ಕನ್ನಡದಲ್ಲಿ ಗಾಂಧಿ ಸಾಹಿತ್ಯ

20ನೆಯ ಶತಮಾನದ ವಿಚಾರಶೀಲ ಸಾಹಿತ್ಯದಲ್ಲಿ ಗಾಂಧೀ ಸಾಹಿತ್ಯ ಒಂದು ಅನುಪಮ ಸ್ಥಾನವನ್ನು ಗಳಿಸಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಧ್ಯಯನದ ಉತ್ತಮ ಆಕರವಾಗಿರುವುದೇ ಅಲ್ಲದೆ ಭಾರತದ ಇತಿಹಾಸ, ಸಂಸ್ಕೃತಿ, ಲೋಪದೋಷಗಳು, ಅಭ್ಯುದಯ - ಇವುಗಳ ಮೇಲೆ ಜಿe್ಞÁಸಾತ್ಮಕ ಬರೆಹಗಳಾಗಿರುವ ಗಾಂಧೀ ಸಾಹಿತ್ಯದ ಕೃಷಿ ಕನ್ನಡದಲ್ಲೂ ಸಾಕಷ್ಟು ನಡೆದಿದೆ.

ಇತಿಹಾಸ ಬದಲಾಯಿಸಿ

ಗಾಂಧೀ ಸಾಹಿತ್ಯ ಗಾಂಧೀಯವರ ಸ್ವಂತ ಬರೆಹಗಳನ್ನು, ಇತರರು ಅವರನ್ನು ಮತ್ತು ಅವರ ವಿಚಾರಗಳನ್ನು ಕುರಿತು ಬರೆದ ಬರೆಹಗಳನ್ನು ಒಳಗೊಳ್ಳುತ್ತದೆ. ಗಾಂಧೀಜೀಯವರೇ ಬರೆದಿರುವ ವಿಷಯಗಳ ವ್ಯಾಪ್ತಿ ಅಪಾರ. ಅಲ್ಪಸಂಖ್ಯಾತರು, ಅಸ್ಪೃಶ್ಯತೆ, ಅಹಿಂಸೆ, ಆರೋಗ್ಯ, ಆಹಾರ, ಇಸ್ಲಾಂ, ಉಪವಾಸ, ಕಸ್ತೂರಬಾ, ಕೈಗಾರಿಕಾ ಸಂಬಂಧಗಳು, ಕ್ರಿಶ್ಚಿಯನ್ನರು, ಖಿಲಾಫತ್ ಚಳವಳಿ, ಜಪಾನ್, ಜನನ ನಿಯಂತ್ರಣ, ಜಲಿಯನ್ ವಾಲಾಬಾಗ್, ಜಾತೀಯತೆ, ದೇವರು, ನೀತಿ, ಬೌದ್ಧಧರ್ಮ, ಮುಷ್ಕರಗಳು, ಮೂಲ ಶಿಕ್ಷಣ, ರಾಷ್ಟ್ರಭಾಷೆ, ವೈದ್ಯ, ಶಿಕ್ಷಣ, ಸರ್ವೋದಯ, ಸತ್ಯಾಗ್ರಹ, ಸಿಖ್ಧರ್ಮ, ಸ್ವದೇಶೀ, ಸ್ತ್ರೀಯರು, ಸೋಷಿಯಲಿಸಂ ಮುಂತಾಗಿ ನಾನಾ ವಿಷಯಗಳ ಮೇಲೆ ಗಾಂಧೀಜಿ ಬರೆದಿದ್ದಾರೆ. ನಾನಾ ಸಮಸ್ಯೆಗಳನ್ನು ಸತ್ಯ ಅಹಿಂಸೆಯ ಆಧಾರದ ಮೇಲೆ ಸಾಮಾಜಿಕ ನ್ಯಾಯದೃಷ್ಟಿಯಿಂದ ವಿವೇಚಿಸಿ ತಮ್ಮ ಅಬಿsಪ್ರಾಯಗಳನ್ನು ತಿಳಿಸಿದ್ದಾರೆ. ಅವರ ಬರೆಹಗಳನ್ನು 600 ಶೀರ್ಷಿಕೆಗಳಲ್ಲಿ ವಿಂಗಡಿಸಲಾಗಿದೆ. ಗಾಂಧೀಜಿಯವರನ್ನು ಬುದ್ಧ, ಕ್ರಿಸ್ತ, ಹೆನ್ರಿಫೋರ್ಡ್, ಲೆನಿನ್, ಸ್ಟ್ಯಾಲಿನ್, ಟಾಗೂರ್, ಟಾಲ್ಸ್ಟಾಯರಿಗೆ ಹೋಲಿಸಿ ಬರೆದವರಿದ್ದಾರೆ. ಅವರನ್ನು ಸಂತರೆಂದೂ ಪ್ರವಾದಿಯೆಂದೂ ಕ್ರಾಂತಿಕಾರರೆಂದೂ ಸಮಾಜಸುಧಾರಕರೆಂದೂ ನಾನಾ ರೀತಿಯಲ್ಲಿ ಕರೆದವರಿದ್ದಾರೆ. ಗಾಂಧೀಜಿ ಯವರನ್ನು ಕುರಿತು ಬರೆದಿರುವ ಬರೆಹಗಳಲ್ಲಿ ಪುರ್ಣಜೀವನ ಚರಿತ್ರೆ, ಅವರ ಜೀವನದ ನಾನಾ ಘಟನೆಗಳು, ಅಹಿಂಸಾದರ್ಶನ, ಸತ್ಯಾಗ್ರಹ ವಿಚಾರಧಾರೆಯನ್ನು ಕುರಿತ ಪ್ರಬಂಧಗಳು, ಲೇಖನಗಳು, ಪತ್ರಗಳು, ಪದ್ಯಗಳು, ಸಂದರ್ಶನ ವರದಿಗಳು, ಶ್ರದ್ಧಾಂಜಲಿಗಳು ಅನೇಕವಿವೆ. ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಯನ್ನು ಕುರಿತು ಬರೆದಿರುವ ಪ್ರತಿಯೊಂದು ಪುಸ್ತಕದಲ್ಲೂ ಗಾಂಧೀಜಿಯವರ ಪಾತ್ರವನ್ನು ಕುರಿತು ಬರೆಯುವುದು ಅನಿವಾರ್ಯವೆನಿಸಿದೆ. ಈ ಲೇಖನಗಳು ಅವರ ಪ್ರಶಂಸಾಕಾರರಿಂದಲೂ ಸಹಾನುಭೂತಿಯುಳ್ಳ ಟೀಕಾಕಾರರಿಂದಲೂ ತೀವ್ರ ಎದುರಾಳಿಗಳಿಂದಲೂ ಬಂದಿದ್ದು ಗಾಂಧೀ ಸಾಹಿತ್ಯ ವೈವಿಧ್ಯಮಯವಾಗಿದೆ.[1]

ಪುಸ್ತಕಗಳು ಬದಲಾಯಿಸಿ

ಗಾಂಧೀಜಿಯವರು ಬರೆದಿರುವ ಪುಸ್ತಕಗಳಲ್ಲಿ ಈಗ ತಿಳಿದಿರುವಂತೆ ಕನ್ನಡದ ಪ್ರಥಮ ಅನುವಾದ ಅವರ ಇಂಡಿಯನ್ ಹೋಂ ರೂಲ್ ಎಂಬ ಪುಸ್ತಕ. ದ.ಕೃ.ಭಾರದ್ವಾಜರು ಆ ಕೆಲಸ ಮಾಡಿದ್ದಾರೆ (1919). ಇದೇ ರೀತಿ ಇನ್ನೂ ಮೂರು ಪುಸ್ತಕಗಳನ್ನು ಭಾರದ್ವಾಜರು ಅನುವಾದಿಸಿದ್ದಾರೆ. ಗಾಂಧೀಸಾಹಿತ್ಯ ಅನುವಾದಕರಲ್ಲಿ ಸಿದ್ಧವನಹಳ್ಳಿ ಕೃಷ್ಣಶರ್ಮರು ಅಗ್ರಗಣ್ಯರು. ಇವರು ತಮ್ಮ ಸರಳ ಹಾಗೂ ಶಕ್ತಿಯುತ ಶೈಲಿಯಲ್ಲಿ 20 ಪುಸ್ತಕಗಳನ್ನು ಸ್ವಂತವಾಗಿಯೂ ನಾಲ್ಕನ್ನು ಇತರರೊಡಗೂಡಿಯೂ ಅನುವಾದಿಸಿದ್ದಾರೆ. ಅನುವಾದಗಳ ಪೈಕಿ ಆರ್ಥಿಕ ವಿಚಾರಗಳಲ್ಲಿ 3, ಆರೋಗ್ಯ 1, ಖಾದಿ ಗ್ರಾಮೋದ್ಯೋಗ 1, ಜೀವನ ಚರಿತ್ರೆ (ಆತ್ಮಕಥೆ) 20, ಧರ್ಮ 8, ನೀತಿ ಸತ್ಯ ಅಹಿಂಸೆ 8, ಭಗವದ್ಗೀತೆ 3, ಮಹಿಳೆಯರು 4, ರಾಜಕೀಯ ವಿಚಾರಗಳು 14, ಶಿಕ್ಷಣ 3, ಸರ್ವೋದಯ 1, ಸಾಮಾಜಿಕ ದರ್ಶನ 6, -ಈ ರೀತಿ 72 ಪುಸ್ತಕಗಳಿವೆ. ಗಾಂಧೀಜಿಯವರ ಪ್ರಮುಖ ಕೃತಿಗಳಾದ ಸತ್ಯಶೋಧನೆ, ಹಿಂದ್ ಸ್ವರಾಜ್ಯ, ದಕ್ಷಿಣ ಆಪಿs್ರಕದಲ್ಲಿ ಸತ್ಯಾಗ್ರಹ, ನನ್ನ ಕನಸಿನ ಭಾರತ, ಅನಾಸಕ್ತಿಯೋಗ, ಸರ್ವೋದಯ, ಮೂಲಶಿಕ್ಷಣ ಮುಂತಾದ ಮುಖ್ಯ ಕೃತಿಗಳೆಲ್ಲವÆ ಕನ್ನಡಕ್ಕೆ ಅನುವಾದವಾಗಿವೆ.

ಅನುವಾದಕರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಂ.ರಾ.ದಿವಾಕರ, ವಿ.ಎಸ್.ನಾರಾಯಣರಾವ್, ಜಿ.ವಿ.ನಾರಾಯಣಮೂರ್ತಿ, ಕೆ.ಎಸ್.ನರಸಿಂಹಸ್ವಾಮಿ, ಎಸ್.ವಿ.ಕೃಷ್ಣಮೂರ್ತಿರಾವ್ ಮುಖ್ಯರು. ಇವರೆಲ್ಲರೂ ನುರಿತ ಲೇಖಕರಾದುದರಿಂದ ಅನುವಾದಗಳು ಮೂಲದಂತೆಯೇ ಮನೋಜ್ಞವಾಗಿವೆ. ಹಿರಿಯ ರಾಜಕಾರಣಿ ಶಂಕರಗೌಡರು ಪ್ಯಾರೇಲಾಲ್ರವರ ‘ಮಹಾತ್ಮ ಗಾಂಧೀ ಅಂತಿಮ ಹಂತ’ ಎಂಬ ಬೃಹತ್ ಗ್ರಂಥವನ್ನು ಭಾಷಾಂತರಿಸಿದ್ದಾರೆ. ಗಾಂಧೀಸಾಹಿತ್ಯಕ್ಕೆ ಇದೊಂದು ಬಹುದೊಡ್ಡ ಕೊಡುಗೆ.

ಗಾಂಧೀನಿಧಿಯವರು ಅಚ್ಚುಕಟ್ಟಾಗಿ ಪ್ರಕಟಿಸಿರುವ, ಸುಲಭ ಬೆಲೆಯ ಇಪ್ಪತ್ತು ಕನ್ನಡ ಪುಸ್ತಕಗಳು ನಮಗೆ ಬಾಪುವಿನ ಜೀವನ ಸಾಧನೆಗಳನ್ನು ಸರಳ ಶೈಲಿಯಲ್ಲಿ ಸುಲಭವಾಗಿ ಅರ್ಥವಾಗುವಂತೆ ತಿಳಿಸುತ್ತವೆ.

ಮಹಾಪುರುಷರ ಜೀವನ ಚರಿತ್ರೆಗಳನ್ನು ಸಂಕ್ಷಿಪ್ತವಾಗಿ ಬರೆದ ಅನೇಕ ಪುಸ್ತಕಗಳಲ್ಲಿ ಗಾಂಧೀಜಿಯವರ ಬದುಕು, ಸಾಧನೆಯನ್ನು ಕುರಿತು ಬರೆದ ಅಧ್ಯಾಯಗಳಿವೆ. ಇವುಗಳಲ್ಲಿ ಮುಖ್ಯವಾದವು ಕುವೆಂಪುರವರ ವಿಭೂತಿ ಪುಜೆ, ಎಚ್.ಕೃಷ್ಣರಾಯರ ಚರಿತ್ರೆಯ ಮಹಾಪುರುಷರು, ಮಿರ್ಜಿ ಅಣ್ಣಾರಾಯರ ಭಾರತದ ಬೆಳಕು, ಕೆ.ಎಸ್.ನಾರಾಯಣಸ್ವಾಮಿ ಯವರ ವಿಶ್ವಜ್ಯೋತಿಗಳು, ತೀ.ನಂ.ಶ್ರೀ. ಅವರ ನಂಟರು, ಸಾ.ಶಿ.ಮರುಳಯ್ಯನವರ ವಿಭೂತಿ ಪುರುಷರು ಮುಂತಾದ ಪುಸ್ತಕಗಳು ಗಮನಾರ್ಹವಾದವು.

ವೈಚಾರಿಕ ವಿಷಯಗಳು ಬದಲಾಯಿಸಿ

ರಾಜಕೀಯ ಸಾಮಾಜಿಕ ವಿಚಾರಗಳಲ್ಲಿ ಕ್ರಾಂತಿಯೆಬ್ಬಿಸಿದ ಗಾಂಧೀಜಿಯವರ ವಿಚಾರಧಾರೆಗಳಿಗಿಂತ, ವೈಚಾರಿಕ ವಿಷಯಗಳ ಸಿದ್ಧಿಯಾದ ಭಾರತ ಸ್ವಾತಂತ್ರ್ಯ ಸಂಗ್ರಾಮ ಅಗಾಧ ಪರಿಣಾಮ ಬೀರಿತು. ಈ ಹೋರಾಟ ಜನಗಳಿಗೊಂದು ಅಪುರ್ವ ಅನುಭವವನ್ನೊದಗಿಸಿತು. ಈ ಸಂಗ್ರಾಮದ ಕಾವು ಹೆಚ್ಚು ಚುರುಕಾಗಿ ತಟ್ಟಿದುದು ಉತ್ತರ ಕರ್ನಾಟಕದಲ್ಲೇ, ತ.ರಾ.ಸು. ಅವರ ಕಾದಂಬರಿ ರಕ್ತತರ್ಪಣದಿಂದ ಆರಂಭವಾಗಿ ಮಿರ್ಜಿ ಅಣ್ಣಾರಾಯ, ಬಸವರಾಜು ಕಟ್ಟೀಮನಿ, ಎಸ್.ಅನಂತನಾರಾಯಣ, ಅ.ನ.ಕೃ., ನಿರಂಜನ, ವಿ.ಎಂ.ಇನಾಂದಾರ, ಕೋ.ಚೆನ್ನಬಸಪ್ಪ, ಅಶ್ವತ್ಥ ಮೊದಲಾದವರ ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ವರ್ಣನೆ ಕಷ್ಟನಷ್ಟಗಳು ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ನಿರಂಜನ, ಅಶ್ವತ್ಥ, ಬಸವರಾಜ ಕಟ್ಟೀಮನಿ ಮುಂತಾದ ಲೇಖಕರ ಕಥೆಗಳಲ್ಲಿ ಗಾಂಧೀಜಿಯವರ ತತ್ತ್ವಗಳ ಪ್ರತಿಪಾದನೆ ಇದೆ. ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆ ಇದೆ. ಆದರೆ ಈ ಎಲ್ಲ ಲೇಖಕರು ತಮ್ಮ ಕಲಾಕೃತಿಗಳಲ್ಲಿ ಗಾಂಧೀ ತತ್ತ್ವಗಳನ್ನು ಒರೆಗೆ ಹಚ್ಚಿಲ್ಲ ಎಂಬ ಟೀಕೆ ಇದ್ದೇ ಇದೆ. ಸಣ್ಣಕಥೆಗಳಲ್ಲಿಯೂ ಗಾಂಧೀಜಿಯವರ ಆದರ್ಶತತ್ತ್ವಗಳನ್ನು ಎತ್ತಿ ಹಿಡಿಯಲಾಗಿದೆ. ನಿರಂಜನರ ಬಾಪುಜಿ ಬಾಪುಜಿ, ರಾ.ಬಸವರಾಜರ ಕುರಿಗಳು ಸಾಕಿದ ತೋಳ, ಪುರ್ಣಚಂದ್ರತೇಜಸ್ವಿ ಅವರ ಗಾಂಧೀಜಿ ದೆಸೆಯಿಂದ, ಅಶ್ವತ್ಥರ ಪುಣ್ಯಾತ್ಮರು, ಜನಾರ್ದನ ಗುರ್ಕಾರರ ಬಾಪುಜಿ - ಮುಂತಾದ ಕಥೆಗಳು ಗಾಂಧೀ ತತ್ತºಗಳಿಂದ ಪ್ರಭಾವಗೊಂಡು ಕನ್ನಡಕ್ಕೆ ಬಂದವು. ಗಾಂಧೀಜಿಯವರ ಆದರ್ಶ, ನಡೆನುಡಿಗಳು, ಬರೆಹಗಳು ಭಾವಜೀವಿಗಳಾದ ಕವಿಗಳನ್ನು ಉತ್ತೇಜಿಸಿದುದರಲ್ಲಿ ಆಶ್ಚರ್ಯವಿಲ್ಲ. ಡಿ.ವಿ.ಜಿ.ಕುವೆಂಪು, ಮಾಸ್ತಿ, ರಂ.ಶ್ರೀ.ಮುಗಳಿ, ವಿ.ಸೀ., ಬೇಂದ್ರೆ, ಪು.ತಿ.ನ., ತೀ.ನಂ.ಶ್ರೀ., ಕಯ್ಯಾರ ಕಿಞ್ಞಣ್ಣ ರೈ, ಸುಜನಾ, ಕೆ.ಎಸ್.ನರಸಿಂಹಸ್ವಾಮಿ, ಜಿ.ಪಿ.ರಾಜರತ್ನಂ, ಎಸ್.ವಿ.ಪರಮೇಶ್ವರಭಟ್ಟ, ಚೆನ್ನವೀರ ಕಣವಿ, ಜಿ.ಎಸ್.ಶಿವರುದ್ರಪ್ಪ, ಗೋಪಾಲಕೃಷ್ಣ ಆಡಿಗ, ಸಿದ್ಧಲಿಂಗ ಪಟ್ಟಣಶೆಟ್ಟಿ, ವಿ.ಕೃ.ಗೋಕಾಕ, ದಿನಕರ ದೇಸಾಯಿ, ಸಿದ್ಧಯ್ಯ ಪುರಾಣಿಕ, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ, ನಿಸಾರ್ ಅಹಮದ್, ಡಿ.ಎಸ್.ಕರ್ಕಿ, ಸಿ.ಪಿ.ಕೆ - ಮೊದಲಾದವರ ಕವನಗಳಲ್ಲಿ ಗಾಂಧೀಜಿಯವರ ದರ್ಶನ, ಸಾಧನೆಗಳ ಪ್ರಶಂಸೆಯಿದೆ. ಶ್ರೀರಂಗರ ಹರಿಜನ್ವಾರ, ಶೋಕಚಕ್ರ, ಕುವೆಂಪು ಅವರ ಬಲಿದಾನ, ಶಿವರಾಮ ಕಾರಂತರ ಗರ್ಭಗುಡಿ, ಬೇಂದ್ರೆಯವರ ಉದ್ಧಾರ ಎಂಬ ನಾಟಕಗಳಲ್ಲಿ ಅಸ್ಪೃಶ್ಯತೆ, ಮದ್ಯಪಾನ ನಿರೋಧ ಮುಂತಾದ ಗಾಂಧೀ ತತ್ತ್ವಗಳ ಪ್ರತಿಪಾದನೆ ಇದೆ. ರಾಜರತ್ನಂ ಅವರ ಸಂಭವಾಮಿ ಯುಗೇ ಯುಗೇ, ನಾ.ಕಸ್ತೂರಿಯವರ ಕ್ರಾಂತಿಮಾರ್ಗ, ಇದು ಭಾರತದ ದಾರಿ, ಎಚ್.ರಾಮಕೃಷ್ಣರಾವ್ ಅವರ ಗಾಂಧೀಜಿ ಸ್ವರ್ಗದಲ್ಲಿ, ಎಂ.ಎ.ದೊರೆಸ್ವಾಮಿ ಅಯ್ಯಂಗಾರ್ ಅವರ ಧರ್ಮಜ್ಯೋತಿ, ಪು.ತಿ.ನ. ಅವರ ವಿಕಟಕವಿ ವಿಜಯ ಮೊದಲಾದ ನಾಟಕಗಳು ಒಂದಲ್ಲ ಒಂದು ದೃಷ್ಟಿಕೋನದಲ್ಲಿ ಗಾಂಧೀಜಿ ಅವರ ತತ್ತ್ವಗಳನ್ನು ಪ್ರತಿಪಾದಿಸುವ ನಾಟಕಗಳಾಗಿವೆ. ಗಾಂಧೀತತ್ತ್ವಗಳನ್ನು ನಿರೂಪಿಸುವ ಮತ್ತು ಎತ್ತಿ ಹಿಡಿಯುವ ಕಥೆ, ಕಾದಂಬರಿ, ನಾಟಕ, ಪ್ರಬಂಧಗಳಿರುವಂತೆ ಸ್ವತಂತ್ರ ಪುಸ್ತಕಗಳು (ಲೇಖನಗಳ ಸಂಕಲನ) ಪ್ರಕಟಗೊಂಡಿವೆ. ಹರ್ಡೇಕರ ಮಂಜಪ್ಪ, ಗೊರೂರು, ರಂ.ರಾ.ದಿವಾಕರ, ಬಿಂದುಮಾಧವ, ಜಿ.ಪಿ.ರಾಜರತ್ನಂ, ಸಿದ್ದವನಹಳ್ಳಿ ಕೃಷ್ಣಶರ್ಮ, ಪಾಟೀಲ ಪುಟ್ಟಪ್ಪ, ಎಚ್ಚೆಸ್ಕೆ, ಕಾರ್ನಾಡ ಸದಾಶಿವರಾಯ, ಕಡಪ ರಾಘವೇಂದ್ರರಾಯ, ಕಡೆಂಗೋಡ್ಲು ಶಂಕರಭಟ್ಟ, ಕೆ.ಕೆ.ಶೆಟ್ಟ, ನಾರಾಯಣರಾವ್ ಕೆಲ್ಲಿ ಈ ರೀತಿಯ ಬರೆವಣಿಗೆಯಲ್ಲಿ ಪ್ರಮುಖರು, ಮೈಸೂರು ವಿಶ್ವವಿದ್ಯಾನಿಲಯದ ಗಾಂಧೀಭವನ ಡಿ.ಜಿ.ತೆಂಡೂಲ್ಕರ್ ಅವರ ಮಹಾತ್ಮ ಸಂಪುಟಗಳನ್ನು ವಿವಿಧ ಲೇಖಕರಿಂದ ಭಾಷಾಂತರಿಸಿ ಪ್ರಕಟಿಸಿದೆ. ಇದಲ್ಲದೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ಮಹಾತ್ಮಗಾಂಧೀಯವರ ಹಾಸ್ಯ ಪ್ರವೃತ್ತಿ ಮತ್ತು ಇತರ ಲೇಖನಗಳು, ದೇ.ಜವರೇಗೌಡರ ಲೋಕದ ಬೆಳಕು, ಎಚ್.ತಿಪ್ಪೇರುದ್ರಸ್ವಾಮಿಯವರು ಸಂಪಾದಿಸಿರುವ ಗಾಂಧೀ ವಿಚಾರ ಮಾರ್ಗ, ಮಹಾತ್ಮ ಗಾಂಧೀ - ನೂರುವರ್ಷಗಳು ಮುಂತಾದ ಪುಸ್ತಕಗಳು ಪ್ರಕಟವಾಗಿವೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಭಾರತೀಯ ಸಾಹಿತ್ಯದಲ್ಲಿ ಗಾಂಧೀಜಿ ಎಂಬ ಕೃತಿಯನ್ನು ಪ್ರಕಟಿಸಿದೆ (1971). ಇದನ್ನು ಹಾ.ಮಾ. ನಾಯಕರು ಸಂಪಾದಿಸಿದ್ದಾರೆ. ಜಿ.ಪಿ.ರಾಜರತ್ನಂ ಅವರ ವಿಚಾರತರಂಗ, ಕೃಷ್ಣಾನುಭವ, ಸಿದ್ಧವನಹಳ್ಳಿ ಕೃಷ್ಣಶರ್ಮರ ಪರ್ಣಕುಟಿ - ಉತ್ತಮ ಬರೆವಣಿಗೆಗೆ ನಿದರ್ಶನಗಳಾಗಿವೆ. ಕೃಷ್ಣಶರ್ಮರ ಶೈಲಿಯಂತೂ ಚೈತನ್ಯಭರಿತವಾಗಿದೆ. ವಿಷಯನಿರೂಪಣೆ ಸೊಗಸಾಗಿದೆ. ನೇರವಾಗಿ ವಿಷಯ ಪ್ರತಿಪಾದಿಸುವುದು, ಕ್ಲಿಷ್ಟವಾದ ವಿಷಯಗಳನ್ನು ಸರಳವಾಗಿ ಹೇಳುವುದು ಇವರ ವೈಶಿಷ್ಟ್ಯ, ಸುಶೀಲಾ ಕೊಪ್ಪರ ಮತ್ತು ಮಂದಾಕಿನಿಬಾಯಿ ಮಹಿಳೆಯರ ಬಗ್ಗೆ ಗಾಂಧೀಜಿಯವರ ದೃಷ್ಟಿ ಎಂಥದ್ದು ಎಂಬುದನ್ನು ಕುರಿತು ಪ್ರಬಂಧಗಳನ್ನು ಬರೆದಿದ್ದಾರೆ.

ಗಾಂಧೀಜಿಯವರ ಆಲೋಚನೆ ಬದಲಾಯಿಸಿ

ದೃಷ್ಟಿಕೋನಗಳನ್ನು ಕುರಿತು ಬರೆದ ಪುಸ್ತಕಗಳಲ್ಲಿ ಹರ್ಡೇಕರ ಮಂಜಪ್ಪನವರ ‘ಖಾದಿಶಾಸ್ತ್ರ’ ಬಹು ಮುಖ್ಯವಾದುದು. ಇದರಲ್ಲಿ ಖಾದಿಯ ಉಪಯೋಗಗಳನ್ನೂ ಅದರ ಗುಣವಿಶೇಷ ಮೊದಲಾದ ವಿಷಯಗಳನ್ನೂ ವಿವರವಾಗಿ ನಿರೂಪಿಸಲಾಗಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪುರ್ಣಸ್ವದೇಶಿ ಎಂಬ ಗ್ರಂಥದಲ್ಲಿ ಗಾಂಧಿಜೀಯವರಿಗೆ ಹಳ್ಳಿಗಳ ಏಳ್ಗೆಯ ಬಗ್ಗೆ ಇದ್ದ ಪುರ್ಣದೃಷ್ಟಿಯನ್ನು ಕುರಿತು ಬರೆಯಲಾಗಿದೆ. ಸಿದ್ಧವನಹಳ್ಳಿ ಕೃಷ್ಣಶರ್ಮರ ಸೇವಾಗ್ರಾಮ ಮತ್ತು ಸರ್ವೋದಯ, ಗಾಂಧೀಯೋಜನೆ, ವಿ.ಎಸ್.ನಾರಾಯಣರಾಯರ ಗಾಂಧೀವಾದ, ಗಾಂಧೀಯವರ ಆರ್ಥಿಕವಾದ - ಇವು ಗಾಂಧೀಜಿಯವರ ಸಾಮಾಜಿಕ, ಆರ್ಥಿಕ, ರಾಜಕೀಯ ದೃಷ್ಟಿ ಯಾವ ರೀತಿಯದ್ದು ಎಂಬ ವಿಷಯದ ಬಗ್ಗೆ ಬೆಳಕು ಚೆಲ್ಲುವ ಕೃತಿಗಳು. ಜಿ.ಪಿ. ರಾಜರತ್ನಂ ಅವರ ‘ಗಾಂಧೀವಿದ್ಯಾ’ ಖಾದಿಯ ಆರ್ಥಿಕತೆಯನ್ನು ಕುರಿತ ಪುಸ್ತಕ, ಮಹಾತ್ಮರ ಮರಣ ಹಾಗೂ ಇತರ ಉಪನ್ಯಾಸಗಳು, ದೇವರ ಸಾಕ್ಷಿ ಗಾಂಧೀಜಿ, ಗಾಂಧೀ ಸಾಹಿತ್ಯದ ಮೂಲ - ಇದೇ ಲೇಖಕರ ಇತರ ಕೃತಿಗಳು. ಕೆ.ಎಸ್.ಜೋಶಿಯವರ ಗಾಂಧೀಜಿಯ ತತ್ತ್ವe್ಞÁನದ ರಹಸ್ಯ, ರಂ.ರಾ.ದಿವಾಕರರ ಸತ್ಯಾಗ್ರಹ - ಇವು ಅಷ್ಟೇ ಗಮನಾರ್ಹವಾದ ಕೃತಿಗಳು. ದಿವಾಕರರ ಪುಸ್ತಕದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಸಿದ್ಧಾಂತಗಳು, ತಂತ್ರ, ಧೋರಣೆ, ಅದರ ಇತಿಮಿತಿ ಮುಂತಾದ ವಿಷಯಗಳು ತುಂಬ ಸೊಗಸಾಗಿ ನಿರೂಪಿತವಾಗಿವೆ.

ಗಾಂಧೀಜಿ ಜೀವನಚರಿತ್ರೆ ಬದಲಾಯಿಸಿ

ಕನ್ನಡದಲ್ಲಿ ಗಾಂಧೀಜಿಯವರ ಜೀವನಚರಿತ್ರೆಯನ್ನು ಕುರಿತಂತೆ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಹರ್ಡೇಕರ ಮಂಜಪ್ಪನವರ ಮಹಾತ್ಮಾಗಾಂಧೀಯವರ ಚರಿತ್ರೆ - ಗಾಂಧೀಜಿಯವರ ಮೊದಲ 50 ವರ್ಷಗಳ ಬದುಕನ್ನು ತುಂಬ ಸರಳ ಭಾಷೆಯಲ್ಲಿ ನಿರೂಪಿಸಿರುವ ಕೃತಿ. ಬಿ.ಎಲ್.ಆಚಾರ್ ಅವರ ಮಹಾತ್ಮಗಾಂಧೀ (ಜೀವನ ಚರಿತ್ರೆ, ಜಾತಕ), ಬಿ.ಎ.ಆರ್. ಅವರ ಪುಜ್ಯ ಗಾಂಧೀಜಿ, ಧನ್ಯೆ ಕಸ್ತೂರಬಾ, ವಿ.ಎಸ್.ನಾರಾಯಣರಾವ್ ಅವರ ಮಹಾತ್ಮ ಬಾಪುಜಿ, ನಭರವರ ಗಾಂಧೀಜಿ, ಅ.ನ.ಕೃ. ಅವರ ಭಾರತದ ಬಾಪು, ಗೊರೂರರ ಭಾರತ ಭಾಗ್ಯವಿಧಾತ, ಜೋನ್ ಆಫ್ ಆರ್ಕ್ ಮತ್ತು ಮಹಾತ್ಮ ಗಾಂಧೀ, ದಿವಾಕರರ ಮಹಾತ್ಮಗಾಂಧೀ, ಕರಗುಪ್ಪಿಯವರ ಮಹಾತ್ಮಗಾಂಧೀ ಚರಿತ್ರೆ, ರಾಮರಾಯರ ಮಹಾತ್ಮ ಗಾಂಧೀ - ಇವು ಕೆಲವು ಮುಖ್ಯ ಕೃತಿಗಳು. ದಿವಾಕರರ, ಗೊರೂರರ ಪುಸ್ತಕಗಳು ಜೀವನಚರಿತ್ರೆಯ ದೃಷ್ಟಿಯಿದ ಬಹುಮುಖ್ಯ ಗ್ರಂಥಗಳಾಗಿವೆ. ಸಿದ್ಧವನಹಳ್ಳಿ ಕೃಷ್ಣಶರ್ಮರ ಗಾಂಧೀ ಕಥೆಗಳು, ಕೃಷ್ಣಗೋಸಾವಿಯವರ ಬಾಪುಜಿಯ ಬದುಕು- ಜೀವನಚರಿತ್ರೆಯ ಮಾದರಿಯಲ್ಲಿ ಬರೆದ ಗಾಂಧೀಜಿಯನ್ನು ಕುರಿತ ಗ್ರಂಥಗಳಾಗಿವೆ.

ಮಕ್ಕಳಿಗಾಗಿಯೇ ಗಾಂಧೀಜಿಯವರ ವಿಷಯ ಕುರಿತ ಹಲವಾರು ಪುಸ್ತಕಗಳು ಬಂದಿವೆ. ಹರ್ಡೇಕರ ಮಂಜಪ್ಪನವರ ಗಾಂಧೀ ಸಂದೇಶ - ಈ ಉದ್ದೇಶದಿಂದ ಮೊದಲು ಬಂದ ಕನ್ನಡ ಗ್ರಂಥ. ಇದರಲ್ಲಿ ತುಂಬ ಸರಳ ಹಾಗೂ ನೇರ ಭಾಷೆಯಲ್ಲಿ ಗಾಂಧೀಜಿಯವರನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ‘ಮಕ್ಕಳ ಕಹಳೆ’ ಬಿ.ಎನ್.ಸುಂದರರಾವ್ ಅವರಿಂದ ಮಕ್ಕಳಿಗಾಗಿ ರಚಿತವಾದ ಪುಸ್ತಕದಲ್ಲಿ ಗಾಂಧೀಯವರನ್ನು ಕುರಿತ ಕೆಲವು ಕವನಗಳಿವೆ. ಪರಿಮಳ ಮತ್ತು ಟಿ.ಎಂ.ಆರ್.ಸ್ವಾಮಿ ಅವರು ಅಜ್ಜ ಅಜ್ಜಿ ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕ ಗಾಂಧೀಜಿ ಮತ್ತು ಕಸ್ತೂರ ಬಾ ಅವರ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡುತ್ತದೆ. ನಾರಾಯಣಶರ್ಮರ ಮಕ್ಕಳ ಮಹಾತ್ಮ ಗಾಂಧಿ, ರವಿಚಂದ್ರರ ಮಹಾತ್ಮಗಾಂಧಿ, ವಿ.ಎಸ್.ನಾರಾಯಣರಾಯರ ಗಾಂಧಿ ಕಥಾವಳಿ, ಸವ್ಯಸಾಚಿಯವರ ಭಾರತ ಭಾಗ್ಯವಿಧಾತ ಮೊದಲಾದ ಪುಸ್ತಕಗಳು ಮಕ್ಕಳ ಮನಸ್ಸಿಗೆ ರಂಜಕವಾಗುವ ರೀತಿಯಲ್ಲಿ ಗಾಂಧೀಜಿಯವರ ಜೀವನ ಹಾಗೂ ಕೃತಿಗಳನ್ನು ಕುರಿತು ರಚಿತವಾಗಿವೆ. ಮಕ್ಕಳ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನೇ ಇತ್ತಿರುವ ಜಿ.ಪಿ.ರಾಜರತ್ನಂ ಮಕ್ಕಳ ಗಾಂಧಿ ಎಂಬ ಬೃಹತ್ ಸಂಕಲನವನ್ನು ಹೊರತಂದಿದ್ದಾರೆ. ಇದರಲ್ಲಿ ಮಕ್ಕಳಿಗಾಗಿ ರಚಿತವಾದ ಕಥೆ, ಕವನ, ನಾಟಕಗಳು ಸಂಕಲನಗೊಂಡಿವೆ.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಬರೆದು ಅದರ ಕೋಪಕ್ಕೆ ಪಾತ್ರವಾದ ವಿಶ್ವಕರ್ಣಾಟಕ, ತಾಯಿನಾಡು, ಸಂಯುಕ್ತ ಕರ್ನಾಟಕ, ಪ್ರಜಾಮತ ಪತ್ರಿಕೆಗಳನ್ನೂ ಇವುಗಳಲ್ಲಿ ದಿಟ್ಟತನದಿಂದ ಸಂಪಾದಕೀಯ ಬರೆಯುತ್ತಿದ್ದ ತಿ.ತಾ.ಶರ್ಮ, ಪಿ.ಆರ್.ರಾಮಯ್ಯ, ರಂ.ರಾ.ದಿವಾಕರ, ಬಿ.ಎನ್.ಗುಪ್ತ ಇವರ ಪ್ರಭಾವಶಾಲೀ ಬರೆಹಗಳನ್ನೂ ಯಾರೂ ಮರೆಯುವಂತಿಲ್ಲ.ಪತ್ರಿಕೆಗಳಂತೆ ಪ್ರಕಾಶಕರಲ್ಲೂ ಎಲ್ಲರೂ ಗಾಂಧೀ ಸಾಹಿತ್ಯವನ್ನು ಒಂದಲ್ಲ ಒಂದು ರೀತಿಯಿಂದ ಪ್ರಕಟಿಸಿದ್ದಾರೆ. ಕಾವ್ಯಾಲಯ, ಉಷಾ ಸಾಹಿತ್ಯ ಮಾಲೆ, ಗೀತಾ ಬುಕ್ ಹೌಸ್, ಮೋಹನ ಪ್ರಕಾಶನ, ವಯಸ್ಕರ ಶಿಕ್ಷಣ ಸಮಿತಿ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಸತ್ಯಶೋಧನ ಪ್ರಕಟನಾಲಯ, ಸ್ವ್ಯಾಂಡರ್ಡ್ ಬುಕ್ ಡಿಪೋ, ಗಾಂಧೀ ಸಾಹಿತ್ಯ ಮಂಡಳಿ, ಕರ್ನಾಟಕ ಸಂಘ - ಸೆಂಟ್ರಲ್ ಕಾಲೇಜು, ಸರ್ವೋದಯ ಸಂಘ, ಮಿಂಚಿನ ಬಳ್ಳಿ, ಸಾಧನ ಬುಕ್ ಡಿಪೋ, ಮನೋಹರ ಗ್ರಂಥಮಾಲೆ, ಗಾಂಧೀಭವನ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ - ಮೊದಲಾದವು ಈ ದಿಸೆಯಲ್ಲಿ ಸೇವೆ ಸಲ್ಲಿಸಿವೆ. ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನ ಕೇಂದ್ರ ಗಾಂಧೀಜಿಯವರ ಸಮಗ್ರ ಬರೆಹದ ಅನುವಾದ ಮಾಡಿಸಿ ಪ್ರಕಟಿಸುವ ಬೃಹತ್ಕಾರ್ಯವನ್ನು ಕೈಗೊಂಡಿದ್ದು ಅದರಲ್ಲಿ ಕೆಲವು ಸಂಪುಟಗಳು ಬೆಳಕುಕಂಡಿವೆ. (ಟಿ.ವಿ.ಎಸ್.)

ಉಲ್ಲೇಖಗಳು ಬದಲಾಯಿಸಿ