ಕನ್ನಡದಲ್ಲಿ ಅಂಕಣ ಸಾಹಿತ್ಯ
ಇತಿಹಾಸ
ಬದಲಾಯಿಸಿಇದೊಂದು ವಿಶಿಷ್ಟ ಬಗೆಯ ಪತ್ರಿಕಾಸಾಹಿತ್ಯ. ಪತ್ರಿಕೆಗಳಲ್ಲಿ ನಿಯತವಾಗಿ ಬರೆಯುವ ನಿರ್ದಿಷ್ಟ ಲೇಖನಕ್ಕೆ ಅಂಕಣ ಬರೆಹವೆಂದು ಹೆಸರು. ಕನ್ನಡದಲ್ಲಿ ಅಂಕಣ ಹಾಗೂ ಅಂಕಣ ಸಾಹಿತ್ಯದ ಪರಿಕಲ್ಪನೆ ಇಂಗ್ಲಿಷ್ ಪತ್ರಿಕೋದ್ಯಮದಿಂದ ಬಂದಿದ್ದು. ಇಂಗ್ಲಿಷಿನ ಕಾಲಂ ಎಂಬ ಪದ ಹಾಗೂ ಪರಿಕಲ್ಪನೆಗೆ ಸಂವಾದಿಯಾಗಿ ಕನ್ನಡದಲ್ಲಿ ಅಂಕಣ ಎಂಬ ಪದ ಬಳಕೆಯಾಗುತ್ತಿದೆ. ಯಾವುದೇ ವಸ್ತು ವಿಷಯವನ್ನು ಕುರಿತು ಒಂದು ನಿರ್ದಿಷ್ಟ ಪತ್ರಿಕೆ ಅಥವಾ ನಿಯತಕಾಲಿಕೆಗೆ ತಮ್ಮ ವೈಯಕ್ತಿಕ ಚಿಂತನೆಯನ್ನು ಸೇರಿಸಿ ನಿಯತವಾಗಿ ಬರೆಯುವವನೇ ಅಂಕಣಕಾರ. ಅಂಕಣ ಬರೆಹದಲ್ಲಿ ಅಂಕಣಕಾರ ಸಮಕಾಲೀನ ವಸ್ತು ವಿಷಯಗಳಿಗೆ ಸ್ವಂತಿಕೆಯ ಲೇಪ ಹಾಗೂ ಛಾಪನ್ನು ನೀಡಬೇಕಾಗುತ್ತದೆ. -ಇದು ಅಂಕಣ ಬರೆಹದ ಒಂದು ಮುಖ್ಯಲಕ್ಷಣವಾಗಿದೆ.
ಇಂಗ್ಲಿಷ್‍ನಲ್ಲಿ ಅಂಕಣ ಸಾಹಿತ್ಯ
ಬದಲಾಯಿಸಿಇಂಗ್ಲಿಷ್ನಲ್ಲಿ ಅಂಕಣ ಸಾಹಿತ್ಯಕ್ಕೆ ಒಂದು ದೀರ್ಘ ಪರಂಪರೆಯೇ ಇದೆ. ಬೆಂಜಮಿನ್ ಫ್ರಾಂಕ್ಲಿನ್‍ನ ಸಹೋದರನಾದ ಜೇಮ್ಸ್ (ನ್ಯೂ ಇಂಗ್ಲೆಂಡ್ ಕೋರಂಟ್), ಜಾನ್ ಡಿಕಿನ್‍ಸನ್ಸ್ [ಲೆಟರ್ಸ್ ಫ್ರಂ ಎ ಫಾರ್ಮರ್ ಇನ್ ಪೆನ್ಸಿಲ್‍ವೆನಿಯ ಟು ದಿ ಇನ್ ಹ್ಯಾಬಿಟಂಟ್ಸ್ ಆಫ್ ದಿ ಬ್ರಿಟಿಷ್ ಕಾಲನಿಸ್, ಪೆನ್ಸಿಲ್‍ವೆನಿಯ ಕ್ರಾನಿಕಲ್ (1767-68), ಅಲೆಕ್ಸಾಂಡರ್ ಹ್ಯಾಮಿಲ್ಟನ್, ಜೆಮ್ಸ್ ಮ್ಯಾಡಿಸನ್, ಜಾನ್ ಡೇ [ಫೆಡರಲಿಸ್ಟ್ ಲೇಟರ್ಸ್ ಇಂಡಿಪೆಂಡಂಟ್ ಜರ್ನಲ್ ಅಥವಾ ಜನರಲ್ ಅಡ್ವರ್ಟೈಸರ್ (1787-88) ಮೊದಲಾದವರು ಅಂಕಣ ಸಾಹಿತ್ಯದಲ್ಲಿ ಆದ್ಯ ಬರೆಹಗಾರರಾಗಿದ್ದರು. ಆಂಬ್ರೋಸ್ ಬಿಯರ್ಸ್ (ಸ್ಯಾನ್‍ಫ್ರಾನ್ಸಿಸ್ಕೋ ಎಕ್ಸಾಮಿನರ್), ಅನಂತರದಲ್ಲಿ ಯೂಜಿನ್ ಫೀಲ್ಡ್ (ಡೆನ್ವರ್ ಟ್ರಿಬ್ಯೂನ್), ಹೊರೇಸ್ ಗ್ರೀಲಿ, ಜೇಮ್ಸ್ ಗೇರ್ಡನ್ ಬೆನ್ನಟ್, ಹೆನ್ರಿ, ವಾಟರ್‍ಸನ್ ಮೊದಲಾದವರು ಈ ಪರಂಪರೆಯನ್ನು ಮುಂದುವರಿಸಿದರು. ಪತ್ರಿಕಾ ಓದುಗರು ಸಂಪಾದಕೀಯದ ಜೊತೆಗೆ ಅಂಕಣ ಬರೆಹಗಳನ್ನೂ ಬಯಸುತ್ತಿದ್ದರು. ಕೆಲವೊಮ್ಮೆ ಅಂಕಣ ಬರೆಹಗಳು ಜನಸಾಮಾನ್ಯರ ಅಭಿಪ್ರಾಯ ಧ್ವನಿಯಾಗಿರುತ್ತಿದ್ದವು. ಹೀಗೆ ಬೆಳೆದ ಅಂಕಣ ಬರೆಹ ಪತ್ರಿಕೋದ್ಯಮದಲ್ಲಿ ಒಂದು ಚಿರಸ್ಥಾನವನ್ನು ಪಡೆಯಿತಲ್ಲದೆ ಇದಕ್ಕೆ ಒಂದು ಪರಂಪರೆಯೂ ಸೃಷ್ಟಿಯಾಯಿತು. ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರಪಂಚದ ಇಂಗ್ಲಿಷ್ ಮತ್ತಿತರ ಭಾಷೆಗಳ ಪತ್ರಿಕೋದ್ಯಮಕ್ಕೆ ಅಂಕಣ ಬರೆಹಗಳನ್ನು ಬರೆಹಗಾರರಿಂದ ಒದಗಿಸಿಕೊಡುವ ಸುಮಾರು ಇನ್ನೂರಕ್ಕೂ ಹೆಚ್ಚು ಸಿಂಡಿಕೇಟ್‍ಗಳು ಕಾರ್ಯನಿರ್ವಹಿಸುತ್ತಿವೆ. [೧]
ಕನ್ನಡದಲ್ಲಿ ಅಂಕಣ ಸಾಹಿತ್ಯ
ಬದಲಾಯಿಸಿಕನ್ನಡದಲ್ಲಿ ಅಂಕಣ ಸಾಹಿತ್ಯ 20ನೆಯ ಶತಮಾನದ ಆರಂಭದಲ್ಲಿ ಕಾಣಿಸಿಕೊಳ್ಳತೊಡಗಿತು. ಕನ್ನಡ ಪತ್ರಿಕೋದ್ಯಮದ ಆರಂಭವನ್ನು ಮಂಗಳೂರ ಸಮಾಚಾರ (1843) ಪತ್ರಿಕೆಯಿಂದ ಗುರುತಿಸಲಾಗುತ್ತಿದೆ. ಅಂಕಣ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬಗೆಯ ಗದ್ಯವಿರುತ್ತದೆ. ಇತ್ತ ವರದಿಯೂ ಅಲ್ಲದ ಅತ್ತ ಪೂರ್ಣವಾಗಿ ಸಾಹಿತ್ಯವೂ ಅಲ್ಲದ ಆದರೆ ಸಮಕಾಲೀನ ಆಗುಹೋಗುಗಳನ್ನು ಹಿಡಿದಿಡುವ ಸೃಜನಶೀಲತೆಯ ಸೆಲೆಯುಳ್ಳ ಬರೆಹವೇ ಕನ್ನಡ ಅಂಕಣ ಸಾಹಿತ್ಯವೆನಿಸಿಕೊಂಡಿತು. ಕನ್ನಡದ ಸಾಹಿತಿ ಪತ್ರಿಕೋದ್ಯಮಿಗಳಾದ ಡಿವಿಜಿ ಮತ್ತು ಮಾಸ್ತಿ ವೆಂಕಟೇಶಅಯ್ಯಂಗಾರ್ ಅವರ ಸಂಪಾದಕೀಯ ಬರೆಹಗಳು ಕನ್ನಡ ಅಂಕಣ ಸಾಹಿತ್ಯದ ಉಗಮಕ್ಕೆ ತೋರುದೀವಿಗೆಗಳಾದವು. ಕನ್ನಡ ಪತ್ರಿಕೋದ್ಯಮ ಬೆಳೆಯುತ್ತ ಬಂದಂತೆ ಅದರ ವ್ಯಾಪ್ತಿಯೂ ವಿಸ್ತಾರವಾಗತೊಡಗಿತು. ಸಂಪಾದಕೀಯ ಬರೆಹಗಳ ಜೊತೆಗೆ ಅಂಕಣಗಳು ಪ್ರತ್ಯೇಕವಾಗಿ ಕಾಣಿಸಿಕೊಳ್ಳಲು ಆರಂಭವಾದವು. ಸ್ವದೇಶಾಭಿಮಾನಿ, ಅಂತರಂಗ, ದೇಶಬಂಧು, ಛಾಯಾ, ಪ್ರಜಾಮತ, ಪ್ರಜಾವಾಣಿ, ಕನ್ನಡ ಪ್ರಭ, ಕರ್ಮವೀರ, ವಿಶ್ವಕರ್ನಾಟಕ, ಪ್ರಪಂಚ ಮುಂತಾದ ಪತ್ರಿಕೆಗಳು ಅಂಕಣ ಬರೆಹಗಳಿಗೆ ವೇದಿಕೆಯನ್ನು ನೀಡಿದವಲ್ಲದೆ ಅಂಕಣ ಬರೆಹಕ್ಕೆ ಒಂದು ಆಯಾಮವನ್ನೂ ಕೊಟ್ಟವು. ಸಿದ್ಧವನಹಳ್ಳಿ ಕೃಷ್ಣಶರ್ಮ, ನಿರಂಜನ, ಎಚ್ಚೆಸ್ಕೆ, ಹಾ.ಮಾ.ನಾಯಕ, ಕು.ಶಿ,ಹರಿದಾಸಭಟ್ಟ, ಪಾ.ವೆಂ.ಆಚಾರ್ಯ, ತಿ.ತಾ.ಶರ್ಮ, ಎನ್ಕೆ, ಎಂ.ವಿ.ಕಾಮತ್, ಕಲ್ಲೆ ಶಿವೋತ್ತಮರಾವ್, ಕೀರ್ತಿನಾಥ ಕುರ್ತಕೋಟಿ, ಟಿ.ಎಸ್.ರಾಮ ಚಂದ್ರರಾವ್, ಬಿ.ವಿ.ವೈಕುಂಠರಾಜು, ಪಿ.ಲಂಕೇಶ್, ವೈಎನ್ಕೆ, ಜಿ.ವೆಂಕಟಸುಬ್ಬಯ್ಯ, ಸಿ.ವಿ.ರಾಜಗೋಪಾಲ ಬಿ.ಎ.ವಿವೇಕ ರೈ, ಎಸ್.ಎನ್.ಹೆಗಡೆ, ಸೋಮಶೇಖರ ಇಮ್ರಾಪುರ, ಲಿಂಗದೇವರು ಹಳೆಮನೆ ಮೊದಲಾದವರ ಅಂಕಣಗಳು ವಿಶಿಷ್ಟವಾದವು. ಪ್ರಸ್ತುತ ಕನ್ನಡ ಪತ್ರಿಕೋದ್ಯಮದಲ್ಲಿ ಈಗ ಅಂಕಣ ಬರೆಹ ಇಲ್ಲದ ಒಂದು ಪತ್ರಿಕೆಯೂ ಇಲ್ಲ ಎನ್ನಬಹುದು.
ಅಂಕಣ ಬರೆಹದ ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣವನ್ನು ಪಡೆದುಕೊಂಡಿರುವುದೇ ಆಗಿದೆ. ಓದುಗರಲ್ಲಿ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರೆಹ ಮಾಡುತ್ತದೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕøತಿ ಕೇಂದ್ರಿತವೆ ಎಂಬ ಪ್ರಶ್ನೆಯೂ ಇದೆ. ಸಾಮಾನ್ಯವಾಗಿ ಅಂಕಣ ಬರೆಹದಲ್ಲಿ ಲೇಖಕ ನಾನು ಎಂಬ ಪ್ರತ್ಯಯವನ್ನು ಬಳಸಿದರೂ ಅದು ಆತ್ಮಕೇಂದ್ರಿತ ಅಥವಾ ಅಹಮಿಕೆಯನ್ನು ಸೂಚಿಸುವ ಪದವಾಗಿ ಉಳಿಯುವುದಿಲ್ಲ; ಬದಲಿಗೆ ಬರೆಹಕ್ಕೆ ಸಂವಾದ ಸ್ವರೂಪವನ್ನು ನೀಡುತ್ತದೆ.
ಅಂಕಣ ಬರೆಹಕ್ಕೆ ಸಮಕಾಲೀನ ಸಮಾಜದ ಯಾವ ಮುಖವಾದರೂ ವಸ್ತುವಾಗಬಹುದೆಂದು ಪ್ರಸಿದ್ಧ ಅಂಕಣಕಾರರಾದ ಹಾ.ಮಾ. ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಅಂಕಣ ಬರೆಹಗಳು ಸಮಕಾಲೀನ ರಾಜಕೀಯ ವಿದ್ಯಾಮಾನಗಳನ್ನು ಕುರಿತಿರುತ್ತವೆ. ಸಾಹಿತ್ಯಕ ಪ್ರಸ್ತಾಪವುಳ್ಳ ಅಂಕಣಗಳು ಕನ್ನಡದಲ್ಲಿ ವಿರಳ. ವಿಜ್ಞಾನ, ಸಂಗೀತ, ಕಲೆ, ಶಿಕ್ಷಣ, ವೈದ್ಯಕೀಯ, ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಣಗಳು ದುರ್ಲಭವೇನಲ್ಲ. ಈಗೀಗ ಲಘು ಹರಟೆಗಳೂ ಅಂಕಣ ಬರೆಹದಲ್ಲಿ ಸ್ಥಾನಪಡೆದಿವೆ. ಸಾಹಿತ್ಯ ವಿಚಾರ ಪ್ರಧಾನವಾದ ಅಂಕಣಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿ, ಕೃತಿ, ಸಂಸ್ಕøತಿ, ಶಿಕ್ಷಣ ಹಾಗೂ ಕಲೆಗಳನ್ನು ಕುರಿತ ಚಿಂತನೆ ಇರುತ್ತದೆ. ಈ ಬಗೆಯ ಕನ್ನಡ ಅಂಕಣ ಬರಹಗಾರಲ್ಲಿ ನಿರಂಜನರೇ ಆದ್ಯರು. ಉಷಾ ಪತ್ರಿಕೆಯಲ್ಲಿ ಬರೆದ ಸರೋಜ ಸಂಚಯ ಎಂಬ ಅಂಕಣ ಜನಪ್ರಗತಿ ಪತ್ರಿಕೆಯಲ್ಲಿ ಬರೆದ ಸಾಧನ ಸಂಚಯ ಎಂಬ ಅಂಕಣ, ಚಿತ್ರಗುಪ್ತ ಪತ್ರಿಕೆಯ ಐದು ನಿಮಿಷ ಎಂಬ ಅಂಕಣ, ಪ್ರಜಾವಾಣಿ ಪತ್ರಿಕೆಯ ಬೇವು ಬೆಲ್ಲ ಎಂಬ ಅಂಕಣ ಕರ್ಮವೀರ ಪತ್ರಿಕೆಯ ರಾಜ್ಯದ ರಾಜಧಾನಿಯಿಂದ ಹಾಗೂ ಅನಂತರದಲ್ಲಿ ನನ್ನ ದಿನಚರಿಯಿಂದ ಎಂಬ ಅಂಕಣಗಳು ಪ್ರಸಿದ್ಧವಾಗಿದ್ದವು. ಜಿ.ಪಿ.ರಾಜರತ್ನಂ ಅವರ ವಿಚಾರ ಸರಣಿ ವಿ.ಎಂ.ಇನಾಂದಾರರ ಸಾಹಿತ್ಯ ವಿಹಾರ, ಕು.ಶಿ.ಹರಿದಾಸಭಟ್ಟರ ಲೋಕಾಭಿರಾಮ, ಇವು ಪ್ರಮುಖ ಸಾಹಿತ್ಯಕ ಅಂಕಣಗಳಾಗಿದ್ದವು. ಇದೇ ವರ್ಗಕ್ಕೆ ಸೇರುವ, ಆದರೆ ಹೆಚ್ಚುಕಾಲ ಬರೆಯದ ಅಂಕಣಕಾರರಲ್ಲಿ ಸಿದ್ಧವನಹಳ್ಳಿ ಕೃಷ್ಣಶರ್ಮ, ಶ್ರೀರಂಗ, ಬಸವರಾಜ ಕಟ್ಟೀಮನಿ, ತರಾಸು, ಹಿರೇಮಲ್ಲೂರು ಈಶ್ವರನ್, ಬಿ.ಭಾಸ್ಕರರಾವ್, ಪಾಟೀಲ ಪುಟ್ಟಪ್ಪ, ಎಲ್.ಎಸ್.ಶೇಷಗಿರಿರಾವ್, ನಾ.ಡಿಸೋಜ ಮುಂತಾದವರನ್ನು ಹೆಸರಿಸಬಹುದು.
ಕನ್ನಡದಲ್ಲಿ ಹೆಚ್ಚು ನಿಯತಕಾಲಿಕೆಗಳಿಗೆ ಹೆಚ್ಚುಕಾಲ ಸಾಹಿತ್ಯಕ ಅಂಕಣ ಬರೆದವರಲ್ಲಿ ಹಾ.ಮಾ.ನಾಯಕ ಮತ್ತು ಎಚ್ಚೆಸ್ಕೆ ಅವರನ್ನು ಹೆಸರಿಸಬಹುದು. ಎಚ್ಚೆಸ್ಕೆ ಅವರ ಅಂಕಣ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಆರ್ಥಿಕ ವಿಚಾರ, ವ್ಯಕ್ತಿವಿಷಯ, ರಾಜಕೀಯ ಮುಂತಾದವೂ ಅಲ್ಲಿ ಪ್ರಸ್ತಾಪಗೊಳ್ಳುತ್ತವೆ. ಎಚ್ಚೆಸ್ಕೆ ಅವರು ದೇಶಬಂಧು, ವಿಶ್ವಕರ್ನಾಟಕ, ಛಾಯಾ, ಕನ್ನಡನುಡಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಐದಾರು ದಶಕಗಳ ಕಾಲ ಅಂಕಣ ವ್ಯವಸಾಯ ಮಾಡಿದ್ದಾರೆ. ವಾರದಿಂದ ವಾರಕ್ಕೆ, ವಾರದ ವ್ಯಕ್ತಿ, ವ್ಯಕ್ತಿ, ವಿಷಯ, ಆರ್ಥಿಕ ನೋಟ, ದುರ್ಬೀನು ತರಂಗ, ಮುಂತಾದವು ಇವರ ಅಂಕಣ ಶೀರ್ಷಿಕೆಗಳು. ಇತ್ತೀಚೆಗೆ ಇಂಗ್ಲಿಷ್‍ನಲ್ಲಿಯೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.
ಸಾಹಿತ್ಯ ಹಾಗೂ ಸಂಸ್ಕøತಿಯ
ಬದಲಾಯಿಸಿಸಾಹಿತ್ಯ ಹಾಗೂ ಸಂಸ್ಕøತಿಯನ್ನೇ ಅಂಕಣದ ಧ್ಯೇಯ ಹಾಗೂ ಮೂಲವಸ್ತು ಎನ್ನುವಂತೆ ಪರಿಗಣಿಸಿ ಬಹುದೀರ್ಘಕಾಲ ಅಂಕಣ ಕೃಷಿಯನ್ನು ನಡೆಸಿದವರು ಹಾ.ಮಾ. ನಾಯಕರು. ಇವರು ಅಂಕಣ ಪ್ರಕಾರಕ್ಕೆ ಒಂದು ಸಿದ್ಧಿಯನ್ನು ದೊರಕಿಸಿಕೊಟ್ಟವರು. ಇವರು 1951ರಲ್ಲಿ ನಂದಿನಿ ಎಂಬ ಪತ್ರಿಕೆಗೆ ಪೂರ್ಣಿಮೆಗೆ ಪತ್ರಗಳು ಎಂಬ ಶೀರ್ಷಿಕೆಯಲ್ಲಿ ಅಂಕಣ ಬರೆಹ ಆರಂಭಿಸಿದರು. ಅನಂತರ ನಾ ಕಂಡ ಸಾಹಿತಿಗಳು ಅಂಕಣ ಬರೆದರು. ಕನ್ನಡ ಪ್ರಭದಲ್ಲಿ 1967 ರಿಂದ ಸಾಹಿತ್ಯ ಸಲ್ಲಾಪ ಎಂಬ ಅಂಕಣ ಬರೆಯಲಾರಂಭಿಸಿದರು. ಅನಂತರ ಡಾ.ಹಾ.ಮಾ.ನಾಯಕ ಬರೆಯುತ್ತಾರೆ (ಪ್ರಜಾಮತ), ವರ್ತಮಾನ (ಇಂಚರ), ಸಂಪ್ರತಿ (ಪ್ರಜಾವಾಣಿ), ಸ್ವಗತ (ತರಂಗ), ತಿಂಗಳ ಪುಸ್ತಕ (ಗ್ರಂಥಲೋಕ), ಗ್ರಂಥಲೋಕದ ಸುತ್ತಮುತ್ತ ಹಾಗೂ ತಿಂಗಳ ಆಯ್ಕೆ (ಗ್ರಂಥಲೋಕ), ಪುಸ್ತಕ ಪ್ರಸಂಗ (ಸಂಕೇತ) ಪುಸ್ತಕ ಪ್ರಸ್ತಾಪ (ಕರ್ಮವೀರ), ಸಂಪ್ರತಿ (ಸುಧಾ) ಇವು ಇವರ ಮುಖ್ಯವಾದ ಸಾಹಿತ್ಯಕ ಅಂಕಣಗಳು. ಐದು ದಶಕಗಳ ಕಾಲ ನಿರಂತರವಾಗಿ ಇವರು ಒಂದಲ್ಲ ಒಂದು ಸಾಹಿತ್ಯಕ ಅಂಕಣವನ್ನು ಬರೆದಿದ್ದಾರೆ. ನಿರಂಜನರು ಆರಂಭಿಸಿದ ಸಾಹಿತ್ಯಕ ಅಂಕಣ ಬರೆಹಗಳಿಗೆ ಸಾರ್ವಕಾಲಿಕತೆಯ ರೂಪಕೊಟ್ಟು ಅಂಕಣ ಬರೆಹವನ್ನು ಕೀರ್ತಿಶಿಖರಕ್ಕೆ ಏರಿಸಿದವರು ಹಾ.ಮಾ. ನಾಯಕರು. ಇವರು ಅಂಕಣ ಬರೆಹಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಕಲ್ಪಿಸಿಕೊಟ್ಟರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಅಂಕಣಕಾರರೆಂಬ ಖ್ಯಾತಿಗೆ ಪಾತ್ರರಾದರು. ಆ ಮೂಲಕ ಅಂಕಣ ಸಾಹಿತ್ಯದ ಹಾಗೂ ಕನ್ನಡದ ಪ್ರತಿಷ್ಠೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಏರಿಸಿದರು. ಇಂದು ಕನ್ನಡ ಅಂಕಣ ಸಾಹಿತ್ಯ ವೈವಿಧ್ಯಪೂರ್ಣವಾಗಿ ಬೆಳೆದಿದೆ. ಬೆಳೆಯುತ್ತಿದೆ. ಕೆಲವು ಪತ್ರಿಕೆಗಳು ನಿತ್ಯ ಅಂಕಣವನ್ನೂ ಪ್ರಕಟಿಸುತ್ತಿವೆ. ಇದು ಅಂಕಣ ಬರೆಹದ ಜನಪ್ರಿಯತೆಗೆ ಸಾಕ್ಷಿ.
ಅಂಕಣ ಬರೆಹಗಳು ಕೃತಿರೂಪಗಳನ್ನೂ ಪಡೆದಿವೆ. ನಿರಂಜನರ ಅಂಕಣ (1972), ರಾಜಧಾನಿಯಿಂದ (1972) ಇಂಥ ಪರಂಪರೆಗೆ ಮೂಲ. ಹಾಮಾನಾ ಅವರ ಸಾಹಿತ್ಯ ಸಲ್ಲಾಪ, ಸಂಪ್ರತಿ ಮುಂತಾದ ಹತ್ತೊಂಬತ್ತು ಅಂಕಣ ಗ್ರಂಥಗಳು, ಎಚ್ಚೆಸ್ಕೆ ಅವರ ಬೆಳಕು ಚೆಲ್ಲಿದ ಬದುಕು (1998), ಮಾನ್ಯರು-ಸಾಮಾನ್ಯರು (1999), ಗಗನಚುಕ್ಕಿ-ಭರಚುಕ್ಕಿ (2000), ಹೊನ್ನಾರು ಕಟ್ಟಿದವರು ಹೊನ್ನಬಿತ್ತಿಬೆಳೆದವರು (2004); ಕು.ಶಿ.ಹರಿದಾಸಭಟ್ಟರ ಲೋಕಾಭಿರಾಮ ಸಂಪುಟಗಳು ಹೆಸರಿಸಬೇಕಾದ ಅಂಕಣ ಗ್ರಂಥಗಳು. (ಎಸ್.ಬಿ.ಎಚ್.ಎ.)