ಕಮಲದಹೂ

(ಕಮಲದ ಹೂ ಇಂದ ಪುನರ್ನಿರ್ದೇಶಿತ)

ಕಮಲದ ಹೂವಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಕಮಲದ ಹೂ ಅನೇಕ ರೂಪದಲ್ಲಿದ್ದು, ದೇವತೆಯ ಸ್ವಭಾವ ಕಾಲ/ದೇಶಕ್ಕೆ ಅನುಗುಣವಾಗಿ ಇದು ಬದಲಾಗುತ್ತಿರುತ್ತದೆ. ಕಮಲವನ್ನು ಕೈಯಲ್ಲಿ ಹಿಡಿಯುವುದು ಅನೇಕ ದೇವರುಗಳ ವೈಶಿಷ್ಟ್ಯವಾಗಿದೆ. ಬುದ್ದನು ಹುಟ್ಟಿದಾಗ ಅದನ್ನು ಜಗತ್ತಿಗೆ ಸಾರಲು ಕಮಲದ ಹೂ ಹುಟ್ಟಿತೆಂಬ ಪ್ರತೀತಿ ಇದೆ.

ಕಮಲದ ಹೂ
ಕಮಲದ ಹೂ
ಕಮಲದ ಹೂ

ಕಮಲದ ಹೂವಿನ ಹಿನ್ನೆಲೆ

ಬದಲಾಯಿಸಿ

ಕಮಲದ ಹೂವಿನ ಪರಿಕಲ್ಪನೆಯ ಮೂಲನೆಲೆ ಭಾರತವೆಂದು ಗುರ್ತಿಸಲಾಗಿದೆ. ಇಡೀ ಸೃಷ್ಠಿಯನ್ನೇ ಈ ಹೂವಿನಲ್ಲಿ ಗುರ್ತಿಸಲಾಗಿದೆ. ಇದು ಸ್ತ್ರೀಯ ಜನನೇಂದ್ರಿಯದ ಸಂಕೇತ. ಜೊತೆಗೆ ದೇವತೆ, ವಿಶ್ವ ಕಮಲ, ದೈವತ್ವ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿನಿಧಿ. ಕ್ರಿಸ್ತಪೂರ್ವ ೮೦೦ರ ಬ್ರಾಹ್ಮಣಗಳಲ್ಲಿ ಕಮಲದ ಎಲೆಯನ್ನು ಗರ್ಭವೆಂದು ಹೇಳಲಾಗಿದೆ. ಇದು ಜೀವನದ ಅಸ್ತಿತ್ವವನ್ನು ಜೀವಂತಗೊಳಿಸುವ ದ್ವಂದ್ವ ಸ್ವಭಾವದ ಪ್ರತೀಕವಾಗಿದೆ. ಕ್ರಿ.ಪೂ ೧ನೇ ಶತಮಾನದಿಂದ ಹಿಡಿದು ಇಂದಿನವರೆವಿಗೂ ದೇವಿ ಪದ್ಮಳ ಕೆತ್ತನೆಗಳಲ್ಲಿ ಅವಳು ಕಮಲದ ಹೂ ಮೇಲೆ ನಿಂತಿದ್ದಾಳೆ, ಅವಳ ಅಕ್ಕ-ಪಕ್ಕ ಎರಡು ಆನೆಗಳಿದ್ದು ,ಅವು ಸೊಂಡಿಲಿನಿಂದ ನೀರನ್ನು ಎರಚುತ್ತಿರುತ್ತವೆ. ಕ್ರಿ.ಪೂ.೩ನೇ ಶತಮಾನದಲ್ಲಿ ಸಿಂಧೂಕಣಿವೆಯ ಮೆಹೆಂಜೋದಾರೋವಿನಲ್ಲಿ ಸಿಕ್ಕಿರುವ ಕಲಾಪ್ರತಿಮೆಯಲ್ಲಿ ಕಮಲದ ಹೂ ಕಂಡು ಬಂದಿದೆ. ರೈತರಿಗೆ ಲಕ್ಷ್ಮೀ ತುಂಬಾ ಶ್ರೇಷ್ಠಳಾದ ದೇವತೆ. ಫಲವಂತಿಕೆಯ ಶಕ್ತಿ ಇರುವಂತಹವಳು. ಸೆಗಣಿಯ ಅಧಿದೇವತೆ. ವಿಷ್ಣುವಿನ ಹೆಂಡತಿಯಾದ ಇವಳನ್ನು ಶ್ರೀ,ಸಿರಿ, ಪದ್ಮ, ಲಕ್ಷ್ಮೀ, ಭೂದೇವಿ ಎಂದು ಕರೆಯಲಾಗಿದೆ.

ಕಮಲದ ಹೂವಿನ ಪ್ರಾಚೀನತೆ

ಬದಲಾಯಿಸಿ

ಕಮಲದ ಹೂವಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಇದು ಪೂರ್ವದೇಶಗಳ ಅತ್ಯಂತ ಸುಂದರ ಹೂ. ಕಮಲದ ಹೂವಿನ ಉಲ್ಲೇಖ ಪ್ರಾಚೀನ ಋಗ್ವೇದದಲ್ಲೇ ಕಂಡು ಬರುತ್ತದೆ. ಕಮಲದ ಹೂ ಅನೇಕ ರೂಪದಲ್ಲಿದ್ದು, ದೇವತೆಯ ಸ್ವಭಾವ ಕಾಲ/ದೇಶಕ್ಕೆ ಅನುಗುಣವಾಗಿ ಇದು ಬದಲಾಗುತ್ತಿರುತ್ತದೆ. ಚೀನಾದ ಬೌದ್ದ ಧರ್ಮದಲ್ಲಿ ತಾರಾ ದೇವತೆಯನ್ನು ಕಮಲ ಎಂದು ಕರೆಯಲಾಗುತ್ತದೆ. ಭದ್ರಕಲ್ಪ ಎಂಬ ಒಂದು ಯುಗದ ಆರಂಭದಲ್ಲಿ ಒಂದು ಸಾವಿರ ದಳದ ಕಮಲದ ಹೂವಿದ್ದು, ಮುಂಬರುವ ಬುದ್ದರ ಸಂಖ್ಯೆಯನ್ನು ಅದು ಸೂಚಿಸುತ್ತದೆ. ಬೌದ್ದ ಸ್ವರ್ಗದಲ್ಲಿ ಪ್ರತಿಯೊಬ್ಬನೂ ಕಮಲದ ಹೂವಿನ ಮೇಲೆ ದೇವತೆಯಾಗಿ ಹುಟ್ಟುತ್ತಾನೆ. ಜೀವಚಕ್ರದ ಚಿತ್ರಗಳಲ್ಲಿ ಕಮಲದಳಗಳ ತುದಿ ಅಥವಾ ವಿಶ್ವ ಕಮಲದ ಹೂವಿನ ಚಿತ್ರಣ ಪ್ರಮುಖವಾಗಿರುತ್ತದೆ.

ಕಮಲದ ಹೂವಿಗೆ ಸಂಬಂಧಪಟ್ಟ ಅರ್ಥ ಸೂಕ್ಷ್ಮತೆಗಳು

ಬದಲಾಯಿಸಿ
  1. ಸ್ತ್ರೀಯ ಸ್ವರೂಪ, ಸೃಷ್ಟಿಕ್ರಿಯೆ, ಶಕ್ತಿ ಮತ್ತು ಜೀವನದ ಪ್ರೇರಕ ಅಂಶ.
  2. ಫಲವಂತಿಕೆ, ಪಕ್ವತೆ, ಸಮೃದ್ದಿ, ಅದೃಷ್ಟ, ಶುಭ, ಸಂತಸದ ಶಕುನ, ಸಂತಾನ ಪ್ರಾಪ್ತಿ, ದೀರ್ಘಾಯುಷ್ಯ ಮತ್ತು ಕೀರ್ತಿ.
  3. ಮಾತೃದೇವತೆ, ನದಿಗಳ ಜನನ ಮೂಲ, ಜೀವದಾಯಕ, ಭೂಮಿ, ಸೃಷ್ಟಿ, ಪ್ರಾಣ, ಚೈತನ್ಯ, ಸ್ವಯಂ ಸೃಷ್ಟಿಶೀಲ, ವಿಶ್ವದ ಪ್ರಮುಖ ಪ್ರಕ್ರಿಯೆ.
  4. ದೈವತ್ವ, ಅತಿಮಾನವ ಹುಟ್ಟು, ನಿರಂತರ ಪೀಳಿಗೆ ಉತ್ಪತ್ತಿ, ಮರುಹುಟ್ಟು,.
  5. ಅಮರತ್ವ, ಪುರುಜ್ಜೀವನ ಮತ್ತು ಜೀವರಕ್ಷಣೆ, ಜ್ಞಾನೋದಯ ತಿರುಳು .
  6. ಸೂರ್ಯ ಪ್ರತಿಷ್ಠಾಪಕ, ಆತ್ಮಗಳನ್ನು ಆಚ್ಛಾದಿಸುವ ಹೂ ಮತ್ತು ಬುದ್ದನ ವಿಶ್ರಾಂತಿ ತಾಣ.
  7. ಪಾವಿತ್ರ್ಯ, ಆಧ್ಯಾತ್ಮಿಕ ನಿಯಮ ರಕ್ಷಣೆ ಮತ್ತು ರಚನೆ, ನಿರ್ವಾಣ ಮಾರ್ಗದರ್ಶಿ.

ಪುರಾಣದಲ್ಲಿ ಕಮಲದ ಹೂ

ಬದಲಾಯಿಸಿ

ಭಾರತೀಯ ಸೃಷ್ಟಿಯು ವಿಶ್ವ ಪ್ರಮಾಣದಲ್ಲಿ ಸಂಭವಿಸುತ್ತದೆ. ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ, ಅದರ ಮೇಲೆ 'ಕಮಲಭವ' ಅಂದರೆ ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ. ಸಾವಿರ ಸುವರ್ಣದಳಗಳುಳ್ಳ ಈ ಕಮಲ ವಿಶ್ವ ವಿಸ್ತರಿಸಿದಂತೆ ತಾನೂ ಬೆಳೆಯುತ್ತಾ ಹೋಗುತ್ತದೆ. ಅದರ ದಳಗಳಿಂದ ಪರ್ವತಗಳು ಉದ್ಭವಿಸುತ್ತವೆ, ನೀರು ಪ್ರವಹಿಸುತ್ತದೆ. ದಳದ ಮುಂಭಾಗದಲ್ಲಿ ದೇವತೆಗಳ ಚಿತ್ರ, ದಳದ ಹಿಂಭಾಗದಲ್ಲಿ ರಾಕ್ಷಸರ ಮತ್ತು ಸರ್ಪಗಳ ಚಿತ್ರವಿದೆ. ಪ್ರತಿಯೊಂದು ಕಲ್ಪ ಅಥವಾ ದಿನ ಮುಗಿದ ನಂತರ, ವಿಷ್ಣುವಿನ ನಾಭಿಯ ಕಮಲದ ಮೇಲೆ ಬ್ರಹ್ಮ ಮರು ಹುಟ್ಟು ಪಡೆಯುತ್ತಾನೆಂದು 'ಪದ್ಮ ಪುರಾಣ'ದಲ್ಲಿ ಹೇಳಲಾಗಿದೆ. ಕಮಲವನ್ನು ಕೈಯಲ್ಲಿ ಹಿಡಿಯುವುದು ಅನೇಕ ದೇವರುಗಳ ವೈಶಿಷ್ಟ್ಯವಾಗಿದೆ. ವಿಷ್ಣು ತನ್ನ ನಾಲ್ಕು ಕೈಗಳ ಪೈಕಿ ಒಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾನೆ. ಪ್ರಾಚೀನ ಜೈನ ಶಿಲ್ಪಗಳಲ್ಲಿ ಅದು ಆರನೇ ಜಿನನ ಚಿಹ್ನೆಯಾಗಿದೆ. ಅವಲೋಕಿತನನ್ನು 'ಪದ್ಮಪಾಣಿ' ಎಂದು ಕರೆಯಲಾಗಿದೆ. ಶುಭ ಶಕುನದ ಎಂಟು ಬೌದ್ದ ಚಿಹ್ನೆಗಳಲ್ಲಿ ಕಮಲವೂ ಒಂದು. ಹಾಲ್ಗಡಲನ್ನು ಮಥಿಸಿದಾಗ ಮೊದಲು ಬಂದ ವಸ್ತುಗಳಲ್ಲಿ ಇದು ಒಂದು. ಕಮಲದೊಂದಿಗೆ ಹೆಣೆದುಕೊಂಡ ಲಿಂಗವನ್ನು ಶಿವ ತನ್ನ ದೇವತೆಯಾದ ಶಕ್ತಿಗೆ ಇದನ್ನು ಕೊಡುತ್ತಾನೆ. ಕಾಳಿ/ಪಾರ್ವತಿಯಾದ ಅವಳು ನಿರಂತರ ಪೀಳಿಗೆಯ ಸಂಕೇತವಾದ ಕಮಲವನ್ನು ಒಂದು ಕೈಯಲ್ಲಿ ಹಿಡಿದಿದ್ದಾಳೆ. ಎಲ್ಲೆಲ್ಲೂ ನೀರೇ ತುಂಬಿದ್ದ ಈ ವಿಶ್ವದ ಮೇಲೆ ಒಂದು ಕಮಲದ ಎಳೆಯನ್ನು ಪ್ರಜಾಪತಿ ಕಂಡನೆಂದೂ ಅವನೇ ಸೃಷ್ಟಿಕರ್ತನೆಂದು ಪುರಾಣಗಳಲ್ಲಿ ಹೇಳಲಾಗಿದೆ.

ಬೌದ್ದಧರ್ಮದಲ್ಲಿ ಕಮಲದ ಹೂ

ಬದಲಾಯಿಸಿ

ಬೌದ್ದರ ಕಾಲವನ್ನು ಕಮಲದ ಹೂವಿನಿಂದ ತಿಳಿಯ ಬಹುದಂತೆ. ಬುದ್ದರಿಲ್ಲದ ಶೂನ್ಯ ಕಾಲದಲ್ಲಿ ಕಮಲ ಅರಳುವುದಿಲ್ಲ. 'ಓಂ ಮಣಿ ಪದ್ಮೇಹಂ' ಎಂಬ ಪ್ರಖ್ಯಾತ ಮಂತ್ರವನ್ನು ಬ್ರಾಹ್ಮಣ ವಿಧಿಯಿಂದ ಬೌದ್ದಧರ್ಮ ತೆಗೆದುಕೊಂಡಿದೆ. ಬುದ್ದನ ಸಂಗಾತಿಯಾದ ಪ್ರಜ್ಞಾ/ಪರಾಮಿತ ಕಮಲವನ್ನು ಹಿಡಿದಿದ್ದಾಳೆ. ಬೌದ್ದರ ಧರ್ಮದಲ್ಲಿ ಬೋದಿಸತ್ವದ ಪ್ರತಿಮೆಗಳಿಗೆ ಕಮಲವೇ ಆಧಾರಪೀಠ. ಅವರ ಜೊತೆ ಇದಕ್ಕೊಂದು ಆಧ್ಯಾತ್ಮಿಕ ಸಂಬಂಧವಿದೆ. ಬುದ್ದ ಮತ್ತು ಬೌದ್ದ ಪುರೋಹಿತರನ್ನು ಕಮಲದ ಮೇಲೆ ಕೂರಿಸಲಾಗುತ್ತದೆ. ಒಮ್ಮೊಮ್ಮೆ ಇದು ಗೌತಮನ ನಿಲ್ಲುವ ಕಾಲಮಣೆಯಾಗಿಯೂ ಬದಲಾಗುತ್ತದೆ. ಬುದ್ದನ ಪಾದಗಳ ಹಿಮ್ಮಡಿಯ ಮಂಗಳಕರ ಚಿಹ್ನೆಗಳಲ್ಲಿ ಕಮಲವೂ ಒಂದು. ಹಾಗಾಗಿ ಬುದ್ದನ ಪ್ರತಿ ಹೆಜ್ಜೆಯನ್ನು ಪದ್ಮಪಾದವೆಂದು ಕರೆಯುತ್ತಾರೆ. ಬುದ್ದನು ಹುಟ್ಟಿದಾಗ ಅದನ್ನು ಜಗತ್ತಿಗೆ ಸಾರಲು ಕಮಲದ ಹೂ ಹುಟ್ಟಿತೆಂಬ ಪ್ರತೀತಿ ಇದೆ.

ಪಾಶ್ಚಾತ್ಯ ದೇಶಗಳಲ್ಲಿ ಕಮಲದ ಹೂವಿನ ಸ್ಥಾನ

ಬದಲಾಯಿಸಿ
  • ಚೀನಾ ದೇಶದಲ್ಲಿ ಕಮಲದ ಹೂವಿನ ಪರಿಕಲ್ಪನೆ ವಿಶಿಷ್ಟವಾದುದಾಗಿದೆ. ಅವರು ನಾಲ್ಕು ಋತುಗಳನ್ನು ಹೂಗಳಲ್ಲಿ ಗುರ್ತಿಸುತ್ತಾರೆ. ಅವುಗಳಲ್ಲಿ ಕಮಲದ ಹೂ ಬೇಸಿಗೆಕಾಲದ ಹೂವಾಗಿದೆ. ಇದು ಪರಿಶುದ್ದತೆಯ, ಫಲವಂತಿಕೆ, ಸೃಷ್ಟಿಶಕ್ತಿಯನ್ನೂ ಸಂಕೇತಿಸುತ್ತದೆ. ಈ ದೇಶದಲ್ಲಿ ಕಮಲವನ್ನು ಅದರ ರೇಖೆಗಳಿಂದ ಚಿತ್ರಿಸುತ್ತಾರೆ. ಏಕೆಂದರೆ ಆ ರೇಖೆಗಳು ಅವರಿಗೆ ಸೂರ್ಯನ ಕಿರಣಗಳಿದ್ದಂತೆ. ಅವರಲ್ಲಿನ ಪಶ್ಚಿಮ ಸ್ವರ್ಗದ ಚಿತ್ರಣ ಅದ್ಬುತವಾದುದಾಗಿದೆ. ಆ ಸ್ವರ್ಗದಲ್ಲಿ ಒಂದು ಪರಿಶುದ್ದವಾದ ಕಮಲದ ಹೂವಿನ ಕೊಳವಿರುತ್ತದೆ. ಅದರಲ್ಲಿನ ಪ್ರತಿಯೊಂದು ಆತ್ಮವೂ ಒಂದೊಂದು ಕಮಲದ ಹೂಗಳಿದ್ದಂತೆ. ಅದು ಬಿರಿಯುವುದಕ್ಕೆ ನಿಗಧಿಯಾದ ಹೊತ್ತು ಬರುವವರೆವಿಗೂ ಅದನ್ನು ಒಂದು ನೋವಿಲ್ಲದ ಶುದ್ದ ಲೋಕದಲ್ಲಿ ಇಟ್ಟಿರುತ್ತಾರೆ. ಭೂ ಲೋಕದಲ್ಲಿ ವಾಸಿಸುವ ಜನರ ಧರ್ಮನಿಷ್ಠೆಗೆ ಅನುಗುಣವಾಗಿ ಹೂ ಅರಳುತ್ತದೆ, ಬಾಡುತ್ತದೆ. ಭಕ್ತನೊಬ್ಬ ಸತ್ತ ಕೂಡಲೇ ಅವು ಬಿರಿದು ಅವನನ್ನು ದೈವತ್ವಕ್ಕೆ ಏರಿಸುತ್ತವೆ. ಚೀನಾದ ಕಲಾಚಿತ್ರಗಳಲ್ಲಿ ವಿವಿಧ ಬಣ್ಣಗಳ ಕಮಲಗಳು ನೀರಿನ ಮೇಲೆ ತೇಲುತ್ತಿರುತ್ತವೆ.
  • ಈಜಿಪ್ಟ್ ದೇಶದಲ್ಲೂ ಕಮಲದ ಹೂವಿನ ಪರಿಕಲ್ಪನೆ ವೈಶಿಷ್ಟ್ಯತೆಯಿಂದ ಕೂಡಿದೆ. ಇಲ್ಲಿನ ಕಮಲ ಬಿಳಿ ಮತ್ತು ನೀಲಿ ಬಣ್ಣದ್ದಾಗಿರುತ್ತದೆ. ಕೆಂಪುವರ್ಣದ ಪೂರ್ವ ಪ್ರಾಂತ್ಯದ ಕಮಲ ಇಲ್ಲಿ ಸಿಗುವುದಿಲ್ಲ. ಆರ್ವಾಚೀನ ಕಾಲದಲ್ಲಿ ಕಮಲ ಹೊರೇಸ್ ನ ಪೀಠವಾಗಿದೆ. ಜೀವದಾಯಕ ನೈಲ್ ನದಿಯಲ್ಲಿ ಇದು ಬೆಳೆಯುವುದರಿಂದ ಜೀವಸೃಷ್ಟಿ ಹಾಗೂ ಫಲವಂತಿಕೆಯ ಜೊತೆ, ಸೂರ್ಯ ಮತ್ತು ಪುನರುಜ್ಜೀವನದೊಂದಿಗೆ ಸಂಬಂಧ ಕಲ್ಪಿಸಲಾಗಿದೆ. ಇದನ್ನು ಪವಿತ್ರ ಮಮ್ಮೀಗಳ ಮೇಲೆ ಇಡಲಾಗುತ್ತದೆ. ಶವಸಂಸ್ಕಾರದಲ್ಲೂ ಬಳಸಲಾಗುತ್ತದೆ. ಗೋರಿಗಳ ಒಳಗಿನ ಚಿತ್ರದಲ್ಲಿ ಕಮಲದ ಹೂ ಇರುತ್ತದೆ. ಅವರ ದೃಷ್ಟಿಯಲ್ಲಿ ಕಮಲ ಸೂರ್ಯನ ಬಟ್ಟಲು, ರಾತ್ರಿಯ ತೊಟ್ಟಿಲಾಗಿದೆ. ಓಸರಿಸ್ ಮತ್ತು ಕಮಲಕ್ಕೆ ಸಂಬಂಧವಿದೆ. ನೆಫೆರ್ಟೆಟ್ ಇದನ್ನು ಸದಾ ಧರಿಸಿರುತ್ತಾಳೆ.
  • ಅಸ್ಸೀರಿಯಾದೇಶದಲ್ಲೂ ಕಮಲ ವಿಶಿಷ್ಟಪೂರ್ಣವಾಗಿ ಕಂಡು ಬರುತ್ತದೆ. ಹರ್ಕ್ಯುಲಸ್ ನು ತನ್ನ ಒಂದು ದಿನದ ಪ್ರಯಾಣಕ್ಕಾಗಿ ಕಮಲದ ಆಕಾರವಿರುವ ಸುವರ್ಣಬಟ್ಟಲನ್ನು ಸೂರ್ಯನಿಂದ ಪಡೆದುಕೊಂಡು ಹೋಗಿದ್ದನಂತೆ. ಅಸ್ಸೀರಿಯಾದ ಮುದ್ರೆಗಳಲ್ಲೂ ಕಮಲ ಇದೆ.

ಕಮಲದ ಹೂವಿನ ಬಗೆಗಿರುವ ನಂಬಿಕೆಗಳು

ಬದಲಾಯಿಸಿ
  1. ಗ್ರಾಮೀಣ ಬುಡಕಟ್ಟುಗಳಲ್ಲಿ ಕೆಟ್ಟ ಚೇತನಗಳಿಂದ ಒದಗುವ ದುರಾದೃಷ್ಟವನ್ನು ಕಮಲದ ಹೂ ನಿವಾರಿಸುತ್ತದೆ.
  2. ಕಮಲದ ಹೂವಿನ ಪ್ರತಿ ಭಾಗಗಳನ್ನು ಔಷಧವನ್ನಾಗಿ ಬಳಸಬಹುದು.
  3. ಶುಭ ನುಡಿಯುವಾಗ, ಬೇರೆಯವರಿಗೆ ಹರಸುವಾಗ ಕಮಲದ ಹೂ ಕೊಡುವುದು ವಾಡಿಕೆ.
  4. ಕಮಲದ ಹೂವನ್ನು ಮುಡಿದರೆ ಶುಭ, ತಿಂದರೆ ಆರೋಗ್ಯಕಾರಕ.
  5. ವಿರಹಕ್ಕೆ ಇದು ಪರಿಹಾರ; ಸತ್ತವರ ಆಹಾರವನ್ನು ಕಮಲದ ಹೂವಿನ ಹಾಳೆಯಲ್ಲಿ ಕಟ್ಟಿಡುತ್ತಾರೆ.
  6. ದೀಪದ ಅಂಗಡಿಯವರಿಗೆ ಕಮಲದ ಹೂ ಶುಭದಾಯಕ ಚಿಹ್ನೆ.
  7. ಕನಸಿನಲ್ಲಿ ಕಮಲದ ಹೂ ಕಂಡರೆ ಸಂತಾನ ಪ್ರಾಪ್ತಿಯಾಗುತ್ತದೆ.

ಕೊನೆಯ ನುಡಿ

ಬದಲಾಯಿಸಿ
  • ಕಮಲದ ಹೂ ಮೆಡಿಟರೇನಿಯನ್ ಮತ್ತು ಪೂರ್ವ ಪ್ರಾಂತ್ಯದಿಂದ ಪ್ರಾಚೀನ ಪುರಾಣಗಳೊಳಗೆ ವಲಸೆ ಬಂದು ಪಾಶ್ಚಾತ್ಯ ಜಗತ್ತಿನಾದ್ಯಂತ ಹರಡಿತು.
  • ಪ್ರಾಚೀನ ಕವಿಗಳು ಹೆಣ್ಣನ್ನು ಕಮಲದ ಹೂವಿಗೆ ಹೋಲಿಸಿದ್ದಾರೆ. ಅವರ ದೃಷ್ಟಿಯಲ್ಲಿ ಹೆಣ್ಣಿಗೆ ಕಮಲದ ಮೊಗ, ಕಮಲದ ಕಣ್ಣುಗಳಿವೆ.
  • ಕಮಲದ ಹೂವಿಗೆ ಹಲವಾರು ಪರ್ಯಾಯ ಹೆಸರುಗಳಿವೆ. ಅವೆಂದರೆ- ಆವೋದ, ತಾವರೆ, ನಳಿನ, ಸರೋಜ, ಕುಮುದ, ಪಂಕಜ, ಪದ್ಮಜ ಮೊದಲಾದುವು.
  • ಪಾಶ್ಚಾತ್ಯ ರಿಗೆ ಕಮಲದ ಹೂ ಪೂರ್ವ ಪ್ರಾಂತ್ಯದ ರಹಸ್ಯ ಸೌಂದರ್ಯ ಮತ್ತು ಆಧ್ಯಾತ್ಮಿಕ ಆಲೋಚನೆಯ ಸಂಕೇತವಾಗಿದೆ.
  • ಕಮಲ ಎಂಬ ಹೆಸರಿನ ಸಾಹಿತ್ಯ ಪತ್ರಿಕೆಯೊಂದು ಇದೆ.
  • ಕಮಲದ ಹೂ ಕೆಸರಿನಲ್ಲಿ ಹುಟ್ಟಿದರೂ ತನ್ನದೇ ಆದ ವಿಶಿಷ್ಟತೆಗಳಿಂದ ವಿಶ್ವದಾದ್ಯಂತ ಜನಮನ್ನಣೆ ಗಳಿಸಿದೆ. ಹಾಗೆಯೇ ವ್ಯಕ್ತಿಯ ಹುಟ್ಟಿನ ಹಿನ್ನೆಲೆಗಿಂತ ಅವನ ವ್ಯಕ್ತಿತ್ವ, ಸಂಸ್ಕಾರ, ಸುಸಂಸ್ಕೃತ ನಡವಳಿಕೆ ಅವನನ್ನು ದೈವತ್ವಕ್ಕೂ ಏರಿಸಿ ಮಹಾಪುರುಷನನ್ನಾಗಿ ಮಾಡಬಹುದು.

ಆಕರ ನೆರವು

ಬದಲಾಯಿಸಿ
  1. ಕನ್ನಡ ವಿಶ್ವಕೋಶ
  2. ಕನ್ನಡ ಜಾನಪದ ವಿಶ್ವಕೋಶ
  3. ಕನ್ನಡ ವಿಷಯ ವಿಶ್ವಕೋಶ

ಉಲ್ಲೇಖ

ಬದಲಾಯಿಸಿ

[] [] [] [] []

  1. "ಆರ್ಕೈವ್ ನಕಲು". Archived from the original on 2016-03-06. Retrieved 2015-05-28.
  2. http://kn.vikaspedia.in/agriculture/c85ca4ccdcafcc1ca4ccdca4cae-c86c9acb0ca3cc6c97cb3cc1/c95caecb2ca6-c97cbfca1
  3. http://sampada.net/image/13549
  4. http://mybestspace.com/item.aspx?id=590&lng=kn
  5. "ಆರ್ಕೈವ್ ನಕಲು". Archived from the original on 2016-03-04. Retrieved 2015-05-28.
"https://kn.wikipedia.org/w/index.php?title=ಕಮಲದಹೂ&oldid=1054098" ಇಂದ ಪಡೆಯಲ್ಪಟ್ಟಿದೆ