ಕರಲಿಂಗಿಗಳು
ಕರಲಿಂಗಿಗಳು : ಒಂದು ಬಗೆಯ ವಾಮಾಚಾರಿ ಸನ್ಯಾಸಿಗಳು; ಶಿವನ ಉಪಾಸಕರು. ಶಿವನನ್ನು ಶಬರ ಎಂದು ಕರೆಯುತ್ತಾರೆ. ಶಬರನನ್ನು ಪುಜಿಸುವುದರಿಂದ ಇವರಿಗೆ ಸೇವಾರರು ಎಂಬ ಹೆಸರೂ ಉಂಟು. ಇವರು ಜಟಾಧಾರಿಗಳು ಉಡುಪು ಸಾಧಾರಣವಾಗಿ ಕೆಂಪು ಬಣ್ಣದ್ದು. ಗುಂಪುಗುಂಪಾಗಿ ಸಂಚರಿಸುವುದೇ ಸಾಮಾನ್ಯ. ಕೆಲವರು ಏಕಾಂತದಲ್ಲಿ ಯಾವಾಗಲೂ ನಗ್ನರಾಗಿ ಇರುತ್ತಾರೆ. ಕಾಮವನ್ನು ಗೆದ್ದಿರುವೆವೆಂದು ಪ್ರದರ್ಶಿಸಲು, ಇವರು ಶಿಶ್ನವನ್ನು ಕೊರೆದು ಅದನ್ನು ಬಳೆಯಿಂದ ಮತ್ತು ಸರಪಣಿಯಿಂದ ಬಿಗಿದಿರುತ್ತಾರೆ. ತಮ್ಮ ಜಟೆಯಿಂದ ಗಂಗೆ ಹರಿಯುತ್ತದೆ ಎಂದು ಘೋಷಿಸಿ ತಮ್ಮ ತಲೆಗೂದಲಿಂದ ನೀರು ಹರಿಸಿ ತೋರಿಸುತ್ತಾರೆ. ಮದ್ಯವನ್ನು ಹಾಲಾಗಿ ಪರಿವರ್ತಿಸುತ್ತೇವೆಂದೂ ಬರಿ ಕೈಯಿಂದ ಅಕ್ಕಿ ಗೋದಿಕಾಳುಗಳನ್ನು ಬರಿಸುತ್ತೇವೆಂದೂ ಹೇಳಿ ಜನರಿಂದ ಹಣವನ್ನು ಸಂಪಾದಿಸುತ್ತಾರೆ.