ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: "ಉಲ್ಲೇಖಗಳನ್ನು ನೀಡಿ ಮತ್ತು ವಿಕಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಬೇಕಿದೆ.". |
ಕನ್ನಡ ಮತ್ತು ಸಂಸ್ಕೃತಿ ಇಲಾಖೆ [೧]
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
ಬದಲಾಯಿಸಿಸ್ವಾತಂತ್ರ್ಯನಂತರ ಭಾಷಾವಾರು ಪ್ರಾಂತ್ಯ ರಚನೆಯು ಜಾರಿಗೊಂಡು, ಕನ್ನಡಿಗರ ರಾಜ್ಯಕ್ಕೆ ಪ್ರತ್ಯೇಕ ಆಸ್ತಿತ್ವ ದೊರೆತು, ಕನ್ನಡಿಗರ ನಾಡು, ನುಡಿ, ಸಂಸ್ಕತಿ ಕುರಿತ ಕನಸುಗಳು ಕುಡಿಯೊಡಿಯತೊಡಗಿದಂತೆ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕತಿಯ ಸಂರಕ್ಷಣೆ, ಸಂವರ್ಧನೆಗೆ ಪ್ರತ್ಯೇಕವಾದ ಇಲಾಖೆಯೊಂದು ಅತ್ಯಗತ್ಯವೆನಿಸಿತು. ಕರ್ನಾಟಕದ ದೂರದರ್ಶಿ ಮುಖ್ಯಮಂತ್ರಿ ಎಂದು ಹೆಸರಾದ ದಿ|| ಕೆಂಗಲ್ ಹನುಮಂತಯ್ಯನವರು ಕನ್ನಡ ಸಾಹಿತ್ಯ ಸಂಸ್ಕತಿಯ ಪುರೋಭಿವೃದ್ಧಿಗಾಗಿ 1951ರಲ್ಲಿ ಸಾಹಿತ್ಯ ಮತ್ತು ಸಂಸ್ಕತಿ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿದರು. ಪ್ರಸಿದ್ಧ ವಿದ್ವಾಂಸರಾದ ಸಿ.ಕೆ. ವೆಂಕಟರಾಮಯ್ಯ ಇಲಾಖೆಯ ಮೊಟ್ಟಮೊದಲ ನಿರ್ದೇಶಕರು. ಅನಂತರ ಇಲಾಖೆಯ ನೇತೃತ್ವವನ್ನು ವಹಿಸಿಕೊಂಡ, ಕನ್ನಡದ ಪ್ರಸಿದ್ಧ ಲೇಖಕರಾದ ಪ್ರೋ. ಎ.ಎನ್.ಮೂರ್ತಿರಾವ್ ಅವರು ಸಂಸ್ಕತಿ ಪ್ರಚಾರ ಯೋಜನೆಯನ್ನು ರೂಪಿಸಿ, ರಾಜ್ಯದ ಸಾಂಸ್ಕತಿಕ ಪರಂಪರೆಯ ಸಂರಕ್ಷಣೆಗೆ ಭದ್ರವಾದ ಬುನಾದಿಯನ್ನು ಹಾಕಿದರು. ನಂತರ ಇಲಾಖೆಯು ದಕ್ಷ ಅಡಳಿತಗಾರರಾದ ಶ್ರೀ ಕೆ.ಎಸ್. ಧರಣೀಂದ್ರಯ್ಯ ಅವರ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಿತು.
1963ರಲ್ಲಿ ಸರ್ಕಾರವು ಸಾಹಿತ್ಯ ಮತ್ತು ಸಂಸ್ಕತಿ ಅಭಿವೃದ್ಧಿ ಇಲಾಖೆಯನ್ನು ರದ್ದುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಒಂದು ಶಾಖೆಯನ್ನಾಗಿ ರೂಪಿಸಿತು. 1968ರಲ್ಲಿ ಸಾಹಿತ್ಯ ಮತ್ತು ಸಂಸ್ಕತಿ ಅಭಿವೃದ್ಧಿ ಎಂಬ ಈ ಶಾಖೆಯನ್ನು ಪಠ್ಯ ಪುಸ್ತಕ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು.
ಪ್ರತ್ಯೇಕ ಇಲಾಖೆ
ಬದಲಾಯಿಸಿಕನ್ನಡ ಭಾಷೆ ಮತ್ತು ಸಂಸ್ಕತಿಯ ಅಭಿವೃದ್ಧಿಗಾಗಿ ಮತ್ತೆ, ಪ್ರತ್ಯೇಕ ಇಲಾಖೆಯೊಂದು ರೂಪುಗೊಳ್ಳುವ ಪ್ರಕ್ರಿಯೆ ಆರಂಭವಾದದ್ದು, 1977ರಲ್ಲಿ. ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕತಿಕ ವಿಷಯಗಳನ್ನು ನಿರ್ವಹಿಸುತ್ತಿದ್ದ ಪಠ್ಯ ಪುಸ್ತಕ ನಿರ್ದೇಶನಾಲಯದ ಸಾಹಿತ್ಯ ಮತ್ತು ಸಾಂಸ್ಕತಿಕ ಅಭಿವೃದ್ಧಿ ಘಟಕದ ಮತ್ತು ಅಂದು ರಾಜ್ಯದಲ್ಲಿ ಅಸ್ತಿತ್ಥದಲ್ಲಿದ್ದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿ - ಇವುಗಳ ಕಾರ್ಯದಲ್ಲಿ ಏಕರೂಪತೆಯನ್ನು ತಂದು ಅವುಗಳ ಕಾರ್ಯಚಟುವಟಿಕೆಗಳು ಯೋಜಿತವಾಗಿ, ಸಮನ್ವಿತವಾಗಿ ನಡೆಸುವ ದೃಷ್ಟಿಯಿಂದ, ಪ್ರತ್ಯೇಕ ನಿರ್ದೇಶನಾಲಯವೊಂದನ್ನು 1977ರಲ್ಲಿ ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಮತ್ತು ಯುವಜನ ಸೇವಾ ಇಲಾಖೆಯ ಅಧೀನದಲ್ಲಿ ಸಾಹಿತ್ಯ ಮತ್ತು ಸಾಂಸ್ಕತಿಕ ವ್ಯವಹಾರಗಳ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು.
ಇಲಾಖೆಯ ಧ್ಯೇಯೋದ್ದೇಶಗಳು
ಬದಲಾಯಿಸಿ1977ರಲ್ಲಿ ಈ ಸ್ಥಾಪಿತವಾದ ನಿರ್ದೇಶನಾಲಯದ ಪ್ರಕಾರ್ಯಗಳು ಮತ್ತು ಜವಾಬ್ದಾರಿಗಳು ಈ ಮುಂದಿನಂತಿದ್ದವು:- ಕರ್ನಾಟಕದ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರಕಾರಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿ ಪ್ರಚುರಪಡಿಸುವುದು. ಸ್ಥಳೀಯ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತ ವಾತಾವರಣ ನಿರ್ಮಿಸಲು ತಕ್ಕ ಯೋಜನೆಗಳನ್ನು ರೂಪಿಸುವುದು. ಕಲಾಪ್ರಕಾರಗಳಲ್ಲಿ ಪ್ರಯೋಗಗಳನ್ನು ನಡೆಸಿ, ಪ್ರದರ್ಶನ ವಿಧಾನಗಳನ್ನು ಸುಧಾರಿಸುವುದು. ಕರ್ನಾಟಕದಲ್ಲಿ ಸಾಂಸ್ಕತಿಕ ಪುನರುಜ್ಜೀವನಕ್ಕೆ ಪ್ರಯತ್ನಿಸುವುದು ಮತ್ತು ಅದರಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಜನತೆ ಸೇರಿದಂತೆ ಎಲ್ಲ ವರ್ಗದ ಜನತೆಯನ್ನು ಒಳಗೊಳ್ಳುವುದು. ಅಕಾಡೆಮಿಗಳ ಕಾರ್ಯಚಟುವಟಿಕೆಗಳಿಗೆ ಹೊಸ ನಿರ್ದೇಶನವನ್ನು ಆಯಾಮವನ್ನು ನೀಡುವುದು, ದೇಶದಾದ್ಯಂತದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಕಾಡೆಮಿಗಳ ಚರ್ಚೆಗಳಿಗೆ ಮಾರ್ಗದರ್ಶನ ನೀಡುವುದು. ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಆಡಳಿತ ಕನ್ನಡದ ಜಾರಿಗಾಗಿ ನಿಯೋಜಿತವಾಗಿದ್ದ ಭಾಷಾ ಮತ್ತು ಕನ್ನಡ ಅಭಿವೃದ್ಧಿ ಇಲಾಖೆಯು ನಿರ್ವಹಿಸುತ್ತಿದ್ದ, ಕನ್ನಡ ಅಭಿವೃದ್ಧಿಗೆ ಸಂಬಂಧಪಟ್ಟ ಕೆಲಸಕಾರ್ಯಗಳನ್ನು ಸಾಹಿತ್ಯ ಮತ್ತು ಸಾಂಸ್ಕತಿಕ ವ್ಯವಹಾರಗಳ ಇಲಾಖೆಗೆ ವರ್ಗಾಯಿಸಿ, ಅದನ್ನು ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯ ಎಂದು ಮರುನಾಮಕರಣ ಮಾಡಲಾಯಿತು. ಹೀಗೆ 1977ರ ಆಗಸ್ಟ್ 31ರಂದು ಅಸ್ತಿತ್ವಕ್ಕೆ ಬಂದ ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯವು ನಂತರ 1985ರಲ್ಲಿ ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಇಲಾಖೆಯ ಅಧೀನಕ್ಕೆ ಒಳಪಟ್ಟಿತು.
ಹೊಸ ಸಚಿವಾಲಯ
ಬದಲಾಯಿಸಿಸರ್ಕಾರದ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕತಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಚಿವಾಲಯದ ಅಗತ್ಯ ಕಂಡು ಬಂದುದರಿಂದ 1993ರಲ್ಲಿ ಸರ್ಕಾರದ ಮಟ್ಟದಲ್ಲಿಯೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯು ಸೃಜನೆಗೊಂಡಿತು.
ಮುನ್ನಡೆ
ಬದಲಾಯಿಸಿಇಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಬೃಹತ್ತಾಗಿ ಬೆಳೆದು ವ್ಯಾಪಕವಾಗಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಜಿಲ್ಲಾ ಮಟ್ಟದಲ್ಲಿ, ವಿಭಾಗ ಮಟ್ಟದಲ್ಲಿ ಕಚೇರಿಗಳನ್ನು ಹೊಂದಿದ್ದು, ಗ್ರಾಮ ಮಟ್ಟದಿಂದ ರಾಜಧಾನಿಯ ಮಟ್ಟದವರೆಗೆ ತನ್ನ ಚಟುವಟಿಕೆಗಳನ್ನು ನಡೆಸುತ್ತಲಿದೆ. ಆಡಳಿತ ಭಾಷೆಯಾಗಿ ಕನ್ನಡವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ಸಾಂಸ್ಕತಿಕ ಪರಂಪರೆಯನ್ನು ಸಂರಕ್ಷಿಸುವ, ಸಂವರ್ಧಿಸುವ ಕಾರ್ಯವನ್ನು ಹೊತ್ತಿರುವ ಇಲಾಖೆಯು ಈ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾದ ದೃಢ ಹೆಜ್ಜೆಗಳನ್ನು ಇಡುತ್ತಾ, ಮುನ್ನಡೆಯುತ್ತಿದೆ.