ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಥಾಸೂತ್ರ (ಜಾನಪದ) : ಜನಪದ ಕಥೆಗಳ ಧಾಟಿಯಲ್ಲಿ ಅದರಲ್ಲೂ ಮುಖ್ಯವಾಗಿ ಕಥೆಗಳ ಪ್ರಾರಂಭ ಮತ್ತು ಮುಕ್ತಾಯಗಳಲ್ಲಿ ಕಂಡುಬರುವ ಕ್ರಮನಿಯಮಗಳನ್ನು ಇಲ್ಲಿ ಕಥಾಸೂತ್ರ (ಸ್ಟೋರಿ ಫಾರ್ಮುಲ) ಎನ್ನಲಾಗಿದೆ.

ಜನಪದ ಮತ್ತು ಇತರ ಕಥೆಗಳಲ್ಲಿ

ಬದಲಾಯಿಸಿ

ಜನಪದವಲ್ಲದ ಇತರ ಯಾವುದೇ ಕಥೆಯಲ್ಲಾದರೂ ಯುಕ್ತ ಪ್ರಾರಂಭ, ಬೆಳೆವಣಿಗೆ ಹಾಗೂ ಮುಕ್ತಾಯಗಳು ಇರಲೇಬೇಕು. ಆದರೆ ಅವುಗಳಲ್ಲಿ ಏಕರೂಪವಾದ ಕ್ರಮಬದ್ಧತೆಯೇನೂ ಇರಬೇಕಾದುದಿಲ್ಲ. ಏಕೆಂದರೆ ಕಥೆ ಅದನ್ನು ಹೇಳುವವನ ವೈಯಕ್ತಿಕ ಕೃತಿ. ಅದರ ನಿರೂಪಣೆ, ವೈಖರಿ, ವಿವರಣೆ, ಮುಕ್ತಾಯ ಎಲ್ಲ ಅವನ ಮನೋಧರ್ಮಕ್ಕೆ ಸೇರಿದ್ದು. ವೈವಿಧ್ಯ ಬೇಕೆನ್ನುವ ಪ್ರತಿಯೊಬ್ಬ ಕಥೆಗಾರನೂ ತಾನು ಹೇಳುವ ಕಥೆ ನೂತನವಾಗಿರಲೆಂಬ ಅಭಿಲಾಷೆಯಿಂದ ಹೊಸ ರೀತಿಯಲ್ಲದನ್ನು ಹೇಳಲು ಯತ್ನಿಸುತ್ತಾನೆ. ಜನಪದ ಕಥಾನಿರೂಪಣೆಯಲ್ಲೂ ಸ್ವಲ್ಪ ಮಟ್ಟಿಗೆ ಇಂಥ ಸ್ವಾತಂತ್ರ್ಯ ಉಂಟು: ಅಲ್ಲದೆ ಪ್ರಾದೇಶಿಕತೆಯಿಂದಾಗಿಯೂ ಸಹಜವಾಗಿ ವೈವಿಧ್ಯ ಏರ್ಪಡುತ್ತದೆ. ಆದರೂ ಬಹುತೇಕ ಕಥೆಗಳನ್ನು ಪರಿಶೀಲಿಸಿದಾಗ ಅವುಗಳ ಪ್ರಾರಂಭ ವಿವರಣೆ, ಮುಕ್ತಾಯಗಳಲ್ಲಿ ಸುಮಾರಾಗಿ ಏಕರೂಪತೆ ಇರುವಂತೆ ತೋರುತ್ತದೆ.

ಜಾನಪದ ಕಥೆಯಲ್ಲಿ ಮೊಟ್ಟಮೊದಲು ಗಮನಕ್ಕೆ ಬರುವ ಅಂಶವೆಂದರೆ ಅದರ ಆರಂಭ ಮತ್ತು ಮುಕ್ತಾಯಗಳೆರಡಕ್ಕೂ ಗೊತ್ತಾದ ಸೂತ್ರಗಳಿದ್ದು, ಈ ಸೂತ್ರಗಳು ವಿಶ್ವವ್ಯಾಪಕತೆಯನ್ನು ಪಡೆದಿರುತ್ತವೆ-ಎಂಬುದು. ಜಗತ್ತಿನ ಎಲ್ಲ ಕಥೆಗಾರರೂ ತಮ್ಮ ಕಥೆಗಳಲ್ಲಿ ಇಂಥ ಒಂದು ಕ್ರಮವನ್ನು ಅನುಸರಿಸಿದ್ದಾರೆ. ಆದರೆ ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದಗಳಿರುವುದನ್ನೂ ಅಲ್ಲಗಳೆಯಲಾಗದು.

ಕಥೆಗಳ ಆರಂಭ

ಬದಲಾಯಿಸಿ

ಸಾಮಾನ್ಯವಾಗಿ ಜನಪದ ಕಥೆಗಳು ಆರಂಭವಾಗುವುದು-ಒಂದಾನೊಂದು ಕಾಲದಲ್ಲಿ ಎಂದು. ಅಷ್ಟಷ್ಟಕ್ಕೆ ಒಂದು ಪಟ್ಟಣ, ಆ ಪಟ್ಟಣದಲ್ಲಿ ಒಬ್ಬ ರಾಜ. ಆ ರಾಜನಿಗೊಬ್ಬ ರಾಣಿ; ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ಒಬ್ಬ ದೊರೆಯಿದ್ದ; ಒಂದು ಊರು, ಆ ಊರಿನಲ್ಲಿ ಒಬ್ಬ ರಾಜ, ಅವನಿಗೆ ಮಕ್ಕಳಿರಲಿಲ್ಲ-ಇವು ಆರಂಭದ ಕೆಲವು ಸೂತ್ರಗಳು. ಕಥೆಯ ಆರಂಭದಲ್ಲಿ ರಾಜರಾಣಿಯರ ಪ್ರಸ್ತಾಪ ಬಂದು ಅವರಿಗೆ ಮಕ್ಕಳಿರಲಿಲ್ಲವೆಂದು ಹೇಳುವುದು ಜನಪದ ಕಥೆಗಳ ಒಂದು ಸಾಮಾನ್ಯ ಲಕ್ಷಣ. ಕೆಲವು ಸಾರಿ ವಿಸ್ತೃತ ಸೂತ್ರಗಳೂ ಕಾಣಬರುವುದುಂಟು. ಆರಂಭದ ಒಂದಾನೊಂದು ಕಾಲದಲ್ಲಿ ಎಂಬ ಭಾವನೆ ಇನ್ನೂ ಹೆಚ್ಚು ಬೆಳೆವಣಿಗೆಯನ್ನು ಪಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದಲ್ಲದೆ ವ್ಯಕ್ತಿಗಳ ಮತ್ತು ಅವರು ವಾಸಿಸುವ ಸ್ಥಳಗಳ ಹೆಸರುಗಳಿಂದಲೂ ಕಥೆಗಳು ಪ್ರಾರಂಭವಾಗುತ್ತವೆ. ಉದಾಹರಣೆಗಾಗಿ, ಚಂದ್ರಾವತಿ ಅನ್ನುವುದು ಒಂದು ಪಟ್ಟಣ. ಅಲ್ಲಿಗೆ ಚಂದ್ರಶೇಖರರಾಯ ಅನ್ನುವವನು ಒಬ್ಬ ದೊರೆ-ಎಂಬುದನ್ನು ನೋಡಬಹುದು. ಆರಂಭದ ಇಂಥ ನಮೂನೆ ದಕ್ಷಿಣ ಅಮೆರಿಕದ ಈಶಾನ್ಯ ತೀರಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಪುರಾಣಕಥೆಗಳಲ್ಲಿಯೂ ಕಾಣಬರುವುದುಂಟು. ಆದರೆ ಒಂದು ಮಾತು ಮಾತ್ರ ಸತ್ಯ. ಉಲ್ಲೇಖಿತ ಹೆಸರುಗಳಿಂದ ಆರಂಭವಾಗುವುದು ಪುರಾಣಕಥೆಗಳಲ್ಲಿ ಸಹಜವಾದುದಾದರೂ ಶುದ್ಧ ಜನಪದಕಥೆಗಳಲ್ಲಿ ಅಲ್ಲವೆನಿಸುತ್ತದೆ. ಹೀಗೆ ಹೆಸರುಗಳು ಕಾಣಿಸಿಕೊಳ್ಳುವುದಕ್ಕೆ ಸಾಹಿತ್ಯಿಕ ಕಥೆಯ ಸಂಪರ್ಕ ಅಥವಾ ಪ್ರಭಾವವೇ ಕಾರಣವಾಗಿರಬೇಕು. ಆದ್ದರಿಂದ ಈ ಮಾದರಿಯ ಆರಂಭ ಶುದ್ಧ ಜನಪದಕಥೆಗಳ ಜಾಯಮಾನವಲ್ಲ ಎಂದು ಹೇಳಬಹುದು. ಇನ್ನು ಕೆಲವು ಸಾರಿ ಕಥೆ ಹೇಳುವವರು ತಮ್ಮ ವೈಯಕ್ತಿಕ ಪರಿಸರಕ್ಕೆ ಕಥೆಯ ಆರಂಭವನ್ನು ಪಳಗಿಸಿಕೊಳ್ಳುವುದುಂಟು. ನಮ್ಮೂರಂತೋದು ಒಂದೂರು, ನನ್ನಂತೋಳು ಒಬ್ಬ ಬಡವೆ; ಸಂಜೀವ್ನೂ ಸಂಜೀವ್ನ ಹೆಂಡ್ತಿ ಸಿದ್ಧಿಯೂ ಪೀಹಳ್ಳಿಯಲ್ಲಿ ಕೂಲಿ ಮಾಡ್ಕಂಡಿದ್ರು-ಇವು ಅಂಥ ಕೆಲವು ಉದಾಹರಣೆಗಳು. ಕಥಾವಕ್ತೃ ತನ್ನನ್ನೊ ತನ್ನ ಊರನ್ನೊ ಅಥವಾ ತನ್ನ ಸಮಕಾಲೀನರಾದ ಮತ್ತಾರನ್ನೊ ಬಳಸಿಕೊಂಡು ಹೇಳುವುದನ್ನು ಮೇಲಿನ ನಿದರ್ಶನಗಳಿಂದ ಗುರುತಿಸಬಹುದು. ಊರು, ರಾಜ, ರಾಣಿ ಮುಂತಾದ ಮಾತುಗಳು ಸಾರ್ವತ್ರಿಕ ಅರ್ಥದಲ್ಲಿ ಬಳಕೆಯಾಗುತ್ತಿದ್ದು ಅವುಗಳ ಬದಲು ಇನ್ನಾವ ಹೆಸರನ್ನೇ ಸೇರಿಸಿದರೂ ಒಟ್ಟು ಕಥಾರಚನೆಯಲ್ಲಿ ವ್ಯತ್ಯಾಸವೇನೂ ಕಾಣಬರದಿರುವುದು ಇದಕ್ಕೆ ಕಾರಣವಾಗಿದೆ. ಅಂತೂ ಕಥೆ ಹೇಳುವವರು ಕಥೆ ಹೇಳುವ ಧಾಟಿಯಲ್ಲಿ ಮಾಡಿಕೊಳ್ಳುವ ವ್ಯತ್ಯಾಸ ಇದು. ಇಂಥ ಸಂದರ್ಭಗಳು ತೀರ ಅಪರೂಪ. ಮೇಲಿನ ವಿವೇಚನೆಯಿಂದ, ಕಥೆಯ ಆರಂಭ ಕೆಲವು ಸೂತ್ರಗಳ ಮೂಲಕವೇ ಆಗುತ್ತದೆ ಎಂಬುದನ್ನು ಸ್ಥಿರಪಡಿಸಿದಂತಾಯಿತು.

ಕಥೆಗಳ ಮುಕ್ತಾಯ

ಬದಲಾಯಿಸಿ

ಕಥೆಗಳ ಸೂತ್ರಬದ್ಧ ಆರಂಭದಂತೆ ಸೂತ್ರಬದ್ಧ ಮುಕ್ತಾಯವೂ ಪದೇ ಪದೇ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಆರಂಭಕ್ಕಿಂತ ಮುಕ್ತಾಯ ಹೆಚ್ಚು ವೈವಿಧ್ಯವನ್ನು ತೋರಿಸುತ್ತಿದ್ದು, ವಿವರವಾದ ಅಧ್ಯಯನಕ್ಕೆ ವಸ್ತುವಾಗಿದೆ. ಆಮೇಲೆ ಅವರು ಸುಖವಾಗಿ ಬಾಳ್ತಾರೆ; ಹೀಗೆ ಅವರು ಬಹಳ ಕಾಲ ಸುಖದಿಂದಿದ್ದರು; ಅವರು ಅಲ್ಲಿ ಸುಖವಾಗಿದ್ದಾರೆ, ನಾವು ಇಲ್ಲಿದ್ದೇವೆ; ಅವ್ರು ಬಾಳ್ ಬಾಳ್ತಾ ಅಲ್ಲವ್ರೆ, ನಾವು ಬಳ್ಳೆಸೊಪ್ಪಿಗೆ ಬೆಳ್ಳುಳ್ಳಿ ಇಲ್ದೆ ಇಲ್ಲಿವಿ__ಇವು ಮುಕ್ತಾಯದ ಸೂತ್ರಗಳು. ಇಲ್ಲಿಗೆ ಕಥೆ ಮುಗಿಯಿತು__ಎಂಬುದು ಸಾಮಾನ್ಯವಾಗಿ ಸಾರ್ವತ್ರಿಕವಾದ ಮುಕ್ತಾಯದ ಸೂತ್ರವೆನಿಸುತ್ತದೆ. ಆದರೆ ಕೆಲವು ಸಾರಿ ಕಥೆ ಮುಗಿದ ಕೂಡಲೆ, ಬೇರೊಂದು ಕಥೆ ಹೇಳು ಎಂದು ಕೇಳುವುದರ ಮೂಲಕ ಕೇಳಿದವರ ಹೆಸರು, ಹೇಳಿದವರ ಹೆಸರು ಮುಂತಾದವುಗಳಿಂದ ಕಥೆ ಮುಂದೆ ಸಾಗುತ್ತದೆ. ಬೃಹತ್ ಕಥೆ, ಪಂಚತಂತ್ರ, ಬೇತಾಳಪಂಚವಿಂಶತಿ ಮೊದಲಾದ ಸಾಹಿತ್ಯಿಕ ಕಥೆಗಳಲ್ಲಿ ಇದನ್ನು ಕಾಣಬಹುದು. ಇವುಗಳ ಕಥಾತಂತ್ರವನ್ನೇ ಹಾಗೆ ನಿಯೋಜಿಸಲಾಗಿದೆ.

ಜನಪದ ಕಥೆಗಳ ಮುಕ್ತಾಯ ಸಾಮಾನ್ಯವಾಗಿ ಸುಖಾಂತ, ಅದರಲ್ಲೂ ಮದುವೆಯ ಉತ್ಸವದಲ್ಲಿ. ಆದ್ದರಿಂದ ವಿಶೇಷವಾಗಿ ನೆನೆಯಬಹುದಾದ ಕಥೆಯ ಮುಕ್ತಾಯದ ಸೂತ್ರವಿವರಣೆಯೆಂದರೆ ಮದುವೆಯ ಸಂಭ್ರಮದಲ್ಲಿ ಕಡೆಯಾಗುವುದೇ ಆಗಿದೆ. ಉದಾಹರಣೆಗೆ, ಕೊಟ್ಟಣ ಕುಟ್ಟಿಸಿ, ಪಟ್ಟಣ ಸಾರಿಸಿ, ಕಾಣದವರಿಗೆ ವಾಲೆ ಬರೆದು, ಕಂಡವರಿಗೆ ಕರಪತ್ರ ಕೊಟ್ಟು ಕಳಿಸಿ, ಉಘೇ ಅಂತ ಮದುವೆ ಮಾಡ್ಕೊಂಡು ಸುಖವಾಗಿದ್ದ__ಎಂಬ ವಿವರಣಾತ್ಮಕ ಸೂತ್ರವನ್ನು ನೋಡಿ. ಕೆಲವು ಸಾರಿ ಈ ಸಂಭ್ರಮದಲ್ಲಿ ಕಥಾವಕ್ತೃ ಕೂಡ ಪ್ರತಿನಿಧಿಯಾಗಿದ್ದನೊ ಎನ್ನಿಸುವಂತೆ ಸಾಕ್ಷಾತ್ತಾದ ಚಿತ್ರಣ ಮೈದುಂಬಿ ನಿಲ್ಲಬಹುದು. ಮುಕ್ತಾಯದಲ್ಲೂ ವಿಸ್ತೃತ ಸೂತ್ರಗಳು ಕಾಣಬರುವುದನ್ನು ಮೇಲಿನ ನಿದರ್ಶನದಿಂದ ಶ್ರುತಪಡಿಸಬಹುದು. ಈ ಸಂದರ್ಭದಲ್ಲಿ ಕಥೆಗಳು ಈ ಯಾವುದೇ ಸೂತ್ರಗಳಿಲ್ಲದೆ ಇದ್ದಕ್ಕಿದ್ದ ಹಾಗೆ ಮುಕ್ತಾಯವಾಗುವ ಕೆಲಮಟ್ಟಿನ ಸಾಧ್ಯತೆಯನ್ನೂ ನಿರಾಕರಿಸುವಂತಿಲ್ಲ. ಕೆಲವು ವೇಳೆ ಕಥಾವಕ್ತೃ ಕೇಳುಗನಲ್ಲಿ ಆಸಕ್ತಿಯನ್ನು ಕೆರಳಿಸುವುದಕ್ಕಾಗಿ ಕಥೆಯನ್ನು ಇದ್ದಕ್ಕಿದಂತೆ ನಿಲ್ಲಿಸುವುದುಂಟು. ಆಗ ಕೇಳುಗನ ಪ್ರಶ್ನೆ, ಅನಂತರ ವಕ್ತೃವಿನ ಉತ್ತರ-ಹೀಗೆ ಕಥೆ ನಡೆಯುತ್ತದೆ. ಇಲ್ಲಿ ಕಥೆ ಅವಶ್ಯವಾಗಿ ಕ್ರೀಡೆಯಾಗಿ ಬಿಡುತ್ತದೆ. ಕಥೆಗಳ ಕಡೆಯಲ್ಲಿ ಶುಭಕಾಮನೆ, ಮತ್ತೊಂದು ಕಥೆ ಹೇಳುವಂತೆ ಪ್ರಾರ್ಥನೆ, ಕಥೆಯನ್ನು ಕಲಿತದ್ದೆಲ್ಲಿ ಎಂಬುದರ ವಿಚಾರಣೆ-ಇವುಗಳಿಂದ ಮುಕ್ತಾಯವಾಗುವುದು ಅಪರೂಪ. ಈ ಸಮಯದಲ್ಲಿ ನೆನೆಯಬಹುದಾದ ಮತ್ತೊಂದು ವಿಷಯವೆಂದರೆ, ಕಥೆಯ ಮಧ್ಯದಲ್ಲಿ ಕಥಾವಕ್ತೃ ಆಸಕ್ತಿಯಿಂದ ಶ್ರೋತೃಗಳನ್ನು ಕುರಿತು ಕೇಳುವ ಪ್ರಶ್ನೆ; ಶ್ರೋತೃಗಳು ತಾವು ಕೇಳಿದ್ದನ್ನು ಖಾಯಂಗೊಳಿಸುವ ದೃಷ್ಟಿಯಿಂದ ಮಾಡುವ ಹೂಂಗುಟ್ಟುವಿಕೆ.

ಇನ್ನೊಂದು ವಿಚಾರ. ಸ್ಥಳಪುರಾಣದ ಕಥೆ ಆ ಸ್ಥಳದ, ಗ್ರಾಮದೇವತೆಯ ಹಾಗೂ ಇನ್ನಾರದೊ ಪ್ರಚಲಿತರ ಹೆಸರುಗಳಿಂದ ಆರಂಭವಾಗುತ್ತದೆ; ನಂಬಿ ಬಂದ ಆಚಾರವಿಚಾರಗಳ ಪದ್ಧತಿ ಸಂಪ್ರದಾಯಗಳ ವಿವರಣೆಯೊಡನೆ ಮುಕ್ತಾಯವಾಗುತ್ತದೆ. ಇದಲ್ಲದೆ, ನೀತಿಕಥೆಗಳು (ಕೆಲವು ಸಾರಿ ಪ್ರಾಣಿಕಥೆಗಳು) ಅಂತ್ಯದಲ್ಲಿ ಸೂತ್ರಬದ್ಧವಾದ ನೀತಿವಾಕ್ಯವೊಂದರಿಂದ ಮುಕ್ತಾಯವಾಗುವುದೂ ಸಹಜವಾಗಿದೆ. ಕಾಗೆಯನ್ನು ಮೋಸಮಾಡುವ ನರಿ, ಸಿಂಹವನ್ನು ಬಾವಿಗೆ ಕೆಡವಿದ ಮೊಲ__ಇಂಥ ಕಥೆಗಳನ್ನು ಉದಾಹರಿಸಬಹುದು.

ಉಪಸಂಹಾರ

ಬದಲಾಯಿಸಿ

ಹೀಗೆ ಜನಪದ ಕಥೆಯ ಆರಂಭ ಮತ್ತು ಮುಕ್ತಾಯ ಸೂತ್ರ ಬದ್ಧ ನೆಲಗಟ್ಟಿನ ಮೇಲೆ ರೂಪಿತವಾಗಿದೆ. ಕಥಾಸೂತ್ರವನ್ನು ಕುರಿತಾದ ಆಲೋಚನೆಯಲ್ಲಿ ಸೂತ್ರ ಕಥೆ ಮತ್ತು ಸಂಚಿತಕಥೆ ಎಂಬೆರಡು ಪ್ರಕಾರಗಳನ್ನು ಆಸಕ್ತಿಯಿಂದ ಅವಲೋಕಿಸಬಹುದು. ಒಂದೇ ಘಟನೆ, ಪದ್ಯ ಅಥವಾ ನುಡಿಗಟ್ಟುಗಳು ಪುನರಾವರ್ತನೆಗೊಳ್ಳುವ ಏಕರೀತಿಯ ಘಟನಾವಳಿಗಳನ್ನು ಚಿತ್ರಿಸುವ ಕಥೆ ಸೂತ್ರಕಥೆಯೆನಿಸುತ್ತದೆ. ಕಥೆಯಲ್ಲಿ ಏನು ನಡೆಯುತ್ತದೆ ಎಂಬುದು ಇಲ್ಲಿ ಮುಖ್ಯವಲ್ಲ. ಅದನ್ನು ಯಾವ ರೀತಿಯಲ್ಲಿ ಹೇಳಿದೆ ಎಂಬುದು ಇಲ್ಲಿ ಗಮನಾರ್ಹ. ಆದ್ದರಿಂದ ಚಮತ್ಕಾರವೇ ಇಲ್ಲಿ ಮುಖ್ಯವಾಗಿ ಬಿಡುತ್ತದೆ. ಇನ್ನೂ ಸ್ಪಷ್ಟವಾದ ಪ್ರಕಾರವೆಂದರೆ ಸಂಚಿತಕಥೆ. ಘಟನೆ ಅಥವಾ ನುಡಿಗಳ ಪುನರಾವರ್ತನೆಗಳ ಸಂಚಯವೇ ಇದು. ಈ ಘಟನಾಸರಣಿಗಳು ನಿಯತಸೂತ್ರದ ಮೇಲೆ ಬಂಧಿತವಾಗಿರುತ್ತವೆ. ಸಂಭಾಷಣೆಗಳ ಮೂಲಕ ವಿವರಗಳು ಬೆಳೆಯುತ್ತ ಹೋಗುತ್ತವೆ. ಪ್ರತಿಯೊಂದು ಘಟನೆಯೊಡನೆಯೂ ಈ ಸಂಚಯ ಕಾರ್ಯ ನಡೆಯುವುದಲ್ಲದೆ, ಪ್ರತಿ ಘಟನೆಯೂ ಹಿಂದಿನ ಘಟನೆಯನ್ನು ಅವಲಂಬಿಸಿರುತ್ತದೆ. ಕೆಲವು ಸಾರಿಯ ಇಂಥ ಅಸಂಬದ್ಧ ಸೇರಿಕೆ ಮನೋರಂಜನೆಯ ವಸ್ತುವಾಗುತ್ತದೆ.

ಸೂತ್ರಕಥೆ ಮತ್ತು ಸಂಚಿತ ಕಥೆಗಳೆರಡರಲ್ಲೂ ಕಾಣಬರುವ ಮೊದಲ ಗುಣವೆಂದರೆ ಪುನರಾವರ್ತನೆ; ಸಾಮಾನ್ಯವಾಗಿ ಇದು ನಿರಂತರ ಸಂಕಲನಗಳ ಮೂಲಕ ಆದುದು. ಇವೆರಡರಲ್ಲಿಯೂ ಕಥಾರೂಪವೇ ಪ್ರಧಾನವಾದುದು. ಬಹುಸಾರಿ ಇವುಗಳ ಕಥೆ ಕ್ರೀಡೆಯಾಗಿ ಬಿಡುತ್ತದೆ. ಹೀಗೆ ಸೂತ್ರಾತ್ಮಕವಾಗಿ ಸಾಗುವುದರಿಂದ ಇವನ್ನಿಲ್ಲಿ ನೆನೆಯಬಹುದು.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: