ಕನ್ನಡದಲ್ಲಿ ಹಾಸ್ಯ ಸಾಹಿತ್ಯ

ಹಳಗನ್ನಡ ಸಾಹಿತ್ಯದಲ್ಲಿ ಹಾಸ್ಯವನ್ನೇ ಪ್ರಧಾನವಾಗಿ ವಸ್ತುವಾಗುಳ್ಳ ಕೃತಿರಚನೆಯ ಪ್ರಯತ್ನ ನಡೆದಿಲ್ಲವಾದರೂ ಹಾಸ್ಯದ ಸನ್ನಿವೇಶಗಳು ಕೃತಿಯ ಒಡಲಲ್ಲಿ ಬಂದಾಗ ಕವಿಗಳು ತಮ್ಮ ಹಾಸ್ಯ ಪ್ರೌಢಿಮೆಯನ್ನು ಮೆರೆದಿದ್ದಾರೆ. ಕಾವ್ಯದ ಪ್ರಸ್ತಾವನಾ ಭಾಗದಲ್ಲಿ ಬರುವ ಕುಕವಿನಿಂದೆಯಂಥ ಸಿದ್ಧ ಬರೆಹರೂಪಗಳಲ್ಲಿ, ಶೃಂಗಾರ ಸನ್ನಿವೇಶಗಳಲ್ಲಿ, ರಾಜರ ಸುಖಸಂಕಥಾವಿನೋದಗಳಲ್ಲಿ, ಸಾಮಯಿಕ ಚತುರೋಕ್ತಿಗಳಲ್ಲಿ, ಯುದ್ಧಪ್ರಸಂಗಗಳಲ್ಲಿ, ವೀರರ ಮೂದಲಿಕೆಯ ಮಾತುಗಳಲ್ಲಿ, ವಾಗ್ವಾದದ ಸಂದರ್ಭಗಳಲ್ಲಿ ಇಂಥ ಹತ್ತಾರು ಕಡೆ ಹಾಸ್ಯ ರಚನೆಗೆ ಅವರು ಅವಕಾಶ ಮಾಡಿಕೊಂಡಿದ್ದಾರೆ. ಕನ್ನಡದ ಅಸಂಖ್ಯಾತ ಶಾಸನಗಳಲ್ಲಿ ಹಾಸ್ಯ ಪ್ರಸಂಗಗಳು ಅಲ್ಲಲ್ಲಿ ಮಿಂಚುವುದನ್ನು ಕಾಣಬಹುದು. ಅಂಥ ಒಂದು ಶಾಸನದ ನಾಯಕ ವಿಕ್ರಮಸಾಂತ. ರಣರಂಗದಲ್ಲಿ ಇವನ ಪ್ರತಾಪ ಅಷ್ಟಿಷ್ಟಲ್ಲ. ಈತ ಕೊಂದ ಶತ್ರುಗಳ ಹೆಣಗಳನ್ನುಂಡ ಮರುಳುಗಳಿಗೆ ಹಬ್ಬ, ಅಜೀರ್ಣ. ಅವು ವೈದ್ಯ ಮರುಳಿನ ಬಳಿಗೆ ಹೋದಾಗ ಆ ವೈದ್ಯ ಸೂಚಿಸಿದ ಔಷಧವಾದರೂ ಮರುಳುಗಳಿಗೆ ಮಾತ್ರವೇ ಉಚಿತ. ಅಜೀರ್ಣವಾದಾಗ ಆನೆ ನುಂಗುವುದೇ ಮದ್ದು. ಮರುಳುಗಳು ಹಾಗೆಯೇ ಮಾಡಿದುವು. ರೋಗ ವಾಸಿಯಾಯ್ತು. ವಿಸಂಗತ ವಿಚಾರದಿಂದ ಮಿನುಗುವ ಹಾಸ್ಯಕ್ಕೆ ಇದೊಂದು ಉತ್ತಮ ದೃಷ್ಟಾಂತ.

ಕನ್ನಡದ ಪ್ರಥಮ ಗ್ರಂಥ

ಬದಲಾಯಿಸಿ

ಕನ್ನಡದ ಪ್ರಥಮ ಗ್ರಂಥ ಕವಿರಾಜಮಾರ್ಗದಲ್ಲಿ ವ್ಯಾಕರಣ, ಛಂದಸ್ಸು, ಭಾಷೆ ಮುಂತಾದವನ್ನು ಕುರಿತ ವಿವೇಚನೆಯ ನಡುನಡುವೆ ಉದಾಹರಣೆಗಾಗಿ ಕೊಟ್ಟಿರುವ ಪುರ್ವಕವಿ ಕೃತಿ ಖಂಡಗಳಲ್ಲಿ ಅಲ್ಲಲ್ಲಿ ಬಗೆಬಗೆಯ ಹಾಸ್ಯ ಮಿನುಗುತ್ತದೆ. ಕವಿರಾಜ ಮಾರ್ಗಕಾರನಿಗೆ ಹಿಂದೆ ಇದ್ದ ಕವಿಗಳು ಹಾಸ್ಯವೇ ಪ್ರಧಾನವಾದ ಕೃತಿಗಳ ರಚನೆ ಮಾಡದಿದ್ದರೂ ಹಾಸ್ಯದ ನಾನಾ ಪ್ರಕಾರಗಳನ್ನವರು ಅರಿಯದವರಾಗಿರಲಿಲ್ಲವೆಂಬುದು ಇವುಗಳಿಂದ ವೇದ್ಯವಾಗುತ್ತದೆ. ಕವಿರಾಜಮಾರ್ಗಕಾರನಿಗೂ ಹಾಸ್ಯವನ್ನು ಗುರುತಿಸುವ ಶಕ್ತಿಯಿತ್ತು. ಅದನ್ನು ಸಾರಿಕೊಳ್ಳುವ ಉದ್ದೇಶವಿಲ್ಲದಿದ್ದರೂ ಅಂಥ ಹಾಸ್ಯ ಪ್ರಸಂಗಗಳ ಮೇಲೆ ಆತ ಬೆರಳಿಟ್ಟು ತೋರಿದ್ದಾನೆ ಎನ್ನಬಹುದು.

ಪಂಪಕವಿಯ ಎರಡೂ ಕಾವ್ಯಗಳು

ಬದಲಾಯಿಸಿ

ಪಂಪಕವಿಯ ಎರಡೂ ಕಾವ್ಯಗಳಲ್ಲಿ ಹಾಸ್ಯದ ಹಲವಾರು ಪ್ರಸಂಗಗಳಿವೆ. ವಿಕ್ರಮಾರ್ಜುನವಿಜಯ ಕೌರವಪಾಂಡವರ ಕಥೆಯಾದ್ದರಿಂದ ಅಲ್ಲಿ ಬರುವ ಹಲವು ಸನ್ನಿವೇಶಗಳಲ್ಲಿ ಹಾಸ್ಯದ ನಾನಾ ಪ್ರಕಾರಗಳಿಗೆ ಧಾರಾಳವಾಗಿ ಅವಕಾಶವುಂಟು. ಹಾಸ್ಯ ಸನ್ನಿವೇಶಗಳನ್ನೊಳಗೊಂಡ ಇಡೀ ಭಾಗಗಳೂ ಹಾಸ್ಯ ಪಾತ್ರಗಳೂ ಅನೇಕ. ಬರಿಯ ಸರಸವೇ ಅಲ್ಲ, ಕಟಕಿ, ಮೂದಲೆ, ಅಪಹಾಸ್ಯ, ನಿಂದೆ, ಹೊಗೆಯ ನಗೆ - ಎಲ್ಲ ಉಂಟು. ಬಾಲ್ಯದಲ್ಲಿ ಕೌರವ ಪಾಂಡವರು ಮರಗೆರಸೆಯಾಡುತ್ತಿದ್ದಾಗ (ಮರಕೋತಿ) ಮರವೇರಿ ಕುಳಿತು ಹಂಗಿಸಿದ ಕೌರವರಿಗೆ ಬುದ್ಧಿ ಕಲಿಸುವ ಸಲುವಾಗಿ ಬಿsೕಮಸೇನ ಆ ಮರವನ್ನೇ ಅಳ್ಳಾಡಿಸಿ ಅಷ್ಟು ಜನರನ್ನೂ ಕೆಳಗೆ ಉದುರಿಸಿದನಂತೆ. ಈ ಕೊರಚಾಟ ದಾಯಾದಿಮತ್ಸರವನ್ನೇ ಬೆಳೆಸಿದ ಚುಚ್ಚು ಹಾಸ್ಯ. ದ್ರುಪದನ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ದ್ರೋಣಾಚಾರ್ಯ ತಮ್ಮ ಶಿಷ್ಯನಿಂದ ದ್ರುಪದನನ್ನು ಹಿಡಿತರಿಸಿ ಮಂಚದ ಕಾಲಿಗೆ ಕಟ್ಟಿಸಿ ಅವನ ತಲೆಯ ಮೇಲೆ ಕಾಲಿಟ್ಟಾಗಿನ ಸನ್ನಿವೇಶವೂ ರೋಚಕವಾಗಿದೆ. ಇಲ್ಲಿ ಒಂದು ಕಡೆ ದ್ರೋಣರ ಕೆಚ್ಚು ಇನ್ನೊಂದೆಡೆ ದ್ರುಪದನ ಅಸಹಾಯಕತೆ ಕಣ್ಣಿಗೆ ಕಟ್ಟುತ್ತದೆ. ಗೆದ್ದು ತಂದ ಭೀಷ್ಮ ತನ್ನನ್ನು ವರಿಸಲ್ಲೊಲ್ಲದೆ ಹೋದಾಗ ಅಂಬೆಯೆಂಬುವಳು ಸಾಲ್ವನಲ್ಲಿಗೆ ಹೋಗಿ ತನ್ನನ್ನು ವರಿಸಬೇಕೆಂದು ಬೇಡಿದಾಗ ಅವನು ತುಂಟನಗೆ ನಕ್ಕು ಭೀಷ್ಮ ನನ್ನನ್ನು ಓಡಿಸಿ ನಿನ್ನನ್ನು ಕೊಂಡೊಯ್ದ, ಆದ್ದರಿಂದ ನಾನೂ ಅವನ ಹೆಂಡತಿಯೆ ಆದ ಹಾಗಾಯಿತು, ಪೆಂಡಿರ್ ಪೆಂಡಿರೊಳದೆಂತು ಬೆರೆಸುವರಬಲೇ ಎಂದನಂತೆ. ಇದು ನುಡಿಯ ಚಮತ್ಕಾರದಿಂದ ಉದಿಸುವ ಹಾಸ್ಯ. ಇಂಥ ನುಡಿಗಳಲ್ಲಿ ಪಂಪನ ನಿಶಿತ ಹಾಸ್ಯಪ್ರಜ್ಞೆ ಗುರುತಿಸಬಹುದು. ದ್ರೌಪದೀಸ್ವಯಂವರದ ಸಂದರ್ಭದಲ್ಲಿ ಬರುವ ವಿವಿಧ ರಾಜಕುಮಾರರ ಹಾಸ್ಯಪುರ್ಣವಾದ ನಡೆವಳಿಕೆಗಳು ಪಂಪನ ಹಾಸ್ಯಪ್ರಜ್ಞೆಗೆ ಸಾಕ್ಷಿಯಾಗಿವೆ. ಆದರೆ ದುರ್ಯೋಧನನನ್ನು ಹಂಗಿಸುವ ದ್ರೌಪದಿಯ ಹಲವಾರು ಮಾತುಗಳು ಶುದ್ಧ ಹಾಸ್ಯವಲ್ಲ. ಅದೂ ಇರಲಿ, ಸತ್ತವರನ್ನೂ ಪಂಪ ನಗಿಸದೆ ಬಿಟ್ಟಿಲ್ಲ. ಯುದ್ಧಭೂಮಿಯಲ್ಲಿ ಮರುಳುಗಳ ಆಟವನ್ನು ನೋಡಿ ವೀರಭಟರ ಪಂದಲೆಗಳು ಮುಗುಳ್ನಗೆ ನಕ್ಕುವಂತೆ. ರನ್ನನ ಸಾಹಸಬೀಮವಿಜಯವೂ ಮಹಾಭಾರತವನ್ನೇ ಆಧರಿಸಿ ರಚಿಸಿದ ಕೃತಿಯಾದ್ದರಿಂದ ಇದರಲ್ಲಿ ಅಲ್ಲಲ್ಲಿ ಮಿಂಚುವ ಹಾಸ್ಯ ಕೂಡ ಸನ್ನಿವೇಶ ಮತ್ತು ಪಾತ್ರಗಳನ್ನೇ ಅವಲಂಬಿಸಿದ್ದು. ಇಲ್ಲಿಯ ಹಾಸ್ಯ ಗೌಣ.

ಆದರೆ ಸಂಸ್ಕೃತ ನಾಟಕಗಳಲ್ಲಿರುವಂತೆ ವಿದೂಷಕನ ಪಾತ್ರವನ್ನು ನಿರ್ಮಿಸಿರುವುದು ರನ್ನನ ಕೃತಿಯ ವೈಶಿಷ್ಟ್ಯ. ಕೌರವ ಪಾಂಡವರ ನಡುವೆ ಸಂಧಾನ ಫಲಿಸಬಹುದೆಂಬ ಸೂಚನೆ ಬಂದಾಗ ಎಲ್ಲರಿಗಿಂತ ಆತಂಕಗೊಂಡವಳು ದ್ರೌಪದಿ. ಸಂಧಿ ಏರ್ಪಡಬಾರದು, ಹಾಗಾದರೆ ಪಾಂಡವರಿಗೆ ನೆಲೆ ತಪ್ಪುತ್ತದೆ, ತನಗೆ ಜೀವನ ಬೇಡವಾಗುತ್ತದೆ ಎಂದು ಆಕೆ ಬೀಮನಲ್ಲಿಗೆ ಬಂದು ಅಳುತ್ತಾಳೆ. ದುರ್ಯೋಧನನ ತೊಡೆ ಮುರಿಯುವುದಾಗಿ ಆಗ ಭೀಮ ಪ್ರತಿಜ್ಞೆ ಮಾಡಿದ. ಇಂಥ ಗಂಭೀರ ಪರಿಸ್ಥಿತಿಯಲ್ಲಿ ಬರುತ್ತವೆ ವಿದೂಷಕನ ನಗೆಮಾತು. ದೇವಾಸುರ ಯುದ್ಧಕ್ಕೆ ಕರಗಂಬೊತ್ತ ಡಾವರ ಡಾಕಿನಿಯೇ ಪಾಂಚಾಲಿ ಎಂಬುದು ಅವನ ವರ್ಣನೆ. ಅಲ್ಲದೆ

ಕುರುಕುಲಮಂ ನುಂಗಿದೆಯಿನ್ನರೆಬರುಮಂ ನುಂಗಲಿರ್ಪೆ ಕುರುಪತಿಯುಮನಿ
ನ್ನೆರಡನೆಯ ಹಿಡಂಬಿಯನೆಮ್ಮರಸಂ ರಕ್ಕಸಿಯನೆಲ್ಲಿ ತಂದನೊ ನಿನ್ನಂ
ಮಾರುತಿ ನಿಜವೇಣೀಸಂಹಾರಂ ಮಾಡಿದೊಡೆ ಮಾಳ್ಪುದೆನಗಂ ನಿನಗಂ
ಪುರಣಿಗೆ ಜಠರ ಪಿಠರಕ ಪುರಣೆಗೇಂ ಮಾಡದೆಂತು ಕರೆವೆಂ ನಿನ್ನಂ

ಎಂದು ಅಳುತ್ತ ಬಂದ ತನ್ನನ್ನು ನಗುತ್ತ ಹೋಗುವಂತೆ ವಿದೂಷಕ ಸಂತೋಷ ಪಡಿಸಿದುದಕ್ಕೆ ಒಡಂಬಟ್ಟು ಚಾರುಹಾಸಿನಿ (ದ್ರೌಪದಿ) ನಿಜನಿವಾಸಕ್ಕೆ ಹೋದಳು. ಇದು ರನ್ನನ ಹಾಸ್ಯವಿಧಾನ. ರೌದ್ರ, ವೀರ ರಸಗಳನ್ನು ಸಮರ್ಥವಾಗಿ ಪ್ರತಿಪಾದಿಸುವಂತೆ, ಹಾಸ್ಯರಸ ಪ್ರತಿಪಾದನೆಯಲ್ಲೂ ರನ್ನನದು ಮೇಲುಗೈ. ಅಬಿsನವ ಪಂಪನ (ನಾಗಚಂದ್ರ) ಸಮಕಾಲೀನಳೆನ್ನಲಾದ ಕಂತಿಯೆಂಬ ಕವಯಿತ್ರಿಗೂ ಅಭಿನವಪಂಪನಿಗೂ ನಡೆದ ವಾಗ್ವಾದಗಳು, ಕಂತಿಹಂಪನ ಸಮಸ್ಯೆಗಳೆಂದು ಪ್ರಸಿದ್ಧವಾಗಿರುವ ಈ ಪದ್ಯಗಳಲ್ಲಿ ಸಂಸ್ಕೃತದ ಚತುರೋಕ್ತಿಗಳೂ ನೆನಪಿಗೆ ಬರುತ್ತವೆ. ಇವು ಶ್ಲೇಷೆ ವಿಚಿತ್ರ ಪದಜೋಡಣೆ ಮತ್ತು ಸರಸ ಹಾಸ್ಯಗಳಿಂದ ಕೂಡಿದ್ದು ಓದುಗರಿಗೆ ಹಾಸ್ಯರಂಜನೆಯನ್ನುಂಟುಮಾಡುವ ಗುಣಗಳನ್ನು ಪಡೆದಿವೆ.

ಮತೀಯ ವಿಕಾರ, ಪುರಾಣ ಕಲ್ಪನೆ, ತತ್ತ್ವಕ್ಕೂ ಆಚರಣೆಗೂ ನಡುವಣ ಭೇದ ಇವನ್ನು ಸ್ವಾರಸ್ಯವೂ ಹಾಸ್ಯಪುರ್ಣವೂ ಆದ ಕಥನರೂಪದಲ್ಲಿ ವರ್ಣಿಸುವ ಕಲೆಯಲ್ಲಿ ಜೈನಕವಿಗಳಾದ ನಯಸೇನ, ಬ್ರಹ್ಮಶಿವ ಮತ್ತು ವೃತ್ತವಿಲಾಸ ಸಮರ್ಥರು. ಇವರ ಕಾವ್ಯಗಳಲ್ಲಿ ಬರುವುದು ಶುದ್ಧ ಹಾಸ್ಯವಲ್ಲ; ನಂಜುನಗೆ, ವಿಡಂಬನ, ವೈದಿಕಮತದ ಅಂಧಶ್ರದ್ಧೆಯನ್ನು ಅವಹೇಳನ ಮಾಡುವಾಗ ಈ ಬಗೆಯ ನಗೆ ಹೊಮ್ಮುತ್ತದೆ. ಅಲ್ಲಲ್ಲಿ ಲೋಕವೀಕ್ಷಣೆಯ ಫಲವಾದ ಸರಸ ಹಾಸ್ಯವೂ ಹರಿಯುವುದುಂಟು. ಒಬ್ಬ ಮುದುಕನ ಮದುವೆಯ ಹುಚ್ಚನ್ನು ವೃತ್ತವಿಲಾಸ ವರ್ಣಿಸಿರುವ ಪರಿಯಿದು:

ನೆರೆದಲೆ ಜೋಲ್ದ ಪುರ್ಬು ಕು¿ೆದಕ್ಷಿಯುಗಂ ತುಟಿಯರ್ತ ಬೋಡಬಾಯ್
ತೆರೆಮಸಗಿರ್ದಮೋರೆಯುಡುಗಿರ್ದುರಮಕ್ಕುಳಿಸಿರ್ದ ಪೊಟ್ಟೆ ಮೇ
ಲ್ಸೆರೆಮಸಗಿರ್ದ ಕಾಲ್ ಮು¾ೆದ ಬೆನ್ನು¾ೆ ಕಂಪಿಪ ಹಸ್ತಮಸ್ತಕಂ
ಪರಿಕಿಸೆ ತಾಪಸಂಗೆನಗೆ ಪೇಸದೆ ಕನ್ನೆಯನ್ನೀಯಬಲ್ಲರೆ

ರುದ್ರಭಟ್ಟ ಕವಿಯ ಜಗನ್ನಾಥ ವಿಜಯದಲ್ಲಿ ಹಾಸ್ಯರಸ ಕೋಡಿವರಿದಿದೆ. ಕೃಷ್ಣನನ್ನು ರಮಿಸಲು ಅವನ ತಾಯಿ ಕಥೆ ಹೇಳಿದ ಪರಿಯಿದು

ಕಥೆಯಂ ಕೇಳೆಲೆ ಕಂದ ಹುಂ ರಘುಜನೆಂಬಂ ಹುಂ ಸಕಾಂತಂ ವನ
ಸ್ಥಿತನಾದಂ ಗುರು ಪೇ¿ೆ ಹುಂ ದಶಶಿರಂ ಕೊಂಡೊಯ್ದನಾ ರಾಮನಾ
ಸತಿಯಂ ತಾನೆನೆ ಪುರ್ವಮಂ ನೆನೆಯುತು ಹುಂಕೊಳ್ಳದುತ್ಕೋಪ ಹುಂ
ಕೃತಿಯಂ ಮಾಡುತುಮೌಂಡುಗರ್ಚಿ ಕಿಸುಗಣ್ಮಿಟ್ಟಚ್ಯುತಂ ರಂಜಿಕುಂ
 - ಈ ಮಾತುಗಳಲ್ಲಿ ಹಾಸ್ಯರಸದ bsÁಯೆಯನ್ನು ಗುರುತಿಸಬಹುದು.

12ನೆಯ ಶತಮಾನದ ಶಿವಶರಣರ ವಚನಗಳು ಮೃದುಹಾಸ್ಯ ಮತ್ತು ವಿಡಂಬನಗಳ ತವರು. ಸಾಮಾನ್ಯರ ಬಗೆಗೂ ನಿಲುಕುವಂತೆ ಚಮತ್ಕಾರದಿಂದ ಹೇಳುವುದರಲ್ಲಿ ವಚನಕಾರರು ಅಸಾಮಾನ್ಯರು. ಏತ ತಲೆವಾಗಿದರೇನು, ಭೃತ್ಯಾಚಾರಿಯಾಗಬಲ್ಲುದೇ ಅಯ್ಯ, ಇಕ್ಕುಳ ಕೈಮುಗಿದರೇನು, ಲಿಂಗವೇದಿಯಾಗಬಲ್ಲದೇ ಅಯ್ಯ ಎನ್ನುವುದು ಬಸವಣ್ಣನವರ ನಗೆಯ ರೀತಿ ನೀತಿ. ಗುಡಿ ಕೆರೆ ಕಟ್ಟಿಸಿ, ಪರಮಾರ್ಥದ ತೃಪ್ತಿ ಪಡೆದನೆನ್ನುತ್ತಿದ್ದ ಸಿದ್ಧರಾಮನನ್ನು ಹಿರಿಯ ಒಡ್ಡನೆಂದು ಪರಿಹಾಸ ಮಾಡಿದ ಅಲ್ಲಮಪ್ರಭುವಿನದು ನಿರ್ದಾಕ್ಷಿಣ್ಯ ದೃಷ್ಟಿ. ಕಲಿಕಂಭನೆಂಬ ಶರಣನಿಗೆ ಭಕ್ತರನ್ನು ನಗಿಸುವುದೇ ಕಾಯಕ. ವಿಕೃತ ವೇಷಭೂಷಣ ಗಳನ್ನು ನೋಡಿ ನಗೆಯಾಡುವುದು ಹಲವು ವಚನಕಾರರ ಸಹಜ ಪ್ರವೃತ್ತಿ. ಹೀಗೆ ವಚನಕಾರರ ಕೃತಿಗಳಲ್ಲಿ ನಗೆ, ಸಹಾನುಭೂತಿ, ಚುಚ್ಚು ನುಡಿಗಳು ಕೂಡಿ ಹರಿದಿವೆ.

ರಗಳೆಗಳನ್ನು ಪ್ರಚಾರಕ್ಕೆ ತಂದು ಹೊಸ ಕಾವ್ಯ ಪ್ರಕಾರವೊಂದರ ಪ್ರವರ್ತಕನಾದ ಹರಿಹರನ ಕೃತಿಗಳು ಭಕ್ತಿಪ್ರಧಾನವಾದರೂ ಅವುಗಳಲ್ಲೂ ಹಾಸ್ಯಕ್ಕೇನೂ ಕೊರತೆಯಿಲ್ಲ. ಬಸವರಾಜದೇವರ ರಗಳೆಯಲ್ಲಿ ಶಿವನ ಒಡ್ಡೋಲಗದ ರಸ ಸನ್ನಿವೇಶದಲ್ಲಿ ಬಂದಿರುವ ಭೃಂಗಿಯ ನಗೆಯ ನೃತ್ಯ ಒಂದು ಉದಾಹರಣೆಯಾಗಿದೆ. ಅವತಾರ ಪುರುಷನಾದ ನಂಬಿಯಣ್ಣನ ರಗಳೆಯಲ್ಲಿ ಅಲ್ಲಲ್ಲಿ ಮಿಂಚುವ ಹಾಸ್ಯ ಇನ್ನೊಂದು ಉದಾಹರಣೆ. ನಂಬಿಯಣ್ಣನಿಗೆ ಆಗಲಿದ್ದ ಮದುವೆಯನ್ನು ತಪ್ಪಿಸಿ, ಆತ ಇನ್ನೊಬ್ಬಳನ್ನು ಲಗ್ನವಾಗುವಂತೆ ಮಾಡಬೇಕೆಂಬ ಉದ್ದೇಶದಿಂದ ಶಿವನೇ ವೃದ್ಧ ಮಾಹೇಶ್ವರನ ವೇಷ ಧರಿಸಿ ಬಂದಾಗಿನ ಸನ್ನಿವೇಶದ ತುಂಬ ನಗೆಯೇ ಹಾಸು ಹೊಕ್ಕಾಗಿದೆ. ಕಯ್ಯ ಕೊಡೆಯಿಂ, ಮಯ್ಯ ತೆರೆಯಿಂ, ಜೋಲ್ವ ಪುರ್ವಿಂ, ನೇಲ್ವ ತೋಳ ತೊವಲಿಂ, ಇಟ್ಟ ವಿಭೂತಿಯಿಂ, ಊ¾ೆದ ಯಷ್ಟಿಯ ಕೋಲಿಂ, ಪಿಡಿದ ಕಮಂಡಲದಿಂದಿಳಿದ ಬೆಳುಗಡ್ಡದಿಂ, ನಡುಗುವ ನರೆದಲೆಯಿಂ, ನರೆತು ಸಡಿಲ್ವ ಸರ್ವಾಂಗದಿಂ, ಪುಣ್ಯಂ ಪಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತೊಮ್ಮೊಮ್ಮೆ ಗೊಹೆ ಗೊಹೆಗುಟ್ಟುತುಂ, ಶಿಥಿಲಾಕ್ಷರಂಗಳಿಂ ನಮಃ ಶಿವಾಯಯೆನುತ್ತೆನಲಾ¾ದಂತೆ ನಡುಗುತ್ತುಂ ಬಂದ ಶಿವ ಹೆಂಗಸರ ನಡುವೆ ನಡೆದು, ವಿಪ್ರರ ಸಮೂಹವನ್ನು ಬಳಸಿ, ಮನಸ್ಸಿನಲ್ಲೇ ನಗುತ್ತ, ಕೋಲನೂ¾Äತೆ ಕೆಮ್ಮಿ ಕುಮ್ಮುತ್ತೆ ಸಾಲ್ಗೊಂಡಿರ್ದ ತುಪ್ಪದ ಕೊಡಂಗಳೊಳ್ ನಾಲ್ಕೆರಡನೆಡಹಿ ನಮಃಶಿವಾಯ ಎಂಬ ವೃದ್ಧ ಧ್ವನಿ ಪುಟ್ಟೆ ಕೊಡಂಗಳ ಮೇಲೊಡೆಬೀಳ್ದು ಕುಳ್ಳಿರ್ದರ ಮುಖದೊಳಂ, ಕಣ್ಣೊಳಂ ಮಯ್ಯೊಳಂ ತುಪ್ಪಂ ಚೆಲ್ಲೆ ಎಲ್ಲರೆರ್ದುಮಲ್ಲಳಿಗೊಂಡು ಘೂಳ್ಳೆಂದು ಬಿಳ್ದ ವೃದ್ಧ ಮಾಹೇಶ್ವರನಂ ಮುತ್ತಿಕೊಂಡೆತ್ತಲನುವಾಗಿ ಮೆಲ್ಲನೆ ನೆಗಪಿ ಹೊರಗೆ ತಂದು ಬಿಡುತ್ತಾರೆ. ಈ ಸಂದರ್ಭದಲ್ಲಿ ಹಾಸ್ಯರಸ ಹೊನಲಾಗಿ ಹರಿದಿದೆ. ಹೀಗೆ ಮಧುರ ಹಾಸ್ಯಗಳಿಂದ ಹಿಡಿದು ಪರಸಮಯಿಗಳನ್ನು ಕೆರಳಿಸುವ ಚುಚ್ಚುನುಡಿಯವರೆಗೆ ಹಾಸ್ಯದ ನಾನಾ ಪ್ರಕಾರಗಳು ಹರಿಹರನ ಕೃತಿಗಳಲ್ಲಿ ಯಥೇಷ್ಟವಾಗಿವೆ.

ಅಹಿಂಸಾವ್ರತದ ಮಹಿಮೆಯನ್ನು ಸಾರುವುದೇ ಜನ್ನನ ಯಶೋಧರ ಚರಿತೆಯ ಮುಖ್ಯೋದ್ದೇಶವಾದರೂ ಈತ ಸರಸ ಹಾಸ್ಯಗಾರ ಕೂಡ. ವಿಸಂಗತ ಸನ್ನಿವೇಶಗಳನ್ನು ತಂದೊಡ್ಡಿ ಹಾಸ್ಯದ ಬುಗ್ಗೆ ಹೊಮ್ಮಿಸುವುದೇ ಈತ ಇಲ್ಲಿ ಅನುಸರಿಸಿರುವ ವಿಧಾನ. ಅರಮನೆಯ ಸಕಲ ಭೋಗಭಾಗ್ಯಗಳೂ ಅಮೃತಮತಿಗೆ ಇದ್ದರೂ ಆಕೆಗೆ ಪ¾ೆದಲೆ, ಕು¿Â ನೊಸಲು, ಅ¾ೆಗಣ್ಣು, ಹಪ್ಪಳಿಕೆ ಮೂಗೂ ಟೊಂಕ ಮು¾ೆದ ಕತ್ತೆಯ ಕಾಲಂ ಮ¾ೆಯಿಸುವ ಕಾಲೂ ಇದ್ದ ಬದಿsರನಲ್ಲಿ ಕಾಮ, ಅವನಿಗೋ ಇವಳೊಮ್ಮೆ ತಡವಾಗಿ ಹೋದಾಗ ಕ್ರೋಧಕೆರಳಿ ಹೊಡೆಯುತ್ತಾನೆ. ಆಗ ತಡವಾದುದುಂಟು ನಲ್ಲನೆ ಬಿಡು ಮುಳಿಯದಿರ್ ಎಂದು ಆಕೆ ಅಂಗಲಾಚುತ್ತಾಳೆ. ಇದು ಬೇರೆಲ್ಲೂ ಸಿಗದ ವಿಕೃತ ಹಾಸ್ಯ ಸನ್ನಿವೇಶ.

ಷಟ್ಪದಿಯನ್ನು ರಚಿಸಿದ ಕವಿಗಳ ಕೃತಿಗಳಲ್ಲೂ ಅಲ್ಲಲ್ಲಿ ಹಾಸ್ಯಕ್ಕೇನೂ ಕೊರತೆಯಿಲ್ಲ. ವಿಶ್ವಾಮಿತ್ರನ ವಿಚಿತ್ರ ಪ್ರತಿe್ಞೆಯಿಂದ ಆರಂಭವಾಗಿ ಹರಿಶ್ಚಂದ್ರನ ಸತ್ಯ ಸ್ಥಾಪನೆಯಲ್ಲಿ ಕೊನೆಗೊಳ್ಳುವ ಹರಿಶ್ಚಂದ್ರ ಕಾವ್ಯದ ಕರ್ತೃವಾದ ರಾಘವಾಂಕನ ಶಬ್ದಚಮತ್ಕೃತಿಯಲ್ಲಿ ಬರುವ ಹಾಸ್ಯ ವಿಶಿಷ್ಟವಾದದ್ದು. ಗರಳಗೊರಳವನರಳಸರಳಂಗೆ ಮುನಿವಂತೆ ಎಂಬ ಮಾತು ಒಂದು ಉದಾಹರಣೆ. ಮಕ್ಕಳು ಮಾಡುವ ಅಕ್ಷರಗಳ ದೊಂಬರಾಟವನ್ನಿಲ್ಲಿ ಕಾಣಬಹುದು. ಇಂಥವನ್ನು ರಾಘವಾಂಕನೇ ಅಲ್ಲದೆ ಅನೇಕರು ಹೊಸೆದಿದ್ದಾರೆ. ಆದರೆ ಹಾಸ್ಯ ಖಂಡಗಳನ್ನೇ ಕಾವ್ಯದಲ್ಲಿ ನೆಯ್ದಿರುವ ಷಟ್ಪದಿಕಾರರಲ್ಲಿ ಕುಮಾರವ್ಯಾಸ ಅಗ್ರಗಣ್ಯ.

ಬಕಾಸುರನ ಹೊಟ್ಟೆಬಾಕತನ, ದ್ರೌಪದೀ ಸ್ವಯಂವರದ ಕಾಲದಲ್ಲಿ ಹಾಜರಿದ್ದ ಅರ್ಜುನನ ಬ್ರಾಹ್ಮಣವೇಷ, ಉತ್ತರನ ಪೌರುಷ - ಇವೆಲ್ಲ ಕುಮಾರವ್ಯಾಸನ ಹಾಸ್ಯದೃಷ್ಟಿಯನ್ನು ಪ್ರತಿಪಾದಿಸುವ ಪ್ರಸಂಗಗಳು.

ಕಟಕಿ ‘ನಿಂದೆ’ ಮೂದಲೆಗಳೇ ಮುಂತಾದ ವಿಡಂಬನೆಯ ನಾನಾ ಪ್ರಕಾರಗಳಿಗೂ ಕುಮಾರವ್ಯಾಸನ ಕೃತಿಯಲ್ಲಿ ಕೊರತೆಯಿಲ್ಲ. ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಕಾಣುವುದು ಸಹಾನುಭೂತಿ ಮಿಶ್ರಿತ ತಿಳಿಹಾಸ್ಯ. ಲಘು ವಿಡಂಬನೆ, ತೀವಿದ ಎಳನಗೆಯ ಬೆಳುದಿಂಗಳನ್ನು ಪಸರಿಸುವ ದೇವಪುರ ಲಕ್ಷ್ಮೀರಮಣನ ಆಸ್ಯ ಚಂದ್ರದ ಆನಂದದಲ್ಲಿ ಮಿಂದ ಲಕ್ಷ್ಮೀಶನ ಹಾಸ್ಯ ಅವನಿಗೇ ವಿಶಿಷ್ಟವಾದದ್ದು. ಧರ್ಮರಾಜ ಅಶ್ವಮೇಧ ಮಾಡುವ ಪ್ರಸ್ತಾಪ ಬಂದಾಗ ಬೀಮ-ಕೃಷ್ಣರ ನಡುವೆ ನಡೆಯುವ ಹುಸಿ ಜಗಳ, ಷಡ್ರಸಾನ್ನದ ಆರೋಗಣೆಯಲ್ಲಿರುವ ಕೃಷ್ಣನೊಂದಿಗೆ ಹೆಂಡತಿಯ ಸರಸ ವಿನೋದ, ಬೀಗರು ಪರಸ್ಪರವಾಗಿ ಮಾಡುವ ಹುಚ್ಚು ಹಾಸ್ಯ, ಚಂಡಿಯ ಕಥೆಯ ವಿದಿಯ ವಿಕೃತ ಹಾಸ್ಯ, ಅಲ್ಲಲ್ಲಿ ಮೊಗದೋರುವ ವ್ಯಂಗ್ಯ, ಕಟಕಿ, ನಿಂದೆ, ಮೂದಲೆ - ಇವು ಲಕ್ಷ್ಮೀಶನನ್ನು ನಗೆ ಗಾರನನ್ನಾಗಿಮಾಡಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹೇಳಿರುವ ಹಾಗೆ, ಲಕ್ಷ್ಮೀಶ ಹಾಸ್ಯಕ್ಕಾಗಿಯೇ ಆಭಾಸಪುರ್ಣವಾದ ಪದ್ಯಗಳನ್ನು ಹೆಣೆದು ಸೇರಿಸಿಲ್ಲ. ಅವನ ಕೃತಿಯಲ್ಲಿ ಕಾಣುವುದು ಬಲಾತ್ಕಾರದ ಕಚಕುಳಿಯ ನಗೆಯಲ್ಲ. ಔಚಿತ್ಯ, ಗಾಂಭೀರ್ಯ, ಹಿತಮಿತಗಳಿಂದ ಕೂಡಿದ ಸಹಜಹಾಸ್ಯ.

ಸಾಂಗತ್ಯಕಾರ ರತ್ನಾಕರವರ್ಣಿಯಲ್ಲಿ ಹಾಸ್ಯದ ಒರತೆಯನ್ನೇ ಕಾಣಬಹುದಾಗಿದೆ. ರಾಗರಸಿಕ ಮತ್ತು ವೀತರಾಗರಸಿಕನಾದ ರತ್ನಾಕರವರ್ಣಿ ಸರಸ ವಿನೋದಿ. ಬಿಸುನಗೆ ಯಾವುದು, ತಣ್ನಗೆ ಯಾವುದು, ಹುಸಿನಗೆ ಮುಗುಳುನಗೆಗಳು, ರಸನಗೆಯೆಳನಗೆಯೆಂಬವೆಂತಿಹವು ಎಂದು ಈತ ಬಲ್ಲ. ಕುಸುಮಾಜಿಯ ತಂಗಿ ಮಕರಂದಾಜಿಗೂ ಭರತನಿಗೂ ನಡೆಯುವ ಸಂಭಾಷಣೆ, ಗಿಳಿನುಡಿಯ ಮಾತುಗಳು ಮೊದಲಾದ ಸಂದರ್ಭಗಳಲ್ಲಿ ಹಾಸ್ಯ ರಸ ತನಿಯಾಗಿದೆ. ಇನ್ನೊಂದು ಸನ್ನಿವೇಶ: ಭರತೇಶನೊಮ್ಮೆ ಬಾಹುಬಲಿಯ ಮೇಲೆ ಯುದ್ಧಕ್ಕೆ ಹೊರಟಿದ್ದ. ಅವನ ಸೈನಿಕರಲ್ಲಿ ಕೆಲವರು ಅವನನ್ನು ಹೊಗಳಿಯೂ ಇನ್ನು ಕೆಲವರು ಹಗುರವಾಗಿಯೂ ಮಾತಾಡಿಕೊಳ್ಳುತ್ತಿದ್ದರು. ಭರತನಿಗೆ ಈ ವಿಷಯ ಕಿವಿಗೆ ಬಿದ್ದು ಆತ ಕೋಪಗೊಳ್ಳಲಿಲ್ಲ. ಅವರಿಗೆ ತನ್ನ ಶಕ್ತಿಯ ಮನವರಿಕೆ ಮಾಡಲು ಒಂದು ಉಪಾಯ ಹೂಡಿದ. ಕಿರುಬೆರಳಿಗೆ ಬೇನೆ ಬಂದು ಅದು ಡೊಂಕಾದಂತೆ ನಟಿಸಿದ. ಯಾರ್ಯಾರು ಏನೇನು ತಂತ್ರಮಂತ್ರ ಮದ್ದು ಮಾಡಿದರೂ ವಾಸಿಯಾಗಲಿಲ್ಲ. ಜಟ್ಟಿಗಳು ಚಿನ್ನದ ಸರಪಳಿ ಕಟ್ಟಿ ಜಗ್ಗಿದರೂ ಬೆರಳು ನೆಟ್ಟಗಾಗಲಿಲ್ಲ. ಒಮ್ಮೆ ಹೀಗೆ ಜಗ್ಗುತ್ತಿದ್ದಾಗ ವಿನೋದಕ್ಕಾಗಿ ಭರತೇಶ ಬೆರಳು ಸಡಿಲಬಿಟ್ಟ. ಸರಪಳಿ ಹಿಡಿದೆಳೆಯುತ್ತಿದ್ದವರೆಲ್ಲ ದಿಂಡುರುಳಿ ಹೊರಳಿದರು. ಎಲ್ಲರಿಗೂ ನಗೆ. ಭರತೇಶನೆಂಥ ಪರಾಕ್ರಮಿಯೆಂದು ಎಲ್ಲರಿಗೂ ದಿಗ್ಭ್ರಮೆ. ಇದು ರತ್ನಾಕರನ ಹಾಸ್ಯದ ಒಂದು ತುಣುಕು. ತ್ರಿಪದಿಯನ್ನು ಅಪ್ರತಿಮವಾದ ರೀತಿಯಲ್ಲಿ ಬಳಸಿರುವ ಸರ್ವಜ್ಞನ ಹಾಸ್ಯದ್ದು ನಿರ್ದಾಕ್ಷಿಣ್ಯದ ಬಣ್ಣ. ಬೊಮ್ಮವನು ಅರಿದಿಹರೆ ಸುಮ್ಮನಿದ್ದಿರಬೇಕು, ಬೊಮ್ಮವನರಿದು ಉಸುರಿದರೆ ಕಳಹೋಗಿ ಕೆಮ್ಮಿದಂತಕ್ಕು ಹೋಲಿಕೆಯ, ಸಹಜ ಹಾಸ್ಯವಿದೆ. ಗಣಿಕೆಯ ಮೂಗಿನಲಿ ಮೊಣಕಾಲು ಹುಟ್ಟಿಹುದು ಎಂಬಲ್ಲಿ ತೃಣನುಂಡು ನೀರಣುಣಲೊಲ್ಲದಂತದಕೆ ಎಣಿಕೆಯಿಲ್ಲ ಎಂಬುದರಲ್ಲಿ ಒಗಟೆಯ ಚಮತ್ಕಾರವನ್ನು ಕಾಣಬಹುದು.

ಆಲದಾ ಬಿಳಲಂತೆ ಜೋಲು ಜಡೆಗಳ ಬಿಟ್ಟು ನಾಲಗೆ, ಕೌಪ ಶುದ್ಧಿಲ್ಲ ಮರಿನಾಯ ಬಾಲದಂತಕ್ಕು- ಎಂಬುದು ಬೂಟಾಟಿಕೆಯ ಜನರ ಬಗ್ಗೆ ಹಾಸ್ಯಬೆರೆತ ಭತರ್ಸ್‌ನೆ. ತೊಗೆಯಿಲ್ಲದೂಟ ಸಂಪಿಗೆಯಿಲ್ಲದೆಲೆತೋಟ ನಗೆಯಿಲ್ಲದವಳ ಒಡನಾಟ ಬೆರಣಿಯ ಹೊಗೆಯ ಕುಡಿದಂತೆ - ಎಂಬುದು ಸರ್ವಜ್ಞನ ನಿರ್ಣಯ. ನಗೆಯ ಎಲ್ಲ ಮೆಟ್ಟಿಲುಗಳನ್ನೂ ವಿಡಂಬನೆಯ ಎಲ್ಲ ಸೋಪಾನವನ್ನೂ ನಾವು ಸರ್ವಜ್ಞನಲ್ಲಿ ಕಾಣಬಹುದು. ಹರಿದಾಸ ಸಾಹಿತ್ಯ ತರಂಗಿಣಿಯಲ್ಲಿ ಹಾಸ್ಯದ್ದೇ ಒಂದು ದೊಡ್ಡ ಕವಲು. ಹಾಸ್ಯ ವಿಡಂಬನಗಳ ಎಲ್ಲ ಪ್ರಕಾರಗಳೂ ಇಲ್ಲಿ ಮೈವೆತ್ತಿವೆ. ರಾಗಿ ತಂದೀರ್ಯಾ, ಬಿsಕ್ಷಕ್ಕೆ ರಾಗಿ ತಂದೀರ್ಯಾ? ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ಎಂಬುದರಲ್ಲಿನ ಶ್ಲೇಷೆ ಅಸದೃಶ. ತುರುಕರು ಕರೆದರೆ ಉಣಬಹುದಣ್ಣಾ, ತುರುಕರು ಕರೆದರೆ ಅತಿ ಪುಣ್ಯವಣ್ಣಾ ಎಂಬುದರಲ್ಲಿ ಧ್ವನಿಯೂ ಉಂಟು. ನಿಂದಕರಿರಬೇಕು,

ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧವೋ ಹಾಂಗೆ ಎನ್ನುವ ಮಾತಿನಲ್ಲಿ ಚುರುಕು ಹೆಚ್ಚು. ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಎಂಬುದು ಸರಸ ಬೆರೆತ ಸವಾಲು. ದಾಸರ ಹಾಸ್ಯ ಬಲು ವಿಸ್ತಾರ.

ಕನ್ನಡದ ಹಳೆ-ಹೊಸ ಹುಟ್ಟುಗಳ ನಡುಗಡ್ಡೆಯ ಮೇಲೆ ನಿಂತಿರುವ ಮುದ್ದಣ ಹಾಸ್ಯಪ್ರಿಯ. ಬಾಳಿನ ನೋವನ್ನು ನುಂಗಿ ನಗುವುದು ಇವನ ಸ್ವಭಾವ. ರಾಮಾಶ್ವಮೇಧದ ಪುಟಪುಟದಲ್ಲೂ ಪುಟಿಯುವ ಮುದ್ದಣ ಮನೋರಮೆಯರ ಸರಸ ಸಂಭಾಷಣೆಯಲ್ಲಿ ಮೃದುಹಾಸ್ಯವನ್ನು ಯಥೇಷ್ಟವಾಗಿ ಸವಿಯಬಹುದು. ಅನ್ಯಥಾ ನೀರಸವೆನಿಸಬಹುದಾದ ಆ ಗದ್ಯಕಾವ್ಯಕ್ಕೆ ಹೊಸತನದ ಮೆರುಗು ತಂದಿರುವುದು ಹಾಸ್ಯವೇ, ಅದರೊಳಗೂ ಭವತಿ ಬಿಕ್ಷಾಂ ದೇಹಿ ಎಂಬ ಸಪ್ತಾಕ್ಷರೀ ಮಂತ್ರದ ಪ್ರಸಂಗದಲ್ಲಿ ಬೆಡಗೂ ಚಮತ್ಕಾರವೂ ಇವೆ; ಆಧುನಿಕ ಸಣ್ಣಕಥೆಯಲ್ಲಿನಂತೆ ಕೊನೆಯ ವರೆಗೂ ಬೆಳೆಸುವ ಕುತೂಹಲದ ಮಾದರಿಯ ತಂತ್ರವಿದೆ. ಮುದ್ದಣ ತನ್ನ ಪ್ರಿಯತಮೆಯಾದ ಮನೋರಮೆಯನ್ನು ಕೊನೆಯ ತನಕವೂ ಕಾಡಿಸಿ ಯಥಾಸಾವಕಾಶವಾಗಿ ಆಕೆಯ ಕುತೂಹಲವನ್ನು ತಣಿಸುವ ಉತ್ತರ ನೀಡಿದಾಗ ಹುಸಿಗೋಪ ಬೆರೆತ ನಗುವಿನ ಅಲೆಗಳೇ ಅಪ್ಪಳಿಸುತ್ತವೆ. ಇಂಥ ಹಾಸ್ಯದಲ್ಲಿ ಮುದ್ದಣನಿಗೆ ಯಾರೂ ಸಾಟಿಯಿಲ್ಲ.

ಜನಪದ ಸಾಹಿತ್ಯಕ್ಕೂ ಸರಸಹಾಸ್ಯಕ್ಕೂ ನಿತ್ಯಗಂಟು. ದೇಹದ ವಿಕಾರ, ಸನ್ನಿವೇಶದ ವೈಪರೀತ್ಯ, ಲೋಕಾಚಾರ, ಸಂಸಾರದ ಸೊಬಗು ಮುಂತಾದ ನಾನಾ ಸಂದರ್ಭಗಳಿ ಗೊಪುವ ಹಾಸ್ಯದ ಹಾಡುಗಳು ಇಲ್ಲಿ ಅಸಂಖ್ಯಾತ. ಗಾದೆಗಳಲ್ಲಂತೂ ನಗೆಯ ನಾನಾ ಪ್ರಕಾರಗಳನ್ನೇ ಕಾಣಬಹುದು. ಅಂಗೈಯಲ್ಲಿ ಕೈಲಾಸವನ್ನು ತೋರುವ ಸಾಹಸಪ್ರಯತ್ನಗಳಿವು.

ಹಿಂದಿನ ಕೃತಿಕಾರರಲ್ಲಿ ಹಾಸ್ಯ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕು ಹಾಕುತ್ತಿತ್ತು ಅಷ್ಟೆ. ನವರಸಗಳಲ್ಲಿ ಹಾಸ್ಯವೂ ಒಂದಾದ್ದರಿಂದ, ಜೀವನದಲ್ಲಿ ಹಾಸ್ಯವೂ ಬೆರೆತಿರುವುದರಿಂದ ಅದೂ ಪ್ರಕಟವಾಗಬೇಕಾದ್ದು ಅನಿವಾರ್ಯ. ಆದರೆ ಶೃಂಗಾರವೀರಕರುಣಾದ್ಭುತಗಳೇ ಮುಂತಾದ ರಸಗಳನ್ನು ಮುಖ್ಯೋದ್ದೇಶ ವಾಗಿಟ್ಟುಕೊಂಡು ರಚಿಸಿದ ಕೃತಿಗಳು ಇದ್ದಂತೆ ಹಾಸ್ಯ ಪ್ರಧಾನವಾದ ಕೃತಿಗಳು ಹಿಂದೆ ಇರಲಿಲ್ಲವೆಂದೇ ಹೇಳಬೇಕು. ಹಾಸ್ಯಭರಿತ ಸನ್ನಿವೇಶ ವನ್ನೋ ವ್ಯಕ್ತಿಯನ್ನೋ ಕಂಡು ಚಿತ್ರಿಸುತ್ತಿದ್ದುದುಂಟಾದರೂ ಪ್ರತಿಯೊಂದು ಸನ್ನಿವೇಶದಲ್ಲೂ ಹಾಸ್ಯವನ್ನು ಕಾಣುವ ದೃಷ್ಟಿಗೇ ಅಷ್ಟಾಗಿ ಪ್ರಾಧಾನ್ಯ ನೀಡಲಿಲ್ಲ. ಕಾದಂಬರಿ, ಕಥೆ, ಹರಟೆ, ಕವನಗಳೇ ಮುಂತಾದವು ಹಲವು ಪ್ರಕಟವಾಗಿವೆ. ದಿನ, ವಾರ, ಮಾಸಪತ್ರಿಕೆಗಳೂ ಹಲವು ಪ್ರಕಟನ ಸಂಸ್ಥೆಗಳೂ ಅಚ್ಚಿನ ಮನೆಯ ನೆರವಿನಿಂದ ಹಲವಾರು ಲೇಖಕರ ಕೃತಿಗಳನ್ನು ಹೊರ ತರುತ್ತಿರುವ ಈ ಕಾಲದಲ್ಲಿ ಇವನ್ನೆಲ್ಲ ವೈಜ್ಞಾನಿಕವಾಗಿ ವಿಂಗಡಿಸಿ, ವಿಶ್ಲೇಷಣೆ ಮಾಡಿ ವಿವೇಚನೆ ನಡೆಸುವುದು ಕಷ್ಟ ಸಾಧ್ಯವೇ ಸರಿ. ಇಲ್ಲಿ ಮುಖ್ಯವಾಗಿ ಪ್ರಮುಖ ಹಾಸ್ಯ ಲೇಖಕರನ್ನೂ ಅವರ ಹಾಸ್ಯ ಪ್ರವೃತ್ತಿಗಳನ್ನೂ ಗುರುತಿಸಬಹುದಾಗಿದೆ.

ಕನ್ನಡದಲ್ಲಿ ಮೊಟ್ಟ ಮೊದಲು ಸ್ವತಂತ್ರ ಕಾದಂಬರಿಯನ್ನು ಸೃಷ್ಟಿಸಿದವರಲ್ಲಿ ಎಂ.ಎಸ್. ಪುಟ್ಟಣ್ಣನವರೊಬ್ಬರು. ಇವರ ಮಾಡಿದ್ದುಣ್ಣೋ ಮಹಾರಾಯದಲ್ಲಿ ಲೇಖಕರಿಗೆ ಹಾಸ್ಯ ಹಸ್ತಗತವಾಗಿದೆ. ಸ್ವಭಾವ ವೈಚಿತ್ರ್ಯ, ಕುರೂಪ, ಅಸಂಬದ್ಧ ಸನ್ನಿವೇಶ ಇವುಗಳ ಸುತ್ತಲೂ ಹಾಸ್ಯದ ತರತಮಗಳೂ ವ್ಯಂಗ್ಯವೈವಿಧ್ಯಗಳೂ ಮಾಲೆಮಾಲೆಯಾಗಿ ಹಬ್ಬಿವೆ. ಈ ಕಾದಂಬರಿಯ ಒಂದು ಪಾತ್ರವಾದ ನಕಲಿ ನಾರಣಪ್ಪನಿಗೆ ನಗಿಸುವುದೇ ನಿರಂತರ ಹವ್ಯಾಸ. ಆತನ ಪಂಚಾಂಗ ವೀಕ್ಷಣೆಯ ಪ್ರಮಾದ ಒಂದು ಉದಾಹರಣೆ. ಪ್ರಮಾದ ಸಂವತ್ಸರವಾದ್ದರಿಂದ ಪ್ರಮಾದಗಳು ನಡೆಯುವಂಥಾದ್ದು; ಮಾರ್ಗಶಿರ ಬಹುಳ ಪಂಚಮಿಯಾದ್ದರಿಂದ ಮಾರ್ಗ ದಾರಿಯಲ್ಲಿ ಹೋಗತಕ್ಕವರ ತಲೆಯು ಬಹುಳ ಎಂದರೆ ವಿಶೇಷವಾಗಿ, ಪಂಚಮಿ ಎಂದರೆ ಪಂಚತ್ವ ಅಥವಾ ಮರಣವನ್ನು ಹೊಂದುವುದು. ಇಲ್ಲಿ ಶಬ್ದಗಳನ್ನೇ ಅರೆದು, ವಿಚಿತ್ರಾರ್ಥಗಳನ್ನು ಹೊರಡಿಸಿ, ಹಾಸ್ಯವನ್ನು ಹಿಂಡುವ ಪ್ರಯತ್ನವನ್ನು ಕಾಣಬಹುದು. ಆದರೂ ಆಧುನಿಕ ಕನ್ನಡ ಗದ್ಯಸಾಹಿತ್ಯದಲ್ಲಿ ಮೊಟ್ಟ ಮೊದಲಿಗೆ ಹಾಸ್ಯಕ್ಕೂ ಎತ್ತರದ ಸ್ಥಾನವನ್ನು ಕಲ್ಪಿಸಿಕೊಟ್ಟ ಕೀರ್ತಿ ಪುಟ್ಟಣನವರದು.

ಆರ್.ನರಸಿಂಹಾಚಾರ್ಯರು ಕರ್ಣಾಟಕ ಕವಿಚರಿತೆಗಷ್ಟೇ ಪ್ರಸಿದ್ಧರಲ್ಲ. ಅವರು ಬರೆದ ನಗೆಗಡಲಿನ ವಸ್ತುವೇನೆಂಬುದು ಅದರ ಹೆಸರಿನಲ್ಲೆ ವ್ಯಕ್ತವಾಗುತ್ತದೆ. ಗಾಂಪರೊಡೆಯರ ಮತ್ತು ಅವರ ಶಿಷ್ಯರ ಪ್ರತಾಪಗಳಲ್ಲಿ ಕಾಣುವುದು ಹುಚ್ಚು ಹಾಸ್ಯ, ಚುಚ್ಚು ಹಾಸ್ಯ, ಪೆದ್ದು ತನದ ಲೇವಡಿ. ಜನಪದ ಸಾಹಿತ್ಯದಲ್ಲಿಯ ಜಂತದಕ್ಕಯ್ಯ ಕಥೆ, ಮಂಕುಭಟ್ಟನ ಕಥೆ, ಕಪಿ ಹಾರಿದ ಕಥೆ, ಹೆಂಟೆಗೊದ್ದನ ಕಥೆ ಮುಂತಾದುವುಗಳ ಪರಂಪರೆಗೆ ಇದು ಸೇರಿದ್ದೆನ್ನಬಹುದು. ಅಂತೆಯೇ ತೆನಾಲಿ ರಾಮಕೃಷ್ಣ ಮತ್ತು ಬೀರಬಲ್ಲನದೆನ್ನಲಾದ ಹಲವಾರು ಕಥೆಗಳು ಇಂಥ ಹಾಸ್ಯವನ್ನು ಕನ್ನಡಿಸಿವೆ. ಇವು ಸಂಬಂಧಪಟ್ಟ ವ್ಯಕ್ತಿಗಳನ್ನು ಕುರಿತ ಚತುರೋಕ್ತಿ ಸನ್ನಿವೇಶಗಳು.

ಪಂಜೆ ಮಂಗೇಶರಾಯರು ಮಕ್ಕಳಿಗೆಂದು ಬರೆದ ಕಥೆಗಳಲ್ಲಿ ತಿಳಿಹಾಸ್ಯವನ್ನು ಕಾಣಬಹುದು. ಹಳೆಯ ಸಬ್ ಎಸಿಸ್ತಾಂಟನ ಸುಳ್ಳು ಡೈರಿಯಿಂದ ಎಂಬ ಇವರ ಒಂದು ಕಥೆ ಅತ್ಯುತ್ತಮ ಹಾಸ್ಯಕಥೆಗೆ ನಿದರ್ಶನವಾಗಿದೆ. ಶ್ರೀನಿವಾಸಕೃತ ರಂಗಪ್ಪನ ಕಥೆಗಳಂಥ ಹಲವಾರು ಕಥಾ ಶ್ರೇಣಿಗಳು ತಿಳಿ ಹಾಸ್ಯದ ಹೊನಲುಗಳು. ಈ ಹಾಸ್ಯ ಹಲವು ವೇಳೆ ಕಣ್ಣೀರು ಬೆರೆತಿದ್ದೂ ಆಗಿರುವುದುಂಟು. ವಿಡಂಬನೆಗೂ ಇಲ್ಲಿ ಕೊರತೆಯಿಲ್ಲ. ಕಥನ ಕವನಗಳಲ್ಲೂ ಭಾವಗೀತೆಗಳಲ್ಲೂ ಮಿಂಚುವುದು ಲಲಿತ ಮಧುರ ಹಾಸ್ಯ, ಶೀಲವಂತ ಜೀವಿ ಕಾಣುವ ಚೊಕ್ಕನುಡಿ. ಸನ್ನಿವೇಶ ಸಂಭಾವಿತರಲ್ಲೂ ಸುಳಿಯುವ ದುಷ್ಟ ಆಲೋಚನೆಗಳಿಗೆ ಯಥೋಚಿತ ಮುಚ್ಚುಮರೆ. ತಡೆತಡೆದು ಪುಟ್ಟ ಕಂತುಗಳಲ್ಲಿ ಹೊರಬೀಳುವ ನಗೆಯಿಂದ ಅಜೀರ್ಣವೆಂದೂ ಸಾಧ್ಯವಿಲ್ಲ.

ಕುವೆಂಪು ಅವರ ವಿಪುಲ ಸಾಹಿತ್ಯದಲ್ಲಿ ಹಾಸ್ಯಕ್ಕೇನೂ ಕೊರತೆಯಿಲ್ಲ. ಇವರ ಕಥೆ, ಕವನ, ಕಾದಂಬರಿ, ಸಣ್ಣಕಥೆ, ಪ್ರಬಂಧ, ಮಹಾಕಾವ್ಯಗಳಲ್ಲಿ ಹಾಸ್ಯ ರಸ ಹೆಚ್ಚು ಕಾವ್ಯಾತ್ಮಕವಾಗಿ ಪ್ರತಿಪಾದಿತವಾಗಿದೆ. ಮಲೆನಾಡಿನ ಚಿತ್ರಗಳು ಹಾಸ್ಯ ಕುತೂಹಲಗಳನ್ನು ಕೊನೆಯವರೆಗೂ ಕಾದಿರಿಸುವ ಪ್ರಬಂಧ ಸಂಕಲನ. ಬೊಮ್ಮನಹಳ್ಳಿ ಕಿಂದರಿಜೋಗಿ, ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಹಾಸ್ಯರಸವನ್ನು ಉಣಬಡಿಸುತ್ತದೆ. ಹೆಂಡತಿ ಹೊಲಿಯುತ್ತಿರುವ ಅಂಗಿಯನ್ನು ಕಂಡಾಗ ಕವಿ ಆಡುವ ಮಾತುಗಳು ಈ ರೀತಿ ಇವೆ:

ಬರಲಿರುವ ಕಂದಂಗೊ ಬಂದ ಕಂದಂಗೊ ಹೊಲಿಯುತಿರುವೀ ಅಂಗೀ ಆರಿಗರ್ಧಾಂಗಿ

- ಈ ಮಾತುಗಳು ಕವಿಯ ಹಾಸ್ಯವಿಧಾನ ಯಾವ ಮಟ್ಟದ್ದು ಎಂಬುದಕ್ಕೆ ಹೆಗ್ಗುರುತಾಗಿದೆ. ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂನಲ್ಲಿ ಹಾಸ್ಯಕ್ಕೆ ಮೀಸಲಾದ ಪುಟಗಳ ಸಂಖ್ಯೆಯಂತೂ ಲೆಕ್ಕವಿಲ್ಲ. ನೆಲದಂತರಾಳದಲ್ಲಿ ಹರಿಯುತ್ತಿರುವ ಹೊನಲು ಅಲ್ಲಲ್ಲಿ ಮೇಲೆದ್ದು ಬಂದಂತೆ ಈ ಕಾವ್ಯದುದ್ದಕ್ಕೂ ಕಂಗೊಳಿಸುವ ಹಾಸ್ಯ ಪ್ರಕಾರಗಳನ್ನೆಲ್ಲ ಪಟ್ಟಿಮಾಡಿದರೆ, ಈ ಕ್ಷೇತ್ರದಲ್ಲೂ ಕವಿಯ ಪ್ರತಿಭೆ ಎಂಥದೆಂದು ವೇದ್ಯವಾಗುತ್ತದೆ. ಆಗಸದ ಚಂದ್ರ ಬೇಕೆಂದು ಹಟ ಹಿಡಿದು ಅಳುತ್ತಿದ್ದ ಪುಟ್ಟ ರಾಮನ ಮುಖಕ್ಕೆ ಮುದುಕಿಯೊಬ್ಬಳು ಕನ್ನಡಿಯನ್ನು ಹಿಡಿದು ಚಂದ್ರನನ್ನು ತೋರಿಸಿದ ಪ್ರಸಂಗದ ತಿಳಿಹಾಸ್ಯ, ಆ ಕನ್ನಡಿಯಂತುಟಾಕೆಯುಂ ಪ್ರತಿಬಿಂಬರೀತಿಯಂ ಕೈಗೊಂಡಳಾ ಜನದ ಮನದ ವಿಕೃತಿಗೆ ತನ್ನ ಮೆಯ್ ವಿಡಂಬನಮಪ್ಪಮೋಲ್ ಎಂಬುದಾಗಿ ಕವಿ ಹೇಳಿರುವ ಮಂಥರೆಯ ವಿಕೃತಿ ವಕ್ರತೆಯ ರೂಪಿನ ಬಣ್ಣನೆಯಿಂದ ಉದ್ಭವಿಸುವಂಥ ವಿಕಟಹಾಸ್ಯ, ರಾಮಲಕ್ಷ್ಮಣಸೀತೆಯರು ಚಿತ್ರಕೂಟದಲ್ಲಿದ್ದಾಗ ಬರುವ ನಗೆಗೆ ಮೀರಿದುದಾ ಧೂಮದೃಶ್ಯಂ ಎಂಬ ಸನ್ನಿವೇಶ - ಇವೆಲ್ಲ ಹಾಸ್ಯರಂಜಕವಾಗಿವೆ. ಇನ್ನು ಅವರ ಸರಳರಗಳೆಗಳಲ್ಲೂ ಕಥನಕವನಗಳಲ್ಲೂ ಭಾವಗೀತೆಗಳಲ್ಲೂ ಹಾಸ್ಯ ತೊರೆಯಾಗಿ ಹರಿದಿದೆ, ಮಡುಗಟ್ಟಿ ನಿಂತಿದೆ. ಬೇಂದ್ರೆಯವರ ಹಾಸ್ಯದ್ದು ಇನ್ನೊಂದು ಪೀಳಿಗೆ. ಅದರಲ್ಲಿ ಅವರ ವ್ಯಕ್ತಿತ್ವದ ಮುದ್ರೆ ಹೆಚ್ಚು ನಿಚ್ಚಳ. ಬಿಚ್ಚುಮನದಿಂದ ಹಾಸ್ಯ ಕೊಚ್ಚುವುದು ಅವರ ಸ್ವಭಾವ. ಹಲಮೊಮ್ಮೆ ಅದು ವಾಚ್ಯವೂ ಹರಿತವೂ ಆದೀತು.

ಜನಪದದ ಮೆರುಗು ಈ ಹಾಸ್ಯದ ಇನ್ನೊಂದು ವೈಶಿಷ್ಟ್ಯ. ಹುಬ್ಬಳ್ಳಿಯವನಿನ್ನೂ ಬರಲಿಲ್ಲವೆಂದು ಕಾದು ಕುಳಿತ ಹೆಣ್ಣು, ಬಳಿಯಲ್ಲಿ ನಲ್ಲನಿಲ್ಲದಾಗ ಕೈ ಗಲ್ಲ ಹಚ್ಚಿ ಕೂತ ಕನ್ನೆ ಮುಂತಾದ ಕವನಗಳ ಕಾಮಕಸ್ತೂರಿಯ ಸೊನೆ ಬೆರೆತ ನಗೆಯಂತಿರಲಿ, ಹರಟೆಗಳಲ್ಲೂ ಅಣಕ ವಾಡುಗಳಲ್ಲೂ ಹರಿದಿರುವ ಹಾಸ್ಯಕ್ಕೂ ತುಂಬುಹೊಳೆಯ ಆವೇಶ. ಅವರ ನಿರಾಭರಣ ಸುಂದರಿಯೆಂಬುದು ಬಹುತೇಕ ಹಾಸ್ಯ ಬರೆಹಗಳೇ ಇರುವ ಪುಸ್ತಕ. ಕುಯ್ಗುಡುವ ಭಟ್ಟರ ನಾಯಿಯ ವರ್ಣನೆ, ಕೇರಿಗೊಂದು ಕೆಮ್ಮುವ ಮುದುಕಿ ಇರಲೇಬೇಕೆಂಬ ವಿಚಿತ್ರ ವಾದ, ಈ ಜಗದ ಶುದ್ಧೀಕರಣಕ್ಕೆಂದು ಧ್ವಜವೆತ್ತಿ ಮೇಲಕ್ಕೆ ಹೊರಟಿರುವ ಕಸಪೊರಕೆ, ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವನವನ್ನು ತಾವೇ ಅಣಕಿಸಿ ಬೆಕ್ಕು ಹಾರುತಿದೆ ನೋಡಿದಿರಾ? ಎಂದು ಕಟ್ಟಿದ ಪದ್ಯದ ಅಪ್ಪಟ ಹಾಸ್ಯ ಇವುಗಳದೊಂದು ತೂಕವಾದರೆ, ಅವರ ಹುಚ್ಚಾಟ ಮತ್ತು ನಗೆಯ ಹೊಗೆ ನಾಟಕಗಳ ನಂಜುನಗೆಯದು ಇನ್ನೊಂದು ತೂಕ. ವಿಡಂಬನದ ನಾನಾ ಪದರಗಳನ್ನಿಲ್ಲಿ ಕಾಣಬಹುದು. ಕಾರಂತರ ಹಲವಾರು ಕಾದಂಬರಿಗಳಲ್ಲಿ ಸನ್ನಿವೇಶಜನ್ಯವಾದ ಹಾಸ್ಯದ ನೆಲೆಯೇ ಇದೆ. ಆದರೆ ದೇವದೂತರು, ಗ್ನಾನ ಮುಂತಾದವುಗಳಲ್ಲಿ ಜನರ ನಡೆನುಡಿಗಳಿಗೆ ಅವರು ನಗೆಯ ರಾವುಗನ್ನಡಿಯನ್ನೇ ಹಿಡಿದಿದ್ದಾರೆ. ಇಲ್ಲಿ ಬರುವ ಹಾಸ್ಯ ಬಲು ಹರಿತ. ಈ ವಿಡಂಬನ ನಗೆಹಲ್ಲಿಗೆ ತಮ್ಮ ಕತ್ತನೇ ಒಡ್ಡಿಕೊಂಡಿದ್ದರೂ ನಗುನಗುತ್ತಲೇ ಬಲಿಯಾಗುತ್ತಾರೆ. ವಿಡಂಬನಕ್ಕೆ ಹಾಸ್ಯಕ್ಕೆ ಇನ್ನೊಂದು ಹೆಸರು ಶ್ರೀರಂಗ. ಇವರ ಕೃತಿಗಳಲ್ಲಿ ಮಾತಿನ ಮಸೆದಾಟದಿಂದ, ಚತುರೋಕ್ತಿಯಿಂದ, ಶ್ಲೇಷೆಯ ಬಲದಿಂದ ಉಕ್ಕಿಬರುವ ಹಾಸ್ಯವೂ ಉಂಟು.

ಇದುವರೆಗೆ ಕನ್ನಡದ ಕೆಲವು ಪ್ರಧಾನ ಲೇಖಕರ ಕೃತಿಗಳಲ್ಲಿಯ ಹಾಸ್ಯವನ್ನು ಕುರಿತ ವಿವೇಚನೆ ಮಾಡಲಾಯಿತು. ಆದರೆ ಹಾಸ್ಯವನ್ನೇ ಪ್ರಧಾನ ಉದ್ಯೋಗವಾಗಿ ಮಾಡಿಕೊಂಡ ಲೇಖಕರ ಸಂಖ್ಯೆಗೇನೂ ಕನ್ನಡದಲ್ಲಿ ಕೊರತೆಯಿಲ್ಲ. ಕೈಲಾಸಂ ಅಂಥವರಿಗೆ ಆದ್ಯಪುರುಷ. ತಿಪ್ಪಾರಳ್ಳಿಯ ಬೋರ, ಕೋಳೀಕೆ ರಂಗ ಮುಂತಾದ ನಗೆವಾಡುಗಳ ದೊಗಲೆ ಬಗಲೆಯನ್ನೂ ಟೊಳ್ಳು ಗಟ್ಟಿ, ಅಮ್ಮಾವ್ರ ಗಂಡ, ನಂಬ್ರಾಹ್ಮಣ್ಕೇ, ಬಂಡ್ವಾಳ್ವಿಲ್ಲದ್ಬಡಾಯಿ, ಹುತ್ತದಲ್ಲಿ ಹುತ್ತ ಮುಂತಾದ ನಾಟಕಗಳಲ್ಲಿ ಮಧ್ಯಮ ವರ್ಗದ ಒಂದು ಪಂಗಡದ ಜನರ ಮೇಲೆ ಹರಿಸಿದ ಹಾಸ್ಯದ ದೃಷ್ಟಿಯನ್ನೂ ನೋಡಿದಾಗ ಕೈಲಾಸಂ ಎಂಬುದು ಹಾಸ್ಯಕ್ಕೆ ಪರ್ಯಾಯ ಪದವೆಂದೇ ಹೇಳಬೇಕು. ಆಗಿನ ಕಾಲದ ವಿದ್ಯಾವಂತರೆನಿಸಿ ಕೊಂಡವರ ವೃತ್ತಗಳಲ್ಲಿ ಅತಿಯಾಗಿ ಬೆಳೆದಿದ್ದ ಇಂಗ್ಲಿಷ್ ಮೋಹವನ್ನೂ ಡಾಂಬಿsಕತನವನ್ನೂ ಸಂಪ್ರದಾಯ ಮೌಢ್ಯವನ್ನೂ ದಾಸ್ಯ ಮನೋವೃತ್ತಿ ಯನ್ನೂ ಇವರಂತೆ ಬಂಯಲಿಗೆಳೆದವರು ಇನ್ನೊಬ್ಬರಿಲ್ಲ. ತಾವರೆಕೆರೆ ಪ್ರಬಂಧ ಸಂಕಲನದಲ್ಲೂ ಹಾಸ್ಯದ ಮೆರವಣಿಗೆಯೇ ನಡೆದಿದೆ. ಇವರ ಅನೇಕ ಬಿಡಿನುಡಿಗಳೂ ಹಾಸ್ಯದ ಊಟೆಗಳೇ. ಎಕ್ಕಡದಂತೆ ಇದ್ದೂ ಬೂಟ್ಸಿನಂತೆ ಕಟ್ಬಬಹುದಾದ ಚಪ್ಪಲಿಗೆ ಎಕ್ಕಡದ ಎಲಿಗೆನ್ಸೂ ಬೂಟ್ಸಿನ ಬಡಾಯಿಯೂ ಇದೆಯೆಂದು ವರ್ಣಿಸಿರುವ ಕೈಲಾಸಂ ಅವರ ನಗೆಗೆ ತುತ್ತಾಗಿರುವುದೆಲ್ಲ ಬಹಳ ಮಟ್ಟಿಗೆ ಈ ಬಗೆಯ ಮನಃಪ್ರವೃತ್ತಿಯೇ. ಅಳು-ನಗುಗಳ ನಡುಗೆರೆ ಎಷ್ಟು ಸಪುರವೆಂಬುದನ್ನೂ ಕೈಲಾಸಂ ಅರಿತಿದ್ದವರು. ಆದ್ದರಿಂದಲೆ ಇವರ ನಗೆಯಲ್ಲಿ ವ್ಯಂಗ್ಯದ್ದು ನೂರಕ್ಕೆ ನಲವತ್ತು ಪಾಲಾದರೆ ಸಹಾನುಭೂತಿಯದು ಅರವತ್ತು ಪಾಲು. ಓದುಗರು ಸ್ವಲ್ಪ ಹೆಚ್ಚು ಹೊತ್ತು ತಮ್ಮ ಮನಸ್ಸನ್ನು ತಂಗಿಸಿದರೆ ಕಾಣುವುದು ನಗೆಯಲ್ಲ, ಕವಿಯ ಕಣ್ಣೀರು. ಹಲವೊಮ್ಮೆ ಇವರ ಹಾಸ್ಯಒರಟಾಗುವುದೂ ಉಂಟು. ಅತಿಯಾದ ಪ್ರಾಸ ಪ್ರಯೋಗವೂ ತಿಣುಕೂ ಬೇಸರ ಬರಿಸಬಹುದು. ಆದರೂ ಕೈಲಾಸಂ ಕನ್ನಡದ ಹಾಸ್ಯಚಕ್ರವರ್ತಿ. ಹಿಂದಿನ ನಾಟಕಗಳಲ್ಲಿ ವಿದೂಷಕನ ಸೆರಗಿಗೆ ಕಟ್ಟಿದ್ದ ಹಾಸ್ಯವನ್ನು ಬಿಡಿಸಿ ಭದ್ರಾಸನದ ಮೇಲೆ ಕುಳ್ಳಿರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.[]

ಕೈಲಾಸಂ ಪೀಳಿಗೆ ಬಲು ದೊಡ್ಡದು. ಇವರ ಅನಂತರ ಬಂದ ಅನೇಕ ನಾಟಕಕಾರರು ಇವರ ಪ್ರಭಾವದಿಂದ ಬಿಡಿಸಿಕೊಳ್ಳಲಾಗಲಿಲ್ಲ. ಅತಿಯೆನಿಸುವ ಮಟ್ಟಿಗೆ ಇವರು ಹಳೆಯ ಪ್ರಯೋಗಗಳನ್ನೇ ಬೆಳೆಸಿದರು. ಆದರೂ ತಮ್ಮತನವನ್ನೂ ಉಳಿಸಿಕೊಂಡ ಕೆಲವರ ಹೆಸರನ್ನಾದರೂ ಇಲ್ಲಿ ಹೇಳಬಹುದು. ಕ್ಷೀರಸಾಗರ, ಪರ್ವತವಾಣಿ, ಎ.ಎಸ್.ಮೂರ್ತಿ - ಇವು ಮೂರು ಹೆಸರುಗಳು. ಇದೇ ರೀತಿ ಶ್ರೀರಂಗರಿಂದ ಪ್ರಭಾವಿತರಾದವರೆಂದರೆ ಎನ್ಕೆ.ಕುಲಕರ್ಣಿ ಮತ್ತು ಬೇಂದ್ರೆ ಲಕ್ಷ್ಮಣರಾವ್.

ನಗೆಯನ್ನೇ ತಮ್ಮ ಲೇಖನದ ಕಸಬನ್ನಾಗಿ ಮಾಡಿಕೊಂಡ ಇನ್ನೊಬ್ಬರು ನಾ.ಕಸ್ತೂರಿ. ಇವರು ಹರಟೆಗಳನ್ನು ಹೊಸೆದಿದ್ದಾರೆ. ನಾಟಕಗಳನ್ನು ಬರೆದಿದ್ದಾರೆ. ಕವನಗಳನ್ನು ಕಟ್ಟಿದ್ದಾರೆ. ಪಡಿನುಡಿಗಳನ್ನು ಎರಚಾಡಿದ್ದಾರೆ. ಇಂಗ್ಲಿಷ್ ಹಾಸ್ಯದ ವಿಶ್ವರೂಪವನ್ನು ಕಂಡು ಅನುಭವಿಸಿ ಅದನ್ನು ಕನ್ನಡಿಸಿದ್ದಲ್ಲದೆ ಕನ್ನಡದಲ್ಲಿಯ ಹಾಸ್ಯಜಾಯಮಾನವನ್ನು ಗುರುತಿಸಿ ಇದನ್ನೂ ಅದನ್ನೂ ಸೇರಿಸಿ ಕಸಿ ಮಾಡಿ ಹೊಸದೊಂದು ಜಾತಿಯನ್ನೇ ಸೃಷ್ಟಿಸಿದ್ದಾರೆ. ಇವರು ಬರೆದ ಅಣಕವಾಡುಗಳೂ ಹಾಸ್ಯ ಪದ್ಯಗಳೂ ಅನೇಕ. ಇವರ ಅನರ್ಥಕೋಶ ಅತ್ಯಂತ ಪ್ರಸಿದ್ಧವಾಗಿದೆ.

ಹಾಸ್ಯಕ್ಕೇ ತಮ್ಮ ಲೇಖನಿಯನ್ನು ಮುಡಿಪು ಮಾಡಿದ ರಾ.ಶಿ. ಅವರು ಸ್ವತಃ ಕೃತಿರಚನೆ ಮಾಡಿದ್ದಲ್ಲದೆ ಹಾಸ್ಯ ಬರೆಹಗಾರರ ದೊಡ್ಡ ಪಡೆಯನ್ನೇ ಕಟ್ಟಿದರು. ಇವರು ಇಪ್ಪತ್ತೈದು ವರ್ಷ ನಡೆಸಿದ ಪತ್ರಿಕೆ ಕೊರವಂಜಿ ಇಂಗ್ಲಿಷ್ನ ಪಂಚ್ ಮಾದರಿಯದು. ದಾಶರಥಿ ದೀಕ್ಷಿತ್, ಟಿ.ಸುನಂದಮ್ಮ, ಅ.ರಾ.ಸೇ., ಅಷ್ಟಾವಕ್ರ, ಹಾ.ರಾ.ಮುಂತಾದ ಹಲವರು ಕೊರವಂಜಿಯ ಗರಡಿಯಲ್ಲಿ ತಯಾರಾದವರು. ವಿಕಟ ವಿನೋದಿನಿ, ವಿನೋದ ಇವು ಹಾಸ್ಯಕ್ಕೆ ಮೀಸಲಾದ ಇನ್ನೆರಡು ಪತ್ರಿಕೆಗಳು.

ರಾಜರತ್ನಂ, ನಾಡಿಗೇರ ಕೃಷ್ಣರಾಯ, ಬೀಚಿ ಅವರ ಹೆಸರು ಹೇಳದೆ ಕನ್ನಡ ಹಾಸ್ಯಸಾಹಿತ್ಯದ ಅವಲೋಕನ ಸಂಪುರ್ಣವಾಗುವುದಿಲ್ಲ. ರತ್ನನ ಪದಗಳಲ್ಲಿ ಅಲ್ಲಲ್ಲಿ ಹಾಸ್ಯದ ಹರಳುಗಳನ್ನು ಚೆಲ್ಲಿರುವ ರಾಜರತ್ನಂ ಅವರ ನರಕದ ನ್ಯಾಯವೆಂಬ ನಾಟಕ ಹಳ್ಳಿಗರ ಮಾತಿನಲ್ಲಿ ಹೆಣೆದು ನೀಡಿದ ಹುಚ್ಚುಹಾಸ್ಯ. ಸತ್ಯವಾನ್ ಸಾವಿತ್ರಿಯರ ಕಥೆಯನ್ನು ರಾಜರತ್ನಂ ಇಲ್ಲಿ ಹಾಸ್ಯಗನ್ನಡಿಯಿಂದ ನೋಡಿದ್ದಾರೆ. ಸಾಹಿತ್ಯದ ನಾನಾ ವಕ್ರ ಬೆಳೆವಣಿಗೆ ಗಳನ್ನೂ ಅರ್ಥವಿಲ್ಲದ ಸಂಪ್ರದಾಯಗಳನ್ನೂ ಗೇಲಿ ಮಾಡಿರುವ ಮಹಾಕವಿ ಪುರುಷ ಸರಸ್ವತಿಯೊಂದು ವಿಡಂಬನ ಕೃತಿ. ಅರುಣೋದಯದ ಆದ್ಯ ಲೇಖಕರಲ್ಲೊಬ್ಬರಾದ ಕೆರೋಡಿ ಸುಬ್ಬರಾಯರ ಅನುಕೂಲ ಸಿಂಧು (1926) ಇನ್ನೊಂದು ವಿಡಂಬನ ಕಾವ್ಯ. ಇವರು ಬರೆದ ನಾಟಕದಲ್ಲಿ ಕೈಲಾಸಂ ಅವರಿಗೂ ಮೊದಲು ‘ಕನ್ನಡಾಂಗ್ಲ’ ಹಾಸ್ಯ ಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ನಾಡಿಗೇರರು ತಮ್ಮ ನಗೆಬರಹಗಳಲ್ಲಿ ತಮ್ಮನ್ನೇ ಆದರೂ ಹಾಸ್ಯಕ್ಕೆ ಒಡ್ಡಿಕೊಂಡು ಓದುಗರನ್ನು ನಗೆಯ ಅಲೆಯಡಿಯಲ್ಲಿ ಮುಳುಗಿಸಿ ತೇಲಿಸುವ ಹವ್ಯಾಸದಲ್ಲಿ ತೊಡಗಿದ್ದಾರೆ. ಬೀಚಿಯವರ ಹಾಸ್ಯ ಹಲಮೊಮ್ಮೆ ಹೆಚ್ಚು ಮಾರ್ಮಿಕ. ಅವರು ಬಣ್ಣಿಸುವ ತಿಂಮನ ತಲೆ ಯಾರದಾದರೂ ಆಗಿರಬಹುದು. ಅವರು ಸಿಡಿಸಿರುವ ಹಲವಾರು ನಗೆಹನಿಗಳಲ್ಲೂ ಹಾಸ್ಯಚಟಾಕಿಗಳಲ್ಲೂ ಕುಹಕ ಕಟಕಿ ಬೆಡಗು ಚುರುಕು ಚತುರತೆಗಳು ತುಂಬಿವೆ. ದಿನಕರ ದೇಸಾಯಿ, ಜಿ.ಪಿ.ರಾಜರತ್ನಂ, ಪರಮೇಶ್ವರಭಟ್ಟ, ಅಕಬರ ಅಲಿ, ವಿ.ಜಿ.ಭಟ್ಟ, ಎಚ್.ಎಸ್.ಬಿಳಿಗಿರಿ, ಬಿ.ಆರ್.ಲಕ್ಷ್ಮಣರಾವ್, ಎಚ್.ದುಂಡಿರಾಜ್, ಜರಗನಹಳ್ಳಿ ಶಿವಶಂಕರ್, ಮುಂತಾದವರು ಬರೆದಿರುವ ಚುಟುಕುಗಳು ಹನಿಗವನಗಳು, ಮಿನಿಗವನಗಳು, ಪದ್ಯಗಳು ಸಂಸ್ಕೃತದ ಚಾಟೂಕ್ತಿಗಳಂತೆ ಸರ್ವಜ್ಞನ ವಚನಗಳಂತೆ, ಇಂಗ್ಲಿಷಿನ ಎಪಿಗ್ರಂಗಳಂತಿವೆ. ಇವರಲ್ಲದೆ ಇತ್ತೀಚೆಗೆ ಕನ್ನಡದಲ್ಲಿ ಹಲವಾರು ಸಮರ್ಥ ಹಾಸ್ಯ ಲೇಖಕರೂ ಲೇಖಕಿಯರೂ ಸೃಷ್ಟಿಗೊಳ್ಳುತ್ತಿದ್ದಾರೆ. ಹಾಸ್ಯ ಸಾಹಿತ್ಯ ಹೆಚ್ಚು ವಿಪುಲವಾಗಿ ವೈವಿಧ್ಯತೆಯನ್ನು ಹೊಂದಿ ಬೆಳೆಯುತ್ತಿದೆ ಎಂಬುದು ಸಮಾಧಾನ ತರುವ ಸಂಗತಿಯಾಗಿದೆ.

ಕನ್ನಡದ ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ನಗೆಹನಿಗಳು, ಪ್ರಬಂಧಗಳು, ರಾಜಕೀಯ ಟೀಕೆ ಟಿಪ್ಪಣಿಗಳನ್ನೊಳಗೊಂಡ ಲಘು ಬರೆಹಗಳು, ಪ್ರಶ್ನೋತ್ತರಗಳು, ಕುಹಕಡಿಗಳು, ಉರಿಗಾಳುಗಳು - ಇವುಗಳಲ್ಲಿ ಹಾಸ್ಯದಂದು ವಿಸ್ತೃತ ಶಬ್ದ ಭಂಡಾರವೇ ದಿನದಿನವ ಸೃಷ್ಟಿಯಾಗುತ್ತಿದೆ. ಆಧುನಿಕ ಕನ್ನಡದ ಹಾಸ್ಯ ಸಾಹಿತ್ಯ ಬಲು ದೊಡ್ಡ ಕುಟುಂಬ ಎಂಬ ಅಂಶ ಈ ಸಂಗತಿಗಳಿಂದ ಮನದಟ್ಟಾಗದಿರದು.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2015-10-24. Retrieved 2016-10-26.