ಕಥನ ಎಂದರೆ ಪ್ರೇಕ್ಷಕರಿಗೆ ಒಂದು ಕಥೆಯನ್ನು ತಿಳಿಸಲು ಲಿಖಿತ ಅಥವಾ ಮಾತಾನಾಡಲಾದ ನಿರೂಪಣೆಯ ಬಳಕೆ.[] ಕಥನವು ತಂತ್ರಗಳ ಒಂದು ಸಮೂಹವನ್ನು ಒಳಗೊಳ್ಳುತ್ತದೆ ಮತ್ತು ಇದರ ಮೂಲಕ ಕಥೆಯ ಸೃಷ್ಟಿಕರ್ತನು ತನ್ನ ಕಥೆಯನ್ನು ಪ್ರಸ್ತುತಪಡಿಸುತ್ತಾನೆ. ಇವುಗಳಲ್ಲಿ ಕಥನದ ದೃಷ್ಟಿಕೋನ: ಕಥೆಯನ್ನು ಹೇಳುವ ದೃಷ್ಟಿಕೋನ (ಅಥವಾ ವೈಯಕ್ತಿಕ ಅಥವಾ ಅವೈಯಕ್ತಿಕ "ಮಸೂರ"ದ ಬಗೆ); ಕಥನದ ಧ್ವನಿ: ಒಂದು ಕಥೆಯನ್ನು ಹೇಳುವ ಸ್ವರೂಪ; ಕಥನದ ಕಾಲ: ಭೂತಕಾಲದಲ್ಲಿ, ವರ್ತಮಾನ ಕಾಲದಲ್ಲಿ, ಅಥವಾ ಭವಿಷ್ಯ ಕಾಲದಲ್ಲಿ ಕಥೆಯ ಸಮಯ ಚೌಕಟ್ಟಿನ ವ್ಯಾಕರಣಾತ್ಮಕ ಸ್ಥಾಪನೆ ಸೇರಿವೆ.

ನಿರೂಪಕನು ಓದುಗರಿಗೆ ಮಾಹಿತಿ ಒದಗಿಸಲು (ವಿಶೇಷವಾಗಿ ಕಥಾವಸ್ತುವಿನ ಬಗ್ಗೆ) ಸೃಷ್ಟಿಕರ್ತನಿಂದ (ಲೇಖಕ) ಅಭಿವೃದ್ಧಿ ಮಾಡಲ್ಪಟ್ಟ ಒಬ್ಬ ವೈಯಕ್ತಿಕ ಪಾತ್ರ ಅಥವಾ ಅವೈಯಕ್ತಿಕ ಧ್ವನಿಯಾಗಿರುತ್ತಾನೆ. ಬಹುತೇಕ ಲಿಖಿತ ಆಖ್ಯಾನಗಳ (ಕಾದಂಬರಿಗಳು, ಸಣ್ಣಕಥೆಗಳು, ಕವನಗಳು, ಇತ್ಯಾದಿ) ವಿಷಯದಲ್ಲಿ, ನಿರೂಪಕನು ಸಾಮಾನ್ಯವಾಗಿ ಕಥೆಯನ್ನು ಅದರ ಸಂಪೂರ್ಣತೆಯಲ್ಲಿ ಹೇಳಲು ಕಾರ್ಯಮಾಡುತ್ತಾನೆ. ನಿರೂಪಕನು ಅನಾಮಧೇಯ, ಅವೈಯಕ್ತಿಕ, ಅಥವಾ ಸ್ವತಂತ್ರ ಘಟಕವಾಗಿ ಲೇಖಕನಿಂದ ರೂಪಿಸಲ್ಪಟ್ಟ ಧ್ವನಿಯಾಗಿರಬಹುದು; ಲೇಖಕನು ಒಬ್ಬ ಪಾತ್ರವಾಗಿ, ಅಥವಾ ಲೇಖಕನು ತನ್ನ ಸ್ವಂತ ಕಥೆಯೊಳಗೆ ಕಾಣಿಸಿಕೊಳ್ಳುವ ಅಥವಾ ಭಾಗವಹಿಸುವ ಯಾವುದೋ ಇತರ ಕಾಲ್ಪನಿಕ ಅಥವಾ ಕಾಲ್ಪನಿಕವಲ್ಲದ ಪಾತ್ರವಾಗಿ. ಅವನು/ಅವಳು ಕಥೆಯೊಳಗೆ ಒಬ್ಬ ಪಾತ್ರನಾಗಿದ್ದರೆ ನಿರೂಪಕನನ್ನು ಭಾಗಿಯೆಂದು ಪರಿಗಣಿಸಲಾಗುತ್ತದೆ, ಅವನು/ಅವಳು ಸೂಚಿತ ಪಾತ್ರ ಅಥವಾ ಸರ್ವಜ್ಞ ಅಥವಾ ಅರೆಸರ್ವಜ್ಙ ಜೀವಿ ಅಥವಾ ವಾಸ್ತವಿಕ ಘಟನೆಗಳಲ್ಲಿ ಭಾಗಿಯಾಗಿರದೆ ಕೇವಲ ಕಥೆಯನ್ನು ಓದುಗರಿಗೆ ಸಂಬಂಧಿಸುವ ಧ್ವನಿಯಾಗಿದ್ದರೆ ನಿರೂಪಕನನ್ನು ಭಾಗಿಯಲ್ಲವೆಂದು ಪರಿಗಣಿಸಲಾಗುತ್ತದೆ. ಒಂದೇ, ಹೋಲುವ, ಅಥವಾ ಭಿನ್ನ ಸಮಯಹಳಲ್ಲಿ ವಿವಿಧ ಪಾತ್ರಗಳ ಕಥಾವಸ್ತುಗಳನ್ನು ವಿವರಿಸಲು ಕೆಲವು ಕಥೆಗಳು ಬಹು ನಿರೂಪಕರನ್ನು ಹೊಂದಿರುತ್ತವೆ. ಹೀಗೆ ಹೆಚ್ಚು ಸಂಕೀರ್ಣ, ಏಕವಚನವಲ್ಲದ ದೃಷ್ಟಿಕೋನಕ್ಕೆ ಅವಕಾಶ ಸಿಗುತ್ತದೆ.

ಕಥನವು ಕೇವಲ ಕಥೆಯನ್ನು ಹೇಳುವವನನ್ನಷ್ಟೇ ಒಳಗೊಳ್ಳುವುದಿಲ್ಲ, ಜೊತೆಗೆ ಕಥೆಯನ್ನು ಹೇಗೆ ಹೇಳಲಾಗುತ್ತದೆ ಎಂಬುದನ್ನು ಕೂಡ ಒಳಗೊಳ್ಳುತ್ತದೆ (ಉದಾಹರಣೆಗೆ, ಪ್ರಜ್ಞಾ ಪ್ರವಾಹ ಅಥವಾ ವಿಶ್ವಾಸಾರ್ಹವಲ್ಲದ ನಿರೂಪಣೆಯನ್ನು ಬಳಸಿ). (ಕಾದಂಬರಿಗಳು, ಸಣ್ಣಕಥೆಗಳು, ಮತ್ತು ಆತ್ಮಕಥೆಗಳಂತಹ) ಸಾಂಪ್ರದಾಯಿಕ ಸಾಹಿತ್ಯಿಕ ಆಖ್ಯಾನಗಳಲ್ಲಿ, ಕಥನವು ಅಗತ್ಯವಾದ ಕಥಾ ಘಟಕವಾಗಿರುತ್ತದೆ; ಇತರ ಪ್ರಕಾರದ (ಮುಖ್ಯವಾಗಿ ಸಾಹಿತ್ಯಿಕವಲ್ಲದ) ಆಖ್ಯಾನಗಳಲ್ಲಿ, ಉದಾಹರಣೆಗೆ ನಾಟಕಗಳು, ದೂರದರ್ಶನ ಶೋಗಳು, ವೀಡಿಯೋ ಆಟಗಳು ಮತ್ತು ಚಲನಚಿತ್ರಗಳಲ್ಲಿ, ಕಥನವು ಕೇವಲ ಐಚ್ಛಿಕವಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Hühn, Peter; Sommer, Roy (2012). "Narration in Poetry and Drama". The Living Handbook of Narratology. Interdisciplinary Center for Narratology, University of Hamburg. Archived from the original on 2015-02-18. Retrieved 2018-10-08.
"https://kn.wikipedia.org/w/index.php?title=ಕಥನ&oldid=1128263" ಇಂದ ಪಡೆಯಲ್ಪಟ್ಟಿದೆ