ಕನ್ನಡದಲ್ಲಿ ನವ್ಯಕಾವ್ಯ

ಕನ್ನಡದಲ್ಲಿ ನವ್ಯಕಾವ್ಯ

ಬದಲಾಯಿಸಿ

ನವೋದಯ ಕಾವ್ಯದಂತೆ ನವ್ಯಕಾವ್ಯವ ಇಂಗ್ಲಿಷ್ ಕಾವ್ಯದ ಪ್ರೇರಣೆಯಿಂದಲೇ ಹುಟ್ಟಿಕೊಂಡದ್ದು. ನವ್ಯಕಾವ್ಯ ಇಂಗ್ಲಿಷಿನ ಮಾಡರ್ನ್ ಪೊಯಿಟ್ರಿಗೆ ಸಂವಾದಿಯಾದ ಪದ. ನವೋದಯ ಕಾವ್ಯಕ್ಕೆ ಆಧುನಿಕ ಕಾವ್ಯ ಎಂಬ ಇನ್ನೊಂದು ಹೆಸರೂ ಬಳಕೆಯಲ್ಲಿ ಇದ್ದಿತಾದ್ದರಿಂದ ಇಂಗ್ಲಿಷಿನ ಮಾಡರ್ನ್ ಪೊಯಿಟ್ರಿಯಿಂದ ಪ್ರೇರಣೆಪಡೆದ ಕನ್ನಡ ಕಾವ್ಯವನ್ನು ಆಧುನಿಕ ಕಾವ್ಯ ಎಂದು ಕರೆಯುವಂತಿರಲಿಲ್ಲ. ಆದ್ದರಿಂದ ಅದನ್ನು ಕನ್ನಡದ ಸಂದರ್ಭದಲ್ಲಿ ನವ್ಯಕಾವ್ಯ ಎಂದು ಕರೆಯಬೇಕಾಗಿ ಬಂದಿತೆಂದು ತೋರುತ್ತದೆ.

ಇತಿಹಾಸ

ಬದಲಾಯಿಸಿ

ನಮೋದಯ ಕಾವ್ಯಕ್ಕಿಂತ ಭಿನ್ನರೀತಿಯ ಕಾವ್ಯಪ್ರಕಾರವಿದು ಎಂದು ನಿರ್ದೇಶಿಸುವ ಅನುಕೂಲಕ್ಕಾಗಿ ಬಳಸಿದ ಪಾರಿಭಾಷಿಕ ಪದವೆಂದು ಮಾತ್ರ ಇದನ್ನು ತಿಳಿಯಬೇಕಾಗುತ್ತದೆ. ಶ್ರೇಷ್ಠಕಾವ್ಯ ಯಾವ ಕಾಲಕ್ಕೂ ನವ್ಯವಾಗಿಯೆ ಇರುತ್ತದೆ. ಇದು ನವ್ಯ ಎಂದಕೂಡಲೆ ಎಲ್ಲ ರೀತಿಯಿಂದಲೂ ನವ್ಯ-ನ ಭೂತೋ ನ ಭವಿಷ್ಯತಿ ಎಂದು ಅರ್ಥ ಹಚ್ಚಬೇಕಾಗಿಲ್ಲ ಎಂಬ ಗೋಪಾಲಕೃಷ್ಣ ಅಡಿಗರ ಮಾತನ್ನು ಇಲ್ಲಿ ನೆನೆಯಬಹುದು (ಹೊಸ ಕವಿತೆಯನ್ನು ಕುರಿತು, 1953). ನವ್ಯಕಾವ್ಯ ಎಂಬ ಕಾವ್ಯ ಪ್ರಕಾರಕ್ಕೆ ಆ ಹೆಸರನ್ನು ಕೊಟ್ಟವರು ವಿ.ಕೃ. ಗೋಕಾಕರು.

ಕನ್ನಡದ ನವೋದಯ ಕಾವ್ಯ 19ನೆಯ ಶತಮಾನದ ಇಂಗ್ಲೆಂಡಿನ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯದಿಂದ ಪ್ರೇರಣೆ ಪಡೆದದ್ದಾಗಿತ್ತು. ನಮ್ಮಲ್ಲಿ 20ನೆಯ ಶತಮಾನದ ಪುರ್ವಾರ್ಧದಲ್ಲಿ ಅದರ ಪ್ರಭಾವ ಗಾಢವಾಗಿತ್ತು. ಆ ಹೊತ್ತಿಗಾಗಲೇ ಇಂಗ್ಲೆಂಡಿನಲ್ಲಿ ತೀವ್ರತರವಾದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬದಲಾವಣೆಗಳಿಂದಾಗಿ ಕಾವ್ಯ ಕ್ಷೇತ್ರದಲ್ಲಿಯೂ ಅಪುರ್ವವಾದ ಬದಲಾವಣೆಗಳು ಆಗತೊಡಗಿದ್ದವು. ರೊಮ್ಯಾಂಟಿಕ್ ಯುಗ ಮುಗಿದು ವಿಕ್ಟೋರಿಯನ್ ಯುಗವೂ ಕಳೆದು ಟಿ.ಇ.ಹ್ಯೂಮ್ ಮುಂತಾದವರು ಕಾವ್ಯ ಅಭಿವ್ಯಕ್ತಿ ತಂತ್ರ ಮತ್ತು ಧೋರಣೆಗಳಿಗೆ ಸಂಬಂದಿsಸಿದಂತೆ ಭಿನ್ನ ನಿಲವನ್ನು ಪ್ರತಿಪಾದಿಸಿ ಪ್ರತಿಮಾನಿಷ್ಠ ಆಂದೋಲನಕ್ಕೆ ಕಾರಣರಾಗಿದ್ದರು. ಎಜ್ರಾ ಪೌಂಡ್ ಕವಿಯೂ ಅದನ್ನು ಬೆಂಬಲಿಸಿದ್ದ. ಮುಂದೆ ಟಿ.ಎಸ್. ಎಲಿಯಟ್ ಪ್ರತಿಮಾನಿಷ್ಠ ಕಾವ್ಯ ರೀತಿಯೊಂದಿಗೆ ಅನುಭಾವ ಪಂಥ ಮತ್ತು ಫ್ರೆಂಚ್ ಸಂಕೇತನಿಷ್ಠ ಕಾವ್ಯಗಳ ಉತ್ತಮಾಂಶಗಳನ್ನೂ ಸಮನ್ವಯಗೊಳಿಸಿ ಹೆಚ್ಚು ಸಂಕೀರ್ಣವೂ ಸಮಗ್ರವೂ ಆದ ಕಾವ್ಯ ರೀತಿಯನ್ನೂ ವಿಮರ್ಶಾ ವಿಧಾನವನ್ನೂ ಬೆಳೆಸಿದ. ಈ ಮಧ್ಯೆ ಯೇಟ್ಸ್‌ ಕವಿಯೂ ತನ್ನ ಕೊನೆಗಾಲದ ಕವನಗಳಲ್ಲಿ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಂಥ ನವ್ಯಕಾವ್ಯವನ್ನು ಬರೆಯುತ್ತಿದ್ದ. ಎಲಿಯಟ್ನ ವೇಸ್ಟ್‌ಲ್ಯಾಂಡ್ ಕಾವ್ಯ ಪ್ರಕಟವಾಗುವುದಕ್ಕಿಂತ ನಾಲ್ಕು ವರ್ಷ ಮೊದಲು (1918) ಹಾಪ್ಕಿನ್ಸ್‌ನ ಕವನಗಳ ಸಂಗ್ರಹವನ್ನು ಆತನ ಮರಣೋತ್ತರಕಾಲದಲ್ಲಿ ರಾಬರ್ಟ್ ಬ್ರಿಡ್ಜಸ್ ಎಂಬುವನು ಪ್ರಕಟಿಸಿದ್ದ.

ನವ್ಯಕಾವ್ಯದ ಉಗಮ -ಹಾಪ್ಕಿನ್ಸ್‌ ಮತ್ತು ಇತರರ ಪ್ರಭಾವ

ಬದಲಾಯಿಸಿ

ಹಾಪ್ಕಿನ್ಸ್‌ ತನ್ನ ಕಾವ್ಯದಲ್ಲಿ ಭಾಷೆ ಮತ್ತು ಛಂದೋರೂಪಗಳಿಗೆ ಸಂಬಂದಿsಸಿದಂತೆ ಹೊಸ ಬಗೆಯ ಪ್ರಯೋಗಗಳನ್ನು ನಡೆಸಿದ್ದ. ಮುಂದೆ ಬಂದ ತರುಣ ಪೀಳಿಗೆಯ ಆಡೆನ್, ಸಿ.ಡೇ.ಲೂಯಿ, ಸ್ಟೀಫನ್ ಸ್ಪೆಂಡರ್, ಡಿಲಾನ್ ಥಾಮಸ್ ಮುಂತಾದ ಕವಿಗಳು ಹಾಪ್ಕಿನ್ಸ್‌ ಮತ್ತು ಎಲಿಯಟ್ ಈ ಇಬ್ಬರ ಕಾವ್ಯಗಳ ಪ್ರಭಾವಕ್ಕೂ ಒಳಗಾದರು. ಮುಂದೆ ರಾಜಕೀಯವಾಗಿ ವಾಮಪಂಥೀಯ ಒಲವನ್ನು ಬೆಳೆಸಿಕೊಳ್ಳುವುದರ ಮೂಲಕ ಹಾಪ್ಕಿನ್ಸ್‌ ಮತ್ತು ಎಲಿಯಟರ ಪ್ರಭಾವದಿಂದಲೂ ಬಿಡಿಸಿಕೊಳ್ಳಲು ತರುಣ ಕವಿಗಳು ಹಾತೊರೆದರು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಹಿಟ್ಲರ್ ಮತ್ತು ರಷ್ಯ ನಡುವಿನ ಒಡಂಬಡಿಕೆಯಾಗಿ ಅವರ ವಾಮಪಂಥೀಯ ಧೋರಣೆ ಕರಗಿಹೋಗುವಂತಾಯಿತು. ಅನಂತರದ ಕಾಲದ ಇಂಗ್ಲೆಂಡಿನ ಕವಿಗಳ ಧೋರಣೆ ತಮ್ಮ ತಮ್ಮ ವೈಯಕ್ತಿಕ ಋಜುತ್ವವನ್ನು (ಇಂಟೆಗ್ರಿಟಿ) ಉಳಿಸಿಕೊಳ್ಳುವುದರಲ್ಲಿ ಮತ್ತು ಘೂೕರವಾದ ಯುದ್ಧಗಳನ್ನು ತಡೆಯುವುದರ ಮೂಲಕ ಹೇಗೆ ತಮ್ಮನ್ನೂ ಪ್ರಪಂಚವನ್ನೂ ಉಳಿಸಿಕೊಳ್ಳಬೇಕೆಂಬುದರಲ್ಲಿ ಕೇಂದ್ರೀಕೃತ ವಾಗುವಂತಾಗಿತ್ತು. ಇಂಗ್ಲಿಷ್ ನವ್ಯ ಕಾವ್ಯದ ಈ ಅವಸ್ಥಾಂತರಗಳ ವಿವರವಾದ ಹಿನ್ನೆಲೆಯನ್ನು ಬಲ್ಲವರಾಗಿದ್ದ ವಿ.ಕೃ.ಗೋಕಾಕರು ಮತ್ತು ಗೋಪಾಲಕೃಷ್ಣ ಅಡಿಗರು ತಮ್ಮದೇ ಆದ ಒಲವು ವ್ಯಾಖ್ಯಾನಗಳಿಗೆ ಅನುಗುಣವಾಗಿ ನವ್ಯಕಾವ್ಯವನ್ನು ಕನ್ನಡದಲ್ಲಿ ಹುಟ್ಟುಹಾಕಲು, ಬೆಳೆಸಲು ಸಿದ್ಧರಾದರು. ಭಾರತದಲ್ಲಿಯೂ ಸ್ವಾತಂತ್ರ್ಯಾನಂತರದ ಕಾಲದಲ್ಲಿ ಆದ ತೀವ್ರತರವಾದ ರಾಜಕೀಯ, ಸಾಮಾಜಿಕ ಪರಿವರ್ತನೆಗಳು, ಜನಸಮಷ್ಟಿಯ ಆಶೋತ್ತರಗಳು, ವಾಸ್ತವ ಪರಿಸ್ಥಿತಿಗಳು ಅವರ ಕಾವ್ಯಧೋರಣೆಗಳನ್ನು ರೂಪಿಸುವುದರಲ್ಲಿ ಪೋಷಕಾಂಶಗಳಾದವು.

ವಿ.ಕೃ.ಗೋಕಾಕ ರಕವನ ಸಂಕಲನಗಳು

ಬದಲಾಯಿಸಿ

ವಿ.ಕೃ.ಗೋಕಾಕರು ಸಮುದ್ರಗೀತೆಗಳು (1940), ಅಭ್ಯುದಯ (1946), ನವ್ಯಕವಿಗಳು (1950) ಎಂಬ ಕವನ ಸಂಕಲನಗಳಲ್ಲಿ ಅವರದೇ ಆದ ಬಗೆಯಲ್ಲಿ ನವ್ಯಕಾವ್ಯ ಪ್ರಯೋಗಗಳನ್ನು ನಡೆಸುತ್ತಿದ್ದರಾದರೂ ಆ ಬಗೆಯ ಕಾವ್ಯ ರೀತಿಗೆ ಒಂದು ತಾತ್ತ್ವಿಕ ಹಿನ್ನೆಲೆಯನ್ನು ರೂಪಿಸಿಕೊಂಡಿರಲಿಲ್ಲ; ಇಲ್ಲವೆ ಬಹಿರಂಗವಾಗಿ ಪ್ರತಿಪಾದಿಸಿರಲಿಲ್ಲ. 1950ರಲ್ಲಿ ಮುಂಬಯಿಯಲ್ಲಿ ನಡೆದ 34ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕಗೋಷ್ಠಿಯ ಅಧ್ಯಕ್ಷಭಾಷಣದಲ್ಲಿ ಆ ಕೆಲಸವನ್ನು ಅವರು ಮಾಡಿದರು. ಆ ಭಾಷಣ ಮುಂದೆ ನವ್ಯತೆ ಹಾಗೂ ಕಾವ್ಯಜೀವನ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಧಾರವಾಡದ ಬಾನುಲಿ ಕೇಂದ್ರದಿಂದ ಅವರು ಪ್ರಸಾರ ಮಾಡಿದ ನವ್ಯ ಕಾವ್ಯದ ರೀತಿ ಎಂಬ ಭಾಷಣದಲ್ಲಿಯೂ ಚೆನ್ನವೀರ ಕಣವಿಯವರ ಜೊತೆಯಲ್ಲಿ ಸಂಪಾದಿಸಿದ ‘ನವ್ಯ ಧ್ವನಿ’ (1956) ಎಂಬ ಬೇರೆ ಬೇರೆ ಕವಿಗಳ ನವ್ಯ ಕವನಗಳ ಸಂಚಯದ ಮುನ್ನುಡಿಯಲ್ಲಿಯೂ ನವ್ಯಕಾವ್ಯವನ್ನು ಕುರಿತಂಥ ಗೋಕಾಕರ ವಿಚಾರ, ವಿವರಣೆಗಳಿವೆ.

 
ವಿ.ಕೃ.ಗೋಕಾಕ

ಗೋಕಾಕರು ನವ್ಯಕಾವ್ಯ ಮತ್ತು ಕನ್ನಡದಲ್ಲಿ ಅದರ ಆವಶ್ಯಕತೆಯನ್ನು ಕುರಿತಂತೆ ಹೇಳಿರುವ ಕೆಲವು ಮಾತುಗಳನ್ನು ಇಲ್ಲಿ ಗಮನಿಸಬಹುದಾಗಿದೆ. ನವ್ಯಕಾವ್ಯವೆಂದರೆ ಆಧುನಿಕ ಕಾವ್ಯಕ್ಕಿಂತ ಬೇರೆಯಾದ ಕಾವ್ಯ. ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯ. ಮುದ್ದಣನ ಕಾಲದಿಂದ ಬೆಳೆದು ಬಂದ ಆಧುನಿಕ ಕಾವ್ಯವು ಆಧುನಿಕ ಕಾವ್ಯ ಪ್ರಕಾರಗಳನ್ನು ಕಾವ್ಯವಸ್ತುಗಳನ್ನು ಕನ್ನಡಕ್ಕೆ ತಂದಿತು. ಈ ಕಾವ್ಯಪ್ರಕಾರ - ವಸ್ತುಗಳಿಗೆ ಉಚಿತವಾದ ಶೈಲಿ - ಛಂದಸ್ಸು ಗಳನ್ನು ನಿರ್ಮಾಣ ಮಾಡಿತು. ವ್ಯಕ್ತಿತ್ವ ನಿರೂಪಣೆಯನ್ನು ಸಾದಿsಸಿತು. ಈಗ ಆಧುನಿಕ ಕಾವ್ಯದ ಪರಂಪರೆ ಯೊಂದು ನಿರ್ಮಿತವಾಗಿದೆ. ಒಂದು ಪರಂಪರೆ ಪುರ್ಣವಾದಾಗ ಇನ್ನೊಂದು ಹೊಳಹನ್ನು ಹಾಕದೆ ಉಕ್ತಿಗೆ ಸಮಗ್ರತೆಯೂ ಕಾಂತಿಯೂ ಬರುವುದು ಕಠಿಣ. ಅಂತೇ ಇಂದು ನವ್ಯ ಕಾವ್ಯ ಆವಶ್ಯಕತೆಯೂ ಉಂಟಾಗಿದೆ. ಒಂದು ಪರಂಪರೆ ತನ್ನ ಸಿದ್ಧಿಯನ್ನು ಮುಟ್ಟಿದಾಗ ಇನ್ನೊಂದು ಸಿದ್ಧತೆಯು ತನ್ನ ಸಿದ್ಧಿಯ ದಾರಿಯನ್ನು ಹುಡುಕುತ್ತಿರುತ್ತದೆ. ಇಂಥ ಆಂತರಿಕ ಆವಶ್ಯಕತೆಯಿಂದ ಪ್ರಚೋದನೆಗೊಂಡ ಬಂಗಾಲಿ ಹಾಗೂ ಮರಾಠಿ ಕಾವ್ಯಗಳೂ ನವ್ಯಕಾವ್ಯದ ದಾರಿಯನ್ನು ನೇರವಾಗಿ ತುಳಿಯಹತ್ತಿದವು. ಆಧುನಿಕ ಕನ್ನಡ ಕಾವ್ಯವೂ ತನ್ನ ಪರಂಪರೆಯ ಸಿದ್ಧಿಯನ್ನು ಮುಟ್ಟಿದಾಗ- ಮುಂದೇನೆಂಬ ಪ್ರಶ್ನೆ ಎದ್ದಿತು. ಈ ಪ್ರಶ್ನೆಗೆ ಉತ್ತರ ನವ್ಯ ಕಾವ್ಯ; ಚಂಪು, ಷಟ್ಪದಿ, ವಚನ, ಸಾಂಗತ್ಯ, ತ್ರಿಪದಿ- ಹೀಗೆ ಅನೇಕ ರೂಪಗಳನ್ನು ತಾಳಿದ ಕನ್ನಡ ಕಾವ್ಯ ಇಲ್ಲಿಯವರೆಗೆ ಆಧುನಿಕವಾಗಿ ಬೆಳೆಯಿತು. ಅದು ನವ್ಯವಾಗುವುದೂ ಒಂದು ಬಗೆಯ ಚಂದ. ಈ ನವೀನ ಪರಿಸ್ಥಿತಿಯೂ ಒಂದು ಪರಂಪರೆಯ ಕೃತಕೃತ್ಯತೆಯೂ ನವ್ಯಕಾವ್ಯದ ಅಗತ್ಯವನ್ನು ಸೂಚಿಸುತ್ತಿವೆ.

ಕಾವ್ಯದ ಲಕ್ಷಣಗಳು

ಬದಲಾಯಿಸಿ

ಬಳಕೆಮಾತು, ಛಂದಸ್ಸಿನಲ್ಲಿಯ ನವೀನ ಪ್ರಯೋಗ, ಪ್ರತಿಮಾ, ಪ್ರಧಾನತೆ, ವಾಸ್ತವಿಕ ಚಿತ್ರಸೃಷ್ಟಿ, ಪಾರಿಭಾಷಿಕ ಶೈಲಿ, ವಸ್ತುವಿನ ಆಯ್ಕೆಯಲ್ಲಿಯ ಸ್ವಾತಂತ್ರ್ಯ, ಬುದ್ಧಿ ಪ್ರಧಾನತೆ, ವ್ಯಕ್ತ್ಯತೀತ ಮೌಲ್ಯಗಳಿಗೆ ಪ್ರಧಾನತೆ - ಈ ಎಂಟು ನವ್ಯಕಾವ್ಯದ ಲಕ್ಷಣಗಳೆಂದು ಗೋಕಾಕರು ಪಟ್ಟಿಮಾಡಿ ವಿವರಿಸಿದ್ದಾರೆ. ಅವರು ಮೊದಲಿನ ಐದು ಲಕ್ಷಣಗಳಲ್ಲಿ ಆಧುನಿಕ ಕಾವ್ಯವೂ ಕ್ರಮೇಣ ಆಸ್ಥೆ ವಹಿಸಿದೆಯೆಂದೂ ಅವೆಲ್ಲವುಗಳ ಸಮಯೋಚಿತ ಪ್ರe್ಞೆಯನ್ನು ನವ್ಯಪ್ರe್ಞೆಯೆಂದು ಕರೆಯಬಹುದೆಂದೂ ಅಭಿಪ್ರಾಯಪಟ್ಟಿದ್ದಾರೆ. ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ, ಗೋವಿಂದ ಪೈ ಅವರ ಕವನಗಳು, ಬೇಂದ್ರೆ ಅವರ ಕರಿಮರಿನಾಯಿ, ಕೈಗಲ್ಲ, ನರಬಲಿ, ಕೆ.ವಿ.ಪುಟ್ಟಪ್ಪನವರ ಕೋಗಿಲೆ ಮತ್ತು ಸೋವಿಯೆತ್ ರಷ್ಯಾ, ಜಿ.ಪಿ.ರಾಜರತ್ನಂ ಅವರ ಎಂಡ್ಕುಡ್ಕ ರತ್ನ, ವಿ.ಸೀ. ಅವರ ಗಡಿದಾಟು, ಕ್ರೋಧಕೇತನ,

ನವ್ಯದಲ್ಲಿ ಹೊಸ ಪರಂಪರೆ

ಬದಲಾಯಿಸಿ
 
ಗೋಪಾಲಕೃಷ್ಣ ಅಡಿಗ

ಗೋಪಾಲಕೃಷ್ಣ ಅಡಿಗರ ಹಿಮಗಿರಿಯ ಕಂದರ, ಗೊಂದಲಪುರ, ರಾಮಚಂದ್ರ ಶರ್ಮರ ಏಳುಸುತ್ತಿನ ಕೋಟೆ, ಚೆನ್ನವೀರಕಣವಿ, ಸು.ರಂ.ಎಕ್ಕುಂಡಿ, ವಿ.ಜಿ.ಭಟ್ಟ ಮೊದಲಾದವರ ಸಾಮಾಜಿಕ ಕವನಗಳು - ಇವೆಲ್ಲವನ್ನೂ ನವ್ಯಕಾವ್ಯ ಪ್ರಕಾರಕ್ಕೆ ಗೋಕಾಕರು ಸೇರಿಸಿದ್ದಾರೆ (ನವ್ಯಕಾವ್ಯದ ರೀತಿ). ಚೆನ್ನವೀರ ಕಣವಿಯವರೊಂದಿಗೆ ಸಂಪಾದಿಸಿದ ನವ್ಯಧ್ವನಿ ಎಂಬ ನವ್ಯಕಾವ್ಯ ಸಂಚಯದ ಕವನಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಪ್ರಗತಿಪರ, ಉಪನವ್ಯ, ನವ್ಯ, ವ್ಯಂಗ್ಯನವ್ಯ ಎಂದು ಗೋಕಾಕರು ಕರೆದಿದ್ದಾರೆ. ಇನ್ನೊಂದು ಕಡೆ ನವ್ಯಕಾವ್ಯದ ಆದ್ಯಗುರು ಸರ್ವಜ್ಞ ಎಂದು ಹೇಳುತ್ತಾರೆ. ನವ್ಯಕಾವ್ಯದ ಕೆಲವು ವಿಶೇಷಗುಣಗಳನ್ನು ಹಾಪ್ಕಿನ್ಸ್‌, ಅರವಿಂದ ಹಾಗೂ ತಮ್ಮ ಕಾವ್ಯಗಳಿಂದ ಉದಾಹರಿಸಿ ತೋರಿಸಿದ್ದಾರೆ. ನವ್ಯಕಾವ್ಯದ ರಹಸ್ಯವನ್ನು ಅರವಿಂದರ ಮಾತುಗಳನ್ನು ಉದ್ಧರಿಸುವುದರ ಮೂಲಕವೇ ತಿಳಿಸಿದ್ದಾರೆ (ನವ್ಯಕಾವ್ಯ ರೀತಿ), ಇವೆಲ್ಲವನ್ನು ವಿವರವಾಗಿ ಪರಿಶೀಲಿಸುತ್ತ ಹೋದಂತೆ ನವ್ಯಕಾವ್ಯವನ್ನು ಕುರಿತ ಗೋಕಾಕರ ಅಭಿಪ್ರಾಯಗಳ ಹಿಂದಿರುವ ಏಕಸೂತ್ರತೆಯನ್ನು ಕಂಡುಕೊಳ್ಳುವುದು ಸುಲಭವಾಗುವುದಿಲ್ಲ.

ಮುಕ್ತ ಛಂದಸ್ಸು

ಬದಲಾಯಿಸಿ

1950ರ ಅನಂತರದ ಕಾಲದಲ್ಲಿ ಗೋಕಾಕರು ಉಗಮ, ಊರ್ಣನಾಭ, ಚಿಂತನ, ದ್ಯಾವಾಪೃಥಿವೀ ಮುಂತಾದ ಕವನಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಅವರ ಕಾವ್ಯವನ್ನೂ ನವ್ಯಕಾವ್ಯದ ಸೈದ್ಧಾಂತಿಕ ಪ್ರತಿಪಾದನೆಯನ್ನೂ ಒಟ್ಟಿನಲ್ಲಿ ನೋಡಿದಾಗ, ಭಾಷೆ ಮತ್ತು ಛಂದೋರೂಪಗಳಲ್ಲಿ ಅವರು ಬದಲಾವಣೆ, ಬಗೆಬಗೆಯ ಪ್ರಯೋಗಮಾಡಿದ್ದು ಕಂಡುಬರುತ್ತದೆ. ಛಂದೋರೂಪಗಳಲ್ಲಿ ಮಾಡಿದ ಪರಿವರ್ತನೆಯನ್ನು ಮುಕ್ತಛಂದಸ್ಸು ಎಂದು ಕರೆಯಲಾಗಿದೆ. ತಂತ್ರವಿಧಾನದಲ್ಲಿ ಪ್ರತಿಮಾನಿಷ್ಠತೆ, ಸಾಂಕೇತಿಕತೆಗಳನ್ನು ಅಳವಡಿಸಿಕೊಳ್ಳುವ ಬಗೆಯಲ್ಲಿಯೂ ಹೊಸತನ ಕಾಣುತ್ತದೆ. ಕಾವ್ಯ ಧೋರಣೆಗೆ ಸಂಬಂದಿsಸಿದಂತೆ ನವೋದಯದವರೊಂದಿಗೆ ಹೇಳಿಕೊಳ್ಳುವಂಥ ಭಿನ್ನತೆ ಇದ್ದಂತೆ ತೋರುವುದಿಲ್ಲ. ಭಾರತೀಯ ಮತ್ತು ಜಾಗತಿಕ ವಿದ್ಯಮಾನಗಳ ಸಂದರ್ಭದಲ್ಲಿ ಒಟ್ಟು ಮಾನವ ಸಮಷ್ಟಿಯ ಕ್ಷೇಮಚಿಂತನೆಗೆ ಅರವಿಂದರ ಅಂತಃಪ್ರe್ಞೆಯ (ಇಂಟ್ಯೂಷನ್) ನೆರವಿನಿಂದ ಸಮನ್ವಯ ಸಂಜೀವಿನಿ ಸೂತ್ರಮೊಂದನ್ನು ರೂಪಿಸಿಕೊಳ್ಳುವುದರ ಕಡೆಗೆ ಹೆಚ್ಚಾದ ಆಶಾವಾದದಿಂದ ನೋಡುವ ಒಲವು, ಒತ್ತು ಇರುವುದು ಕಾಣುತ್ತದೆ. ಆದ್ದರಿಂದ ನವೋದಯದವರ ಕನಸುಗಾರಿಕೆ, ದಿವ್ಯ ಆದರ್ಶ, ಭಾರತೀಯವಾದುದರ ಬಗೆಗಿನ ಭಾವನಾತ್ಮಕವಾದ ಆರಾಧನಾಭಾವಗಳು ಇವರಲ್ಲಿಯೂ ಕಾಣುತ್ತವೆ. ಲೋಕದ ವಿಲಯವನ್ನು ತಪ್ಪಿಸುವ ಹೊಣೆಗಾರಿಕೆಯನ್ನು ಸ್ವಯಂ ಆರೋಪಿಸಿಕೊಂಡ ನೆಹರೂ ರೀತಿಯ ಆದರ್ಶಕ್ಕೆ ಕಾವ್ಯದಲ್ಲಿ ನುಡಿಗೊಡುವ ಹಂಬಲವೂ ಅದರೊಟ್ಟಿಗೆ ಸೇರಿಕೊಂಡಿದೆ. ಅಭಿಜಾತಕಾವ್ಯ ಪ್ರತಿಭೆಗಿಂತ ವ್ಯುತ್ಪತ್ತಿ ಪ್ರಧಾನವಾದ ಕಾವ್ಯಮೀಮಾಂಸೆ, ಆಧ್ಯಾತ್ಮಿಕ ವಿಚಾರಗಳೇ ಅವರ ಕಾವ್ಯವನ್ನು ನಡೆಸಿಕೊಂಡು ಹೋದದ್ದರಿಂದ ಗೋಕಾಕರ ಈ ಮೇಲಿನ ಹೊಸ ಪ್ರಯೋಗಗಳು, ಸದ್ಭಾವನೆ ಸದುದ್ದೇಶಗಳು ಎಷ್ಟೇ ಪ್ರಾಮಾಣಿಕವಾಗಿದ್ದರೂ ಶ್ರೇಷ್ಠ ಕಾವ್ಯವಾಗಿ ಅಭಿವ್ಯಕ್ತಿಪಡೆದು ಸಾರ್ಥಕಗೊಳ್ಳುವುದರಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಾಗಲಿಲ್ಲ.

ಗೋಕಾಕರ ಪ್ರಭಾವ

ಬದಲಾಯಿಸಿ

ಗೋಕಾಕರ ಕಾವ್ಯ ಮತ್ತು ಸಾಹಿತ್ಯ ಚಿಂತನದ ಪ್ರಭಾವಕ್ಕೆ ಒಳಗಾಗಿಯೂ ತಮ್ಮ ದನಿವಿಶಿಷ್ಟತೆಯನ್ನು ಬೆಳೆಸಿಕೊಂಡವರಲ್ಲಿ ಮುಖ್ಯರಾದವರು ಗಂಗಾಧರ ಚಿತ್ತಾಲ, ಸು.ರಂ.ಎಕ್ಕುಂಡಿ, ಶಂಕರ ಮೊಕಾಶಿ ಪುಣೇಕರ ಮತ್ತು ಎಂ.ಅಕಬರ ಅಲಿ. ಗಂಗಾಧರ ಚಿತ್ತಾಲರ ಮನುಕುಲದ ಹಾಡು, ಹರಿವ ನೀರಿದು ಎಂಬ ಸಂಕಲನಗಳಲ್ಲಿ ಬದುಕು ಮತ್ತು ಸಾವಿನ ಗೂಢದ ಬಗೆಗೆ ಚಿಂತನೆಯಿದೆ. ಮನುಷ್ಯ ಸಂಬಂಧದ ಸುಖದ ಕ್ಷಣಗಳ ಉತ್ಕರ್ಷಭಾವವಿದೆ. ಆತ್ಮೀಯರ ಸಾವು ತಂದ ದುರಂತ ವೇದನೆಯಿದೆ. ಅವರ ಬರೆವಣಿಗೆಯಲ್ಲಿ ಬೌದ್ಧಿಕ ಮತ್ತು ಭಾವನಾತ್ಮಕ ದ್ರವ್ಯದ ಕೊರತೆಯಿಲ್ಲ. ಆದರೆ, ಧ್ವ£ಶಕ್ತಿಯ ಕೊರತೆಯಿರುವುದು ಕಾಣುತ್ತದೆ. ಕವನಗಳ ಲಯಗತಿಯಲ್ಲಿ ಮುದತರುವ ಗುಣವಿದೆ. ಪ್ರಯೋಗಶೀಲತೆಯಿದೆ. ಸಮುದ್ರವನ್ನು ಕುರಿತ ಗೀತಗಳಲ್ಲಿ ತನ್ಮಯತೆ ಇದೆ. ಮನುಷ್ಯ ಸಂಬಂಧಗಳಲ್ಲಿ ಹೆಚ್ಚಿನ ಗೌರವ, ಆತ್ಮೀಯತೆ, ಅಂತಃಕರಣ ಇದೆ. ಸಂತಾನ, ಹಾವಾಡಿಗರ ಹುಡುಗ, ನೆರಳು, ಮತ್ಸ್ಯಗಂದಿs ಕವನ ಸಂಕಲನಗಳನ್ನು ಪ್ರಕಟಿಸಿದ ಎಕ್ಕುಂಡಿಯವರ ಕಾವ್ಯದಲ್ಲಿ ನವೋದಯ ರೀತಿಯ ಛಂದೋರೂಪ, ಗೇಯತೆಯ ಅಂಶ ಹೆಚ್ಚಾಗಿದೆ. ಸಮರ್ಥವಾಗಿದೆ. ಭಾವಗೀತೆಯ ಗುಣ ಸಮೃದ್ಧವಾಗಿದೆ. ಅವರ ಭಾಗವತ ಧೋರಣೆ ಪುರಾಣದ ವಸ್ತು, ಪ್ರತಿಮೆಗಳ ಮೂಲಕ ಅಭಿವ್ಯಕ್ತಗೊಳ್ಳುವ ಬಗೆ ಅನನ್ಯವಾಗಿದೆ. ಕಾವ್ಯಪ್ರತಿಮೆಗಳ ಬಳಕೆಯ ಕ್ರಮವೂ ವಿಶಿಷ್ಟವಾಗಿದೆ. ಕಾವ್ಯವಸ್ತುವಿನ ಸಹಜ, ನೇರನಿರೂಪಣೆಯೊಂದಿಗೆ ಸದ್ದಿಲ್ಲದೆ ಧ್ವನಿಪರಿವೇಷವನ್ನು ಕಟ್ಟುತ್ತ ಸಾಗಿ ಕವನದ ಕೊನೆಗೆ ಬಂದು ಮುಟ್ಟಿದಾಗ, ಅನುಭವ ಸಮಸ್ತವೂ ಒಂದು ಕಾವ್ಯಪ್ರತಿಮೆಯ ಹಿಡಿಯಲ್ಲಿ ಇಡಿಯಾಗಿ ದೀಪ್ತಗೊಳ್ಳುವಂತೆ ಮಾಡುವ ಬಗೆ, ಯಶಸ್ವಿಯಾದ ಪ್ರಯತ್ನ ಹಾವಾಡಿಗರ ಹುಡುಗ, ಅತಿಥಿ ಮುಂತಾದ ಕೆಲವು ಕವನಗಳಲ್ಲಿ ಕಾಣುತ್ತದೆ. ಒಟ್ಟಿನಲ್ಲಿ ಎಕ್ಕುಂಡಿಯವರ ಕಾವ್ಯ ಭಾವಪ್ರಧಾನವಾದದ್ದು. ಬುದ್ಧಿ ಪ್ರಧಾನವಾದದ್ದಲ್ಲ. ಮೊಕಾಶಿಯವರ ಕವನಸಂಕಲನ ಮಾಯಿಯ ಮೂರು ಮುಖಗಳು. ಅವರು ಪ್ರಯೋಗಪ್ರಿಯರು. ಸೀಮಂತಿನೀ ಕೋಪಾಖ್ಯಾನ ಕಂದ ಮತ್ತು ಚಂಪುಗದ್ಯಗಳಿಂದ ಕೂಡಿದ ಕವನವಾದರೆ (ಗೋಕಾಕರೂ ಇಂದಿಲ್ಲ ನಾಳೆಯಲ್ಲಿ ಚಂಪು ರೀತಿಯನ್ನು ಬಳಸಿದ್ದಾರೆ) ‘ಸಂಸ್ಕೃತಿ’ ಅಷ್ಟಷಟ್ಪದಿ ಮತ್ತು ಹೊಸಗನ್ನಡದ ಗದ್ಯದ ನಿರೂಪಣೆಯನ್ನು ಬಳಿಸಿಕೊಂಡಿರುವ ಬರೆವಣಿಗೆಯಾಗಿದೆ. ಈ ಬಗೆಯ ಬರೆವಣಿಗೆಗಳು ತಮ್ಮ ವಿಚಿತ್ರ ರೀತಿಯಿಂದಾಗಿ ಗಮನ ಸೆಳೆಯುತ್ತವೆ; ಕಾವ್ಯ ಗುಣಗಳಿಂದಲ್ಲ; ಗಂಧಕೊರಡು, ನೆರಳು ಬೆಳಕು, ಅಪಸ್ವರದಂಥ ಕವನಗಳು ಮೊಕಾಶಿಯವರ ಕಾವ್ಯಪ್ರತಿಭೆ ಇನ್ನೂ ಹೆಚ್ಚು ಗಂಭೀರವಾದದ್ದನ್ನು ಬರೆಯಬಹುದಾದ ಸಾಮಥರ್ಯ್‌ವುಳ್ಳದ್ದೆಂಬ ಅನಿಸಿಕೆಯನ್ನು ಓದುಗನಲ್ಲಿ ಹುಟ್ಟಿಸುತ್ತದೆ. ಮಾಯಿಯ ಮೂರು ಮುಖಗಳು ಎಂಬ ಕವನದ ಯಶಸ್ಸು ಈ ಅನಿಸಿಕೆ ಹುಸಿಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ‘ನನ್ನ ಕಾವ್ಯ ಜೀವನಕ್ಕೆ ಆವಶ್ಯಕವಾದ ಅಂತಃಕರಣದ ಮಾರ್ಗದರ್ಶನ ನೀಡಿದವರು ಗೋಕಾಕರು’ ಎಂದು ಹೇಳಿಕೊಂಡಿದ್ದರೂ ಎಂ.ಅಕಬರ ಅಲಿಯವರು ಗೋಕಾಕರನ್ನು ಕಣ್ಣುಮುಚ್ಚಿ ಅನುಕರಿಸದೆ ನವಚೇತನ, ಸುಮನ ಸೌರಭ, ಗಂಧ ಕೇಸರ ಎಂಬ ಸಂಕಲನಗಳಲ್ಲಿ ಅಭಿವ್ಯಕ್ತಿಯಲ್ಲಿ ತನ್ನತನದ ಹುಡುಕಾಟದಲ್ಲಿರುವುದು ಕಾಣುತ್ತದೆ. ಕಾವ್ಯಸತ್ತ್ವದ ದೃಷ್ಟಿಯಿಂದ ಇನ್ನೂ ಮಹತ್ವ ಪುರ್ಣವಾದ ಅನನ್ಯವಾದ ದನಿಯನ್ನು ರೂಢಿಸಿಕೊಳ್ಳಬಹುದಾದ ಸಾಧ್ಯತೆಗಳು ಅವರ ಕಾವ್ಯದಲ್ಲಿ ಕಾಣುತ್ತವೆಯಾದರೂ ತನ್ನೊಳಗಿನ ನಿಜದನಿಯನ್ನು ಮೈಚಳಿ ಬಿಟ್ಟು ಎಬ್ಬಿಸಲಾರದ ಸಂಕೋಚದ ಪೊರೆಯೊಂದು ಉದ್ದಕ್ಕೂ ಆವರಿಸಿಕೊಂಡಿರುವಂತೆ ತೋರುತ್ತದೆ. ಆಶಾವಾದಿತ್ವವಿದ್ದರೂ ಜೀವನದ ವಾಸ್ತವವನ್ನು ನಿರಾಕರಿಸದೆ, ಹೀಗಳೆಯದೆ ಅದರ ಅಸ್ತಿತ್ವ ಮತ್ತು ಅದರ ಪ್ರಾಣಶಕ್ತಿಯನ್ನು ಒಪ್ಪಿಕೊಂಡು ಪರವನ್ನು ಅರಸಬೇಕೆಂಬ ಆರೋಗ್ಯಕರವಾದ ಧೋರಣೆ ಅವರಲ್ಲಿರುವುದು ಕಾಣುತ್ತದೆ. ಹಾವು ಹೆಡೆ ಬಿಡಿಸಿದಾಗ, ಲೋಕವೇ ಸಾಕ್ಷಿಯಂಥ ಕೆಲವು ಕವನಗಳು ಈ ಮಾತಿಗೆ ನಿದರ್ಶನಗಳಾಗಿವೆ.

ನವ್ಯದ ಬಗೆಗೆ ಗೋಪಾಲಕೃಷ್ಣ ಅಡಿಗರ ವ್ಯಾಖ್ಯೆ

ಬದಲಾಯಿಸಿ

ಗೋಪಾಲಕೃಷ್ಣ ಅಡಿಗರು ತಮ್ಮ ನಡೆದು ಬಂದ ದಾರಿ (1952) ಕವನ ಸಂಕಲನದ ಸಹೃದಯರಿಗೆ ಎಂಬ ತಲೆಬರೆಹವುಳ್ಳ ಮುನ್ನುಡಿ ರೂಪದ ಮಾತುಗಳಲ್ಲಿ ಹೊಸ ಕಾವ್ಯದ ಅಗತ್ಯವನ್ನೂ ಅನಿವಾರ್ಯತೆಯನ್ನೂ ವಿವರಿಸಿದರು. ಅದುವರೆಗೆ ನವೋದಯ ಕಾವ್ಯ ರೀತಿಯಲ್ಲಿ ಭಾವತರಂಗ, ಕಟ್ಟುವೆವು ನಾವು ಕವನಸಂಗ್ರಹಗಳನ್ನು ಪ್ರಕಟಿಸಿ ಸತ್ತ್ವಶಾಲಿ ಕವಿಯೆಂದು ಪ್ರಸಿದ್ಧಿ ಪಡೆದಿದ್ದರಾದರೂ ಆ ಬಗೆಯ ಕಾವ್ಯರಚನೆಯನ್ನು ಇನ್ನು ಮುಂದೆ ಮಾಡುವುದಿಲ್ಲ. ಮಾಡುವುದರಲ್ಲಿ ಅರ್ಥವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರ ಮಾತುಗಳಲ್ಲಿಯೇ ಅವರ ಅಭಿಪ್ರಾಯಗಳನ್ನು ನೋಡಬಹುದು.

“ಆಧುನಿಕ ಕನ್ನಡ ಕಾವ್ಯದಲ್ಲಿ ಒಂದು ಘಟ್ಟ ಕಳೆದು ಈಗ ಇನ್ನೊಂದು ಘಟ್ಟ ಮೊದಲಾಗುತ್ತಿದೆ. ಕಾವ್ಯರೂಪದಲ್ಲಿ ಬದಲಾವಣೆ ಆಗಬೇಕಾದ ಕಾಲ ಆಗಲೇ ಬಂದುಬಿಟ್ಟಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ತನಕ ಇದ್ದ ವಾತಾವರಣ ಈಗ ಸಮೂಲ ಪರಿವರ್ತನೆಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಉತ್ಸಾಹ, ಉದ್ವೇಗ, ಆದರ್ಶಪರವಶತೆಯ ಹಾರಾಟ ಮುಗಿದು ಈಗ ನಮ್ಮ ಮನಸ್ಸು ಮತ್ತೆ ನೆಲಕ್ಕಿಳಿದಿದೆ. ಮೋಡವಾಗಿ ಮೇಲೇರಿದ ಮನಸ್ಸು ಮಳೆಯಾಗಿ ಬಿದ್ದು ಮತ್ತೆ ಹಳ್ಳಕೊಳ್ಳಗಳಲ್ಲಿ ತುಂಬಿಕೊಂಡಿದೆ. ತಳದಲ್ಲಿ ಕೂತಿದ್ದ ಕೊಳೆ ಕಸ ರಾಡಿಯೆಲ್ಲ ಈಗ ಮೇಲೆದ್ದು ಬಂದು ಕನ್ನಡಿಯಂಥ ನೀರು ಕಲಕಿದೆ. ಹೊಸ ಆದರ್ಶಕ್ಕಾಗಿ ಹೊಸ ಕನಸಿಗಾಗಿ ದೇಶದ ಮನಸ್ಸು ಹಸಿದು ಕಾಯುತ್ತಿದೆ. ಇಂಥ ವಾತಾವರಣ ಸುತ್ತುಮುತ್ತಲೂ ಇರುವಾಗ, ಜೀವನಾವಲಂಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ. ಗಾಂದಿsಯುಗದಲ್ಲಿ ಬರೆದ ರೀತಿಯಲ್ಲೇ ಇನ್ನೂ ಬರೆದರೆ ಬಹುಶಃ ಅದು ಕಾವ್ಯಾಭಾಸವಾಗುತ್ತದೆ. ಇಲ್ಲವೇ ಸತ್ವಹೀನ ಕಾವ್ಯವಾಗುತ್ತದೆ. ಚರ್ವಿತಚರ್ವಣವಾಗುತ್ತದೆ. ಆಗ ಭಾವವನ್ನು ಕೊಲ್ಲುವ ಮಾತು ಬೇತಾಳದಂತೆ ನಮ್ಮ ಬೆನ್ನು ಹತ್ತಿ ಸಮಾಜದ ಬೆಳೆವಣಿಗೆಗೆ ಮಾರಕವಾಗುತ್ತದೆಂದು ನನಗೆ ತೋರುತ್ತದೆ. ಆದ ಕಾರಣ ಈಗ ಕಾಣುತ್ತಿರುವ ಹೊಸ ಮನೋಧರ್ಮವನ್ನು ವ್ಯಕ್ತಪಡಿಸಲು ಹೊಸ ನಾಲಗೆ, ಹೊಸ ನುಡಿಕಟ್ಟು, ರೂಪುಗೊಳ್ಳಬೇಕಾಗಿದೆ. ಈಗ ಬರೆಯುತ್ತಿರುವ ಕವಿಗಳೆಲ್ಲ ಈ ಕುರಿತು ಯೋಚನೆ ಮಾಡಬೇಕಾದದ್ದು ಅನಿವಾರ್ಯ, ಹೊಸ ಹೊಸತಾಗಿ ಬರೆಯುತ್ತಿರುವ ತರುಣ ಕವಿಗಳಂತೂ ಈ ಸಮಸ್ಯೆಯನ್ನು ಎದುರಿಸದೆ ಗತ್ಯಂತರವಿಲ್ಲ. ನಮ್ಮ ಹಿರಿಯ ಕವಿಗಳ ದಾರಿಯಲ್ಲಿ ನಡೆಯುವುದರಿಂದಲೂ ಅಷ್ಟು ಕವಿತೆ ಬಂದೀತು. ಆದರೆ ಅದಕ್ಕೆ ಜೀವ ಕೊಡುವ ಸತ್ವವಾಗಲೀ ಹೊಸ ಸಮಾಜದ ವಾಣಿಯಾಗುವ ಸಾಮಥರ್ಯ್‌ವಾಗಲೀ ಖಂಡಿತ ಬರಲಾರದು; ನಮ್ಮ ಹಿರಿಯ ಕವಿಗಳು ಆಧುನಿಕ ಕಾವ್ಯಕ್ಕೆ ತಕ್ಕ ಭಾಷೆಯನ್ನು ಸಿದ್ಧಗೊಳಿಸಿ ಅದರಲ್ಲಿ ಅಮೋಘವಾದ ಕೆಲಸವನ್ನು ಮಾಡಿದ್ದಾರೆ. ಆದರೆ ಅದೇ ರೀತಿ ಅಮೋಘವಾದ ಕೆಲಸವನ್ನು ಹೊಸ ತಲೆಮಾರಿನವರೂ ಮಾಡಿ ತೋರಿಸಬೇಕಾಗಿದೆ....... ಗತಕಾಲದ ಭಾಷೆಭಾವವನ್ನು ಕೊಲ್ಲುತ್ತದೆ; ಮನಸ್ಸನ್ನು ಮಂಕಾಗಿಸುತ್ತದೆ. ಅರ್ಥಕ್ಕಿಂತ ಶಬ್ದಗಳ ಹಾರಾಟವೇ ಹೆಚ್ಚಿ ಅರ್ಥ ಮರೆಯಾಗುತ್ತದೆ. ಸಂಕೇತ ಮೂಲರೂಪವನ್ನು ಮರಸುತ್ತದೆ;

ಉತ್ಸವಮೂರ್ತಿ ತಾನೇ ಮೂಲವಿಗ್ರಹವೆಂದು ವಿಜೃಂಭಿಸುತ್ತದೆ. ಆದಕಾರಣವೇ ಹೊಸ ಜೀವನ ಭಾವನೆಗಳಿಗೆ ತಕ್ಕ ರೀತಿ ರೂಪುಗೊಳ್ಳಬೇಕಾದ ಕಾಲ ಈಗ ಸಾಹಿತಿಗಳನ್ನು ಎದುರಿಸಿ ನಿಂತಿದೆ; 19ನೆಯ ಶತಮಾನದ ಆಂಗ್ಲಕವಿಗಳಾದ ವರ್ಡ್ಸ್ ವರ್ತ್, ಶೆಲ್ಲಿ, ಕೀಟ್ಸ್‌ ಮುಂತಾದ ರೊಮ್ಯಾಂಟಿಕ್ ಕವಿಗಳಿಂದ ಪ್ರೇರಿತವಾದ ನಮ್ಮ ಆಧುನಿಕ ಕನ್ನಡ ಕಾವ್ಯ ಆ ಸಂಪ್ರದಾಯದಲ್ಲಿ ತಾನು ಮಾಡಬಹುದಾದಷ್ಟು ಕೆಲಸವನ್ನು ಮಾಡಿ ಮುಗಿಸಿದೆ. ಆ ಸಂಪ್ರದಾಯದ ಸತ್ವ ಈಗ ತೀರಿದೆ. ಅದಕ್ಕೆ ಅವನತಿ ಬಂದಿದೆ. ಅದರ ದೋಷಗಳೆಲ್ಲ ಈಗ ಎದ್ದು ಕಾಣಿಸುತ್ತಿವೆ. ನೆಲದ ಮೇಲೆ ಕಾಲೂರಿನಿಂತೇ ನಕ್ಷತ್ರವನ್ನು ತುಡುಕುತ್ತಿದ್ದುದು ಈಗ ನೆಲಬಿಟ್ಟು ಮೇಲೇರಿ ವೇದಾಂತದ ಮಂಜಿನಲ್ಲಿ ಮರೆಯಾಗಿ ಹೋಗುತ್ತಿದೆ. ಶಬ್ದಗಳು ಅರ್ಥದ ಸ್ಥಾನವನ್ನು ಆಕ್ರಮಿಸುತ್ತಿವೆ. ಪ್ರತಿಯೊಂದು ಭಾವವೂ ಅನುಭವವೂ ಅತಿಸರಳವಾಗಿ ಸತ್ಯದಿಂದ ದೂರದೂರ ಹೋಗುತ್ತಿವೆ. ಇಂಥ ಕಾಲದಲ್ಲಿ ಕಾವ್ಯಕ್ಕೆ ಮತ್ತೆ ವಾಸ್ತವದ ರಕ್ತದಾನ ನಡೆಯಬೇಕು. ಕಾವ್ಯದಲ್ಲಿ ಮತ್ತೆ ಮಣ್ಣಿನ ವಾಸನೆ ಹೊಡೆಯಬೇಕು. ಈ ಜಗತ್ತನ್ನು ಬಿಟ್ಟು ಕಾವ್ಯ ಬದುಕಲಾರದು, ಎಂಬುದನ್ನು ಮತ್ತೆ ಕವಿಗಳು ಅರಿಯಬೇಕಾಗುತ್ತದೆ. ನಿಜವಾದ ಕವಿ ಈ ಮಾತನ್ನು ಎಂದೂ ಮರೆಯುವುದಿಲ್ಲ. ಮರೆಯಲಾರ, ಆದರೆ ಕೇವಲ ವಾಸ್ತವ ಇಂದ್ರಿಯಗಮ್ಯವಾದುದು ಮಾತ್ರವೇ ಕಾವ್ಯದ ವಸ್ತುವಾಗಲಾರದು. ಈ ಜಗತ್ತಿನಲ್ಲಿ ನಮ್ಮ ಸುತ್ತ ಕಾಣುವ ವಸ್ತುಗಳು ಎಷ್ಟು ನಿಜವೋ ಆ ವಸ್ತುಗಳ ವಿಷಯದಲ್ಲಿ ನಮ್ಮ ಮನಸ್ಸಿನಲ್ಲಿ ಹುಟ್ಟುವ ಭಾವಗಳೂ ಅಷ್ಟೇ ನಿಜ. ಪಂಚಭೌತಿಕವಾದದ್ದು ಕಾವ್ಯಕ್ಕೆ ಎಷ್ಟು ಅಗತ್ಯವೋ ಅಷ್ಟೇ ನಮ್ಮ ಆದರ್ಶವೂ ಕಲ್ಪನೆಯೂ ಕನಸೂ ಅಗತ್ಯ.ಈ ಎರಡೂ ಸೇರಿ ಆದ ಪಾಕವೇ ಕಾವ್ಯ. ವಿದ್ಯಮಾನಗಳ, ಅನುಭವಗಳ ಆದರ್ಶ ಸ್ವರೂಪದ ಕನಸಿನ ಒಂದಂಶ ಸೇರದೆ ಇದ್ದದ್ದು ಕಾವ್ಯವಾಗಲಿ ಸಾಹಿತ್ಯವಾಗಲಿ ಆಗಲಾರದು. ಈ ದೃಷ್ಟಿಯಿಂದ ಆಧುನಿಕ ಇಂಗ್ಲಿಷ್ ಕಾವ್ಯದ ಪ್ರಸಿದ್ಧ ಕವಿಗಳಾದ ಈಲಿಯಟ್, ಆಡೆನ್ ಮುಂತಾದವರಿಂದ ನಾವು ಇನ್ನು ಮುಂದೆ ಸ್ಫೂರ್ತಿ ಪಡೆಯಬೇಕಾದದ್ದು ಅತ್ಯಗತ್ಯ. ಆದರೆ ನಮ್ಮ ಹೊಸ ಕವಿತೆ ಆ ಇಂಗ್ಲಿಷ್ ಕವಿಗಳ ಕಾವ್ಯದಂತೆಯೇ ರೂಪುಗೊಳ್ಳಲಾರದು. ಆ ಕವಿಗಳ ಅಂಧಾನುಕರಣೆಯಿಂದ ಹೊಸತನ ಬಂದೀತು. ಆದರೆ ಅದು ಕಾವ್ಯವಾಗ ಲಾರದು. ನಮ್ಮ ಹೊಸ ಕಾವ್ಯ ನಮ್ಮ ನಾಡಿನ ಹೊಸ ವಾತಾವರಣಕ್ಕೂ ನಮ್ಮ ಜನಜೀವನಕ್ಕೂ ನಮ್ಮ ಹೊಸಭಾಷೆಯ ಪರಿಪಾಕದ ಪರಿಮಿತಿಗೂ ಒಳಪಟ್ಟಿದೆ ಎಂಬುದನ್ನು ನಾವು ಮರೆಯತಕ್ಕದ್ದಲ್ಲ".

ಇಲ್ಲಿ ಅಡಿಗರ ಹೊಸ ಕಾವ್ಯವನ್ನು ಕುರಿತಂಥ ಅಲೋಚನ ಕ್ರಮದಲ್ಲಿ ನಿರ್ದಿಷ್ಟತೆ ಇದೆ, ಖಚಿತತೆ ಇದೆ. ಹೊಸ ಕವಿತೆಯನ್ನು ಕುರಿತು (1953), ಇಂದಿನ ಜೀವನ ಕ್ಲಿಷ್ಟ ಎಂದರೇನು (1954), ಸಾಕ್ಷಿ (1962), ಕಳೆದ ಹತ್ತು ವರ್ಷಗಳ ಕನ್ನಡ ಕಾವ್ಯ (1965), ಮಣ್ಣಿನ ವಾಸನೆ, ನವ್ಯಕವಿತೆಯಲ್ಲಿ ಪ್ರತಿಮಾ ವಿಧಾನ (1967)- ಈ ಲೇಖನಗಳಲ್ಲಿ ವಿಚಾರಪಥ ಗ್ರಂಥದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಇರುವ ಲೇಖನಗಳಲ್ಲಿ ಇನ್ನೂ ಮುಂತಾದ ಕಡೆಗಳಲ್ಲಿ ಹರಡಿಕೊಂಡಿರುವ ಸಾಹಿತ್ಯವನ್ನು ಕುರಿತಂಥ ವಿಚಾರಸರಣಿಗಳು ಈ ಮೇಲೆ ಉದ್ಧರಿಸಿದಂಥ ಮಾತುಗಳಿಗೆ ಇನ್ನಷ್ಟು ಸ್ವಷ್ಟವಾದ ಪ್ರಬುದ್ಧವಾದ ವಿವರಣೆ, ವ್ಯಾಖ್ಯಾನಗಳಾಗಿವೆಯೇ ಹೊರತು ‘ನಡೆದು ಬಂದ ದಾರಿ’ಯ ಮುನ್ನುಡಿ ರೂಪದ ಮಾತುಗಳಿಗೆ ವ್ಯತಿರಿಕ್ತವಾದ ಮಾತುಗಳಾಗಿಲ್ಲ ಎಂಬುದು ಮುಖ್ಯವಾದ ಸಂಗತಿಯಾಗಿದೆ. ಅಡಿಗರ ಹೊಸ ಕಾವ್ಯದ ಕಲ್ಪನೆ ಪ್ರಥಮ ದರ್ಜೆಯ ಕಾವ್ಯಸತ್ವವುಳ್ಳ ಕವಿಯೊಬ್ಬನ ಅಂತರಂಗದ ನಿಜದನಿಗೆ ನುಡಿ ಕೊಟ್ಟದ್ದಾಗಿತ್ತು. ಹೊಸತು ಬೇಕೆಂಬ ಕೇವಲ ತೋರಿಕೆಯ ಅನಿಸಿಕೆಯ ಮಾತಾಗಿರಲಿಲ್ಲ ಎಂಬುದನ್ನು ಮುಂದಿನ ಅವರ ಚಂಡೆ ಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ ಎಂಬ ಕವನ ಸಂಕಲನಗಳು ಸಿದ್ಧಪಡಿಸಿ ತೋರಿಸಿವೆ. ಅಷ್ಟೇ ಅಲ್ಲದೆ, ಮುಂದೆ ಸುಮಾರು ಕಾಲು ಶತಮಾನಗಳ ಕಾಲ ಅವರಿಗಿಂತ ಕಿರಿಯ ತಲೆಮಾರಿನವರ ಕಾವ್ಯದ ಮೇಲೆ ಮಾತ್ರವಲ್ಲ ಹಿರಿಯ ತಲೆಮಾರಿನ ಮತ್ತು ಓರಗೆಯ ತಲೆಮಾರಿನ ಕವಿ,

ಸಾಹಿತಿಗಳ ಮೇಲೆ ಹಾಗೂ ಬೇರೆ ಬೇರೆ ಸಾಹಿತ್ಯ ಪ್ರಕಾರಗಳ ಮೇಲೆ ಅವರ ಕಾವ್ಯ ಮತ್ತು ಸಾಹಿತ್ಯ ಚಿಂತನೆ ಬೀರಿದ ಪ್ರಭಾವ, ಒಡ್ಡಿದ ಸವಾಲು ಕನ್ನಡ ಸಾಹಿತ್ಯ ಚರಿತ್ರೆಯ ಮುಖ್ಯ ಅಧ್ಯಾಯಗಳಲ್ಲೊಂದಾಗಿದೆ. ಅಡಿಗರ ಕಾವ್ಯ ಮತ್ತು ಸಾಹಿತ್ಯಿಕ ಚಿಂತನೆಗಳು ಕಳೆದ ಕಾಲು ಶತಮಾನದಿಂದಲೂ ಪ್ರಬಲವಾದ ವಿರೋದಿ ಮತ್ತು ಪ್ರಬಲವಾದ ಸಮರ್ಥನೆ ಎರಡನ್ನೂ ಎದುರಿಸಿಕೊಂಡು ಕುದುರಿಸಿಕೊಂಡು ಬೆಳೆದು ಬಂದದ್ದಾಗಿದೆ.

ಗೋಕಾಕ ಮತ್ತು ಅಡಿಗ: ಎರಡು ಪ್ರಧಾನ ಪ್ರವೃತ್ತಿ

ಬದಲಾಯಿಸಿ

ಗೋಕಾಕರ ರೀತಿಯ ನವ್ಯಕಾವ್ಯದಂತೆ ಅಡಿಗರ ರೀತಿಯ ನವ್ಯಕಾವ್ಯದಲ್ಲಿಯೂ ಸಂಕೇತ ನಿಷ್ಠತೆ, ಪ್ರತಿಮಾ ಪ್ರಧಾನತೆ, ನವೋದಯ ರೀತಿಯ ನಿಯತ ಛಂದಸ್ಸಿನ ಉಲ್ಲಂಘನೆ, ಬುದ್ಧಿ ಪ್ರಧಾನತೆಗಳ ಮೇಲೆ ಒತ್ತು ಬಿದ್ದದ್ದು ಕಾಣುತ್ತದೆ. ಗೋಕಾಕರಂತೆ ಅಡಿಗರಲ್ಲಿಯೂ ಅಧ್ಯಾತ್ಮದ ತುಡಿತವಿರುವುದು ಕಾಣುತ್ತದೆ. ಗೋಕಾಕರು ಅರವಿಂದರ ದರ್ಶನದ ಬಗೆಗೆ ಬೆಳೆಸಿಕೊಂಡ ನಂಬಿಕೆ, ಶ್ರದ್ಧೆಗಳ ಮೂಲಕ ಲೋಕದ ವಿದ್ಯಮಾನಗಳನ್ನು ಅದಿsಮಾನಸ, ವಿಶ್ವಮಾನವತಾವಾದಗಳ ಪರಿಕಲ್ಪನೆಯ ಸಂದರ್ಭದಲ್ಲಿಟ್ಟು ಧೇನಿಸುತ್ತಾರೆ, ವ್ಯಾಖ್ಯಾನಿಸುತ್ತಾರೆ. ಅಡಿಗರು ಸ್ವಾನುಭವದ ನಿಜದನಿಗಳನ್ನು ಆಪ್ತವಾಗಿ ಕೇಳಿಸಿಕೊಂಡು ಗುಣಾತ್ಮಕ ನಿರಪೇಕ್ಷತೆಯಲ್ಲಿ ಪರಿಭಾವಿಸಿ ಅದರೆಲ್ಲ ದ್ವಂದ್ವ, ಸಂಕೀರ್ಣತೆಗಳಲ್ಲಿ ಅದಕ್ಕೆ ಭಾಷೆಯಲ್ಲಿ ಆಕಾರ ಕೊಡುವ ವ್ರತನಿಷ್ಠ ಮನೋಭಾವದ ಕವಿಯಾಗಿದ್ದಾರೆ.

ಆದ್ದರಿಂದ ವಿಶ್ವಮಾನವ ಪ್ರಜ್ಞೆಯ ಆದರ್ಶವು ಆರೋಪಿತಭಂಗಿ, ಪಾತ್ರಾಭಿನಯದ ನಿಲುವು ಎಂದು ಅವರಿಗೆ ತೋರಿದರೆ ಆಶ್ಚರ್ಯವಿಲ್ಲ. ವ್ಯಕ್ತಿಪ್ರಜ್ಞೆ ನಿಷ್ಠುರ ವಾಸ್ತವದ ನೆಲೆಯಲ್ಲಿ ಶೋಧನೆಗೊಳಗಾದಾಗ ಮನುಷ್ಯನ ದೌರ್ಬಲ್ಯ, ಸಣ್ಣತನಗಳನ್ನೂ ಅದು ಎತ್ತಿ ತೋರಿಸುವುದರಿಂದ ಅಂಥ ಕಾವ್ಯ ಮಾನವ ಚೈತನ್ಯದ ಔನ್ನತ್ಯದ ಬಗೆಗೆ ಆತ್ಮವಿಶ್ವಾಸ, ಆಶಾವಾದಿತ್ವ, ಮಹತ್ವಾಕಾಂಕ್ಷೆಗಳನ್ನು ಕುದುರಿಸದೆ ಓದುಗನಲ್ಲಿ ವಿಷಾದದ, ನಿರಾಶಾವಾದದ, ಸಿನಿಕತನದ ಧೋರಣೆಯನ್ನೇ ಹೆಚ್ಚಾಗಿ ಪೋಷಿಸೀತೆಂಬ ದಿಗಿಲು ಗೋಕಾಕರಿಗೂ ಇದ್ದರೆ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಈ ಇಬ್ಬರೂ ಭಿನ್ನ ಪ್ರಕೃತಿಯ, ಭಿನ್ನ ದೃಷ್ಟಿಕೋನದ ಕವಿಗಳೆಂಬುದೂ ನವ್ಯಕಾವ್ಯದ ಎರಡು ಪ್ರಧಾನ ಪ್ರವೃತ್ತಿಗಳ ಪ್ರವರ್ತಕರೆಂಬುದೂ ಮುಖ್ಯವಾದ ಸಂಗತಿಯಾಗಿದೆ.

ಅಡಿಗರ ನವ್ಯಮಾರ್ಗದಿಂದ ಪ್ರಭಾವಿತರಾಗಿ ತಮ್ಮ ಕಾವ್ಯಜೀವನವನ್ನು ರೂಪಿಸಿಕೊಂಡ ಕವಿಗಳ ಸಂಖ್ಯೆ ಹೇರಳವಾಗಿದೆ. ಯುವತಲೆಮಾರಿನ ಪ್ರತಿಭಾಶಾಲಿ ಕವಿಗಳಲ್ಲಿ ಹಲವರು ಈ ಮಾರ್ಗಕ್ಕೆ ಸೇರುತ್ತಾರೆ. ಬಿ.ಸಿ.ರಾಮಚಂದ್ರಶರ್ಮರದು ನವ್ಯಕಾವ್ಯದ ಆರಂಭದ ಕಾಲದಲ್ಲಿ ಅಡಿಗರ ಜೊತೆ ಜೊತೆಯಲ್ಲೇ ಕೇಳಿಬರುತ್ತಿದ್ದ ಹೆಸರಾಗಿತ್ತು. ಏಳುಸುತ್ತಿನ ಕೋಟೆ (1953), ಬುವಿ ನೀಡಿದ ಸ್ಫೂರ್ತಿ, ಹೇಸರಗತ್ತೆ ಇವು ಅವರ ನವ್ಯಕಾವ್ಯ ಸಂಕಲನಗಳು. ಲೈಂಗಿಕ ವಸ್ತುವಿನಲ್ಲಿಯೇ ಹೆಚ್ಚಾದ ಲೋಲುಪತೆ ತೋರಿಸಿದ ಶರ್ಮರು ಅಭಿವ್ಯಕ್ತಿ ವಿಧಾನದ ಹೊಸತನ ಮತ್ತು ಕಸುವಿನಿಂದಾಗಿ ತುಂಬ ಭರವಸೆ ಹುಟ್ಟಿಸಿದ್ದರು. ಮುಂದೆ ಅವರ ಕಾವ್ಯಜೀವನ ಪ್ರವರ್ಧಮಾನವಾಗದೆ ಇಳಿಮುಖ ವಾಗಿರುವುದಕ್ಕೆ ಅವರ ಹೇಸರಗತ್ತೆ ಕವನ ಸಂಕಲನ ನಿದರ್ಶನವಾಗಿದೆ. ಮುಂದೆ ಶರ್ಮರಂತೆ ಕಾಮವೇ ಪ್ರಧಾನವಸ್ತುವಾಗಿ ಉಳ್ಳ ಕವನಗಳನ್ನು ಹೆಚ್ಚಾಗಿ ಬರೆದು ಶರ್ಮರನ್ನು ನೆನಪಿಗೆ ತಂದವರು ಕಾಮಿ, ಆಮೆ ಸಂಕಲನಗಳ ಎಚ್.ಎಂ.ಚನ್ನಯ್ಯನವರು. ಭಾಷೆಯ ಉಪಯೋಗ ಮತ್ತು ಲಯಗತಿಯಲ್ಲಿ ತಮ್ಮದೇ ಆದ ವಿಶಿಷ್ಟತೆಯನ್ನು ಅವರು ರೂಢಿಸಿದರು. ಯು.ಆರ್.ಅನಂತಮೂರ್ತಿಯವರ ‘ಬಾವಲಿ’ ಸಂಕಲನವೇ ಇನ್ನೂ ಕೆಲವು ಕವನಗಳನ್ನೊಳಗೊಂಡು 15 ಪದ್ಯಗಳು ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಭಿಕ್ಷುಕರು, ಕಿಳ್ಳೇಕ್ಯಾತರ ಹುಡುಗಿ, ರಾಜನ ಹೊಸ ವರ್ಷದ ಬೇಡಿಕೆಗಳಂಥ ಉತ್ತಮ ಕವನಗಳು ಅದರಲ್ಲಿವೆ. ಪಿ.ಲಂಕೇಶರು ಬಿಚ್ಚು, ತಲೆಮಾರು ಎಂಬ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಪ್ರಥಮ ಸಂಕಲನವಾದ ಬಿಚ್ಚುವಿನಲ್ಲಿ ಹಲವು ಉತ್ತಮ ಕವನಗಳಿವೆ. ಅಡಿಗರಿಗೆ ಭಿನ್ನವಾದ ಲಯಸಾಧ್ಯತೆಗಳ ಹುಡುಕಾಟವಿದೆ. ಕವಿಯ ವಿಶಿಷ್ಟವÆ ಸತ್ವಪುರ್ಣವೂ ಆದ ದನಿಯ ಮುದ್ರೆ ಇದೆ. ಅವರ ಅವ್ವ ಕನ್ನಡದ ಅತ್ಯುತ್ತಮ ಕವನಗಳಲ್ಲೊಂದೆಂದು ಸುಪ್ರಸಿದ್ಧವಾಗಿದೆ. ಬೃಹನ್ನಳೆ ಸೋಮುವಿನ ಸ್ವಗತ ಲಹರಿ ಸಂಕಲನದ ಅನಂತರ ಪುರ್ಣಚಂದ್ರ ತೇಜಸ್ವಿಯವರು ಕವನಗಳನ್ನು ಹೆಚ್ಚು ಬರೆಯಲಿಲ್ಲ.

ಪಾಟೀಲರು ಮತ್ತು ಕಂಬಾರರು

ಬದಲಾಯಿಸಿ

ಚಂದ್ರಶೇಖರ ಪಾಟೀಲರು ಬಾನುಲಿ, ಮಧ್ಯಬಿಂದು, ಹತ್ತೊಂಬತ್ತು ಕವನಗಳು ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಮಕಾಲೀನ ಪ್ರಜ್ಞೆ, ಜೀವನದ ಬಗ್ಗೆ ಲವಲವಿಕೆ, ವಿಡಂಬನೆಯ ಮಾತುಗಾರಿಕೆ, ಅರ್ಥಭಾರವನ್ನು ಹಗುರಾಗಿ ತೇಲಿಸುವ ಜಾಣ್ಮೆ, ಅಭಿವ್ಯಕ್ತಿಯ ವ್ಯಂಗ್ಯಪುರ್ಣತೆ ಇವು ಎಲ್ಲ ಕವಿತೆಗಳ ಸಾಮಾನ್ಯ ಲಕ್ಷಣಗಳು ಎಂದು ಹತ್ತೊಂಬತ್ತು ಕವನಗಳು ಸಂಗ್ರಹದ ಹಿನ್ನುಡಿಯಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಹೇಳಿದ ಮಾತು ಪಾಟೀಲರ ಒಟ್ಟು ಕಾವ್ಯಕ್ಕೇ ಅನ್ವಯವಾಗ ಬಹುದಾದ ಮಾತಾಗಿದೆ.

ಚಂದ್ರಶೇಖರ ಕಂಬಾರರ ಹೇಳತೇನ ಕೇಳ, ತಕರಾರಿನವರು ನವ್ಯಕಾವ್ಯ ಸಂಕಲನಗಳಾಗಿವೆ. ಜನಪದ ಭಾಷೆಯ ಬಳಕೆ ಮತ್ತು ಕಲ್ಪಕತೆಯ ಸಮೃದ್ಧಿ ಪ್ರಥಮ ದರ್ಜೆಯದಾಗಿದೆ. ನವ್ಯಧೋರಣೆ ಮತ್ತು ಅಭಿವ್ಯಕ್ತಿ ತಂತ್ರಕ್ಕೆ ಜನಪದದ ಜೀವಂತ ಆಡುಭಾಷೆಯನ್ನು ಕಸಿಗೊಳಿಸುವುದರಲ್ಲಿ ಅವರ ಸಾಧನೆ ಅಪುರ್ವವಾದದ್ದಾಗಿದೆ. ಜನ್ಮಜಾತ ಕವಿಪ್ರತಿಭೆಯ ಪುಟಿತ ಇವರಷ್ಟು ಸಹಜ ಸಮೃದ್ಧಿಯಲ್ಲಿ ಅಡಿಗರ ಅನಂತರದ ಇನ್ನಾವ ನವ್ಯಕವಿಯಲ್ಲಿಯೂ ಕಾಣುವುದಿಲ್ಲ. ಕಂಬಾರರು ಅಡಿಗರ ಪ್ರಭಾವದಿಂದ ಬಿಡಿಸಿಕೊಳ್ಳಬೇಕೆಂಬ ತಮ್ಮ ಅನಿಸಿಕೆಯನ್ನು ಇತರರೊಂದಿಗೆ ತಾವು ಸಂಪಾದಿಸಿದ ‘ಅಕಾವ್ಯ’ ಎಂಬ ಪತ್ರಿಕೆಯಲ್ಲಿ ‘ಏನೇನೋ ಮಾಡಿ ಸುದ್ದಿಯಲ್ಲಿರುವ ಗತ್ತಲ್ಲ ‘ಅಕಾವ್ಯ’. ಅಥವಾ ಜಾತೀಯತೆಯ ಕಿಡಿಗೇಡಿ ರಾಜಕೀಯವೂ ಅಲ್ಲ. ನಮಗೂ ಗಂಭೀರ ಕಾಳಜಿಗಳಿವೆ. ಘೂೕಷಣೆಗಳಿಂದ ಹೊಸ ಕಾವ್ಯ ಹುಟ್ಟಬಾರದೆಂದೇನು ನಿಯಮವಿದೆಯೇ? ಅಕಾವ್ಯ ನಮಗೆ ನಾವೇ ಹಾಕಿಕೊಂಡ ಸವಾಲು, ಅದಕ್ಕೆ ಜವಾಬು ಹುಡುಕುವುದು ನಮ್ಮ ಜವಾಬ್ದಾರಿ. ಸತ್ವವಿದ್ದರೆ ಅದನ್ನು ಗುರುತಿಸುವುದು ಗುಣಪಕ್ಷಪಾತಿಗಳಾದ ಸಹೃದಯರ ಜವಾಬ್ದಾರಿ’ ಎಂದು ದಿಟ್ಟತನದಿಂದ ಪ್ರತಿಪಾದಿಸಿದ್ದುಂಟು.

ನವ್ಯ ಮಾರ್ಗದ ಕವನಗಳ ಸಾಲು

ಬದಲಾಯಿಸಿ

ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪು ದೇವತೆ ಮತ್ತು ಲೀಲಾರಾಮರ ಕವನಗಳು ಎಂಬ ಸಂಕಲನಗಳ ಸುಮತೀಂದ್ರ ನಾಡಿಗರು ಪದ್ಯ ಕಟ್ಟುವುದರಲ್ಲಿ ತೋರುವ ಚಾಕಚಕ್ಯತೆ, ಸಹಜತೆಗಳು ಮನಸೆಳೆಯುವಂತಿವೆ. ಎಲ್ಲ ಕವನಗಳಿಗೂ ತಮ್ಮನ್ನು ಓದಿಸಿಕೊಳ್ಳುವ ಗುಣ ಇದ್ದೇ ಇದೆ. ಕಪ್ಪು ದೇವತೆ ಬಹುಶಃ ಅವರ ಅತ್ಯುತ್ತಮ ಕವನವಾಗಿದೆ. ಪದ್ಯ ಕಟ್ಟುವ ಚಾಕಚಕ್ಯತೆಯಲ್ಲಿ, ಸಹಜತೆಯಲ್ಲಿ ಸುಮತೀಂದ್ರರನ್ನೂ ಮೀರಿಸುವಂತಿರುವ ನಿಸಾರ್ ಅಹಮದ್ ಅವರು ಮನಸ್ಸು ಗಾಂದಿs ಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು ಮುಂತಾದ ಹಲವಾರು ಸಂಕಲನಗಳನ್ನು ಪ್ರಕಟಿಸಿರುವ ಎನ್.ಎಸ್.ಲಕ್ಷ್ಮೀನಾರಾಯಣಭಟ್ಟರೂ ಹೇಳುವುದನ್ನು ಪರಿಷ್ಕಾರವಾಗಿ ರುಚಿಕರವಾಗಿ ಹೇಳುವುದರ ಮೂಲಕ ಓದುಗನನ್ನು ಮುಟ್ಟುವ ಕವಿ. ರಸಗಂಗೆ, ಉತ್ತರ, ಚಿತ್ರವಿಚಿತ್ರ ಎಂಬ ಸಂಕಲನಗಳನ್ನು ಪ್ರಕಟಿಸಿರುವ ಜಿ.ಎಸ್.ಸಿದ್ಧಲಿಂಗಯ್ಯನವರೂ ಅಂಜೂರ, ನದಿಯ ಮೇಲಿನ ಗಾಳಿ ಸಂಕಲನಗಳನ್ನು ಪ್ರಕಟಿಸಿರುವ ಕ.ವೆಂ.ರಾಜಗೋಪಾಲರೂ ಯಾವ ಅತಿಗೂ ಹೋಗದೆ ಕಾವ್ಯ ರಚಿಸಬೇಕೆಂಬ ಹಂಬಲವಿರುವವರು. ರಾಜಗೋಪಾಲರ ಮನಸ್ಸಿಗೆ ಮೃದುವಾಗುವ, ಕರಗುವ ಗುಣ ಇದೆ. ಸಿದ್ಧಲಿಂಗಯ್ಯನವರ ಮನಸ್ಸು ಸರಿ ತಪ್ಪುಗಳ ಬಗೆಗೆ ಹೆಚ್ಚಿನ ಆತ್ಮವಿಶ್ವಾಸದಿಂದ ವ್ಯವಹರಿಸುತ್ತದೆ. ಅವರ ‘ಮಿಥಿಲೆಗಿಲ್ಲಿಂದಲೇ ಮಾರ್ಗವೇನು ಗುರು’ ಸಾಕಷ್ಟು ಪ್ರಸಿದ್ಧಿಪಡೆದ ಕವನವಾಗಿದೆ.

ಕೆ.ವಿ.ತಿರುಮಲೇಶರು ಮುಖವಾಡಗಳು, ವಠಾರ, ಮಹಾಪ್ರಸ್ಥಾನ ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಭಾಷೆ ಮತ್ತು ಲಯದ ದೃಷ್ಟಿಯಿಂದ ನೋಡಿದಾಗ ಅವರು ಅನನ್ಯತೆಯನ್ನು ಪ್ರಕಟಿಸಿರುವುದು ಕಂಡು ಬರುತ್ತದೆ. ಕೊಕ್ಕೊಡುತ್ತ ಹರಿಯುವ ಲಯಗತಿ ಅವರ ಕಾವ್ಯದ ಲಯವಿಧಾನದಲ್ಲಿ ಹೆಚ್ಚಾಗಿ ಕಾಣುತ್ತದೆ. ಮಹಾಪ್ರಸ್ಥಾನ ಅವರ ಕಾವ್ಯ ಗಂಭೀರವಾದ ಆಯಾಮವನ್ನು ಮೈಗೂಡಿಸಿಕೊಳ್ಳುತ್ತ ಬೆಳೆಯುತ್ತಿದೆ ಯೆಂಬುದಕ್ಕೆ ಸಾಕ್ಷಿ ನುಡಿಯುವಂತಿದೆ. ಶ್ರೀಕೃಷ್ಣ ಆಲನಹಳ್ಳಿಯವರ ಮಣ್ಣಿನ ಹಾಡು, ಕಾಡುಗಿಡದ ಹಾಡು ಪಾಡು ಸಂಕಲನಗಳ ಕವನಗಳು ತಮ್ಮ ಕಸುವು ಮತ್ತು ಜೀವನಾನುರಕ್ತಿಯಿಂದಾಗಿ ಮನಸೆಳೆಯುತ್ತವೆ. ಗೋಪಿ ಮತ್ತು ಗಾಂಡಲೀನ ಸಂಕಲನದ ಬಿ.ಆರ್.ಲಕ್ಷ್ಮಣರಾವ್ ಅವರ ಬರೆವಣಿಗೆಗೆ ತನ್ನದೇ ಆದ ಧಾಟಿ ಧೋರಣೆಗಳಿವೆ.

ಎ.ಕೆ.ರಾಮನುಜನ್‍ರಿಂದ ಹೊಸ ಆಯಾಮ ಆಡು ಭಾಷೆಯ ಕವನಗಳು

ಬದಲಾಯಿಸಿ

ಅನನ್ಯ ರೀತಿಗಳಲ್ಲಿ ಆಡುಭಾಷೆಯ ಪ್ರಯೋಗ ನಡೆಸುವುದರ ಮೂಲಕ ನವ್ಯಕಾವ್ಯಕ್ಕೆ ವೈವಿಧ್ಯವನ್ನೂ ಹೊಸ ಆಯಾಮವನ್ನೂ ತಂದುಕೊಟ್ಟವರು ‘ಹೊಕ್ಕುಳಲ್ಲಿ ಹೂವಿಲ್ಲ’ ಸಂಕಲನದ ಎ.ಕೆ.ರಾಮನುಜನ್ ಮತ್ತು ಶಿಲಾಲತೆ, ಮನೆಯಿಂದ ಮನೆಗೆ ಸಂಕಲನಗಳ ಕೆ.ಎಸ್.ನರಸಿಂಹ ಸ್ವಾಮಿಯವರು. ಅಡಿಗರು ಹೆಚ್ಚು ಸಂಕೀರ್ಣವೂ ವೈವಿಧ್ಯಪುರ್ಣವÆ ಆದ ಬಗೆಯಲ್ಲಿ ಕನ್ನಡ ಭಾಷೆಯ ಸಾಧ್ಯತೆಯನ್ನು ಸೂರೆಮಾಡಿದ್ದು ನಿಜ. ಆದರೆ ಈ ಇಬ್ಬರೂ ಕೇವಲ ಶಿಷ್ಟ ಕನ್ನಡ ನುಡಿಯನ್ನು ಶ್ರುತಿಗೊಳಿಸುವುದರ ಮೂಲಕವೇ ಎಂಥೆಂಥ ಲಯವಿನ್ಯಾಸ, ಏನೆಲ್ಲ ಪಲುಕು, ಸೂಕ್ಷ್ಮಗಳನ್ನು ದುಡಿಸಿಕೊಳ್ಳಬಹುದೆಂಬುದನ್ನು ಅತ್ಯುತ್ತಮ ಮಟ್ಟದಲ್ಲಿ ತಮ್ಮದೇ ಆದ ರೀತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ನಾಗರಿಕ (ಅರ್ಬನ್) ಭಾಷೆಯಲ್ಲಿಯೇ ವಿವಿಧ ಲಯ ಸಾಧ್ಯತೆಗಳನ್ನು ಲಂಕೇಶರೂ ಅನಂತರದ ತಿರುಮಲೇಶರೂ ತೆರೆದು ತೋರಿಸಿ ಆಡುನುಡಿಗೆ ಲಯವೈವಿಧ್ಯವನ್ನು ತಂದದ್ದು ಉಂಟಾದರೂ ಅವರಿಬ್ಬರ ಆ ಪ್ರಯೋಗಗಳಲ್ಲಿಯೂ ಲಯ ಗತಿಯ ವೇಗ, ತುಯ್ತಗಳು ಜಾಸ್ತಿಯಾಗಿದ್ದವು. ಚಂದ್ರಶೇಖರ ಕಂಬಾರರೂ ಜನಪದ ಆಡುಭಾಷೆಯನ್ನು ಬಳಸಿದಲ್ಲೆಲ್ಲ ಅದನ್ನು ಹೊಸ ಸಂವೇದನೆಗೆ ಒಗ್ಗಿಸುವುದರ ಮೂಲಕ ನವ್ಯಕಾವ್ಯರೀತಿಗೆ ಹೊಸ ವೈವಿಧ್ಯ, ಆಯಾಮ ತಂದಿದ್ದಾರೆ. ಆದರೆ ರಾಮಾನುಜನ್ ಮತ್ತು ಕೆ.ಎಸ್.ನ ಅವರು ಆಡುನುಡಿಯ ನಡಿಗೆಯನ್ನು ನಿಧಾನಗೊಳಿಸಿ ಗದ್ಯಗತಿಗೆ ಪದ್ಯದ ಲಯಗತಿಯನ್ನು ಎಷ್ಟು ಹತ್ತಿರ ತಂದು ಕಾವ್ಯವನ್ನು ಸೃಷ್ಟಿಸಬಹುದೆಂಬುದನ್ನು ಕನ್ನಡದಲ್ಲಿ ಅದರ ಆತ್ಯಂತಿಕ ಸ್ಥಿತಿಯಲ್ಲಿ ತೋರಿಸಿ ಕೊಟ್ಟವರೆಂಬುದನ್ನು ಮರೆಯುವಂತಿಲ್ಲ. ರಾಮಾನುಜನ್ ಅವರ ಮೇಲೆ ಅಡಿಗರ ಪ್ರಭಾವ ತೋರಿಸುವುದು ಕಷ್ಟ. ಅವರದು ಶುದ್ಧವಾಗಿ ಹೊಸದನಿ. ಕೆ.ಎಸ್.ನರಸಿಂಹಸ್ವಾಮಿ ಯವರು ಮೈಸೂರು ಮಲ್ಲಿಗೆ, ಇರುವಂತಿಗೆ ಮುಂತಾದ ಕವನಸಂಕಲನಗಳಲ್ಲಿ ನವೋದಯದ ರೀತಿಯಲ್ಲಿ ಸುಕುಮಾರವಾಗಿ, ಅಚ್ಚುಕಟ್ಟಾಗಿ ಬರೆಯುತ್ತಿದ್ದವರು. ಶಿಲಾಲತೆಯಿಂದ ಮುಂದಿನ ಕಾವ್ಯದಲ್ಲಿ ಸೌಕುಮಾರ್ಯ, ಅಚ್ಚುಕಟ್ಟುಗಳು ಇಲ್ಲವೆಂದಲ್ಲ. ಆದರೆ ಅವು ಬದುಕಿನ ಗಂಭೀರ ಆಳಗಳನ್ನು ಬಗೆಯವಲ್ಲಿ ಬಳಕೆಯಾದ ರೀತಿ ಅನನ್ಯವಾಗಿದೆ. ರಾಮಾನುಜನ್ ಅವರ ಬರೆವಣಿಗೆಯ ಪ್ರಭಾವ ಕೆಲವು ಎಳೆಯ ಕವಿಗಳ ಮೇಲೆ ಆದಂತೆ ನರಸಿಂಹಸ್ವಾಮಿಯವರ ಪ್ರಭಾವ ಅಷ್ಟಾಗಿ ಆದಂತೆ ತೋರುವುದಿಲ್ಲ. ರಾಮಾನುಜನ್ ಅವರನ್ನು ಅನುಕರಿಸಿದವರಿಗೂ ರಾಮಾನುಜನ್ ಅವರ ಶಿಷ್ಟ ನಾಜೂಕನ್ನು (ಸೊಪಿsಸ್ಟಿಕೇಷನ್) ರೂಢಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಆದ್ದರಿಂದ ಉಳಿದವರಲ್ಲಿ ಹೆಚ್ಚು ಕಡೆಗಳಲ್ಲಿ ಲಯದ ಕಸರತ್ತುಗಳಾಗಿಯೇ ಕಾಣಿಸುವಂತಾಯಿತು.

ಮತ್ತೆ ನವೋದಯದ ಛಾಯೆ

ಬದಲಾಯಿಸಿ

ಜಿ.ಎಸ್.ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯವರು ತಮ್ಮ ಕವಿ ಜೀವನದ ಪ್ರಥಮ ಹಂತದಲ್ಲಿ ನವೋದಯದ ಸೌಂದರ್ಯಾರಾಧಕ ಮನೋಭಾವವನ್ನು ಬೆಳೆಸಿಕೊಂಡಿದ್ದವರು. ಶಿವರುದ್ರಪ್ಪನವರ ಸಾಮಗಾನ, ಚೆಲುವು - ಒಲವು, ದೇವಶಿಲ್ಪಗಳೂ ಕಣವಿಯವರ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರಗಳೂ ಆ ರೀತಿಯ ಮನೋಭಾವವನ್ನೂ ಪ್ರತಿನಿದಿsಸುತ್ತವೆ. ಶಿವರುದ್ರಪ್ಪನವರ ದೀಪದ ಹೆಜ್ಜೆ ಕವನಸಂಕಲನ ಅವರ ಕಾವ್ಯಜೀವನದ ಮಹತ್ತ್ವದ ಘಟ್ಟವನ್ನು ಸೂಚಿಸಿತು. ಅವರ ಕಾವ್ಯಶಕ್ತಿ ಹೊಸ ಚೈತನ್ಯವನ್ನು ರೂಢಿಸಿಕೊಳ್ಳುತ್ತದೆ ಎಂಬ ಭರವಸೆಯನ್ನೂ ಹುಟ್ಟಿಸಿತು. ಆದರೆ ಮುಂದೆ ಬಂದ ಕಾರ್ತೀಕ, ಅನಾವರಣ, ತೆರೆದ ದಾರಿ, ಗೋಡೆ ಸಂಕಲನಗಳು ನಿರೀಕ್ಷಿತ ಬೆಳೆವಣಿಗೆಯನ್ನು ತೋರಿಸದಿದ್ದುದು ಆಶ್ಚರ್ಯ. ಕಣವಿಯವರ ಮಣ್ಣಿನ ಮೆರವಣಿಗೆ, ನೆಲಮುಗಿಲು, ಎರಡು ದಡಗಳಲ್ಲಿ ಮಹತ್ವಾಕಾಂಕ್ಷೆಯ ಬರೆವಣಿಗೆ ಕಾಣುತ್ತದೆ. ಈ ಇಬ್ಬರು ಕವಿಗಳನ್ನು ‘ಸಮನ್ವಯ’ ಕವಿಗಳೆಂದು ಕರೆಯುವ ಪರಿಪಾಠ ಬಂದುಹೋಗಿದೆ. ನವೋದಯ ನವ್ಯಗಳ ನಡುವೆ ತಮ್ಮದೇ ಆದ ವಿಶಿಷ್ಟ ಬಗೆಯ ಸೃಜನಾತ್ಮಕ ಭಾವಸಂಬಂಧ ಸ್ಥಾಪಿಸಲು ಹೆಣಗುವುದರಲ್ಲಿ ಅವರಿಬ್ಬರಲ್ಲಿ ಕಂಡುಬರುತ್ತಿರುವ ಸಾಮ್ಯವೇ ಅವರನ್ನು ಹಾಗೆ ಕರೆಯುವುದಕ್ಕೆ ಕಾರಣವಾಗಿರುವಂತಿದೆ. ಇಲ್ಲಿಯೇ ಹೆಸರಿಸಬಹುದಾದ ಇನ್ನಿಬ್ಬರು ಕವಿಗಳು ನಾಣ್ಯಯಾತ್ರೆ, ಮಂಗಳಾರತಿ, ಕುಂಡಗಳೇ ಸಾಕು ಸಂಕಲನಗಳ ಸುಜನಾ (ಎಸ್.ನಾರಾಯಣ ಶೆಟ್ಟಿ) ಮತ್ತು ತಾರಾಸಖ, ಅನಂತ ಪೃಥ್ವೀ, ಪ್ರಕೃತಿ, ವರ್ತಮಾನ, ಮೊದಲಾದ ಸಂಕಲನಗಳ ಸಿ.ಪಿ.ಕೆ. (ಸಿ.ಪಿ.ಕೃಷ್ಣಕುಮಾರ್).

ವಿಡಂಬನೆ ಮತ್ತು ನವ್ಯ

ಬದಲಾಯಿಸಿ

ನವೋದಯ ಕಾವ್ಯರೀತಿಗೆ ಭಿನ್ನವಾದ ರೀತಿಯ ಕಾವ್ಯಸೃಷ್ಟಿಯಲ್ಲಿ ತೊಡಗಿದ ಮೊದಲಿಗರಲ್ಲಿ ದಿವಂಗತ ಪೇಜಾವರ ಸದಾಶಿವರಾಯ ಮತ್ತು ವಿ.ಜಿ.ಭಟ್ಟರನ್ನು ಮರೆಯುವಂತಿಲ್ಲ. ತಮ್ಮಚಿಕ್ಕ ವಯಸ್ಸಿನಲ್ಲಿಯೇ ಇಟಲಿಯಲ್ಲಿ ತೀರಿಹೋದ ಶಿಲ್ಪಶಾಸ್ತ್ರ ತಜ್ಞರೂ ಕವಿಯೂ ಆದ ಪೇಜಾವರ ಸದಾಶಿವರಾಯರ ವರುಣ ಎಂಬ ಸಂಕಲನ ಅವರ ಮರಣಾನಂತರ 1952ರಲ್ಲಿ ಪ್ರಕಟವಾದರೂ ನವ್ಯಕಾವ್ಯದ ಅಧಿಕೃತ ಘೋಷಣೆಯಾಗುವುದಕ್ಕಿಂತ ಹಿಂದೆಯೇ ಅಂದರೆ 1950ಕ್ಕಿಂತ ಮೊದಲೇ ಅವರು ನಾಟ್ಯೋತ್ಸವ, ವರುಣದಂಥ ಕವನಗಳನ್ನು ಬರೆದಿದ್ದಂತೆ ತಿಳಿದುಬರುತ್ತದೆ. ನಾಟ್ಯೋತ್ಸವ ಇಂದಿಗೂ ತನ್ನ ಜೀವನೋತ್ಸಾಹ, ಲಯ ವೈವಿಧ್ಯ, ಹೊಸತನಗಳಿಂದಾಗಿ ಮನಸೆಳೆಯುವಂತಿದೆ. ಪಲಾಯನ, ರಕ್ತಾಂಜಲಿ, ತುಂಟನ ಪದಗಳು, ಕಾವ್ಯ ವೇದನೆ, ಕಿಷ್ಕಿಂದೆ ಸಂಕಲನಗಳ ವಿ.ಜಿ.ಭಟ್ಟರು ಸೂತ್ರಗಳಿಗೆ ಸಿಲುಕದೆ ಸುಸೂತ್ರವಾಗಿ ಬದುಕಲು ಆಗುವುದೆಂಬ ವಿಶ್ವಾಸವುಳ್ಳವರೆಂದು ತಾವೇ ಹೇಳಿಕೊಂಡಿದ್ದಾರೆ. ಸೂತ್ರಗಳಿಗೆ ಸಿಗದ ಸ್ವತಂತ್ರಮನೋಧರ್ಮ ಅವರದೆಂಬುದರಲ್ಲಿ ಅನುಮಾನಕ್ಕೆ ಎಡೆಯಿಲ್ಲ. ಆದರೆ ‘ಸುಸೂತ್ರ’ ಎಂಬ ಮಾತಿಗೆ ಸಲೀಸಾಗಿ ಎಂಬ ಸಾಮಾನ್ಯಾರ್ಥ ಮಾಡಿದರೆ ಅವರೂ ಒಪ್ಪಲಿಕ್ಕಿಲ್ಲ. ಏಕೆಂದರೆ ಅವರಿಗೆ ಬದುಕಿನ ಸಲೀಸುತನದಲ್ಲಿ ನಂಬಿಕೆಯಿಲ್ಲ. ಒಳ್ಳೆಯ ಸೂತ್ರವೊಂದು ತಮ್ಮ ಕಾವ್ಯದಲ್ಲಿದೆ ಎಂಬರ್ಥದಲ್ಲಿ ಅವರು ಸುಸೂತ್ರ ಎಂಬ ಪದ ಬಳಸಿದ್ದರೆ ಅದರಲ್ಲಿ ಆತ್ಮಪ್ರತ್ಯಯ ಕಂಡುಬಂದರೂ ಸತ್ಯಾಂಶವಿದೆ. ಇಲ್ಲಿಯೇ ಹೆಸರಿಸಬೇಕಾದವರು ನಂದನ, ನಾಯಿಕೊಡೆ ಸಂಕಲನಗಳ ಎಚ್.ಎಸ್.ಬಿಳಿಗಿರಿಯವರು. ವಿ.ಜಿ.ಭಟ್ಟರಂತೆ ಅವರೂ ಯಾವ ಸೂತ್ರಕ್ಕೂ ಸಿಲುಕದ ಕವಿ. ವಿಡಂಬನ ಬರೆವಣಿಗೆಗೆ ಹೆಸರಾದವರು. ಅವರ ವಿಡಂಬನೆಯಲ್ಲಿ ಮೊನಚಿದ್ದರೂ ಪರೋಕ್ಷವಾದ ಆತ್ಮಪ್ರಶಂಸೆಯಿಲ್ಲದ ನಿರ್ಲಿಪ್ತ ಮನೋಭಾವವಿದೆ. ಭಟ್ಟರಿಗೂ ಬಿಳಿಗಿರಿಯವರಿಗೂ ತಮ್ಮ ಬರೆವಣಿಗೆಯಿಂದ ಲೋಕ ತಿದ್ದುತ್ತೇವೆಂಬ ಭಂಗಿಯನ್ನು ಆರೋಪಿಸಿಕೊಳ್ಳುವ ಉಮೇದಿಲ್ಲ. ನೇರವಾಗಿ ಸೂಕ್ಷ್ಮವಾಗಿ ನೋಡುವ ಚುರುಕು ಆಸಕ್ತಿಯಿದೆ.

ಇತರೆ ಕವಿಗಳು ಅವರ ಗಮನಾರ್ಹ ಕವನಗಳು

ಬದಲಾಯಿಸಿ

ಕಾವ್ಯಾರ್ಪಣ, ಮಾಯಾವಿ, ಜರಾಸಂಧ- ಸಂಕಲನಗಳನ್ನು ಪ್ರಕಟಿಸಿದ ಅರವಿಂದ ನಾಡಕರ್ಣಿ; ‘ಹಸಿರು ದೀಪ’ದ ಸುಂದರ ನಾಡಕರ್ಣಿ; ‘ಶೂದ್ರ’ದ ಹಾ. ಮು. ಪಟೇಲ; ‘ರಂಗದಿಂದೊಂದಿಷ್ಟು ದೂರ’ದ ಜಯಂತ ಕಾಯ್ಕಿಣಿ; ‘ಮನುಷ್ಯ’ದ ಆರ್ಯ; ‘ಬೆಂಕಿಬಳ್ಳಿ’, ‘ಹೊಕ್ಕಳು’ಗಳ ಜಿ.ಎಸ್.ಅವಧಾನಿ,; ‘ನೀನಾ’, ‘ಔರಂಗಜೇಬ’ದ ಸಿದ್ಧಲಿಂಗ ಪಟ್ಟಣಶೆಟ್ಟಿ; ‘ರಸವಂತಿ’, ‘ಮರ್ಲಿನ್ ಮನ್ರೋ ಮತ್ತು ಇತರ ಪದ್ಯಗಳು’ ಕಾವ್ಯದ ಗಿರಡ್ಡಿ ಗೋವಿಂದರಾಜ; ‘ಹೂವು ಚೆಲ್ಲಿದ ಹಾದಿಯಲ್ಲಿ’ಯ ಕೆ.ವಿ.ಸುಬ್ಬಣ್ಣ; ‘ನಂದಿಕೋಲು’ನ ಚಂದ್ರಕಾಂತ ಕುಸನೂರ; ಮುಸುಕು ನಸುಕು ಜೀವಜೀವಂತ ಸಂಕಲನಗಳ ವೇಣುಗೋಪಾಲ ಸೊರಬ ‘ವಿದಾಯ’ದ (ದಿ) ಯರ್ಮುಂಜ ರಾಮಚಂದ್ರ; ‘ಬೆಂಕಿ’, ‘ಗಂಡಹೆಂಡಿರ ಜಗಳ ಗಂಧ ತೀಡಿದ್ಹಾಂಗ’ಗಳ ಸೋಮಶೇಖರ ಇಮ್ರಾಪುರ; ಪರಿವೃತ್ತ, ಬಾಗಿಲು ಬಡಿವ ಜನ, ಮೊಖ್ತಾ ಸಂಕಲನಗಳ ಎಚ್.ಎಸ್.ವೆಂಕಟೇಶಮೂರ್ತಿ; ‘ಅಜ್ಜಗಾವಲು’ನ ಶಾಮಸುಂದರ ಬಿದರಕುಂದಿ; ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ ಸಂಕಲನಗಳ ದೊಡ್ಡರಂಗೇಗೌಡ, ಇಲ್ಲದ್ದು, ಇನ್ನಾದರೂ ಬದುಕಬೇಕು ಸಂಕಲನಗಳ ಜಯಸುದರ್ಶನ,; ‘ತುಡುಗಿ’ಯ.ಎಚ್.ಎಸ್. ಭೀಮನಗೌಡರ; ‘ಕಿಸ್ಮಿ’ಯ ಸಿಂಹ ಕೊಳ್ಳೇಗಾಲ; ‘ಗದ್ಯದಿಂದ ಪದ್ಯಕ್ಕೆ’ ಸಂಕಲನದ ಜಾಗೋ; ಏಕಾಂತ, ಉತ್ತರ ಧ್ರುವಗಳ ಕಾವ್ಯದ ಕೆ.ಎನ್.ಶಿವಪ್ಪ; ಋತಗೀತಾಮೃತ, ರಾಮದಾಸರ ಕವನಗಳು ಸಂಕಲನಗಳ ರಾಮದಾಸ್; (ಪ್ರೇಮಸೋದರ); ‘ಅಭೀಪ್ಸೆ’ಯ ಸಣ್ಣಗುಡ್ಡಯ್ಯ; ‘ಯಾತ್ರೆ’ಯ ರಾಗೌ; ‘ತಾಕಲಾಟ’ದ ಬಿ.ಎಸ್.ಜಗದೀಶ; ‘ಮರಕುಟಿಗ’ದ ಬರಗೂರು ರಾಮಚಂದ್ರಪ್ಪ,; ‘ಮುಕ್ತ’ದ ಜೈರಾಮ ಹೆಗ್ಗಡೆ; ‘ಇರುತ್ತವೆ’ಯ ಡಿ.ವಿಜಯ; ‘ತೆರೆ’ಯ ಸುಬ್ರಾಯ ಚೊಕ್ಕಾಡಿ; ‘ಅಸ್ತವ್ಯಸ್ತ’ದ ವಿ.ಮ.ಜಗದೀಶ; ‘ಕಲೈಡೋಸ್ಕೋಪ’ದ ಎಂ.ಎಲ್.ಚೆನ್ನಕೇಶವಶಾಸ್ತ್ರಿ; ‘ಶಾಪ’ದ ಬಿ.ಸೋಮಶೇಖರ; ಮೊದಲು ತೊದಲು ಸಂಕಲನದ ಸಂ.ವಾ.ದ; ನಕ್ಷತ್ರಗಳು ಸಂಕಲನದ ನಾಗಭೂಷಣಸ್ವಾಮಿ,; ‘ಪಿಸುಗುಟ್ಟಿತು ಬಯಕೆ’ಯ ಪರಮೇಶ, ‘ಆಕ್ಟೋಪಸ್’ದ ಎಸ್.ಜಿ.ಶಿವಶಂಕರ್; ದಾರಿ ಮಗ್ಗುಲಹಾಡು ಸಂಕಲನದ ಮು. ಶಿವನಂಜಯ್ಯ; ‘ನಾಲ್ಕು ಹಿಡಿಬೆಂಕಿ’ಯ ದೇಶಪಾಂಡೆ ಸುಬ್ಬರಾಯ; ‘ಕರೀತೆಲಿ ಮಾನವನ ಜೀಪದ’ದ ಚೆನ್ನಣ್ಣ ವಾಲೀಕಾರ; ‘ಚಿಗಳಿ’ಯ ಸಿದ್ಧಲಿಂಗ ದೇಸಾಯಿ; ‘ನಸುಕು ಹರಿಯುವ ಮುನ್ನ’ದ ಎಂ.ಬಿ.ನಟರಾಜ; ‘ಹುಲ್ಲು ಹೆಜ್ಜೆ’ ‘ಶಬ್ದರಕ್ತಮಾಂಸ’ದ ಬುದ್ದಣ್ಣ ಹಿಂಗಮಿರೆ; ಹತ್ತರ ಕೂಡ ಹನ್ನೊಂದು ಸಂಕಲನದ ಶಿವಶರಣ ಜಾವಳಿ; ಪ್ರಣಯ ಚೈತ್ರ, ವಿಷಾದನಕ್ಷೆಗಳ ವೀಚಿ; ನೆರಳು ಸಂಕಲನದ ಗಂಗಾಧರ ಭಟ್; ‘ಕಾರವಾನ’ದ ವಿಷ್ಣುಮೂರ್ತಿ; ಗರಿ ಮುರಿದ ಹಕ್ಕಿಗಳು ಸಂಕಲನದ ವೇಣುಗೋಪಾಲಕಾಸರಗೋಡು; ‘ಸಾರಂಗ’ದ ವಿ.ಎನ್.ನಾಯಕ; ಹೊಲೆಮಾದಿಗರ ಹಾಡು ಸಂಕಲನದ ಸಿದ್ಧಲಿಂಗಯ್ಯ; ‘ಮೂಡಲದನಿ’ಯ ಸಿ.ವೀರಣ್ಣ; ‘ಹಿಪ್ಪೆಮರ’ದ ಸತ್ಯನಾರಾಯಣ ರಾವ್ ಅಣತಿ; ಬೆತ್ತಲೆ ಪದ್ಯಗಳು ಸಂಕಲನದ ಹೊ.ಮ. ಪಂಡಿತಾರಾಧ್ಯ; ಕೆಲವು ಕವನಗಳು ಸಂಕಲನದ ಪ್ರಭುಸ್ವಾಮಿಮಠ, ‘ರುದ್ರಾಕ್ಷಿ’ಯ ರಾಜಶೇಖರ, ‘ಮೊರೆಮೊರೆ’ತದ ರಾಧಾಕೃಷ್ಣ, ‘ಕಲ್ಲುತೋಟ’ದ ಜೆ.ಎಂ.ಹನಸೋಗೆ, ಮಂಗೇಶ ನಾಡಕರ್ಣಿ, ಭೈರವಮೂರ್ತಿ, ರಾಮಚಂದ್ರದೇವ, ದೇವನೂರ ಮಹಾದೇವ, ಕಮಲಾ ಹೆಮ್ಮಿಗೆ, ಎಸ್.ಮಾಲತಿ, ಎಸ್.ಉಷಾ, (ತೊಗಲು ಗೊಂಬೆಯ ಆತ್ಮಕತೆ) ಉಮಾದೇವಿ, ಚ.ಸರ್ವಮಂಗಳಾ (ಅಮ್ಮನ ಗುಡ್ಡ) ಲಕ್ಷ್ಮೀಶ ತೋಳ್ವಾಡಿ, ಕಾಳೇಗೌಡ ನಾಗವಾರ, ಕೆ.ಎನ್.ಶಿವತೀರ್ಥನ್ (ಬೆಸ್ತ), ಅಬ್ದುಲ್ ಮಜೀದ್ ಖಾನ್, ಯು.ಕೆ.ವಿ.ಆಚಾರ್ಯ, ಗಂಗಾಧರಮೂರ್ತಿ, ಬೀ.ಪ.ಹನುಮಕ್ಕ, ಎ.ಎನ್.ಪ್ರಸನ್ನ, ಎಂ.ಎನ್.ಜೈಪ್ರಕಾಶ್, ಶ್ರೀಕಂಠಕೂಡಿಗೆ, ಅಲ್ಲಮಪ್ರಭು ಬೆಟ್ಟದೂರು, ಶಿವಳ್ಳಿ ಕೆಂಪೇಗೌಡ, ಜಿ.ಎಸ್.ಭಟ್ಟ ಉಬರಡ್ಕ, ಕಿರಣ, ಜಂಬಣ್ಣ ಅಮರಚಿಂತ, ಶಾಂತರಸ, ನಾಗಭೂಷಣರಾವ್ ಸಿಂಧೆ, ಬನ್ನಂಜೆ ಗೋವಿಂದಾಚಾರ್ಯ, ವಿ.ಎನ್.ಲಕ್ಷ್ಮೀನಾರಾಯಣ, ಬಿ.ಎನ್.ನಾಗರಾಜಭಟ್, ನಳಿನೀ ದೇಶಪಾಂಡೆ, ಶಾಂತಾರಾಮಹಿಚ್ಕಡ ಮೊದಲಾದ ಕವಿಗಳು ಕಾವ್ಯರಚನೆಯಲ್ಲಿ ತೊಡಗಿದ್ದಾರೆ. ಕೆಲವರಲ್ಲಿ ಉತ್ತಮಮಟ್ಟದ ಪ್ರತಿಭೆಯ ಲಕ್ಷಣಗಳು ಕಂಡುಬಂದರೆ, ಇನ್ನು ಹಲವರಲ್ಲಿ ಆ ಮಟ್ಟದ ಪ್ರತಿಭೆ ಕಂಡುಬರುವುದಿಲ್ಲ.

ಉಪಸಂಹಾರ

ಬದಲಾಯಿಸಿ

ಕನ್ನಡದಲ್ಲಿ ನವ್ಯಕಾವ್ಯವನ್ನು ಕುರಿತ ಈ ಬರೆವಣಿಗೆಯಲ್ಲಿ ನವೋದಯ ಕಾವ್ಯ ರೀತಿಗೆ ಭಿನ್ನವಾದ ದನಿಗಳಾಗಿ ಬಂದ ಕಳೆದ ಕಾಲು ಶತಮಾನದ ಕಾವ್ಯ ರಾಶಿಯನ್ನು ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಗೋಕಾಕರ ನವ್ಯಕಾವ್ಯ ಮಾರ್ಗ, ಅಡಿಗರ ನವ್ಯಕಾವ್ಯ ಮಾರ್ಗಗಳು ಪ್ರಮುಖವಾದ ನವ್ಯಕಾವ್ಯ ಮಾರ್ಗಗಳಾಗಿವೆ. ಅದರಲ್ಲೂ ಅಡಿಗರ ನವ್ಯಕಾವ್ಯ ಮಾರ್ಗದ ಪ್ರಭಾವಕ್ಕೆ ಬಂದ ಕವಿಗಳ ಸಂಖ್ಯೆ ಹೇರಳವಾಗಿದೆ. ಈ ಮಧ್ಯೆ ರಾಮಾನುಜನ್ ಅವರದೇ ಆದ ಹೊಸದನಿಯ ನವ್ಯಕಾವ್ಯ ಸದ್ದಿಲ್ಲದೆ ಕೆಲವು ಕವಿಗಳ ಮೇಲೆ ಪ್ರಭಾವ ಬೀರುತ್ತಿದೆ. ಅಡಿಗರ ಮತ್ತು ಗೋಕಾಕರ ಕಾವ್ಯಮಾರ್ಗಕ್ಕೆ ಪ್ರತಿಕ್ರಿಯೆಯಾಗಿ ನವೋದಯ ಕಾವ್ಯದ ಜಾಡಿನಲ್ಲಿಯೇ ಹೊಸತನ ರೂಢಿಸಬಹುದೆಂದು ಪ್ರಯತ್ನಿಸಿದ ಶಿವರುದ್ರಪ್ಪ, ಕಣವಿಯವರ ಸಮನ್ವಯ ಕಾವ್ಯ ಕೆಲಕಾಲ ಪ್ರತ್ಯೇಕವಾಗಿ ಬೆಳೆದಂತೆ ಕಂಡುಬಂದರೂ ಇತ್ತೀಚೆಗೆ ಗೋಕಾಕರ ರೀತಿಗೆ ಹೆಚ್ಚು ಹತ್ತಿರವಾಗುತ್ತಿರುವಂತೆ ಗೋಕಾಕರೂ ಸಮನ್ವಯದವರೊಟ್ಟಿಗೇ ಸೇರಿ ಹೋಗುತ್ತಿರುವಂತೆ ಕಾಣುತ್ತಿದೆ. ಅಥವಾ ಸಮನ್ವಯದವರೇ ಅವರೊಟ್ಟಿಗೆ ಸೇರಿಕೊಂಡಿದ್ದಾರೆ. ಅಡಿಗರ ಪ್ರಭಾವಕ್ಕೆ ಒಳಗಾಗಿ ಬರೆಯುತ್ತಿದ್ದ ಲಂಕೇಶ್, ಕಂಬಾರ, ತೇಜಸ್ವಿ, ಚಂದ್ರಶೇಖರ ಪಾಟೀಲ ಮುಂತಾದವರು ಅಡಿಗರ ಕಾವ್ಯರೀತಿಗೆ ಭಿನ್ನವಾದ ರೀತಿಯ ಕಾವ್ಯದ ಆವಶ್ಯಕತೆಯನ್ನು ಪ್ರತಿಪಾದಿಸಿದರು. ಅವರಿಗಿಂತ ಇನ್ನೂ ಎಳೆಯ ತಲೆಮಾರಿನ ಕವಿಗಳಲ್ಲಿ ಕೆಲವರು ಈವರೆಗೆ ಹೊಸಗನ್ನಡದಲ್ಲಿ ನವೋದಯವನ್ನೂ ಸೇರಿಸಿಕೊಂಡು ಬೆಳೆದು ಬಂದ ಕಾವ್ಯಮಾರ್ಗಗಳ ಬಗೆಗೆ ಅಸಹನೆಯನ್ನು ತೋರಿಸುತ್ತಿದ್ದಾರೆ. ಹೊಸ ಕಾವ್ಯರೀತಿಯ ಹುಡುಕಾಟದಲ್ಲಿ ತೊಡಗುವ ಸಂಕಲ್ಪ ತೊಟ್ಟಂತೆ ತೋರಿಬರುತ್ತಿದೆ. ಒಟ್ಟಿನಲ್ಲಿ ಸಾರಾಂಶವಿಷ್ಟೆ: ನವ್ಯಕಾವ್ಯಕ್ಕಿಂತ ಭಿನ್ನವಾದ ಹೊಸ ಕಾವ್ಯ ರೀತಿ ಮೈಮುರಿದೇಳಲು ತವಕಿಸುತ್ತಿದೆ. ಹೀಗೆ ಆಗುವುದರಲ್ಲಿ ತಪ್ಪು ಇಲ್ಲ, ಅದು ಸೋಜಿಗದ ಸಂಗತಿಯೂ ಅಲ್ಲ. ಜೀವಂತವಾದ ಜನಾಂಗದ ಲಕ್ಷಣ ಯಾವಾಗಲೂ ಮುಂದೆ ನೋಡುತ್ತ ಹೋಗುವುದಾಗಿದೆ. ಉಢಾಫೆಗಿಂತ ವಿವೇಕ ಈ ನೋಟಕ್ಕೆ ಪ್ರೇರಕ ಶಕ್ತಿಯಾದಾಗ ಜನಾಂಗ ಹೊಸ ಜೀವಂತಿಕೆ ಲವಲವಿಕೆಯಿಂದ ಕಳಿಕಳಿಸುತ್ತದೆ. ಇಂಥ ಸಂದಿsಕಾಲದಲ್ಲಿ ಹೊಸದೆಲ್ಲವನ್ನೂ ಉಢಾಫೆಯೆಂದೇ ನೋಡುವ ದೃಷ್ಟಿಯನ್ನು ಬಿಟ್ಟು, ವಸ್ತುನಿಷ್ಠವಾಗಿ ತೆರೆದ ಮನಸ್ಸಿನಿಂದ ಹೊಸ ಬದಲಾವಣೆ, ಹೊಸ ಪ್ರಯೋಗಗಳನ್ನು ಗಮನಿಸುತ್ತ, ಬೆಲೆ ಕಟ್ಟಲು ಪ್ರಯತ್ನಿಸುತ್ತ ಸಾಗಬೇಕಾದದ್ದು ಸಹೃದಯರ ಮತ್ತು ವಿಮರ್ಶಕರ ಹೊಣೆಗಾರಿಕೆಯಾಗಿದೆ. ಸದ್ಯಕ್ಕೆ ಇನ್ನೂ ಒಂದು ತಲೆಮಾರಿನ ತನಕವಾದರೂ ಉತ್ತಮಕಾವ್ಯ ರೊಮ್ಯಾಂಟಿಕ್ ಸಂಪ್ರದಾಯಕ್ಕೆ ತೀರ ವಿರುದ್ಧವಾದ ದಿಕ್ಕಿನಲ್ಲೇ ಹರಿದೀತು ಎಂದು ತೋರುತ್ತದೆ. ಯಾವ ಸಂಪ್ರದಾಯದ್ದೇ ಆಗಲಿ, ಉತ್ತಮ ಕವಿತೆ ಯಾವಾಗಲೂ ಉತ್ತಮ ಕವಿತೆಯೇ. ಆದರೆ ಅದು ರಚಿತವಾದ ಕಾಲದಲ್ಲಿ ಅದು ಎಷ್ಟು ಉತ್ತಮ ಎಂದು ತಿಳಿದಿದ್ದರೋ ಅಷ್ಟು ಉತ್ತಮ ಅದಲ್ಲ, ಅದು ಉತ್ತಮವಾಗಿರುವ ರೀತಿ ಈಗ ಸಲ್ಲ ಎಂದು ಮುಂದಿನ ತಲೆಮಾರು ನಿರ್ಧರಿಸಬಹುದು. ಹಾಗೆಯೇ ಇನ್ನೂ ಮುಂದಿನ ತಲೆಮಾರಿನಲ್ಲಿ ಅದೇ ಉತ್ತಮ ಕವಿತೆ, ಆ ರೀತಿಯೇ ರೀತಿ ಈಗ ಸಲ್ಲ ಎಂದು ಮುಂದಿನ ತಲೆಮಾರಿನಲ್ಲಿ ಅದೇ ಉತ್ತಮ ಕವಿತೆ, ಆ ರೀತಿಯೇ ರೀತಿ ಎಂತಲೂ ಮತ್ತೊಮ್ಮೆ ವಿಚಾರ ಕ್ರಾಂತಿಯಾಗಬಹುದು ಎಂಬ ಅಡಿಗರ ಮಾತು (ಹೊಸ ಕವಿತೆಯನ್ನು ಕುರಿತು 1953) ಈ ಸಂದರ್ಭದಲ್ಲಿಯೂ ಮನನೀಯವಾಗಿದೆ.

ನವ್ಯದ ವಿಮರ್ಶಾ ಪತ್ರಿಕೆಗಳು

ಬದಲಾಯಿಸಿ

ಕೊನೆಯದಾಗಿ, ನವ್ಯಕಾವ್ಯದ ಬೆಳೆವಣಿಗೆಯಲ್ಲಿಯೂ ನವೋದಯ ಕಾವ್ಯದ ಬೆಳೆವಣಿಗೆಯಲ್ಲಿ ಎಂತೋ ಅಂತೆ ಅನೇಕ ದಿನ, ವಾರ, ಮಾಸ, ದ್ವೈಮಾಸಿಕ, ತ್ರೈಮಾಸಿಕ, ಅನಿಯತಕಾಲಿಕ ಪತ್ರಿಕೆಗಳು ಕವನಗಳ ಪ್ರಕಟನೆ, ಕೃತಿಗಳ ವಿಮರ್ಶೆ, ಅವಲೋಕನ, ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸುವುದು ಮುಂತಾದ ಬಗೆಯಲ್ಲಿ ತಮ್ಮ ಪಾಲಿನ ಕಾಣಿಕೆ ಸಲ್ಲಿಸಿವೆ. ಸಾಕ್ಷಿ, ಲಹರಿ, ಸಮೀಕ್ಷಕ, ಸಂಕೀರ್ಣ, ಸಮನ್ವಯ, ಸಂಕ್ರಮಣ, ರುಜುವಾತು, ಕವಿತಾ ಮುಂತಾದ ಪತ್ರಿಕೆಗಳು ನವ್ಯಸಾಹಿತ್ಯಕ್ಕಾಗಿಯೇ ಮೀಸಲಾದ ಪತ್ರಿಕೆಗಳಾಗಿವೆ. ನವ್ಯಧ್ವನಿ, ನಡೆದು ಬಂದ ದಾರಿ-1, ಅಕ್ಷರ ಹೊಸ ಕಾವ್ಯ, ಹೊಸ ಜನಾಂಗದ ಕವಿತೆಗಳು, ಸಂಕ್ರಮಣ ಕಾವ್ಯ- ಇವು ನವ್ಯಕಾವ್ಯದ ಮಹತ್ವದ ಸಂಚಯಗಳಾಗಿವೆ. (ಜಿ.ಎಚ್.ಎನ್.)[][]

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ