ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ
ಇತಿಹಾಸ
ಬದಲಾಯಿಸಿಜನಸಾಮಾನ್ಯರೆಡೆಗೆ ವೈಜ್ಞಾನಿಕ ಮಾಹಿತಿಗಳನ್ನು ಸಾಗಿಸುವುದು ಮತ್ತು ಸಮಾಜದಲ್ಲಿ ವಿಜ್ಞಾನ - ತಂತ್ರಜ್ಞಾನಗಳ ಪ್ರಗತಿಗೆ ತಕ್ಕ ವಾತಾವರಣವನ್ನು ನಿರ್ಮಿಸುವುದು - ಇವು 20ನೆಯ ಶತಮಾನದ ಆರಂಭದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯ ರಚನೆಗೆ ತೊಡಗಿಸಿಕೊಂಡವರ ಮುಖ್ಯ ಉದ್ದೇಶಗಳಾಗಿದ್ದುವು. 20ನೆಯ ಶತಮಾನದ ನಾಲ್ಕನೆಯ ಮತ್ತು ಐದನೆಯ ದಶಕಗಳಲ್ಲಿ ಪ್ರೌಢಶಾಲಾ ಶಿಕ್ಷಣ ಮಾಧ್ಯಮವಾಗಿ ಕನ್ನಡ ಬರತೊಡಗಿತು. ಕನ್ನಡ ಮಾಧ್ಯಮವನ್ನು ಆರಿಸುವ ಸ್ವಾತಂತ್ರ್ಯ ಆರನೆಯ ದಶಕದ ಕೊನೆಗೆ ಕಾಲೇಜು ವಿದ್ಯಾರ್ಥಿಗಳಿಗೂ ಸಿಕ್ಕಿತು. ಇದರಿಂದ ಕನ್ನಡದಲ್ಲಿ ವಿಜ್ಞಾನ ಪಠ್ಯಗಳನ್ನೂ ಪ್ರೌಢ ಗ್ರಂಥಗಳನ್ನೂ ಜನಪ್ರಿಯ ಕೃತಿಗಳನ್ನೂ ಪ್ರಕಟಣೆಗೆ ಎತ್ತಿಕೊಳ್ಳುವ ಪ್ರವೃತ್ತಿ ಬೆಳೆಯಿತು. ಕ್ರಮೇಣ ಮಕ್ಕಳ ವಿಜ್ಞಾನ ಪುಸ್ತಕಗಳು, ವಿಜ್ಞಾನ ಪತ್ರಿಕೆ, ಕೈಪಿಡಿ, ವಿಶ್ವಕೋಶ, ನಿಘಂಟುಗಳು ಪ್ರಕಟವಾಗತೊಡಗಿದುವು. ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಆಸಕ್ತ ಬರೆಹಗಾರರು ಮತ್ತು ಖಾಸಗಿ ಪ್ರಕಾಶಕರು ವಿಜ್ಞಾನ ಕೃತಿಗಳ ಪ್ರಕಟಣೆಯಲ್ಲಿ ಪಾಲುಗೊಂಡರು.
ಕನ್ನಡ ವಿಜ್ಞಾನ ಗ್ರಂಥ
ಬದಲಾಯಿಸಿ1997ರಲ್ಲಿ ಕನ್ನಡ ವಿಜ್ಞಾನ ಗ್ರಂಥ ಸೂಚಿಯನ್ನು ತಯಾರಿಸುವ ಒಂದು ಯೋಜನೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೈಗೆತ್ತಿಕೊಂಡಿತು. ಇದರಿಂದಾಗಿ ರಾಜ್ಯದ ಹಾಗೂ ಹೊರ ರಾಜ್ಯಗಳ ಅನೇಕ ಗ್ರಂಥಭಂಡಾರಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಸು.3000 ಪ್ರಕಟಿತ ಕೃತಿಗಳನ್ನು ಗುರುತಿಸಲು ಸಾಧ್ಯವಾಯಿತು. ಕಾಲಾನುಕ್ರಮದಲ್ಲಿ ಪ್ರಕಟಣೆಗಳ ಸಂಖ್ಯೆ ಹೀಗಿದೆ: 130 (1900ರವರೆಗೆ), 160 (1901-30), 460 (1931-60), 1830 (1961-90), 840 (1991-95ರವರೆಗೆ). ವರ್ಷಗಳು ಕಳೆದಂತೆ ವಿಜ್ಞಾನ ಸಾಹಿತ್ಯ ಕೃತಿಗಳ ಸಂಖ್ಯೆ ಹೆಚ್ಚಾದುದು ಇದರಿಂದ ಸ್ಪಷ್ಟವಾಗುತ್ತದೆ. ಸು.40 ವಿಭಾಗಗಳಲ್ಲಿ ಈ ಪುಸ್ತಕಗಳು ಹಂಚಿಹೋಗಿವೆ. ವೈದ್ಯವಿಜ್ಞಾನ (900), ಪಠ್ಯ ಪುಸ್ತಕಗಳು (450), ಸಾಮಾನ್ಯ ವಿಜ್ಞಾನ (440), ಕೃಷಿ (415), ಭೌತವಿಜ್ಞಾನ (214), ಜೀವನ ಚರಿತ್ರೆ (211), ಪ್ರಾಣಿವಿಜ್ಞಾನ (195), ಸಸ್ಯವಿಜ್ಞಾನ (115), ಗಣಿತ (110), ಖಗೋಳ (99), ಪಶುಪಾಲನೆ (80), ರಸಾಯನ ವಿಜ್ಞಾನ (70), ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (62), ಪರಿಸರ, ವಾಸ್ತು, ಕಂಪ್ಯುಟರ್, ಭೂವಿಜ್ಞಾನ, ಶಕ್ತಿ, ಅರಣ್ಯ ವಿಜ್ಞಾನ, ಆನುವಂಶೀಯತೆ, ಗೃಹವಿಜ್ಞಾನ, ತೋಟಗಾರಿಕೆ, ಸಂಖ್ಯಾಕಲನ ಮೊದಲಾದ ಶಾಖೆಗಳಲ್ಲಿ ಕೃತಿಗಳು ರಚನೆಯಾಗಿವೆ.ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಜ್ಞಾನಿಕ ಮನೋಭಾವದ ಪ್ರಸಾರ ಇವನ್ನು ಮುಖ್ಯ ಉದ್ದೇಶಗಳಾಗಿಟ್ಟುಕೊಂಡು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸ್ಥಾಪಿತವಾಯಿತು. ಕರ್ನಾಟಕದ ನೂರಾರು ಊರುಗಳಲ್ಲಿ ಇದರ ಘಟಕಗಳಿವೆ. ಜನರಿಗೆ ಉಪಯುಕ್ತವಾದ ನೂರಕ್ಕಿಂತಲೂ ಅದಿsಕ ವಿಜ್ಞಾನ ಕೃತಿಗಳನ್ನು ಪ್ರಕಟಿಸದ್ದಷ್ಟೇ ಅಲ್ಲದೆ ತನ್ನ ಉದ್ದೇಶ ಸಾಧನೆಗಾಗಿ ಇದು ಜನವಿಜ್ಞಾನ ಜಾಥಾ ಮತ್ತು ಕಲಾಮಾಧ್ಯಮಗಳನ್ನು ಬಳಸಿಕೊಂಡುದರಿಂದ ಹಾಡಬಹುದಾದ ವಿಜ್ಞಾನ ಗೀತೆಗಳೂ ಆಡಬಹುದಾದ ವೈಜ್ಞಾನಿಕ ಹಿನ್ನೆಲೆಯ ನಾಟಕಗಳೂ ಸೃಷ್ಟಿಯಾದುವು. ಪ್ರಯೋಗ ಮತ್ತು ವೈಜ್ಞಾನಿಕ ವೀಕ್ಷಣೆಗಳಿಗೆ ಅನುಕೂಲವಾದ ಕೈಪಿಡಿಗಳೂ ಪ್ರಕಟವಾದುವು. ಹಲವು ಸ್ಥಳೀಯ ಘಟಕಗಳೂ ವಿಜ್ಞಾನ ಕೃತಿಗಳ ಪ್ರಕಟಣೆ ಮತ್ತು ಪ್ರಸಾರದಲ್ಲಿ ಸಕ್ರಿಯವಾಗಿ ಪಾಲುಗೊಂಡುವು. ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಪುಸ್ತಕ ಪ್ರಾದಿಕಾರ, ವೈದ್ಯವಿಜ್ಞಾನ ಸಾಹಿತ್ಯ ಪರಿಷತ್ತು ನವಕರ್ನಾಟಕ ಪ್ರಕಾಶನ. ಇವು ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸಿದ ಇತರ ಸಂಸ್ಥೆಗಳಲ್ಲಿ ಮುಖ್ಯವಾದುವು.
ವಿಜ್ಞಾನ ಪತ್ರಿಕೆಗಳು
ಬದಲಾಯಿಸಿ1978ರ ಮೊದಲೇ ಪ್ರಕಟವಾಗುತ್ತಿದ್ದ ವಿಜ್ಞಾನ ಲೋಕ, ವಿಜ್ಞಾನ ಕರ್ಣಾಟಕ ಮೊದಲಾದ ವಿಜ್ಞಾನ ಪತ್ರಿಕೆಗಳ ನಿಯತಕಾಲಿಕ ಪ್ರಕಾಶನಕ್ಕೆ ತೊಂದರೆಯಾದರೂ ಅನಂತರದ ಕೆಲವು ಪತ್ರಿಕೆಗಳಿಗೆ ಹಾಗಾಗಲಿಲ್ಲ. 1978 ನವೆಂಬರ್ 1ರಂದು ‘ಬಾಲವಿಜ್ಞಾನ’ ಮಾಸಿಕದ (ಕರಾವಿಪದಿಂದ ಪ್ರಕಟಿತ) ಮೊದಲ ಸಂಚಿಕೆ ಪ್ರಕಟವಾಯಿತು. ಮುಂದಿನ ಎರಡು ದಶಕಗಳಲ್ಲಿ ಸುಮಾರು ಎರಡೂವರೆ ಸಾವಿರಗಳಿಗೂ ಅದಿsಕ ಸಂಖ್ಯೆಯ ಲೇಖನಗಳು ಇದರಲ್ಲಿ ಪ್ರಕಟವಾಗಿವೆ. ವಿದ್ಯಾರ್ಥಿಗಳು ನಡೆಸಬಹುದಾದ ವಿಜ್ಞಾನ ಪ್ರಯೋಗಗಳು, ಪಠ್ಯಪುರಕ ವಿಷಯಗಳು, ವಿಜ್ಞಾನದ ಮುನ್ನಡೆ, ವಿಜ್ಞಾನ ಕೌತುಕ, ಪಾರಿಭಾಷಿಕ ಪದ ಸಂಪದ, ವಿಜ್ಞಾನಿಗಳ ಪರಿಚಯ, ಪ್ರಶ್ನೋತ್ತರ, ವಿಜ್ಞಾನ ಪದಬಂಧ ಇವೆಲ್ಲ ಮುಖ್ಯ ಲೇಖನಗಳೊಂದಿಗೆ ಸ್ಥಿರಶೀರ್ಷಿಕೆಗಳಾಗಿ ಅಥವಾ ಆವರ್ತ ಶೀರ್ಷಿಕೆಗಳಾಗಿ ವಿವಿಧ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ವಿಜ್ಞಾನ ಸಂಗಾತಿ, ಕನ್ನಡ ವಿಶ್ವವಿದ್ಯಾಲಯ (ಹಂಪಿ) ಅಡಿಕೆ ಪತ್ರಿಕೆ (ಬೆಳೆಗಾರರೇ ಪ್ರಕಾಶಕರು), ಸುಜಾತ, ಮೇಟಿವಿದ್ಯೆ, ನಮ್ಮ ಪರಿಸರ, (ಕರಾವಿಪ), ಜೀವನಾಡಿ (ದಿಕ್ಸೂಚಿ ಬಳಗ), ಮಕ್ಕಳ ವಿಜ್ಞಾನ ಮಾಸಿಕ, ಪುಟಾಣಿ ವಿಜ್ಞಾನ - ಇವೆಲ್ಲ 1978ರ ಅನಂತರ ಬೆಳಕು ಕಂಡಂಥ ಇತರ ಪತ್ರಿಕೆಗಳು. ಸಂಶೋಧಕ, ವಿಜ್ಞಾನ ವಾಹಿನಿ ಈ ಬಗೆಯ ಕೆಲವು ಪತ್ರಿಕೆಗಳು ವೈಯಕ್ತಿಕ ಆಸಕ್ತಿ ಮತ್ತು ಪ್ರಯತ್ನಗಳಿಂದ ಹುಟ್ಟಿದ್ದರೂ ದೀರ್ಘಕಾಲ ಬಾಳಲಿಲ್ಲ. ವಯಸ್ಕರ ಶಿಕ್ಷಣ ಸಮಿತಿಯ ವತಿಯಿಂದ ಪ್ರಕಟವಾಗುತ್ತಿದ್ದ ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗಿರುವ ವಿಜ್ಞಾನ ಸಂಬಂಧ ಲೇಖನಗಳನ್ನು ನಾವು ಗಮನಿಸಬೇಕು. ವಿಜ್ಞಾನ ಪತ್ರಿಕೆಗಳಿಂದಾಗಿ ನೂರಾರು ವಿಜ್ಞಾನ ಬರೆಹಗಾರರಿಗೆ ಬರೆಯಲು ಆಸ್ಪದ ದೊರಕಿದ್ದಷ್ಟೇ ಅಲ್ಲ, ವಿದ್ಯಾರ್ಥಿ - ಅಧ್ಯಾಪಕ ಕಾರ್ಯನಿರತ ವಿಜ್ಞಾನಿಗಳೊಂದಿಗೆ ಆಸಕ್ತ ನಾಗರಿಕರೂ ಲಿಖಿತ ಮಾಧ್ಯಮದ ಮೂಲಕ ವಿಜ್ಞಾನ ವಿಚಾರಗಳ ಬಗ್ಗೆ ಅಂತರ್ವರ್ತಿಸುವಂತಾಯಿತು.
ಅಂಕಣಬಿಡಿಬರೆಹಗಳು: ಕನ್ನಡದಲ್ಲಿ ಸಾಮಾನ್ಯ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಿಕಗಳ ಸಂಖ್ಯೆಯೂ 1978ರ ಅನಂತರ ಹೆಚ್ಚಿದೆ. ಸ್ಥಳೀಯ ಅಥವಾ ಪ್ರಾದೇಶಿಕ ವ್ಯಾಪ್ತಿಯ ಪತ್ರಿಕೆಗಳೂ ನಗರ ಕೇಂದ್ರಿತವಾಗಿ ಹೆಚ್ಚಿವೆ. ಇವುಗಳಲ್ಲಿ ಸಚಿತ್ರ ಬಿಡಿಬರೆಹಗಳ ರೂಪದಲ್ಲಾಗಲೀ ನಿಶ್ಚಿತ ಶೀರ್ಷಿಕೆಯನ್ನು ಹೊತ್ತು ವರ್ತಮಾನ ಕಾಲದ ವಿಜ್ಞಾನ ವಿಷಯಗಳನ್ನು ತಿಳಿಸಿ ಚರ್ಚಿಸುವ ಅಂಕಣಗಳಲ್ಲಾಗಲೀ ಪ್ರಕಟವಾಗುವ ವಿಜ್ಞಾನ ಸಾಹಿತ್ಯದ ಪ್ರಮಾಣ ಗಮನಾರ್ಹವಾದುದು. ಉದಾಹರಣೆಗೆ ವಿಜ್ಞಾನ ವಿಶೇಷ (ಪ್ರಜಾವಾಣಿ), ವಿಜ್ಞಾನ ವಿಹಾರ (ಕನ್ನಡ ಪ್ರಭ) - ಈ ಅಂಕಣಗಳು ಲಲಿತ ಶೈಲಿಯಲ್ಲಿ ವಿಜ್ಞಾನ ಕ್ಷೇತ್ರದ ಬೆಳೆವಣಿಗೆಗಳ ಬಗ್ಗೆ ವಾರ ವಾರವ ಬೆಳಕು ಚೆಲ್ಲುತ್ತವೆ. ನಭೋಮಂಡಲ (ಹೊಸತು), ನೆಟ್ನೋಟ (ವಿಜ್ಞಾನ ಸಂಗಾತಿ) ಎಂಬ ಅಂಕಣಗಳು ರಾತ್ರಿ ಆಕಾಶದ ವೀಕ್ಷಣೆ, ಇಂಟರ್ನೆಟ್ನ ಬೆಳೆವಣಿಗೆಯಂಥ ವಿಶೇಷ ಆಸಕ್ತಿಗಳನ್ನು ತಣಿಸಬಲ್ಲುವಾದುವು. ದಿನಪತ್ರಿಕೆಗಳ ವಿಶೇಷ ಪುರವಣಿಗಳಲ್ಲೂ ವಿಶೇಷ ವಿಜ್ಞಾನ ಲೇಖನಗಳು ಪ್ರಕಟವಾಗುವ ಪ್ರವೃತ್ತಿ ಬೆಳೆಯಿತು.ಆಕರಗ್ರಂಥಗಳು: ಬರೆಹಗಾರರ ವೈಯಕ್ತಿಕ ಒಲವು ಮತ್ತು ಕನ್ನಡದ ಪ್ರಾದೇಶಿಕ ಬಿನ್ನತೆಗಳಿಂದಾಗಿ ಇಂಗ್ಲಿಷಿನ ಒಂದು ನಿರ್ದಿಷ್ಟ ಪಾರಿಭಾಷಿಕ ಪದಕ್ಕೆ ಎರಡು ಅಥವಾ ಹೆಚ್ಚು ಸಮಾನ ಪದಗಳು ಹಿಂದೆ ಬಳಕೆಯಾಗುತ್ತಿದ್ದುವು. ಒಂದು ಶಬ್ದದ ಏಕರೂಪ ಬಳಕೆಯ ವಿಚಾರವಾಗಿ ವಿಜ್ಞಾನ ಬರೆಹಗಾರರಲ್ಲಿ ಅನೇಕ ಬಿನ್ನಾಬಿಪ್ರಾಯಗಳಿದ್ದುವು. 1984 ಮೇ ತಿಂಗಳಲ್ಲಿ ಧಾರವಾಡದಲ್ಲಿ ನಡೆದ ಮೊದಲನೆಯ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಬಳಿಕ ರಾಜ್ಯದ ವಿವಿಧ ಪ್ರದೇಶಗಳನ್ನು ಪ್ರತಿನಿದಿsಸುವ ವಿದ್ವಾಂಸರ ಮತ್ತು ವಿಜ್ಞಾನಿಗಳ ಸಹಾಯದಿಂದ ವಿಜ್ಞಾನ ಶಬ್ದಕೋಶದ ಯೋಜನೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೈಗೆತ್ತಿಕೊಳ್ಳಬೇಕೆಂಬ ನಿರ್ಣಯವನ್ನು ಅಂಗೀಕರಿಸಿತು. ಅದರಂತೆ ಇಂಗ್ಲಿಷ್-ಕನ್ನಡ ವಿಜ್ಞಾನ ಶಬ್ದಕೋಶ ಸಿದ್ಧವಾಯಿತು (1990). ಈ ಶಬ್ದಕೋಶ ರಚನೆಯಲ್ಲಿ ಯಾವ ಬಗೆಯ ಪಾರಿಭಾಷಿಕ ಪದಗಳನ್ನು ನೇರವಾಗಿ ಇಂಗ್ಲಿಷಿನಿಂದ ಪಡೆಯಬಹುದು, ಯಾವ ಬಗೆಯ ಪದಗಳಿಗೆ ಸಮಾನ ಪದಗಳನ್ನು ಸೃಷ್ಟಿಸಬಹುದು ಹಾಗೂ ಸೃಷ್ಟಿಸುವಾಗ ಅನುಸರಿಸುವ ಮಾರ್ಗಗಳಾವುವು ಎಂಬುದರ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅನ್ವಯಿಸಲಾಯಿತು. ಸಮಾನ ಶಬ್ದಕಾಂಡ ಮತ್ತು ಪ್ರತ್ಯಯಗಳ ಪಟ್ಟಿಯನ್ನೂ ನೀಡಲಾಯಿತು. ಈ ಜಾಡಿನಲ್ಲೇ ಮುಂದುವರಿದು ನವಕರ್ನಾಟಕ ಪ್ರಕಾಶನವು ವಿಜ್ಞಾನ ಪದ ವಿವರಣ ಕೋಶವನ್ನು ಪ್ರಕಟಿಸಿತು (2001). ಇದರಲ್ಲಿ ಕನ್ನಡ ಪಾರಿಭಾಷಿಕ ಪದಗಳನ್ನು ಅಕಾರಾದಿಯಾಗಿ ನೀಡಿ, ಅವುಗಳ ಇಂಗ್ಲಿಷ್ ಸಮಾನ ಪದಗಳೊಂದಿಗೆ ಕನ್ನಡದಲ್ಲಿ ವಿವರಣೆಯನ್ನೂ ಇಂಗ್ಲಿಷ್ ಪಾರಿಭಾಷಿಕ ಪದಗಳಿಗೆ ಕನ್ನಡ ಸಮಾನ ಪದಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ನೀಡಲಾಯಿತು. ಇದರಿಂದ ಬರೆಹಗಾರರಿಗಷ್ಟೇ ಅಲ್ಲದೆ ಓದುಗರಿಗೂ ಅನುಕೂಲವಾಯಿತು. ಹಾಗೆಯೇ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್- ಕನ್ನಡ ನಿಘಂಟುವಿನ ಪರಿಷ್ಕರಣವೂ ಒಂದು ಮುಖ್ಯ ಹೆಜ್ಜೆ. 1946 ರಿಂದಲೂ ಪಾರಿಭಾಷಿಕ ಪದಗಳನ್ನು ಆರಿಸುವಲ್ಲಿ ಈ ನಿಘಂಟು ಒಂದು ಮುಖ್ಯ ಆಕರವಾಗಿತ್ತು. ಈ ನಿಘಂಟನ್ನು ಪರಿಷ್ಕರಿಸಿ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ 1989ರಲ್ಲಿ ಆರಂಭವಾಗಿ ಈಗ ಮುಗಿದಿದೆ (2004).
ಕನ್ನಡ ವಿಜ್ಞಾನ ಸಾಹಿತ್ಯ ನಿರ್ಮಾಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದ ಕೊಡುಗೆಯೂ ಗಮನಾರ್ಹ. 14 ಸಂಪುಟಗಳ ಈ ಯೋಜನೆ ಈಗ ಪುರ್ಣಗೊಂಡಿದೆ (2004). 1970ರ ದಶಕದಲ್ಲಿ ಪ್ರಕಟವಾಗಿದ್ದ ಏಳು ಸಂಪುಟಗಳ ಕಿರಿಯರ ವಿಶ್ವಕೋಶ ‘ಜ್ಞಾನ ಗಂಗೋತ್ರಿ’ಯ ಪ್ರತಿಗಳು ಈಗ ಅಲಭ್ಯ. ಈ ಸನ್ನಿವೇಶದಲ್ಲಿ ಕೇವಲ ವಿಜ್ಞಾನಕ್ಕೆ ಮೀಸಲಾದ ನವಕರ್ನಾಟಕ ಜ್ಞಾನ ವಿಜ್ಞಾನ ಕೋಶ (ನವಕರ್ನಾಟಕ ಪ್ರಕಾಶನ 1998) ಕನ್ನಡ ಓದುಗರಿಗೆ ನೀಡಿದ ವಿಶಿಷ್ಟ ಕೊಡುಗೆಯಾಯಿತು. ಅಂದವಾದ ಮುದ್ರಣ ಮತ್ತು ಪುಟಪುಟಗಳಲ್ಲಿ ಪಠ್ಯಕ್ಕೆ ಪುರಕವಾದ ವರ್ಣಮಯ ಚಿತ್ರಗಳಿಂದಾಗಿಯೂ ಈ ಪ್ರಕಟಣೆ ದಾಖಲೆ ನಿರ್ಮಿಸಿತು. ಹಂಪಿ ಕನ್ನಡ ವಿಶ್ವವಿದ್ಯಾಲಯವು ವೈದ್ಯವಿಜ್ಞಾನದ ವಿಶ್ವಕೋಶವನ್ನು ಪ್ರಕಟಿಸಿದ್ದರಿಂದ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಮತ್ತೊಂದು ಆಕರ ಗ್ರಂಥದ ಸೇರ್ಪಡೆಯಾದಂತಾಯಿತು.
ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳು 20ನೆಯ ಶತಮಾನದ ಎಂಟನೆಯ ದಶಕದಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಅನೇಕ ವಿಜ್ಞಾನ ಪಠ್ಯಗಳನ್ನೂ ಪರಾಮರ್ಶನ ಗ್ರಂಥಗಳನ್ನೂ ಪ್ರಕಟಿಸಿದ್ದುವು. ಆದರೆ ಸ್ನಾತಕ ಮಟ್ಟದಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರೋತ್ಸಾಹ ಸಿಗದಿದ್ದಾಗ ಇಂಥ ಪ್ರಕಟಣೆಗಳು ಮುಂದುವರಿಯಲಿಲ್ಲ. ಇದಕ್ಕೆ ಅಪವಾದ ಎಂಬಂತೆ ಇಂಥ ಪ್ರಕಟಣೆಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ 1990ರ ದಶಕದಲ್ಲೂ ಮುಂದುವರಿದುವು. ಕನ್ನಡ ಮಾಧ್ಯಮದಲ್ಲಿ ಓದಿ ಬಿ.ಎಸ್ಸಿ. (ಕೃಷಿ) ಪದವಿ ಪಡೆದ ವಿದ್ಯಾರ್ಥಿಗಳು ಯಾವುದೇ ಕೀಳರಿಮೆಗೆ ತುತ್ತಾಗದೆ ಆಡಳಿತ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನೂ ಸ್ನಾತಕೋತ್ತರ ಕೋರ್ಸುಗಳಿಗೆ ಕಾಲಿರಿಸಿ ಯಶಸ್ವಿ ಯಾಗುತ್ತಿರುವುದನ್ನೂ, ಕೃಷಿ ವಿಶ್ವವಿದ್ಯಾಲಯ ಅದಿsಕೃತವಾಗಿ ಸಾರಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಪದವಿಪುರ್ವ ತರಗತಿಗಳಿಗಾಗಿ ವಿಜ್ಞಾನ ಪಠ್ಯ ಪುಸ್ತಕಗಳನ್ನು ಬರೆಯಿಸಿ ಪ್ರಕಟಿಸಿದೆ. ಪಠ್ಯಪುಸ್ತಕಗಳಲ್ಲಿ ಸಂಗ್ರಹವಾಗಿ ನಿರೂಪಿಸಿರುವ ವಿಷಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ನೆರವಾಗುವ ಪುಸ್ತಕಗಳು ಕನ್ನಡದಲ್ಲಿ ದೊರೆಯಬೇಕೆಂಬ ಇರಾದೆಯಿಂದ ಕನ್ನಡ ಪುಸ್ತಕ ಪ್ರಾದಿsಕಾರ ‘ಮೂಲಭೂತ ಶೈಕ್ಷಣಿಕ ಪುಸ್ತಕ ಮಾಲೆ’ಯಲ್ಲಿ ಹಲವು ವಿಜ್ಞಾನ ಕೃತಿಗಳನ್ನು ಪ್ರಕಟಿಸಿದೆ. ವಿಜ್ಞಾನ ದೀಪಮಾಲೆ, ಜನಪ್ರಿಯ ಪುಸ್ತಕ ಮಾಲೆಯಲ್ಲಿಯೂ ವಿಜ್ಞಾನ ಕೃತಿಗಳು ಬಂದುವು. ಹೀಗಿದ್ದರೂ ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಗುವ ವಿಜ್ಞಾನ ಪಠ್ಯಗಳೂ ಪ್ರತಿ ವರ್ಷವ ಒಂದಲ್ಲ ಒಂದು ಬಗೆಯ ಟೀಕೆಗೆ ಒಳಗಾಗುತ್ತಿವೆ. ಎಳೆಯ ವಿದ್ಯಾರ್ಥಿಗಳ ಮೇಲೆ ಆಳ ಪರಿಣಾಮ ಬೀರಬಲ್ಲ ವಿಜ್ಞಾನ ಪಠ್ಯಗಳಲ್ಲಿ ಪರಿಕಲ್ಪನೆ, ಸತ್ಯಾಂಶ, ವ್ಯಾಕರಣ, ಚಿತ್ರ ಮತ್ತು ಮುದ್ರಣಕ್ಕೆ ಸಂಬಂದಿಸಿದ ದೋಷಗಳನ್ನು ನಿವಾರಿಸಲು ಬೇಕಾದ ವ್ಯವಸ್ಥೆಯನ್ನು ಕೆಲಮೊಮ್ಮೆ ರೂಪಿಸಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಪ್ರಾಣಿವಿಜ್ಞಾನಗಳಂಥ ಸಾಂಪ್ರದಾಯಿಕ ವಿಭಾಗಗಳಷ್ಟೇ ಅಲ್ಲದೆ ಕಂಪ್ಯುಟರ್, ಜೀವಿವೈವಿಧ್ಯ, ಪರಿಸರ, ಜೀವರಸಾಯನ ವಿಜ್ಞಾನ, ಸಾವಯವ ಕೃಷಿಯಂಥ ವಿಷಯಗಳೂ ಹೆಚ್ಚು ಹೆಚ್ಚಾಗಿ ಲೇಖಕರ ಗಮನ ಸೆಳೆಯುತ್ತಿವೆ. ಗ್ರಹಣ, ಧೂಮಕೇತು, ಅಂತರ್ಜಲ, ತ್ಯಾಜ್ಯವಸ್ತು ನಿರ್ವಹಣೆ, ಮಳೆನೀರಿನ ಸಂಗ್ರಹ, ಮೂಢನಂಬಿಕೆ, ಪವಾಡ ಪ್ರದರ್ಶನ, ಪ್ರಳಯ, ಫಲಜ್ಯೋತಿಷ್ಯ, ವಾಸ್ತುಗಳಂಥ ವಿಚಾರಗಳನ್ನು ವಸ್ತುನಿಷ್ಠವಾಗಿ ತಿಳಿಯಬೇಕೆನ್ನುವ ಕನ್ನಡದ ಓದುಗರಿಗೆ ಆವಶ್ಯವಾದ ಕೃತಿಗಳಿಗೆ ಈಗ ಅಭಾವವಿಲ್ಲ. ಉತ್ತಮ ವಿಜ್ಞಾನ ಕೃತಿಗಳು ಓದುಗರನ್ನು ಅಪಾರವಾಗಿ ಆಕರ್ಷಿಸುತ್ತಿವೆ. (ಜೆ.ಆರ್ಎಲ್.)
ವಿಜ್ಞಾನ ಸಾಹಿತ್ಯದಲ್ಲಿ ಬೇರೆ ಬೇರೆ ಪ್ರಕಾರಗಳುಂಟು. ವಿವಿಧ ಪ್ರಕಾರಗಳ ವಿಜ್ಞಾನ ಸಾಹಿತ್ಯದ ಆವಶ್ಯಕತೆ ಮತ್ತು ಅವುಗಳ ಪುರೈಕೆ ಸಮಾಜದಲ್ಲಿ ಹೇಗೆ ಬೆಳೆಯುತ್ತದೆ ಎಂಬುದನ್ನು ವಿಶಾಲವಾಗಿ ಪರಿಶೀಲಿಸಿ ಕನ್ನಡ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯದ ಬೆಳೆವಣಿಗೆ ಯನ್ನು ಸಮೀಕ್ಷಿಸಲಾಗಿದೆ.
ಕಾರ್ಯನಿರತ ವಿಜ್ಞಾನಿಗಳು ಸಾಮಾನ್ಯವಾಗಿ ವಿಜ್ಞಾನ ಸಾಹಿತ್ಯ ಎಂದು ಕರೆಯುವುದು ಸಂಶೋಧನೆಯ ಫಲಿತಾಂಶಗಳನ್ನು ಪ್ರಚುರಪಡಿಸುವ ಕೃತಿಗಳನ್ನು. ಆಧುನಿಕ ವಿಜ್ಞಾನ ಇಂದಿನ ರೂಪದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಜನ್ಮತಾಳಿದ ಹೊಸದರಲ್ಲಿ, ಸಂಶೋಧನ ವರದಿಗಳ ಪ್ರಕಟಣೆಗೇ ಮೀಸಲಾದ ವಿಜ್ಞಾನ ಪತ್ರಿಕೆಗಳು ಇನ್ನೂ ಹೆಚ್ಚಾಗಿ ಇಲ್ಲದಿದ್ದ ಕಾಲದಲ್ಲಿ, ವಿಜ್ಞಾನಿಗಳು ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಸಹ ಪುಸ್ತಕಗಳ ರೂಪದಲ್ಲಿ ಪ್ರಚುರಪಡಿಸುತ್ತಿದ್ದರು. ಕೊಪರ್ನಿಕಸ್ನ ಡಿ ಆರ್ಬಿಯಂ ಸೆಲೆಸ್ಟಿಯಂ ರೆವಲ್ಯೂಷನಿಬಸ್, ಡಾರ್ವಿನ್ನನ ಆರಿಜಿನ್ ಆಫ್ ಸ್ಪೀಷೀಸ್, ನ್ಯೂಟನ್ನನ ಪ್ರಿನ್ಸಿಪಿಯ, ರಾಬರ್ಟ್ ಬಾಯಿಲನ ಸ್ಕೆಪ್ಟಿಕಲ್ ಕೆಮಿಸ್ಟ್- ಇವೆಲ್ಲವ ಅಂಥ ಪುಸ್ತಕಗಳೇ. ಇಂದು ಸಾಮಾನ್ಯವಾಗಿ ಸಂಶೋಧನೆಯ ವರದಿಗಳೆಲ್ಲವ ಪ್ರಕಟವಾಗುವುದು ಅದಕ್ಕೇ ಮೀಸಲಾಗಿರುವ ಅನೇಕಾನೇಕ ನಿಯತಕಾಲಿಕ ಪತ್ರಿಕೆಗಳಲ್ಲಿ. ವಿಜ್ಞಾನಿಗಳು ಪರಿಮಿತ ಅರ್ಥದಲ್ಲಿ ಸಾಹಿತ್ಯ ಎಂಬ ಶಬ್ದವನ್ನು ಬಳಸುವುದು ಈ ಪ್ರಕಾರದ ಸಾಹಿತ್ಯಕ್ಕೆ. ಕನ್ನಡದಲ್ಲಿ ಈ ಬಗೆಯ ಸಾಹಿತ್ಯ ಇಲ್ಲವೇ ಇಲ್ಲ ಎನ್ನಬಹುದು. ಇದಕ್ಕೆ ಕಾರಣ ಶತಮಾನಗಳ ಕಾಲ ದಾಸ್ಯದಲ್ಲಿ ಸಿಕ್ಕಿದ್ದ ಭಾರತದಲ್ಲಿ ಆಧುನಿಕ ವಿಜ್ಞಾನ ಯುರೋಪ್ ದೇಶಗಳಲ್ಲಿ ವಿಕಾಸಗೊಂಡಂತೆ ಸ್ವಾಭಾವಿಕವಾಗಿ ವಿಕಾಸಗೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಒಂದು ಶತಮಾನದಲ್ಲಿ ಯುರೋಪಿನಿಂದ ಇಲ್ಲಿಗೆ ಬಂದ ವಿಜ್ಞಾನ, ಇಂಗ್ಲಿಷ್ ಭಾಷೆಯ ಮೂಲಕ ಬಂತು. ಆದ್ದರಿಂದ ಈಚೆಗೆ ಸ್ವತಂತ್ರ ಸಂಶೋಧನೆಗಳನ್ನು ಕೈಗೊಂಡ ವಿಜ್ಞಾನಿಗಳು ಸಹಜವಾಗಿಯೇ ತಮ್ಮ ಫಲಿತಾಂಶಗಳನ್ನು ವಿದೇಶಿ ಭಾಷೆಗಳ ಮೂಲಕವೇ ವರದಿಮಾಡುತ್ತ ಬಂದಿದ್ದಾರೆ.
ವಿದ್ಯಾರ್ಥಿಗಳಿಗೆ ಆವಶ್ಯವಾದ ಪಠ್ಯಪುಸ್ತಕಗಳು, ಪ್ರಕರಣ ಗ್ರಂಥಗಳು (ಟ್ರಿಟೈಸಸ್), ಏಕಪ್ರಬಂಧಗಳು (ಮೊನೊಗ್ರಾಫ್ಸ್) ಮುಂತಾದವು ಇನ್ನೊಂದು ಬಗೆಯವು. ಕನ್ನಡ ಮಾಧ್ಯಮದಲ್ಲಿ ಬೋಧನೆ ನಡೆದು,ಈ ಬಗೆಯ ಸಾಹಿತ್ಯಕ್ಕೆ ಬೇಡಿಕೆ ಒದಗಿಬಂದರೆ ಅವು ತಾವಾಗಿಯೇ ಬೆಳಕು ಕಾಣುತ್ತವೆ. ಐವತ್ತು ವರ್ಷಗಳ ಹಿಂದೆ ಮಾಧ್ಯಮಿಕ ಶಾಲೆಯಲ್ಲಿ ಸಹ ಇಂಗ್ಲಿಷ್ ಮಾಧ್ಯಮವೇ ಬಳಕೆಯಲ್ಲಿದ್ದ ಕಾಲದಲ್ಲಿ ಬಹುಶಃ ಆಧುನಿಕ ವಿಜ್ಞಾನದ ಅಧ್ಯಯನಕ್ಕೆ ಬೇಕಾಗುವ ಪಠ್ಯಪುಸ್ತಕಗಳ ಹೆಸರೇ ಇರಲಿಲ್ಲವೆಂದು ಕಾಣುತ್ತದೆ. 1930-40ರ ದಶಕದಲ್ಲಿ ನಮ್ಮ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತಂದಮೇಲೆ ಆ ಮಟ್ಟಕ್ಕೆ ತಯಾರಿಸಿದ ವಿಜ್ಞಾನ ಪಠ್ಯಪುಸ್ತಕಗಳು ಹೇರಳವಾಗಿ ಪ್ರಕಟವಾಗಿವೆ. ಮೈಸೂರು ವಿಶ್ವವಿದ್ಯಾನಿಲಯ ಕೈಗೊಂಡಿರುವ ಕನ್ನಡ ಗ್ರಂಥ ಸೂಚಿ (ಬಿಬ್ಲಿಯೊಗ್ರಪಿ) ಯೋಜನೆಯ ಅಂಗವಾಗಿ ಪ್ರಕಟ ವಾಗಿರುವ (1971) ಅದರ ಮೊದಲನೆಯ ಸಂಪುಟದ ಪುಟಗಳ ಮೇಲೆ ಕಣ್ಣು ಹಾಯಿಸಿದರೆ ಈ ಮಾತು ಸತ್ಯವೆಂಬುದು ಸ್ಪಷ್ಟವಾಗುತ್ತದೆ. ಈ ಸಂಪುಟದಲ್ಲಿ ಗಣಿತ ಮತ್ತು ವಿವಿಧ ವಿಜ್ಞಾನಗಳಿಗೆ ಸಂಬಂದಿsಸಿದಂತೆ ಪ್ರಾಥಮಿಕ ಪಠ್ಯಪುಸ್ತಕಗಳಿಂದ ಪ್ರೌಢಗ್ರಂಥಗಳವರೆಗೆ, ಉಪಯುಕ್ತ ಕೋಷ್ಟಕ ಕೈಪಿಡಿಗಳಿಂದ ಜನಪ್ರಿಯ ವಿಜ್ಞಾನ ಪುಸ್ತಕಗಳವರೆಗೆ ಇದುವರೆಗೆ ಅಚ್ಚಾಗಿರುವ ಎಲ್ಲ ಕನ್ನಡ ಗ್ರಂಥಗಳನ್ನೂ ಪಟ್ಟಿ ಮಾಡುವ ಯತ್ನ ನಡೆದಿದೆ. ಈಗ ಸಿಕ್ಕಿರುವ 1 ಪೈಯಿಂದ 1,000 ರೂಪಾಯಿವರೆಗೆ ಅಸಲಿಗೆ 1 ದಿವಸದಿಂದ 100 ವರ್ಷಪರ್ಯಂತ 100ಕ್ಕೆ 12ರ ಪ್ರಕಾರ ಆಗುವ ಬಡ್ಡಿಯ ಪಟ್ಟಿಗಳು (ಮಂಗಳೂರು ಜರ್ಮನ್ ಮಿಶನ್ ಪ್ರೆಸ್, 1858) ಎಂಬ ಮೊತ್ತಮೊದಲ ಪುಸ್ತಕದಿಂದ 1968ರ ವರೆಗೆ ಪ್ರಕಟವಾಗಿರುವ 1,449 ಮುದ್ರಿತ ಗ್ರಂಥಗಳ ವಿವರಗಳನ್ನು ಈ ಸಂಪುಟದಲ್ಲಿ ಕಾಣಬಹುದು (ಬಹಶಃ ಒಟ್ಟು ಸಂಖ್ಯೆಯ ಸೇ.20 ಪುಸ್ತಕಗಳು ಲೆಕ್ಕಕ್ಕೆ ಸಿಕ್ಕಿರದೆ ಹೋಗಿರಬಹುದುದೆಂದು ಇದರ ಸಂಪಾದಕ ಮಂಡಳಿಯ ಅಂದಾಜು). ಇದರಲ್ಲಿ ಹೆಸರಿರುವ 422 ಗಣಿತ ಗ್ರಂಥಗಳಲ್ಲಿ ಹತ್ತಿಪ್ಪತ್ತು ವಿನಾ ಉಳಿದ ಎಲ್ಲವ ಅಂಥ ಪಠ್ಯಪುಸ್ತಗಳೇ. ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನಗಳ ಬಗ್ಗೆಯೂ ಇದೇ ಮಾತು ಹೇಳಬಹುದು.
ಕಾಲೇಜು ಮಟ್ಟದಲ್ಲಿ ಕನ್ನಡ ಮಾಧ್ಯಮ ಬಳಸಲು ಮೊತ್ತಮೊದಲು ಪ್ರಯತ್ನ ನಡೆದದ್ದು 1957ರಲ್ಲಿ. ವಿಶ್ವವಿದ್ಯಾನಿಲಯಗಳು ಕನ್ನಡದಲ್ಲಿ ಬೋಧನೆಗೆ ಏರ್ಪಾಡು ಮಾಡಿ ಕನ್ನಡದಲ್ಲಿ ಪಠ್ಯಪುಸ್ತಕ ರಚನೆಗೆ ಉತ್ತೇಜನ ನೀಡಿದುವು. ಒಂದೊಂದು ವಿಜ್ಞಾನ ವಿಭಾಗದಲ್ಲೂ ಹಲವಾರು ಪಠ್ಯಪುಸ್ತಕಗಳು ಪ್ರಕಟವಾಗಿವೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಉತ್ಕೃಷ್ಟ ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ಸ್ವಂತವಾಗಿ ಸ್ನಾತಕಮಟ್ಟದ ಪಠ್ಯಪುಸ್ತಕಗಳನ್ನು ರಚಿಸುವವರಿಗೆ ಉತ್ತೇಜನ ನೀಡುವುದಕ್ಕಾಗಿ ಹಿಂದೆ ಒಂದು ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. 1970ರಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಮನಶ್ಶಾಸ್ತ್ರದ ಪುಸ್ತಕಗಳು ವಿಷಯ ನಿರೂಪಣೆ, ಆಧುನಿಕತೆ ಮತ್ತು ಪ್ರೌಡಿsಮೆಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗಿರುವ ಆ ವಿಷಯಗಳನ್ನು ಕುರಿತ ಅತ್ಯುತ್ತಮ ಗ್ರಂಥಗಳಿಗೆ ಸರಿಸಮಾನವಾಗಿವೆ ಯೆಂದು ತಜ್ಞರು ಅಬಿಪ್ರಾಯಪಟ್ಟಿದ್ದಾರೆ. ಪಠ್ಯಪುಸ್ತಕಗಳ ತಯಾರಿಕೆಗೆ ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳೂ ವಿಶೇಷ ಆದ್ಯತೆ ಕೊಟ್ಟು ಈಗಾಗಲೇ ಹಲವಾರು ಪುಸ್ತಕಗಳನ್ನು ಹೊರತಂದಿವೆ. ಸ್ನಾತಕಮಟ್ಟದ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲ ವಿಜ್ಞಾನ ವಿಭಾಗಗಳ ಪಠ್ಯಪುಸ್ತಕಗಳು ಈಗ ದೊರೆಯುತ್ತವೆ.
ವಿಜ್ಞಾನ ಸಾಹಿತ್ಯದ ಇನ್ನೊಂದು ಪ್ರಕಾರ ಜನಪ್ರಿಯ ವಿಜ್ಞಾನ. ತಜ್ಞರಲ್ಲದ ಓದುಗರನ್ನು ಉದ್ದೇಶಿಸಿ ವಿಜ್ಞಾನದ ಸಾಧನೆಗಳನ್ನು ವಿವರಿಸುವುದು, ಜನತೆಯಲ್ಲಿ ವಿಜ್ಞಾನ ವಿಧಾನ ಮತ್ತು ವಿಜ್ಞಾನ ಮನೋಧರ್ಮವನ್ನು ಹರಡುವುದು ಈ ಬಗೆಯ ಸಾಹಿತ್ಯದ ಗುರಿ. ವಿಜ್ಞಾನ ಸಾಹಿತ್ಯದ ಈ ಒಂದು ಪ್ರಕಾರ ಕನ್ನಡದಲ್ಲಿ 20ನೆಯ ಶತಮಾನದಲ್ಲಿ ಹೇಗೆ ಬೆಳೆದು ಬಂದಿದೆ ಎಂಬುದನ್ನು ಸ್ಥೂಲವಾಗಿ ಸಮೀಕ್ಷಿಸಬಹುದು.
ಸಂಶೋಧನ ಕೃತಿಗಳಂತೆ ಮತ್ತು ಪಠ್ಯಪುಸ್ತಕಗಳಂತೆ ಜನಪ್ರಿಯ ವಿಜ್ಞಾನ ಸಾಹಿತ್ಯವ ಜನತೆಯ ಆವಶ್ಯಕತೆ ಮತ್ತು ಬೇಡಿಕೆಗಳನ್ನನುಸರಿಸಿ ತಾನೇ ತಾನಾಗಿ ಬೆಳೆಯುವುದೆಂದು ಹೇಳುವ ಹಾಗಿಲ್ಲ. ಜನತೆಗೆ ಏನು ಬೇಕು ಎಂಬ ಬಗ್ಗೆ ತಜ್ಞರಲ್ಲಿ ಮೂಡುವ ಪ್ರಜ್ಞೆ, ವಿಜ್ಞಾನದ ಪರಿಭಾಷೆಯನ್ನು ಆದಷ್ಟು ಕಡಿಮೆ ಮಾಡಿ ಜನಸಾಮಾನ್ಯರ ಭಾಷೆಯಲ್ಲಿ ಅದನ್ನು ಒದಗಿಸಬೇಕೆಂಬ ಪ್ರೇರಣೆ, ಅದಕ್ಕೆ ಬೇಕಾದ ಸಾಮಾಥರ್ಯ್-ಇವು ಬೆಳೆಯುವವರೆಗೂ ಜನಪ್ರಿಯ ವಿಜ್ಞಾನ ಸಾಹಿತ್ಯ ಬೆಳೆಯಲಾರದು.
ಪಾಶ್ಚಾತ್ಯ ಭಾಷೆಗಳಲ್ಲಿ, ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದವರೆಗೆ, ಅಂದರೆ ಆಧುನಿಕ ವಿಜ್ಞಾನಕ್ಕೆ ಇಂದಿನ ರೂಪ ಕೊಟ್ಟವರಲ್ಲಿ ಮೊದಲಿಗರೆನ್ನಬಹುದಾದ ಗೆಲಿಲಿಯೊ, ನ್ಯೂಟನ್ ಮೊದಲಾದವರ ಸಂಶೋಧನೆಗಳ ಫಲವಾಗಿ ವಿಜ್ಞಾನ ಮನುಷ್ಯನ ಜ್ಞಾನಾನ್ವೇಷಣೆಯ ಒಂದು ವಿಶೇಷ ಶಾಖೆಯಾಗಿ ಬೆಳೆಯಲು ಪ್ರಾರಂಬಿsಸಿದ ನೂರಿನ್ನೂರು ವರ್ಷಗಳವರೆಗೆ, ಜನಪ್ರಿಯ ವಿಜ್ಞಾನ ಎಂದು ಕರೆಯಬಹುದಾದ ಸಾಹಿತ್ಯ ಪ್ರಕಾರ ಜನ್ಮತಾಳಲಿಲ್ಲ. ಡಾರ್ವಿನ್ನನ ಅನುಯಾಯಿಗಳಲ್ಲಿ ಪ್ರಮುಖನಾದ ಥಾಮಸ್ ಹಕ್ಸ್ಲಿಯನ್ನು ಜನಪ್ರಿಯ ವಿಜ್ಞಾನದ ಆದ್ಯಪ್ರವರ್ತಕ ಎನ್ನಬಹುದು. ಡಾರ್ವಿನ್ನನ ವಿಕಸನವಾದದ ಪರಿಣಾಮವಾಗಿ ಕ್ರೈಸ್ತಮತಾವಲಂಬಿಗಳ ಕೆಲವು ಮುಖ್ಯ ನಂಬಿಕೆಗಳಿಗೆ ಪೆಟ್ಟು ಬಿದ್ದ ಕಾರಣ ಯುರೋಪ್ ದೇಶಗಳಲ್ಲಿ ವಿಕಾಸವಾದವನ್ನು ಕುರಿತು ದೊಡ್ಡ ವಿವಾದವೆದ್ದಿತು. ಆಗ ವಿಜ್ಞಾನದ ಒಳ ವ್ಯವಹಾರಗಳು ಹೊರಗಿನವರ ಗಮನ ಸೆಳೆದುವು. ವಿಜ್ಞಾನದ ಬಗ್ಗೆ ಸಾಮಾನ್ಯ ಜನತೆಗೆ ತಿಳಿವಳಿಕೆ ಕೊಡಬೇಕಾದ ಅಗತ್ಯ ವಿಜ್ಞಾನಿಗಳಿಗೆ ಮನವರಿಕೆಯಾಯಿತು. ಆ ಕೆಲಸವನ್ನು ಹಕ್ಸ್ಲಿ ಅತ್ಯಂತ ಸಮರ್ಥವಾಗಿ ನೆರವೇರಿಸಿದ. ವಿಜ್ಞಾನದ ಇತಿಹಾಸವನ್ನು ಸ್ಥೂಲವಾಗಿ ಅವಲೋಕಿಸಿದರೆ ವಿಜ್ಞಾನದ ಬಗ್ಗೆ ನಿರ್ಲಿಪ್ತ ಭಾವನೆ ತಾಳಿದ್ದ ಸಾಮಾನ್ಯ ಜನತೆಯನ್ನು ಹೊಡೆದೆಬ್ಬಿಸಿದ ಇಂಥ ಹಲವಾರು ನಿದರ್ಶನಗಳನ್ನು ಕಾಣಬಹುದು. ಐನ್ಸ್ಟೈನನ ಸಾಪೇಕ್ಷತಾವಾದದ ಪ್ರಕಟಣೆ, ಹಿರೋಷಿಮದಲ್ಲಿ ಸಿಡಿದ ಪರಮಾಣು ಬಾಂಬು, ರಷ್ಯನರು ಹಾರಿಬಿಟ್ಟ ಮೊದಲನೆಯ ಸ್ಪೂತ್ನಿಕ್ ಮುಂತಾದ-ಈ ಘಟನೆಗಳಿಂದ ವಿಜ್ಞಾನದ ಬಗ್ಗೆ ಜನರ ಆಸಕ್ತಿ ಹೆಚ್ಚಾದಂತೆ ಜನಪ್ರಿಯ ವಿಜ್ಞಾನ ಸಾಹಿತ್ಯ ಪಾಶ್ಚಾತ್ಯ ಭಾಷೆಗಳಲ್ಲಿ ವಿಪುಲವಾಗಿ ಬೆಳೆಯಿತು.
ಭಾರತದಲ್ಲಿ ಆಧುನಿಕ ವಿಜ್ಞಾನದ ಅಧ್ಯಯನಕ್ಕೆ ಆಸ್ಪದ ದೊರೆತದ್ದು ಬಹಳ ತಡವಾಗಿ. ಪಾಶ್ಚಾತ್ಯ ಶಿಕ್ಷಣ ಪದ್ಧತಿಯನ್ನು ಭಾರತಕ್ಕೆ ತಂದ ಬ್ರಿಟಿಷರು ನಮಗೆ ವಿಜ್ಞಾನ ಶಿಕ್ಷಣವನ್ನು ಒದಗಿಸುವ ಬಗ್ಗೆ ಆಸಕ್ತಿ ತೋರಲಿಲ್ಲ. ಅವರು ನೀಡಿದ ಶಿಕ್ಷಣದ ಉದ್ದೇಶ ತಮಗೆ ಬೇಕಾದ ಗುಮಾಸ್ತರನ್ನೂ ಆಡಳಿತಗಾರರನ್ನೂ ತಯಾರುಮಾಡುವುದಕ್ಕಷ್ಟೇ ಆಗಿತ್ತು. ಆದರೆ ನಮ್ಮ ದೇಶದ ನೈಸರ್ಗಿಕ ಸಂಪತ್ತಿನ ಪೂರ್ಣ ಪ್ರಯೋಜನ ಪಡೆಯುವುದಕ್ಕಾಗಿ ಆಧುನಿಕ ವಿಧಾನಗಳನ್ನು ಬಳಸಬೇಕಾಗಿ ಬಂದು, ಅದಕ್ಕೆ ಅವಶ್ಯವೆನಿಸುವ ತಾಂತ್ರಿಕರನ್ನೂ ಇಲ್ಲಿಯೇ ತಯಾರುಮಾಡಬೇಕಾಗಿ ಬಂದುದರಿಂದ ಅಲ್ಪ ಪ್ರಮಾಣದಲ್ಲಿಯಾದರೂ ವಿಜ್ಞಾನ ಶಿಕ್ಷಣವನ್ನು ಪ್ರಾರಂಬಿಸಬೇಕಾಯಿತು. ಹೀಗಾಗಿ ನಮ್ಮ ಜನತೆಗೆ ಆಧುನಿಕ ವಿಜ್ಞಾನದ ಸಂಪರ್ಕ ಒದಗಿಬಂದದ್ದು ಬಹು ನಿಧಾನವಾಗಿ ಮತ್ತು ಬಹು ಕಡಿಮೆ ಪ್ರಮಾಣದಲ್ಲಿ. ಆದ್ದರಿಂದ ಇತ್ತೀಚಿನವರೆಗೂ ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಜನತೆಯಿಂದ ಬೇಡಿಕೆ ಬರುವ ಸಂಭವವೇ ಇರಲಿಲ್ಲ. ಅಂಥ ಸಾಹಿತ್ಯವೇನಾದರೂ ಸೃಷ್ಟಿಯಾಗುವುದಿದ್ದರೆ ಅದರ ಪ್ರಯೋಜನವನ್ನು ಮನಗಂಡ ದೂರದೃಷ್ಟಿಯುಳ್ಳ ಹಲಕೆಲವು ತಜ್ಞರ ಪ್ರಯತ್ನದಿಂದ ಮಾತ್ರ ಸಾಧ್ಯವಾಗಬಹುದಿತ್ತು. ಈ ಹಿನ್ನೆಲೆಯಲ್ಲಿ ನೋಡಿದಾಗ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಗೆ ತೊಡಗಿದವರಲ್ಲಿ ಮೊದಲಿಗರೆನ್ನಬಹುದಾದ ಬೆಳ್ಳಾವೆ ವೆಂಕಟನಾರಣಪ್ಪ ಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರ್ಯರ ದೂರದರ್ಶಿತ್ವದ ಬಗ್ಗೆ ವಿಸ್ಮಯ ಉಂಟಾಗುವುದು ಸಹಜ.1917ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾಗಿ ಕೇವಲ ಒಂದು ವರ್ಷವಾಗಿತ್ತು. ಮೈಸೂರು ರಾಜ್ಯದಲ್ಲಿದ್ದ ಒಂದೇ ಒಂದು ಕಾಲೇಜಾದ ಸೆಂಟ್ರಲ್ ಕಾಲೇಜಿನಲ್ಲಿ ಬೆರಳೆಣಿಕೆ ಯಷ್ಟು ವಿದ್ಯಾರ್ಥಿಗಳಿದ್ದರು. ವಿದ್ಯಾವಂತರೆನಿಸಿಕೊಂಡವರು ಕನ್ನಡದಲ್ಲಿ ಮಾತನಾಡಿದರೆ ಅಥವಾ ಬರೆದರೆ ಅವಮಾನವೆಂಬ ಭಾವನೆಯಿದ್ದ ಆ ಕಾಲದಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕರಾಗಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರೂ ಮೈಸೂರು ಸರ್ಕಾರದ ಪವನಶಾಸ್ತ್ರ ವೀಕ್ಷಣಾಲಯದ ಮುಖ್ಯಸ್ಥರಾಗಿದ್ದ ನಂಗಪುರಂ ವೆಂಕಟೇಶ ಅಯ್ಯಂಗಾರ್ಯರೂ ವಿಜ್ಞಾನವನ್ನು ಕನ್ನಡ ಭಾಷೆಯ ಮೂಲಕ ಜನತೆಯಲ್ಲಿ ಹರಡುವ ಆವಶ್ಯಕತೆಯನ್ನು ಮನಗಂಡರು. ಕರ್ನಾಟಕ ವಿಜ್ಞಾನ ಪ್ರಚಾರಿಣಿ ಸಮಿತಿ ಎಂಬ ಒಂದು ಸಂಸ್ಥೆಯನ್ನು ಕಟ್ಟಿ ಅದರ ವತಿಯಿಂದ ವಿಜ್ಞಾನ ಎಂಬ ಒಂದು ಮಾಸಪತ್ರಿಕೆಯನ್ನು ಹೊರಡಿಸುವ ಸಾಹಸ ಮಾಡಿದರು. ಅದರ ಸಂಪಾದಕತ್ವವನ್ನು ಅವರಿಬ್ಬರೂ ವಹಿಸಿಕೊಂಡರು. ಪತ್ರಿಕೆಯ ಧ್ಯೇಯೋದ್ದೇಶಗಳ ಬಗ್ಗೆ ಅವರಿಗೆ ಖಚಿತವಾದ ಮತ್ತು ಸ್ಪಷ್ಟವಾದ ಅಬಿಪ್ರಾಯವಿತ್ತೆಂಬುದು ಪತ್ರಿಕೆಯ ಮೊದಲ ಸಂಚಿಕೆಯಲ್ಲಿನ ಅವತರಣಿಕೆ ಯಿಂದ ವ್ಯಕ್ತವಾಗುತ್ತದೆ. ಈಗ ಸುಮಾರು ಅರವತ್ತು ಎಪ್ಪತ್ತು ವರ್ಷ ಗಳಿಂದಲೂ ಆಂಗ್ಲ ಭಾಷಾಭ್ಯಾಸ ನಮ್ಮ ದೇಶದಲ್ಲಿ ದಿನೇ ದಿನೇ ಅಬಿsವೃದ್ಧಿಯಾಗುತ್ತಿದ್ದರೂ ವಿಜ್ಞಾನದ ವಿಷಯವಾಗಿ ಮಾತ್ರ ವಿಶೇಷ ಶ್ರದ್ಧೆ ತೋರಿಬಂದಿಲ್ಲ. ಆ ಭಾಗದಲ್ಲಿ ಈಗೀಗ ಕಣ್ಣು ಬಿಡುತ್ತಿದ್ದೇವೆ. ಜನ ಸಾಮಾನ್ಯರಲ್ಲೆಲ್ಲ ವಿಜ್ಞಾನವನ್ನು ಹರಡದ ಹೊರತು ದೇಶ ಅಬಿsವೃದ್ಧಿ ಸ್ಥಿತಿಗೆ ಬರಲಾರದು. ಇದಕ್ಕಾಗಿ ಆಂಗ್ಲ ಭಾಷೆಯಲ್ಲಿ ವಿಜ್ಞಾನ ಪರಿಶ್ರಮವುಳ್ಳ ದೇಶಾಬಿsಮಾನಿಗಳು ಸಾವಕಾಶ ಮಾಡದೆ ಈ ಕೆಲಸವನ್ನು ಮಾಡಲು ತೊಡಗಬೇಕೆಂದು ನಮ್ಮ ಪ್ರಾರ್ಥನೆ ಎಂದು ಅವರು ಕೇಳಿಕೊಂಡಿದ್ದಾರೆ.
ಅಂದಿನ ಪರಿಸ್ಥಿತಿಯಲ್ಲಿ ಅಂಥದೊಂದು ಪತ್ರಿಕೆಗೆ ಲೇಖನಗಳನ್ನೂ ಇತರ ಸಾಮಗ್ರಿಯನ್ನೂ ಒದಗಿಸುವುದು ಅತ್ಯಂತ ಪ್ರಯಾಸಕರ ವಾಗಿದ್ದಿರಬೇಕು. ಆದ್ದರಿಂದಲೇ ಅದರ ಜೀವಿತಕಾಲದಲ್ಲಿ ಹೊರಬಂದ ಎಲ್ಲ ಸಂಚಿಕೆಗಳಲ್ಲಿ ಪ್ರಕಟವಾದ ಒಟ್ಟು ಸುಮಾರು 40 ಲೇಖನಗಳಲ್ಲಿ ಅರ್ಧ ಭಾಗದಷ್ಟು ಲೇಖನಗಳಿಗೆ ವೆಂಕಟನಾರಣಪ್ಪನವರೇ ಲೇಖಕರು, ಇಲ್ಲವೇ ಸಹ ಲೇಖಕರು. ಉಳಿದವುಗಳಲ್ಲಿ ಆರೇಳು ಲೇಖನಗಳು ವೆಂಕಟೇಶ ಅಯ್ಯಂಗಾರ್ಯರು ಬರೆದವು. ಅವರಿಬ್ಬರಲ್ಲದೆ ಇತರ ಹತ್ತು ಹದಿನೈದು ಜನ ತಜ್ಞರನ್ನು ಅವರೇ ಪ್ರೇರೇಪಿಸಿ, ಅವರಿಂದಲೂ ಲೇಖನಗಳನ್ನು ಬರೆಸಿ ಪ್ರಕಟಸಿರುವುದು ಕಂಡುಬರುತ್ತದೆ. ವಿಜ್ಞಾನ ಲೇಖನಗಳಲ್ಲದೆ ವಿವಿಧ ವಿಜ್ಞಾನ ವಿಷಯ ಸಂಗ್ರಹ ಎಂಬ ಶೀರ್ಷಿಕೆಯಲ್ಲಿ ಹೊಸ ವೈಜ್ಞಾನಿಕ ಸಂಶೋಧನೆಗಳೇ ಮೊದಲಾದ ಸುದ್ದಿಗಳನ್ನು ನೇಚರ್, ಸೈಂಟಿಫಿಕ್ ಅಮೆರಿಕನ್ ಮುಂತಾದ ಪ್ರಸಿದ್ಧ ವಿಜ್ಞಾನ ಪತ್ರಿಕೆಗಳಿಂದ ಆಯ್ದು ಪತ್ರಿಕೆಯ ಸಂಚಿಕೆಗಳಲ್ಲಿ ಪ್ರಕಟಿಸುತ್ತಿದ್ದರು.
ಪತ್ರಿಕೆಗೆ ಸಾಮಗ್ರಿಯನ್ನೊದಗಿಸುವುದರಲ್ಲಿ ಎಷ್ಟೇ ಕಷ್ಟಗಳಿದ್ದರೂ ಅವುಗಳನ್ನೆದುರಿಸಿ ಮಾಸಪತ್ರಿಕೆಯನ್ನು ನಡೆಸಿಕೊಂಡು ಬರಲು ಅಗತ್ಯವಾದ ಶ್ರದ್ಧೆ ಉತ್ಸಾಹಗಳು ಸಂಪಾದಕರಲ್ಲಿದ್ದುವಾದರೂ ವಿಜ್ಞಾನಕ್ಕೇ ಮೀಸಲಾದ ಪತ್ರಿಕೆಯೊಂದು ಅಬಿsವೃದ್ಧಿ ಹೊಂದಲು ಕಾಲವಿನ್ನೂ ಪಕ್ವವಾಗಿರಲಿಲ್ಲ. ಜನತೆಯಿಂದ ಅದಕ್ಕೆ ಆಸರೆ ದೊರೆಯಲಿಲ್ಲ. ಹನ್ನೆರಡು ಸಂಚಿಕೆಗಳ ಒಂದು ಸಂಪುಟ ಮುಗಿಸಿ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು.
ಕರ್ನಾಟಕ ವಿಜ್ಞಾನ ಪ್ರಚಾರಿಣಿ ಸಮಿತಿಯ ಚಟುವಟಿಕೆ ವಿಜ್ಞಾನ ಪತ್ರಿಕೆಯ ನಿರ್ವಹಣೆಗೆ ಮಾತ್ರ ಮೀಸಲಾಗಿರಲಿಲ್ಲ. ಸಮಿತಿಯ ಆಶ್ರಯದಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ವಿಜ್ಞಾನ ವಿಷಯಗಳನ್ನು ಕುರಿತು ಕನ್ನಡದಲ್ಲಿ ಉಪನ್ಯಾಸ ಮಾಲೆಗಳು ನಡೆದುವೆಂದೂ ಅದಕ್ಕೆ ಮೈಸೂರು ಸರ್ಕಾರದ ನೆರವನ್ನು ಸಂಪಾದಿಸಿಕೊಳ್ಳಲಾಗಿತ್ತೆಂದೂ ಸಮಿತಿಯ ಗೌರವ ಕಾರ್ಯದರ್ಶಿಯಾಗಿದ್ದ ವೆಂಕಟನಾರಣಪ್ಪನವರೇ ನೀಡಿದ ಮೊದಲ ಉಪನ್ಯಾಸಕ್ಕೆ ಆಗಿನ ದಿವಾನರಾಗಿದ್ದ ಎಂ.ವಿಶ್ವೇಶ್ವರಯ್ಯನವರು ಬಂದು ಕನ್ನಡದಲ್ಲಿ ಉದ್ಘಾಟನ ಭಾಷಣ ಮಾಡಿದರೆಂದೂ ವಿಜ್ಞಾನದ ಸಂಚಿಕೆಯೊಂದರಿಂದ ತಿಳಿದುಬರುತ್ತದೆ.
ವಿಜ್ಞಾನ ಪ್ರಚಾರಿಣಿ ಸಮಿತಿ ಕೆಲಕಾಲದ ತರುವಾಯ ಅನಿವಾರ್ಯವಾಗಿ ತನ್ನ ಚಟುವಟಿಕೆಗಳನ್ನು ನಿಲ್ಲಿಸಿತ್ತೆಂದು ಕಾಣುತ್ತದೆ. ಆದರೆ ಸಮಿತಿಯ ಪ್ರಮುಖ ಕಾರ್ಯಕರ್ತ ರಾಗಿದ್ದ ವೆಂಕಟನಾರಣಪ್ಪನವರೂ ವೆಂಕಟೇಶ ಅಯ್ಯಂಗಾರ್ಯರೂ ತಮ್ಮ ಗುರಿ ಸಾಧನೆಗಾಗಿ ಬೇರೆ ಮಾರ್ಗಗಳನ್ನವಲಂಬಿಸಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಮೈಸೂರು ಯುವರಾಜರೂ ಆಗಿದ್ದ ಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ಸಹಾಯದ್ರವ್ಯ ಪಡೆದು ಅವರ ಹೆಸರಿನಲ್ಲಿ ಒಂದು ವಿಜ್ಞಾನ ಗ್ರಂಥಮಾಲೆಯನ್ನು ಪ್ರಾರಂಬಿsಸಿ, ಅದರ ಮೊದಲ ಕುಸುಮವಾಗಿ ನಂಗಪುರಂ ವೆಂಕಟೇಶ ಅಯ್ಯಂಗಾರ್ಯರ ಜ್ಯೋತಿರ್ವಿನೋದಿನಿ ಎಂಬ ಪುಸ್ತಕವನ್ನು 1931ರಲ್ಲಿ ಹೊರಡಿಸಿದರು. ಇದು ಫ್ರೆಂಚ್ ವಿಜ್ಞಾನ ಲೇಖಕ ಕೆಮಿಲ್ ಫ್ಲಮೇರಿಯೋನ ಅಸ್ಟ್ರಾನಮಿ ಫಾರ್ ವಿಮೆನ್ ಎಂಬ ಪುಸ್ತಕದ ಇಂಗ್ಲಿಷ್ ಅನುವಾದದ ಪುನರನುವಾದ. ಇದಕ್ಕೆ ಬೆಳ್ಳಾವೆ ವೆಂಕಟನಾರಣಪ್ಪನವರು ಮುನ್ನುಡಿ ಬರೆದಿದ್ದಾರೆ. ಅಲ್ಲಿಂದ ಎಂಟು ವರ್ಷಗಳ ತರುವಾಯ (1939) ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಹಲವು ವರ್ಷಗಳ ಮೇಲೆ, ವೆಂಕಟನಾರಣಪ್ಪನವರು ಜೀವವಿಜ್ಞಾನವೆಂಬ 350ಪುಟಗಳ ಪುಸ್ತಕವನ್ನು ಬರೆದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆಯಲ್ಲಿ ಪ್ರಕಟಿಸಿದರು. ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ನಿರ್ಮಿಸುವುದರಲ್ಲಿ ಈ ಇಬ್ಬರು ಮಹನೀಯರು ತಳೆದ ಆಸ್ಥೆ, ಅದರ ಬೆಳೆವಣಿಗೆಯಲ್ಲಿ ಅವರು ವಹಿಸಿದ ಪಾತ್ರ ಬಹು ಹಿರಿದು ಮತ್ತು ಸ್ತುತ್ಯರ್ಹವಾದುದು.
ಕನ್ನಡ ವಿಜ್ಞಾನ ಸಾಹಿತ್ಯದ ಬೆಳೆವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ ಇನ್ನೊಬ್ಬ ವ್ಯಕ್ತಿ ಶಿವರಾಮ ಕಾರಂತರು ಸ್ವತಃ ವಿಜ್ಞಾನಿಯಲ್ಲ, ಶಾಲಾ ಕಾಲೇಜುಗಳಲ್ಲಿ ಕ್ರಮಬದ್ಧವಾಗಿ ವಿಜ್ಞಾನವನ್ನು ವ್ಯಾಸಂಗ ಮಾಡಿದವರೂ ಅಲ್ಲ. ಆದರೆ ಅವರು ಆಸಕ್ತಿವಹಿಸದಿದ್ದ ವಿಷಯವಿಲ್ಲ. ಕಾರ್ಯಾಚರಣೆಗೆ ಕೈ ಹಾಕದ ಕ್ಷೇತ್ರವಿಲ್ಲ. ಬಹುಮುಖ ವ್ಯಕ್ತಿತ್ವದ ಈ ಮೇಧಾವಿ ಕನ್ನಡ ಜನತೆಯಲ್ಲಿ ತಾಯ್ನುಡಿಯ ಮೂಲಕವೇ ವೈಜ್ಞಾನಿಕ ಪ್ರಜ್ಞೆಯನ್ನು ಮೂಡಿಸುವ ಅಗತ್ಯವನ್ನು ಕಂಡುಕೊಂಡರು. ಆ ಕಾರ್ಯವನ್ನು ಕೈಗೊಳ್ಳಲು ಆವಶ್ಯವಾದ ವಿಜ್ಞಾನ ಶಿಕ್ಷಣವನ್ನು ಪಡೆದಿರದಿದ್ದರೂ ಸ್ವಂತ ಶ್ರಮದಿಂದ ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡರು. ಇಂಗ್ಲಿಷ್ ಭಾಷೆಯಲ್ಲಿ ಹೇರಳವಾಗಿ ದೊರೆಯುವ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಆಳವಾಗಿ ಮತ್ತು ವಿಸ್ತಾರವಾಗಿ ಅಭ್ಯಾಸಮಾಡಿ ತಾವು ಪಡೆದ ಜ್ಞಾನವನ್ನು ಕನ್ನಡ ಭಾಷೆಯ ಮೂಲಕ ಕನ್ನಡಿಗರಿಗೆ ನೀಡುವ ಪ್ರಯತ್ನ ಮಾಡಿದರು. 1931ರಲ್ಲಿ ಅವರು ಹೊರತಂದ ಬಾಲ ಪ್ರಪಂಚ ಎಂಬ ಮೂರು ಸಂಪುಟಗಳ ವಿಶ್ವಕೋಶದಲ್ಲಿ ವಿಜ್ಞಾನವನ್ನು ಕುರಿತ ಲೇಖನಗಳಿಗೆ ಗಣನೀಯ ಸ್ಥಾನವನ್ನು ಕೊಟ್ಟಿದ್ದಾರೆ. ತರುವಾಯ 1959-64ರ ಅವದಿಯಲ್ಲಿ ವಿಜ್ಞಾನಕ್ಕೆ ಮೀಸಲಾದ ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ ಎಂಬ ವಿಜ್ಞಾನ ವಿಶ್ವಕೋಶವನ್ನು ಪ್ರಕಟಿಸಿದ್ದಾರೆ. ಅಲ್ಲದೆ ಒಳ್ಳೆಯ ಇಂಗ್ಲಿಷ್ ಪುಸ್ತಕಗಳನ್ನು ಆಯ್ದುಕಂಡು ಅನುವಾದ ಮಾಡಿ ಪ್ರಕಟಿಸಿದ್ದಾರೆ. ನುರಿತ ವಿಜ್ಞಾನಿಯ, ವಿಜ್ಞಾನ ಬೋಧಕನ ನಿಖರತೆ ನಿಷ್ಕೃಷ್ಟತೆಗಳು ಅವರ ಬರೆಹಗಳಲ್ಲಿ ಕಂಡುಬರದಿರಬಹುದು; ಆದರೆ ವಿಜ್ಞಾನವನ್ನು ಜನಪ್ರಿಯಗೊಳಿಸಬಲ್ಲ ಸಾಹಿತ್ಯವನ್ನು ಅವರಷ್ಟು ಅಗಾಧ ಪ್ರಮಾಣದಲ್ಲಿ ಸೃಷ್ಟಿಮಾಡಿ ಕನ್ನಡ ನಾಡಿನ ವಿವಿಧ ಪ್ರಾಂತ್ಯದ ಓದುಗರನ್ನು ತಲುಪಿಸಿರುವ ಬೇರೊಬ್ಬ ಲೇಖಕನಿಲ್ಲ.
ವಿಜ್ಞಾನ ಅತ್ಯದಿsಕ ವೇಗದಲ್ಲಿ ಬೆಳೆಯುತ್ತಿರುವ ಇಂದಿನ ಯುಗದಲ್ಲಿ ಹಿಂದೆ ಬೀಳದೆ ವಿಜ್ಞಾನದ ಪ್ರಗತಿಯನ್ನು ಗಮನದಲ್ಲಿರಿಸಿ ಕೊಂಡು ಅತ್ಯಾಧುನಿಕ ವಿಷಯಗಳೆಲ್ಲವನ್ನೂ ಕನ್ನಡ ಭಾಷೆಯ ಮೂಲಕ ನಿಷ್ಕೃಷ್ಟವಾಗಿ ತಿಳಿಯಹೇಳುವ ಪ್ರಯತ್ನ ಮಾಡಿ ಯಶಸ್ಸು ಗಳಿಸಿದ ಲೇಖಕರೆಂದರೆ ಆರ್.ಎಲ್.ನರಸಿಂಹಯ್ಯ. ಸೆಂಟ್ರಲ್ ಕಾಲೇಜಿನಲ್ಲಿ ಭೌತವಿಜ್ಞಾನದ ಅಧ್ಯಾಪಕರಾಗಿದ್ದು ನಿವೃತ್ತರಾದ ಅನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮತ್ತು ಆಚಾರ್ಯ ಪಾಠಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಇವರು ಕಾರ್ಯನಿರತ ವಿಜ್ಞಾನಿ ಮತ್ತು ವಿಜ್ಞಾನ ಬೋಧಕರಾಗಿದ್ದರು. ಶಕ್ತಿ, ಜಗತ್ತುಗಳ ಹುಟ್ಟು ಮತ್ತು ಸಾವು, ನಕ್ಷತ್ರ ದರ್ಶನ ಮುಂತಾದ ಉತ್ತಮ ಗ್ರಂಥಗಳನ್ನು ರಚಿಸಿದರು. ಎರಡು ಒಳ್ಳೆಯ ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಅನುವಾದಿಸಿದರು. ಪ್ರಬುದ್ಧ ಕರ್ಣಾಟಕದಲ್ಲಿಯೂ ವಿವಿಧ ದಿನಪತ್ರಿಕೆ ವಾರಪತ್ರಿಕೆಗಳಲ್ಲಿಯೂ ನಲವತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದರು. ನರಸಿಂಹಯ್ಯನವರ ವಿಷಯ ನಿರೂಪಣೆ ನಿಖರ; ಭಾಷೆ ಮತ್ತು ಶೈಲಿ ಬಿಗಿ. ಪಾರಿಭಾಷಿಕ ಶಬ್ದಗಳ ವಿಷಯದಲ್ಲಿ ಇವರು ಒಂದು ನಿರ್ದಿಷ್ಟ ನಿಲುವನ್ನು ತಳೆದಿದ್ದರು. ಪದಾರ್ಥಗಳು, ಸಲಕರಣೆಗಳು ಮುಂತಾದವುಗಳ ಹೆಸರುಗಳನ್ನು ಇಂಗ್ಲಿಷ್ ಭಾಷೆಯಿಂದ ಎರವಲು ಪಡೆಯುವುದು ಮತ್ತು ತತ್ತ್ವನಿಯಮ, ಪರಿಣಾಮಗಳಿಗೆ ಸಂಬಂದಿsಸಿದ ಶಬ್ದಗಳಿಗೆ ಸಮಾನ ಪದಗಳನ್ನು ಸಂಸ್ಕೃತದ ಸಹಾಯದಿಂದ ಕನ್ನಡದಲ್ಲಿ ಟಂಕಿಸುವುದು ಸರಿಯಾದ ಮಾರ್ಗವೆಂಬ ಇವರ ಅಬಿsಪ್ರಾಯಕ್ಕೆ ಅನುಸಾರವಾಗಿ ಅತ್ಯಂತ ಔಚಿತ್ಯಪುರ್ಣವಾದ ಪದಗಳನ್ನು ಸೃಷ್ಟಿಮಾಡಿ ಇವರು ತಮ್ಮ ಬರೆವಣಿಗೆಯಲ್ಲಿ ಬಳಸುತ್ತಿದ್ದರು. ಆದರೆ ಅವು ಸಾಕಷ್ಟು ಚಲಾವಣೆಗೆ ಬರಲಿಲ್ಲವಾದ್ದರಿಂದ ಇವರ ಬರೆವಣಿಗೆ ಕೆಲವು ವೇಳೆ ಸ್ವಲ್ಪ ಭಾರವಾಗಿ ಕಾಣಿಸುತ್ತಿದ್ದುದ್ದು ನಿಜ. ಆದರೆ ಇವರು ಮಾಡುತ್ತಿದ್ದ ಉಪನ್ಯಾಸಗಳು ಅತ್ಯಂತ ಜನಾಕರ್ಷಣೀಯವಾಗಿದ್ದುವು. ಜನಪ್ರಿಯ ವಿಜ್ಞಾನ ಸಾಹಿತ್ಯದ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಘಸಂಸ್ಥೆಗಳಲ್ಲಿ ಮೈಸೂರು ವಿಶ್ವವಿದ್ಯಾಯನಿಲಯವನ್ನೂ ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘದ ಆಶ್ರಯದಲ್ಲಿ ಜನ್ಮವೆತ್ತಿ (1919) ಈಗ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುತ್ತಿರುವ ಪ್ರಬುದ್ಧ ಕರ್ಣಾಟಕ ಪತ್ರಿಕೆಯನ್ನೂ ಮೊದಲು ಹೆಸರಿಸಬೇಕು. ಬಹುಶಃ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ಮೊತ್ತಮೊದಲ ಕನ್ನಡ ವಿಜ್ಞಾನ ಗ್ರಂಥವೆಂದರೆ 1924ರಲ್ಲಿ ಪ್ರಕಟವಾದ ಎಸ್.ಎನ್.ನರಸಿಂಹಯ್ಯನವರ ಖಗೋಳಶಾಸ್ತ್ರ. ಕೆಲಕಾಲದ ಮೇಲೆ ವಿಶ್ವವಿದ್ಯಾನಿಲಯದ ಪ್ರಕಟಣ ಶಾಖೆಯ ಚಟುವಟಿಕೆಗಳು ಬೆಳೆದು ವಿವಿಧ ಗ್ರಂಥಮಾಲೆಗಳಿಗೆ ಸೇರಿದಂತೆ ಅನೇಕ ವಿಜ್ಞಾನ ಪುಸ್ತಕಗಳು ಬೆಳಕು ಕಂಡಿವೆ. ಈ ಗ್ರಂಥಮಾಲೆಗಳ ಪೈಕಿ ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸಮಾಲೆ ನಡೆಸಿರುವ ಕೆಲಸ ಗಮನಾರ್ಹವಾದುದು.
ಜಿ.ಹನುಮಂತರಾಯರ ನೇತೃತ್ವದಲ್ಲಿ ರೂಪುಗೊಂಡ ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘ ಗ್ರಾಮಾಂತರ ಪ್ರದೇಶಗಳಲ್ಲಿ ಸಂಘದ ಸದಸ್ಯರಿಂದ ಉಪನ್ಯಾಸಗಳನ್ನು ನಡೆಸುವುದು, ತರುವಾಯ ಈ ಉಪನ್ಯಾಸಗಳ ಸಾರಾಂಶವನ್ನು ಕಿರುಹೊತ್ತಗೆಗಳ ರೂಪದಲ್ಲಿ ಪ್ರಕಟಿಸುವುದು ಈ ಕಾರ್ಯವನ್ನು ನಡೆಸುತ್ತಿತ್ತು. ಈ ಕೆಲಸಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗವೆಂಬ ಒಂದು ಸಂಸ್ಥೆಯನ್ನೇ ಸ್ಥಾಪಿಸಿದೆ. ಪ್ರಚಾರೋಪನ್ಯಾಸ ಮಾಲೆಯಲ್ಲಿ ಪ್ರಕಟವಾಗಿರುವ ವಿಜ್ಞಾನ ಪುಸ್ತಕಗಳು ಅತ್ಯಂತ ಜನಪ್ರಿಯತೆಯನ್ನು ಗಳಿಸಿವೆೆಯೆಂದು ಧಾರಾಳವಾಗಿ ಹೇಳಬಹುದು. ಅವುಗಳಲ್ಲಿ ಹಲವು ಮೂರು ನಾಲ್ಕು ಬಾರಿ ಅಚ್ಚಾಗಿ ಹೊರಬಿದ್ದಿರುವುದೂ ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಇದೇ ಮಾದರಿಯನ್ನನುಸರಿಸಿ ಕಿರುಹೊತ್ತಗೆಗಳನ್ನು ಹೊರತರುತ್ತಿರುವುದೂ ಅವುಗಳ ಜನಪ್ರಿಯತೆಗೆ ಸಾಕ್ಷಿ.ಕನ್ನಡದಲ್ಲಿ ಉತ್ತಮ ಸಾಹಿತಿಗಳನ್ನು ಗುರುತಿಸಿ ಅಂಥ ಅನೇಕರಿಗೆ ಪ್ರೋತ್ಸಾಹ ನೀಡಿ ಅವರನ್ನು ಬೆಳಕಿಗೆ ತಂದ ಕೀರ್ತಿ ಪಡೆದಿರುವ ಪ್ರಬುದ್ಧ ಕರ್ಣಾಟಕ ಪತ್ರಿಕೆ ವಿಜ್ಞಾನ ಲೇಖಕರನ್ನು ತಯಾರಿಸುವುದರಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಪ್ರಾರಂಭದಲ್ಲಿ ಪ್ರಬುದ್ಧ ಕರ್ಣಾಟಕ ಕೇವಲ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಯಾಗಿತ್ತು. ಆದರೆ ವಿಜ್ಞಾನ ಸಾಹಿತ್ಯ ಜೊತೆಯಲ್ಲಿಯೇ ಬೆಳೆಯದೆ ಹೋದಲ್ಲಿ ಭಾಷೆಯ ಮತ್ತು ಸಾಹಿತ್ಯದ ಸರ್ವತೋಮುಖ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಬಹು ಬೇಗನೆ ಈ ಪತ್ರಿಕೆ ಅರಿತುಕೊಂಡು 1923ರಲ್ಲಿಯೇ ಅಂದರೆ ಅದರ ಐದನೆಯ ಸಂಪುಟದ ಮೊದಲ ಸಂಚಿಕೆಯಲ್ಲಿಯೇ ವಿಜ್ಞಾನ ಲೇಖನಗಳಿಗೆ ಅವಕಾಶ ಕಲ್ಪಿಸಿಕೊಟ್ಟಿತು. ಅಲ್ಲಿಂದ ಮುಂದೆ ಕ್ರಮೇಣ ವಿಜ್ಞಾನ ಲೇಖನಗಳು ಹೆಚ್ಚು ಹೆಚ್ಚಾಗಿ ಬರಲು ಪ್ರಾರಂಬಿsಸಿದುದರಿಂದ 1963ರ ವೇಳೆಗೆ ಪ್ರಬುದ್ಧ ಕರ್ಣಾಟಕ ಆರು ತಿಂಗಳಿಗೊಮ್ಮೆ ಒಂದು ವಿಜ್ಞಾನ ವಿಶೇಷಾಂಕವನ್ನು ಪ್ರಕಟಿಸಬೇಕಾಯಿತು. ಇದುವರೆಗೆ ಈ ಪತ್ರಿಕೆಯ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳ ಸಂಖ್ಯೆ ಸುಮಾರು 300ಕ್ಕೂ ಹೆಚ್ಚು. ಈ ಪತ್ರಿಕೆ ಹಲವಾರು ಹೊಸ ವಿಜ್ಞಾನ ಲೇಖಕರನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡಿದೆ.
1969ರಲ್ಲಿ ಪ್ರಬುದ್ಧ ಕರ್ಣಾಟಕ ಅದರ ಚಿನ್ನದ ಹಬ್ಬವನ್ನಾಚರಿಸಿದ ಸಂದರ್ಭದಲ್ಲಿ ಹೊರತಂದ ಚಿನ್ನದ ಸಂಚಿಕೆಯ ವಿಜ್ಞಾನ ವಿಭಾಗ ಕನ್ನಡ ವಿಜ್ಞಾನ ಸಾಹಿತ್ಯದ ಬೆಳೆವಣಿಗೆಯ ಮಾರ್ಗದಲ್ಲಿ ಒಂದು ಪ್ರಮುಖ ಮೈಲುಗಲ್ಲು. 1600 ಪುಟಗಳ ಈ ಸಂಚಿಕೆ ಐವತ್ತೇಳು ಮಂದಿ ವಿಜ್ಞಾನ ಲೇಖಕರ ಸಹಕಾರದಿಂದ ರೂಪುಗೊಂಡಿತ್ತು. ವಿಜ್ಞಾನದ ಇತಿಹಾಸದ ಮುಖ್ಯ ಘಟ್ಟಗಳೆನ್ನಬಹುದಾದ ಮಹತ್ತರ ಸಂಶೋಧನೆಗಳನ್ನು ಮತ್ತು ಅವಕ್ಕೆ ಕಾರಣರಾದ ಮಹಾವಿಜ್ಞಾನಿಗಳನ್ನು ಕುರಿತ ಲೇಖನಗಳನ್ನು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ವಿವಿಧ ವಿಜ್ಞಾನ ವಿಭಾಗಗಳಲ್ಲಿ ಆಗಿರುವ ಪ್ರಗತಿಯ ಸಮೀಕ್ಷೆಗಳು, ಇಂದು ಬಹುಪಾಲು ವಿಜ್ಞಾನಿಗಳ ಆಸಕ್ತಿಯನ್ನು ಕೆರಳಿಸಿರುವ ಸಂಶೋಧನ ಕ್ಷೇತ್ರಗಳು, ಭಾರತದಲ್ಲಿ ವಿಜ್ಞಾನದ ಪ್ರಗತಿ ಮುಂತಾದ ವಿಷಯಗಳಿಗೆ ಸಂಬಂದಿsಸಿದಂತೆ ಒಟ್ಟು ಐವತ್ತೇಳು ಲೇಖನಗಳಿಂದ ಕೂಡಿದ ಈ ದೊಡ್ಡ ಸಂಚಿಕೆ ಕನ್ನಡ ವಿಜ್ಞಾನ ಸಾಹಿತ್ಯ ಪ್ರಬುದ್ಧವಾಗಿದೆ ಎಂಬುದರ ಕುರುಹು. ಪ್ರಬುದ್ಧ ಕರ್ಣಾಟಕದ ಚಿನ್ನದ ಸಂಚಿಕೆಯ ಯಶಸ್ಸಿನಿಂದ ಪ್ರೇರಿತರಾಗಿ ಮೈಸೂರು ವಿಶ್ವವಿದ್ಯಾನಿಲಯ ವಿಜ್ಞಾನಕ್ಕೆ ಮೀಸಲಾದ ಪ್ರತ್ಯೇಕ ಪತ್ರಿಕೆ ವಿಜ್ಞಾನ ಕರ್ಣಾಟಕವನ್ನು ಪ್ರಾರಂಬಿsಸಿತು (1969). ಇದು ನಿಯತಕಾಲಿಕವಾಗಿ ಪ್ರಕಟವಾಗುತ್ತಿದೆ. ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿ ನೋಡಿದರೆ ಈಗ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಗಾತ್ರದಲ್ಲಿ ಹಿರಿದಾಗಿ ಬೆಳೆದಿದೆ. ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಪ್ರಕಟವಾಗುತ್ತಿರುವ ವಿಜ್ಞಾನ ಕರ್ಣಾಟಕವಲ್ಲದೆ ದಕ್ಷಿಣ ಕನ್ನಡದ ಶ್ರೀನಿವಾಸ ನಗರದಿಂದ ವಿಜ್ಞಾನ ಸಂಘದವರು ವಿಜ್ಞಾನ ಲೋಕವೆಂಬ ಇನ್ನೊಂದು ಪತ್ರಿಕೆಯನ್ನು 1967 ಅಕ್ಟೋಬರದಿಂದ ಎರಡು ವರ್ಷಗಳ ಕಾಲ ತ್ರೈಮಾಸಿಕವಾಗಿಯೂ 1969ರ ನವೆಂಬರ್ ಅನಂತರ ಮಾಸಿಕವಾಗಿಯೂ ಪ್ರಕಟಿಸಿದ್ದಾರೆ. ವಿಜ್ಞಾನಕ್ಕೆ ಮೀಸಲಾದ ಖಾಸಗಿ ಪತ್ರಿಕೆಯೊಂದು ನಾಲ್ಕೈದು ವರ್ಷಗಳ ಕಾಲ ತ್ರೈಮಾಸಿಕವಾಗಿ ಜೀವಂತವಾಗಿ ಉಳಿದದ್ದು ಒಂದು ದೊಡ್ಡ ವಿಷಯ. ಸುಮಾರು 45 ವರ್ಷಗಳ ಕೆಳಗೆ ಬಿ.ವಿ.ಸುಬ್ಬರಾಯಪ್ಪನವರ ಸಂಪಾದಕತ್ವದಲ್ಲಿ ಪ್ರಾರಂಭವಾದ ವಿಜ್ಞಾನ ಯುಗ ಒಂದು ವರ್ಷ ತುಂಬುವುದರಲ್ಲಿ ಅಳಿದುಹೋದದ್ದನ್ನು ನೆನಸಿಕೊಂಡರೆ ವಾತಾವರಣ ವಿಶೇಷವಾಗಿ ಬದಲಾಯಿಸಿರುವುದು ಸ್ಪಷ್ಟವಾಗುತ್ತದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಿಜ್ಞಾನ ಸಂಗಾತಿ ಎಂಬ ತ್ರೈಮಾಸಿಕ ಪ್ರಕಟವಾಗುತ್ತಿದೆ. ವಿಜ್ಞಾನಕ್ಕೆ ಮೀಸಲಾದ ಇನ್ನೊಂದು ಪತ್ರಿಕೆ ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದವರು ಪ್ರಕಟಿಸುತ್ತಿರುವ ಆಹಾರ ವಿಜ್ಞಾನ. ಈ ಪತ್ರಿಕೆಗಳಲ್ಲದೆ ವಾರಪತ್ರಿಕೆಗಳು, ಮಾಸಿಕಗಳು ಮತ್ತು ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು ಸಾಮಾನ್ಯವಾಗಿ ಪ್ರತಿಯೊಂದು ಸಂಚಿಕೆಯಲ್ಲೂ ವಿಜ್ಞಾನ ಲೇಖನಗಳನ್ನು ಪ್ರಕಟಿಸುತ್ತಿರುವುದನ್ನು ಕಾಣಬಹುದು.
ಇದೆಲ್ಲದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ವಿಜ್ಞಾನ ಜನಜೀವನಕ್ಕೆ ಸಂಬಂಧವಿಲ್ಲದ, ತಜ್ಞರಿಗೆ ಮಾತ್ರ ಸಂಬಂಧಪಟ್ಟ ಪ್ರತ್ಯೇಕ ವಿಷಯವೆಂಬ ಭಾವನೆ ಕ್ರಮೇಣ ಕಡಿಮೆಯಾಗುತ್ತಿದೆ. ವಿಜ್ಞಾನದಲ್ಲಿ ಪರಿಶ್ರಮ ಉಳ್ಳವರು ಕನ್ನಡದಲ್ಲಿ ಬರೆಯಲು ಮುಂದೆ ಬರುತ್ತಿದ್ದಾರೆ. ಆದರೆ ಗಾತ್ರದಲ್ಲಿ ಬೆಳೆಯುತ್ತಿರುವ ಈ ಸಾಹಿತ್ಯ ಗುಣದಲ್ಲಿಯೂ ಅದೇ ಪ್ರಮಾಣದಲ್ಲಿ ಬೆಳೆಯುತ್ತಿಲ್ಲವೆಂಬ ದೂರೂ ಕೇಳಿಬರುತ್ತಿದೆ. ಈಗ ಇದರಲ್ಲಿ ಹೆಚ್ಚಿನ ಸತ್ಯಾಂಶವಿಲ್ಲ. ಕನ್ನಡ ವಿಜ್ಞಾನ ಸಾಹಿತ್ಯ ನಿರ್ಮಾಣ ಅರ್ಥಪುರ್ಣವಾದ ದಿಕ್ಕಿನಲ್ಲಿ ಸಾಗಿದೆ. (ಎ.ಕೆ.ಬಿ.)