ಕಥೋಲಿಕ ಕನ್ನಡ ಸಾಹಿತ್ಯ

ಲಿಯೊನಾರ್ಡೊ ಚಿನ್ನಮಿಯ ಕಾಲದಿಂದಲೂ ಇದುವರೆಗೆ ಕನ್ನಡ ಕ್ರೈಸ್ತ ಸಾಹಿತ್ಯ ಯಥೇಚ್ಛವಾಗಿ ಮೂಡಿಬಂದಿದೆ. ಅದರಲ್ಲಿ ಧಾರ್ಮಿಕ ಸಾಹಿತ್ಯದ್ದೇ ಸಿಂಹಪಾಲು ಎನ್ನಬಹುದಾದರೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಲಕ್ಷಿಸದಂಥ ಛಾಪು ಇದರದ್ದು ಎಂದು ಹೇಳಬಹುದು. ಪ್ರೊಟೆಸ್ಟಾಂಟ್ ಬಾಂಧವರಿಗೆ ಹೋಲಿಸಿದರೆ ಕನ್ನಡ ಕಥೋಲಿಕ ಸಾಹಿತ್ಯ ವಿರಳ ಎನ್ನಬಹುದಾದರೂ ನಗಣ್ಯವೇನಲ್ಲ.

  • ಕ್ರಿಸ್ತಶಕ ೧೬೪೮ರಲ್ಲಿ ಕನ್ನಡನಾಡನ್ನು ಶ್ರೀರಂಗಪಟ್ಟಣದ ಮೂಲಕ ಪ್ರವೇಶಿಸಿದ ಜೆಸ್ವಿತ್ ಮಿಷನರಿಗಳಲ್ಲಿ ಮೊದಲಿಗರಾದ ಲಿಯೊನಾರ್ಡೊ ಚಿನ್ನಮಿಯವರು ಸಮಗ್ರ ಜ್ಞಾನೋಪದೇಶ,ಸಂತರ ಜೀವನಚರಿತ್ರೆ ಹಾಗೂ ಧರ್ಮಸಮರ್ಥನೆಯ ಒಂದು ಕೃತಿಯನ್ನು ಪ್ರಕಟಿಸಿದ್ದಾರೆ.
  • ಕ್ರಿಸ್ತಶಕ ೧೬೪೮ ರಿಂದ ೧೭೭೨ ರ ವರೆಗಿನ ಅವಧಿಯಲ್ಲಿ ಸ್ವಾಮಿ ಪ್ಲಾಟೆ ಜಪಮಾಲೆಯ ರಹಸ್ಯ (೧೭೯೧)ಎಂಬ ಪುಸ್ತಕವನ್ನು ಹೊರತುಪಡಿಸಿದರೆ ವಿವಿಧ ಜೆಸ್ವಿತ್ ಪಾದ್ರಿಗಳಿಂದ ವಾರ್ಷಿಕ ವರದಿಗಳನ್ನು ಗಣನೀಯವಾಗಿ ಹೆಸರಿಸಬಹುದಾಗಿದೆ.
  • ಕ್ರಿಸ್ತಶಕ ೧೮೫೦ರಿಂದೀಚೆಗೆ ಬಂದ ವಿವಿಧ ಎಂಇಪಿ (ಮಿಸಿಯೋಂ ಎತ್ರಾಂಜೇರ‍್ ದ ಪಾರೀ = ಫ್ರಾನ್ಸಿನ ಹೊರನಾಡ ಧರ್ಮಪ್ರಚಾರ ಸಂಸ್ಥೆ) ಪಾದ್ರಿಗಳಿಂದ ಹಲವಾರು ಕೃತಿರಚನೆಗಳು ನಡೆದಿವೆ. ಅವರಲ್ಲಿ ಮುಖ್ಯವಾಗಿ ಬಿಷಪ್ ಎತಿಯೇನ್ ಲೂಯಿ ಶಾರ್ಬೊನೋ (೧೮೦೬-೧೮೭೩)ಅವರು ಲ್ಯಾಟಿನೋ ಕನಾರೆನ್ಸ್ ನಿಘಂಟು (೧೮೬೧), ದೈವಪರೀಕ್ಷೆ (ತಮಿಳು ಭಾಷಾಂತರ), ಸತ್ಯವೇದ ಪರೀಕ್ಷೆ (೧೮೫೨), ದಿವ್ಯಮಾತೃಕೆ (೧೮೬೨), ಸುಕೃತ ಮಂತ್ರಗಳು (೧೮೬೬), ದೊಡ್ಡ ಜಪದ ಪುಸ್ತಕವು (೧೮೬೩) ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಅದೇ ಸಂಸ್ಥೆಯ ಮತ್ತೊಬ್ಬ ಪಾದ್ರಿಯಾದ ಬೊತೆಲೋ ಅವರು ಮಹಾ ಮೇಧಾವಿಯಾಗಿದ್ದರು. ಕಥೋಲಿಕ ವಲಯದಲ್ಲಿ ಮೊತ್ತಮೊದಲು ಮುದ್ರಣಯಂತ್ರವನ್ನು ಸ್ಥಾಪಿಸಿದ್ದಲ್ಲದೆ ತಾವೆ ಸ್ವತಃ ಅದನ್ನ ನಿರ್ವಹಿಸಿದ ಖ್ಯಾತಿ ಅವರದು. ಅವರು ರಚಿಸಿದ ಕೃತಿಗಳ ಪಟ್ಟಿ ಇಲ್ಲಿದೆ. ಕನ್ನಡ ಲತೀನ ಪದಕೋಶ, ಇಂಗ್ಲೆಂಡ್ ಶೀಮೆಯ ಚರಿತ್ರೆ, ಭೂಗೋಳಶಾಸ್ತ್ರ, ಗಣಿತ ಪುಸ್ತಕ, ಆದಿತ್ಯವಾದರ ಅದ್ಭುತವು, ತಿರುಸಭೆಯ ಚರಿತ್ರೆಯು, ಜ್ಞಾನಬೋಧಕ, ಕನ್ನಡ ಜ್ಞಾನೋಪದೇಶವು, ಅರ್ಚಶಿಷ್ಟರ ಚರಿತ್ರೆಯು, ಪತಿತರ ಖಂಡನೆಯು, ತಿರುಸಭೆಯ ಲಕ್ಷಣಗಳು ಮುಂತಾದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

  • ಕ್ರಿಸ್ತಶಕ ೧೮೫೦ ರಿಂದ ೧೯೪೦ ರ ಅವಧಿಯಲ್ಲಿ ಎಂಇಪಿ ಪಾದ್ರಿಗಳಾದ ಫಾದರ್ ಜೆರ್ಬಿಯೆ, ಫಾದರ್ ದೆಸೆಂ, ಫಾದರ್ ಬರೇಂ ಮುಂತಾದವರು ಈ ಸಾಹಿತ್ಯ ಕೃಷಿಯಲ್ಲಿ ಕೈಯಾಡಿಸಿದರು. ಈ ಧಾರ್ಮಿಕ ಕೃತಿಗಳಲ್ಲಿ ಹೆಚ್ಚಿನವು ತಮಿಳು, ಇಂಗ್ಲಿಷ್, ಫ್ರೆಂಚ್ನಿಂದ ಅನುವಾದಗೊಂಡವು)
  • ಕ್ರಿಸ್ತಶಕ ೧೯೨೦ ರಿಂದ ೧೯೬೦ ಫಾದರ್ ಐ ಎಚ್ ಲೋಬೊ(೧೮೯೧-೧೯೬೮) ಅವರಿಂದ ಜೇಸುನಾಥರ ತಿರುಹೃದಯದ ದೂತನು ಎಂಬ ಪತ್ರಿಕೆ, ರಾಜಾನಾಯುಡು, ಎ ಎಂ ಜೋಸೆಫ್ (೧೮೯೧-೧೯೬೫), ಎ ಎಂ ಬೆರ್ನಾರ್ಡ್ ಫಬಿಯೋಲೆ
  • ಕ್ರಿಸ್ತಶಕ ೧೯೬೦ ರಿಂದೀಚೆಗೆ ಫಾದರ್ ಎನ್ ಎಸ್ ಮರಿಜೋಸೆಫ್, ಫಾದರ್ ಅಂತಪ್ಪ, ಫಾದರ್ ಜಾರ್ಜ್ ಡಿಸೋಜ, ಸ್ವಾಮಿ ಅಮಲಾನಂದ, ಫಾದರ್ ದಯಾನಂದ ಪ್ರಭು, ಸಂತ ರಾಯಪ್ಪರ ಗುರುಮಠದ ಕನ್ನಡ ಸಾಹಿತ್ಯ ಸಂಘ, ಕಥೋಲಿಕ ಕ್ರೈಸ್ತರ ಕನ್ನಡ ಸಾಹಿತ್ಯ ಸಂಘ, ನಾ ಡಿಸೋಜ, ಫಾದರ್ ಫೆಲಿಕ್ಸ್ ನರೋನ ಅವರಿಂದ ಒಟ್ಟಾರೆಯಾಗಿ ಬೈಬಲ್ ಭಾಷಾಂತರ, ಸಂಗೀತ ಪ್ರಸ್ತಾರದೊಂದಿಗೆ ಕ್ರೈಸ್ತಗೀತೆಗಳು, ಧರ್ಮೋಪದೇಶ, ಪೂಜಾ ಪುಸ್ತಕ, ವಿವಿಧ ಧಾರ್ಮಿಕ ಕ್ರಿಯೆಗಳ ವ್ಯಾಖ್ಯಾನ, ಧರ್ಮಾಧ್ಯಯನ ಪುಸ್ತಕಗಳು, ಸೃಜನಶೀಲ ಕೃತಿಗಳು, ಪತ್ರಿಕೆಗಳು, ಧ್ವನಿಸುರುಳಿಗಳು, ನಾಟಕಗಳು, ರೂಪಕಗಳು, ಮಾಧ್ಯಮ ನಿರೂಪಣೆಗಳು ಚಲಾವಣೆಗೆ ಬಂದವು.