ಕಮ್ಯೂನ್ : ಮಧ್ಯಯುಗದ ಪಶ್ಚಿಮ ಯುರೋಪಿನ ಪಟ್ಟಣಗಳ ಸಾಮಾನ್ಯ ನಾಮ. 1793 ಮತ್ತು 1794ರಲ್ಲೂ 1871ರಲ್ಲೂ ಸ್ಥಾಪಿತವಾಗಿದ್ದ ಪ್ಯಾರಿಸಿನ ಕ್ರಾಂತಿಯುತ ನಗರಸರ್ಕಾರಗಳ ವಿಶಿಷ್ಟ ನಾಮ. ರೋಮನ್ ಸಾಮ್ರಾಜ್ಯದ ಪತನದ ಪರಿಣಾಮವಾಗಿ ವಾಣಿಜ್ಯ ಸಂಪುರ್ಣವಾಗಿ ಸ್ಥಗಿತವಾದಾಗ ನಗರಜೀವನ ಬಹಳಮಟ್ಟಿಗೆ ಕ್ಷೀಣಿಸಿತ್ತು. ಪ್ಯಾರಿಸ್, ಲಿಯಾನ್, ಕೊಲೋನ್ ಮುಂತಾದ ಕೆಲವು ಪ್ರಸಿದ್ಧ ಪಟ್ಟಣಗಳು ಅತಂತ್ರವಾಗಿ ಉಳಿದುಕೊಂಡಿದ್ದವು. 11ನೆಯ ಶತಮಾನದಲ್ಲಿ ವ್ಯಾಪಾರದ ಪುನರುಜ್ಜೀವನವಾದಾಗ ಅದರಿಂದಾಗಿ ವರ್ತಕ ವರ್ಗಗಳ ಉದಯಕ್ಕೆ ಪ್ರೋತ್ರಾಹ ಸಿಕ್ಕಿದಂತಾಯಿತು. ಗ್ರಾಮಪ್ರಧಾನವಾದ ಊಳಿಗಮಾನ್ಯ ಜಗತ್ತಿನೊಳಕ್ಕೆ ವರ್ತಕರ ಪ್ರವೇಶವನ್ನು ಶ್ರೀಮಂತರು ಸಹಿಸಲಿಲ್ಲ. ಮುಂದಿನ ಎರಡು ಶತಮಾನಗಳ ಕಾಲ ನಗರಗಳು ರಾಜಾಧಿಕಾರ, ಊಳಿಗಮಾನ್ಯಾಧಿಕಾರ ಮತ್ತು ಮತೀಯ ಅಧಿಕಾರ ಗಳೊಂದಿಗೆ ಪದೇಪದೇ ಘರ್ಷಣೆಯಲ್ಲಿ ನಿರತವಾಗಿದ್ದವು. ಹೊರಗಿನ ಕೋಟಲೆಗಳಿಲ್ಲದೆ ತನ್ನನ್ನು ತಾನೇ ಆಳಿಕೊಳ್ಳಲು ಫ್ರೆಂಚ್ ಪಟ್ಟಣವೊಂದಕ್ಕೆ ಆ ಸ್ಥಳದ ಕೌಂಟ್ ಅಥವಾ ಬಿಷಪ್ ಸನ್ನದು ನೀಡಿದಾಗ ಆ ಪಟ್ಟಣ ಕಮ್ಯೂನ್ ಎಂದು ಕರೆದುಕೊಳ್ಳಲು ಅರ್ಹತೆ ಗಳಿಸುತ್ತಿತ್ತು. ಪಶ್ಚಿಮ ಐರೋಪ್ಯ ಪೌರಸಭಾ ಚಳವಳಿಗೇ ಕಮ್ಯೂನ್ ಎಂಬ ಪದವನ್ನು ಈಗ ಬಲು ಸಡಿಲವಾಗಿ ಬಳಸಲಾಗುತ್ತಿದೆ. ಕೊನೆಗೆ ಫ್ರಾನ್ಸಿನ ಕಮ್ಯೂನುಗಳೂ ಸನ್ನದು ಪಡೆದ ಇತರ ಪಟ್ಟಣಗಳೂ ದೊರೆಯ ಅಧಿಕಾರದೊಳಕ್ಕೆ ಬಂದಾಗ ಅವು ತಮ್ಮ ವಿಶಿಷ್ಟ ಹಕ್ಕುಗಳಲ್ಲಿ ಹಲವನ್ನು ಕಳೆದುಕೊಂಡವು. 1791ರ ಫ್ರೆಂಚ್ ಸಂವಿಧಾನದಲ್ಲಿ ಕಮ್ಯೂನ್ ಎಂಬ ಶಬ್ದವನ್ನು ಮತ್ತೆ ಬಳಸಲಾಯಿತು. ತಮ್ಮ ಮೇಯರುಗಳನ್ನೂ ಇತರ ಅಧಿಕಾರಿಗಳನ್ನೂ ಚುನಾಯಿಸಿಕೊಳ್ಳುವ ಅಧಿಕಾರವಿರುವ 40,000 ಪೌರವ್ಯಕ್ತಿಗಳ ಘಟಕಗಳನ್ನು ಈ ಹೆಸರಿನಿಂದ ಕರೆಯಲಾಯಿತು. ಇಂಥ ಕ್ರಾಂತಿಕಾರಿ ಕಮ್ಯೂನುಗಳ ಪೈಕಿ ಪ್ಯಾರಿಸಿನ ಕಮ್ಯೂನ್ ಅತ್ಯಂತ ಪ್ರಸಿದ್ಧವಾದದ್ದು. ಕಾರ್ಮಿಕ ವರ್ಗಕ್ಕೂ ಇದಕ್ಕೂ ಇದ್ದ ನಿಕಟಸಂಬಂಧ, ರಾಷ್ಟ್ರೀಯ ಸರ್ಕಾರದೊಂದಿಗೆ ಇದಕ್ಕಿದ್ದ ಸಾಮೀಪ್ಯ, ಫ್ರೆಂಚ್ ನಾಗರಿಕತೆಯಲ್ಲಿ ಈ ನಗರಕ್ಕಿದ್ದ ವಿಶಿಷ್ಟ ಸ್ಥಾನ-ಈ ಕಾರಣಗಳಿಂದಾಗಿ ಇದಕ್ಕೆ ಈ ಪ್ರಸಿದ್ಧಿ ಬಂತು. 1789ರ ಚುನಾವಣೆಗಳಿಗಾಗಿ ಪ್ಯಾರಿಸನ್ನು 60 ಉಪವಿಭಾಗಗಳಾಗಿ ಮಾಡಲಾಗಿತ್ತು. ಆದರೆ 1790ರ ಪೌರಸಭಾ ಕಾನೂನಿನ ಪ್ರಕಾರ ಇವುಗಳ ಸಂಖ್ಯೆ 48ಕ್ಕೆ ಇಳಿಯಿತು. ಪ್ರತಿಯೊಂದು ಉಪವಿಭಾಗದಲ್ಲೂ 17,000-18,000ದವರೆಗೆ ಪ್ರಜೆಗಳಿರುತ್ತಿದ್ದರು. ಪ್ಯಾರಿಸಿನ ಕಮ್ಯೂನಿನ ಆಡಳಿತ ನಡೆಸಲು ಆಯ್ಕೆಯಾಗುತ್ತಿದ್ದ ಮಂಡಲಿಯ ಸದಸ್ಯರ ಸಂಖ್ಯೆ 148. 14 ವಿಭಾಗಗಳಲ್ಲಿ ಕಾರ್ಮಿಕರು ಒತ್ತಾಗಿ ವಾಸಿಸುತ್ತಿದ್ದರು. 1793 ಮತ್ತು 1794ರ ಕ್ರಾಂತಿಯ ಮೇಲೆ ಈ ಜನರ ಪ್ರಭಾವ ಅಗಾಧ. 1793 ಆಗಸ್ಟಿನಲ್ಲಂತೂ ಪರಿಸ್ಥಿತಿ ಬಹಳ ಬಿಕ್ಕಟ್ಟಿನದಾಗಿತ್ತು. ಸೈನಿಕ ಹಿನ್ನಡೆಗಳಿಂದಾಗಿ ರಾಷ್ಟ್ರದ ಜನ ಎಚ್ಚತ್ತಿದ್ದರು. ಕಮ್ಯೂನಿನ ಕಾನೂನುಬದ್ಧ ಸರ್ಕಾರದ ಸ್ಥಾನದಲ್ಲಿ ತಮಗೆ ಅನುಕೂಲವಾದ ಸರ್ಕಾರವನ್ನೇ ಸ್ಥಾಪಿಸಬೇಕೆಂದು ಕೂಡ ಕೆಲವರು ಯೋಚಿಸಿದ್ದರು. ರಾಜತ್ವವನ್ನು ಕಿತ್ತೊಗೆಯುವ ಹಂಚಿಕೆಯೂ ಸಾಗಿತ್ತು. ಆಗಸ್ಟ್‌ 9, 10ರ ವೇಳೆಗೆ ಇವೆರಡೂ ಸಾಧಿಸಿದವು. ರಾಜಗದ್ದುಗೆ ಯನ್ನುರುಳಿಸಿ ಅದರ ಮೇಲೆ ಸ್ಥಾಪಿಸಲಾಗಿದ್ದ ಪ್ರಥಮ ಫ್ರೆಂಚ್ ಗಣರಾಜ್ಯ ಸರ್ಕಾರ ಅನಂತರ ಒಂದು ವರ್ಷಕಾಲ ಪ್ಯಾರಿಸ್ ಕಮ್ಯೂನಿನ ಬಂಡಾಯಗಾರ ಸರ್ಕಾರದ ಒತ್ತಡಕ್ಕೆ ಮಣಿಯಬೇಕಾಗಿತ್ತು. ಆರ್ಥಿಕ ಬಿಕ್ಕಟ್ಟಿನ ಫಲವಾಗಿ ಅಶಾಂತಿಯಿಂದ ಕೂಡಿದ್ದ ಕಾರ್ಮಿಕರ ಆಂದೋಲನದಿಂದಾಗಿ ರಾಷ್ಟ್ರೀಯ ಸರ್ಕಾರ ಕೈಗೊಂಡ ಹಲವಾರು ಆರ್ಥಿಕ ಸಾಮಾಜಿಕ ಕ್ರಮಗಳು ಬಲು ತೀವ್ರವಾಗಿದ್ದವು. 1794ರ ಬೇಸಗೆಯಲ್ಲಿ ಈ ಸರ್ಕಾರ ಉರುಳಿದಾಗ ಕಮ್ಯೂನಿನ ಪ್ರಭಾವ ತಗ್ಗಿತು. ಸರ್ಕಾರದ ಮೇಲೆ ಹತೋಟಿ ಹೊಂದಿದ್ದ ಸಂಪ್ರದಾಯವಾದಿಗಳು ಮುಂದಿನ ಕೆಲವೇ ತಿಂಗಳುಗಳಲ್ಲಿ ಕಮ್ಯೂನನ್ನು ಕಾನೂನು ಬಾಹಿರಗೊಳಿಸಿದರು. 19ನೆಯ ಶತಮಾನದ ಕ್ರಾಂತಿಕಾರಿ ಜನಕ್ಕೆ ಕಮ್ಯೂನಿನ ನೆನಪು ಬಹಳ ಪವಿತ್ರವೆನಿಸಿತ್ತು. ಇತರ ಕ್ರಾಂತಿಕಾರಿ ಚಳವಳಿಗಳಿಗೆ ಇದೇ ಪ್ರೇರಕಶಕ್ತಿ. 1870-71ರ ಫ್ರಾಂಕೋ-ಪ್ರಷ್ಯನ್ ಯುದ್ಧದಲ್ಲಿ ಫ್ರಾನ್ಸಿಗೆ ಆಘಾತವಾದಾಗ ಪ್ಯಾರಿಸಿಗೂ ವರ್ಸೇಲ್ಸಿನ ಹೊಸ ಸರ್ಕಾರಕ್ಕೂ ನಡುವೆ ವಿರಸ ಸಂಶಯಗಳು ಮೂಡಿದವು. ಪ್ಯಾರಿಸಿನಲ್ಲಿದ್ದ ಕೆಲವು ಫಿರಂಗಿ ದಳಗಳನ್ನು ಅಲ್ಲಿಂದ ವಾಪಸು ತೆಗೆಯಲು ಸರ್ಕಾರ ಯೋಚಿಸಿದಾಗ ಕೆಳವರ್ಗದ ಜನರಲ್ಲಿ ಹಳೆಯ ಕ್ರಾಂತಿಕಾರಿ ಭಾವನೆಗಳು ಮರುಕಳಿಸಿದವು. 1871 ಮಾರ್ಚ್ 26ರಂದು ಆಯ್ಕೆಯೊಂದಿದ ಪೌರಸಭೆ ತಾನೇ ಪ್ಯಾರಿಸಿನ ಕಮ್ಯೂನ್ ಎಂದು ಸಾರಿಕೊಂಡಿತಲ್ಲದೆ ಆಗಿದ್ದ ತಾತ್ಕಾಲಿಕ ಸರ್ಕಾರವನ್ನು ಪ್ರತಿಭಟಿಸಿತು. ಇನ್ನೂ ಕೆಲವು ನಗರಗಳಿಗೂ ಕ್ರಾಂತಿಯ ಕಿಡಿ ಹಬ್ಬಿತಾದರೂ ಅಲ್ಲಿ ಅದು ಫಲಿಸಲಿಲ್ಲ. ಇದು ಪ್ಯಾರಿಸಿಗೂ ರಾಷ್ಟ್ರಕ್ಕೂ ನಡುವಣ ಘರ್ಷಣೆಯಾಗಿ ಪರಿಣಮಿಸಿತೆನ್ನಬಹುದು. ಆದರೂ ಈ ಹೊಸ ಕಮ್ಯೂನಿನ ವಿರುದ್ಧ ರಾಷ್ಟ್ರವನ್ನು ಸಂಘಟಿಸುವುದು ಸುಲಭವಾಗಿರಲಿಲ್ಲ. ಕಮ್ಯೂನ್ ಈ ಕಾಲದಲ್ಲಿ ಸರ್ಕಾರದ ಮೇಲೆ ಆಕ್ರಮಣ ನಡೆಸಿ ಗೆಲ್ಲಬಹುದಾಗಿತ್ತು. ಆದರೆ ವ್ಯರ್ಥವಾದ ಚರ್ಚೆಗಳಲ್ಲಿ ತೊಡಗಿ ಅದು ಈ ಅವಕಾಶ ಕಳೆದುಕೊಂಡಿತು. ಏಪ್ರಿಲ್ 2 ರಂದು ಸರ್ಕಾರ ಪ್ಯಾರಿಸಿನ ಉಪನಗರ ವೊಂದನ್ನು ಹಿಡಿದುಕೊಂಡಿತು. ಅಂತರ್ಯುದ್ಧ ಆರಂಭವಾಯಿತು. ಪ್ರಷ್ಯದ ಮೇಲೆ ಯುದ್ಧಮಾಡಿ ಬಸವಳಿದಿದ್ದ ರಾಷ್ಟ್ರಕ್ಕೆ ಆಗ ಶಾಂತಿ ಬೇಕಿತ್ತು. ಪ್ಯಾರಿಸಿನ ಕಮ್ಯೂನೇ ಅದಕ್ಕೆ ಅಡ್ಡಿಯೆಂಬ ಭಾವನೆಯೂ ಇಲ್ಲದಿರಲಿಲ್ಲ. ಎರಡು ಪಕ್ಷಗಳೂ ಉಗ್ರಕದನ ನಡೆಸಿದವು. ಎರಡೂ ಪಕ್ಷಗಳು ತಮ್ಮ ಖೈದಿಗಳನ್ನು ಗುಂಡಿಕ್ಕಿ ಕೊಂದವು. ನಗರದ ಹಲವು ಭಾಗಗಳು ಭಸ್ಮೀಭೂತವಾದವು. ಕಮ್ಯೂನ್ ಪತನಹೊಂದಿತು. ಆ ವೇಳೆಗೆ ಪ್ರಾಣ ತೆತ್ತ ಪ್ಯಾರಿಸಿನವರ ಸಂಖ್ಯೆ 20,000.

"https://kn.wikipedia.org/w/index.php?title=ಕಮ್ಯೂನ್&oldid=642095" ಇಂದ ಪಡೆಯಲ್ಪಟ್ಟಿದೆ