ಕರೋಸ, ಹಾನ್ಸ್
ಕರೋಸ, ಹಾನ್ಸ್: 1878-1955. ಬವೇರಿಯದ ಟೋಲ್ಜ ಎಂಬಲ್ಲಿ ಜನಿಸಿದ ಈತನ ಕೃತಿಗಳು ಆತ್ಮಕಥಾ ಪ್ರಕಾರಗಳಲ್ಲಿ ಅತ್ಯುತ್ತಮವೆನಿಸಿವೆ. 1913ರಲ್ಲಿ ಪ್ರಕಟವಾದ ಡಾ|| ಬಂಗರ್ಸ್ನ ಅದೃಷ್ಟ ದಾರುಣಕಥೆ. ರೋಗಿಯೊಬ್ಬಳನ್ನು ವೈದ್ಯ ಪ್ರೇಮಿಸುತ್ತಾನೆ. ಆತನ ನಿರ್ಲಕ್ಷ್ಯದಿಂದ ಆಕೆ ಸಾಯುತ್ತಾಳೆ. ಕಡೆಗೆ ವೈದ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಲ್ಲಿ ರೋಗಿಯನ್ನು ಕುರಿತು ಇರಬೇಕಾದ ಮಾನವೀಯತೆ ಹಾಗೂ ವೃತ್ತಿಗೌರವದ ನಡತೆ ಇವೆರಡೂ ಆತನನ್ನು ಗೊಂದಲದಲ್ಲಿ ಬೀಳಿಸಿವೆ. ತರುಣ ವೈದ್ಯ ಹಾಗೂ ರೋಗಿಯ ಈ ರೀತಿಯ ಸಂಬಂಧ ಸಾಧಾರಣವಾಗಿ ಜರುಗುವ ಘಟನೆಯೇ. ತನ್ನ ಜೀವನದ ನಾನಾ ಹಂತಗಳನ್ನು ಬಾಲ್ಯ (1922) ತಾರುಣ್ಯದ ಪರಿವರ್ತನೆ (1928), ಅಮೋಘ ಭ್ರಮೆಗಳ ವರ್ಷ ಎಂಬ ಕೃತಿಗಳಲ್ಲಿ ಕರೋಸ ವಿವರಿಸಿದ್ದಾನೆ. ಮೊದಲನೆಯ ಮಹಾಯುದ್ಧದಲ್ಲಿ ಸೈನ್ಯದ ವೈದ್ಯನಾಗಿ ಗಳಿಸಿದ ತನ್ನ ಅನುಭವಗಳನ್ನು ರೂಮೇನಿಯದ ದಿನಚರಿ (1924) ಎಂಬ ಗ್ರಂಥದಲ್ಲಿ ವಿವರಿಸಿದ್ದಾನೆ. ತನ್ನ ಸಮಕಾಲೀನರಾದ ಹಾಫಮನ್ತಾಲ್, ರಿಲ್ಕೆ ಇವರ ಸಖ್ಯವನ್ನು ಮುಖಂಡರು ಮತ್ತು ಅನುಯಾಯಿಗಳು (1933) ಎಂಬ ಪುಸ್ತಕದಲ್ಲೂ ಜೀವನ ಸ್ಮೃತಿಗಳು ಎಂಬ ಕೃತಿಯಲ್ಲೂ ಕವಿ ವಿವರವಾಗಿ ಚಿತ್ರಿಸಿದ್ದಾನೆ. ಡಾ|| ಗಿಯಾನ್ (1931) ಮತ್ತು ಪಕ್ವಜೀವನದ ರಹಸ್ಯಗಳು (1937) ಈತನ ಇತರ ಕೃತಿಗಳು. ವೈದ್ಯವೃತ್ತಿಗೂ ಸಾಹಿತ್ಯಪ್ರಬೋಧನೆಗೂ ಇರುವ ತಿಕ್ಕಾಟವನ್ನು ತನ್ನ ಕಡೆಯ ಅಪೂರ್ಣ ಕೃತಿಯಾದ ತರುಣವೈದ್ಯನ ದಿನ (1955) ಎಂಬುದರಲ್ಲಿ ವಿವರಿಸಲಾಗಿದೆ. ತನ್ನ ಜೀವನದ ಘಟನೆಗಳನ್ನು, ಕಥಾನಕಗಳನ್ನು ಹೆಣೆಯುವಲ್ಲಿ ಅವು ಎಷ್ಟೇ ಅಮುಖ್ಯವಾಗಿರಲಿ ಅವುಗಳಲ್ಲಿ ಲಯ, ವಿನ್ಯಾಸವನ್ನು ಕಂಡು ಏಕತೆ ತೋರುವಂತೆ ಮಾಡಿದ್ದಾನೆ ಕರೋಸ. ಗಯಟೆಯ ಆತ್ಮಕಥೆಯನ್ನು ನೆನಪಿಗೆ ತರುವ ಕರೋಸನ ಸಮ್ಮೋಹಕ ಪ್ರಾಮಾಣಿಕ ಶೈಲಿಯೇ ಆತನ ಯಶಸ್ಸಿನ ಗುಟ್ಟು. (ಟಿ.ವಿ.ಎಸ್.)