ಕರ್ಕ್ಯೂಲಿಗೊ
Curculigo orchioides | |
---|---|
Curculigo orchioides | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. orchioides
|
Binomial name | |
Curculigo orchioides Gaertn., 1788
|
ಕರ್ಕ್ಯೂಲಿಗೊ ಅಮರಿಲ್ಲಿಡೇಸೀ ಅಥವಾ ಹೈಪಾಕ್ಸಿಡೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯ ಜಾತಿ. ಈ ಗಿಡಗಳ ಅಂಡಾಶಯದ ತುದಿ ಸೊಂಡಿಲು ಕೀಟದಂತಿರಿವುದರಿಂದ ಇದಕ್ಕೆ ಈ ಹೆಸರು ಬಂದಿದೆ (ಲ್ಯಾಟಿನ್ ಭಾಷೆಯಲ್ಲಿ ಕರ್ಕ್ಯೂಲಿಯೊ ಎಂದರೆ ಸೊಂಡಿಲುಕೀಟ-ವೀವಿಲ್ ಎಂದು ಅರ್ಥ), ಇದರಲ್ಲಿ ಸುಮಾರು ೧೨ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಸ್ವಾಭಾವಿಕವಾಗಿ ಬೆಳೆಯುವುವಾದರೂ ಇನ್ನು ಕೆಲವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ, ಮನೆಗಳಲ್ಲಿ ಬೆಳೆಸುವುದುಂಟು. ಇವು ಸುಮಾರು 1'-5' ಎತ್ತರಕ್ಕೆ ಬೆಳೆಯುವ ಮೂಲಿಕೆಗಳು. ಭೂಮಿಯಲ್ಲೇ ಹುದುಗಿರುವ ಗೆಡ್ಡೆಯಂಥ ಪ್ರಕಂದವೂ (ರೈಜೋ಼ಮ್) ನೆಲದಿಂದ ಮೇಲಕ್ಕೆ ಕಾಂಡವಿಲ್ಲದಿರುವುದೂ ಬೇರಿನಿಂದಲೇ ಹೊರಟಿರುವಂಥ ಎಲೆಗಳೂ ಕದಿರುಗೊಂಚಲು ಮಾದರಿಯ ಹೂಗೊಂಚಲೂ ಈ ಸಸ್ಯಗಳ ಮುಖ್ಯ ಹಾಗೂ ವಿಶಿಷ್ಟ ಲಕ್ಷಣಗಳು. ಎಲೆಗಳು ಚಿಕ್ಕವಾಗಿದ್ದಾಗ ಮಡಚಿಕೊಂಡಿರುತ್ತವಲ್ಲದೆ, ನೋಡಲು ತೆಂಗಿನ ಜಾತಿಯ ಸಸ್ಯಗಳ ಎಲೆಗಳಂತೆ ಕಾಣುತ್ತವೆ. ಹೂ ಗೊಂಚಲು ಹಲವಾರು ಪ್ರಬೇಧಗಳಲ್ಲಿ ಎಲೆಗಳ ಮಟ್ಟದಿಂದ ಕೆಳಗೇ ಇದ್ದು ಗಿಡದ ಬುಡದಲ್ಲಿ ಅಡಗಿಕೊಂಡಂತಿರುತ್ತದೆ. ಹೂಗಳು ಹಳದಿಬಣ್ಣದವು. ನಕ್ಷತ್ರಗಳಂತೆ ಕಾಣುತ್ತವೆ. ಪ್ರತಿಯೊಂದು ಹೂವಿನಲ್ಲಿ 6 ಭಾಗಗಳುಳ್ಳ ಸಂಯುಕ್ತಮಾದರಿಯ (ಗ್ಯಾಮಾಫಿಲಸ್) ಪೆರಿಯಾಂತು, 6 ಕೇಸರಗಳು, ಮೂರು ಕಾರ್ಪೆಲುಗಳನ್ನೊಳಗೊಂಡ ನೀಚಸ್ಥಾನದ ಅಂಡಾಶಯ ಇವೆ. ಅಂಡಕೋಶದಲ್ಲಿ ಮೂರು ಕೋಣೆಗಳಿವೆ. ಒಂದೊಂದು ಕೋಣೆಯಲ್ಲೂ 12 - 24 ಅಂಡಕಗಳಿವೆ. ಉದ್ಯಾನ ಪ್ರಾಮುಖ್ಯವನ್ನು ಪಡೆದಿರುವ ಕರ್ಕ್ಯೂಲಿಗೊ ಪ್ರಭೇದಗಳಲ್ಲಿ ಮುಖ್ಯವಾದುವು ಕ. ಲ್ಯಾಟಿಫೋಲಿಯ ಮತ್ತು ಕ. ರಿಕರ್ವೇಟ. ಇವುಗಳಲ್ಲಿ ಮೊದಲನೆಯದು ಸುಮಾರು 2'-3' ಎತ್ತರಕ್ಕೆ ಬೆಳೆಯುವ ಬಗೆಯದು. ಇದಕ್ಕೆ ಈಟಿಯಾಕಾರದ ಎಲೆಗಳಿವೆ. ಕ.ರಿಕರ್ವೇಟ ಪ್ರಭೇದ ಹೆಚ್ಚು ಜನಪ್ರಿಯವಾದುದು. ಇದು ಕೂಡ ಸುಮಾರು 2ಳಿ' ಎತ್ತರಕ್ಕೆ ಬೆಳೆಯುತ್ತದೆ. ಇದರಲ್ಲಿ ಸು. 1' - 3' ಉದ್ದದ ಹಾಗೂ 2" - 6" ಅಗಲದ ಹಿಂದಕ್ಕೆ ಬಾಗಿದ ಎಲೆಗಳಿವೆ. ಈ ಪ್ರಭೇದದಲ್ಲಿ ವೇರಿಗೇಟ ಮತ್ತು ಸ್ಟ್ರಯೇಟ ಎಂಬ ಎರಡು ಬಗೆ (ತಳಿ)ಗಳಿವೆ. ಮೊದಲನೆಯದರ ಎಲೆಗಳ ಮೇಲೆ ಬಿಳಿಯ ಬಣ್ಣದ ಹಲವಾರು ಉದ್ದ ಪಟ್ಟೆಗಳೂ ಎರಡನೆಯದರಲ್ಲಿ ಒಂದೇ ಒಂದು ಬಿಳಿಯ ಪಟ್ಟೆಯೂ ಇವೆ. ಎಲ್ಲ ಪ್ರಭೇದಗಳನ್ನೂ ಕುಂಡಗಳಲ್ಲೊ ನೇರವಾಗಿ ಸಸಿನೆಡುವ ಸ್ಥಳಗಳಲ್ಲೊ ಅಲಂಕಾರ ಸಸ್ಯಗಳನ್ನಾಗಿ ಬೆಳೆಸುತ್ತಾರೆ. ಇವನ್ನು ಪ್ರಕಂದದ ತುಂಡುಗಳಿಂದ ವೃದ್ಧಿಸುತ್ತಾರೆ. ಬೆಳೆವಣಿಗೆಯ ಕಾಲದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಉತ್ತಮ. ಮರುಳು ಮಿಶ್ರಿತ ಗೋಡುಮಣ್ಣಿನ ನೆಲದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಉತ್ತಮ ಬೆಳೆವಣೆಗೆಗಾಗಿ ದನದ ಗೊಬ್ಬರವನ್ನೂ ಹೇರಳವಾಗಿ ಹಾಕಬೇಕು. ಮೇಲೆ ಹೇಳಿದ ಎರಡು ಪ್ರಭೇದಗಳಲ್ಲದೆ ಪಶ್ಚಿಮ ಘಟ್ಟಗಳಲ್ಲೂ ಪೂರ್ವ ಹಿಮಾಲಯ ಪರ್ವತ ಪ್ರದೇಶಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುವ ಕರ್ಕ್ಯೂಲಿಗೊ ಆರ್ಕಿಯಾಯ್ಡಿಸ್ ಎಂಬ ಪ್ರಭೇದವೂ ಇದೆ. ಇದನ್ನು ನೆಲತೆಂಗು ಅಥವಾ ನೆಲತಾಳೆ ಎಂದು ಕರೆಯುತ್ತಾರೆ. ಇದರ ಗೆಡ್ಡೆಯಂತಿರುವ ಬೇರುಗಳು ಔಷಧಿಯ ಪ್ರಾಮುಖ್ಯ ಪಡೆದಿವೆ. ಕೊಂಚ ಕಹಿಯಾಗೂ ಲೋಳೆಯಿಂದ ಕೂಡಿರುವಂಥವೂ ಆದ ಇವನ್ನು ಶಕ್ತಿವರ್ಧಕ, ಮೂತ್ರಸ್ರಾವ ಉತ್ತೇಜಕ, ಪುನರಾರೋಗ್ಯದಾಯಕ ಹಾಗೂ ಶಾಮಕವಾಗಿ ಬಳಸುತ್ತಾರೆ. ಅಲ್ಲದೆ ಮೂಲವ್ಯಾಧಿ ಅತಿಸಾರ, ಕಾಮಾಲೆ, ಆಸ್ತಮ ರೋಗ ನಿವಾರಣೆಗೂ ತುರಿ ಮತ್ತಿತರ ಚರ್ಮರೋಗಗಳಲ್ಲಿ ಬೆಚ್ಚಾರವಾಗೂ (ಪೋಲ್ಟೀಸು) ಉಪಯೋಗಿಸುವುದುಂಟು. (
ಉಲ್ಲೇಖನ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ