ ಭೂವಿಸ್ತೀರ್ಣ ಇದೇ ಅವಧಿಯಲ್ಲಿ 6.5 ಲಕ್ಷ ಹೆಕ್ಟೇರುಗಳಷ್ಟು ಅಧಿಕವಾಯಿತು. ಆಹಾರ ಧಾನ್ಯದ ಉತ್ಪಾದನೆ ಕಳೆದ ಹತ್ತು ವರ್ಷಗಳಿಂದ ಹೆಚ್ಚಾಗಿದ್ದರೂ ಇದು ಬೇಡಿಕೆಗೆ ಸಮನಾದ ಮಟ್ಟ ಮುಟ್ಟಿಲ್ಲ. 1969-70ರಲ್ಲಿ ಆಹಾರಧಾನ್ಯದ ಉತ್ಪಾದನೆ 51.8 ಲಕ್ಷ ಟನ್‍ಗಳಷ್ಟಿತ್ತು. ಬೇಸಾಯ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸಲು ಸರ್ಕಾರದವರು ಕಳೆದ ಹತ್ತು ವರ್ಷಗಳಿಂದ ಅನೇಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಭೂಮಿಯ ಅಭಿವೃದ್ಧಿ, ರಾಸಾಯನಿಕ ಗೊಬ್ಬರದ ಬಳಕೆ, ಉತ್ತಮ ಬಗೆಯ ಬಿತ್ತನೆ ಬೀಜ, ಸಾಲ ನೀಡಿಕೆ, ಸಸಿಗಳ ರೋಗ ನಿವಾರಣೆ, ಒಳ್ಳೆಯ ಕೃಷಿ ವಿಧಾನಗಳ ಅನುಸರಣಿ, ನೀರಾವರಿ ಯೋಜನೆ ಮುಂತಾದವು ಇವುಗಳಲ್ಲಿ ಸೇರಿವೆ. ಸರ್ಕಾರ ವ್ಯವಸಾಯಾಭಿವೃದ್ಧಿಗೆ ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಸುಮಾರು 80 ಕೋಟಿ ರೂ. ವೆಚ್ಚ ಮಾಡುವ ಅಂದಾಜಿದೆ. ಈ ಕಾರ್ಯಗಳಿಗೆ ಒಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ 5 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿತ್ತು. ಈ ಎಲ್ಲ ಕಾರ್ಯಕ್ರಮಗಳಿಂದ ಹೆಚ್ಚಿಗೆ ಉತ್ಪಾದನೆ ಮಾಡಲು ರೈತರಿಗೆ ಹೆಚ್ಚು ಅವಕಾಶ ದೊರೆತಿದೆ.

ಬೇಸಾಯ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸಲು ನೀರಿನ ಸರಬರಾಜು ಸಹ ಅತ್ಯಾವಶ್ಯಕ. ಇದಕ್ಕಾಗಿ ಸರ್ಕಾರ ಅನೇಕ ನೀರಾವರಿ ಯೋಜನೆಗಳನ್ನು ಕೈಗೊಂಡಿದೆ. ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸುವ ಮುನ್ನ ಕರ್ಣಾಟಕದಲ್ಲಿ ಮಧ್ಯಮ ಮತ್ತು ದೊಡ್ಡ ನೀರಾವರಿ ಯೋಜನೆಗಳಿಂದ ಒಟ್ಟು 6.9 ಲಕ್ಷ ಹೆಕ್ಟೇರುಗಳಿಗೆ ಸೌಲಭ್ಯ ಒದಗಿತ್ತು. ಈಗ ಎಲ್ಲ ಬಗೆಯ ಯೋಜನೆಗಳಿಂದ ಸುಮಾರು 12 ಲಕ್ಷ ಹೆಕ್ಟೇರುಗಳಷ್ಟು ಜಮೀನಿಗೆ ನೀರು ಸರಬರಾಜಾಗುತ್ತಿದೆ. ಇದೇ ರೀತಿಯಲ್ಲಿ ವಿದ್ಯುಚ್ಫಕ್ತಿಯ ಉತ್ಪಾದನೆಯೂ ಹೆಚ್ಚಾಗಿದೆ. ಒಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಮತ್ತು ವಿದ್ಯುಚ್ಫಕ್ತಿ ಯೋಜನೆಗಳಿಗೆ ಸರ್ಕಾರ 30 ಕೋಟಿ ರೂ.ಗಳಷ್ಟು ವೆಚ್ಚ ಮಾಡಿತ್ತು. ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ 175 ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟಿದೆ.

ಅರಣ್ಯ ಸಂಪತ್ತು: ಕರ್ಣಾಟಕದ ಅರಣ್ಯದ ವಿಸ್ತೀರ್ಣ ಭಾರತದ ಸರಾಸರಿ ಅರಣ್ಯ ಸಂಪತ್ತಿನ ವಿಸ್ತೀರ್ಣಕ್ಕಿಂತ ಕಡಿಮೆ ಇದೆ. ಭಾರತದ ವಿಸ್ತೀರ್ಣ ಒಟ್ಟು ನೆಲದ ಸು.22% ರಷ್ಟು; ಕರ್ಣಾಟಕದಲ್ಲಿ ಸು. 18% ರಷ್ಟಿದೆ. ಆದರೆ ಈ ಸ್ವಲ್ಪ ಪ್ರದೇಶದಲ್ಲಿಯೇ ಅರಣ್ಯಸಂಪತ್ತು ವಿಪುಲವಾಗುಂಟು. ಒಂದು ಚದರ ಕಿಮೀ. ಅರಣ್ಯದ ವಾರ್ಷಿಕ ವರಮಾನ ಸುಮಾರು 3,000 ರೂ. 1956ಕ್ಕೆ ಮುಂಚೆ ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಸುಮಾರು 4.97 ಕೋಟಿ ರೂ.ಗಳಷ್ಟು ಉತ್ಪತ್ತಿ ಇತ್ತು. 1968-69ರಲ್ಲಿ ಇದರ ಆದಾಯ 13.5 ಕೋಟಿ ರೂ.ಗಳಿಗೇರಿತ್ತು.

ಮೀನುಗಾರಿಕೆ ಬದಲಾಯಿಸಿ

ಪಂಚವಾರ್ಷಿಕ ಯೋಜನೆಗಳಲ್ಲಿ ಮೀನುಗಾರಿಕೆಗೆ ಹೆಚ್ಚು ಗಮನ ಸಂದಿದೆ. ಯಂತ್ರದ ದೋಣಿಗಳನ್ನು ಕಟ್ಟಲೂ ಮೀನು ಹಿಡಿಯಲು ಬೇಕಾಗುವ ಯಂತ್ರೋಪಕರಣಗಳನ್ನು ಒದಗಿಸಲೂ ಮೀನುಗಾರಿಕೆಯಲ್ಲಿ ಶಿಕ್ಷಣ ಕೊಡಲೂ ಸಾಕಷ್ಟು ಹಣ ವೆಚ್ಚವಾಗುತ್ತಿದೆ.

ಖನಿಜಸಂಪತ್ತು ಬದಲಾಯಿಸಿ

ಕರ್ಣಾಟಕದ ಖನಿಜಸಂಪತ್ತು ರಾಜ್ಯದ ಕೈಗಾರಿಕೆಗಳ ಬೆಳೆವಣಿಗೆಗೆ ಅನುಕೂಲಕರ. ಕಬ್ಬಿಣದ ಅದುರಿನ ಅಭಿವೃದ್ಧಿಗಾಗಿ ರಾಷ್ಟ್ರೀಯ ಖನಿಜಸಂಪತ್ತಿನ ಅಭಿವೃದ್ಧಿ ಸಂಸ್ಥೆ ಒಂದು ಯೋಜನೆಯನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೈಗೊಂಡಿದೆ. ಭಾರತದಲ್ಲಿ ಕಬ್ಬಿಣದ ಅದುರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ಣಾಟಕಕ್ಕೆ ನಾಲ್ಕನೆಯ ಸ್ಥಾನ. ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲೂ ಇರುವ ನಿಕ್ಷೇಪಗಳು ಸೇರಿ ಕರ್ಣಾಟಕದಲ್ಲಿ 120 ರಿಂದ 150 ಕೋಟಿ ಟನ್‍ಗಳಷ್ಟು ಉತ್ತಮ ದರ್ಜೆಯ ಕಬ್ಬಿಣದ ಅದುರು ದೊರೆಯುತ್ತದೆಂದು ಅಂದಾಜು ಮಾಡಲಾಗಿದೆ.

ಕೈಗಾರಿಕೆಗಳು : ಕರ್ಣಾಟಕದ ಕೈಗಾರಿಕೆಯ ಚರಿತ್ರೆ ಗಮನಾರ್ಹವಾದದ್ದು. ಏಕೆಂದರೆ 19ನೆಯ ಶತಮಾನದ ಕೊನೆಯಲ್ಲಿಯೇ ಈ ದೇಶದಲ್ಲಿ ಕೈಗಾರಿಕೆಗಳ ಬೆಳೆವಣಿಗೆ ಪ್ರಾರಂಭವಾಯಿತೆಂದು ಹೇಳಬಹುದು. 1885ರಲ್ಲಿ ಕರ್ಣಾಟಕದಲ್ಲಿ ಮೊದಲನೆಯ ಹತ್ತಿಗಿರಣಿ ಪ್ರಾರಂಭವಾಯಿತು. 1902ರಲ್ಲಿ ಶಿವಸಮುದ್ರದಲ್ಲಿ ವಿದ್ಯುಚ್ಫಕ್ತಿಯ ಉತ್ಪಾದನೆ ಮಾಡಲು ಆರಂಭಿಸಿದಾಗಿನಿಂದ ಕರ್ಣಾಟಕದ ಕೈಗಾರಿಕಾಭಿವೃದ್ಧಿಗೆ ಬಹಳ ಅನುಕೂಲವಾಯಿತು. ವಿದ್ಯುಚ್ಫಕ್ತಿಯ ಉತ್ಪಾದನೆ ಪ್ರಾರಂಭವಾದ ಹತ್ತು ವರ್ಷಗಳಲ್ಲಿ ಸುಮಾರು 100 ಕೈಗಾರಿಕೆಗಳು ಬಂದುವು. 1913ರಲ್ಲಿಯೇ ಆಗಿನ ಮೈಸೂರು ಸರ್ಕಾರ ಉತ್ಪಾದನಾಂಗಗಳ ಸರಬರಾಜಿನ ಅಂದಾಜು ಮಾಡಿ ಅದರಿಂದ ಅನೇಕ ಕೈಗಾರಿಕೆಗಳ ಸ್ಥಾಪನೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿತು. 1931-41ರ ದಶಕದಲ್ಲಿ ಅನೇಕ ಕೈಗಾರಿಕೆಗಳು ಜನ್ಮತಾಳಿದುವು. ಅವುಗಳಲ್ಲಿ ಮುಖ್ಯವಾದವೆಂದರೆ ಕಬ್ಬಿಣ, ಚಿನ್ನದ ಗಣಿ, ಹತ್ತಿ, ರೇಷ್ಮೆ, ಕಂಬಳಿ, ಸಕ್ಕರೆ, ರಸಾಯನಿಕ ಗೊಬ್ಬರ ಮತ್ತು ಕಾಗದದ ಕೈಗಾರಿಕೆ. 1945ರ ವೇಳೆಗೆ ಸುಮಾರು 600 ದೊಡ್ಡ ಕೈಗಾರಿಕೆಗಳು ಇದ್ದು ಇವುಗಳಲ್ಲಿ ಸುಮಾರು 80,000 ಜನ ಕೆಲಸ ಮಾಡುತ್ತಿದ್ದರು. ಬೆಂಗಳೂರು, ಮೈಸೂರು ಮತ್ತು ಕೋಲಾರದ ಚಿನ್ನದ ಗಣಿ ಪ್ರದೇಶಗಳಲ್ಲಿ ವಿದ್ಯುಚ್ಫಕ್ತಿ ಸೌಲಭ್ಯ ಇದ್ದುದರಿಂದ ಕೈಗಾರಿಕೆಗಳು ಅಲ್ಲಿ ಕೇಂದ್ರೀಕೃತವಾದುವು. ಇತ್ತೀಚೆಗೆ ರಾಜ್ಯದ ಹಲವು ಕಡೆಗಳಲ್ಲಿ ಕೈಗಾರಿಕೆಗಳನ್ನು ಏರ್ಪಡಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಸಣ್ಣ ಕೈಗಾರಿಕೆಗಳಲ್ಲಿ ಮುಖ್ಯವಾದುವೆಂದರೆ ಬುಟ್ಟಿ ಹೆಣಿಕೆ, ನೇಯ್ಗೆ, ಮಡಕೆ ಹೆಂಚು ತಯಾರಿಕೆ, ಎಣ್ಣಿ ತೆಗೆಯುವುದು, ಚಿನ್ನ ಬೆಳ್ಳಿ ಸಾಮಾನುಗಳ ತಯಾರಿಕೆ, ಮರದ ಕೆಲಸ, ಚಾಪೆ ಹೆಣಿಕೆ, ಚರ್ಮ, ಬೀಡಿ, ಅಗರಬತ್ತಿ ತಯಾರಿಕೆ ಮುಂತಾದವು. ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಮೊದಲಿನಿಂದಲೂ ವಿಶಿಷ್ಟ ಸ್ಥಾನವನ್ನು ಕೊಡಲಾಗಿದೆ. ಇದರಿಂದ ಲಕ್ಷಾಂತರ ಜನ ಜೀವನ ಸಾಗಿಸುತ್ತಿದ್ದಾರೆ.

ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರಿಕಾಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಕೊಡಲಾಗಿದೆ. ಇದರಿಂದ ಸಾವಿರಾರು ದೊಡ್ಡ, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪಿತವಾದುವು. ಇವು ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳೆರಡಲ್ಲಿಯೂ ಸ್ಥಾಪಿತವಾಗಿವೆ. ಒಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಸರ್ಕಾರದವರು ಕೈಗಾರಿಕಾಭಿವೃದ್ಧಿಗಾಗಿ 2.06 ಕೋಟಿ ರೂ. ವೆಚ್ಚ ಮಾಡಿದ್ದರು. ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇದರ ಬಾಬ್ತು 10.4 ಕೋಟಿ ರೂ.ಗಳನ್ನೂ ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ 13.5 ಕೋಟಿ ರೂ.ಗಳನ್ನೂ ವೆಚ್ಚ ಮಾಡಲಾಗಿದೆ. ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರಿಕಾಭಿವೃದ್ಧಿಗಾಗಿ 18 ಕೋಟಿ ರೂ.ಗಳನ್ನು ಮೀಸಲಾಗಿಡಲಾಗಿದೆ. ಇದರ ಫಲವಾಗಿ ಕರ್ಣಾಟಕದ ಒಟ್ಟು ಕಾರ್ಖಾನೆಗಳ ಸಂಖ್ಯೆ 1956-67ರ ಅವಧಿಯಲ್ಲಿ 1,640 ರಿಂದ 3,100ಕ್ಕೆ ಏರಿತು. ಇದೇ ಅವಧಿಯಲ್ಲಿ ಈ ಕಾರ್ಖಾನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ 1.96 ಲಕ್ಷದಿಂದ 2.42 ಲಕ್ಷಕ್ಕೇರಿದೆ. ಕೈಗಾರಿಕಾ ಕ್ಷೇತ್ರದ ಉತ್ಪಾದನೆ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಉದಾಹರಣೆಗೆ ಕಬ್ಬಿಣದ ಉತ್ಪಾದನೆ 1956-68ರ ಅವಧಿಯಲ್ಲಿ 62,000 ಟನ್‍ಗಳಿಂದ 88,000 ಟನ್‍ಗಳಿಗೇರಿತು. ಇದೇ ಅವಧಿಯಲ್ಲಿ ಸಿದ್ಧ ಉಕ್ಕಿನ ಉತ್ಪಾದನೆ 34,000 ಟನ್‍ಗಳಿಂದ 54,000 ಟನ್‍ಗಳಿಗೂ ಸಕ್ಕರೆ ಉತ್ಪಾದನೆ 37,000 ಟನ್‍ಗಳಿಂದ ಸು.60,000 ಟನ್‍ಗಳಿಗೂ ಸಿಮೆಂಟ್ ಉತ್ಪಾದನೆ ಸು. 7,000 ಲಕ್ಷ ಟನ್‍ಗಳಿಂದ ಸು. 10 ಲಕ್ಷ ಟನ್‍ಗಳಿಗೂ ಏರಿವೆ. ಇದೇ ರೀತಿ ಉಳಿದ ಕೈಗಾರಿಕೆಗಳಲ್ಲಿಯೂ ಉತ್ಪಾದನೆ ಹೆಚ್ಚುತ್ತಿದೆ.

ಸಾರಿಗೆ ಮತ್ತು ಸಂಪರ್ಕ ಬದಲಾಯಿಸಿ

ರಾಜ್ಯದ ಪಂಚವಾರ್ಷಿಕ ಯೋಜನೆಯಲ್ಲಿ ಸಾರಿಗೆ ಸಂಪರ್ಕಗಳ ಅಭಿವೃದ್ಧಿಗಾಗಿಯೂ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇದರ ಫಲವಾಗಿ 1956ರಲ್ಲಿ 13,783 ಮೈಲಿಗಳ ರಸ್ತೆಗಳಿದ್ದು 1969ರಲ್ಲಿ 28,500 ಮೈಲಿಗಳಿಗೆ ಹೆಚ್ಚಿತ್ತು. ಎಲ್ಲ ಹಳ್ಳಿಗಳಿಗೂ ಪಟ್ಟಣಗಳಿಗೂ ರಸ್ತೆಯ ಮೂಲಕ ಸಂಪರ್ಕ ಏರ್ಪಡಿಸಿ ಸಾಮಾನು ಸಾಗಾಣಿಕೆಗೂ ವ್ಯಾಪಾರಕ್ಕೂ ಅನುಕೂಲ ಮಾಡುವುದು ಸರ್ಕಾರದ ಉದ್ದೇಶ. ಮೈಸೂರು ರಾಜ್ಯದ ರಸ್ತೆ ಸಾರಿಗೆ ಸಂಸ್ಥೆ ಈ ವಿಷಯದಲ್ಲಿ ಮಹತ್ತರವಾದ ಕೆಲಸ ಮಾಡುತ್ತಿದೆ. ಈ ಸಂಸ್ಥೆಯ ಒಟ್ಟು ಬಂಡವಾಳ 20 ಕೋಟಿ ರೂ. ಹಾಸನ-ಮಂಗಳೂರು ಮತ್ತು ಬೆಂಗಳೂರು-ಸೇಲಂ ರೈಲುದಾರಿಗಳು ಹೊಸ ರೈಲುಮಾರ್ಗಗಳು. ರಾಜಧಾನಿಯಾದ ಬೆಂಗಳೂರಿಗೆ ರಾಷ್ಟ್ರದ ಎಲ್ಲ ಮುಖ್ಯ ಪಟ್ಟಣಗಳೊಂದಿಗೂ ವಿಮಾನ ಸಂಪರ್ಕವುಂಟು. ಸಾರಿಗೆ ಸಂಪರ್ಕಗಳು ಅಭಿವೃದ್ಧಿಗಾಗಿ ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ 12.5 ಕೋಟಿ ರೂ.ಗಳನ್ನು ಮೀಸಲಾಗಿಡಲಾಗಿದೆ.

ರಾಜ್ಯದ ರಫ್ತು ವ್ಯಾಪಾರ ಬದಲಾಯಿಸಿ

ಪುರಾತನ ಗ್ರೀಸ್ ಮತ್ತು ರೋಂ ನಾಗರಿಕತೆಗಳ ಕಾಲದಿಂದಲೂ ಕರ್ಣಾಟಕಕ್ಕೂ ಪಾಶ್ಚಾತ್ಯ ಲೋಕಕ್ಕೂ ಸಂಪರ್ಕವುಂಟು. ಇದೇ ರೀತಿ ದಕ್ಷಿಣ ಏಷ್ಯ ಮತ್ತು ಆಗ್ನೇಯ ಏಷ್ಯ ಪ್ರದೇಶಗಳ ಜೊತೆಯಲ್ಲಿಯೂ ಕರ್ಣಾಟಕ ವ್ಯಾಪಾರ ಮತ್ತು ಸಂಸ್ಕøತಿ ಸಂಬಂಧ ಇಟ್ಟುಕೊಂಡಿದ್ದುದಕ್ಕೂ ಸಾಕಷ್ಟು ನಿದರ್ಶನಗಳಿವೆ. ಅಂತೆಯೇ ಈಗಲೂ ಕರ್ಣಾಟಕದ ಪದಾರ್ಥಗಳು ಹೊರದೇಶಗಳಿಗೆ ಹೆಚ್ಚುಹೆಚ್ಚಾಗಿ ರಫ್ತಾಗುತ್ತಿವೆ. 1967-68ರಲ್ಲಿ ಕರ್ಣಾಟಕದ ಒಟ್ಟು ರಫ್ತು ಮೌಲ್ಯ 38 ಕೋಟಿ ರೂ.ಗಳಷ್ಟಿತ್ತು. ಇದರಲ್ಲಿ ಕಬ್ಬಿಣದ ಅದುರಿನಿಂದ 13.95 ಕೋಟಿ ರೂ. ಮತ್ತು ಕಾಫಿಯಿಂದ 12.34 ಕೋಟಿ ರೂ. ಆದಾಯ ಬಂದಿತ್ತು. ಎಂಜಿನಿಯರಿಂಗ್ ಪದಾರ್ಥಗಳು ರಾಜ್ಯಕ್ಕೆ 2.25 ಕೋಟಿ ರೂ.ಗಳಷ್ಟು ಆದಾಯ ನೀಡಿ, ರಫ್ತು ಸಾಮಗ್ರಿಗಳಲ್ಲಿ ಮೂರನೆಯ ಸ್ಥಾನ ಗಳಿಸಿವೆ. ಇದೇ ಅವಧಿಯಲ್ಲಿ ಗೋಡಂಬಿಯಿಂದ 1.56 ಕೋಟಿ ರೂ.ಗಳೂ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಂದ 1.8 ಕೋಟಿ ರೂ.ಗಳೂ ರಾಜ್ಯಕ್ಕೆ ಬಂದಿದ್ದುವು. ಈ ಎಲ್ಲ ವಸ್ತುಗಳ ರಫ್ತು ಮೌಲ್ಯ ರಾಜ್ಯದ ಒಟ್ಟು ರಫ್ತು ಮೌಲ್ಯದ ಸೇಕಡ 85ರಷ್ಟು. ಇತ್ತೀಚೆಗೆ ಎಂಜಿನಿಯರಿಂಗ್ ಸಾಮಾನುಗಳಿಗೆ ಹೊರದೇಶದಿಂದ ಬೇಡಿಕೆ ಹೆಚ್ಚುತ್ತಿದೆ. ಕುದುರೆಮುಖದ ಯೋಜನೆ ಪೂರ್ಣವಾದ ಮೇಲೆ ವರ್ಷಕ್ಕೆ 40 ಲಕ್ಷ ಟನ್‍ಗಳಷ್ಟು ಕಬ್ಬಿಣದ ಅದುರನ್ನು ಕರ್ಣಾಟಕದಿಂದ ರಫ್ತು ಮಾಡುವ ಯೋಜನೆಯುಂಟು. ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಜ್ಯದ ವಾರ್ಷಿಕ ರಫ್ತುಗಳನ್ನು ವರ್ಷಕ್ಕೆ 100 ಕೋಟಿ ರೂ.ಗಳಿಗೆ ಹೆಚ್ಚಿಸುವ ನಿರೀಕ್ಷೆಯಿದೆ.

ಹಣಕಾಸಿನ ಸಂಸ್ಥೆಗಳು ಬದಲಾಯಿಸಿ

ಆರ್ಥಿಕ ಅಭಿವೃದ್ಧಿಗೆ ಅವಶ್ಯವಾದ ಹಣಕಾಸಿನ ಬೇಡಿಕೆ ಪೂರೈಸುವ ಉದ್ದೇಶದಿಂದ ಕರ್ಣಾಟಕದಲ್ಲಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಉಳಿತಾಯಕ್ಕೆ ಉತ್ತೇಜನ ನೀಡುವುದೂ ಅದನ್ನು ಠೇವಣಿಗಳ ರೂಪದಲ್ಲಿ ಸಂಗ್ರಹಿಸಿ ಉತ್ಪಾದಕ ಕಾರ್ಯಗಳಿಗೆ ಸಾಲನೀಡುವುದೂ ಈ ಸಂಸ್ಥೆಗಳ ಉದ್ದೇಶ. ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳು ಇವುಗಳ ಪೈಕಿ ಬಹಳ ಮುಖ್ಯವಾದವು. ಸಹಕಾರ ಸಂಘಗಳು ಮುಖ್ಯವಾಗಿ ರೈತರಿಗೆ ವ್ಯವಸಾಯಕ್ಕಾಗಿ ಸಾಲ ಕೊಡುವುದಲ್ಲದೆ, ಸುಗ್ಗಿಯ ವೇಳೆಯಲ್ಲಿ ರೈತರು ತಮ್ಮ ಆಹಾರಧಾನ್ಯಗಳನ್ನು ಶೇಖರಿಸಲೂ ಸರಿಯಾದ ಕಾಲದಲ್ಲಿ ಆಹಾರಧಾನ್ಯಗಳನ್ನು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಗೆ ಬಿಕರಿ ಮಾಡಲೂ ಸಹಾಯ ಮಾಡುತ್ತವೆ. 1969ರ ಜೂನಿನಲ್ಲಿ ರಾಜ್ಯದಲ್ಲಿ ಸು. 20,000 ವಿವಿಧ ಸಹಕಾರ ಸಂಘಗಳಿದ್ದುವು.

ವಾಣಿಜ್ಯ ಬ್ಯಾಂಕುಗಳ ಸ್ಥಾಪನೆಯಲ್ಲಿಯೂ ಕರ್ಣಾಟಕ ಹಿಂದೆ ಬಿದ್ದಿಲ್ಲ. 1870ಕ್ಕಿಂತ ಮುಂಚೆಯೇ ಚಿತ್ರದುರ್ಗದಲ್ಲಿ ಒಂದು ವಾಣಿಜ್ಯ ಬ್ಯಾಂಕು ಸ್ಥಾಪಿತವಾಗಿತ್ತು. ಕೈಗಾರಿಕೆ ವಾಣಿಜ್ಯಗಳಿಗೆ ಹೆಚ್ಚಾಗಿ ಕಿರುಸಾಲ ನೀಡುವ ಮುಖ್ಯ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣವಾದ ಮೇಲೆ ಅವು ವ್ಯವಸಾಯಕ್ಕೂ ಸಣ್ಣ ಕೈಗಾರಿಕೆಗಳಿಗೂ ಸಾಲ ನೀಡುತ್ತಿವೆ. 1956ರಲ್ಲಿ ರಾಜ್ಯದಲ್ಲಿದ್ದ ವಾಣಿಜ್ಯ ಬ್ಯಾಂಕುಗಳ ಕಚೇರಿಗಳ ಸಂಖ್ಯೆ 357. 1970ರಲ್ಲಿ ಇದು 700ಕ್ಕಿಂತಲೂ ಹೆಚ್ಚಾಗಿತ್ತು. 1961-70ರ ಅವಧಿಯಲ್ಲಿ ಇವುಗಳ ಠೇವಣಿಯ ಮೊತ್ತ 77 ಕೋಟಿ ರೂ.ಗಳಿಂದ 210 ಕೋಟಿ ರೂ.ಗಳಿಗೆ ಏರಿತು. ಈ ಹಣಕಾಸಿನ ಸಂಸ್ಥೆಗಳ ಜೊತೆಗೆ ಮೈಸೂರು ರಾಜ್ಯ ಹಣಕಾಸಿನ ಸಂಸ್ಥೆಯನ್ನೂ ಮೈಸೂರು ರಾಜ್ಯ ಕೈಗಾರಿಕಾಭಿವೃದ್ಧಿ ಸಂಸ್ಥೆಯನ್ನೂ ಇತ್ತೀಚೆಗೆ ಮೈಸೂರು ರಾಜ್ಯದ ಆಗ್ರೊ-ಇಂಡಸ್ಟ್ರೀಸ್ ಸಂಸ್ಥೆಯನ್ನೂ ಸ್ಥಾಪಿಸಲಾಗಿದೆ.

ಸರ್ಕಾರದ ಆಯವ್ಯಯ: 1958-69ರ ಅವಧಿಯಲ್ಲಿ ರಾಜ್ಯ ಸರ್ಕಾರದ ವಾರ್ಷಿಕ ಆದಾಯ 58 ಕೋಟಿ ರೂ.ಗಳಿಂದ 223 ಕೋಟಿ ರೂ.ಗಳಿಗೆ ಏರಿತು. ಇದೇ ಅವಧಿಯಲ್ಲಿ ಸಾರ್ವಜನಿಕ ವೆಚ್ಚ 53 ಕೋಟಿ ರೂ.ಗಳಿಂದ 212 ಕೋಟಿ ರೂ.ಗಳಿಗೆ ಏರಿತು. ದೇಶದ ಮುಖ್ಯ ಆದಾಯ ಮೂಲಗಳೆಂದರೆ ಮಾರಾಟ ತೆರಿಗೆ, ಅಬ್ಕಾರಿಸುಂಕ, ವಾಹನಗಳ ಮೇಲೆ ಹಾಕುವ ಸುಂಕ, ಸ್ಟಾಂಪ್ ಶುಲ್ಕ, ಭೂಕಂದಾಯ, ನೋಂದಣಿ ಶುಲ್ಕ, ಕೈಗಾರಿಕೆ ಮತ್ತು ಅರಣ್ಯ ಇಲಾಖೆಗಳಿಂದ ಬರುವ ಆದಾಯ ಮತ್ತು ಕೇಂದ್ರ ಸರ್ಕಾರದ ತೆರಿಗೆಗಳಿಂದ ಬರುವ ಪಾಲು ಮತ್ತು ಧನಸಹಾಯ.

ಪಂಚವಾರ್ಷಿಕ ಯೋಜನೆಗಳು ಬದಲಾಯಿಸಿ

ದೇಶದಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ಕೇಂದ್ರ ಸರ್ಕಾರ ಪಂಚವಾರ್ಷಿಕ ಯೋಜನೆಯನ್ನು 1951ರಲ್ಲಿ ಪ್ರಾರಂಭಿಸಿತು. ಕರ್ಣಾಟಕದಲ್ಲೂ ಇದು ಜಾರಿಗೆ ಬಂತು. ಮೂರು ಪಂಚವಾರ್ಷಿಕ ಯೋಜನೆಗಳು ಪೂರ್ಣವಾಗಿ ನಾಲ್ಕನೆಯ ಯೋಜನೆ ನಡೆಯುತ್ತಿದೆ (1971). ಪಂಚವಾರ್ಷಿಕ ಯೋಜನೆಯಲ್ಲಿ ರಾಜ್ಯ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡುತ್ತಿದೆ. ವ್ಯವಸಾಯ, ಪಶುಪಾಲನೆ, ನೀರಾವರಿ, ವಿದ್ಯುಚ್ಫಕ್ತಿ, ಕೈಗಾರಿಕೆ ಸಹಕಾರ ವ್ಯವಸ್ಥೆ, ಸಮಾಜ ಕಲ್ಯಾಣ, ಸಾರಿಗೆ ಸಂಪರ್ಕ, ಶಿಕ್ಷಣ ಇವುಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಇವಕ್ಕಾಗಿ ಸರ್ಕಾರ ಮೊದಲನೆಯ ಪಂಚವಾರ್ಷಿಕ ಯೋಜನೆಯಲ್ಲಿ (1951-56) ಸು. 48 ಕೋಟಿ ರೂಪಾಯಿಗಳನ್ನೂ ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ (1956-61) 145 ಕೋಟಿ ರೂ.ಗಳನ್ನೂ ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ (1961-66) 246 ಕೋಟಿ ರೂ.ಗಳನ್ನೂ ವೆಚ್ಚ ಮಾಡಿದೆ. ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ (1969-74) 350 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಅಂದಾಜಿದೆ. ಅಭಿವೃದ್ಧಿ ಯೋಜನೆಗಳ ಫಲವಾಗಿ ಕರ್ಣಾಟಕ ದಿನೇ ದಿನೇ ಆರ್ಥಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ.              

 (ಎಂ.ಎ.ಎಂ.)