ಕರ್ಕಾಟಕ ರಾಶಿ: ರಾಶಿಚಕ್ರದ (ನೋಡಿ- ರಾಶಿಚಕ್ರ) ಮೇಲಿರುವ ಹನ್ನೆರಡು ನಕ್ಷತ್ರ ಪುಂಜಗಳಲ್ಲಿ ನಾಲ್ಕನೆಯದು (ಕ್ಯಾನ್ಸರ್). ಮೊದಲನೆಯದು ಮೇಷ ರಾಶಿ, ಪಶ್ಚಿಮ-ಪೂರ್ವ ದಿಶೆಯಲ್ಲಿ ಅಳವಡಿಕೆ. ನಕ್ಷತ್ರಪಟಗಳಲ್ಲಿ ಕರ್ಕಾಟಕ ರಾಶಿಯನ್ನು ನಾಲ್ಕು ನಕ್ಷತ್ರಗಳು ರಚಿಸುವ y ಆಕಾರದಿಂದ ತೋರಿಸುವುದು ವಾಡಿಕೆ. ಆದರೆ ಇವಿಷ್ಟು ನಕ್ಷತ್ರಗಳೂ ಬಲು ಕ್ಷೀಣ ಪ್ರಕಾಶದವಾಗಿರುವುದರಿಂದ ಈ ರಾಶಿಯನ್ನು ಬರಿಗಣ್ಣಿನಿಂದ ನೋಡಿ ಗುರುತಿಸಲು ಸಾಧ್ಯವಾಗದು. ಇದರ ಪಶ್ಚಿಮ ಒತ್ತಿಗೆ ಮಿಥುನ ರಾಶಿಯೂ ಪೂರ್ವ ಒತ್ತಿಗೆ ಸಿಂಹ ರಾಶಿಯೂ ಇವೆ. ಇವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇವುಗಳ ನಡುವಿನ ವಲಯವೇ ಸರಿ ಸುಮಾರಾಗಿ ಕರ್ಕಾಟಕ ರಾಶಿ. ಇದರ ವಿಷುವದಂಶ 7 ಗಂ. 55 ಮಿ.-9 ಗಂ. 20 ಮಿ; ಘಂಟಾವೃತ್ತಾಂಶ 7 ಡಿಗ್ರಿ -33 ಡಿಗ್ರಿ ಉ. ಚಂದ್ರರಹಿತ ರಾತ್ರಿಯ ಸ್ವಚ್ಛಾಕಾಶ ದಲ್ಲಿ, ಕರ್ಕಾಟಕರಾಶಿಯ ಹಿನ್ನೆಲೆಯಲ್ಲಿ ಒಂದು ನಿಬಿಡ ನಕ್ಷತ್ರಗುಚ್ಛವನ್ನು ಬರಿಗಣ್ಣಿನಿಂದ ನೋಡಬಹುದು- ಹೀಗೆ ಮಸಕು ಬೆಳಕಿನ ಮಚ್ಚೆಯಂಥ ಆಕಾರ. ಇದರ ಹೆಸರು ಪೆಸೀಪೀ. ಟೆಲಿಸ್ಕೋಪಿನಿಂದ ನೋಡುವವರಿಗೆ ಇದೊಂದು ಸುಂದರ ದೃಶ್ಯ. ಈ ಗುಚ್ಛಕ್ಕೆ ಬೀಹೈವ್ (ಜೇನುಗೂಡು) ಎಂದು ಹೆಸರಿದೆ.

The constellation Cancer as it can be seen by the naked eye.
Cancer as depicted in Urania's Mirror, a set of constellation cards published in London c.1825.

ಸ್ಥಿರನಕ್ಷತ್ರ ಚಿತ್ರಗಳ ಪಟದಲ್ಲಿ ಸೂರ್ಯನ ಚಲನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ತಿಳಿಯುವ ಕೆಲವು ಮುಖ್ಯಾಂಶಗಳು ಇಷ್ಟು-ಚಲನೆಯ ದಿಶೆ ಪಶ್ಚಿಮದಿಂದ ಪೂರ್ವಕ್ಕೆ; 1 ಪರಿಭ್ರಮಣೆಯ ಅವಧಿ ಒಂದು ವರ್ಷ; ಮಾರ್ಚ್ 21 ರಿಂದ ಸೆಪ್ಟೆಂಬರ್ 21ರ ತನಕ ಆಕಾಶದ ಉತ್ತರಗೋಳಾರ್ಧದಲ್ಲಿಯೂ ಸೆಪ್ಟೆಂಬರ್ 21ರಿಂದ ಮಾರ್ಚ್ 31 ವರೆಗೆ ದಕ್ಷಿಣಗೋಳಾರ್ಧದಲ್ಲಿಯೂ ಸೂರ್ಯನ ಸಂಚಾರವಿದೆ. ಈ ಚಲನೆಯಲ್ಲಿ ಸೂರ್ಯನಿಗೆ ಅತಿ ಉತ್ತರಸ್ಥಾನ ಕರ್ಕಾಟಕ ರಾಶಿ ಆಗಿದ್ದಾಗ ಸಹಜವಾಗಿಯೇ ಇದಕ್ಕೆ ಅಧಿಕ ಪ್ರಾಧಾನ್ಯ ದೊರೆತಿತ್ತು. ಆದರೆ ಅಯನಾಂಶದ ಪರಿಣಾಮವಾಗಿ ಕರ್ಕಾಟಕ ರಾಶಿಗೆ ಈಗ ಈ ಹಿರಿಮೆ ತಪ್ಪಿ ಹೋಗಿದೆ. ಬದಲು, ಮಿಥುನ ರಾಶಿ ಇಂದು ಸರಿಸುಮಾರಾಗಿ ಸೂರ್ಯನ ಅತಿ ಉತ್ತರಸ್ಥಾನ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ